ಶುಕ್ರವಾರ, ಫೆಬ್ರವರಿ 26, 2021
18 °C

ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ

ವಸು ಮಳಲಿ Updated:

ಅಕ್ಷರ ಗಾತ್ರ : | |

ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ

ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ.

ಇದು, ಮೇಲುಕೋಟೆ ದೇವಾಲಯಕ್ಕೆ ನಿತ್ಯವೂ ಹತ್ತಿ ಬಂದು ಫಲಾಪೇಕ್ಷೆ ಇಲ್ಲದೆ ರಂಗ­ವಲ್ಲಿ ಬಿಡುವ ಮದುಕಿಯನ್ನು ಕುರಿತು ಪುತಿನ ಅವರು ಬರೆದ ಕವನದ (ರಂಗವಲ್ಲಿ) ಸಾಲು. ದೇವರ ಅಸ್ತಿತ್ವ ಕುರಿತು ಹತ್ತು ಹಲವು ಚರ್ಚೆ­ಗಳು ನಿರಂತರವಾಗಿ ನಡೆದೇ ಇವೆ. ಬಹುಶಃ ಅದು ಮನುಕುಲ ಇರುವವರೆಗೂ ಮುಗಿಯದ ವಾದ. ನಾಸ್ತಿಕವಾದಿ ಪಂಥಗಳು ಭಾರ­ತದಲ್ಲಿ ಹಲವು ಬಂದು ಹೋಗಿವೆ. ಲೌಕಿಕ­ವಾ­ದಿಗಳಾದ ಚಾರ್ವಾಕರು ಭಾರತದಲ್ಲಿ ವೈದಿಕ­ರಷ್ಟೇ ಪ್ರಾಚೀನರು. ವೈದಿಕವಾದಗಳನ್ನು ಖಂಡಿ­ಸುತ್ತಾ ಪರ್ಯಾಯವಾದ ಧಾರೆಯನ್ನು ಹುಟ್ಟುಹಾಕಿದ­ವರು. ಅದರ ಪ್ರೇರಣೆಯಿಂದ ಹಲವು ಸಿದ್ಧಾಂತಗಳು ಭಾರತದಲ್ಲಿ ಬಂದುಹೋಗಿವೆ.ಆರನೇ ಶತಮಾನದಲ್ಲಿ ಬಂದ ಬುದ್ಧ ದೇವರನ್ನು ಕುರಿತಾಗಿ ಏನೂ ಚರ್ಚಿಸಲಿಲ್ಲ. ಆದರೆ ಬಹುಬೇಗನೆ ಭಗವಾನ್ ಬುದ್ಧನಾಗ­ಬೇಕಾಯಿತು. ಹಾಗೆ ನೋಡಿದರೆ ನಾಸ್ತಿಕತೆಯ ನೆಲೆಯಲ್ಲಿ ಕರ್ಮಸಿದ್ಧಾಂತವನ್ನು ಬೋಧಿಸಿದ ಬುದ್ಧ ದೇವರಾದದ್ದು ಜನಸಾಮಾನ್ಯ ನೆಲೆ-ಯಲ್ಲಿ ನಿಂತು ಯೋಚಿಸಿದರೆ ಸಹಜವಾದುದೇ ಎನಿಸುತ್ತದೆ. ಬದುಕಿಗೆ ದಾರಿ ತೋರಿದಾತ ನೀನೇ ಭಗವಂತ ಎಂದು ಕೈ ಮುಗಿವ ಮನೋಭಾವವೇ ಭಕ್ತಿಯಾಗಿ ಮೆರೆಯಿತು. ಬುದ್ಧನಿಂದ ಮಾರ್ಕ್ಸ್‌­ನವರೆಗೆ ಹಲವು ನಾಸ್ತಿಕವಾದಗಳು ಬಂದು­ಹೋಗಿವೆ. ಆದರೂ ದೇವರನ್ನು ಹೊತ್ತು ಸಾಗುವುದು ಮಾತ್ರ ತಪ್ಪಲಿಲ್ಲ.