ಬುಧವಾರ, ಜೂನ್ 23, 2021
30 °C

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಗಾಂಧಿ ಪ್ರಣೀತ ಪರ್ಯಾಯ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಗಾಂಧಿ ಪ್ರಣೀತ ಪರ್ಯಾಯ

ಎಂಬತ್ತೊಂಬತ್ತು ವರ್ಷಗಳ ಹಿಂದೆ, ನಿಖರವಾಗಿ ಹೇಳಬೇಕೆಂದರೆ 1929ರ ಜುಲೈ 24ನೇ ತಾರೀಕಿನಂದು ಮಹಾತ್ಮ ಗಾಂಧಿ ಒಂದು ಯಂತ್ರ ವಿನ್ಯಾಸದ ಸ್ಪರ್ಧೆಯ ಪ್ರಕಟಣೆ ನೀಡಿದ್ದರು. ಯಶಸ್ವಿ ವಿನ್ಯಾಸಕ್ಕೆ ಅವರು ಇಟ್ಟಿದ್ದ ಬಹುಮಾನದ ಮೊತ್ತ 7700 ಪೌಂಡುಗಳು. ಆಗಿನ ಕಾಲಕ್ಕೆ ಇದು ಸುಮಾರು ಒಂದು ಲಕ್ಷ ರೂಪಾಯಿಯಷ್ಟು ದೊಡ್ಡ ಮೊತ್ತ. ಈಗಿನ ಪೌಂಡ್ ಬೆಲೆಯಲ್ಲಿ ಲೆಕ್ಕ ಹಾಕಿದರೆ ಅದು ಸುಮಾರು ಏಳು ಲಕ್ಷ ರೂಪಾಯಿಗಳಷ್ಚಾಗುತ್ತದೆ. ಈ ಎಂಬತ್ತೊಂಬತ್ತು ವರ್ಷಗಳಲ್ಲಾಗಿರುವ ಹಣದುಬ್ಬರ ದರ ಇತ್ಯಾದಿಗಳನ್ನೆಲ್ಲಾ ಲೆಕ್ಕ ಹಾಕಿದರೆ ಈ ಮೊತ್ತಕ್ಕೆ ಈಗ ಕೋಟ್ಯಂತರ ರೂಪಾಯಿಯ ಮೌಲ್ಯವಿದೆ. ಒಟ್ಟಿನಲ್ಲಿ ಯಂತ್ರ ವಿನ್ಯಾಸದ ಸ್ಪರ್ಧೆಗೆ ಭಾರೀ ಮೊತ್ತದ ಬಹುಮಾನವನ್ನೇ ಇಡಲಾಗಿತ್ತು ಎಂಬುದಂತೂ ಖಚಿತ.

ಮಹಾತ್ಮಾ ಗಾಂಧಿಯ ಹೆಸರಿನ ಜೊತೆಗೆ ಅಂಟಿಕೊಂಡಿರುವ ಅನೇಕ ಸಿದ್ಧ ಮಾದರಿಗಳಲ್ಲಿ ಮುಖ್ಯವಾದುದು ಅವರ ಯಂತ್ರ ವಿರೋಧ. ಆದರೆ 1929ರ ಈ ಪ್ರಕಟಣೆ ಗಾಂಧೀಜಿಯ ಯಂತ್ರ ವಿರೋಧದ ಹಿಂದಿನ ತರ್ಕವೇನು ಎಂಬುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸುಸ್ಥಿರತೆ ಹಾಗೂ ಮಾನವೀಯತೆಯ ಮೌಲ್ಯವನ್ನು ಜೋಡಿಸುವ ಅವರ ಪ್ರಯತ್ನವನ್ನು ಹೇಳುತ್ತದೆ.

