ಶುಕ್ರವಾರ, ಫೆಬ್ರವರಿ 26, 2021
19 °C

ಸ್ಥಿರತೆಗೆ ನೆರವಾದ ವಿತ್ತೀಯ ಸಂಸ್ಥೆಗಳು

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಸ್ಥಿರತೆಗೆ ನೆರವಾದ ವಿತ್ತೀಯ ಸಂಸ್ಥೆಗಳು

ಷೇರುಪೇಟೆಯು ವಿಸ್ಮಯಕಾರಿ ಎಂಬುದು ವಾಡಿಕೆ. ಅದರಂತೆ ಈ ವಾರದ ಬೆಳವಣಿಗೆಗಳೂ ಸಹ ವಿಸ್ಮಯ ವಾಗಿದ್ದವು ಎನ್ನಬಹುದು. ಸಾಮಾನ್ಯವಾಗಿ ಒಂದು ಕಂಪೆನಿಯು ಉತ್ತಮ ಫಲಿತಾಂಶಗಳನ್ನು ಪ್ರಕಟಿಸಿದಾಗ ಆ ಷೇರಿನ ಬೆಲೆಯು ಏರಿಕೆ ಕಾಣುತ್ತದೆ.  ಆದರೆ ಈ ವಾರದಲ್ಲಿನ ಕೆಲವು ಷೇರುಗಳ ಏರಿಳಿತಕ್ಕೆ ವಿಭಿನ್ನತೆಯನ್ನು ಕಾಣಬಹುದು. ಐಸಿಐಸಿಐ ಬ್ಯಾಂಕ್ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿರದ ಕಾರಣ ಶುಕ್ರವಾರ ಷೇರಿನ ಬೆಲೆಯು ₹233ರಿಂದ ₹216ರ ವರೆಗೂ ಕುಸಿದು ನಂತರ ಏಕ ಮುಖವಾಗಿ ಏರಿಕೆ ಕಂಡು ₹233 ಕ್ಕೆ ತಲುಪಿ ₹230 ರ ಸಮೀಪ ಕೊನೆ ಗೊಂಡಿತು. ಸಿಂಡಿಕೇಟ್ ಬ್ಯಾಂಕ್‌  ಫಲಿತಾಂಶವು ಸಹ ತೃಪ್ತಿಕರವಾಗಿರ ದಿದ್ದರೂ ಭಾರಿ ಇಳಿಕೆಗೊಳಗಾಗಲಿಲ್ಲ. ಆದರೆ ಫಲಿತಾಂಶ ಪ್ರಕಟಿಸಬೇಕಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್‌ಗಳ ಷೇರುಗಳು  ದಿನದ ಮಧ್ಯಂತರದವರೆಗೂ ಇಳಿಕೆಯಲ್ಲಿದ್ದು ನಂತರ ಸ್ವಲ್ಪ ಚೇತರಿಕೆ ಕಂಡವು.ಈಗಾಗಲೇ ಉತ್ತಮ ಫಲಿತಾಂಶ ಪ್ರಕಟಿಸಿದ್ದ ಆ್ಯಕ್ಸಿಸ್ ಬ್ಯಾಂಕ್ ಷೇರಿನ ಬೆಲೆಯು ₹362 ರ ಸಮೀಪಕ್ಕೆ ಕುಸಿದು ನಂತರ ₹408 ರ ವರೆಗೂ ಚೇತರಿಕೆ ಕಂಡಿದೆ.  ಇನ್ನು ಈ ದಿನದ ಮಧ್ಯಂತರದಲ್ಲಿ ಫಲಿತಾಂಶ ಪ್ರಕಟಿಸಿದ ಎಸ್ ಬ್ಯಾಂಕ್ ಷೇರಿನ ಬೆಲೆಯು ಫಲಿತಾಂಶ ಪ್ರಕಟಣೆಗೆ ಮುನ್ನ ₹651 ರ ವರೆಗೂ ಕುಸಿದಿತ್ತು.