ಭಾನುವಾರ, ಜೂನ್ 13, 2021
25 °C

ಚುನಾವಣಾ ರಾಜಕೀಯದ ಮೇಲೆ ಅರ್ಥವ್ಯವಸ್ಥೆಯ ಸವಾರಿ

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ನಮ್ಮಲ್ಲಿ ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ರಾಜಕಾರಣಿಗಳ ಅರ್ಹತೆಗೆ ಅನುಗುಣವಾಗಿ ಅವರೆಲ್ಲರಿಗೆ ಸೂಕ್ತ ಸ್ಥಾನಮಾನ ನೀಡುವುದಕ್ಕೆ ಖ್ಯಾತಿ ಪಡೆದಿವೆ. ಕೆಲವರಿಗೆ ಸೋಲಿನ ರುಚಿ ಉಣಿಸಿ, ಇನ್ನೂ ಹಲವರಿಗೆ ಮತ್ತೆ ಅಧಿಕಾರಕ್ಕೆ ತಂದು ಕೂರಿಸುವ ಮತದಾರರು ಅಚ್ಚರಿದಾಯಕ ಫಲಿತಾಂಶ ನೀಡುತ್ತಲೇ ಬಂದಿದ್ದಾರೆ. ಐದು ರಾಜ್ಯ ವಿಧಾನಸಭೆಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಪ್ರಮುಖ ರಾಜಕಾರಣಿಗಳ ವರ್ತನೆಯನ್ನು ನೀವು ಗಮನಿಸಿದ್ದರೆ, ಒಂದು ಸಂಗತಿಯಂತೂ ಸ್ಪಷ್ಟವಾಗುತ್ತಿತ್ತು. ಅವರೆಲ್ಲ ತಮ್ಮ, ತಮ್ಮ ಪಕ್ಷದ ಸೋಲು - ಗೆಲುವಿಗೆ ಹಲವಾರು ಕಾರಣಗಳನ್ನು ನೀಡುತ್ತಿದ್ದರೂ ಅವರೆಲ್ಲರಲ್ಲಿ ಒಂದು ಸಂಗತಿಯಂತೂ ಸ್ಪಷ್ಟವಾಗುತ್ತಿತ್ತು. ಕೆಲವರಂತೂ ಟೆಲಿವಿಷನ್ ಕ್ಯಾಮರಾಗಳನ್ನು ಎದುರಿಸಲೂ ಹಿಂದೇಟು ಹಾಕುತ್ತಿದ್ದರು. ಅವರಲ್ಲಿ ಒಂದಿಬ್ಬರಿಗೆ ಜನರ ಎದುರು ಬರಲು ಮನಸ್ಸಿಲ್ಲದಿದ್ದರೂ, ಮಾಧ್ಯಮಗಳನ್ನು ಎದುರಿಸಬೇಕಾದ ಅನಿವಾರ್ಯತೆಗಾಗಿ ಅವರು ಪ್ರತಿಕ್ರಿಯಿಸುತ್ತಿದ್ದರು ಎಂದೇ ನನಗೆ ಭಾಸವಾಗುತ್ತದೆ. ಅವರಲ್ಲಿ ಅನೇಕರಂತೂ ಸರಿಯಾದ ಕಾರಣ ನೀಡಲು ತಡಕಾಡುತ್ತಿದ್ದರು. ತಮ್ಮ ಕಳಪೆ ಸಾಧನೆ ಸಮರ್ಥಿಸಿಕೊಳ್ಳಲು ಕುಂಟು ನೆಪಗಳ ಮೊರೆ ಹೋಗುತ್ತಿದ್ದರು.

ಬಹುಜನ ಸಮಾಜ ಪಕ್ಷದ ಮಾಯಾವತಿ ಹೊರತುಪಡಿಸಿ ಯಾರೊಬ್ಬರೂ ಜಾತಿ ರಾಜಕಾರಣದ ಬಗ್ಗೆ ಮಾತನಾಡದಿರುವುದು ಅಚ್ಚರಿದಾಯಕವಾಗಿತ್ತು. ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಸೋಲಲು ಅಥವಾ ಗೆಲುವು ಸಾಧಿಸಲು ನಿಜವಾದ ಕಾರಣಗಳು ಏನಿರಬಹುದು ಎನ್ನುವುದು ನಿಜಕ್ಕೂ ಕುತೂಹಲಕರ ಸಂಗತಿ.

