ಗುರುವಾರ , ಜೂಲೈ 9, 2020
21 °C

ಗಾಂಧಿ–ಬೋಸ್‌ ನಡುವಣ ಸಾಮರಸ್ಯದ ಕತೆ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಗಾಂಧಿ–ಬೋಸ್‌ ನಡುವಣ ಸಾಮರಸ್ಯದ ಕತೆ

ಪ್ರಧಾನಿ  ನರೇಂದ್ರ ಮೋದಿ ಅವರು 2016ರ ಜನವರಿಯಲ್ಲಿ ಸುಭಾಷ್‌ ಚಂದ್ರ ಬೋಸ್ ಅವರ ಜನ್ಮದಿನದಂದು ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಸಂಬಂಧಿಸಿದ, ಕೇಂದ್ರ ಸರ್ಕಾರದ ವಶದಲ್ಲಿದ್ದ ವರ್ಗೀಕೃತ ಕಡತಗಳನ್ನು ಬಹಿರಂಗಪಡಿಸುವ ಕೆಲಸಕ್ಕೆ ಚಾಲನೆ ನೀಡಿದರು.ಮೋದಿ ಅವರ ಪ್ರವೃತ್ತಿಗೆ ಅನುಗುಣವಾಗಿ ಈ ಕಾರ್ಯಕ್ರಮ ಭಾರಿ ಅಬ್ಬರದ ಪ್ರದರ್ಶನವಾಗಿಯೇ ನಡೆಯಿತು- ನರೇಂದ್ರ ಮೋದಿ ಅವರು ರಾಷ್ಟ್ರೀಯ ಪತ್ರಾಗಾರದ ಒಳಗೆ ಇರಿಸಿದ  ಪ್ರತಿ ಹೆಜ್ಜೆಯನ್ನು ಮತ್ತು ಅವರ ಪ್ರತಿ ಭಂಗಿಯನ್ನು ಸುದ್ದಿ ವಾಹಿನಿಗಳ ಕ್ಯಾಮೆರಾಗಳು ಸೆರೆ ಹಿಡಿದವು. ಆ ದಿನ ನೂರು ಕಡತಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ನಂತರ ಪ್ರತಿ ತಿಂಗಳು ತಲಾ ನೂರು ಕಡತಗಳನ್ನು ಬಹಿರಂಗಪಡಿಸುವ ಭರವಸೆ ನೀಡಲಾಯಿತು.ಈ ಕಡತಗಳನ್ನು ಬಹಿರಂಗಪಡಿಸುವುದರ ಹಿಂದಿನ ಕಾರಣ, ಚಾರಿತ್ರಿಕ ಸತ್ಯ ಅಥವಾ ಪಾರದರ್ಶಕತೆಯ ಬಗೆಗಿನ ಬದ್ಧತೆ ಅಲ್ಲ. ವಾಸ್ತವದಲ್ಲಿ ಮೋದಿ ನೇತೃತ್ವದ  ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹ ಸಚಿವಾಲಯದ 1.5 ಲಕ್ಷದಷ್ಟು ಕಡತಗಳನ್ನು ನಾಶ ಮಾಡಲಾಗಿದೆ (ಯಾವ ಅಪರಾಧ ಕೃತ್ಯಗಳ ಪುರಾವೆಗಳು ಈ ಕಡತಗಳಲ್ಲಿ ಇದ್ದವು ಎಂಬುದು ಈಗ ಊಹೆ ಮಾತ್ರ).ಬೋಸ್ ಅವರ ಕಡತಗಳಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಪತ್ರಾಗಾರದಲ್ಲಿರುವ ಕಡತಗಳು ಎರಡು ಅಂಶಗಳನ್ನು ಬಹಿರಂಗಪಡಿಸಬಹುದು ಎಂದು ತಿಕ್ಕಲ ಸಂಶೋಧಕರ ಗುಂಪೊಂದು ಎನ್‌ಡಿಎ ಸರ್ಕಾರದ ಮನವೊಲಿಸಿತು. ಈ ಅಂಶಗಳೆಂದರೆ, 1. ಈಗ ಹೇಳಿರುವಂತೆ, 1945ರ ಆಗಸ್ಟ್‌ನಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿಲ್ಲ ಮತ್ತು 2. ಬೋಸ್ ಅವರ ಜೀವನ ಮತ್ತು ಸಾವಿನ ಬಗೆಗಿನ ನೆನಪುಗಳನ್ನು ಮುಚ್ಚಿಡುವ ಮೂಲಕ ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವರಿಗೆ ಅವಮಾನ ಮಾಡಿದೆ.ಕಡತ ಬಹಿರಂಗಪಡಿಸುವ ಪ್ರಕ್ರಿಯೆ ಆರಂಭ ಆಗಿ ಒಂದು ವರ್ಷ ಆಗಿದೆ. ಈಗಾಗಲೇ 1200 ಕಡತಗಳನ್ನು ಬಹಿರಂಗ ಮಾಡಲಾಗಿದ್ದು ಯಾವ ಕಡತವೂ ಪಿತೂರಿ ಸಿದ್ಧಾಂತವನ್ನು ದೃಢಪಡಿಸಿಲ್ಲ. ಅಷ್ಟೇ ಅಲ್ಲ, ನೆಹರೂ ಅವರು ಬೋಸ್ ನೆನಪುಗಳನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ ಎಂದು ತಿಕ್ಕಲು ಸಂಶೋಧಕರು ವ್ಯಕ್ತಪಡಿಸಿರುವ ಅನುಮಾನವನ್ನು ಕಡತಗಳು ಸ್ಪಷ್ಟವಾಗಿ ತಳ್ಳಿಹಾಕಿವೆ; ವಾಸ್ತವದಲ್ಲಿ, ಬೋಸ್ ಅವರ ಮಗಳು ಆಸ್ಟ್ರಿಯಾದಲ್ಲಿ ನೆಲೆಸಿದ್ದ ಅನಿತಾ ಅವರಿಗೆ ಸರ್ಕಾರದ ಬೊಕ್ಕಸದಿಂದ ಭತ್ಯೆ ಮಂಜೂರು ಮಾಡುವ ಮೂಲಕ ನೆಹರೂ ಅತ್ಯಂತ ಗೌರವಪೂರ್ವಕವಾಗಿ ನಡೆದುಕೊಂಡಿದ್ದಾರೆ.ಶ್ರೇಷ್ಠ ದೇಶಭಕ್ತ ಬೋಸ್ ಮತ್ತು ಅದಕ್ಕೂ ಹೆಚ್ಚು ದೇಶಭಕ್ತಿಯ ಮಹಾತ್ಮ ಗಾಂಧಿಯ ನಡುವಣ ಸಂಬಂಧದ ನಾವೆಲ್ಲ ಮರೆತಿರುವ ಕೆಲವು ಆಯಾಮಗಳನ್ನು ಬೋಸ್ ಅವರ ಮುಂದಿನ ಜನ್ಮದಿನ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಅಂಕಣ ಪರಿಶೀಲನೆಗೆ ಒಳಪಡಿಸಿದೆ. ಬೋಸ್ ಅವರಿಗೆ ಸಂಬಂಧಿಸಿದ ಇನ್ನೊಂದು ಮಿಥ್ಯೆಯನ್ನು ದೃಢವಾದ ಚಾರಿತ್ರಿಕ ಪುರಾವೆಗಳ ಆಧಾರದಲ್ಲಿ ಈ ಅಂಕಣ ತಳ್ಳಿ ಹಾಕುತ್ತದೆ- ಗಾಂಧಿ ಮತ್ತು ಬೋಸ್ ರಾಜಿ ಸಾಧ್ಯವೇ ಇಲ್ಲದ ಪ್ರತಿಸ್ಪರ್ಧಿಗಳಾಗಿದ್ದರಷ್ಟೇ ಅಲ್ಲ, ಅವರು ವೈರಿಗಳಾಗಿದ್ದರು ಎಂಬುದೇ ಆ ಮಿಥ್ಯೆ.ಬೋಸ್ ಮತ್ತು ಗಾಂಧಿ ನಡುವೆ ಒಂದು ಪ್ರಸಿದ್ಧ ಮತ್ತು ಮಹತ್ವದ ಭಿನ್ನಾಭಿಪ್ರಾಯ ಇತ್ತು ಎಂಬುದು ನಿಜ. 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಬೋಸ್ ಅವರ ಪುನರಾಯ್ಕೆಯನ್ನು ಗಾಂಧಿ ವಿರೋಧಿಸಿದ ಸಂದರ್ಭದಲ್ಲಿ ಇದು ಉಂಟಾಯಿತು. ಆದರೆ ಬೋಸ್‌ ಅದಕ್ಕಿಂತ ಹಿಂದಿನ ಕನಿಷ್ಠ ಒಂದೂವರೆ ದಶಕಗಳ ಕಾಲ ಗಾಂಧಿಯ ಬಹುದೊಡ್ಡ ಅಭಿಮಾನಿಯಾಗಿದ್ದರು.ಗಾಂಧಿ ಸ್ವಾತಂತ್ರ್ಯ ಹೋರಾಟದ ಸರ್ವೋಚ್ಚ ನಾಯಕ ಎಂದು ಬೋಸ್ ಭಾವಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮೊದಲಿನ ಪತ್ರ ವ್ಯವಹಾರದಲ್ಲಿಯೂ ಬೋಸ್ ಇದನ್ನು ಸ್ಪಷ್ಟಪಡಿಸಿದ್ದಾರೆ- ‘ನಿಮ್ಮ ಬಗ್ಗೆ ನನಗಿರುವ ಗೌರವವನ್ನು ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಪತ್ರವೊಂದರಲ್ಲಿ ಗಾಂಧಿಗೆ ಬೋಸ್ ಹೇಳಿದ್ದರು. ‘ಇತರರ ವಿಶ್ವಾಸ ಗೆಲ್ಲಲು ಸಾಧ್ಯವಾದರೂ ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿಯ ವಿಶ್ವಾಸ ಸಿಗದಿರುವುದು ನನ್ನ ಮಟ್ಟಿಗೆ ದೊಡ್ಡ ದುರಂತ’ ಎಂದೂ ಬೋಸ್ ಬರೆದಿದ್ದರು.ಸ್ವರಾಜ್ಯವನ್ನು ನಾಲ್ಕು ಗಟ್ಟಿ ಕಾಲುಗಳುಳ್ಳ ಮಂಚಕ್ಕೆ ಗಾಂಧಿ ಒಮ್ಮೆ ಹೋಲಿಸಿದ್ದರು: ಅವುಗಳೆಂದರೆ, ಹಿಂದೂ-ಮುಸ್ಲಿಂ ಸಾಮರಸ್ಯ, ಅಸ್ಪೃಶ್ಯತೆ ನಿರ್ಮೂಲನೆ, ಆರ್ಥಿಕ ಸ್ವಾವಲಂಬನೆ ಮತ್ತು ಅಹಿಂಸೆ. ಕೊನೆಯ ಅಂಶವನ್ನು ವಿರೋಧಿಸಿದರೂ ಮೊದಲನೆಯ ಮೂರನ್ನು ಬೋಸ್ ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು.ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಇಲ್ಲದ್ದರಿಂದಲೇ ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು (ಐಎನ್‍ಎ) ಸ್ಥಾಪಿಸಿದರು. ಹಾಗಿದ್ದರೂ, ಐಎನ್‍ಎಯ ನಾಲ್ಕು ದಳಗಳಲ್ಲಿ ಮೂರಕ್ಕೆ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಮೌಲಾನಾ ಆಜಾದ್ ಅವರ ಹೆಸರು ಇರಿಸಿದ್ದರು ಎಂಬುದು ಗಮನಾರ್ಹ (ಕೊನೆಗೆ ಭಟ್ಟಂಗಿಗಳ ಒತ್ತಡಕ್ಕೆ ಮಣಿದು ಕೊನೆಯದಕ್ಕೆ ತಮ್ಮ ಹೆಸರನ್ನೇ ಇರಿಸಿಕೊಂಡರು). ಸೇನೆಯ ಸಮವಸ್ತ್ರ ಧರಿಸಲು ಆರಂಭಿಸಿದ ನಂತರವೂ ಕಾಂಗ್ರೆಸ್‌ನ ತಮ್ಮ ಹಳೆಯ ಸಂಗಾತಿಗಳ ಬಗ್ಗೆ ಬೋಸ್ ಅಭಿಮಾನ ಇರಿಸಿಕೊಂಡಿದ್ದರು ಮತ್ತು ಅವರಿಗೆ ಅತಿ ಹೆಚ್ಚು ಗೌರವ ಇದ್ದದ್ದು ಮಹಾತ್ಮ ಗಾಂಧಿಯ ಬಗ್ಗೆಯೇ ಆಗಿತ್ತು. 