ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಣಾಮಕಾರಿ ಬೇಡಿಕೆ’ ಸೃಷ್ಟಿಯ ಸವಾಲು

ಭಾರತದಲ್ಲಿನ ಬೇಡಿಕೆಯ ಇಳಿತವು ‘ಸಂಪತ್ತಿನ ವೈರಾಗ್ಯ’ದ ಮಾದರಿಯದಲ್ಲ...
Last Updated 1 ನವೆಂಬರ್ 2019, 20:06 IST
ಅಕ್ಷರ ಗಾತ್ರ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿಅವರು ಭಾರತದ ಆರ್ಥಿಕತೆಯಲ್ಲಿ ಬೇಡಿಕೆ ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ಆರ್ಥಿಕ ಹಿನ್ನಡೆಯಿಂದ ಹೊರಬರಲು ಪಿ.ವಿ. ನರಸಿಂಹರಾವ್- ಮನಮೋಹನ್ ಸಿಂಗ್ ಮಾದರಿ ಅನುಸರಿಸಬೇಕೆಂದು ಆರ್ಥಿಕ ಚಿಂತಕ ಪರಕಾಲ ಪ್ರಭಾಕರ್‌ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರ ಅಭಿಪ್ರಾಯಗಳೂ ಭಿನ್ನ‌ ನೆಲೆಯವು. ಬೇಡಿಕೆಯ ಹೆಚ್ಚಳದ ಅಗತ್ಯವನ್ನು ಬ್ಯಾನರ್ಜಿ ಸೂಚಿಸಿದರೆ, ಉತ್ಪಾದನಾ ಹೆಚ್ಚಳದ ಅಗತ್ಯವನ್ನು ಪ್ರಭಾಕರ್ ಸೂಚಿಸಿದ್ದಾರೆ. ರಾವ್-ಸಿಂಗ್ ಮಾದರಿ ಎಂದರೆ ಉತ್ಪಾದನಾ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು. ಇದರಿಂದ ಉದ್ಯೋಗ ಸೃಷ್ಟಿಯಾಗಿ ಕೊಳ್ಳುವ ವರ್ಗದ ಕೈಗೆ ಹಣ ಬರುತ್ತದೆ.

ಪ್ರಭಾಕರ್ ಆಲೋಚನಾ ಕ್ರಮದಲ್ಲಿ ಸರ್ಕಾರಗಳೂ ಯೋಚಿಸಿವೆ. ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ಇಟ್ಟುಕೊಂಡು ಶ್ರಮಿಸಿವೆ. ಆದರೂ ಹೂಡಿಕೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲವೆಂದರೆ ಅಲ್ಲಿರುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಲ್ಲ, ಬೇರೆಯದೇ ರೀತಿಯ ಸಮಸ್ಯೆ. ಇದನ್ನು ಕೆನೇಷಿಯನ್ ಆರ್ಥಿಕತೆಯ ಹಿನ್ನೆಲೆಯಲ್ಲೇ ಪರಿಶೀಲಿಸಬೇಕು. ಏಕೆಂದರೆ, ಭಾರತದ ಆರ್ಥಿಕತೆಯು ಸ್ವಾತಂತ್ರ್ಯಾನಂತರದಲ್ಲಿ ಬಹುತೇಕ ಕೆನೇಷಿಯನ್ ಮಾದರಿಯಲ್ಲೇ ಬೆಳೆದದ್ದು.

