ಸೋಮವಾರ, ಮಾರ್ಚ್ 30, 2020
19 °C

‘ನಿರ್ದಿಷ್ಟ ದಾಳಿ’ಯಿಂದ ಸಾಧಿಸಿದ್ದೇನು?

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

‘ನಿರ್ದಿಷ್ಟ ದಾಳಿ’ಯಿಂದ ಸಾಧಿಸಿದ್ದೇನು?

ಕಳೆದ ವರ್ಷ ಭಾರತದ ಸೈನಿಕರು ಪಾಕಿಸ್ತಾನದ ಗಡಿಯೊಳಗೆ ನುಸುಳಿ ನಡೆಸಿದ ‘ನಿರ್ದಿಷ್ಟ ದಾಳಿ’ಯ (ಸರ್ಜಿಕಲ್‌ ಸ್ಟ್ರೈಕ್‌) ಫಲಶ್ರುತಿಯ ಎರಡು ಬಗೆಯ ಸಾಕ್ಷ್ಯಗಳು ನಮ್ಮ ಮುಂದಿವೆ. ರಾಜಕೀಯ ಪ್ರಭುಗಳ ಸಮ್ಮತಿ ಮೇರೆಗೆ ಸೇನಾ ಪಡೆಗಳು ನೀಡಿದ ಸಾಕ್ಷ್ಯ ಮೊದಲನೇಯದಾಗಿದೆ. ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಸೇನಾ ಪ್ರಮುಖರೊಬ್ಬರು ಪರದೆ ಮೇಲೆ ಕಾರ್ಯಾಚರಣೆಯ ಸಚಿತ್ರ ವಿವರಗಳನ್ನು ನೀಡುತ್ತ,  ಸಾಕ್ಷ್ಯದ ರೂಪದಲ್ಲಿ ಸೇನೆ ವಶಪಡಿಸಿಕೊಂಡ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಮಂಡಿಸಲಿಲ್ಲ. ಅದರ ಬದಲಿಗೆ ಮಾಧ್ಯಮಗಳಿಗೆ ಬರೀ ಸುದ್ದಿ ತಲುಪಿಸಲಾಯಿತಷ್ಟೆ.

‘ನಿರ್ದಿಷ್ಟ ದಾಳಿ’ಯ ಮೊದಲ ವರ್ಷಾಚರಣೆ ಸಂದರ್ಭದಲ್ಲಿ ಎರಡು ಕೃತಿಗಳೂ ಪ್ರಕಟಗೊಂಡಿವೆ. ಈ ಎರಡೂ ಕೃತಿಗಳನ್ನು ಸೇನೆ ಮತ್ತು ರಾಜಕಾರಣದ ಜತೆ ಉತ್ತಮ ಬಾಂಧವ್ಯ ಹೊಂದಿರುವ ಪರಿಣತ ಸೇನಾ ವರದಿಗಾರರು ಬರೆದಿದ್ದಾರೆ. ಸೇನಾ ಕಾರ್ಯಾಚರಣೆಗಳನ್ನು ವರದಿ ಮಾಡುವ ಬಗ್ಗೆ ಇವರಿಬ್ಬರೂ ಸಾಕಷ್ಟು ತರಬೇತಿಯನ್ನೂ ಪಡೆದವರಾಗಿದ್ದಾರೆ. ಹೀಗಾಗಿ ಈ ಎರಡೂ ಕೃತಿಗಳನ್ನು ಪ್ರತಿಯೊಬ್ಬರೂ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.

ಈ ಇಬ್ಬರೂ ವರದಿಗಾರರು, ‘ನಿರ್ದಿಷ್ಟ ದಾಳಿ’ ನಡೆದಿರುವುದನ್ನು ತಮ್ಮ ಕೃತಿಗಳಲ್ಲಿ ಖಚಿತಪಡಿಸಿದ್ದಾರೆ. ದಾಳಿಯಲ್ಲಿ ಭಾಗವಹಿಸಿದ್ದ ಸೇನೆಯ ವಿಶೇಷ ಪಡೆಯ ಹೆಸರು ಬಹಿರಂಗಪಡಿಸದ ಯುವ ಅಧಿಕಾರಿಗಳ ಜತೆಗೆ ನಡೆಸಿದ ಸಂದರ್ಶನವು ಪ್ರಮುಖ ಸಾಕ್ಷ್ಯವಾಗಿದೆ. ಹೀಗಾಗಿ ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ಕೃತಿಗಳಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಹೇಳಿಕೆಗಳೂ ಇವೆ. ದಾಳಿಯ ರಾಜಕೀಯ ಉದ್ದೇಶಕ್ಕೆ ಅವುಗಳನ್ನು ವಿಶಾಲ ಅರ್ಥದಲ್ಲಿ ನೋಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಸಮರ್ಥನೀಯ ವಸ್ತುನಿಷ್ಠ ಧೋರಣೆಯಾಗಿದೆ ಎನ್ನುವುದನ್ನೂ ನಾನಿಲ್ಲಿ ಸ್ಪಷ್ಟಪಡಿಸಲು ಬಯಸುವೆ.