1943ರ ಅಕ್ಟೋಬರ್ 2ರಂದು ಬ್ಯಾಂಕಾಕ್‌ನಿಂದ ರೇಡಿಯೊದಲ್ಲಿ ಮಾತನಾಡಿದ್ದ ಬೋಸ್‌, ‘ಅತ್ಯಂತ ಶ್ರೇಷ್ಠ ನಾಯಕ ಮಹಾತ್ಮ ಗಾಂಧಿಯ 75ನೇ ಹುಟ್ಟುಹಬ್ಬ ಇಂದು’ ಎಂಬುದನ್ನು  ಭಾರತೀಯ ಕೇಳುಗರಿಗೆ  ನೆನಪಿಸಿದ್ದರು. ಗಾಂಧಿಯ ಕೊಡುಗೆಗಳನ್ನು ವಿವರಿಸಿದ್ದರು.1920ರಲ್ಲಿ ಅಸಹಕಾರ ಚಳವಳಿಯನ್ನು ಅವರು ಹೇಗೆ ಆರಂಭಿಸಿದ್ದರು ಎಂಬುದನ್ನು ಹೇಳಿದರು. ‘ಸ್ವಾತಂತ್ರ್ಯದ ಮಾರ್ಗವನ್ನು ತೋರುವುದಕ್ಕಾಗಿ ದೇವರೇ ಈ ವ್ಯಕ್ತಿಯನ್ನು ಕಳುಹಿಸಿದಂತೆ ತೋರುತ್ತದೆ. ತಕ್ಷಣ ಮತ್ತು ಸ್ವಯಂಪ್ರೇರಣೆಯಿಂದ ಇಡೀ ದೇಶ ಅವರ ಹಿಂದೆ ನಿಂತಿತು’ ಎಂದು ಬೋಸ್ ಹೇಳಿದರು.ಗಾಂಧಿ ರಾಷ್ಟ್ರ ನಾಯಕರಾಗಿ ಬೆಳೆದ ನಂತರದ 20 ವರ್ಷಗಳ ಅವಧಿಯಲ್ಲಿ ಭಾರತೀಯರು ‘ರಾಷ್ಟ್ರೀಯ ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು’ ಕಲಿತರು. ಈಗ ಅವರಿಗೆ ‘ಇಡೀ ದೇಶವನ್ನು ಪ್ರತಿನಿಧಿಸುವ ರಾಷ್ಟ್ರವ್ಯಾಪಿ ಸಂಘಟನೆಯೂ ಇದೆ. ಭಾರತಕ್ಕೆ ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಗಾಂಧಿ ನೀಡಿದ ಕೊಡುಗೆ ವಿಶಿಷ್ಟ ಮತ್ತು ಪರ್ಯಾಯವಿಲ್ಲದ್ದಾಗಿದೆ. ನಮ್ಮ ರಾಷ್ಟ್ರೀಯ ಇತಿಹಾಸದಲ್ಲಿ ಎಲ್ಲ ಕಾಲದಲ್ಲಿಯೂ ಅವರ ಹೆಸರನ್ನು ಸ್ವರ್ಣಾಕ್ಷರದಲ್ಲಿಯೇ ಬರೆದಿಡಲಾಗುತ್ತದೆ’ ಎಂಬುದು ಬೋಸ್ ಅವರ ಮಾತಾಗಿತ್ತು.ಬೋಸ್ ಅವರ ಈ ಭಾಷಣದ ಸಂದರ್ಭದಲ್ಲಿ ಗಾಂಧೀಜಿ ಪುಣೆಯ ಜೈಲಿನಲ್ಲಿದ್ದರು. 1944ರಲ್ಲಿ ಗಾಂಧಿ ಬಿಡುಗಡೆಯಾದರು; ಒಂದು ವರ್ಷದ ನಂತರ ಬೋಸ್ ಮೃತಪಟ್ಟರು. 