ರಷ್ಯಾ ಅಥವಾ ಚೀನಾ, ಧಾರ್ಮಿಕ ಹಕ್ಕಿನ ಮೇಲೆ ಹಿಡಿತ ಸಾಧಿಸುವ ಮೂಲಕ ದೇವ­ಮಂದಿರ­ಗಳ ಬೆಳವಣಿಗೆಯನ್ನು ತಹಬಂದಿಗೆ ತಂದಿವೆ.  ಅದನ್ನು ಹೊರತುಪಡಿಸಿ  ಜಗತ್ತಿನಾ­ದ್ಯಂತ ದೇವರುಗಳಿದ್ದರೂ ಭಾರತದಂತೆ ಹೆಜ್ಜೆ­ಹೆಜ್ಜೆಗೂ ದೇವಾಲಯಗಳನ್ನು ಕಟ್ಟುವ ಮನಸ್ಥಿತಿ ಬೇರೆಲ್ಲೂ ಕಾಣಬರುವುದಿಲ್ಲ.ವೈದಿಕರು ಮೂಲದಲ್ಲಿ ಪ್ರಕೃತಿ ಆರಾಧಕರು. ಯಜ್ಞಯಾಗಾದಿಗಳ ಮೂಲಕ, ವೇದಗಳನ್ನು ಪಠಿಸುತ್ತಾ ದೇವರನ್ನು ತಲುಪುವ ಕಲ್ಪನೆಯನ್ನು ಕಟ್ಟಿಕೊಂಡವರು. ಹಾಗಿದ್ದ ದೇವರ ಕಲ್ಪನೆ ದೇವಾಲಯಕ್ಕೆ ಬಂದು ನಿಲ್ಲಬೇಕಾದರೆ ಅದರ ಬೆಳವಣಿಗೆ ಸುದೀರ್ಘವಾಗಿಯೇ ಇರಬೇಕು. ಮೂರ್ತಿರೂಪದಲ್ಲಿ ದೇವರನ್ನು ಕಲ್ಪಿಸಿಕೊಂಡ­ವರು ಜನಪದರು. ಅರ್ಥವಾಗದ ಹುಟ್ಟು ಸಾವುಗಳು, ಅರಿವಿಗೆ ನಿಲುಕದ ಪ್ರಕೃತಿಯ ಚೋದ್ಯ­ಗಳಲ್ಲಿ ದೇವರನ್ನು ಕಾಣತೊಡಗಿದರು.ಆಯುಧವಾಗಿ ಬಳಸಿದ ಕಲ್ಲು, ಹಸಿವನ್ನು ತಣಿಸಿದ ಗಿಡ ಮರ, ಸುತ್ತಮುತ್ತ ಬದುಕಿಗೆ ಸಂಗಾತಿ­ಗಳಾದ ಪ್ರಾಣಿ ಪಕ್ಷ, ಜೀವಜಾಲದಲ್ಲಿ ದೇವರನ್ನು ಕಂಡುಕೊಂಡರು. ಸತ್ತವರ ನೆನಪಿಗೆ ಇಟ್ಟ ಕಲ್ಲುಗಳು, ನೆಟ್ಟ ಮರ ಒಂದು ಕಡೆ ಸಮಾಧಿಯ ಕಲ್ಪನೆಯನ್ನು ಕಟ್ಟಿಕೊಟ್ಟಿತು. ಅದು ಅಶೋಕನ ಕಾಲದ ಬುದ್ಧನ ಬೃಹತ್ ಸ್ತೂಪ­ಗ­ಳವರೆಗೂ ಬಂದು ನಿಂತಿತು. ಭಾರತದ ದೇವಾಲ­ಯ­ಗಳ ಹುಟ್ಟು, ಶಿಲ್ಪಗಳ ಬೆಳವಣಿಗೆ ಇದಕ್ಕೆಲ್ಲಾ ಒಂದು ರೀತಿಯಲ್ಲಿ ಬೌದ್ಧ ಹಾಗೂ ಜೈನ ಧರ್ಮಗಳು ಅಡಿಪಾಯನ್ನು ಹಾಕಿವೆ.ಶಿಲ್ಪದ ವಿಚಾರಕ್ಕೆ ಬಂದರೆ ಅದರ ಚರಿತ್ರೆ 4000 ವರ್ಷಗಳಷ್ಟು ಹಿಂದಕ್ಕೆ ಹೋಗು­ತ್ತದೆ. ಹುಟ್ಟನ್ನು ನೀಡಿದ ತಾಯಿ, ಇಲ್ಲವೇ ಹುಟ್ಟಿನ ಸಂಕೇತವಾದ ಲಿಂಗ, ಯೋನಿಯ ಶಿಲ್ಪಗಳನ್ನು ಆರಾ­ಧಿಸತೊಡಗಿದ್ದು ಮುಂದೆ ಬೆಳೆದ ಶಿವ ಶಕ್ತಿಯ ಕಲ್ಪನೆಗೆ ಕಾರಣವಾಯಿತು. ಹೀಗೆ ಜನಪದೀಯವಾಗಿದ್ದ ಮೂರ್ತಿ ಪೂಜೆಗೆ ಬುದ್ಧನ ಬಗೆಗಿನ ಭಕ್ತಿಯು ಸೇರಿ ಬುದ್ಧನ ಸಂಕೇತಗಳನ್ನು ಶಿಲ್ಪ­ವಾಗಿಸಿದರು. ಬೋಧಿ ವೃಕ್ಷ, ತೆರೆದ ಸಿಂಹಾ­ಸನ, ಛತ್ರಿ ಇವೆಲ್ಲವೂ ಬುದ್ಧನ ಸಂಕೇತದ ಶಿಲ್ಪ­ಗಳಾದವು. ಬೌದ್ಧ ಧರ್ಮವಾಗಿ ಭಾರತದ ಮೇರೆ­ಯನ್ನು ಮೀರಿ ಹೋದಂತೆ ಆ ಬುದ್ಧನನ್ನು ಒಪ್ಪಿದ ಗ್ರೀಕರ ಕಲ್ಪನೆಯೂ ಸೇರಿ ಸುಂದರವಾದ ಬುದ್ಧನ ಶಿಲ್ಪ ಮೂಡಿ ಬಂದಿತು. ಅದೇ ಜನ­ಪ್ರಿಯ­ವಾಗಿರುವ ಗಾಂಧಾರ ಶಿಲ್ಪ. ಭಾರತೀಯ ಶಿಲ್ಪಶಾಸ್ತ್ರದ ಬೆಳವಣಿಗೆಯಲ್ಲಿ ಇದು ಮೈಲುಗಲ್ಲು.ಇದೇ ಹೊತ್ತಿಗೆ ಜನಪದ ದೇವತೆಗಳ ಪ್ರಭಾವ ಹಾಗೂ ಇತರ ಅವೈದಿಕವಾದ ಧಾರೆಗಳನ್ನು ಸ್ವೀಕ­ರಿಸಿದ ವೈದಿಕರು ತಮ್ಮ ನಂಬಿಕೆಗಳನ್ನೂ ಸೇರಿಸಿ ನೂರಾರು ದೈವಗಳ ಅಡಿಗೆರಗಿದರು. ಮೂಲ­ದಲ್ಲಿ ಅವರು ಆರಾಧಿಸುತ್ತಿದ್ದ 33 ದೇವರು­­ಗಳನ್ನು ಮೀರಿ ನೂರಾರು ದೇವರು­ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಆ ಎಲ್ಲಾ ದೇವತೆಗಳು ಯಾವ ಯಾವುದೋ ರೂಪ­ದಲ್ಲಿ ವೈದಿಕ ಸಾಹಿತ್ಯದಲ್ಲಿ ಸ್ಥಾನವನ್ನು ಪಡೆದುಕೊಂಡವು.ಜನಪದರ ಕಲ್ಪನೆಯಲ್ಲಿದ್ದ ತಾಯಂದಿರು ಶಕ್ತಿ ದೇವತೆಗಳಾಗಿ ಅವೈದಿಕ ನೆಲೆಯ ಪಂಥಗಳೇ ಆಗಿ ಬೆಳೆದು ನಿಂತಿದ್ದವು. ಹುಟ್ಟಿನ ಸಂಕೇತಗಳಲ್ಲಿ ಶಕ್ತಿಯನ್ನು ಅವಗಾಹನೆ ಮಾಡುವ ವಿಧಿವಿಧಾ­ನ­ಗಳಲ್ಲಿ ತಾಂತ್ರಿಕರು ಹುಟ್ಟಿಕೊಂಡರು. ವೈದಿಕರು ಕೆಲವು ಹಂತಕ್ಕೆ ಅದನ್ನು ತಮ್ಮದಾಗಿಸಿಕೊಳ್ಳುತ್ತಾ ಪುರಾಣದ ರಚನೆಯಲ್ಲಿ ತೊಡಗಿದಾಗ ಒಂದಲ್ಲಾ ಒಂದು ರೂಪದಲ್ಲಿ ದೇವರುಗಳು ಸಮೀಕ­ರಣಗೊಳ್ಳತೊಡಗಿದರು. ವೈದಿಕ ದೇವರುಗಳ ಪಟ್ಟಿ ಸಾವಿರಗಟ್ಟಲೆಯಾಯಿತು.