ಆದರೆ, ಯುದ್ಧೋತ್ಸಾಹಿ ಚಾನೆಲ್‌ಗಳು ತಡೆರಹಿತವಾಗಿ ಬಿತ್ತರಿಸಿದ ಕಾರ್ಯಕ್ರಮಗಳು ಮಾತ್ರ ದಾಳಿಯನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲವಾದವು. ಸಮವಸ್ತ್ರ ಧರಿಸಿದ್ದ ಮುಖ ಮುಚ್ಚಿಕೊಂಡಿದ್ದ ಪ್ಯಾರಾ ಕಮಾಂಡೊ ಅಧಿಕಾರಿಗಳ ಜತೆಗಿನ ‘ಸಂದರ್ಶನ’ ವು ವೀಕ್ಷಕರಿಗೆ ಅಷ್ಟೇನೂ ಸಮಾಧಾನ ನೀಡಲಿಲ್ಲ.  ಉರಿ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿಯಿಂದ ತಾವೆಷ್ಟು ಕ್ರೋಧಗೊಂಡಿದ್ದೇವು, ನಿರ್ದಿಷ್ಟ ದಾಳಿಗೆ ಹೇಗೆ ಕಾರ್ಯತಂತ್ರ ರೂಪಿಸಿದ್ದೇವು, ಯಶಸ್ವಿಯಾಗಿ ದಾಳಿ ನಡೆಸಿದ ಬಗೆ ಮತ್ತು ಯಾವುದೇ ಹಾನಿಗೆ ಒಳಗಾಗದೆ ತಾವು ಸುರಕ್ಷಿತವಾಗಿ ಮರಳಿದ ಕುರಿತು ಅವರು ಮಾಹಿತಿ ನೀಡಿದ್ದರು.

ಸೇನೆಯು ರಾತ್ರಿ ವೇಳೆ ನಡೆಸುವ ಕೆಲ ಕಾರ್ಯಾಚರಣೆಯ ಮಸುಕಾದ ದೃಶ್ಯಾವಳಿಗಳ ಜತೆಗೆ ಸೇನೆ ನಡೆಸುವ ಕಮಾಂಡೊ ಗುಂಡಿನ ದಾಳಿಯನ್ನು ಬೆರೆಸಿ ಕಾರ್ಯಕ್ರಮ ಬಿತ್ತರಿಸಲಾಗಿತ್ತು. ಅದನ್ನು ನೋಡಿದರೆ ಸನ್ನಿ ಡಿಯೋಲ್‌ ಚಲನಚಿತ್ರಗಳಲ್ಲಿ ಖಳನಾಯಕನ ಮೇಲೆ ನಾಯಕ ನಡೆಸುವ ದಾಳಿ ನೆನಪಿಸುವಂತ್ತಿತ್ತು.