ಆದರೆ ಫಲಿತಾಂಶವು ನಿರೀಕ್ಷೆ ಮೀರಿದ ಸಾಧನೆ   ಒಳಗೊಂಡ ಕಾರಣ ಷೇರಿನ ಬೆಲೆಯು  ₹749 ರವರೆಗೂ ಏರಿಕೆ ಕಂಡು ವಿಜೃಂಭಿಸಿತು. ವಿಸ್ಮಯಕಾರಿಯಾದ ಮತ್ತೊಂದು ಅಂಶವೆಂದರೆ ಟೈಡ್ ವಾಟರ್ ಆಯಿಲ್ (ಇಂಡಿಯಾ) ಕಂಪೆನಿಯು ಗುರುವಾರ ಬೋನಸ್ ಮತ್ತು ಮುಖಬೆಲೆ ಸೀಳಿಕೆಯನ್ನು ಪ್ರಕಟಿಸಿದ ನಂತರ ಷೇರಿನ ಬೆಲೆಯು ಇಳಿಕೆ ಕಂಡಿತ್ತು.ಈಗಾಗಲೇ ಹೆಚ್ಚಿನ ಅಗ್ರಮಾನ್ಯ ಕಂಪೆನಿಗಳು ತಮ್ಮ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿವೆ. ಇವುಗಳಲ್ಲಿ ಮಾರುತಿ ಸುಜುಕಿ ಕಂಪೆನಿಯ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಕಾರಣಕ್ಕೆ ಷೇರು ಮಾರಾಟದ ಒತ್ತಡಕ್ಕೊಳಗಾಗಿ ₹4,093 ರಿಂದ ₹3,927 ರವರೆಗೂ ಇಳಿಕೆ ಕಾಣುವಂತಾಗಿ ನಂತರ ಚೇತರಿಕೆಯಿಂದ ₹4,097 ರ ಸಮೀಪ ಕೊನೆಗೊಂಡಿತು.  ಮತ್ತೂ ಸೋಜಿಗ ವೆಂದರೆ ಗುರುವಾರ ಸಂವೇದಿ ಸೂಚ್ಯಂಕವು 22 ಅಂಶಗಳ ಇಳಿಕೆಯ ದಿನ ಷೇರುಪೇಟೆಯ ವಹಿವಾಟು ₹5.70 ಲಕ್ಷ ಕೋಟಿಯಾದರೆ ಶುಕ್ರವಾರ 401ಅಂಶಗಳ ಏರಿಕೆಯ ದಿನ ವಹಿವಾಟಿನ ಗಾತ್ರವು ಕೇವಲ ₹2.11 ಲಕ್ಷ ಕೋಟಿಯಷ್ಟು ಮಾತ್ರ. ಅಂದರೆ ಪೇಟೆಯು ಹೆಚ್ಚಿನ ಕುಸಿತವನ್ನು ಈಗಾಗಲೇ ಕಂಡಿರುವುದರಿಂದ ಮತ್ತು ಈ ಕೆಳ ಮಟ್ಟದಲ್ಲಿ ಮಾರಾಟ ಮಾಡುವವರು ವಿರಳವಾದ್ದರಿಂದ ಸ್ವಲ್ಪ ಖರೀದಿಯು ಸೂಚ್ಯಂಕಗಳನ್ನು ಚಿಮ್ಮುವಂತೆ ಮಾಡಿದೆ.  ಈಗಿನ ಪೇಟೆಗಳ ಚಲನೆಯ ಶೈಲಿಯು ಹೂಡಿಕೆ ಎಂಬುದನ್ನು ಪಕ್ಕಕ್ಕೆ ಸರಿಸಿ ಎಲ್ಲವನ್ನೂ ವ್ಯವಹಾರಿಕತೆಯ ಕಡೆಗೆ ಕೊಂಡೊಯ್ಯುತ್ತಿದೆ ಎಂಬು ದನ್ನು ಹಿಂದಿನವಾರದ ಬೆಳವಣಿಗೆಗಳು ದೃಢೀಕರಿಸಿವೆ.ಒಟ್ಟಾರೆ ನಾಲ್ಕು ದಿನದ ವಹಿವಾಟಿನಲ್ಲಿ 401 ಅಂಶಗಳ ಏರಿಕೆ ಕಂಡಿದೆ. ಈ ವಾರ ಸಂವೇದಿ ಸೂಚ್ಯಂಕವು 435 ಅಂಶಗಳ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕವನ್ನು 224 ಅಂಶಗಳಹಾಗೂ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 271 ಅಂಶಗಳ ಏರಿಕೆ ಕಾಣುವಂತೆ ಮಾಡಿತು.