ಜನಪದ ದೇವರುಗಳಿಗೂ, ವೈದಿಕ ದೇವರು­ಗಳಿಗೂ ಅಂತರ ಕಡಿಮೆಯಾಯಿತು. ಜನ­ಪದರು ಮೂಲದಲ್ಲಿದ್ದ ತಮ್ಮ ಆಚರಣೆಗಳನ್ನು ಬಿಡುತ್ತ ಬಂದರು. ಆ ಜಾಗವನ್ನು ವೈದಿಕ ಆಚರಣೆ ಕ್ರಮಗಳಿಗೆ ಬಿಟ್ಟುಕೊಟ್ಟರು. ಈ ಬೆಳ­ವಣಿಗೆಯಲ್ಲಿ ವಿಷ್ಣು ಪುರಾಣ, ಶೈವ ಪುರಾಣಗಳ ರಚನೆಯಾಯಿತು. ನೂರಾರು ಜನಪದ ದೇವತೆ­ಗಳನ್ನು ವಿಷ್ಣು ಹಾಗೂ ಶಿವನ ಅಂಶವೆಂದು ಪರಿಗಣಿಸಲಾಯಿತು. ಈ ಸಮೀಕರಣದಿಂದ ಜನಪದ ದೇವತೆಗಳು ತಮ್ಮತನವನ್ನು ಕಳೆದು­ಕೊಂಡವು. ಆದಿವಾಸಿಗಳ, ಬುಡಕಟ್ಟಿನ  ಹೆಣ್ಣು ದೈವಗಳು, ಕರಿಯಮ್ಮ, ಮಾರಿ, ಮಸಣಿ­ಯರೆಲ್ಲಾ ಪಾರ್ವತಿಯ ಅಂಶವೆನಿಸಿದರು. ರುದ್ರ, ಬೀರ, ಸೋಮ, ಭೂತ ಗಣಗಳೆಲ್ಲಾ ಶಿವನ ಅಂಶವಾದರು.

ತಮ್ಮ ದೇವರುಗಳ ಮೂಲ ಹುಟ್ಟು ಮರೆತ ಜನಪದರು ಕೆಲವು­ಮಟ್ಟಿಗೆ ತಮ್ಮದನ್ನು ಮನೆ ಹಂತಕ್ಕೆ ಇಲ್ಲವೆ ಗೋಪ್ಯವಾಗಿ ಉಳಿಸಿಕೊಂಡು ಪ್ರಧಾನ ಧಾರೆಯ ದೇವರುಗಳಿಗೆ ನಡೆದುಕೊಳ್ಳತೊಡಗಿದರು. ಹೀಗೆ ಹರಡಿದ ಭಾರತೀಯ ದೇವರುಗಳನ್ನು ಒಂದು ಸಂಸ್ಕೃತಿಯ ಹಿನ್ನೆಲೆಯಲ್ಲಿ ಅದರ ಚರಿತ್ರೆ ಇಷ್ಟೇ ಎಂದು ಸರಳ ರೇಖೆಯಲ್ಲಿ ಹೇಳಲು ಸಾಧ್ಯ­­ವಿಲ್ಲ. ಈ ನಾಡಿಗೆ ಬಂದ ಎಲ್ಲಾ ಪಂಥಾ­ಚರಣೆಗಳೂ ಒಂದಲ್ಲಾ ಒಂದು ರೀತಿ­ಯಲ್ಲಿ ಒಂದು ಮತ್ತೊಂದರಲ್ಲಿ ಬೆರೆತು ಹೋಗಿವೆ. ಇದರ ಆಚೆಗೆ ಕಾಣುವ ಉಚ್ಚ ನೀಚದ ಕಲ್ಪನೆ ಸಾಮಾಜಿಕ ಸ್ತರದಿಂದ ಬರುವಂತಹದು.ಸುಮಾರು 1700  ವರ್ಷಗಳ ಹಿಂದೆ ಆರಂಭ­ವಾದ ದೇಗುಲಗಳ ರಚನೆಯ ಹೊತ್ತಿ­ಗಾಗಲೇ ಜನಪದರು ನಾಲ್ಕು ಚಪ್ಪಡಿಯನ್ನಿಟ್ಟು ಸಣ್ಣಪುಟ್ಟ ಗುಡಿಗಳನ್ನು ಕಟ್ಟಿ ಗಾಳಿಮಳೆಯಿಂದ ತಮ್ಮ ದೇವರುಗಳನ್ನು ಕಾಪಾಡಿಕೊಳ್ಳುತ್ತಿದ್ದರು. ಬುದ್ಧ ಮಹಾವೀರರ ಅನುಯಾಯಿಗಳಿಂದ ವಿಹಾರಗಳು, ಚೈತ್ಯಗಳು, ಬಸದಿಗಳು, ಸ್ತೂಪ­ಗಳು ಹೀಗೆ ನಾಡಿನಾದ್ಯಂತ ಬೆಳೆದುಬಂದಿದ್ದವು. ಅನುಕರಣೆಯಾಗಿ ಶಿವ ವಿಷ್ಣುವಿನ ಮೂರ್ತಿ­ಯನ್ನಿಟ್ಟು ಚಿಕ್ಕದಾದ ದೇಗುಲಗಳನ್ನು ಕಟ್ಟು­ವುದು ಬೆಳೆದು ಬಂತು. ಹೀಗೆ ಆರಂಭವಾದ ದೇಗುಲಗಳ ಕಲ್ಪನೆಯ ವೈದಿಕ ಧರ್ಮ ಜನಪದ ಆಚರಣೆಗಳನ್ನೂ ಮೈಗೂಡಿಸಿಕೊಂಡು ಸಾಂಸ್ಥಿಕ ರೂಪವನ್ನು ಪಡೆಯಿತು. ಈ ಹೊತ್ತಿಗೆ ಸಮಾಜ­ದಲ್ಲಿ ಬೇರುಬಿಟ್ಟ ವರ್ಣ, ಜಾತಿಗಳು ದೇಗುಲ­ಗಳ ರಚನೆಯಲ್ಲೂ  ಪ್ರತಿಬಿಂಬಿತವಾದವು.ಆರನೇ ಶತಮಾನದ ಹೊತ್ತಿಗೆ ಬೌದ್ಧ ಧರ್ಮವನ್ನು ಬದಿಗೊತ್ತಿ ಬೆಳೆದ ಶೈವ ಹಾಗೂ ವೈಷ್ಣವ ಪಂಥಗಳು ಇದರ ಹೊಂದಾಣಿಕೆಯಲ್ಲಿ ವಿಸ್ತರಿಸಿದ ಶಾಕ್ತ ಪಂಥಗಳು ಗುಡಿಗಳನ್ನು ಕಟ್ಟಿ­ಕೊಳ್ಳತೊಡಗಿದವು. ದಕ್ಷಿಣದ ತಮಿಳುನಾಡಿನಲ್ಲಿ ಪಲ್ಲವರ ಕಾಲಕ್ಕೂ ಕನ್ನಡನಾಡಿನಲ್ಲಿ ಬಾದಾಮಿ ಚಾಲುಕ್ಯರ ಕಾಲಕ್ಕೂ ರಾಜಮನೆತನಗಳು ದೇವಾನುದೇವತೆಗಳಿಗೆ ಗುಡಿಗೋಪುರವನ್ನು ಕಟ್ಟಲು ಸಂಭ್ರಮಿಸಿದವು. ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ದೇಗುಲಗಳ ನಿರ್ಮಾಣ ಕಾರ್ಯಾಗಾರಗಳೇ ನಡೆದುಹೋಯಿತು.ಅಗತ್ಯಕ್ಕೆ ಅನುಗುಣವಾಗಿ ಗರ್ಭಗುಡಿಯ ಜೊತೆಗೆ ಉಳಿದ ಅಂಗಗಳೂ ವಿಸ್ತರಿಸತೊಡ­ಗಿ­ದವು. ಸಾಮಾಜಿಕ ರಚನೆಯಾದ ಜಾತಿಗನುಗು­ಣ­­ವಾಗಿ ದೇಗುಲಗಳು ಆಕಾರ ಪಡೆಯತೊಡ­ಗಿ­ದವು.  ಮಂಟಪ, ಮುಖಮಂಟಪ, ಪ್ರಾಕಾರ, ಪೌಳಿ, ಕಲ್ಯಾಣಿಗಳಾಗಿ ಚಾಚಿಕೊಂಡವು. ರಾಜಾ­ಶ್ರ­ಯದೊಂದಿಗೆ ಬಂದ ದೇಗುಲಗಳಂತೂ ಸಾಮಾ­­­ಜಿಕ ಅಂತಸ್ತು ಅಂತರಗಳನ್ನು ಇನ್ನೂ ವ್ಯವ­ಸ್ಥಿ­ತವಾಗಿ ಬಲಗೊಳಿಸಿದವು. ಸಮಾಜ, ದೇಗುಲ­ಗಳ ಸಂಬಂಧದಲ್ಲಿ ಸ್ಪಷ್ಟತೆ­ಯನ್ನು ಅವರು ಕಂಡುಕೊಂಡಿದ್ದರು. ಗರ್ಭ­ಗುಡಿಯ ಸಂಪೂರ್ಣ ಹಿಡಿತ ಪುರೋಹಿತರಿಗೆ ಬಿಟ್ಟುಕೊಡ­ಲಾ­ಯಿತು. ವೇದ ಹಾಗೂ ವೇದ ಸಂಬಂಧಿ ಆಚ­ರಣೆಗಳಾದ ಯಜ್ಞಯಾಗಾದಿ­ಗಳಲ್ಲದೆ ವೈದಿಕ­ಗೊಂಡ ಯಂತ್ರ, ಮಂತ್ರ, ತಂತ್ರಗಳ ಮೇಲೂ ಹಿಡಿತವನ್ನು ಸಾಧಿಸಲು ಅವರಿಗೆ ಸಾಧ್ಯ­ವಾಯಿತು. ಹಾಗೂ ಪ್ರಶ್ನಾತೀತವಾಯಿತು.ರಾಜಧಾನಿಗಳಾದರೆ ರಾಜರು, ಹಳ್ಳಿಯ ಮಟ್ಟಕ್ಕೆ ಊರ ಮುಖಂಡರು ಅಂತರಾಳದಲ್ಲಿ  ಕುಳಿತು ದೇವರ ದರ್ಶನಕ್ಕೆ ಪಾತ್ರರಾದರು. ಅಥವಾ ದೇವಾಲಯಗಳನ್ನೂ, ಪುರೋಹಿತ­ರನ್ನೂ ಕಾಪಾಡುವವರನ್ನು ಗರ್ಭಗುಡಿಗೆ ಪಕ್ಕ­ದಲ್ಲಿ ನಿಂತು ದೇವರ ದರ್ಶನ ಪಡೆಯಲು ಅವ­ಕಾಶ ಕಲ್ಪಿಸಿಕೊಡಲಾಯಿತು. ಮಂಟಪದಲ್ಲಿ ರಾಜ ನರ್ತಕಿಯರು, ಕನ್ನಡಿ ಚಾಮರಗಳನ್ನು ಹಿಡಿಯುವ ವೇಶ್ಯೆಯರು, ವಾದ್ಯದವರು, ಶ್ರೀಮಂತರು ಜಾಗ ಪಡೆದರು. ಅದರಾಚೆಗೆ ಮುಖ­ಮಂಟಪದಲ್ಲಿ ಮುಟ್ಟುವ ಜಾತಿಗಳಿಗೆ ಜಾಗ ಸಿಕ್ಕರೆ, ಮುಟ್ಟದ ಜಾತಿಗಳು ಡೊಳ್ಳು ಬಾರಿಸಿ ದೇವರ ಕಿವಿ ತಲುಪಬೇಕಾಯಿತು.ಶಿವನ ಭಕ್ತಿಯನ್ನು ಮೆರೆಯಲು ಹೋದ ಚೋಳರು ಊರೂರಲ್ಲಿ ಶಿವಾಲಯಗಳನ್ನು ಕಟ್ಟಿದರು. ದೇವಾಲಯದ ಒಳ ಹೋಗಲಾರದ ಆಂಡಾಳ್ ಅಂತಹ ತಳಸಮುದಾಯದ ಭಕ್ತರು ಬೀದಿಗಳಲ್ಲಿ ಹಾಡಿ ಆ ದೇವರ ಹೆಸರನ್ನು ಮೆರೆ­ಸಿ­ದರು. ಬಡವನ ಮನೆಗೇ ದೇವರು ಬರುವ ಕಥೆ­ಗಳು ಹುಟ್ಟಿಕೊಂಡವು-. ಭಕ್ತಿ ಸಾಹಿತ್ಯ ಬೆಳೆ­ಯಿತು. ಪುರಾಣಗಳನ್ನು ಬರೆದು, ಭಕ್ತಿಯಿಂದ ಹಾಡಿ ಹೊಗಳಿ, ಕಲ್ಲು ದೇವರಿಗೆ ವಿಧ ವಿಧವಾಗಿ ಅಲಂಕರಿಸಿ, ಯಾವ ಯಾವುದೋ ರೂಪದಲ್ಲಿ ದೇವರ ಸೇವೆಯನ್ನು ಮಾಡಿದರು. ಜನ ತಮ್ಮ ದುಡಿಮೆಯ ಭಾಗವನ್ನೆಲ್ಲಾ ಕೊಟ್ಟು ದೇವರನ್ನೂ, ದೇಗುಲಗಳನ್ನೂ ಬೆಳೆಸಿದರು.