ಅಂದ ಹಾಗೆ ಈ ಸ್ಪರ್ಧೆಯನ್ನು ಏರ್ಪಡಿಸಿದ್ದು ಆಧುನಿಕವಾದ ಚರಕದ ವಿನ್ಯಾಸಕ್ಕೆ. ಸ್ಪರ್ಧೆಯ ನಿಯಮಾವಳಿಗಳು ಹೀಗಿವೆ. ಎತ್ತಿ ಆಚೀಚೆ ಒಯ್ಯಲು ಅನುಕೂಲವಾಗಿರುವಷ್ಟು ಹಗುರವಾಗಿರಬೇಕು. ಇದನ್ನು ಕೈ ಅಥವಾ ಕಾಲುಗಳನ್ನು ಬಳಸಿ ಚಾಲನೆ ಮಾಡಲು ಸಾಧ್ಯವಿರಬೇಕು. ಹಳ್ಳಿಯ ಗುಡಿಸಲುಗಳಲ್ಲಿ ಇಡುವುದಕ್ಕೆ ತಕ್ಕುದಾಗಿ ರೂಪುಗೊಂಡಿರಬೇಕು. ಹೆಚ್ಚೇನೂ ಬಲಹಾಕದೆ ಮಹಿಳೆಯರು ದಿನದ ಎಂಟು ಗಂಟೆ

ಗಳ ಕಾಲ ನಿರಂತರವಾಗಿ ಬಳಸವಂತೆ ವಿನ್ಯಾಸಗೊಂಡಿರಬೇಕು. ಇದನ್ನು ತಯಾರಿಸುವುದಕ್ಕೆ 150 ರೂಪಾಯಿಗಳಿಗಿಂತ ಹೆಚ್ಚು ಖರ್ಚಾಗಬಾರದು. ಇದರ ವಾರ್ಷಿಕ ನಿರ್ವಹಣೆಯ ವೆಚ್ಚ ಒಟ್ಟು ಖರ್ಚಿನ ಶೇಕಡಾ ಐದರಷ್ಟನ್ನು ಮೀರಬಾರದು. ಕನಿಷ್ಠ 20 ವರ್ಷಗಳ ಕಾಲ ಬಾಳಿಕೆ ಬರುವಂತೆ ಈ ಚರಕ ರೂಪುಗೊಂಡಿರಬೇಕು.

ಈ ಷರತ್ತುಗಳು 21ನೇ ಶತಮಾನದ ವಿನ್ಯಾಸದ ಸ್ಪರ್ಧೆಗಳನ್ನೇ ಹೋಲುತ್ತವೆ. ಬಳಸುವವನ ಅನುಭವ (ಯೂಸರ್ ಎಕ್ಸ್‌ಪೀರಿಯನ್ಸ್) ಎಂಬ ಪರಿಕಲ್ಪನೆಯ ಎಲ್ಲಾ ಅಂಶಗಳನ್ನೂ ಈ ಜಾಹೀರಾತು ಒಳಗೊಂಡಿದೆ. ನಾವು ಅತ್ಯಂತ ಸಾಮಾನ್ಯ ಎಂದುಕೊಳ್ಳುವ ಖುರ್ಚಿ ಮತ್ತು ಮೇಜುಗಳಂಥ ಉಪಕರಣಗಳಿಂದ ಆರಂಭಿಸಿ ಅತ್ಯಂತ ಸಂಕೀರ್ಣವಾದ ಸಾಫ್ಟ್‌ವೇರ್ ತನಕದ ಎಲ್ಲದರ ವಿನ್ಯಾಸಗಳಲ್ಲಿಯೂ ಈ ಬಗೆಯ ಅಂಶಗಳನ್ನು ಹೇಳಲಾಗುತ್ತದೆ. ಏಕೆಂದರೆ ಇವುಗಳ ತಯಾರಕರಿಗೆ ಬಳಕೆದಾರ ಹಿತ ಮುಖ್ಯ. ಉಪಕರಣವನ್ನು ಬಳಸುವಾಗ ಅವರಿಗೆ ಆಯಾಸವೋ, ಗೊಂದಲವೋ ಉಂಟಾಗಬಾರದು ಎಂಬುದು ಎಲ್ಲಾ ತಯಾರಕರ ಗುರಿ.