ಜಾನ್ ಮೆನಾರ್ಡ್ ಕೇನ್ಸ್ ಎಂಬ ಬ್ರಿಟಿಷ್ ಅರ್ಥಶಾಸ್ತ್ರಜ್ಞನ ‘ಜನರಲ್ ಥಿಯರಿ ಆಫ್ ಎಂಪ್ಲಾಯ್‌ಮೆಂಟ್‌, ಇಂಟರೆಸ್ಟ್ ಆ್ಯಂಡ್ ಮನಿ’ ಕೃತಿಯ ತಿಳಿವಳಿಕೆಯನ್ನು 1930ರ ನಂತರ ಆರ್ಥಿಕ ಹಿನ್ನಡೆಗೊಳಗಾದ ಬಂಡವಾಳಶಾಹಿ ರಾಷ್ಟ್ರಗಳು ವ್ಯಾಪಕವಾಗಿ ಬಳಸಿಕೊಂಡಿವೆ. 1991ರ ನಂತರ ವಾಸ್ತವದಲ್ಲಿ ಭಾರತವೂ ಒಂದು ಬಂಡವಾಳಶಾಹಿ ರಾಷ್ಟ್ರವಾಗಿದೆ. ಆರ್ಥಿಕ ಹಿನ್ನಡೆಗೆ ‘ಪರಿಣಾಮಕಾರಿ ಬೇಡಿಕೆ’ ಸೃಷ್ಟಿಸುವುದನ್ನು ಪರಿಹಾರ ಎಂದು ಕೇನ್ಸ್ ಸೂಚಿಸಿದ್ದಾರೆ. ಪರಿಣಾಮಕಾರಿ ಬೇಡಿಕೆ ಎಂದರೆ, ಉತ್ಪನ್ನಗಳನ್ನು ನಾಮುಂದು ತಾಮುಂದು ಎನ್ನುವಷ್ಟು ವೇಗದಲ್ಲಿ ಜನರು ಕೊಂಡುಕೊಳ್ಳುವಂತಾಗುವುದು. ಖರೀದಿ ಜಾಸ್ತಿ
ಯಾದಾಗ ಉತ್ಪಾದನಾ ಅವಕಾಶಗಳು ಜಾಸ್ತಿಯಾಗುತ್ತವೆ. ಆಗ ಉದ್ಯೋಗಗಳು ಹೆಚ್ಚಾಗುತ್ತವೆ.
ಜನರ ಆದಾಯದ ಶಕ್ತಿ ಹೆಚ್ಚಾಗಿ ಆರ್ಥಿಕತೆ ಸಶಕ್ತವಾಗುತ್ತದೆ ಎನ್ನುವುದು ಇಲ್ಲಿರುವ ಪರಿಕಲ್ಪನೆ.

ಇಲ್ಲಿ, ಬೇಡಿಕೆಯ ಇಳಿಕೆ ಯಾಕೆ ಆಗುತ್ತದೆ ಎಂದು ಗಮನಿಸಬೇಕು. ತಮಗೆ ಬೇಕಾದ ಎಲ್ಲವನ್ನೂ ಖರೀದಿಸಿದ ನಂತರ ಕೈಯಲ್ಲಿ ಹಣವಿದ್ದರೂ ಏನನ್ನೂ ಕೊಳ್ಳುವುದು ಬೇಡ ಎಂಬ ಮನಃಸ್ಥಿತಿಯೊಂದು ಬರುತ್ತದೆ. ಅದನ್ನು ‘ಸಂಪತ್ತಿನ ವೈರಾಗ್ಯ’ವೆಂದು ಕರೆಯಬಹುದು. ಜಗತ್ತಿನ ಎಲ್ಲ ರಾಷ್ಟ್ರಗಳೂ ಶ್ರೀಮಂತವಾದ ನಂತರ ಬಂದೇ ತೀರುವ ಸ್ಥಿತಿ ಇದು.

ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳಲ್ಲಿ ಈ ರೀತಿಯ ಬೇಡಿಕೆ ಇಳಿಕೆಯ ಒಂದು ಪ್ರಕ್ರಿಯೆ ಇದೆ. ಆದ್ದರಿಂದಲೇ ಅಂತಹ ಕಡೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನದ ತರಬೇತಿಗಳಂತಹ ಚಟುವಟಿಕೆಗಳಿಗೆ ಉದ್ಯಮ ಸ್ವರೂಪದ ಬೇಡಿಕೆ ಸಿಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಏರಿಳಿತ ಕಾಣುತ್ತಾ ಶತಮಾನಗಳಾಚೆಗೆ, ಬಹುತೇಕ ಗಾಂಧೀಜಿಯವರ ಆರ್ಥಿಕ ಚಿಂತನೆಗಳನ್ನು ಹೋಲುವ ಉತ್ಪಾದನಾ ವಿಧಾನ ಮತ್ತು ಬಳಕೆಯ ವಿಧಾನದಲ್ಲೇ ಬದಲಾವಣೆಯನ್ನು ತಂದು ಜೀವನ ಪದ್ಧತಿಯನ್ನು ಬದಲಿಸುತ್ತವೆ. ಆದರೆ, ಅದು ಹಠಾತ್ತಾಗಿ ಆಗುವುದಿಲ್ಲ. ಶ್ರೀಮಂತ ರಾಷ್ಟ್ರಗಳು ತಮ್ಮ ಉತ್ಪಾದನೆಯನ್ನು ಬಡ ರಾಷ್ಟ್ರಗಳಲ್ಲಿ ಮಾರುತ್ತವೆ. ಬಡರಾಷ್ಟ್ರವೂ ಶ್ರೀಮಂತವಾಗುತ್ತಾ ಹೋದ ಹಾಗೆ ಶ್ರೀಮಂತ ರಾಷ್ಟ್ರಗಳ ವಸ್ತುಗಳಿಗೆ ಮಾರುಕಟ್ಟೆಯ ಕೊರತೆ ಉಂಟಾಗುತ್ತದೆ. ಆಗ ಉತ್ಪಾದನೆಯಾದದ್ದು ನಾಶವಾಗಬೇಕು. ಅದಕ್ಕಾಗಿ ಯುದ್ಧಗಳು ಸೃಷ್ಟಿಯಾಗುತ್ತವೆ. ಮತ್ತೆ ಉತ್ಪಾದನೆ- ಮಾರಾಟ ಚಟುವಟಿಕೆಗಳು ನಡೆಯುತ್ತವೆ. ಆಗ ತಲೆಮಾರುಗಳು ಬದಲಾಗಿ ಅಭಿರುಚಿಗಳು ಬೇರೆಯಾಗುತ್ತವೆ. ಆ ಅಭಿರುಚಿಗೆ ತಕ್ಕಂತಹ ಉತ್ಪಾದನೆಗಳು ಬರುತ್ತವೆ. ಈ ಎಲ್ಲ
ಪ್ರಕ್ರಿಯೆಗಳೂ ಮುಗಿದ ನಂತರದ ಹಂತದಲ್ಲಿ ಬರುವ ಸ್ಥಿತಿ ಅದು.

ಆದರೆ, ಭಾರತದಲ್ಲಿನ ಬೇಡಿಕೆಯ ಇಳಿತ ಈ ಮಾದರಿಯದಲ್ಲ. ಅದು, ಖರೀದಿಸುವ ಆಸಕ್ತಿ ಇದ್ದರೂ ಹಣದ ಕೊರತೆಯಾದಾಗ ಉಂಟಾಗುವಂತಹದ್ದು. ಅದೂ ಆರ್ಥಿಕತೆಯ ಎಲ್ಲ ಕ್ಷೇತ್ರಗಳಲ್ಲೂ ಉಂಟಾಗಿರುವ ಹಿನ್ನಡೆಯಲ್ಲ. ಆಹಾರ ಧಾನ್ಯಗಳ ಬೇಡಿಕೆ, ದೈಹಿಕ ಶ್ರಮದ ಬೇಡಿಕೆ ಕಡಿಮೆಯಾಗಿಲ್ಲ. ಬೃಹತ್ ಯಂತ್ರೋಪಕರಣಗಳು-ಎಲೆಕ್ಟ್ರಾನಿಕ್ ಸಾಧನಗಳು- ಇಂತಹ ಕ್ಷೇತ್ರಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದು.

ಖರೀದಿಸುವ ಆಸೆ ಇರುವವರ ಕೈಗೆ ಹಣ ಸೇರುವ ಅವಕಾಶ ಕಡಿಮೆಯಾದಾಗ ಬೇಡಿಕೆ ಕುಸಿತದ ಈ ಪರಿಸ್ಥಿತಿ ಬರುತ್ತದೆ. ಈ ವಿಚಾರದಲ್ಲಿ ನೋಟು ರದ್ದತಿ ಮತ್ತು ಆರ್ಥಿಕ ಕಾನೂನುಗಳನ್ನು ಬಿಗಿಗೊಳಿಸಿದ್ದು ಪರಿಣಾಮ
ವನ್ನುಂಟು ಮಾಡಿವೆ. ಕಪ್ಪು ಹಣವು ಸಾಮಾನ್ಯವಾಗಿ ಹೂಡಿಕೆಯಾಗಿಯೇ ಚಲಿಸುವ ಗುಣವನ್ನು ಹೊಂದಿರು
ತ್ತದೆ‌. ಆಗ ಅದಕ್ಕೆ ಬೇಡಿಕೆಯನ್ನು ಸೃಷ್ಟಿಸುವ ಶಕ್ತಿ ಜಾಸ್ತಿ ಇರುತ್ತದೆ. ಆದರೆ, ಕಪ್ಪು ಹಣವನ್ನು ನಿಯಂತ್ರಿಸುವ ಕ್ರಮವಂತೂ ಅಗತ್ಯವಿತ್ತು. ಒಂದು ಅರ್ಥ ವ್ಯವಸ್ಥೆಯಲ್ಲಿ ಸ್ವಲ್ಪ ಮಟ್ಟಿಗಿನ ಕಪ್ಪು ಹಣ ಇರುತ್ತದೆ ಎನ್ನುತ್ತಾರೆ ಕೇನ್ಸ್. ಅದು ಸಹಜತೆಯ ಮಟ್ಟವನ್ನು ಮೀರಿದರೆ ರೂಪಾಯಿಯ ಶಕ್ತಿಯನ್ನು ದುರ್ಬಲಗೊಳಿಸುತ್ತಾ ಹೋಗಿ ಆರ್ಥಿಕ ಕುಸಿತ ಉಂಟು ಮಾಡುತ್ತದೆ.

ನೋಟು ರದ್ದತಿಯಿಂದ ಕಪ್ಪು ಹಣ ನಿಯಂತ್ರಣ ಆಗಿದೆಯೇ ಎಂದರೆ ಬಳಕೆದಾರರ ಮಟ್ಟದಲ್ಲಂತೂ ಆಗಿದೆ. ಯಾವ ಪರಿಣಾಮವನ್ನೂ ಉಂಟು ಮಾಡಿಲ್ಲದೇ ಇದ್ದರೆ ಆರ್ಥಿಕ ಹಿನ್ನಡೆಯಾಗಲು ಸಾಧ್ಯವಿಲ್ಲ. ಹಣದ ಚಲಾವಣೆ ಜಾಸ್ತಿಯಾಗಿ ಆಗಿರುವ ಆರ್ಥಿಕ ಹಿನ್ನಡೆ ಇದಲ್ಲ. ಆರ್ಥಿಕತೆಯ ಮೇಲಿನ‌ ವಲಯ ಅರ್ಥಾತ್ ಬೃಹತ್ ತಯಾರಿಕಾ ವಲಯದಲ್ಲಿ ನೋಟು ರದ್ದತಿಯ ಪರಿಣಾಮ ಆಗಿಲ್ಲದೇ ಇರಬಹುದು. ಆದರೆ ಆ ವಲಯದಲ್ಲಿ ಪರಿಣಾಮ ಆಗದಿದ್ದರೂ ಆರ್ಥಿಕತೆಗೆ ದೊಡ್ಡ ಪರಿಣಾಮ ಆಗುವುದಿಲ್ಲ. ಕೆಳ ಹಂತದಲ್ಲಿ ಬೇಡಿಕೆ ಕಡಿಮೆಯಾದರೆ ಮೇಲಿನ ವಲಯದ ಬಂಡವಾಳವು ತನ್ನ ಉತ್ಪಾದನೆಗೆ ಬೇಡಿಕೆಯನ್ನು ಕೊಡುವ ಬೇರೆ ದೇಶಗಳ ಆರ್ಥಿಕತೆಯನ್ನು ಹುಡುಕಿಕೊಂಡು ಹೋಗುತ್ತದೆ. ಆಗ ‘‌ಮೇಕ್ ಇನ್ ಇಂಡಿಯಾ’ ಸಾಧ್ಯವಾಗದು.

ಇಲ್ಲಿ ಈಗ ಇರುವ ಸವಾಲು ಕಾನೂನಿನ ವ್ಯಾಪ್ತಿಯಲ್ಲಿಯೇ ‘ಪರಿಣಾಮಕಾರಿ ಬೇಡಿಕೆಯನ್ನು ಸೃಷ್ಟಿಸುವುದು ಹೇಗೆ?’ ಎನ್ನುವುದು. ಬಂಡವಾಳಶಾಹಿ ಆರ್ಥಿಕತೆಯ ರಕ್ಷಣೆಗಾಗಿ ಸಮಾಜವಾದಿ ಕ್ರಮಗಳನ್ನು ಸೂಚಿಸುತ್ತಾರೆ ಕೇನ್ಸ್. ರೈತರ ಖಾತೆಗೆ ಹಣ ಕೊಡುವ ಸರ್ಕಾರದ ಯೋಜನೆಯು ಬೇಡಿಕೆಯನ್ನು ಹೆಚ್ಚಿಸುವ ಆಶಯದ್ದೇ ಆಗಿದೆ. ‘ನ್ಯಾಯ್ ಯೋಜನೆ’ ಎಂಬ ಬಡವರ ಖಾತೆಗೆ ಹಣ ಹಾಕುವ ಪರಿಕಲ್ಪನೆಯೂ ಬೇಡಿಕೆಯನ್ನು ಹೆಚ್ಚಿಸುವ ರೂಪದ್ದೆ. ಇಂತಹ ಆಶಯಗಳು ಬೇಡಿಕೆಯನ್ನು ಹೆಚ್ಚಿಸಬೇಕಾದರೆ ಜನರಲ್ಲಿ ಆರ್ಥಿಕ ಜಾಗೃತಿ ಇರಬೇಕು. ಆದರೆ, ಭಾರತದಲ್ಲಿ ಸರ್ಕಾರದ ನೆರವು ಎನ್ನುವುದು ಸಹಾಯವಾಗಿ ಜನರಿಗೆ ಕಾಣಿಸುತ್ತದೆಯೇ ಹೊರತು ಆರ್ಥಿಕ ಯೋಜನೆಯಾಗಿ ಅಲ್ಲ.

