ಸೋಮವಾರ, ಡಿಸೆಂಬರ್ 6, 2021
24 °C

ಕಲ್ಲಿದ್ದಲನ್ನು ಕೈಬಿಡುವುದು ಅಷ್ಟು ಕಷ್ಟವೇ?

ಸೋಮಿನಿ ಸೇನ್‌ಗುಪ್ತಾ Updated:

ಅಕ್ಷರ ಗಾತ್ರ : | |

Deccan Herald

ಕೈಗಾರಿಕಾ ಯುಗದ ಚಾಲಕ ಶಕ್ತಿ ಆಗಿದ್ದ ಕಲ್ಲಿದ್ದಲು ಈಗ ವಿಶ್ವವನ್ನು ವಿನಾಶಕಾರಿ ಹವಾಮಾನ ಬದಲಾವಣೆಯ ಅಂಚಿಗೆ ತಂದು ನಿಲ್ಲಿಸಿದೆ. ಕಲ್ಲಿದ್ದಲು ತಂದೊಡ್ಡುವ ಅಪಾಯಗಳ ಬಗ್ಗೆ ವಿಜ್ಞಾನಿಗಳು ಮತ್ತೆ ಮತ್ತೆ ಎಚ್ಚರಿಸುತ್ತಲೇ ಬಂದಿದ್ದಾರೆ. ತಾಪಮಾನದಲ್ಲಿ ಆಗುತ್ತಿರುವ ಹೆಚ್ಚಳವನ್ನು ತಡೆಯದೆ ಇದ್ದರೆ, ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಬದಲಾವಣೆಗಳು ಈ ಶತಮಾನದ ಅಂತ್ಯದೊಳಗೆ ಅಮೆರಿಕದ ಅರ್ಥ ವ್ಯವಸ್ಥೆಯ ಶೇಕಡ 10ರಷ್ಟನ್ನು ಮುಗಿಸಿಬಿಡಬಹುದು ಎಂದು ಅಮೆರಿಕದ 13 ಸರ್ಕಾರಿ ಸಂಸ್ಥೆಗಳು ನೀಡಿರುವ ವರದಿ ಹೇಳಿದೆ.

‘ಕಲ್ಲಿದ್ದಲಿನಿಂದ ಆಗಬಹುದಾದ ವಿನಾಶವನ್ನು ತಡೆಯಬೇಕು ಎಂದಾದರೆ ಕೆಲವೇ ವರ್ಷಗಳ ಅವಧಿಯಲ್ಲಿ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಬೇಕು’ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ. ಈ ಬದಲಾವಣೆಯ ಕೇಂದ್ರದಲ್ಲಿ ಇರುವುದು ಕಲ್ಲಿದ್ದಲಿನ ಬಳಕೆಯನ್ನು ಆದಷ್ಟು ಬೇಗ ನಿಲ್ಲಿಸುವುದು.

ಆದರೆ, ಪ್ಯಾರಿಸ್‌ ಒಪ್ಪಂದ ಆಗಿ ಮೂರು ವರ್ಷಗಳು ಕಳೆದರೂ ಕಲ್ಲಿದ್ದಲು ತಾನು ಮರೆಯಾಗುವ ಯಾವ ಸೂಚನೆಯನ್ನೂ ನೀಡುತ್ತಿಲ್ಲ. ಕಲ್ಲಿದ್ದಲಿನ ಬಳಕೆಯು ವಿಶ್ವದ ಎಲ್ಲೆಡೆ ಹಂತಹಂತವಾಗಿ ಸ್ಥಗಿತವಾಗುವುದು ಖಚಿತವಾದರೂ, ಅದರ ಬಳಕೆ ತಗ್ಗುತ್ತಿರುವ ವೇಗವು ಹವಾಮಾನ ಬದಲಾವಣೆಯ ಅತ್ಯಂತ ಕೆಟ್ಟ ಪರಿಣಾಮವನ್ನು ತಡೆಯಲು ಸಾಧ್ಯವಾಗುವಷ್ಟು ಇಲ್ಲ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಅಂದಾಜಿಸಿದೆ. ವಾಸ್ತವದಲ್ಲಿ, ಕಲ್ಲಿದ್ದಲಿನ ಉತ್ಪಾದನೆ ಮತ್ತು ಬಳಕೆ ಜಾಗತಿಕ ಮಟ್ಟದಲ್ಲಿ ಕಳೆದ ವರ್ಷ ಹೆಚ್ಚಾಯಿತು.