ಈ ಎಲ್ಲಾ ಷರತ್ತುಗಳನ್ನು ಪಾಲಿಸುವಂಥ ಚರಕವೊಂದರ ವಿನ್ಯಾಸ ಆ ಕಾಲದಲ್ಲಿ ನಡೆಯಿತೋ ಇಲ್ಲವೋ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಕಿರ್ಲೋಸ್ಕರ್ ಸಂಸ್ಥೆ ಒಮ್ಮೆ ಚರಕವೊಂದನ್ನು ತಯಾರಿಸಿ ಗಾಂಧೀಜಿಯವರಿಗೆ ತೋರಿಸಿದ್ದರ ಉಲ್ಲೇಖವೊಂದು ದೊರೆಯುತ್ತದೆ. ಅದನ್ನು ಮೆಚ್ಚಿಕೊಂಡ ಗಾಂಧಿ ಇದು ತುಂಬಾ ಸಂಕೀರ್ಣವಾಗಿದೆ. ಸಾಮಾನ್ಯ ಬಳಕೆದಾರರು ಇದನ್ನು ನೋಡಿಯೇ ಹೆದರಬಹುದು ಎಂದಿದ್ದರಂತೆ.

ಚರಕದ ಸುಧಾರಣೆಗೆ ಗಾಂಧೀಜಿ ನಡೆಸಿದ ಈ ಎಲ್ಲಾ ಪ್ರಯತ್ನಗಳ ಹಿಂದೆ ಇದ್ದದ್ದು ಎರಡು ಮುಖ್ಯ ಅಂಶಗಳು. ಮೊದಲನೆಯದ್ದು ಯೂರೋಪಿನ ಮಿಲ್ಲುಗಳಲ್ಲಿ ತಯಾರಾದ ನೂಲಿನಲ್ಲಿ ನೇಯಲಾಗುತ್ತಿದ್ದ ಬಟ್ಟೆಗೆ ದೇಶೀಯವಾಗಿ ಒಂದು ಪರ್ಯಾಯವನ್ನು ರೂಪಿಸು

ವುದು. ಗಾಂಧೀಜಿಯವರು ಬಯಸಿದ್ದ ವಿನ್ಯಾಸದ ಚರಕಗಳು ದಿನದ ಎಂಟು ಗಂಟೆಯ ಕೆಲಸದಲ್ಲಿ 12 ರಿಂದ 20ರಷ್ಟು ನೂಲಿನ ಉಂಡೆಗಳು ತಯಾರಾಗಬೇಕು ಎಂಬ ಅಂಶವೂ ಇತ್ತು. ಒಂದು ನೂಲಿನುಂಡೆ 16000 ಅಡಿಗಳಷ್ಟು ನೂಲನ್ನು ಹೊಂದಿರುತ್ತಿತ್ತು ಎಂಬುದನ್ನಿಲ್ಲಿ ಗಮನಿಸಬೇಕು. ಈ ಸ್ಪರ್ಧೆಯ ಹಿಂದೆ ಇದ್ದ ಬಹುಮುಖ್ಯ ಉದ್ದೇಶ ಇಂಗ್ಲಿಷರ ತಾಂತ್ರಿಕ ನೈಪುಣ್ಯಕ್ಕೊಂದು ಪರ್ಯಾಯವನ್ನು ಸೃಷ್ಟಿಸು

ವುದು. ಈ ಪರ್ಯಾಯದ ಪರಿಕಲ್ಪನೆಯೊಳಗೆ ದೊಡ್ಡ ಸಂಖ್ಯೆಯ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುವ, ನಿಸರ್ಗಕ್ಕೆ ಮಾರಕವಾಗದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಆಲೋಚನೆಗಳು ಅಡಗಿದ್ದವು.