‘ಸರ್ಜಿಕಲ್‌ ಸ್ಟ್ರೈಕ್‌’  ಬಗ್ಗೆ ಪ್ರಸಾರ ಮಾಡಿದ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿಕೊಂಡ ಚಿತ್ರಗಳು ಬಾಲಿಶ ವಿಡಿಯೊಗಳಾಗಿದ್ದವು. ಇಲ್ಲಿ ಮೂರು ಮುಖ್ಯ ಸಂಗತಿಗಳನ್ನು ಮಾತ್ರ ಯಾರೊಬ್ಬರೂ ಬದಲಿಸಲು ಸಾಧ್ಯವಿರಲಿಲ್ಲ. ’ನಿರ್ದಿಷ್ಟ ದಾಳಿ’ ಎಂದು ಹೇಳುವ ಸೇನಾ ಕಾರ್ಯಾಚರಣೆ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿದ್ದವು. ಆ ಬಗ್ಗೆ ಯಾವುದೇ ಎರಡು ಮಾತಿಲ್ಲ. ಭಾರತದ ವಿಶೇಷ ಸೇನಾ ಪಡೆಗಳು ಯಾವುದೇ ಬಗೆಯಲ್ಲಿ ಗಾಯಗೊಳ್ಳದೇ ಸುರಕ್ಷಿತವಾಗಿ ಮರಳಿ ಬಂದಿದ್ದವು. ಇಂತಹ ಕಾರ್ಯಾಚರಣೆ ಸಂದರ್ಭದಲ್ಲಿ ನಡೆಯುವ ಯಾವುದೇ ಬಗೆಯ ಸಾವು – ನೋವುಗಳನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಭಾರತ ಯಾವತ್ತೂ ಹಾಗೆ ಮಾಡುವುದೂ ಇಲ್ಲ. ಪ್ರತೀಕಾರ ಉದ್ದೇಶದಿಂದ ಕಗ್ಗತ್ತಲಿನಲ್ಲಿ ನಡೆಸಿದ ಸೇನಾ ದಾಳಿಯ ತೃಪ್ತಿಯ ಆಚೆ ಇದರಿಂದ ಏನನ್ನು ಸಾಧಿಸಲಾಯಿತು ಎನ್ನುವುದರ ಬಗ್ಗೆ ಮಾತ್ರ ಯಾರೊಬ್ಬರೂ ಹೇಳಿಕೊಂಡಿಲ್ಲ.

ಸೇನಾ ಕಾರ್ಯಾಚರಣೆಯಲ್ಲಿ ಎರಡು ಬಗೆಗಳು ಇವೆ. ಮೊದಲನೇಯದಾಗಿ ವ್ಯೂಹಾತ್ಮಕ ಯುದ್ಧ ತಂತ್ರ ಮತ್ತು ಎರಡನೆಯದಾಗಿ ಆಯಕಟ್ಟಿನ ದಾಳಿ. ವ್ಯೂಹಾತ್ಮಕ ದಾಳಿ ಕಾರ್ಯಾಚರಣೆ ದೃಷ್ಟಿಯಿಂದ ನೋಡುವುದಾದರೆ ‘ನಿರ್ದಿಷ್ಟ ದಾಳಿ’ ಯಶಸ್ವಿಯಾಗಿತ್ತು. ಪಾಕಿಸ್ತಾನದ ಕಡೆಯಿಂದಲೂ ನಿರ್ದಿಷ್ಟ ಸಾವು ನೋವು ಮತ್ತು ಹಾನಿಯ ಬಗ್ಗೆ ಅಧಿಕೃತ ಹೇಳಿಕೆ ಹೊರ ಬಿದ್ದಿರಲಿಲ್ಲ. ಗಡಿ ನಿಯಂತ್ರಣ ರೇಖೆಗುಂಟ (ಎಲ್‌ಒಸಿ) ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ನಡೆಸಿದ ಕಾರ್ಯಾಚರಣೆಯು ತುಂಬ ಅಪಾಯಕಾರಿಯಾಗಿತ್ತು.  ಸೇನಾ ಗತ್ತಿನ ಮತ್ತು ಪರಾಕ್ರಮದಿಂದ ಕೂಡಿದ ದಾಳಿಯನ್ನು ತುಂಬ ವೃತ್ತಿಪರತೆಯಿಂದ ಕಾರ್ಯಗತಗೊಳಿಸಲಾಗಿತ್ತು. ಎಲ್ಲವನ್ನೂ ಪರಿಪೂರ್ಣವಾಗಿ ನಿರ್ವಹಿಸಲಾಗಿತ್ತು. ದಾಳಿ ಮುನ್ನ ಮತ್ತು ನಂತರವೂ ಸಂಪೂರ್ಣವಾಗಿ ರಹಸ್ಯ ಕಾಪಾಡಿಕೊಳ್ಳಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿನ ಗೊಂದಲದ ಪರಿಸ್ಥಿತಿಯಲ್ಲಿ ಗೋಪ್ಯತೆ ಕಾಪಾಡಿಕೊಳ್ಳುವುದು ಕಠಿಣ ಸವಾಲೂ ಆಗಿತ್ತು. ಹೀಗಾಗಿ ‘ನಿರ್ದಿಷ್ಟ ದಾಳಿ’ ಯು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದೂ ನಾವು ಹೇಳಿಕೊಳ್ಳಬಹುದು.

ಈ ದಾಳಿಯ ಮುಖ್ಯ ಉದ್ದೇಶ ಏನಾಗಿತ್ತು ಎನ್ನುವುದನ್ನು ಯಾರೊಬ್ಬರೂ ಬಾಯಿಬಿಟ್ಟು ಹೇಳಿಲ್ಲ. ಉರಿ ಅಂತಹ ದಾಳಿ ನಡೆದಾಗಲ್ಲೆಲ್ಲ ಅದಕ್ಕೆ ಸೂಕ್ತ ಪ್ರತೀಕಾರ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡುವುದೇ ಅದರ ಉದ್ದೇಶವಾಗಿತ್ತೇ. ಭವಿಷ್ಯದಲ್ಲಿ ಮತ್ತೆ ಇಂತಹ ದಾಳಿ ನಡೆಸದಂತೆ ವೈರಿ ದೇಶದ ಧೈರ್ಯ ಕುಂದಿಸುವ ಪ್ರಯತ್ನ ಇದಾಗಿತ್ತೇ. ಕಳೆದ ಒಂದು ವರ್ಷದ ಸಾಕ್ಷ್ಯಾಧಾರಗಳನ್ನು ನೋಡಿದರೆ ಎರಡೂ ಉದ್ದೇಶಗಳು ಅದರಲ್ಲೂ ಎರಡನೇಯದಂತೂ ಈಡೇರಿಲ್ಲ ಎಂದೇ ಹೇಳಬಹುದು.

ರಕ್ಷಣಾ ವರದಿಗಾರಿಕೆ ಮತ್ತು ಬರವಣಿಗೆಗೆ ಸಂಬಂಧಿಸಿದಂತೆ ದೇಶದಲ್ಲಿನ  ಪರಿಣತರಲ್ಲಿ ಒಬ್ಬರಾಗಿರುವ ನನ್ನ ಸಹೋದ್ಯೋಗಿ ಮನು ಪಬ್ಬಿ ಅವರು ಸಂಗ್ರಹಿಸಿದ ಮಾಹಿತಿ ಪ್ರಕಾರ, ‘ನಿರ್ದಿಷ್ಟ ದಾಳಿ’ಯು ಪಾಕಿಸ್ತಾನ ಸೇನಾಪಡೆಗಳನ್ನು ಧೈರ್ಯಗುಂದಿಸುವ ಬದಲಿಗೆ, ಈ ವರ್ಷ ‘ಎಲ್‌ಒಸಿ’ ಗುಂಟ ಅವರ ಕಿರುಕುಳ ಹೆಚ್ಚಿಸಲು ಕಾರಣವಾಗಿದೆ. ಸಂಸತ್‌ನಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಇತರ ಅಧಿಕೃತ ದಾಖಲೆಗಳನ್ನು ಆಧರಿಸಿ ಪಬ್ಬಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಈ ವರ್ಷದ ಜುಲೈ 11ರವರೆಗೆ ಗಡಿಯಲ್ಲಿ ಪಾಕಿಸ್ತಾನ ಸೇನೆಯು 228 ಬಾರಿ ಕದನ ವಿರಾಮ ಉಲ್ಲಂಘಿಸಿದೆ. 2016ರಲ್ಲಿ ವರ್ಷಪೂರ್ತಿ ಪಾಕಿಸ್ತಾನ ಸೇನೆಯು ನಡೆಸಿದ ಕದನ ವಿರಾಮಗಳ ಸಂಖ್ಯೆ ಕರಾರುವಾಕ್ಕಾಗಿ ಇಷ್ಟೇ ಆಗಿತ್ತು. ಆದರೆ, ಗಡಿ ಭದ್ರತಾ ಪಡೆಯು (ಬಿಎಸ್ಎಫ್‌) ನಿರ್ವಹಿಸುವ ಅಂತರರಾಷ್ಟ್ರೀಯ ಗಡಿಯಲ್ಲಿನ ಪರಿಸ್ಥಿತಿಯಲ್ಲಿ ಮಾತ್ರ ಭಾರಿ ಸುಧಾರಣೆ ಕಂಡು ಬಂದಿದೆ. 2016ರಲ್ಲಿ ಇಲ್ಲಿ ವರ್ಷಪೂರ್ತಿ ನಡೆದ ಕದನ ವಿರಾಮ ಘಟನೆಗಳ ಸಂಖ್ಯೆ 221 ಆಗಿತ್ತು. ಈ ವರ್ಷದ ಜುಲೈ 11ರವರೆಗೆ ಕೇವಲ 23 ಬಾರಿ ಉಲ್ಲಂಘನೆ ನಡೆದಿದೆ. ಈ ಗಡಿ ಪ್ರದೇಶವು ಮೂಲಭೂತವಾಗಿ ವಿಭಿನ್ನವಾಗಿದೆ. ಇದು ‘ಎಲ್‌ಒಸಿ’ಯಿಂದ ಸಾಕಷ್ಟು ದೂರದಲ್ಲಿಯೂ ಇದೆ.

