ಮಂಗಳವಾರ, ಜೂನ್ 15, 2021
21 °C

ಜಾತಿ ನಾಯಕನಾಗುವುದು ಜನಪ್ರಿಯತೆಯಲ್ಲ

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

ತನ್ನನ್ನು ಹೊಗಳಲು ಆಸ್ಥಾನ ತುಂಬಾ ವಿದೂಷಕರನ್ನು ಇಟ್ಟುಕೊಳ್ಳುತ್ತಿದ್ದ ರಾಜ ಮಹಾರಾಜರು ತಮ್ಮ ಬಗ್ಗೆ ಪ್ರಜೆಗಳು ಏನನ್ನುತ್ತಾರೆ ಎಂದು ತಿಳಿದುಕೊಳ್ಳಲು ಮಾತ್ರ ಮಾರುವೇಷದಲ್ಲಿ ಊರು ಸುತ್ತುತ್ತಿದ್ದರಂತೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸುತ್ತ ವಿದೂಷಕರಷ್ಟೇ ಇದ್ದಾರೆ, ಅದರ ಜತೆಗೆ ಮಾರುವೇಷದಲ್ಲಿ ಅವರೊಮ್ಮೆ ರಾಜ್ಯದಲ್ಲಿ ಒಂದು ಸುತ್ತು ಹೊಡೆದರೆ ಮರುದಿನದಿಂದ ಭಿನ್ನಮತೀಯ ಚಟುವಟಿಕೆಗಳನ್ನೆಲ್ಲ ಕೈಬಿಟ್ಟು ತೆಪ್ಪಗೆ ಮನೆಮೂಲೆ ಸೇರಿ ತನ್ನ ಸರದಿಗಾಗಿ ಕಾಯುತ್ತಾ ಕೂರಬಹುದು. ಆಡಳಿತಾರೂಢ ಬಿಜೆಪಿಯ ಭ್ರಷ್ಟಚಾರ, ವ್ಯಭಿಚಾರ ಮತ್ತು ಒಳಜಗಳದ ಜತೆಗೆ ಕಳೆದ ಆರು ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಲು ಯಡಿಯೂರಪ್ಪನವರು ನಡೆಸುತ್ತಿರುವ ಸರ್ಕಸ್ ಜನರಲ್ಲಿ ರೇಜಿಗೆ ಹುಟ್ಟಿಸಿದೆ. ಇದನ್ನು ತಿಳಿದುಕೊಳ್ಳಬೇಕಾದರೆ ಬಸ್ ನಿಲ್ದಾಣಗಳಲ್ಲಿಯೋ ಇಲ್ಲವೇ ಊರ ಸಂತೆಗಳಲ್ಲಿಯೋ ಜನರು ಆಡುತ್ತಿರುವ ಮಾತುಗಳಿಗೆ ಕಿವಿಕೊಟ್ಟರೆ ಸಾಕು.  ಈ ಪರಿಸ್ಥಿತಿ ಯಲ್ಲಿಯೂ `ತನಗೊಮ್ಮೆ ನಾಯಕತ್ವ ಕೊಟ್ಟು ನೋಡಿ, ಮುಂದಿನ ಚುನಾವಣೆಯಲ್ಲಿ 150 ಶಾಸಕರನ್ನು ಗೆಲ್ಲಿಸಿಕೊಂಡು ಬರುತ್ತೇನೆ~ ಎಂದು ಯಡಿಯೂರಪ್ಪನವರು ಹೇಳುತ್ತಾರೆಂದರೆ..... ಗರಿಷ್ಠ ಐದು ವರ್ಷಗಳ ಕಾಲ ಮಾತ್ರ ಆಳಲು ರಾಜ್ಯದ ಮತದಾರರು ತಮ್ಮ ಪಕ್ಷವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿದ್ದಾರೆ ಎಂದು ಯಡಿಯೂರಪ್ಪನವರು ಎಂದೂ ತಿಳಿದುಕೊಂಡವರಲ್ಲ. ಪ್ರಾರಂಭದ ದಿನದಿಂದಲೇ ಅವರು ಮಾತು ಶುರು ಮಾಡಿದರೆ `ಇನ್ನು ಇಪ್ಪತ್ತು ವರ್ಷಗಳ ಕಾಲ ನಾವೇ...