ವಿದೇಶಿ ವಿತ್ತೀಯ ಸಂಸ್ಥೆಗಳು ಶುಕ್ರವಾರ ₹571 ಕೋಟಿ ಹೂಡಿಕೆ ಮಾಡಿದ ಪರಿಣಾಮ ಪೇಟೆಯನ್ನು ಚುರುಕಾದ ಏರಿಕೆ ಕಾಣುವಂತೆ ಮಾಡಿತು. ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,442 ಕೋಟಿ ಮೌಲ್ಯದ ಷೇರುಗಳನ್ನು ಈ ವಾರ ಖರೀದಿಸಿ ಪೇಟೆ ಸ್ಥಿರತೆ ಕಾಣಲು ಅನುವು ಮಾಡಿಕೊಟ್ಟಿವೆ. ಪೇಟೆಯ ಬಂಡವಾಳ ಮೌಲ್ಯವು ₹92.03 ಲಕ್ಷ ಕೋಟಿಯಿಂದ ₹93.92 ಲಕ್ಷ ಕೋಟಿಗೆ ಏರಿಕೆ ಕಂಡಿದೆ.ಮುಖಬೆಲೆ ಸೀಳಿಕೆ: ಟೈಡ್ ವಾಟರ್ ಆಯಿಲ್ (ಇಂಡಿಯಾ),  ರಾಮಾ ಸ್ಟೀಲ್ ಟ್ಯೂಬ್ಸ್ ಮತ್ತು ಎಬಿಎಂ ನಾಲೆಡ್ಜ್ ವೇರ್ ಕಂಪೆನಿಗಳು ತಮ್ಮ ಹತ್ತು ರೂಪಾಯಿ ಮುಖಬೆಲೆಯ ಷೇರುಗಳನ್ನು ₹5 ಕ್ಕೆ ಸೀಳಲಿವೆ.ಬೋನಸ್ ಷೇರು: ಟೈಡ್ ವಾಟರ್ ಆಯಿಲ್ (ಇಂಡಿಯಾ) ಕಂಪೆನಿಯು  1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ರಾಮಾ ಸ್ಟೀಲ್ ಟ್ಯೂಬ್ಸ್  4:1 ರ ಅನುಪಾತದ ಬೋನಸ್ ಪ್ರಕಟಿಸಿದೆ.ಹಕ್ಕಿನ ಷೇರು: ಅಕ್ನಿಟ್ ಇಂಡಸ್ಟ್ರೀಸ್ ಲಿ ಕಂಪೆನಿಯು ಹನ್ನೆರಡುವರೆ ಕೋಟಿ ವರೆಗೂ ಹಕ್ಕಿನ ಷೇರು ವಿತರಣೆ ಮಾಡಿ ಸಂಪನ್ಮೂಲ ಸಂಗ್ರಹಣೆಗೆ ನಿರ್ಧರಿಸಿದೆ.ಹೊಸ ಷೇರು: ಸಾರ್ವಜನಿಕ ವಲಯದ ನವರತ್ನ ಕಂಪೆನಿ ಎಂಜಿನಿಯರ್ಸ್‌ ಇಂಡಿಯಾ ದಲ್ಲಿನ ಶೇ 10 ರಷ್ಟಾದ 3,36,92,660 ಷೇರುಗಳನ್ನು ಕೇಂದ್ರ ಸರ್ಕಾರ ಆಫರ್ ಫಾರ್ ಸೇಲ್ ಗವಾಕ್ಷಿ ಮೂಲಕ ಐದು ರೂಪಾಯಿ ಮುಖಬೆಲೆಯ  ಪ್ರತಿ ಷೇರಿಗೆ ₹189 ರ ಮೂಲ ಬೆಲೆಯಲ್ಲಿ ಮಾರಾಟ ಮಾಡಿದ ಕಾರಣ ಷೇರಿನ ಬೆಲೆಯು ₹193 ಕ್ಕೆ  ಕುಸಿದಿದೆ. ವಿತರಣೆಗೆ ಉತ್ತಮ ಸ್ಪಂದನೆ ದೊರೆತು ವಿತರಣೆಯು ಎರಡೂ ವರೆ ಪಟ್ಟು ಹೆಚ್ಚು ಸಂಗ್ರಹಣೆಯಾಗಿದೆ.  