1930ರ ದಶಕದಲ್ಲಿ ಅಮೆರಿಕವು ಕೈಗಾರಿಕೆಗಳಲ್ಲಿ ದುಡಿಮೆಯ ಅವಧಿಯನ್ನು ನಾಲ್ಕು ಗಂಟೆಗಿಳಿಸಿ ಉತ್ಪಾ
ದನೆಯನ್ನು ಕಡಿಮೆ ಮಾಡುವ ಮತ್ತು ವೇತನವನ್ನು ಎರಡು ಪಟ್ಟು ಹೆಚ್ಚಿಸಿಕೊಳ್ಳುವಂತಹ ಶಕ್ತಿ ನೀಡುವ, ನಿರುದ್ಯೋಗ ಭತ್ಯೆಯ ಕ್ರಮಗಳನ್ನೆಲ್ಲ ಜಾರಿ ಮಾಡಿತ್ತು. ಆದರೆ ಭಾರತವಿನ್ನೂ ಅಷ್ಟು ಸಮರ್ಥವಾಗಿಲ್ಲ. ಆದ್ದರಿಂದ ಬಡ ವರ್ಗಕ್ಕೆ ಉದ್ಯೋಗದ ಹೆಚ್ಚಳ, ವಸ್ತುಗಳ ಬೆಲೆ ಇಳಿಕೆ, ಮುದ್ರಾ ಯೋಜನೆಯಂತೆ ಆರ್ಥಿಕತೆಯ ತಳ ಮಟ್ಟದಲ್ಲಿ ಆದಾಯ ಬರುವಂತಹ ಕ್ರಮಗಳನ್ನು ರೂಪಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಾಶವಾದ ಕೃಷಿಯೇತರ ಗ್ರಾಮೀಣ ಆರ್ಥಿಕತೆ
ಯನ್ನು ಬಲಪಡಿಸಬೇಕು. ಕೃಷಿಯೇತರ ಗ್ರಾಮೀಣ ಉದ್ದಿಮೆಗಳು ಬಲಗೊಂಡರೆ ಕೃಷಿ ರಂಗ ಹೆಚ್ಚು ಸಮರ್ಥ
ವಾಗುತ್ತದೆ. ಆ ವಸ್ತುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಸಿಗುವ ಅವಕಾಶ ಜಾಸ್ತಿ. ಏಕೆಂದರೆ ಆ ವಸ್ತುಗಳನ್ನು ಉತ್ಪಾದಿಸುವ ಕೌಶಲವಿರುವುದು ಭಾರತಕ್ಕೇನೆ. ಆದರೆ, ಈ ಪ್ರಕ್ರಿಯೆಯು ಸೂಕ್ತ ಶೈಕ್ಷಣಿಕ ಮತ್ತು ಆಡಳಿತವಿಕೇಂದ್ರೀಕರಣದ ಅಗತ್ಯಗಳನ್ನು ಬಯಸುತ್ತದೆ. ಗ್ರಾಮೀಣ ಉತ್ಪಾದನೆಯನ್ನು ಮಾಡುವ ಕೌಶಲದ ಶಿಕ್ಷಣ, ಹಾಗೆ ಉತ್ಪಾದನೆಯಾದದ್ದನ್ನು ನಿರ್ವಹಿಸುವ ಸ್ಥಳೀಯ ಆಡಳಿತ ಇಲ್ಲಿನ ಅಗತ್ಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT