ಬುಧವಾರ, ಡಿಸೆಂಬರ್ 11, 2019
27 °C

ರುಚಿಮೊಗ್ಗು ಅರಳಿಸುವ ಚಟ್ನಿಗಳು

Published:
Updated:

ಆಲೂ-ಟೊಮೆಟೊ ಚಟ್ನಿ

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ - 3, ಟೊಮೆಟೊ - 3, ಈರುಳ್ಳಿ - 1, ಉಪ್ಪು, ಖಾರದಪುಡಿ – ಸ್ವಲ್ಪ, ಕೊತ್ತಂಬರಿಸೊಪ್ಪು – ಸ್ವಲ್ಪ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಇಟ್ಟು ಸ್ವಲ್ಪ ಉದ್ದಿನಬೇಳೆ, ಕರೀಬೇವು, ಸಾಸಿವೆ, ಒಣಮೆಣಸಿನಕಾಯಿ ತುಂಡು ಹುರಿದು, ಹೆಚ್ಚಿದ ಈರುಳ್ಳಿಯನ್ನು ಹಾಕಿ ಬಾಡಿಸಿ. ನಂತರ ಹೆಚ್ಚಿದ ಟೊಮೆಟೊಹಣ್ಣುಗಳನ್ನು ಹಾಕಿ, ಸ್ವಲ್ಪ ಉಪ್ಪು, ಖಾರದಪುಡಿ ಹಾಕಿ ಮಗುಚಿ 2-3 ನಿಮಿಷ ಮುಚ್ಚಿಟ್ಟು ಬೇಯಿಸಿ. ಆಮೇಲೆ ಬೇಯಿಸಿ ಪುಡಿಮಾಡಿದ ಆಲೂಗಡ್ಡೆಯನ್ನು ಸೇರಿಸಿ ಅರ್ಧಕಪ್ ನೀರು ಹಾಕಿ, ಕೊತ್ತಂಬರಿಸೊಪ್ಪು ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಈ ಚಟ್ನಿಯನ್ನು ಚಪಾತಿ, ಪೂರಿ, ದೋಸೆಯ ಜೊತೆಗೆ ತಿನ್ನಬಹುದು. ಹುರಿದ ಬ್ರೆಡ್ ತುಂಡುಗಳ ಮೇಲೂ ಹಚ್ಚಬಹುದು.

ಹೀರೇಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಸಿಪ್ಪೆ ಸಹಿತ ಹೀರೆಕಾಯಿ ಹೋಳು - 2 ಬಟ್ಟಲು, ಕಾಯಿತುರಿ - 1 ಬಟ್ಟಲು, ಹಸಿಮೆಣಸಿನಕಾಯಿ - 2, ಶುಂಠಿ – ಸಣ್ಣ ತುಂಡು, ಕರೀಬೇವು, ಕೊತ್ತಂಬರಿಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಹುಣಿಸೆಹಣ್ಣು – ಸ್ವಲ್ಪ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಇಟ್ಟು ಒಂದು ಚಮಚ ಉದ್ದಿನ ಬೇಳೆ, ಒಂದು ಚಮಚ ಕಡಲೆಬೇಳೆ, ಸ್ವಲ್ಪ ಕರಿಬೇವು, ಅರ್ಧ ಚಮಚ ಜೀರಿಗೆ ಹುರಿದು ಹೀರೆಕಾಯಿ ಹೋಳುಗಳನ್ನು ಹಾಕಿ ಉಪ್ಪು ಸೇರಿಸಿ ಸ್ವಲ್ಪ ಬಾಡಿಸಬೇಕು. ನಂತರ ಚೂರು ಹುಣಿಸೆಹಣ್ಣು, ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿ 4-5 ನಿಮಿಷ ಮುಚ್ಚಿಟ್ಟು ಬಾಡಿಸಿ, ಚೂರು ಬೆಲ್ಲ ಸೇರಿಸಿ, ಕಾಯಿತುರಿ ಹಾಕಿ ಚೆನ್ನಾಗಿ ಮಗುಚಿ ಇಳಿಸುವುದು. ಆರಿದ ನಂತರ ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬುವುದು. ಈ ಚಟ್ನಿ ಊಟದ ಜೊತೆಗೆ ಸೇವಿಸಲು ಮತ್ತು ಚಪಾತಿಗೆ ಹಚ್ಚಲು ಚೆನ್ನಾಗಿರುತ್ತದೆ.