ದೇಶದ ರಾಜಕೀಯ ಮತ್ತು ಆರ್ಥಿಕ ವಿಚಾರಗಳನ್ನು ಯಾವತ್ತೂ ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ದೃಢನಂಬಿಕೆಯಾಗಿದೆ. ಅದರಲ್ಲೂ ಇತ್ತೀಚಿನ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಆರ್ಥಿಕ ವಿಚಾರಗಳು ಗಾಢ ಪ್ರಭಾವ ಬೀರಿರುವುದು ವೇದ್ಯವಾಗುತ್ತದೆ. ಆರ್ಥಿಕ ಮಾನದಂಡಗಳ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದ, ರಸ್ತೆಗಳ ನಿರ್ಮಾಣ, ನೀರು - ವಿದ್ಯುತ್ ಪೂರೈಕೆ, ಮನೆಗಳ ನಿರ್ಮಾಣ (ಪಾನಿ, ಬಿಜಲಿ ಔರ್ ಸಡಕ್) ಮತ್ತಿತರ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದವರು ಮತ್ತೆ ಅಧಿಕಾರಕ್ಕೆ ಬಂದಿದ್ದರೆ, ಹಾಗೆ ಮಾಡದವರು ಮಣ್ಣು ಮುಕ್ಕಿದ್ದಾರೆ.

ಸೋಲು - ಗೆಲುವಿಗೆ ಇತರ ಕಾರಣಗಳಿದ್ದರೂ, ಸಾಮಾನ್ಯವಾಗಿ  ಆರ್ಥಿಕ ಅಭಿವೃದ್ಧಿಗೆ ತಳಕು ಹಾಕಿಕೊಂಡ ಈ ಸೂತ್ರವೇ ಎಲ್ಲೆಡೆ ತನ್ನ ಪ್ರಭಾವ ಬೀರಿರುವುದು ಅನುಭವಕ್ಕೆ ಬರುತ್ತದೆ. ಜಾತಿ, ಸಿದ್ಧಾಂತ ಮತ್ತಿತರ ಕಾರಣಗಳು ಚುನಾವಣೆಯಿಂದ ಚುನಾವಣೆಗೆ ನಿರಂತರವಾಗಿ ತಮ್ಮ ಪ್ರಭಾವ ಕಳೆದುಕೊಳ್ಳುತ್ತಿರುವುದು ಸ್ಫುಟಗೊಳ್ಳುತ್ತದೆ.

ಜಾಗೃತ ಮತದಾರರಲ್ಲಿನ ಇಂತಹ ಹೊಸ ರಾಜಕೀಯ ಪ್ರಜ್ಞೆಯು ದೇಶದಾದ್ಯಂತ ಜನಮಾನಸದಲ್ಲಿ ನಿಧಾನವಾಗಿ ಮತ್ತು ಸ್ಥಿರವಾಗಿ ನೆಲೆವೂರುತ್ತಿದೆ.

ಪಶ್ಚಿಮ ಬಂಗಾಳದಲ್ಲಿನ ವಿದ್ಯಮಾನವನ್ನೇ ನಾವು ಇಲ್ಲಿ ನಿದರ್ಶನವಾಗಿ ತೆಗೆದುಕೊಳ್ಳಬಹುದು. ಎಡಪಕ್ಷಗಳು 30ಕ್ಕೂ ಹೆಚ್ಚು ವರ್ಷಗಳ ಕಾಲ ಅಲ್ಲಿ ರಾಜ್ಯಭಾರ ನಡೆಸಿದ್ದವು. ಪ್ರಮುಖ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳ ನೆಲೆವೀಡಾಗಿದ್ದ ರಾಜ್ಯವು, ಆಡಳಿತಾರೂಢ ಪಕ್ಷ ಅನುಸರಿಸಿದ ಧೋರಣೆಗಳಿಂದಾಗಿ ತನ್ನ ಮಹತ್ವ ಕಳೆದುಕೊಂಡಿತು. ಬಹಳ ವರ್ಷಗಳಿಂದ ಕಾಯ್ದುಕೊಂಡಿದ್ದ ಜನರ ಸಹನೆಯ ಕಟ್ಟೆ ಒಡೆದು, ಎಡಪಂಥೀಯರನ್ನು ಅಧಿಕಾರದಿಂದ ಕಿತ್ತೊಗೆಯಲಾಯಿತು. ಆರ್ಥಿಕ ಅಭಿವೃದ್ಧಿ ವಿಷಯದಲ್ಲಿ ಜನರಿಗೆ ತೀವ್ರ ಆಶಾಭಂಗ ಮಾಡಿದ್ದರಿಂದಲೇ ಎಡಪಂಥೀಯರು ಅಧಿಕಾರಕ್ಕೆ ಎರವಾದರು.

ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದ ಪಕ್ಷವೇ ಹಿಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಇದಕ್ಕೆ ರಾಜ್ಯದ ಸುಸ್ಥಿರ ಆರ್ಥಿಕ ಪ್ರಗತಿಯೇ ಮುಖ್ಯ ಕಾರಣ. ದಶಕದ ಹಿಂದೆ ರಾಜ್ಯದಲ್ಲಿ ಸಂಭವಿಸಿದ್ದ ಕೋಮು ದಳ್ಳುರಿಯ ಕರಾಳ ಛಾಯೆ ಮತ್ತು ಕಾಂಗ್ರೆಸ್‌ನ ಕೊನೆಮೊದಲಿಲ್ಲದ ಒತ್ತಡಗಳ ಹೊರತಾಗಿಯೂ ಅಧಿಕಾರದಲ್ಲಿದ್ದ ಪಕ್ಷವೇ ಮತ್ತೆ ಅಧಿಕಾರಕ್ಕೆ ಬಂದಿತು. ರಾಜ್ಯ ಸರ್ಕಾರವು ಅಭಿವೃದ್ಧಿ ಕಾರ್ಯಸೂಚಿಗೆ ನೀಡಿದ ಆದ್ಯತೆಯೇ ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬಿಹಾರದ ಜನರೂ ನಿತೀಶ್ ಕುಮಾರ್ ಅವರನ್ನು ಎರಡನೇ ಬಾರಿಗೆ ಬೆಂಬಲಿಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಅಸಾಮಾನ್ಯ ಸಾಧನೆ ಮಾಡಿ ಜನ ಸಾಮಾನ್ಯರಿಗೆ ಅಭಿವೃದ್ಧಿಯ ಫಲ ಸಿಗುವಂತೆ ಮಾಡಿದ್ದರಿಂದಲೇ ಜನರು ಮತ್ತೆ ಅವರ ಕೈ ಹಿಡಿದರು.

ಇತ್ತೀಚೆಗಷ್ಟೇ ಕೊನೆಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿಯೂ ಅಲ್ಲಿನ ಸರ್ಕಾರವನ್ನು ಪ್ರಬುದ್ಧ ಮತದಾರ ಮತ್ತೆ ಅಧಿಕಾರಕ್ಕೆ ತಂದಿದ್ದಾನೆ. ಡಿಜಿಟಲ್ ತಂತ್ರಜ್ಞಾನವನ್ನು ಜನಮಾನಸದ ಒಳಿತಿಗೆ ಬಳಸಿದ ಸರ್ಕಾರದ ಸಾಧನೆಯೇ ಇದಕ್ಕೆ ಕಾರಣ.

ತಂತ್ರಜ್ಞಾನ ಬಳಕೆ ವಿಷಯದಲ್ಲಿ ಪಂಜಾಬ್ ರಾಜ್ಯ, ದೇಶದ ಎಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿ ಇದೆ. ಎಲ್ಲ ಅಡೆತಡೆಗಳ ಹೊರತಾಗಿಯೂ ಜನರು ಆಡಳಿತಾರೂಢ ಪಕ್ಷವನ್ನೇ ಮತ್ತೆ ಆಯ್ಕೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಅಲ್ಲಿನ ಗ್ರಾಮೀಣ ಜನರೂ ತಂತ್ರಜ್ಞಾನದ ಗರಿಷ್ಠ ಪ್ರಯೋಜನ ಪಡೆಯಲಿದ್ದಾರೆ.

ಆದರೆ, ಉತ್ತರ ಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಕಂಡು ಬಂದಿದೆ. ಮಾಯಾವತಿ ಸರ್ಕಾರವು ಐದು ವರ್ಷಗಳ ಕಾಲ ಜನರಿಗಾಗಿ ಯಾವುದೇ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಿಲ್ಲ. ಚುನಾವಣೆಯಲ್ಲಿ ಜಾತಿ ಸಮೀಕರಣ ದುರುಪಯೋಗ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಬರಲು `ಬಿಎಸ್‌ಪಿ~ ಇನ್ನಿಲ್ಲದಂತೆ ಹವಣಿಸಿತು.