ಕಡಿಮೆ ಖರ್ಚಿನ, ಹೇರಳವಾಗಿ ಸಿಗುವ ಹಾಗೂ ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಕಲ್ಲಿದ್ದಲು ವಿಶ್ವದಲ್ಲಿ ವಿದ್ಯುತ್ ಉತ್ಪಾದನೆಗೆ ಇರುವ ಅತಿದೊಡ್ಡ ಇಂಧನ ಮೂಲ. ಸೌರಶಕ್ತಿ ಹಾಗೂ ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳು ಅಗ್ಗವಾಗುತ್ತಿದ್ದರೂ ಕಲ್ಲಿದ್ದಲಿನ ಈ ಸ್ಥಿತಿ ಮುಂದುವರಿದಿದೆ. ಹಾಗಾದರೆ, ಕಲ್ಲಿದ್ದಲಿನ ಬಳಕೆಯನ್ನು ಕೈಬಿಡುವುದು ಅಷ್ಟು ಕಷ್ಟವೇಕೆ?

ಏಕೆಂದರೆ ಕಲ್ಲಿದ್ದಲಿನ ಸ್ಥಾನವೇ ಅಷ್ಟು ಶಕ್ತಿಯುತವಾಗಿದೆ. ಅದು ಭೂಮಿಯ ಅಡಿಯಲ್ಲಿ ಲಕ್ಷಾಂತರ ಟನ್‌ ಪ್ರಮಾಣದಲ್ಲಿ ಲಭ್ಯವಿದೆ. ಶಕ್ತಿಶಾಲಿ ಸರ್ಕಾರಗಳ ಬೆಂಬಲ ಇರುವ ಬಲಿಷ್ಠ ಕಂಪನಿಗಳು ಆದಷ್ಟು ಬೇಗ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಧಾವಂತದಲ್ಲಿ ಇವೆ. ಇದರಿಂದ ಬ್ಯಾಂಕುಗಳಿಗೂ ಲಾಭ ಇದೆ. ರಾಷ್ಟ್ರಗಳ ದೊಡ್ಡ ದೊಡ್ಡ ವಿದ್ಯುತ್‌ ಪ್ರಸರಣ ಜಾಲಗಳು ಕಲ್ಲಿದ್ದಲು ಮೂಲದ ವಿದ್ಯುತ್‌
ಗಾಗಿ ವಿನ್ಯಾಸಗೊಂಡಿವೆ. ಜನರಿಗೆ ಕಡಿಮೆ ಖರ್ಚಿನಲ್ಲಿ ವಿದ್ಯುತ್‌ ಪೂರೈಸುವುದಕ್ಕೆ, ಆ ಮೂಲಕ ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಕಲ್ಲಿದ್ದಲು ಬಳಸಿವಿದ್ಯುತ್ ಉತ್ಪಾದಿಸುವ ಘಟಕಗಳು ರಾಜಕಾರಣಿಗಳ ಪಾಲಿಗೆ ನಂಬಿಕಸ್ಥ ಕೇಂದ್ರಗಳು. ಕೆಲವು ದೇಶಗಳಲ್ಲಿ ಕಲ್ಲಿದ್ದಲು ಎಂಬುದು ಲಂಚದ ಮೂಲವೂ ಹೌದು.

ನವೀಕರಿಸಬಹುದಾದ ಇಂಧನ ಮೂಲಗಳು ತ್ವರಿತವಾಗಿ ವಿಸ್ತಾರ ಕಾಣುತ್ತಿದ್ದರೂ, ಅವುಗಳಿಗೆ ಕೆಲವು ಮಿತಿಗಳಿವೆ. ಗಾಳಿ ಬೀಸಿದಾಗ, ಸೂರ್ಯ ಉಜ್ವಲವಾಗಿ ಬೆಳಗಿದಾಗ ಪವನ ವಿದ್ಯುತ್ ಹಾಗೂ ಸೌರ ವಿದ್ಯುತ್ ಹರಿಯುತ್ತವೆ. ಆ ವಿದ್ಯುತ್ ಹರಿಸಲು ವಿದ್ಯುತ್ ಪ್ರಸರಣ ಜಾಲದಲ್ಲಿ ಮಾರ್ಪಾಡುಗಳು ಆಗಬೇಕು.

ವಿಶ್ವದ ಅರ್ಧದಷ್ಟು ಜನಸಂಖ್ಯೆಗೆ ಆಶ್ರಯ ನೀಡಿರುವ ಏಷ್ಯಾದಲ್ಲಿ ಕಲ್ಲಿದ್ದಲಿನ ಜಾಗತಿಕ ಬಳಕೆಯ ಮುಕ್ಕಾಲು ಪಾಲು ಬಳಕೆ ಆಗುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ, ಜಗತ್ತಿನಲ್ಲಿ ನಿರ್ಮಾಣ ಹಂತದಲ್ಲಿರುವ ಅಥವಾ ಯೋಜನಾ ಹಂತದಲ್ಲಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ ಶೇಕಡ 75ರಷ್ಟಕ್ಕಿಂತ ಹೆಚ್ಚು ಘಟಕಗಳು ಏಷ್ಯಾದಲ್ಲಿವೆ.

ಇಂಡೊನೇಷ್ಯಾ ಇನ್ನಷ್ಟು ಕಲ್ಲಿದ್ದಲು ಅಗೆಯುತ್ತಿದೆ. ಕಲ್ಲಿದ್ದಲು ಆಧಾರಿತ ಹೊಸ ವಿದ್ಯುತ್ ಘಟಕಗಳಿಗಾಗಿ ವಿಯೆಟ್ನಾಂ ದೇಶವು ನೆಲ ಹದ ಮಾಡಿಕೊಳ್ಳುತ್ತಿದೆ. 2011ರಲ್ಲಿ ಅಣು ವಿದ್ಯುತ್‌ ಘಟಕದ ದುರಂತಕ್ಕೆ ಸಾಕ್ಷಿಯಾದ ಜಪಾನ್‌, ಕಲ್ಲಿದ್ದಲು ಘಟಕಗಳಿಗೆ ಮರುಜೀವ ನೀಡಿದೆ. ಹೀಗಿದ್ದರೂ ಕಲ್ಲಿದ್ದಲಿನ ದೊಡ್ಡ ಬಳಕೆದಾರ ರಾಷ್ಟ್ರ ಚೀನಾ. ವಿಶ್ವದಲ್ಲಿ ಬಳಕೆಯಾಗುವ ಕಲ್ಲಿದ್ದಲಿನಲ್ಲಿ ಅರ್ಧದಷ್ಟು ಚೀನಾದಲ್ಲೇ ಬಳಕೆ ಆಗುತ್ತದೆ. ಅಲ್ಲಿನ ಕಲ್ಲಿದ್ದಲು ಗಣಿಗಳಲ್ಲಿ 43 ಲಕ್ಷಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.