~ ಎಂದು ಹೇಳುತ್ತಿದ್ದರು. ಈ ರೀತಿ ಹೇಳುವುದು  ನಾಡಿನ ಪ್ರಜ್ಞಾವಂತ ಮತದಾರರಿಗೆ ಮಾಡುವ ಅವಮಾನ ಎನ್ನುವ ಸಣ್ಣ ಅಳುಕು ಕೂಡಾ ಅವರನ್ನು ಕಾಡುವುದಿಲ್ಲ. ಉಳಿಸಿಕೊಂಡರೆ ಮಾತ್ರ ಈ ಐದು ವರ್ಷಗಳ ಅವಧಿ, ಇಲ್ಲದಿದ್ದರೆ ಅದಕ್ಕಿಂತ ಮೊದಲೇ ಗಂಟುಮೂಟೆ ಕಟ್ಟಿಕೊಂಡು ಹೊರಟು ಹೋಗಬೇಕಾಗುತ್ತದೆ ಎನ್ನುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಠೋರ ಸತ್ಯವನ್ನೂ ಅವರು ಅರ್ಥಮಾಡಿಕೊಂಡಿಲ್ಲ.ಗೆಲುವಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಫಲನಾದವನು ಆ ಗೆಲುವನ್ನು ಬಹಳ ಕಾಲ ಉಳಿಸಿಕೊಳ್ಳಲು ಆಗುವುದಿಲ್ಲ. ಯಡಿಯೂರಪ್ಪನವರ ರಾಜಕೀಯ ಹಿನ್ನಡೆಗೆ ಇದು ಕಾರಣ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ತನ್ನಿಂದ ಎಂದು ಅವರು ಬಲವಾಗಿ ನಂಬಿದ್ದಾರೆ. ಅವರು ಒಂದು ಪ್ರಾದೇಶಿಕ ಪಕ್ಷದ ನಾಯಕರಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದ್ದರೆ ಅವರ ನಂಬಿಕೆಗೆ ಆಧಾರ ಇರುತ್ತಿತ್ತು, ಅದನ್ನು ನಂಬಬಹುದಿತ್ತು.ಆದರೆ ಯಡಿಯೂರಪ್ಪನವರು ಒಂದು ರಾಷ್ಟ್ರೀಯ ಪಕ್ಷದ ನಾಯಕರು. ರಾಜ್ಯದ ಮತದಾರರು ಆರಿಸಿದ್ದು ಭಾರತೀಯ ಜನತಾ ಪಕ್ಷವನ್ನು, ಕೇವಲ ಯಡಿಯೂರಪ್ಪನವರನ್ನಲ್ಲ. ಅದೇನು ದೊಡ್ಡ ಗೆಲುವು ಕೂಡಾ ಅಲ್ಲ. ಸಂಖ್ಯೆಯಲ್ಲಿ ಶಾಸಕರು ಹೆಚ್ಚಿದ್ದರೂ ಮತ ಪ್ರಮಾಣದಲ್ಲಿ  ಶೇಕಡಾ 0.73ರಷ್ಟು ಮುಂದೆ ಇದ್ದದ್ದು ಕಾಂಗ್ರೆಸ್.ರಾಜ್ಯದಲ್ಲಿ  ಅಧಿಕಾರಕ್ಕೆ ಬರುವಷ್ಟು ಬಿಜೆಪಿ ಬೆಳೆಯಲು ಮುಖ್ಯಪಾತ್ರ ವಹಿಸಿದ್ದವರು ಬಿ.ಎಸ್.ಯಡಿಯೂರಪ್ಪ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರೊಬ್ಬರೇ ಗೆಲುವಿಗೆ ಕಾರಣರಲ್ಲ. ಯಡಿಯೂರಪ್ಪನವರ ಜನಪ್ರಿಯತೆಯ ಜತೆಯಲ್ಲಿ ಸೀಮಿತ ಪ್ರಮಾಣದಲ್ಲಿಯಾದರೂ ಸಂಘ ಪರಿವಾರ ಹೊಂದಿದ್ದ ನೆಲೆ, ಎಚ್.