ಮತದಾರರು ಅಧಿಕಾರದಲ್ಲಿದ್ದ ಪಕ್ಷವನ್ನು ಕಿತ್ತೊಗೆದು ಹೊಸ ಆರ್ಥಿಕ ಭವಿಷ್ಯಕ್ಕಾಗಿ ಸಮಾಜವಾದಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

ಕಾಂಗ್ರೆಸ್‌ನ `ರಾಜಕುಮಾರ~ ರಾಹುಲ್ ಗಾಂಧಿ ಅವರ ಅಬ್ಬರದ ಪ್ರಚಾರದ ಹೊರತಾಗಿಯೂ ಕಾಂಗ್ರೆಸ್, ಕಳಪೆ ಸಾಧನೆಗಷ್ಟೇ ತೃಪ್ತಿಪಡಬೇಕಾಯಿತು. ಮತದಾರರಿಗೆ ರಾಜಕಾರಣಿಗಳ ಭಾಷಣಶೂರತ್ವಕ್ಕಿಂತ ಸಾಧನೆ ಮುಖ್ಯ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಈ ಚುನಾವಣಾ ಫಲಿತಾಂಶಗಳು ಕೇಂದ್ರ ಸರ್ಕಾರಕ್ಕೂ ಹಲವು ಪಾಠಗಳನ್ನು ಕಲಿಸಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ತಪ್ಪುಗಳನ್ನು ತಿದ್ದಿಕೊಂಡು ಆಕ್ರಮಣಕಾರಿಯಾಗಿ ಮುನ್ನುಗ್ಗಲು ಸಾಕಷ್ಟು ಕಾಲಾವಕಾಶವೂ ಇದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕಷ್ಟೆ. 2012-13ನೇ ಸಾಲಿನ ಬಜೆಟ್ ಸೇರಿದಂತೆ ಲಭ್ಯ ಇರುವ ಹಲವಾರು ಅವಕಾಶಗಳನ್ನು ಬಳಸಿಕೊಂಡು ಜನರ ಒಳಿತಿಗಾಗಿ ತನ್ನ ಬತ್ತಳಿಕೆಯಲ್ಲಿಯೂ ಸಾಕಷ್ಟು ಕಾರ್ಯಕ್ರಮಗಳು ಇರುವುದನ್ನು ಇಡೀ ದೇಶಕ್ಕೆ ಸ್ಪಷ್ಟಪಡಿಸಬಹುದಾಗಿದೆ.

ಹೊಸ ತಲೆಮಾರಿನ ಆರ್ಥಿಕ ಸುಧಾರಣಾ ಕ್ರಮಗಳನ್ನೂ ವಿಳಂಬ ಇಲ್ಲದೇ ಆದ್ಯತೆ ಮೇರೆಗೆ ಜಾರಿಗೆ ತರಬೇಕಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತಕ್ಷಣಕ್ಕೆ ಬಡ್ಡಿ ದರಗಳನ್ನು ಇಳಿಸಬೇಕಾಗಿದೆ. ನಗದು ಮೀಸಲು ಅನುಪಾತ (ಸಿಆರ್‌ಆರ್) ಮತ್ತು ಶಾಸನಬದ್ಧ ನಗದು ಅನುಪಾತಗಳನ್ನು (ಎಸ್‌ಎಲ್‌ಆರ್) ಕಡಿಮೆ ಮಾಡಿ, ಅರ್ಥ ವ್ಯವಸ್ಥೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣವು ಹರಿದು ಬರಲು ಅವಕಾಶ ಮಾಡಿಕೊಟ್ಟು, ತ್ವರಿತ ಆರ್ಥಿಕ ಬೆಳವಣಿಗೆಗೆ ಇಂಬು ನೀಡಬೇಕಾಗಿದೆ.

ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ), ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಭೂ ಸುಧಾರಣೆ ಮತ್ತಿತರ ಸುಧಾರಣಾ ಕ್ರಮಗಳ ಜಾರಿಗೂ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕಾಗಿದೆ. ಚಿಲ್ಲರೆ ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ), ಪಿಂಚಣಿ ಮತ್ತು ವಿಮೆ ಸುಧಾರಣೆಗಳನ್ನೂ ಎಲ್ಲರ ಜತೆ ಚರ್ಚಿಸಿ ಜಾರಿಗೆ ತರಲು ಕಾರ್ಯಪ್ರವೃತ್ತವಾಗಬೇಕಾಗಿದೆ.