ವಾಯು ಮಾಲಿನ್ಯದ ವಿರುದ್ಧ ವ್ಯಕ್ತವಾದ ಜನಾಕ್ರೋಶದ ಪರಿಣಾಮವಾಗಿ ಸೌರವಿದ್ಯುತ್ ಹಾಗೂ ಪವನ ವಿದ್ಯುತ್ ಘಟಕಗಳ ಸ್ಥಾಪನೆ ವಿಚಾರದಲ್ಲಿ ಚೀನಾ ಈಗ ಜಾಗತಿಕ ನಾಯಕನೂ ಹೌದು. ಕಲ್ಲಿದ್ದಲು ಘಟಕಗಳ ನಿರ್ಮಾಣ ಪ್ರಮಾಣ ತಗ್ಗಿಸಲು ಅಲ್ಲಿನ ಕೇಂದ್ರ ಸರ್ಕಾರ ಪ್ರಯತ್ನಿಸಿದೆ. ಹೀಗಿದ್ದರೂ, ಅಲ್ಲಿ ಹೊಸ ಕಲ್ಲಿದ್ದಲು ಘಟಕಗಳ ನಿರ್ಮಾಣ ನಿಂತಿಲ್ಲ ಎಂದು ಅಮೆರಿಕ ಮೂಲದ ಸಂಶೋಧಕರ ತಂಡವೊಂದು ಹೇಳಿದೆ. ಚೀನಾದಲ್ಲಿ ಕಲ್ಲಿದ್ದಲಿನ ಬಳಕೆ ಪ್ರಮಾಣ 2017ರಲ್ಲಿ ಹೆಚ್ಚಾಯಿತು – ಆದರೆ ಹೆಚ್ಚಳದ ಪ್ರಮಾಣ ಹಿಂದಿನ ವರ್ಷಗಳಿಗಿಂತ ಕಡಿಮೆ ಇತ್ತು. 2018ರಲ್ಲಿ ಕೂಡ ಬಳಕೆ ಹೆಚ್ಚಾಗಲಿದೆ.

ಚೀನಾದ ಕಲ್ಲಿದ್ದಲು ಉದ್ಯಮವು ಇಂದು ಹೊಸ ಮಾರುಕಟ್ಟೆಗಳನ್ನು ಹುಡುಕಿಕೊಳ್ಳುವ ಯತ್ನದಲ್ಲಿ ಇದೆ. ಚೀನಾದ ಕಂಪನಿಗಳು 17 ದೇಶಗಳಲ್ಲಿ ಕಲ್ಲಿದ್ದಲು ಘಟಕ ಆರಂಭಿಸುತ್ತಿವೆ. ಚೀನಾದ ಪ್ರಾದೇಶಿಕ ಪ್ರತಿಸ್ಪರ್ಧಿ ಜಪಾನ್‌ ಕೂಡ ಇದೇ ಕೆಲಸದಲ್ಲಿ ತೊಡಗಿದೆ.

ಜಪಾನ್‌ ಹಾಗೂ ಚೀನಾ ಕಂಪನಿಗಳ ನಡುವಣ ಸ್ಪರ್ಧೆ ತೀವ್ರವಾಗಿ ಕಾಣಿಸುವುದು ಆಗ್ನೇಯ ಏಷ್ಯಾದಲ್ಲಿ. ವಿಯೆಟ್ನಾಂನ ಎನ್‌ಗುಯ್‌ ಥಿಖನ್‌ ಅವರು ಜನಿಸಿದ್ದು 1976ರಲ್ಲಿ. ಅವರು ಚಿಕ್ಕವರಿದ್ದಾಗ ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಓದು–ಬರಹ ಮಾಡುತ್ತಿದ್ದರು. ಅವರಿದ್ದ ಹಳ್ಳಿಯಲ್ಲಿ ವಿದ್ಯುತ್‌ ಪ್ರತಿನಿತ್ಯ ಗಂಟೆಗಳ ಕಾಲ ಕೈಕೊಡುತ್ತಿತ್ತು. ಮಳೆ ಬಂದಾಗ ವಿದ್ಯುತ್ ಇರುತ್ತಿರಲಿಲ್ಲ. ಅವರಿಗೆ ವಿದ್ಯುತ್‌ ಸಂಪರ್ಕ ಸರಿಯಾಗಿ ದೊರೆತಾಗ, ವಿದ್ಯುತ್‌ ಪೂರೈಕೆ ಆಗುತ್ತಿದ್ದುದು ಕಲ್ಲಿದ್ದಲು ಘಟಕದಿಂದ.