ಸಣ್ಣ ಹೂಡಿಕೆದಾರರ ಬೆಂಬಲ ಹೆಚ್ಚಾಗಿದ್ದುದು ಗಮನಾರ್ಹ.ದೆಹಲಿ ಮತ್ತು ಉತ್ತರ ಪ್ರದೇಶ  ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿ ಕೊಂಡಿರುವ ಒರಾಕಲ್ ಕ್ರೆಡಿಟ್ ಲಿ. ಕಂಪೆನಿಯ ಷೇರುಗಳು 28 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತ ಷೇರುವಿನಿಮಯ ಕೇಂದ್ರ ಗಳಲ್ಲಿ ವಹಿವಾಟಿಗೆ ನೋಂದಾಯಿಸಿ ಕೊಂಡಿರುವ ಬ್ಲೂ ಕ್ಲೌಡ್ ಸಾಫ್ಟೆಕ್ ಸೊಲೂಷನ್ಸ್ ಲಿ ಕಂಪೆನಿಯ  29 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.ಅಹಮದಾಬಾದ್, ದೆಹಲಿ ಮತ್ತು ಜೈಪುರ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಇಂಟರ್ ನ್ಯಾಷನಲ್ ಪಂಪ್ಸ್ ಅಂಡ್ ಪ್ರಾಜೆಕ್ಟ್ಸ್ ಲಿ ಕಂಪೆನಿಯು ಫೆಬ್ರುವರಿ 1 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.*

ಸರ್ಕಾರಿ ಸ್ವಾಮ್ಯದ ನವರತ್ನ ಕಂಪೆನಿ ಎಂಜಿನಿಯರ್ಸ್‌ ಇಂಡಿಯಾ ಕಳೆದ ವಾರ ಕೇಂದ್ರ ಸರ್ಕಾರದ ಷೇರು ವಿಕ್ರಯ ಕಾರ್ಯಕ್ರಮದಡಿ ಶೇ11 ರಷ್ಟು ಭಾಗಿತ್ವವನ್ನು ಸಾರ್ವಜನಿಕ ರಿಗೆ ಆಫರ್‌ ಫಾರ್‌ ಸೇಲ್‌  (ಒಎಫ್‌ಸಿ) ಮೂಲಕ ವಿತರಣೆ ಮಾಡಿತು. ಈ ವಿತರಣೆಗೆ ಸಾರ್ವಜನಿಕ ಸ್ಪಂದನವು ಉತ್ತಮವಾಗಿತ್ತು.  ಆದರೂ ಸಣ್ಣ ಹೂಡಿಕೆದಾರರಿಗೆ ಒಎಫ್‌ಸಿ ಎಂದರೇನು, ಇದರ ಕಾರ್ಯವೈಖರಿ ಹೇಗೆ ಎಂಬ ಪ್ರಶ್ನೆ ಮೂಡಿಬಂದಿದೆ. ಈ ಬಗ್ಗೆ ಹಲವಾರು ಹೂಡಿಕೆದಾರರ ಕರೆಗಳೇ ಸಾಕ್ಷಿ. ಆರಂಭಿಕ ಷೇರು ವಿತರಣೆ ಮಾದರಿಯಲ್ಲಿ ಮಾರಾಟ ಮಾಡಬೇಕಾದರೆ ಅನುಸರಿಸಬೇಕಾದ ನಿಯಮಗಳು ಹೆಚ್ಚಾಗಿದ್ದು ತ್ವರಿತವಾಗಿ ನಡೆಸಲು ಅಸಾಧ್ಯ.  ಪೇಟೆಯ ಬಂಡವಾಳ ಮೌಲ್ಯದ ಆಧಾರದ ಮೇಲೆ ಮೊದಲ ಇನ್ನೂರು ಕಂಪೆನಿಗಳ ಪ್ರವರ್ತಕರು ಕೆಲವು ನಿಬಂಧನೆಗಳ ಮೇಲೆ ತಮ್ಮ ಭಾಗಿತ್ವವನ್ನು ಷೇರು ವಿನಿಮಯ ಕೇಂದ್ರಗಳ ಈ  ಒಎಫ್‌ಸಿ ಎಂಬ  ವಿಶೇಷ ಗವಾಕ್ಷಿ ಮೂಲಕ ಮಾರಾಟ ಮಾಡಬಹು ದಾಗಿದೆ.ಹಾಗೆಯೇ ಕೇಂದ್ರ ಸರ್ಕಾರ ತನ್ನ ಷೇರು ವಿಕ್ರಯ ಕಾರ್ಯಕ್ರಮದಂತೆ ಕಂಪೆನಿಗಳ ಭಾಗಿತ್ವವನ್ನು ಸಾರ್ವಜನಿಕ ರಿಗೆ, ವಿತ್ತೀಯ ಸಂಸ್ಥೆಗಳಿಗೆ, ಮ್ಯುಚುಯಲ್ ಫಂಡ್‌ಗಳಿಗೆ ಈ ಒಎಫ್‌ಸಿ ಗವಾಕ್ಷಿ ಮೂಲಕ ಮಾರಾಟ ಮಾಡಬಹುದಾಗಿದೆ. ಕಂಪೆನಿಗಳಲ್ಲಿ ಕನಿಷ್ಠ ಸಾರ್ವಜನಿಕ ಭಾಗಿತ್ವ ನೀಡಲು ಸಹ ಈ  ಪದ್ಧತಿ ಉಪಯೋಗಿಸಬಹುದಾಗಿದೆ. ಸಣ್ಣ ಹೂಡಿಕೆದಾರರು ಇದರಲ್ಲಿ ಭಾಗವಹಿಸಬಹುದು. ಅವರು ವಹಿವಾಟು ನಡೆಸುವ ಬ್ರೋಕರ್ ಮೂಲಕ ತಮ್ಮ  ಖರೀದಿ ಬಿಡ್ ಸಲ್ಲಿಸಬಹುದು.  ಬಿಡ್ ಸಲ್ಲಿಕೆಗೆ ಪೂರಕ ವಾಗಿ ತಮ್ಮ ಟ್ರೇಡಿಂಗ್ ಖಾತೆಯಲ್ಲಿ ಹಣವನ್ನು ಜಮೆ ಮಾಡಿರಬೇಕು.ಜಮೆ ಇರುವ ಹಣಕ್ಕೆ ತಕ್ಕಂತೆ ಸಲ್ಲಿಸಬೇಕಾದ ಷೇರುಗಳನ್ನು ನಿರ್ಧರಿಸ ಲಾಗುವುದು.  ಈ ಮೂಲಕ ಷೇರುಗಳು ಪಡೆಯಲು ಯಶಸ್ವಿಯಾದಲ್ಲಿ ಮರು ದಿನವೇ ಅವರ ಡಿ ಮ್ಯಾಟ್  ಖಾತೆಗೆ ಷೇರುಗಳು ಜಮೆಯಾಗುವುದು.  ಈ ರೀತಿ ಪಡೆದ ಷೇರುಗಳು ನಂತರದ ದಿನದಿಂದಲೇ ವಹಿವಾಟಿಗೆ ಅರ್ಹತೆ ಪಡೆದಿರುತ್ತವೆ.  ಈ ರೀತಿಯ ವಿತರಣೆಯಲ್ಲಿ ಸಣ್ಣ ಹೂಡಿಕೆದಾರರಿಗೆ ಶೇ 5 ರಷ್ಟು  ರಿಯಾಯಿತಿಯನ್ನು ಸಹ ಕೆಲವು ಕಂಪೆನಿಗಳು ನೀಡುತ್ತವೆ.  ಒಟ್ಟಿನಲ್ಲಿ ಈ ರೀತಿಯ ವಿತರಣೆಯು ತ್ವರಿತವಾಗಿ ಚುಕ್ತಾ ಆಗುವುದರಿಂದ ವಿತರಣೆ ಬೆಲೆಯು ಸಹ ಪೇಟೆಯ ದರದ ಮೇಲೆ ಪ್ರಭಾವ ಬೀರುತ್ತದೆ.ಮೊ: 9886313380 (ಸಂಜೆ 4.30ರ ನಂತರ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.