ಡಿ.ಕುಮಾರಸ್ವಾಮಿಯವರ `ವಚನಭಂಗ~ ಹುಟ್ಟಿಸಿದ ಜನಾಕ್ರೋಶ, ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯವಾಗಿ ಅನ್ಯಾಯಕ್ಕೀಡಾಗಿದ್ದ ಮಾದಿಗ ಸಮುದಾಯವನ್ನು ಸೆಳೆದುಕೊಂಡು ನಡೆಸಿದ್ದ ಸೋಷಿಯಲ್ ಎಂಜಿನಿಯರಿಂಗ್, ಅಸ್ಪೃಶ್ಯರಲ್ಲದ ಬೋವಿ ಮತ್ತಿತರ ಜಾತಿಗಳ ಅಭ್ಯರ್ಥಿಗಳನ್ನು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಮೇಲ್ಜಾತಿ ಮತಗಳನ್ನು ಪಡೆದ ರಾಜಕೀಯ ಜಾಣತನ, ನೀರಿನಂತೆ ಹರಿದ ಬಳ್ಳಾರಿ ಗಣಿ ಲೂಟಿಕೋರರ ದುಡ್ಡು....ಇವುಗಳೆಲ್ಲವೂ 2008ರಲ್ಲಿ ಬಿಜೆಪಿ ಗೆಲುವಿಗೆ ಕಾರಣ.ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ ಎಂದು ಯಡಿಯೂರಪ್ಪನವರು ಈಗ ಹೇಳುತ್ತಿರುವುದು ತನ್ನ ಯಾವ ಸಾಧನೆಯನ್ನು ನಂಬಿಕೊಂಡು? ಮೂರುವರೆ ವರ್ಷಗಳ ಕಾಲದ ಭ್ರಷ್ಟಾಚಾರ ಮುಕ್ತ ನಡವಳಿಕೆಯನ್ನೇ? ರಾಜ್ಯಕ್ಕೆ ಕೊಟ್ಟಿರುವ ಬಿಗಿಯಾದ  ಆಡಳಿತವನ್ನೇ?  ಅನುಷ್ಠಾನಕ್ಕೆ ತಂದಿರುವ ಜನಪರ ಅಭಿವೃದ್ಧಿ ಯೋಜನೆಗಳನ್ನೇ? ಶಾಸಕರು ಸೇರಿದಂತೆ ಸಹೋದ್ಯೋಗಿಗಳ ಜತೆ ತಾನು ಉಳಿಸಿಕೊಂಡಿರುವ ಸೌಹಾರ್ದಯುತ ಸಂಬಂಧವನ್ನೇ? ಯಾವುದನ್ನು?  ಲೋಕಾಯುಕ್ತ ಸಲ್ಲಿಸಿದ್ದ ಪ್ರಥಮಮಾಹಿತಿ ವರದಿಯನ್ನು ಹೈಕೋರ್ಟ್ ರದ್ದು ಮಾಡಿದ ಮಾತ್ರಕ್ಕೆ ತಾನು ದೋಷಮುಕ್ತ ಎಂದು ಅವರು ಹೇಗೆ ತಿಳಿದುಕೊಂಡರೋ ಗೊತ್ತಿಲ್ಲ.  ಅವರ ಬೆಂಬಲಿಗರು ಸದಾ ಹೇಳುತ್ತಿರುವ `ಸಹಜ ನ್ಯಾಯ~ದ ಪ್ರಕಾರ ಆ ಪ್ರಕರಣ ಸುಪ್ರೀಂಕೋರ್ಟ್‌ನ ವಿಚಾರಣೆಗೊಳಪಡಬೇಕಲ್ಲವೇ? ಒಂದೊಮ್ಮೆ ಹೈಕೋರ್ಟ್ ತೀರ್ಪು ತನ್ನ ವಿರುದ್ಧವಾಗಿ ಬಂದಿದ್ದರೆ ಅದನ್ನು ಯಡಿಯೂರಪ್ಪನವರು ಒಪ್ಪಿಕೊಳ್ಳುತ್ತಿದ್ದರೇ? ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿರಲಿಲ್ಲವೇ?  ತನ್ನ ನಿರಪರಾಧಿತನದ ಬಗ್ಗೆ ಅವರು ಅಷ್ಟೊಂದು ವಿಶ್ವಾಸ ಹೊಂದಿದ್ದರೆ ಆದಷ್ಟು ಬೇಗ ಲೋಕಾಯುಕ್ತ ಮೇಲ್ಮನವಿ ಸಲ್ಲಿಸುವಂತೆ ಮಾಡಿ ಸುಪ್ರೀಂಕೋರ್ಟ್‌ನಿಂದಲೇ ಪ್ರಾಮಾಣಿಕತೆಗೆ  ಯಾಕೆ ಸರ್ಟಿಫಿಕೇಟ್ ತೆಗೆದುಕೊಳ್ಳಬಾರದು? ಯಡಿಯೂರಪ್ಪನವರನ್ನು ಭ್ರಷ್ಟಾಚಾರದ ಆರೋಪಗಳು ಯಾವ ರೀತಿಯಲ್ಲಿ ಸುತ್ತಿಕೊಂಡಿವೆ ಎಂದರೆ ಬಹಳ ಬೇಗ ಅವೆಲ್ಲವುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಇವುಗಳಿಂದ ಬಿಡಿಸಿಕೊಳ್ಳದೆ ಚುನಾವಣೆಯಲ್ಲಿ ಮತದಾರರನ್ನು ಹೇಗೆ ಎದುರಿಸಲು ಸಾಧ್ಯ?ಭ್ರಷ್ಟಾಚಾರದ ಆರೋಪ ಹೊತ್ತವರೂ ಉತ್ತಮ ಆಡಳಿತಗಾರರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಶರದ್‌ಪವಾರ್, ಮಾಯಾವತಿ, ಜಯಲಲಿತಾ ಮೊದಲಾದವರೆಲ್ಲ ಈ ಗುಂಪಿಗೆ ಸೇರಿದವರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಎಷ್ಟು ದಿನ ಶಿಸ್ತಿನಿಂದ ಕೂತು ಆಡಳಿತ ನಡೆಸಿದ್ದಾರೆ? ಅಧಿಕಾರಿಗಳ ವರ್ಗಾವಣೆಗಳಷ್ಟೇ ಆಡಳಿತ ಅಲ್ಲವಲ್ಲ? ಬಜೆಟ್‌ನಲ್ಲಿ ಒಂದಷ್ಟು ಜನಪ್ರಿಯ ಯೋಜನೆಗಳ ಘೋಷಣೆ ಮತ್ತು ಮಠ-ಮಂದಿರಗಳಿಗೆ ದುಡ್ಡು ಹಂಚಿಕೆಯಷ್ಟೇ ಅಭಿವೃದ್ಧಿ ಯೋಜನೆಗಳೆಂದು ಅವರು ತಿಳಿದುಕೊಂಡ ಹಾಗಿದೆ. ರಾಜ್ಯದ ಕೃಷಿ ಮತ್ತು ಕೈಗಾರಿಕೆಗಳ ಕ್ಷೇತ್ರದಲ್ಲಿ ರಾಜ್ಯ ಹಿನ್ನಡೆ ಅನುಭವಿಸಿರುವುದಕ್ಕೆ ಸರ್ಕಾರವೇ ಮಂಡಿಸಿರುವ ಆರ್ಥಿಕ ಸಮೀಕ್ಷೆಗಿಂತ ಬೇರೆ ದಾಖಲೆಗಳೇನು ಬೇಕು? ಮಾತೆತ್ತಿದರೆ ಸೈಕಲ್, ಸೀರೆ, ಪಂಚೆ ಎನ್ನುವುದನ್ನು ಬಿಟ್ಟರೆ ಸರ್ಕಾರದ ಸಾಧನೆಯೆಂದು ಹೇಳಿಕೊಳ್ಳಲು ಬೇರೇನಾದರೂ ಇದೆಯೇ? ಮೂರುವರ್ಷಗಳಾಗುತ್ತಾ ಬಂದರೂ ಉತ್ತರ ಕರ್ನಾಟಕದ ನೆರೆಪೀಡಿತ ಕುಟುಂಬಗಳಿಗೆಲ್ಲ ಮನೆ ಕಟ್ಟಿಕೊಡಲು ಸಾಧ್ಯವಾಗದಿರುವುದನ್ನು ಸಾಧನೆ ಎನ್ನೋಣವೇ?