ಶನಿವಾರ, ಫೆಬ್ರವರಿ 27, 2021
28 °C

ಅಮೆರಿಕ ಉಪ್ಪಿಟ್ಟು

ಕಲೀಮ್ ಉಲ್ಲಾ Updated:

ಅಕ್ಷರ ಗಾತ್ರ : | |

ಅಮೆರಿಕ ಉಪ್ಪಿಟ್ಟು

ಆಗ ಈಗಿನಂತೆ ಬಿಸಿಯೂಟದ ಯೋಜನೆ ಇರಲಿಲ್ಲ. ನಮ್ಮ ಸರ್ಕಾರಿ ಸ್ಕೂಲಿಗೆ ಮಧ್ಯಾಹ್ನದ ಸುಮಾರಿಗೆ  ಒಂದು ಒಂಟೆತ್ತಿನ ಗಾಡಿ ಬರ್ತಿತ್ತು. ಅದರಲ್ಲಿ ವಯಸ್ಸಾದ ಮುದುಕನೊಬ್ಬನು ತನ್ನಷ್ಟೇ ವಯಸ್ಸಾದ ಎತ್ತಿನ ಜೊತೆಯಲ್ಲಿ ಕಸ ತುಂಬುವಂತಿದ್ದ ಐದಾರು ಕರಿತಗಡಿನ ಡಬ್ಬಿಗಳನ್ನು ತಂದು ನಮ್ಮ ಶಾಲೆ ಎದುರು ಇಳಿಸುತ್ತಿದ್ದರು. ಅದರಲ್ಲಿ ಬೇಯಿಸಿದ ಒಂಥರ ವಾಸನೆಯ ದಪ್ಪ ಗೋಧಿಯ ಉಪ್ಪಿಟ್ಟು ಇರುತ್ತಿತ್ತು.   ಕರಿತಗಡಿನ ಆ ಡಬ್ಬಿಗಳಿಗೆ ಮುಚ್ಚಳ ಗಿಚ್ಚಳ ಅಂತೇನೂ ಇರಲಿಲ್ಲ. ಹೀಗಾಗಿ ಅವು ಹೆಣದಂತೆ ಬಾಯ್ತೆರೆದುಕೊಂಡು ಬಿದ್ದಿರುತ್ತಿದ್ದವು. ಅದರೊಳಗಿನ ಉಪ್ಪಿಟ್ಟಿನ ಮೇಲೆ ಬೀದಿಯ ದೂಳು, ಸಣ್ಣ ಕಸಕಡ್ಡಿ, ಒಣಗಿದ ಎಲೆ ಚೂರುಗಳು ಹೀಗೆ ನಾನಾ ಬಗೆಯ ಸಾಮಾಗ್ರಿಗಳು ಹಾರಿ ಬಂದು ಬಿದ್ದು ಅದು ಒಂಥರ ಸಿಂಗಾರಗೊಂಡಿರುತ್ತಿತ್ತು. ಮದುವೆ ಮನೆಗಳಲ್ಲಿ ರೆಡಿಯಾದ ಚಿತ್ರಾನ್ನದ ಮೇಲೆ ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಕರಿದ ಕಡಲೆಬೀಜ, ಉರಿದ ಗೋಡಂಬಿ ಉದುರಿಸಿದ ಹಾಗೆ ಅಂದುಕೊಳ್ಳಬಹುದು.ಆ ಗಾಡಿ ವಾಲಾಡಿಕೊಂಡು ನಮ್ಮ ಶಾಲೆಗೆ ಬರುವ ಹೊತ್ತಿಗೆ, ಊರಿನ ಕಾಗೆಗಳೆಲ್ಲ ಡಬ್ಬಿಗಳಿಗೆ ಮುತ್ತಿಕೊಂಡು ಅದರ ರುಚಿಯನ್ನು ಮೊದಲು ಸವಿಯುವುದು ಒಂದು ವಾಡಿಕೆ. ಆ ಮುದುಕನೂ ಅಷ್ಟೇ, ಗಾಡಿ ಹತ್ತಿ ಬೀಡಿ ಹಚ್ಚಿದನೆಂದರೆ ಮುಗೀತು. ಗಾಡಿಯ ಹಿಂದೆ ಏನಾಗುತ್ತಿದೆ ಅಂತ ಅಪ್ಪಿತಪ್ಪಿಯೂ ತಿರುಗಿ ನೋಡುತ್ತಿರಲಿಲ್ಲ. ಹೀಗಾಗಿ, ಬಾಯ್ತೆರೆದ ಆ ಉಪ್ಪಿಟ್ಟು ಡಬ್ಬಿಗಳ ಮೇಲೆ ಎಲ್ಲಾ ಬಗೆಯ ಚಮತ್ಕಾರಗಳು ನಡೆಯುತ್ತಿದ್ದವು.ಅಮೆರಿಕದಲ್ಲಿ ಕುದುರೆಗಳ ಮೇವಿಗೆ ಅಂತ ಒಂದು ಬಗೆಯ ಗೋಧಿ ಬೆಳೆಸುತ್ತಾರೆ. ಆ ಗೋಧಿ ಬೇಗ ಮುಗ್ಗುಲಾಗಿ ಹುಳ ಹಿಡಿಯುತ್ತದೆ. ಆಗ ಅಲ್ಲಿನ ಪೊಗರಿನ ಕುದುರೆಗಳು ಅದನ್ನ ಮೂಸಿಯೂ ನೋಡಲ್ಲ. ಆಗ ಆ ಗೋಧಿಯನ್ನು ಸಮುದ್ರಕ್ಕೆ ತಂದು ಸುರೀತಾರಂತೆ. ಆಗ ನಮ್ಮವರು ಹೋಗಿ  ಅಯ್ಯಯ್ಯೋ ಅದನ್ನು ಬಿಸಾಕಬ್ಯಾಡಿ  ಸ್ವಾಮಿ ನಮಗೆ ಕೊಡಿ ಅದು ಬೇಕು ಅಂತ್ಹೇಳಿ ಹಡಗಿನಲ್ಲಿ ತುಂಬಿಸಿಕೊಂಡು ಬಂದು ಅದರಲ್ಲಿ ಉಪ್ಪಿಟ್ಟು ರೆಡಿ ಮಾಡಿಸಿ ನಿಮಗೆ ತಿನ್ನಿಸ್ತಾ ಇದ್ದಾರೆ. ದಿನ ಫಾರಿನ್ ಉಪ್ಪಿಟ್ಟು ತಿನ್ನೋ ಪುಣ್ಯ ನಿಮ್ಮದು ಕಂಡ್ರಲೇ ಎಂದು ನಮ್ಮ ಪೀಟಿ ಮೇಷ್ಟ್ರು ಉಪ್ಪಿಟ್ಟಿನ ಚರಿತ್ರೆಯನ್ನು ಆಗಾಗ  ನಮಗೆ ಹೇಳುತ್ತಲೇ ಇರುತ್ತಿದ್ದರು. ನನಗೆ ಅಮೆರಿಕ ಎಲ್ಲಿದೆ ಅಂತ ಗೊತ್ತಿರಲಿಲ್ಲ. ನನ್ನ ಗೆಳೆಯ ದಯಾನಂದನಿಗೆ ಕೇಳಿದಾಗ ಅವನು ಅದು ತಿಪಟೂರಿನ ಕಡೆಗಿದೆ ಎಂದು ಉತ್ತರಿಸುತ್ತಿದ್ದ.   ನಾವು ಶಾಲೆಯಲ್ಲೇ ಶಕ್ತಿ ಮೀರಿ ಉಪ್ಪಿಟ್ಟನ್ನು ತಿಂದು ಉಳಿದದ್ದನ್ನು ರಾತ್ರಿ ಊಟಕ್ಕೆಂದು ಮನೆಗೆ ಒಯ್ಯುತ್ತಿದ್ದೆವು. ಅಲ್ಲಿ ಹಳೇ ಉಪ್ಪಿಟ್ಟಿಗೆ ಒಂದಿಷ್ಟು ಈರುಳ್ಳಿ, ಹಸಿಮೆಣಸಿನ ಕಾಯಿ, ಕರಿಬೇವಿನ ಸೊಪ್ಪು ಸೇರಿಸಿ ಹೊಸ ಒಗ್ಗರಣೆ ಜಡಿದು ಮತ್ತೆ ರೆಡಿಮಾಡಿ ಬಡಿಸುತ್ತಿದ್ದರು. ಹೀಗೆ ಹೊಟ್ಟೆ ತುಂಬಿಸುವ ಉಪ್ಪಿಟ್ಟಿಗೆ ನಾವು  ಶಾಲೆಯಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೆವು. ಹೀಗಿರುವಾಗಲೇ ಒಂದು ದಿನ ನಮ್ಮ ಶಾಲೆಯಲ್ಲಿ ವಿಚಿತ್ರದ ಘಟನೆಯೊಂದು ನಡೆದು ಹೋಯಿತು.   ಆ ಉಪ್ಪಿಟ್ಟಿನ ಗಾಡಿ ನಮ್ಮ ಶಾಲೆಗೆ ಬಂದು ಮುಟ್ಟಿದ ನಂತರ ಅದರಲ್ಲಿನ ಕರಿಡಬ್ಬಿಗಳನ್ನು ಇಳಿಸಿಕೊಳ್ಳುವ ಅಧಿಕಾರವನ್ನು ನಮ್ಮ ಶಾಲೆಯ ಮೂವರು ಕ್ಲಾಸ್ ಮಾನಿಟರ್‌ಗಳಿಗೆ ನೀಡಿದ್ದರು. ಅವರು ಬಿಟ್ಟು ಬೇರೆ ಯಾರೂ ಆ ಕರಿಡಬ್ಬಿಗಳನ್ನು ಇಣುಕಿ ನೋಡುವಂತೆಯೂ ಇರಲಿಲ್ಲ. ಅವತ್ತಿನ ದಿನ ಈ ಕರಿಡಬ್ಬಿಗಳನ್ನು ಕೆಳಗೆ ಇಳಿಸಲೆಂದು ಮೊದಲು ಗಾಡಿ ಮೇಲೆ ಹತ್ತಿದ್ದ ಮಾನಿಟರ್ ಒಬ್ಬ  ಅದೇನಾಯಿತೋ ಏನೋ ಕಿಟಾರಂತ ಕಿರುಚಿಕೊಂಡು ಒಂಟೆತ್ತಿನ ಗಾಡಿಯಿಂದ ಕೆಳಗೆ ಹಾರಿ ಬಿದ್ದು ಬಿಟ್ಟ. ನಾವೆಲ್ಲಾ ಅವನಿಗೆ ದೆವ್ವವೇ ಬೆನ್ನತ್ತಿರಬಹುದೆಂದು ಭಾವಿಸಿ ಚಿಂತಾಕ್ರಾಂತರಾದೆವು. ಅವನ ಕೂಗಾಟ ಕೇಳಿ ನಮ್ಮ ಮೇಷ್ಟ್ರುಗಳೆಲ್ಲಾ  ಗಾಬರಿಬಿದ್ದು ಓಡೋಡಿ ಬಂದರು. ಗಾಡಿ ಹತ್ತಿ ಅವನು ಅಷ್ಟೊಂದು ಕೆಟ್ಟದಾಗಿ ಹೆದರಿ ಕಿರಿಚಲು ಏನು ಕಾರಣ ಎಂದು ತನಿಖೆ ನಡೆಸತೊಡಗಿದರು.  ಅದು ಹೀಗಾಗಿತ್ತು; ಉಪ್ಪಿಟ್ಟಿನ ಗಾಡಿ ಸಂತೆ ಮೈದಾನದ ಗುಂಡಿಯಲ್ಲಿ ಬರುವಾಗ ಬೀದಿಯಲ್ಲಿ ಅಂಡಲೆಯುತ್ತಿದ್ದ  ಕಂತ್ರಿ ನಾಯಿ ಮರಿಗೆ ನಮ್ಮ ಉಪ್ಪಿಟ್ಟಿನ ವಾಸನೆ ಅದು ಹೇಗೋ ಸಿಕ್ಕಿ ಬಿಟ್ಟಿದೆ. ಕಟ್ಟೆ ಮೇಲೆ ಮನಸೋತು ನಿಂತಿದ್ದ ಅದು ಗಾಡಿ ಗುಂಡಿಯ ಹತ್ತಿರ ಬರುತ್ತಲೇ ಕಟ್ಟೆ ಮೇಲಿಂದ ಒಮ್ಮೆಗೇ, ಹುಲಿಯಂತೆ ಛಂಗನೆ ಹಾರಿದೆ. ಆನಂತರ, ಕುತೂಹಲಗೊಂಡು ಉಪ್ಪಿಟ್ಟಿನ ಕರಿಡಬ್ಬಿಗಳ ಮೇಲೆ ಹತ್ತಿ ಒಳಗೆ ಇಣುಕಿದಾಗ ಮೃಷ್ಟಾನ್ನ ಭೋಜನವೇ ಕಂಡಿದೆ. ಖುಷಿಯಾದ ನಾಯಿ ಕರಿಡಬ್ಬಿಗಳಲ್ಲಿ ಬಾಯಿ ತೂರಿಸುತ್ತಿದ್ದಾಗ, ಗಾಡಿಯ ಹೊಯ್ದಾಟ ಶುರುವಾಗಿ ಅನಾಮತ್ತಾಗಿ ಜಾರಿ ಉಪ್ಪಿಟ್ಟಿನ ಡಬ್ಬಿಯಲ್ಲಿ ಬಿದ್ದು ಬಿಟ್ಟಿದೆ.ಬಿದ್ದ ಮೇಲೆ ಸುಮ್ಮನಿರಲಾದೀತೆ? ಹಸಿವನ್ನೇ ಹಾಸಿಹೊದ್ದ ಅದಕ್ಕೆ ದೇವರು ದಯಪಾಲಿಸಿದ ಉಪ್ಪಿಟ್ಟು ದಿವ್ಯದೂಟವಾಗಿ ಕಂಡಿದೆ. ಸಿಕ್ಕಷ್ಟು ತಿಂದ ಮೇಲೆ ಅದಕ್ಕೆ ಡಬ್ಬಿಯಿಂದ ಎದ್ದು ಬರಲು ಸಾಧ್ಯವಾಗಿಲ್ಲ. ಹೀಗಾಗಿ, ಜೋಲಾಡುವ ಗಾಡಿಯ ಉಯ್ಯಾಲೆಯಲ್ಲಿ, ಎತ್ತಿನ ಕೊರಳಿನ ಗೆಜ್ಜೆ ನಾದದಲ್ಲಿ ಕುನ್ನಿಗೆ ಸ್ವರ್ಗವೇ ಸಿಕ್ಕು ಹಾಗೇ ಮೈಚಾಚಿ ಮಲಗಿಬಿಟ್ಟಿದೆ. ನಮ್ಮ ಮಾನಿಟರ್ ಉಪ್ಪಿಟ್ಟು ಡಬ್ಬಿಯ ಅಲ್ಲಾಡಿಸಿ ಅದರೊಳಗೆ ಕೈ ಇಟ್ಟಾಗ ಅದು  ಯರ್ರಾ ಬಿರ್ರಿ ಸಿಟ್ಟಾಗಿ ಅವನ ಕೈಯನ್ನೇ ಕಚ್ಚಿದ ಕಾರಣಕ್ಕೇ ಮಾನಿಟರ್ ಆ ಥರ ಅರಚಾಡಿ ‘ಅಯ್ಯಯ್ಯಪ್ಪೋ...ಸತ್ತೆ ಕಣಲೇ...’ ಅಂತ ಕೆಳಗೆ ನೆಗೆದದ್ದು.ಆ ಉಪ್ಪಿಟ್ಟಿನ ಕರಿಡಬ್ಬಿಯಲ್ಲಿದ್ದ ಕಂತ್ರಿ ನಾಯಿಯ ಕಂಡು ನಮ್ಮ ಮಾಸ್ತರುಗಳು  ಹೆದರಿಕೊಳ್ತಾರೆ ಅಂದುಕೊಂಡರೆ ಅವರುಗಳು ಒಂದಿಷ್ಟೂ ವಿಚಲಿತರಾಗಲಿಲ್ಲ. ನಮ್ಮ ಪೀಟಿ ಮೇಷ್ಟ್ರು ಪಾಪ ಮೂಕ ಜೀವ, ಅದರದೇನೂ ತಪ್ಪಿಲ್ಲ. ಅದನ್ನ ಎತ್ತಿ ಕೆಳಗಿಳಿಸಿ ಆಮೇಲೆ ಡಬ್ಬಿಗಳನ್ನ ಕೆಳಗಿಳಿಸಿ, ಅದು ಕೂತಿದ್ದ ಜಾಗದ ಒಂದಿಷ್ಟು ಉಪ್ಪಿಟ್ಟನ್ನ ತೆಗೆದು ಬಿಸಾಕಿ, ಉಳಿದಿದ್ದನ್ನು ಕಲಸಿ ಎಲ್ರಿಗೂ ಹಂಚಿಬಿಡಿ ಎಂದು ಮಾನಿಟರ್‌ಗಳಿಗೆ ಆದೇಶಿಸಿದರು. ಎಲ್ಲರಿಗಿಂತ ಮೊದಲಿಗರಾಗಿ ಆ ದಿನ ಸರದಿ ಸಾಲಿನಲ್ಲಿ ನಾನು ನನ್ನ ಗೆಳೆಯ ನಿಂತಿದ್ದೆವು. ಆ ನಾಯಿ ತಿಂದು ಮಲಗಿದ್ದ ಡಬ್ಬಿಯ ಮೊದಲ ಗಿರಾಕಿಗಳು ನಾವೇ ಆಗಿದ್ದೆವು. ನನ್ನ ಮುಂದೆ ನಿಂತಿದ್ದ ಗೆಳೆಯ ದಯಾನಂದ ‘ಇವತ್ತು ಉಪ್ಪಿಟ್ಟು ಬ್ಯಾಡಪ್ಪ... ಹೆಂಗೆಂಗೋ ಆಗ್ತಾ ಇದೆ. ನನಗೆ ಹೊಟ್ಟೆ ನೋವಿರಬೇಕು ಎಂದು ಮುಲುಕಾಡುತ್ತಾ ಮೆಲ್ಲಗೆ ಸರದಿ ಸಾಲಿನಿಂದ ಹೊರಬರಲು ಹೊಂಚು ಹಾಕತೊಡಗಿದನು.

ದಯಾನಂದನ ಪೀಕಲಾಟ ಗಮನಿಸುತ್ತಿದ್ದ ಪೀಟಿ ಮೇಷ್ಟರ ಪಿತ್ತ ಆ ಕ್ಷಣವೇ ನಾಲಿಗೆಗೆ ಏರಿತು. ‘ಲೇ ಈ ನಾಟ್ಕ ಇಲ್ಲಿ ನಡಿಯೋದಿಲ್ಲ. ಈಗಷ್ಟೇ ಚೆನ್ನಾಗಿದ್ದೆ. ಸರತಿ ಸಾಲಾಗೆ ನುಂಗಕ್ಕೆ ಮುಂದೆ ಬಂದು ನಿಂತಿದ್ದೆ. ದುಸರ ಮಾತಾಡ್ದೆ ಸುಮ್ನೆ ಹಾಕಿಸ್ಕೋಬೇಕು. ನಾಯಿ ನಾರಾಯಣ ಪರಮಾತ್ಮ ಇದ್ದಂಗೆ. ನೀನು ಹಾಕಿಸ್ಕೊಂಡ್ ಮೇಲೂ ನಾನ್ ನೋಡ್ತಾನೇ ಇರ್ತೀನಿ, ಒಂದು ಅಗಳು ನೆಲಕ್ಕೆ ಚೆಲ್ಲಿದರೂ ನಿಮ್ಮಿಬ್ಬರ ಚರ್ಮ ಸುಲೀತಿನಿ ಹುಶಾರ್ ಎಂದು ನನ್ನನ್ನೂ ಸೇರಿಸಿಕೊಂಡು ಗುಟುರು ಹಾಕಿದರು. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾದ ನಾಯಿ ಮರಿ ಮಾತ್ರ ಗಾಡಿಯಿಂದ ಇಳಿಸಿದ ಮೇಲೆ ಶಾಲೆಯ ಕಟ್ಟೆಯ ಮೇಲೆ ಬಂದು ಮಲಗಿ ಸಖತ್ತಾಗಿ ನಿದ್ದೆ ಬಾರಿಸುತ್ತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.