ರಾಜರು ದೇವಾಲಯಗಳಿಗೆ, ಪುರೋಹಿತರಿಗೆ ಭೂಮಿಯನ್ನು ದಾನ ಕೊಡತೊಡಗಿದರು. ಅಗ್ರಹಾರಗಳನ್ನು ಕಟ್ಟಿಕೊಟ್ಟರು. ದೇವಾಲಯ­ಗಳ ಪೋಷಣೆ ಪುರೋಹಿತ ವರ್ಗಕ್ಕೆ ಉದರನಿಮಿತ್ತವೂ ಆಯಿತು. ಹನ್ನೆರಡನೇ ಶತಮಾನದ ಹೊತ್ತಿಗೆ ಕಲ್ಲು ದೇವರು, ಅದಕ್ಕಾಗಿ ಕಟ್ಟುವ ಕಲ್ಲು ಗುಡಿ­ಗೋಪುರಗಳ ವೈಭವದಿಂದ ರೋಸಿ ಹೋದ ವಚನಕಾರರು ದೇಗುಲಗಳ ಪ್ರತಿಭಟನೆಯನ್ನು ಆರಂಭಿಸಿದರು. ದೇವಾಲಯಗಳು ಹಲವು ರೀತಿ­ಯಲ್ಲಿ ಜನರ ಶೋಷಣೆಗೆ ಕಾರಣ­ವಾಗಿವೆ ಎಂದು ಅರಿವಾಗಿತ್ತು. ನಿರಾಕಾರ ಸಿದ್ಧಾಂತ ಮೂಲಕ ಜನರನ್ನು ತಲುಪುವುದು ಸುಲಭವಲ್ಲ ಎಂಬುದನ್ನು ಅರಿತ ಬಸವಣ್ಣ, ಆತ್ಮಲಿಂಗದ ಕಲ್ಪನೆಯನ್ನು ತಂದುಕೊಡಲು ಕಾರಣವಾಗಿ­ರಬೇಕು.ಸ್ಥಾಪಿತ ಧಾರ್ಮಿಕ ಮೌಲ್ಯಗಳೊಂದಿಗೆ ಬಂದ ಮುಸಲ್ಮಾನರೂ ದೇಗುಲ ಸಂಸ್ಕೃತಿಯನ್ನು ಮತ್ತೊಂದು ರೀತಿಯಲ್ಲಿ ಪೋಷಿಸಿದರೆಂದೇ ಹೇಳ­ಬೇಕು. ನಡೆದ ಆಕ್ರಮಣಗಳು ರಾಜ­ಲಾಂಛನದ ದೇಗುಲಗಳೇ ಹೊರತು ಅವು ಜನ­ಸಾಮಾನ್ಯರ ಗುಡಿಗಳಾಗಿರಲಿಲ್ಲ. ವಾಸ್ತುಶಿಲ್ಪದ ದೃಷ್ಟಿಯಿಂದ ಇಸ್ಲಾಂನ ಹಲವು ಅಂಶಗಳು ದೇಗುಲಗಳನ್ನು ಸೇರಿ ಹೋದವು. ಗೋಳ, ಗಾರೆ ಗುಡಿಗಳಿಗೂ ಹತ್ತಿದವು.16ನೇ ಶತಮಾನದವರೆಗೂ ಸಾಮ್ರಾಟರು ತಮ್ಮ ಸಾಮರ್ಥ್ಯವನ್ನು ದೇಗುಲದ ಗಮ್ಮತ್ತಿನಲ್ಲಿ ವ್ಯಕ್ತಪಡಿಸಿದರು. ಇದನ್ನು ತಂಜಾವೂರು, ತಿರು­ವಣ್ಣಾ ಮಲೈ, ತಿರುಪತಿ, ಕಂಚಿ ಇಲ್ಲೆಲ್ಲಾ ಕಾಣ­ಬಹುದು. ಇವೆಲ್ಲಾ ದೇಗುಲಗಳ ನಗರಗಳೇ ಆಗಿ ಬೆಳೆದವು. ರಾಜರ ದಾನ ದತ್ತಿಗಳಿಂದ ದೇವಾಲ­ಯಗಳು ಉಬ್ಬಿಹೋದವು. ದೇಗುಲಗಳಿಗೆ ಅಂಟಿ­ಕೊಂಡಂತೆ ಬೆಳೆದ ಮಠಗಳು ದೇವರ ಹೆಸರಿನ ಲಾಭ ಪಡೆಯುವಲ್ಲಿ ಹಿಂದೆ ಬೀಳಲಿಲ್ಲ. ಸಿಕ್ಕ ಸಿಕ್ಕ ದೇವರಿಗೆ ಕೈ ಮುಗಿದು, ಬಂದ ಬಂದವರ ಕಾಲಿಗೆ ಬಿದ್ದು ಯಾವುದನ್ನೂ ತಮ್ಮದೆನ್ನದೆ ಜನಪದರು ಎಲ್ಲ ದೇವರ ರಥಗಳನ್ನು ಎಳೆದರು. ಯಾವ ಧರ್ಮದ ಗೊಡವೆಯೂ ಇಲ್ಲದೆ ತಮಗೆ ಕಂಡಂತೆ ಬದುಕುವುದೇ ಧರ್ಮವಾಗಿ ಬಾಳು ಸವೆಸಿದ್ದಾರೆ.ಆಧುನಿಕ ಕಾಲಕ್ಕೆ ಬಂದಾಗ ಜಾತೀಯತೆಗೆ ಕಳಶವಿಟ್ಟಂತೆ ನಿಂತ ದೇವಾಲಯಗಳ ನಿರಾ­ಕ­ರಣೆಯ ಪ್ರಯತ್ನ ತಮಿಳುನಾಡಿನಲ್ಲಿ  ಪೆರಿಯಾರ­ರಿಂದ ಆರಂಭವಾಯಿತು. ಭಾರತದ ಭೂಗರ್ಭದಲ್ಲಿರುವ ನಾಸ್ತಿಕವಾದ ಮತ್ತೆ ಹೊಗೆಯಾಡಿತು. ಮಾರ್ಕ್ಸ್ ವಾದದ ಹೆಸರಿನಲ್ಲಿ ಮರು ಪ್ರವೇಶ ಪಡೆದುಕೊಂಡಿತು. ಆದರೆ ಅದಕ್ಕೂ ಪ್ರಬಲವಾದ ದೇವರನ್ನೂ ದೇಗುಲವನ್ನು ಕ್ರೈಸ್ತ ಮಿಷನರಿಗಳು ಹೊತ್ತು ತಂದವು. ದಲಿತರು, ಆದಿವಾಸಿಗಳು ಆತು­ಕೊಳ್ಳಲು ಮತ್ತೊಂದು ದೇವರು. ಬೇಸರ­ವೇನಿಲ್ಲ. ಜಾತಿಯ ಜೊತೆಗೆ ಶಿಲುಬೆಯನ್ನು ಹೊರಲು ಹೊಸ ಜಾಗ ದೊರಕಿತು.ಆಧುನಿಕತೆಯ ಭ್ರಮೆಯಲ್ಲಿ 21ನೇ ಶತ­ಮಾನ ಗಿಜಿಗುಡುವ ನಗರಗಳನ್ನು ಕಟ್ಟಿ­ಕೊಂ­ಡಿದೆ. ರಸ್ತೆ ಬದಿಯಿಂದ ಮಾಲ್‌ಗಳವರೆಗೆ ಸರಕು ಮಾರಾಟವಾಗುತ್ತದೆ. ಹಾಗೆಯೇ ಫುಟ್‌­ಪಾತ್‌ನಿಂದ ಬೆಟ್ಟದ ತುದಿಯವರೆಗೆ ದೇವರು­ಗಳೂ ಸಿಗುತ್ತಾರೆ.  ಶಾಪಿಂಗ್ ಕಾಂಪ್ಲೆಕ್ಸ್ ನಂತೆ ಕಾಣುವ  ದೇವಾಲಯಗಳು ಆಧುನಿಕತೆಯನ್ನು ಮೈಗೂಡಿಸಿಕೊಂಡಿವೆ. ವಿದ್ಯುತ್ ಗಂಟೆ ನಾದ, ಕೇಶವಿನ್ಯಾಸಕ್ಕಾಗಿ ತಲೆ ಬೋಳಿಸಿದ ಕೂದಲ ಮಾರಾಟ. ಹೀಗೆ ಒಂದೇ ಎರಡೇ, ಮೈಕ್ ಹಾಕಿ ಮಂತ್ರ ಪಠಣ- ಟ್ರಾಫಿಕ್ ನ ಗಲಾಟೆಗೆ ದೇವರಿಗೂ ಕಿವುಡಾಗಿದೆ. ಪ್ರಸಾದದ ಹೆಸರಿನಲ್ಲಿ ಮತ ಯಾಚನೆ. ಸರ್ಕಾರ ಇವರ ಆದಾಯವನ್ನು ಕೇಳ­ಬಾ­ರದೆಂಬುದರಲ್ಲಿ ಮಾತ್ರ ಇವರೆಲ್ಲರ ಏಕ­ಮತ. ಜಾತಿ ಮತ ಧರ್ಮ ಯಾವ ತಾರ­ತಮ್ಯವೂ ಇಲ್ಲದೆ ಉಳ್ಳವರು ದೇವಾಲಯವ ಮಾಡುವರು!ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.