ಕೊನೆಯದಾಗಿ ಯಡಿಯೂರಪ್ಪನವರ ನಡವಳಿಕೆ. ಬಿಜೆಪಿ ಶಾಸಕರು ಬಂಡೆದ್ದು ಮೊದಲು ಗಾಲಿ ಜನಾರ್ದನ ರೆಡ್ಡಿ ಜತೆಯಲ್ಲಿ, ನಂತರ ಎಚ್.ಡಿ.ಕುಮಾರಸ್ವಾಮಿಯವರ ಜತೆಯಲ್ಲಿ ಸೇರಿಕೊಂಡು ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿದ್ದು ಮುಖ್ಯವಾಗಿ ಯಡಿಯೂರಪ್ಪನವರ ಮೇಲಿನ ಸಿಟ್ಟಿನಿಂದಾಗಿ. ತಮ್ಮ ಮಾತುಗಳನ್ನು ಕೇಳುವ ತಾಳ್ಮೆಯಾಗಲಿ, ಅದನ್ನು ಅರ್ಥಮಾಡಿಕೊಳ್ಳುವ ಔದಾರ್ಯವಾಗಲಿ ಅವರಲ್ಲಿ ಇಲ್ಲ ಎನ್ನುವುದೇ ಆ ಭಿನ್ನಮತೀಯರ ಪ್ರಮುಖ ದೂರು ಆಗಿತ್ತು. ಮೊನ್ನೆ ರೆಸಾರ್ಟ್‌ಗೆ ಬೆಂಬಲಿಗ ಶಾಸಕರನ್ನು ಕರೆದುಕೊಂಡು ಹೋದ ಅವರ ನಡವಳಿಕೆಯನ್ನು ಗಮನಿಸಿದರೆ ಯಡಿಯೂರಪ್ಪನವರು ಈಗಲೂ ಬದಲಾಗಿದ್ದಾರೆಂದು ಅನಿಸುವುದಿಲ್ಲ. ಭೇಟಿಗೆಂದು ತನ್ನ ಮನೆಗೆ ಬಂದವರನ್ನು ಹೊರಗೆ ಹೋಗಲು ಬಿಡದೆ ಕುರಿಗಳನ್ನು ಅಟ್ಟಿಸಿಕೊಂಡು ಹೋಗುವಂತೆ ಬಸ್‌ನಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ. ಅವರಲ್ಲಿ ಬಹಳಷ್ಟು ಶಾಸಕರಿಗೆ ರೆಸಾರ್ಟ್ ವಾಸ ಅನಿರೀಕ್ಷಿತವಾಗಿತ್ತು. ಅವರೆಲ್ಲ ಬೆಂಬಲಿಗರಾಗಿದ್ದರೂ ತಮ್ಮ ಮೇಲೆ ವಿಶ್ವಾಸ ಇಲ್ಲದ ನಾಯಕನ ಈ ರೀತಿಯ ಬಲವಂತದ ನಡವಳಿಕೆಯನ್ನು ಖಂಡಿತ ಇಷ್ಟಪಡಲಾರರು.ಹಾಗಿದ್ದರೆ ಯಾವ ಬಲವನ್ನು ನಂಬಿ ಅವರು ಬಿಜೆಪಿಯನ್ನು ಅಧಿಕಾರಕ್ಕೆ ಮರಳಿ ತರುತ್ತೇನೆ ಎಂದು ಹೇಳುತ್ತಿರುವುದು? ತನಗೆ ಜನರ ಬೆಂಬಲ ಇದೆ ಎಂದು ಅವರು ಹೇಳುತ್ತಿದ್ದಾರೆ. ಯಾವ ಜನ? ಈಗಿನ ವಿಧಾನಸಭೆಯಲ್ಲಿ ಅತೀ ಹೆಚ್ಚು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಶಾಸಕರನ್ನು ಹೊಂದಿರುವುದು ಬಿಜೆಪಿ. ಆದರೆ ಕಳೆದವಾರ ರೆಸಾರ್ಟಿನಲ್ಲಿ ಬಲ ಪ್ರದರ್ಶಿಸಲು ಕೂಡಿಹಾಕಿಕೊಂಡಿದ್ದ ಶಾಸಕರಲ್ಲಿ ಪರಿಶಿಷ್ಟ ಶಾಸಕರ ತಲೆಗಳು ಹೆಚ್ಚು ಕಾಣಲೇ ಇಲ್ಲ, ಪ್ರಮುಖ ದಲಿತ ನಾಯಕರು ಯಾರೂ ಅಲ್ಲಿ ಇರಲಿಲ್ಲ.