ಕಳೆದ ವರ್ಷ ‘ಎಲ್‌ಒಸಿ’ಗುಂಟ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಎಂಟು ಮಂದಿ ಸೈನಿಕರು ಮೃತಪಟ್ಟಿದ್ದರು. ಇದರಲ್ಲಿ ‘ಎಲ್‌ಒಸಿ’ಯಿಂದ ಸಾಕಷ್ಟು ದೂರದಲ್ಲಿ ಇರುವ ಉರಿ ಮೇಲಿನ ದಾಳಿಯಲ್ಲಿ ಮೃತಪಟ್ಟವರನ್ನು ಪರಿಗಣಿಸಿಲ್ಲ. ಈ ವರ್ಷದ ಜುಲೈ 11ರವರೆಗೆ ನಾಲ್ಕು ಮಂದಿ ಸೈನಿಕರು ಹತರಾಗಿದ್ದಾರೆ. ರಕ್ಷಣಾ ರಾಜ್ಯ ಸಚಿವ ಡಾ. ಸುಭಾಷ್‌ ಭಾಮ್ರೆ ಅವರು ಲೋಕಸಭೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ಇದೆ. ಗಡಿಯಾಚೆಯಿಂದ ಉರಿ ಮಾದರಿಯ ಇನ್ನೂ ಕೆಲ ದಾಳಿ ಯತ್ನಗಳು ನಡೆದಿದ್ದರೂ, ಭಾರತೀಯ ಸೇನೆ ವಹಿಸಿದ್ದ ಜಾಗರೂಕತೆಯಿಂದ ಅವುಗಳನ್ನು ವಿಫಲಗೊಳಿಸಲಾಗಿದೆ.

ಭಯೋತ್ಪಾದಕರು ‘ಎಲ್‌ಒಸಿ’ಗುಂಟ ಭಾರತದ ಒಳಗೆ ಅಕ್ರಮವಾಗಿ ನುಸುಳಿ ಬರಲು ನಡೆಸಿದ ಪ್ರಯತ್ನಗಳನ್ನು ಭಾರತದ ಸೇನೆ ವಿಫಲಗೊಳಿಸಿರುವ ಬಗ್ಗೆ ಸಚಿವ ಭಾಮ್ರೆ ಅವರು ರಾಜ್ಯಸಭೆಗೂ ಕೆಲ ಮಾಹಿತಿ ನೀಡಿದ್ದಾರೆ. 2016ರಲ್ಲಿ ಇಂತಹ 27 ಘಟನೆಗಳು ನಡೆದಿದ್ದರೆ, 2017ರ ಜುಲೈ ತಿಂಗಳವರೆಗೆ 16 ಪ್ರಯತ್ನಗಳು ನಡೆದಿವೆ. ಅಂದರೆ ಸರಾಸರಿ ಪ್ರಮಾಣ ಅಷ್ಟೇ ಇದೆ.