1945-46ರ ಅವಧಿಯಲ್ಲಿ ಗಾಂಧಿ ಅವರು ಬೋಸ್ ಅವರ ಐಎನ್‍ಎಯಲ್ಲಿ ಕೆಲಸ ಮಾಡಿದ್ದ ಹಲವು ಯೋಧರನ್ನು ಭೇಟಿಯಾಗಿದ್ದರು. ಅವರ ಆದರ್ಶ ಮತ್ತು ಧೈರ್ಯ ಗಾಂಧಿಗೆ ಮೆಚ್ಚುಗೆಯಾಗಿತ್ತು ಮತ್ತು ಇದು ಅವರಿಗೆ ತಮ್ಮ ಹಳೆಯ ಸಂಗಾತಿಯ ಬೆಚ್ಚನೆಯ ನೆನಪುಗಳು ಮರುಕಳಿಸುವಂತೆ ಮಾಡಿತ್ತು.1946ರ ಜನವರಿಯಲ್ಲಿ ಯುನೈಟೆಡ್ ಪ್ರೆಸ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ, ಐಎನ್‍ಎಯ ‘ಜೈ ಹಿಂದ್’ ಘೋಷಣೆಯನ್ನು ಕಾಂಗ್ರೆಸ್‌ಗೆ  ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಯುದ್ಧದಲ್ಲಿ ಬಳಕೆಯಾಗಿದೆ ಎಂಬ ಕಾರಣಕ್ಕೆ ಈ ಘೋಷಣೆ ಹಿಂಸೆಯ ರೂಪ ಎಂದು ಪರಿಗಣಿಸಬೇಕಾಗಿಲ್ಲ ಎಂದು ಗಾಂಧಿ ಹೇಳಿದರು.ಬೋಸ್ ಅವರ ಬಗ್ಗೆ ಗಾಂಧಿಯ ಅಭಿಪ್ರಾಯ ಹೀಗಿತ್ತು: ‘ತಮ್ಮ ತ್ಯಾಗದ ಸಾಮರ್ಥ್ಯ ಅವರಿಗೆ ಸದಾ ತಿಳಿದಿತ್ತು. ಅವರ ವ್ಯವಹಾರ ಚಾತುರ್ಯ, ಸೇನೆಯನ್ನು ಮುನ್ನಡೆಸುವ ತಾಕತ್ತು ಮತ್ತು ಸಂಘಟನಾ ಸಾಮರ್ಥ್ಯ ಅವರು ದೇಶ ತೊರೆದು ಹೋದ ಮೇಲಷ್ಟೇ ನನಗೆ ತಿಳಿಯಿತು. ಮಾರ್ಗದ ಬಗ್ಗೆ ನನ್ನ ಮತ್ತು ಅವರ ನಡುವಣ ದೃಷ್ಟಿಕೋನದ ವ್ಯತ್ಯಾಸ ಬಹಳ ಪ್ರಸಿದ್ಧವೇ ಆಗಿದೆ’.ಪೂರ್ವ ಬಂಗಾಳದಲ್ಲಿ ಗಲಭೆ ಸ್ಫೋಟಗೊಂಡ ಬಳಿಕ 1946ರ ಕೊನೆಗೆ ಗಾಂಧಿ ನೊವಖಾಲಿಗೆ ಹೋದರು. ಅಲ್ಲಿ ಶಾಂತಿ ಸ್ಥಾಪನೆಗೆ ಅವರು ನಡೆಸಿದ ಪ್ರಯತ್ನ ಎಲ್ಲರಿಗೂ ತಿಳಿದಿದೆ; ಆದರೆ ನಿರಂಜನ್ ಸಿಂಗ್ ಗಿಲ್ ಮತ್ತು ಜೀವನ್ ಸಿಂಗ್ ಅವರ ನೇತೃತ್ವದಲ್ಲಿ ಸಿಖ್ಖರ ದೊಡ್ಡ ಗುಂಪು ಈ ಸಂದರ್ಭದಲ್ಲಿ ನೀಡಿದ ಮಹತ್ವದ ನೆರವಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಈ ಇಬ್ಬರೂ ಐಎನ್‍ಎಯಲ್ಲಿ ಅಧಿಕಾರಿಗಳಾಗಿದ್ದವರು. ಬಲಶಾಲಿ ಸಿಖ್ಖರು ಸಾಮಗ್ರಿಗಳನ್ನು ಗ್ರಾಮದಿಂದ ಗ್ರಾಮಕ್ಕೆ ಸಾಗಿಸಲು, ತಾತ್ಕಾಲಿಕ ಆಶ್ರಯಗಳನ್ನು ನಿರ್ಮಿಸಲು ಮತ್ತು ಮೋಟಾರು ವಾಹನಗಳನ್ನು ದುರಸ್ತಿ ಮಾಡಲು ಮತ್ತು ಚಲಾಯಿಸಲು ನೆರವಾದರು.ನೊವಖಾಲಿಯಲ್ಲಿ ಹೆಚ್ಚು ನೋವು ಅನುಭವಿಸಿದ್ದು ಹಿಂದೂಗಳು. ಬಿಹಾರದಲ್ಲಿ ಮುಸ್ಲಿಮರು ಎದುರಿಸಿದ ಹಿಂಸೆ ಅಷ್ಟೇ ಘೋರವಾಗಿತ್ತು. ಹಾಗಾಗಿ ಮುಂದೆ ಗಾಂಧಿ ಅಲ್ಲಿಗೆ ಹೋಗಲು ನಿರ್ಧರಿಸಿದರು. ಆದರೆ ಹೋಗುವುದಕ್ಕೆ ಮೊದಲು ಐಎನ್‍ಎಯಲ್ಲಿ ಮೇಜರ್ ಜನರಲ್ ಆಗಿದ್ದ ಷಾ ನವಾಜ್ ಖಾನ್ ಅವರನ್ನು ಅಲ್ಲಿಗೆ ಕಳುಹಿಸಿದರು. ಖಾನ್ ಮತ್ತು ಐಎನ್‍ಎಯ ಇತರ ಆರು ಯೋಧರು ಮನೆಗಳು ಮತ್ತು ಗ್ರಾಮಗಳನ್ನು ಪುನರ್ ನಿರ್ಮಿಸಲು ನಿರಾಶ್ರಿತ ಮುಸ್ಲಿಮರಿಗೆ ನೆರವಾದರು.‘ಬಿಹಾರದಲ್ಲಿ ನಮ್ಮ ಕೆಲಸದ ಯಶಸ್ಸು ಇಡೀ ದೇಶದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ದೇಶವನ್ನು ನಾಶ ಮಾಡುತ್ತಿರುವ ಕೋಮುವಾದದ ವಿಷಕ್ಕೆ ಔಷಧವಾಗಿಯೂ ಇದು ಕೆಲಸ ಮಾಡಬಹುದು ಎಂದು ಮಹಾತ್ಮ ತಮ್ಮಲ್ಲಿ ಹೇಳಿದ್ದಾರೆ’ ಎಂದು ಖಾನ್ ಅಲ್ಲಿ ತಿಳಿಸಿದ್ದರು. ಖಾನ್ ಮತ್ತು ತಂಡದ ಕೆಲಸಕ್ಕೆ ಕೆಲವು ಅಧಿಕಾರಿಗಳು ತಡೆ ಒಡ್ಡಿದರೂ ಗಾಂಧಿ ಅಲ್ಲಿಗೆ ಹೋದ ನಂತರ ಅದು ಸರಿಯಾಯಿತು.‘ಮಹಾತ್ಮ ಅವರ ಉಪಸ್ಥಿತಿ ಮತ್ತು ಭಾಷಣಗಳು ಬಿಹಾರದ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದವು. ನನ್ನೊಂದಿಗೆ ಅವರ ನಡವಳಿಕೆ ಅತ್ಯಂತ ಸಹಕಾರದಿಂದ ಕೂಡಿದ್ದಾಗಿತ್ತು. ಅವರೆಲ್ಲರೂ ಮಹಾತ್ಮನ ಮಾತುಗಳನ್ನು ಕೇಳಲು ಸಿದ್ಧರಾಗಿದ್ದರು ಮತ್ತು ಅವರ ಕೆಲಸವನ್ನು ಯಶಸ್ವಿಯಾಗಿಸಲು ಉತ್ಸುಕರಾಗಿದ್ದರು’ ಎಂದು ಖಾನ್ ಆ ದಿನಗಳ ನೆನಪುಗಳನ್ನು ವಿವರಿಸಿದ್ದಾರೆ.ಬಂಗಾಳದ ಹಾಗೆಯೇ ಬಿಹಾರದಲ್ಲಿ ಕೂಡ ಕೋಮು ಸಾಮರಸ್ಯವನ್ನು ಮರಳಿ ತರಲು ಐಎನ್‍ಎ ಯೋಧರು ಮಾಡಿದ ಕೆಲಸದಿಂದ ಗಾಂಧಿಯ ಹೃದಯ ತುಂಬಿ ಬಂದಿತ್ತು.‘ಷಾ ನವಾಜ್ ಸಾಹೇಬ್ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಹಾರದ ಪ್ರಾರ್ಥನಾ ಸಭೆಯೊಂದರಲ್ಲಿ ಗಾಂಧಿ ಹೇಳಿದ್ದರು. ಷಾ ನವಾಜ್ ಮತ್ತು ಐಎನ್‍ಎಯ ಮಾಜಿ ಯೋಧರ ತಂಡ ಗಲಭೆ ಸಂತ್ರಸ್ತರಿಗೆ ಹೇಗೆ ಆಹಾರ ವಿತರಿಸಿತು ಎಂಬುದನ್ನೆಲ್ಲ ಗಾಂಧಿ ವಿವರಿಸಿದರು. ನಾಚಿಕೆಗೊಂಡ ಹಿಂದೂಗಳು ಸ್ವಯಂಪ್ರೇರಣೆಯಿಂದ ಮುಸ್ಲಿಮರ ಬೆಳೆ ಕಟಾವಿಗೆ ನೆರವಾದರು. ಬಂಗಾಳಕ್ಕೆ ಪಲಾಯನ ಮಾಡಿದ್ದ ಮುಸ್ಲಿಮರು ಇದನ್ನು ಕೇಳಿ ತಿಳಿದ ನಂತರ ಬಿಹಾರಕ್ಕೆ ಮರಳಿದರು.ಬಂಗಾಳದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಹಿಂದೂಗಳು ಮತ್ತು ಬಿಹಾರದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಮುಸ್ಲಿಮರು ಮತ್ತೆ ಅಲ್ಲಿಯೇ ನೆಲೆಯೂರುವಂತೆ ಐಎನ್‌ಎಯ ಯೋಧರು ಮತ್ತು ಅಧಿಕಾರಿಗಳು ಮಾಡಿದರು ಹಾಗೂ ಅವರಲ್ಲಿ ಭರವಸೆ ತುಂಬಿದರು. ಅವರು ಅಂದು ಮಾಡಿದ ಕೆಲಸವನ್ನು ಬೋಸ್ ಅವರ ಮಾತಿನಲ್ಲಿಯೇ ಹೇಳುವುದಾದರೆ, ‘ರಾಷ್ಟ್ರೀಯ ಇತಿಹಾಸದಲ್ಲಿ ಎಲ್ಲ ಕಾಲದಲ್ಲಿಯೂ ಸ್ವರ್ಣಾಕ್ಷರದಲ್ಲಿ ಬರೆದಿರಿಸಬೇಕು’. ಆದರೆ ಈಗ ಇದು ಬಹುತೇಕ ಮರೆತೇ ಹೋಗಿದೆ.ಖಚಿತವಾಗಿ ಹೇಳಬೇಕೆಂದರೆ ನಂತರದ ದಿನಗಳಲ್ಲಿ ಐಎನ್‍ಎ ಅಧಿಕಾರಿಗಳು ಏನು ಮಾಡಿದರು ಎಂಬುದು ಎಲ್ಲಿಯೂ ದಾಖಲಾಗಿಲ್ಲ. ರೈತರಿಗೆ ನ್ಯಾಯ ದೊರೆಯಬೇಕು ಎಂದು ನಿರಂತರ ಹೋರಾಟ ಮಾಡಿದ ಷಾ ನವಾಜ್ ಖಾನ್, ಮೀರಠ್‌ನಿಂದ ಹಲವು ಅವಧಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಐಎನ್‍ಎಯ ಝಾನ್ಸಿ ರಾಣಿ ರೆಜಿಮೆಂಟ್‌ನಲ್ಲಿದ್ದ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಬಗ್ಗೆ ಜನರಿಗೆ ತಿಳಿದಿದೆ. ನಿಸ್ವಾರ್ಥಿ ವೈದ್ಯೆಯಾಗಿದ್ದ ಅವರು ಹಲವು ವರ್ಷಗಳ ಕಾಲ ಕಾನ್ಪುರದ ಕಾರ್ಮಿಕರು ಮತ್ತು ಅವರ ಕುಟುಂಬಗಳ ಉದ್ಧಾರಕ್ಕೆ ಕೆಲಸ ಮಾಡಿದ್ದಾರೆ. 2002ರಲ್ಲಿ ಅವರನ್ನು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಎಡಪಕ್ಷಗಳು ಆಯ್ಕೆ ಮಾಡಿದ್ದವು.