ತಂತ್ರಜ್ಞಾನದ ಕುರಿತ ಗಾಂಧೀಜಿಯ ನಿಲುವನ್ನು ಈ ಸ್ಪರ್ಧೆಯ ನಿಯಮಾವಳಿಗಳ ಮೂಲಕವೇ ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಡಸ್ ಹಕ್ಸ್‌ಲಿಯಂಥವರು ಭಾವಿಸಿದಂತೆ ಅಥವಾ ನೆಹರು ತರಹದವರು ಅರ್ಥೈಸಿಕೊಂಡಂತೆ ಗಾಂಧೀಜಿ ಕಾಲದಲ್ಲಿ ಹಿಂದಕ್ಕೆ ಸಾಗಬೇಕೆಂಬಂಥ ಆಲೋಚನೆಗಳನ್ನು ಹೊಂದಿರಲಿಲ್ಲ. ಬಹುಶಃ ಅವರು ತಮ್ಮ ಕಾಲಕ್ಕಿಂತ ಇನ್ನೂ ಹೆಚ್ಚು ಸ್ಪಷ್ಟ ಪಡಿಸಬೇಕೆಂದರೆ ತಮ್ಮ ಕಾಲದ ಇತರರು ಅರ್ಥ ಮಾಡಿಕೊಳ್ಳುವುದಕ್ಕಿಂತ ಮುಂದೆಹೋಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಗ್ರಹಿಸಿದ್ದರು ಎನಿಸುತ್ತದೆ.

ಗಾಂಧೀಜಿ ‘ತಂತ್ರಜ್ಞಾನ ವಿಧಿವಾದ’ ಅಥವಾ ಟೆಕ್ನಾಲಜಿಕಲ್ ಡಿಟರ್ಮಿನಿಸಂನಂಥ ಪರಿಕಲ್ಪನೆಗಳನ್ನು ಬಳಸಿ ತಮ್ಮ ಆಲೋಚನೆಗಳನ್ನು ಹೇಳಲಿಲ್ಲ. ಒಬ್ಬ ರಾಜಕಾರಣಿಯಾಗಿ ಒಬ್ಬ ಸಂತನಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಭಾರೀ ಪ್ರಮಾಣದಲ್ಲಿ ಉತ್ಪಾದನೆ ನಡೆಸಿ ಇಡೀ ಜಗತ್ತಿಗೆ ಮಾರಾಟ ಮಾಡುವ ವಸಾಹತು ಪ್ರಭುಗಳ ಆರ್ಥಿಕ ಮಾದರಿಗೆ ವಿರುದ್ಧ ವಿಜ್ಞಾನವನ್ನೂ ತಂತ್ರಜ್ಞಾನವನ್ನು ಅವರು ಪ್ರತಿಪಾದಿಸುತ್ತಿದ್ದರು ಎಂಬುದನ್ನು ನಾವು ಅರಿಯಬೇಕಾಗಿದೆ.

ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಅವರು ಕೈಗೊಂಡ ಹೋರಾಟಗಳಲ್ಲಿದ್ದ ವಿರೋಧಾಭಾಸ ಮತ್ತು ಸಂಕೀರ್ಣತೆಗಳ ಬಗ್ಗೆ ಬಹಳ ದೊಡ್ಡ ಚರ್ಚೆಗಳಿವೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತ ಅವರ ನಿಲುವುಗಳಲ್ಲಿದ್ದ ಸಂಕೀರ್ಣ ಪರಿಕಲ್ಪನೆಗಳನ್ನು ವಿವರಿಸುವುದಕ್ಕೆ ಮುಂದಾದ ವಿದ್ವಾಂಸರ ಸಂಖ್ಯೆ ಬಹಳ ಕಡಿಮೆ. ಗಾಂಧೀಜಿ ಯಂತ್ರಗಳನ್ನು ಅನುಮಾನದಿಂದ ನೋಡುತ್ತಿದ್ದುದು ಅವುಗಳಿಗಿದ್ದ ಮನುಷ್ಯನನ್ನು ಅಮುಖ್ಯಗೊಳಿಸುವ ಶಕ್ತಿಯ ಕಾರಣಕ್ಕಾಗಿ. ‘ಸಂಪತ್ತಿನ ಸಂಗ್ರಹವನ್ನು ನಾನು ವಿರೋಧಿಸುವುದಿಲ್ಲ. ಆದರೆ ಅದು ಕೆಲವೇ ಕೆಲವರ ಕೈಯಲ್ಲಿ ಉಳಿಯುವುದರ ಬದಲಿಗೆ ಲಕ್ಷಾಂತರ ಮಂದಿಯಲ್ಲಿ ಹಂಚಿಹೋಗಬೇಕು ಎನ್ನುತ್ತೇನೆ’ ಎಂಬ ಅವರ ಮಾತಿನ ಹಿನ್ನೆಲೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಗಾಂಧೀಜಿಯವರ ನಿಲುವಿನ ತಿರುಳಿದೆ.

ಹತ್ತೊಂಬತ್ತನೇ ಶತಮಾನದುದ್ದಕ್ಕೂ ಸೃಷ್ಟಿಯಾದ ಉತ್ಪಾದನಾ ತಂತ್ರಗಳೆಲ್ಲಿ ಹೆಚ್ಚಿನವು ಪ್ರಕೃತಿ ವಿರೋಧಿಯಾಗಿದ್ದವು. ಸುಸ್ಥಿರತೆಗೆ ವಿರುದ್ಧವಾಗಿದ್ದವು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲು ತೊಡಗಿದ್ದು 20ನೇ ಶತಮಾನದ ಉತ್ತರಾರ್ಧದಲ್ಲಿ. ಜವಹರಲಾಲ್ ನೆಹರು ಅವರು ಹೇಳಿದ ‘ಆಧುನಿಕ ಭಾರತದ ದೇವಾಲಯ’ಗಳ ಸ್ಥಾಪನೆಗೆ ಈಗ ಹೊರಟರೆ ಎದುರಾಗುವ ಪ್ರತಿಭಟನೆಗಳ ಹಿಂದೆ ಇರುವುದು ಗಾಂಧೀಜಿ ಹತ್ತೊಂಬತ್ತನೇ ಶತಮಾನದಲ್ಲಿಯೇ ಹೇಳಿದ ಸತ್ಯಗಳಲ್ಲವೇ?

ವಿಜ್ಞಾನಿ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದ ಮೇಲೆ ‘ಪುರ’ (Providing Urban Infrastructure in Rural Areas) ಪರಿಕಲ್ಪನೆಯನ್ನು ಮುಂದಿಡುತ್ತಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ನಗರಗಳಲ್ಲಿ ಇರುವಂಥ ಮೂಲಸೌಕರ್ಯವನ್ನು ಒದಗಿಸುವ ಮೂಲಕ ವಲಸೆಯನ್ನು ತಡೆಯುವುದು, ಅಲ್ಲಿಯೇ ಉದ್ಯೋಗಗಳನ್ನು ಸೃಷ್ಟಿಸುವುದೇ ‘ಪುರ’ ಪರಿಕಲ್ಪನೆ. ಗಾಂಧೀಜಿ 1929ರಲ್ಲಿ ಏರ್ಪಡಿಸಿದ್ದ ಚರಕ ವಿನ್ಯಾಸದ ಸ್ಪರ್ಧೆಯೂ ಇಂಥದ್ದೇ ಒಂದು ಪರಿಕಲ್ಪನೆ. 20ನೇ ಶತಮಾನದ ಆರಂಭದ ದಶಕದಲ್ಲಿ ಮಹಾನಗರಗಳನ್ನು ಹೊರತು ಪಡಿಸಿದರೆ ಉಳಿದೆಲ್ಲೂ ಹೇಳಿಕೊಳ್ಳುವಂಥಮೂಲಸೌಕರ್ಯವಿರಲಿಲ್ಲ. ಆ ಮಿತಿಯೊಳಗೇ ಚರಕ ವಿನ್ಯಾಸದ ಸ್ಪರ್ಧೆಯ ಪರಿಕಲ್ಪನೆಯೂ ಜನ್ಮತಳೆದಿತ್ತು.