ಅಕ್ರಮ ನುಸುಳುಕೋರರನ್ನು ಹೊಡೆದುರುಳಿಸುವಲ್ಲಿ ಭಾರತದ ಸೇನಾ ಪಡೆಗಳು ಹೆಚ್ಚು ಯಶಸ್ವಿಯಾಗಿವೆ. ಕಳೆದ ವರ್ಷ ಹತರಾದ ಉಗ್ರರ ಸಂಖ್ಯೆ 37 ಇದ್ದರೆ, ಈ ವರ್ಷದ ಜುಲೈವರೆಗೆ 36 ಉಗ್ರರು ಬಲಿಯಾಗಿದ್ದಾರೆ. ಇದು ‘ಎಲ್‌ಒಸಿ’ಯಲ್ಲಿ ಭಾರತದ ಸೇನೆಯು ಮೇಲುಗೈ ಸಾಧಿಸಿರುವುದನ್ನು ಶ್ರುತಪಡಿಸುತ್ತದೆ.

ಆದರೆ, ಒಟ್ಟಾರೆ ಅಂಕಿ ಅಂಶಗಳು ಬೇರೆಯೇ ಆದ ಕತೆ ಹೇಳುತ್ತವೆ. ಭಾರತದ ಸೇನಾ ಪಡೆಗಳು ನಡೆಸುವ ದಾಳಿಗಳು ಭಯೋತ್ಪಾದಕರನ್ನು ಧೈರ್ಯಗುಂದಿಸುವ ಉದ್ದೇಶದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎನ್ನುವುದೂ ಇದರಿಂದ ದೃಢಪಡುತ್ತದೆ.

ಸಾಫ್ಟ್‌ವೇರ್ ಮತ್ತು ಮೊಬೈಲ್‌ ಆ್ಯಪ್‌ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಆಲೋಚನೆ ಮೈದಳೆಯುವಂತೆ ಸೇನಾ ಕಾರ್ಯಾಚರಣೆ ವಿಷಯದಲ್ಲಿ ಕ್ರಾಂತಿಕಾರಿಯಾದ ಹೊಸ ಆಲೋಚನೆಗಳು ದಿನಬೆಳಗಾಗುವುದರ ಒಳಗೆ ರೂಪುಗೊಳ್ಳುವುದಿಲ್ಲ. ಎರಡು ದಶಕಗಳ ಹಿಂದೆಯೇ ಸೇನಾ  ಕಾರ್ಯಾಚರಣೆಗಳಲ್ಲಿ ಭಾರಿ ಬದಲಾವಣೆ ಕಂಡು ಬಂದಿತ್ತು. ಯುದ್ಧ ರಂಗದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಲು ಆಗಲೇ ಚಾಲನೆ ಸಿಕ್ಕಿತ್ತು.

2005ರಲ್ಲಿ ಬ್ರಿಟನ್ನಿನ ಜನರಲ್‌ ರೂಪರ್ಟ್‌ ಸ್ಮಿತ್‌ ಅವರ ಕೃತಿ ‘ದ ಯುಟಿಲಿಟಿ ಆಫ್ ಫೋರ್ಸ್‌’ ಸಾಕಷ್ಟು ಸುದ್ದಿ ಮಾಡಿತ್ತು. ಕೃತಿಯ ಮೊದಲ ನಾಲ್ಕು ಶಬ್ದಗಳ (ಯುದ್ಧ ಅಸ್ತಿತ್ವದಲ್ಲಿ ಇಲ್ಲ)  (War no longer exists)  ವಾಕ್ಯವು  ಹೆಚ್ಚು ಗಮನ ಸೆಳೆದಿತ್ತು.