ಬಿಹಾರ, ಬಂಗಾಳ ಅಥವಾ ಉತ್ತರ ಪ್ರದೇಶ ಎಲ್ಲಿಯವರೇ ಆಗಿರಲಿ, ಐಎನ್‍ಎಯಲ್ಲಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪುರುಷ ಮತ್ತು ಮಹಿಳೆಯರು ಬೋಸ್‌ ಅವರಿಂದ ಹೇಗೆಯೋ ಹಾಗೆಯೇ ಗಾಂಧಿಯಿಂದಲೂ ಸ್ಫೂರ್ತಿ ಪಡೆದುಕೊಂಡಿದ್ದರು.1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಈ ಇಬ್ಬರು ವ್ಯಕ್ತಿಗಳ ನಡುವಣ ಭಿನ್ನಾಭಿಪ್ರಾಯ ಅಪ್ರಸ್ತುತ ಎನಿಸಿದೆ. ಅವರನ್ನು ಒಂದಾಗಿಸಿದ್ದು ಯಾವುದು ಎಂಬುದೇ ಇಂದು ಹೆಚ್ಚು ಮುಖ್ಯವಾಗಿದೆ- ಗಾಢ ಮತ್ತು ನಿಸ್ವಾರ್ಥ ದೇಶಪ್ರೇಮ, ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಂಪೂರ್ಣ ಬದ್ಧತೆ, ಬಡತನ ಮತ್ತು ಗುಲಾಮಗಿರಿ ನಿರ್ಮೂಲನೆ, ಜಾತಿ ಹಾಗೂ ಲಿಂಗ ಅಸಮಾನತೆ ತೊಡೆದು ಹಾಕುವುದು ಅವರ ನಡುವೆ ಸಾಮರಸ್ಯ ಮೂಡಿಸಿದ ಅಂಶಗಳಾಗಿದ್ದವು.ಬೋಸ್ ಅವರ ಬಗ್ಗೆ ಅಭಿಮಾನ ಇದೆ ಎಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಹೇಳಿಕೊಳ್ಳುತ್ತಿರುವುದು ಸಂಪೂರ್ಣ ಹುಸಿ. ಹಾಗೆಯೇ ಬೋಸ್‌ ಅವರು ಇಂದಿನ ಕಾಂಗ್ರೆಸ್‌ ಪಕ್ಷಕ್ಕೂ ಸೇರಿದವರಲ್ಲ.ಬೋಸ್ ಬಂಗಾಳದವರು ಎಂಬುದು ಅವರ ಮೇಲೆ ಟಿಎಂಸಿಗೆ ಯಾವ ಹಕ್ಕನ್ನೂ ನೀಡುವುದಿಲ್ಲ. ಗಾಂಧಿಯ ಹಾಗೆಯೇ ಬೋಸ್ ಅವರೂ ಸಂಕುಚಿತ ಪ್ರಾದೇಶಿಕವಾದಗಳನ್ನೆಲ್ಲ ಮೀರಿದವರು. ವಾಸ್ತವದಲ್ಲಿ, ಬೋಸ್ ಮತ್ತು  ಅತ್ಯಂತ ಶ್ರೇಷ್ಠ ಭಾರತೀಯ ಎಂದು ಅವರು ಪರಿಗಣಿಸಿದ ಗಾಂಧಿ ಯಾವ ಪಕ್ಷಕ್ಕೂ ಸೇರಿದವರಲ್ಲ.ಭಾರತವನ್ನು ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರಿಗೆ ಸುರಕ್ಷಿತ ತಾಣವಾಗಿ ಮಾರ್ಪಡಿಸಲು ಮತ್ತು ಈ ನೆಲದ ಪ್ರಜೆಗಳಾಗಿ ಮಹಿಳೆಯರು, ದಲಿತರಿಗೆ ಸಮಾನ ಮತ್ತು ಪೂರ್ಣ ಹಕ್ಕುಗಳನ್ನು ನೀಡಲು ನಿರಂಜನ್ ಸಿಂಗ್ ಗಿಲ್‌, ಷಾ ನವಾಜ್ ಖಾನ್, ಲಕ್ಷ್ಮಿ ಸೆಹಗಲ್ ಮುಂತಾದವರು ಒಂದು ಕಾಲದಲ್ಲಿ ಶ್ರೇಷ್ಠ ಕೆಲಸ ಮಾಡಿದ್ದಾರೆ. ಗಾಂಧಿ ಮತ್ತು ಬೋಸ್ ಇಬ್ಬರೂ ಇಂತಹ ಕೆಲಸ ಮಾಡುವ ಎಲ್ಲರಿಗೆ ಸೇರಿದವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.