ಶೋಭಾ ಕರಂದ್ಲಾಜೆಯವರನ್ನೂ ಸೇರಿಸಿಕೊಂಡರೂ ಯಡಿಯೂರಪ್ಪನವರ ಜತೆಯಲ್ಲಿ ಕಾಣಿಸಿಕೊಂಡದ್ದು  ಇಬ್ಬರೋ ಮೂವರೋ ಒಕ್ಕಲಿಗ ಶಾಸಕರು ಅಷ್ಟೇ. ಹಿಂದುಳಿದ ಜಾತಿಗಳ ಶಾಸಕರಿದ್ದದ್ದು ಕೂಡಾ ಬೆರಳೆಣಿಕೆಯಲ್ಲಿ. ಅವರ ಸುತ್ತ ಸೇರಿರುವ ಬಹುತೇಕ ಶಾಸಕರು ಲಿಂಗಾಯತ ಜಾತಿಗೆ ಸೇರಿದವರು. ಶಕ್ತಿಪ್ರದರ್ಶನಕ್ಕೆ ಅವರು ಬಳಸಿಕೊಳ್ಳುತ್ತಿರುವುದು ಕೂಡಾ ಸ್ವಜಾತಿಯ ಸ್ವಾಮೀಜಿಗಳನ್ನು.ಭಾರತದ ರಾಜಕೀಯದಲ್ಲಿ ಜಾತಿಯದ್ದು ಬಹಳ ನಿರ್ಣಾಯಕ ಪಾತ್ರ ಎನ್ನುವುದು ನಿಜ. ಆದರೆ ಇದನ್ನು ಅರ್ಥಮಾಡಿಕೊಳ್ಳದೆ ಇಲ್ಲಿನ ಜಾತಿವ್ಯವಸ್ಥೆಯ ಹುತ್ತದೊಳಗೆ ಪೆದ್ದರಂತೆ ಕೈಹಾಕುವವರನ್ನು ಒಳಗಿದ್ದ ಹಾವು ಎದ್ದುಬಂದು ಕಡಿದುಬಿಡುತ್ತದೆ. ಜಾತಿಯ ಆಧಾರದಲ್ಲಿಯೇ ಮತಚಲಾಯಿಸುವವರು ಒಂದಷ್ಟು ಸಂಖ್ಯೆಯಲ್ಲಿದ್ದರೂ ಹೆಚ್ಚಿನವರು ಜಾತಿ ಅಭ್ಯರ್ಥಿಗಳನ್ನು ಬೆಂಬಲಿಸಲು ಬೇರೆ ಕಾರಣಗಳೂ ಇರುತ್ತವೆ.  ಒಂದೊಮ್ಮೆ ಆ ರೀತಿ ಯಾವುದಾದರೂ ಒಂದು ಜಾತಿಯವರು ಸ್ವಜಾತಿ ಅಭ್ಯರ್ಥಿಗೆ ನೂರಕ್ಕೆ ನೂರರಷ್ಟು ಮತಹಾಕಿ ಗೆಲ್ಲಿಸಬೇಕೆಂದು ನಿರ್ಧರಿಸಿದರೂ ಅದಕ್ಕೆ ಬೇಕಾದ ಸಂಖ್ಯಾಬಲ ದೇಶದಲ್ಲಿರುವ ಯಾವ ಜಾತಿಗೂ ಇಲ್ಲ, ಬೇರೆ ಜಾತಿಯವರ ಬೆಂಬಲ ಬೇಕೇ ಬೇಕು. ಈ ದೇಶದಲ್ಲಿ ಅತ್ಯಂತ ನಿಷ್ಠಾವಂತ ಮತದಾರರನ್ನು ಹೊಂದಿರುವ ರಾಜಕೀಯ ನಾಯಕಿ ಮಾಯಾವತಿ. ಆ ರಾಜ್ಯದಲ್ಲಿ ಶೇಕಡಾ 22ರಷ್ಟಿರುವ ದಲಿತರು ಬಿಎಸ್‌ಪಿ ಬೆಂಬಲಿಗರು, ಅವರೊಳಗೆ ಶೇಕಡಾ ಹನ್ನೆರಡರಷ್ಟಿರುವ ಜಾಟವರು ಕಣ್ಣುಮುಚ್ಚಿಕೊಂಡು ಬೆಹೆನ್‌ಜಿಗೆ ಮತಹಾಕುವವರು. ಹೀಗಿದ್ದರೂ ಅವರು ಯಾಕೆ ಸೋತುಹೋದರು? ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ ಲಿಂಗಾಯತರಿಗಿಂತ ಶೇಕಡಾ ಎರಡರಷ್ಟು ಮಾತ್ರ ಕಡಿಮೆ ಇದೆ.