‘ಸಾಂಪ್ರದಾಯಿಕವಾದ ದೊಡ್ಡ ಪ್ರಮಾಣದಲ್ಲಿ ನಡೆಯುವ ಯುದ್ಧದಲ್ಲಿ ಸಂಪೂರ್ಣ ವಿಜಯ ಸಾಧಿಸುವ ಉದ್ದೇಶದಿಂದ ಸೈನಿಕ ಮತ್ತು  ಭಾರಿ ಗಾತ್ರದ ಶಸ್ತ್ರಾಸ್ತ್ರಗಳ  ಮಧ್ಯೆ ನಡೆಯುವ ಯುದ್ಧದ ಸ್ವರೂಪ ಈಗ ಕೊನೆಗೊಂಡಿದೆ. ಈ ಸಂದರ್ಭದಲ್ಲಿನ ಯುದ್ಧಗಳು ಜನರ ಮಧ್ಯೆಯೇ ನಡೆಯಲಿವೆ ಎಂದು ಅವರು ಬರೆದಿದ್ದಾರೆ. ಹೊಸ ಕಾಲದ ಯುದ್ಧಗಳು ಕಡಿಮೆ ತೀವ್ರತೆ ಹೊಂದಿರುತ್ತವೆ. ಬೇರೆ ಬೇರೆ ಸಮಯದಲ್ಲಿ ಮತ್ತು ಪ್ರದೇಶದಲ್ಲಿ ಅಲ್ಲಲ್ಲಿ ಚದುರಿದಂತೆ ನಡೆಯುತ್ತವೆ. ದೊಡ್ಡ, ದೊಡ್ಡ ಸೇನೆಗಳು, ವಿನಾಶಕಾರಿ ಶಸ್ತ್ರಾಸ್ತ್ರಗಳು ಈ ಯುದ್ಧಗಳನ್ನು ಪರಿಸಮಾಪ್ತಿಗೊಳಿಸುವುದಿಲ್ಲ. ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹೊಂದಲು ದೇಶಗಳು ತಮ್ಮ ರಕ್ಷಣಾ ವೆಚ್ಚ ಹೆಚ್ಚಿಸಲು ಮಾಡುವ ಪ್ರಯತ್ನಗಳು ಯಾವುದೇ ಫಲ ನೀಡಲಾರವು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಯುದ್ಧಗಳು ಯಾವತ್ತೂ ಕೊನೆಗೊಳ್ಳುವುದೂ ಇಲ್ಲ. ಇದಕ್ಕೆ, ಇಸ್ರೇಲಿಗರು ತಮ್ಮ ನೆರೆಹೊರೆಯಲ್ಲಿ ಪ್ಯಾಲೆಸ್ಟೀನ್‌ ವಿರುದ್ಧ ಅಥವಾ ಅಮೆರಿಕವು ಅಫ್ಗಾನಿಸ್ತಾನದಲ್ಲಿ ನಡೆಸುತ್ತಿರುವ ಯುದ್ಧ ಇದೇ ಬಗೆಯದ್ದಾಗಿದೆ. ಕೆಲ ಸಂದರ್ಭಗಳಲ್ಲಿ ಯುದ್ಧೋತ್ಸಾಹಿ ಜನರನ್ನು ಎದುರಿಸಬೇಕಾದಾಗ ಇಂತಹ ಯುದ್ಧಗಳು ಇನ್ನಷ್ಟು ಸಂಕೀರ್ಣಗೊಳ್ಳುತ್ತವೆ. ನಮ್ಮ ಕಾಶ್ಮೀರದ ಉದಾಹರಣೆಯನ್ನೆ ತೆಗೆದುಕೊಂಡರೆ ಪಾಕಿಸ್ತಾನವು ‘ಎಲ್‌ಒಸಿ’ಯ ಎರಡೂ ಕಡೆಯ ಜನರನ್ನು ಇಂತಹ ಯುದ್ಧ ಕಾರ್ಯತಂತ್ರದಲ್ಲಿ ತೊಡಗಿಸಿದೆ.

‘ನಿರ್ದಿಷ್ಟ ದಾಳಿ’ಯ ತಂತ್ರಗಾರಿಕೆಯು, ಸೇನೆಯ ವ್ಯೂಹಾತ್ಮಕ ಯುದ್ಧ ತಂತ್ರದ ಯಶಸ್ಸಿಗೆ ಹೋಲಿಸಲಿಕ್ಕಾಗದು ಎನ್ನುವುದನ್ನು ಅರ್ಥೈಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಭಯೋತ್ಪಾದಕರ ಸಾವಿನ ಬಗ್ಗೆ ಪಾಕಿಸ್ತಾನವು ತಲೆಕೆಡಿಸಿಕೊಳ್ಳುವುದೇ ಇಲ್ಲ. ಇಂತಹ ಅಸಾಂಪ್ರದಾಯಿಕ ದಾಳಿ ಮೂಲಕ ಶತ್ರುಪಡೆಯನ್ನು ಎದೆಗುಂದಿಸುವ ಪ್ರಯತ್ನಗಳು ಪುನರಾವರ್ತನೆಗೊಳ್ಳುತ್ತಿರಬೇಕು. ಇದರಿಂದ ಭಾರತವು ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಬಲ್ಲದೇ? ಈ ಪ್ರಶ್ನೆಗೆ ಕಾಲಗರ್ಭದಲ್ಲಿ ಉತ್ತರ ಅಡಗಿದೆ.