ಇಂದು ವಿಯೆಟ್ನಾಮಿನ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಇದೆ. ಎನ್‌ಗುಯ್‌ ಅವರು ಈಗ ವಾಸವಾಗಿರುವುದು ರಾಜಧಾನಿ ಹನೋಯ್‌ನಲ್ಲಿ. ಅಲ್ಲಿ ಸಿಮೆಂಟ್‌ ಹಾಗೂ ಉಕ್ಕು ಬೇಡಿಕೆ ಗಿಟ್ಟಿಸಿಕೊಂಡಿವೆ. ಅಲ್ಲಿನ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಅಲ್ಲಿನ ಕರಾವಳಿಯ ಆದ್ಯಂತ ವಿದೇಶಿ ಕಂಪನಿಗಳು – ಅವುಗಳಲ್ಲಿ ಹೆಚ್ಚಿನವು ಜಪಾನ್‌ ಅಥವಾ ಚೀನಾ ಮೂಲದವು – ಕಲ್ಲಿದ್ದಲು ಘಟಕಗಳನ್ನು ಆರಂಭಿಸುತ್ತಿವೆ. ವಿಯೆಟ್ನಾಂನಲ್ಲಿ ಹಲವು ಘಟಕಗಳು ಹಳೆಯ ತಂತ್ರಜ್ಞಾನ ಬಳಸುತ್ತಿವೆ. ಅವು ಹೊರಸೂಸುವ ಮಲಿನಕಾರಿ ಅಂಶಗಳು ಹೆಚ್ಚು.

ಪ್ಯಾರಿಸ್‌ ಒಪ್ಪಂದದ ಅನ್ವಯ ವಿಷಕಾರಿ ಅನಿಲಗಳ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವ ಹಾದಿಯಲ್ಲಿದೆ ವಿಯೆಟ್ನಾಂ. ಅದೇ ದಾರಿಯಲ್ಲಿ ಚೀನಾ ಮತ್ತು ಭಾರತ ಕೂಡ ಇವೆ. ಆದರೆ, ವಿಷಕಾರಿ ಅನಿಲಗಳ ಹೊರಸೂಸುವಿಕೆಯನ್ನು ಯಾವ ಪ್ರಮಾಣದಲ್ಲಿ ಕಡಿಮೆ ಮಾಡಬೇಕು ಎಂಬುದನ್ನು ಈ ದೇಶಗಳು ತಾವೇ ನಿರ್ಧರಿಸಿಕೊಂಡಿವೆ. ಅವು ನಿರ್ಧರಿಸಿರುವ ಮಿತಿಯು ಜಾಗತಿಕ ತಾಪಮಾನ ವಿಕೋಪದ ಮಟ್ಟಕ್ಕೆ ತಲುಪದಂತೆ ಮಾಡಲು ಸಾಕಾಗುವುದಿಲ್ಲ. ಇತ್ತ ಅಮೆರಿಕ ಕೂಡ ಪ್ಯಾರಿಸ್‌ ಒಪ್ಪಂದದಿಂದ ಹೊರನಡೆ
ಯುವುದಾಗಿ ಹೇಳಿದೆ.

ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಆರ್ಥಿಕ ಲೆಕ್ಕಾಚಾರ ಹಾಗೂ ರಾಜಕೀಯ ಲೆಕ್ಕಾಚಾರಗಳು ಬೇರೆಯದೇ ರೀತಿಯಲ್ಲಿ ಇವೆ. ತೆಲಂಗಾಣ ರಾಜ್ಯದ ಇಂಧನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಅಜಯ್ ಮಿಶ್ರಾ ಅವರಿಗೆ ಇದರ ಪ್ರಾಥಮಿಕ ಜ್ಞಾನ ಇದೆ. ಐದು ವರ್ಷಗಳ ಹಿಂದೆ ಪ್ರತಿನಿತ್ಯ ಜಾರಿಯಲ್ಲಿದ್ದ ವಿದ್ಯುತ್‌ ಕಡಿತ ರಾಜ್ಯದ ಪಾಲಿಗೆ ಶಾಪವಾಗಿತ್ತು ಎಂದು ಅವರು ಹೇಳುತ್ತಾರೆ. ತೆಲಂಗಾಣದ ಜನರಲ್ಲಿ ಇದು ಕೋಪ ಮೂಡಿಸಿತ್ತು.