ಹಣದುಬ್ಬರದ ಬಗೆಗಿನ ಗೀಳು ಕಡಿಮೆ ಮಾಡಿ, ಗರಿಷ್ಠ ಆರ್ಥಿಕ ವೃದ್ಧಿಗೆ ಅನಿವಾರ್ಯವಾಗಿ ಹೆಚ್ಚು ಗಮನ ನೀಡಬೇಕಾಗಿದೆ. ತಯಾರಿಕೆ, ಗಣಿಗಾರಿಕೆ, ವಿದ್ಯುತ್ ಉತ್ಪಾದನೆಗೆ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಬೇಕು. ಸಬ್ಸಿಡಿ ಹೊರೆಯನ್ನು ನಿರ್ದಾಕ್ಷಿಣ್ಯವಾಗಿ ಕಡಿಮೆ ಮಾಡಬೇಕು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಷೇರುವಿಕ್ರಯ ಪ್ರಕ್ರಿಯೆ ತೀವ್ರಗೊಳಿಸಬೇಕು. ಕೈ ಜಾರಿ ಹೋಗುತ್ತಿರುವ ಪರಿಸ್ಥಿತಿಯನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳಲು ಈಗಲೂ ಕಾಲ ಮಿಂಚಿಲ್ಲ.

ಇದೇ ಮಾತು, ಸದ್ಯಕ್ಕೆ ಅಧಿಕಾರದಲ್ಲಿ ಇರುವ ಮತ್ತು ಶೀಘ್ರದಲ್ಲಿಯೇ ಚುನಾವಣೆ ಎದುರಿಸಲಿರುವ ರಾಜ್ಯ ಸರ್ಕಾರಗಳಿಗೂ ಅನ್ವಯಿಸುತ್ತದೆ. ಜನರ ನಿರೀಕ್ಷೆಗಳ ಬಗ್ಗೆ ಉಡಾಫೆಯಿಂದ ವರ್ತಿಸಿದವರ ಕತೆ ಮುಗಿದಂತೆಯೇ ಸರಿ.

ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರವು, ತನ್ನ ಆಂತರಿಕ ಕಲಹದಿಂದ ತನ್ನ ಭವಿಷ್ಯಕ್ಕೆ ತಾನೇ ಕಲ್ಲು ಹಾಕಿಕೊಳ್ಳುತ್ತಿದೆ. ಆರ್ಥಿಕ ಪ್ರಗತಿಯಲ್ಲಿ ಬದಲಾವಣೆ ತರುವ ಮೂಲಕ ದೂರ ಸರಿಯುತ್ತಿರುವ ಜನರ ಜತೆ ಮತ್ತೆ ಬಾಂಧವ್ಯ ಬೆಸೆಯಲು ಸಾಧ್ಯವಿದೆ. ಗೋಡೆ ಮೇಲಿನ ಬರಹವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಲಿಕ್ಕಿಲ್ಲ ಎಂದು ನಾನು ಆಶಿಸುವೆ.

ಜನರ ಆಸೆ ಆಕಾಂಕ್ಷೆಗಳು ಬದಲಾಗುತ್ತಿವೆ. ನಿರೀಕ್ಷೆಗಳು ಹೆಚ್ಚುತ್ತಿವೆ. ಆರ್ಥಿಕ ಮಾನದಂಡಗಳು ಸುಧಾರಣೆ ಕಾಣುತ್ತಿವೆ. ಯುವ ಸಮುದಾಯವು ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕವಾಗಿ ಪಾಲ್ಗೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಈ ವಾಸ್ತವವನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ರಾಜ್ಯ-ರಾಷ್ಟ್ರ ಮಟ್ಟದ ರಾಜಕಾರಣಿಗಳೂ ತಮ್ಮ ಆದ್ಯತೆಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಬದಲಾವಣೆ ರೂಢಿಸಿಕೊಳ್ಳದಿದ್ದರೆ ಚುನಾಯಿತ ಪ್ರತಿನಿಧಿಗಳ ದುರಹಂಕಾರವೇ ಅವರನ್ನು ಆಪೋಶನ ತೆಗೆದುಕೊಳ್ಳದೇ ಬಿಡುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.