ಸದ್ಯಕ್ಕೆ ದೇಶದಲ್ಲಿ ಎರಡು ಉದಾಹರಣೆಗಳು ಹೆಚ್ಚು ಜನಪ್ರಿಯವಾಗಿವೆ. ಇಸ್ರೇಲ್‌, ಪ್ಯಾಲೆಸ್ಟೀನ್‌ ಮೇಲೆ ನಡೆಸುವ ದಾಳಿ ಮತ್ತು ಅಮೆರಿಕದ ಡ್ರೋನ್‌ಗಳು ಅಫ್ಗಾನಿಸ್ತಾನ – ಪಾಕಿಸ್ತಾನ ಗಡಿಯಲ್ಲಿ ಹಾಗೂ ಐಎಸ್‌ ಉಗ್ರರ ನೆಲೆಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ಸೇನಾ ಸಾಮರ್ಥ್ಯ ದೃಷ್ಟಿಯಿಂದ ಅಸಮಾನತೆ ಇರುವ ಮತ್ತು ವೈಮಾನಿಕ ದಾಳಿಯಲ್ಲಿ ಮೇಲುಗೈ ಹೊಂದಿರುವ ಯುದ್ಧ ಭೂಮಿಯಲ್ಲಿ ಇಂತಹ ದಾಳಿ ನಡೆಯುತ್ತಿದೆ.

ಭಾರಿ ವಿನಾಶಕಾರಿಯಾದ ಮತ್ತು ದುಬಾರಿಯೂ ಆಗಿರುವ ಡ್ರೋನ್‌ ದಾಳಿಗೂ ಅದರದ್ದೇ ಆದ ಮಿತಿಗಳಿವೆ. ವೈಮಾನಿಕ ರಕ್ಷಣೆ ಇಲ್ಲದೇ ಇಂತಹ ದಾಳಿ ಯಶಸ್ವಿಯಾಗಲಾರವು. ಇಂತಹ ಸಂದರ್ಭದಲ್ಲಿ ಭಾರತವು ರಕ್ಷಣಾ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಗಣಿಸಬಹುದೇ. ಸದ್ಯಕ್ಕೆ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 2ಕ್ಕಿಂತ ಕಡಿಮೆ ಇರುವ ವೆಚ್ಚದ ಪ್ರಮಾಣವನ್ನು ದುಪ್ಪಟ್ಟುಗೊಳಿಸಬಹುದು.

1987–88ರಲ್ಲಿ ರಾಜೀವ್‌ ಗಾಂಧಿ ಅವರು ರಕ್ಷಣಾ ವೆಚ್ಚವನ್ನು ಶೇ 3.38ಕ್ಕೆ ಹೆಚ್ಚಿಸಿದ್ದರು. 1990–91ರಲ್ಲಿ ಅವರು ದೇಶಕ್ಕೆ ಆರ್ಥಿಕ ಬಿಕ್ಕಟ್ಟನ್ನೂ  ಕೊಡುಗೆಯಾಗಿ ನೀಡಿದ್ದರು.

ಗಡಿಯಾಚೆಗಿನ ಯುದ್ಧ ದಾಹದ ಸಾಂಕ್ರಾಮಿಕ ರೋಗ ತಡೆಗಟ್ಟಲು ಇದೊಂದೇ ಮಾರ್ಗವಾಗಿದ್ದರೆ ಭಾರತ ಈ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕೇ. ವೆಚ್ಚ ಕಡಿತಗೊಳಿಸುವ ಇತರ ಮಾರ್ಗೋಪಾಯಗಳು ಇವೆಯೇ ಎನ್ನುವುದನ್ನು ಪರಾಮರ್ಶಿಸಬೇಕಾಗಿದೆ. ‘ನಿರ್ದಿಷ್ಟ ದಾಳಿ’ಯ ವರ್ಷಾಚರಣೆಯಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳಿಗಿಂತ ಇಂತಹ ಸಂಗತಿಗಳ ಬಗ್ಗೆಯೇ ನಮ್ಮ ಯುದ್ಧ ಕಾರ್ಯತಂತ್ರ ಹೆಣೆಯುವ ರಕ್ಷಣಾ ಪರಿಣತರು ಹೆಚ್ಚು ಗಮನ ಹರಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)