ಟೊಮೆಟೊ–ಪುದಿನಾ ಚಟ್ನಿ

ಬೇಕಾಗುವ ಸಾಮಗ್ರಿಗಳು: ದೊಡ್ಡ ಟೊಮೆಟೊಹಣ್ಣು - 4, ಪುದಿನಾ ಸೊಪ್ಪು - 2ಬ ಟ್ಟಲು, ಹಸಿಮೆಣಸಿನಕಾಯಿ - 4, ಕೊತ್ತಂಬರಿಸೊಪ್ಪು ಸ್ವಲ್ಪ, ಜೀರಿಗೆ – 1/4 ಚಮಚ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಜೀರಿಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಪುದಿನಾಸೊಪ್ಪನ್ನು ಹಾಕಿ ಬಾಡಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡುವುದು. ಅದೇ ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಕಾದ ಮೇಲೆ ಕತ್ತರಿಸಿದ ಟೊಮೆಟೊಹಣ್ಣುಗಳನ್ನು ಹಾಕಿ, ಉಪ್ಪು ಸೇರಿಸಿ ಬಾಡಿಸುವುದು. ಬೆಂದ ಟೊಮೆಟೊಗಳನ್ನು ಮಿಕ್ಸಿಗೆ ಹಾಕಿ ಪುದಿನದೊಂದಿಗೆ ರುಬ್ಬುವುದು. ರುಚಿಯಾದ ಪುದಿನ ಟೊಮೆಟೊ ಚಟ್ನಿ ರೆಡಿ. ಇದನ್ನು ಪೂರಿ, ಚಪಾತಿ, ದೋಸೆಯೊಂದಿಗೆ ಸವಿಯಬಹುದು.

ಹಾಗಲಕಾಯಿ ಚಟ್ನಿಪುಡಿ

ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿಹೋಳು - 2 ಬಟ್ಟಲು, ಒಣಕೊಬ್ಬರಿ ತುಂಡುಗಳು - 1 ಬಟ್ಟಲು, ಒಣಮೆಣಸಿನಕಾಯಿ - 2, ಉದ್ದಿನಬೇಳೆ - 2 ಚಮಚ, ಕಡಲೆಬೇಳೆ - 2 ಚಮಚ, ಕರೀಬೇವು – ಸ್ವಲ್ಪ, ಜೀರಿಗೆ – ಸ್ವಲ್ಪ, ಹುಣಿಸೆಹಣ್ಣು – ಸ್ವಲ್ಪ, ಉಪ್ಪು – ರುಚಿಗೆ.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಸಣ್ಣಗೆ ಹೆಚ್ಚಿ, ಉಪ್ಪು ಮತ್ತು ಹುಣಿಸೆಹಣ್ಣು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಮುಚ್ಚಿಡುವುದು. ನಂತರ ಇನ್ನೊಮ್ಮೆ ಕಲಸಿ ಬಿಸಿಲಿನಲ್ಲಿ ಒಣಗಿಸಬೇಕು. ನಾಲ್ಕೈದು ದಿನ ಚೆನ್ನಾಗಿ ಒಣಗಿ ಹೋಳುಗಳು ಗಟ್ಟಿಯಾಗಬೇಕು. ಪಾತ್ರೆಯಲ್ಲಿ ಎರಡು ಚಮಚ ಎಣ್ಣೆಯನ್ನು ಹಾಕಿ ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು, ಒಣಮೆಣಸಿನಕಾಯಿ, ಅರ್ಧ ಚಮಚ ಜೀರಿಗೆ ಹುರಿದು, ಹಾಗಲಕಾಯಿ ಮತ್ತು  ಒಣಕೊಬ್ಬರಿ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ಇಳಿಸಿ ಆರಿದ ನಂತರ ಸ್ವಲ್ಪ ಉಪ್ಪನ್ನು ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡುವುದು. ಈ ಚಟ್ನಿ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಮಧುಮೇಹ ಇರುವವರು ಇದನ್ನು ದಿನವೂ ಬಳಸಬಹುದು.

ಟೊಮೆಟೊಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಟೊಮೆಟೊಕಾಯಿ - 5, ಹಸಿಮೆಣಸಿನಕಾಯಿ - 2, ನೆಲಗಡಲೆಬೀಜ - 1 ಬಟ್ಟಲು, ಕಾಯಿತುರಿ - 1 ಚಮಚ, ಜೀರಿಗೆ – 1/2 ಚಮಚ, ಉದ್ದಿನಬೇಳೆ - 1 ಚಮಚ, ಶುಂಠಿ – ಸಣ್ಣ ತುಂಡು, ಕರೀಬೇವು, ಕೊತ್ತಂಬರಿಸೊಪ್ಪು – ಸ್ವಲ್ಪ, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ನೆಲಗಡಲೆಬೀಜಗಳನ್ನು ಹುರಿದು ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಪುಡಿ ಮಾಡಬೇಕು. ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆಯನ್ನು ಇಟ್ಟು ಒಂದು ಚಮಚ ಉದ್ದಿನ ಬೇಳೆ, ಕರೀಬೇವು, ಹಸಿಮೆಣಸಿಕಾಯಿ, ಅರ್ಧ ಚಮಚ ಜೀರಿಗೆ ಹುರಿದು, ಹೆಚ್ಚಿದ ಟೊಮೆಟೊಕಾಯಿಗಳನ್ನು ಹಾಕಿ, ಉಪ್ಪನ್ನು ಸೇರಿಸಿ, ಶುಂಠಿ, ಕೊತ್ತಂಬರಿಸೊಪ್ಪು, ಕಾಯಿತುರಿಗಳನ್ನು ಹಾಕಿ 2-3 ನಿಮಿಷ ಬಾಡಿಸಿಕೊಳ್ಳಬೇಕು. ಆರಿದ ಮೇಲೆ ಮಿಕ್ಸಿಯಲ್ಲಿನ ನೆಲಗಡಲೆಬೀಜದ ಪುಡಿಯೊಂದಿಗೆ ರುಬ್ಬುವುದು. ಈ ಚಟ್ನಿಯು ಜೋಳದ ರೊಟ್ಟಿಯೊಂದಿಗೆ ರುಚಿಯಾಗಿರುತ್ತದೆ. ಚಪಾತಿಗೆ ಹಚ್ಚಿ ತಿನ್ನಲು ರುಚಿಯಾಗಿರುತ್ತದೆ. ಊಟದೊಂದಿಗೂ ನೆಂಜಿಕೊಳ್ಳಬಹುದು.

ಒಂದೆಲಗದ ಚಟ್ನಿ

ಬೇಕಾಗುವ ಸಾಮಗ್ರಿಗಳು: ಒಂದೆಲಗದ ಎಲೆಗಳು - 2 ಬಟ್ಟಲು, ಕಾಯಿತುರಿ - 1 ಬಟ್ಟಲು, ಉದ್ದಿನಬೇಳೆ, ಕಡಲೆಬೇಳೆ – ಒಂದೊಂದು ಚಮಚ, ಶುಂಠಿ – ಸಣ್ಣ ತುಂಡು, ಹಸಿಮೆಣಸಿನಕಾಯಿ - 2, ಹುಣಿಸೆಹಣ್ಣು – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಉದ್ದಿನಬೇಳೆ, ಕಡಲೆಬೇಳೆ, ಹಸಿಮೆಣಸಿನಕಾಯಿಯನ್ನು ಸ್ವಲ್ಪ ಹುರಿದು ತೆಗೆದಿಡಬೇಕು. ಹೆಚ್ಚಿದ ಒಂದೆಲಗದ ಎಲೆಗಳು, ಶುಂಠಿ, ಹುಣಿಸೆಹಣ್ಣು. ಕಾಯಿತುರಿ, ಉಪ್ಪು, ಹುರಿದ ಪದಾರ್ಥಗಳನ್ನು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬುವುದು. ಇದು ಊಟದ ಜೊತೆಗೆ ಚೆನ್ನಾಗಿರುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುವ ಒಂದೆಲಗದ ಚಟ್ನಿಯನ್ನು ಮಕ್ಕಳಿಗೆ ಆಗಾಗ ಕೊಟ್ಟರೆ ಒಳ್ಳೆಯದು.

ಪ್ರತಿಕ್ರಿಯಿಸಿ (+)