ತಂತ್ರಜ್ಞಾನದ ಅಗಾದ ಉತ್ಪಾದನಾ ಶಕ್ತಿಯ ಕುರಿತ ಸಂಶಯ ಈಗಲೂ ಬೇರೆ ಬೇರೆ ಬಗೆಯಲ್ಲಿ ಆಗೀಗ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷವಿಡೀ ಚರ್ಚೆಗೆ ಒಳಗಾದ ‘ಕೃತಕ ಬುದ್ಧಿಮತ್ತೆ’ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳ ಕಡಿತದ ಚರ್ಚೆಯೂ ಇಂಥದ್ದೇ. ಈಗಲೂ ಮುಂದುವರಿದಿರುವ ಈ ಚರ್ಚೆಯಲ್ಲಿ ‘ಕೃತಕ ಬುದ್ಧಿಮತ್ತೆ’ಯನ್ನು ಎದುರಿಸುವುದಕ್ಕಾಗಿ ಮನುಷ್ಯನನ್ನು ಮತ್ತಷ್ಟು ಕಡಿಮೆ ಕೂಲಿಗೆ ದುಡಿಸಿಕೊಳ್ಳುವ ಪರ್ಯಾಯ ಮಾರ್ಗಗಳ ಸಲಹೆಗಳು ಬರುತ್ತಿವೆಯೇ ಹೊರತು 1929ರಲ್ಲಿ ಗಾಂಧೀಜಿ ತೋರಿದ ಸೃಜನಶೀಲತೆಯ ಅಂಶ ಕಾಣಿಸಿಕೊಳ್ಳುತ್ತಿಲ್ಲ. ಚರಕವಿನ್ಯಾಸ ಸ್ಪರ್ಧೆಯ ಷರತ್ತುಗಳೆಲ್ಲವೂ ಬಳಕೆದಾರ ಅಗತ್ಯಗಳನ್ನು ಸೂಚಿಸುತ್ತಿವೆ. ಬಹುಶಃ ನಮ್ಮ ಎದುರು ಇರುವ ಕಠಿಣ ತಾಂತ್ರಿಕ ಸವಾಲುಗಳನ್ನು ಎದುರಿಸಬೇಕಾಗಿರುವುದು ಹೀಗೆಯೇ. ಜ್ಞಾನಾಧಾರಿತ ಆರ್ಥಿಕತೆಯನ್ನು ಕೇವಲ ನಗರಗಳಲ್ಲಿಟ್ಟುಕೊಂಡು ಚಿಂತಿಸುವ ಬದಲಿಗೆಅದಕ್ಕೊಂದು ಗ್ರಾಮೀಣ ಆಯಾಮದ ಬಗ್ಗೆ ಆಲೋಚಿಸಬಹುದಾದರೆ ಸವಾಲುಗಳಿಗೆ ಉತ್ತರ ದೊರೆಯುತ್ತದೆ. ಪದವಿ ಕಾಲೇಜುಗಳಲ್ಲಿ ಕಲಿಯುವ ಸಂಕೀರ್ಣ ಪಠ್ಯಕ್ರಮದ ಬದಲಿಗೆ ಕನ್ನಡದಲ್ಲಿ ಕಂಪ್ಯೂಟರ್ ಕೌಶಲವನ್ನು ಹೇಳಿಕೊಡುವ ಗ್ರಾಮೀಣ ಪಾಲಿಟೆಕ್ನಿಕ್‌ಗಳೂ ಈಗಿನ ಸವಾಲಿಗೊಂದು ಉತ್ತರವಾಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.