ಮುಸ್ಲಿಮರು ಗುಂಪಾಗಿ ಒಂದೇ ಅಭ್ಯರ್ಥಿಗೆ ಮತಚಲಾಯಿಸುತ್ತಾರೆ ಎನ್ನುವ ಅಭಿಪ್ರಾಯವೂ ಇದೆ. ಹೀಗಿದ್ದರೂ ಗ್ರಾಮಪಂಚಾಯತ್‌ನಿಂದ ಸಂಸತ್‌ವರೆಗೆ ಎಷ್ಟು ಮುಸ್ಲಿಮ್ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವರಿಗೆ ಸಾಧ್ಯವಾಗಿದೆ?ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಪ್ರಮಾಣ ಶೇಕಡಾ ಹದಿನೈದುವರೆ. ಒಂದಷ್ಟು ಕ್ಷೇತ್ರಗಳಲ್ಲಿ ಈ ಪ್ರಮಾಣ ಶೇಕಡಾ 20-25ರಷ್ಟಿರಬಹುದು. ಆದರೆ ಇಷ್ಟರಿಂದಲೇ ಒಬ್ಬ ಲಿಂಗಾಯತ ಅಭ್ಯರ್ಥಿ ಗೆಲ್ಲಲು ಸಾಧ್ಯವೇ? ಕಳೆದ ಚುನಾವಣೆಯ ಕಾಲದಲ್ಲಿ ರಾಜ್ಯದ ಲಿಂಗಾಯತರು ಬಹುಸಂಖ್ಯೆಯಲ್ಲಿ ಯಡಿಯೂರಪ್ಪನವರಿಂದಾಗಿ ಬಿಜೆಪಿಗೆ ಮತ ಹಾಕಿರುವುದು ನಿಜ ಇರಬಹುದು. ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿದ ನಂತರ ಅಸಮಾಧಾನಕ್ಕೀಡಾಗಿದ್ದ ಲಿಂಗಾಯತರು ರಾಜಕೀಯ ಬಲಪ್ರದರ್ಶನದ ಅವಕಾಶಕ್ಕಾಗಿ ಕಾಯುತ್ತಿದ್ದರು. ಅದೇ ಸಮಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ರಾಜ್ಯದ ಪ್ರಮುಖ ಜಾತಿಗೆ ಸೇರಿರುವ ಒಬ್ಬ ಜನಪ್ರಿಯ ನಾಯಕನ ಹುಡುಕಾಟದಲ್ಲಿತ್ತು. ಈ ಎರಡೂ ಅವಕಾಶವನ್ನು ಯಡಿಯೂರಪ್ಪನವರು ಬಳಸಿಕೊಂಡರು, ಮುಖ್ಯಮಂತ್ರಿಯೂ ಆಗಿಬಿಟ್ಟರು.ಆದರೆ ತನ್ನ ಜಾತಿಯ ಜನ ಹೆಮ್ಮೆಪಟ್ಟುಕೊಳ್ಳುವಂತಹ ಜನಪ್ರಿಯ ನಾಯಕರಾಗಿ  ಬೆಳೆದರೇ? ಜನನಾಯಕನಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಯಡಿಯೂರಪ್ಪನವರು ಮೂರುವರೆ ವರ್ಷಗಳ ಕಾಲದ ಅಧಿಕಾರದ ನಂತರ ತನ್ನ ರಾಜಕೀಯ ಉಳಿವಿಗಾಗಿ ಒಂದು ಜಾತಿಯ ನಾಯಕನಾಗಿ ತನ್ನನ್ನು ಬಿಂಬಿಸಿಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಖಂಡಿತ ಅವರ ಜನಪ್ರಿಯತೆಯನ್ನು ತೋರಿಸುವುದಿಲ್ಲ.(ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.