ವಿದ್ಯುತ್‌ ಸಮಸ್ಯೆ ನಿವಾರಿಸಲು ಅಧಿಕಾರಿಗಳು ಏನಾದರೂ ಮಾಡಬೇಕಿತ್ತು. ಅವರು ಸೌರವಿದ್ಯುತ್‌ ಕಡೆ ಕೆಲವು ಕಾಲ ಮುಖ ಮಾಡಿದರು. ಇದರಿಂದಾಗಿ ತೆಲಂಗಾಣ ರಾಜ್ಯವು ಸೌರವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿ ಮುಂಚೂಣಿ ಸ್ಥಾನ ತಲುಪಿತ್ತು. ಹಾಗೆಯೇ ಈ ಅಧಿಕಾರಿಗಳು ಶತಮಾನಗಳಿಂದಲೂ ಸರ್ಕಾರಗಳು ನೆಚ್ಚಿಕೊಂಡು ಬಂದಿರುವ ಕಲ್ಲಿದ್ದಲಿನತ್ತ ಮುಖ ಮಾಡಿದರು.

ತೆಲಂಗಾಣದಲ್ಲಿ ಈಗ ವಿದ್ಯುತ್‌ ಪೂರೈಕೆ ಅಬಾಧಿತ. ‘ನಮ್ಮಲ್ಲಿ ಕಲ್ಲಿದ್ದಲು ಇದೆ’ ಎನ್ನುತ್ತಾರೆ ಮಿಶ್ರಾ. ‘ಮುಂದಿನ ನೂರು ವರ್ಷಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ನಮ್ಮಲ್ಲಿ ಇದೆ’ ಎಂದು ಅವರು ಹೇಳುತ್ತಾರೆ. ನವದೆಹಲಿಯಲ್ಲಿ ಇರುವ ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ‘ಕಲ್ಲಿದ್ದಲು ಘಟಕಗಳ ಮೂಲಕ ಹೆಚ್ಚುವರಿಯಾಗಿ 50 ಗಿಗಾ ವಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಕಾರ್ಯ ಚಾಲ್ತಿಯಲ್ಲಿ ಇದೆ. ಒಂದು ದಶಕದ ಹಿಂದೆ ಅಭಿವೃದ್ಧಿಯ ಹಂತದಲ್ಲಿ ಇದ್ದ ಕಲ್ಲಿದ್ದಲು ಘಟಕಗಳಿಗೆ ಹೋಲಿಸಿದರೆ ಇದು ಒಂದು ಚಿಕ್ಕ ಅಂಶ ಮಾತ್ರ. ಸೌರ ಹಾಗೂ ಪವನ ಮೂಲದಿಂದ ಉತ್ಪಾದನೆ ಆಗುವ ವಿದ್ಯುತ್ತನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಲು ಕಡಿಮೆ ಖರ್ಚಿನ, ಪರಿಣಾಮಕಾರಿ ಮಾರ್ಗ ಸಿಗುವವರೆಗೆ ಕಲ್ಲಿದ್ದಲಿನ ಬಳಕೆ ನಿಲ್ಲುವುದಿಲ್ಲ’ ಎಂದು ಹೇಳಿದರು.

ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ತಿನ ಶೇಕಡ 58ರಷ್ಟು ಕಲ್ಲಿದ್ದಲು ಮೂಲದಿಂದ ಬರುತ್ತಿದೆಯಾದರೂ, ‘ಕಲ್ಲಿದ್ದಲು ಬಳಕೆಯನ್ನು ಇಷ್ಟಪಟ್ಟು ಮಾಡುತ್ತಿಲ್ಲ’ ಎನ್ನುತ್ತಾರೆ ಭಲ್ಲಾ. ‘ಆದರೆ, ಅನಿವಾರ್ಯವಾಗಿ ಬಳಕೆ ಮಾಡಬೇಕಾಗುತ್ತದೆ’ ಎಂದೂ ಅವರು ಹೇಳುತ್ತಾರೆ.

– ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು