ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನಾಗುತ್ತಿದೆ?

Last Updated 21 ನವೆಂಬರ್ 2016, 15:36 IST
ಅಕ್ಷರ ಗಾತ್ರ

ಇಂದಿನ ಮಂಗಳೂರಿನ ಚಾಳಿ ನಾಳೆ ರಾಜ್ಯಕ್ಕೆಲ್ಲಾ ಹರಡೀತು ಜೋಕೆ, ನಿರ್ಲಕ್ಷ್ಯ ಬೇಡ

**

ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಇಂದಿನ ಉಡುಪಿಯೂ ಸೇರಿದಂತೆ ಇರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮರಕ್ಷಣೆ, ಗೋರಕ್ಷಣೆ, ಸಂಸ್ಕೃತಿ ರಕ್ಷಣೆ, ಸ್ತ್ರೀರಕ್ಷಣೆ ಇತ್ಯಾದಿಗಳನ್ನು ನೆಪವಾಗಿಸಿಕೊಂಡು ನಡೆಯುತ್ತಿರುವ ದಾಂದಲೆ, ದಾಳಿ, ಹಿಂಸಾಚಾರ ಇತ್ಯಾದಿಗಳೆಲ್ಲಾ ತೀರಾ ಮಾಮೂಲಿಯಾಗಿ ಅವುಗಳು ಸುದ್ದಿಯೇ ಅಲ್ಲ ಎನ್ನುವ ಸ್ಥಿತಿ ಉಂಟಾಗಿ ಬಹಳ ಸಮಯವಾಯಿತು.

ಹೀಗೆಲ್ಲಾ ಆಗುವುದರ ಬಗ್ಗೆ ಯಾರಾದರೂ ಸಣ್ಣ ಆತಂಕ ವ್ಯಕ್ತಪಡಿಸಿದರೂ ಸಾಕು, ಅವರು ದೇಶದ್ರೋಹಿ, ಧರ್ಮದ್ರೋಹಿ, ಸಂಸ್ಕೃತಿ ವಿದ್ರೋಹಿ ಮುಂತಾದ ಬಿರುದು ಪಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಇಲ್ಲಿ ಬರೆಯಲಾಗದ ಪದಗಳನ್ನು ಬಳಸಿ ಅವರ  ಸಕಲ ಮೂಲಗಳನ್ನೂ ಪ್ರಶ್ನಿಸ ಲಾಗುತ್ತಿತ್ತು. ಇದಕ್ಕೆಲ್ಲಾ ಅಂಜಿ, ಪ್ರಶ್ನಿಸುತ್ತಿದ್ದವರೆಲ್ಲಾ ಸುಮ್ಮ ನಾದರು. ಇನ್ನು ಕೆಲವರು ಜಿಲ್ಲೆಯಲ್ಲಿ ನಡೆಯುವ ತುಳು ಹಾಸ್ಯ ನಾಟಕಗಳ ಮುಂದುವರಿದ ಭಾಗಗಳೋ ಎನ್ನು ವಷ್ಟು ಹಗುರವಾಗಿ ಇಂತಹ ಘಟನೆಗಳನ್ನು ಕಾಣತೊಡಗಿ ದರು. ಜನರ  ವಿಷಯ ಬಿಡಿ. ಇಂತಹ ಒಂದೊಂದು ಘಟನೆ ಯಿಂದಲೂ ವಿಚಲಿತಗೊಂಡು ಇವುಗಳ ವಿರುದ್ಧ ಸಮ ರೋಪಾದಿಯ ಕ್ರಮಗಳಿಗೆ ಮುಂದಾಗಬೇಕಿದ್ದ ಸರ್ಕಾರದ ಧೋರಣೆಯೂ ಕೆಟ್ಟ ಉದಾಸೀನದಿಂದ ಕೂಡಿತ್ತು.

ಈ ಸರ್ವತ್ರ ನಿರ್ಲಕ್ಷ್ಯ ನೀತಿ ಈಗ ಫಲ ನೀಡುತ್ತಿದೆ.  ಮೊದಲಿಗೆ ದಾಳಿ, ಏಟು, ಥಳಿತ ಇದ್ದದ್ದು ಈಗ ಇರಿತ, ತಿವಿತ, ರಕ್ತ ಎಂಬಂತಾಗಿದೆ. ನೇರವಾಗಿ ಹೇಳಬೇಕೆಂದಾ ದರೆ ದಕ್ಷಿಣ ಕನ್ನಡದಲ್ಲಿ ಹೆಣಗಳು ಉರುಳಲು ಪ್ರಾರಂಭ ವಾಗಿದೆ. ನಿನ್ನೆ ಜಿಲ್ಲೆಯ ಆ ಮೂಲೆಯಲ್ಲಿ, ಇಂದು ಈ ಮೂಲೆಯಲ್ಲಿ, ನಾಳೆ ಮತ್ತೆಲ್ಲೊ... ಪರಿಸ್ಥಿತಿ ಹೀಗೇ ಉಳಿದು ಮುಂದಿನ ಹಂತದಲ್ಲಿ ಏನೇನಾಗಬಹುದು ಎಂದು ಊಹಿಸಿದರೆ ಮನುಷ್ಯ ಮಾತ್ರರಿಗೆ ಆತಂಕ ಆಗಬೇಕು.

ಜಿಲ್ಲೆಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ದೊಡ್ಡ ಮಟ್ಟದ ಗಲಭೆಗಳಾಗದಿರಬಹುದು. ಅಷ್ಟರಮಟ್ಟಿಗೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡಿದ್ದಾರೆ ಎಂದುಕೊಳ್ಳೋಣ. ಆದರೆ ಒಂದು ಕಾಲದಲ್ಲಿ ಇಡೀ ದೇಶಕ್ಕೆ ಮಾದರಿಯಾಗಬಹುದಾದ ಮತೀಯ ಸಾಮರಸ್ಯದ ಚರಿತ್ರೆಯುಳ್ಳ ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಸಂಬಂಧ ದಿನದಿಂದ ದಿನಕ್ಕೆ ಕುಸಿದು ಅಪಾಯಕಾರಿ ಮಟ್ಟಕ್ಕೆ ಹೋಗುವ ಪೂರ್ವ ಸೂಚನೆಗಳು ಕಾಣಿಸುತ್ತಿವೆ. ಇದಕ್ಕೆ ಹಿಂದೂ ಕೋಮುವಾದ ಕಾರಣ ಎಂದು ಬಹುತೇಕ ಮುಸ್ಲಿಮರು ಮತ್ತು ಎಡಪಂಥೀಯರು ಹೇಳಿದರೆ, ಮುಸ್ಲಿಂ ಕೋಮುವಾದ ಕಾರಣ ಎಂದು ಬಹುತೇಕ ಹಿಂದೂಗಳು ತಿಳಿದುಕೊಂಡ ಹಾಗಿದೆ.

ಸಣ್ಣ ಪುಟ್ಟ ಮತೀಯ ವಿಚಾರಗಳಲ್ಲಿ ಆಳುವ ಪಕ್ಷಗಳು ನಿಷ್ಪಕ್ಷಪಾತ ಧೋರಣೆ ತಳೆಯದ ಕಾರಣ ಹಿಂದೂ ಕೋಮುವಾದ ಹುಟ್ಟಿಕೊಂಡಿತು, ಅದಕ್ಕೆ ಪ್ರತಿಯಾಗಿ ಮುಸ್ಲಿ೦ ಕೋಮುವಾದ ಹುಟ್ಟಿಕೊಂಡಿತು, ಈಗ ಎರಡೂ ಕಡೆಯವರು ಸ್ಥಿಮಿತ ಕಳೆದುಕೊಳ್ಳುತ್ತಿದ್ದು ಪರಿಸ್ಥಿತಿ ಕೈಮೀರುತ್ತಿದೆ ಎನ್ನುವುದು ಇನ್ನೊಂದು ವಾದ. ಒಟ್ಟಿನಲ್ಲಿ ಎಲ್ಲೂ ಇಲ್ಲದ ಒಂದು ರೀತಿಯ ಅಸುರಕ್ಷತೆಯ ಭಾವನೆ ಇಲ್ಲಿ ಎರಡೂ ಕೋಮುಗಳನ್ನು ಭಾದಿಸುತ್ತಿದೆ. ಅವರು ಅನ್ಯರು ಎನ್ನುವ ಭಾವನೆ ಎರಡೂ ಕಡೆ ಎಷ್ಟು ದಟ್ಟವಾಗಿದೆ ಎಂದರೆ ಉಳಿದೆಡೆ ತೀರಾ ಕ್ಷುಲ್ಲಕ ಎನಿಸಬಹುದಾದ ವಿಷಯಗಳೆಲ್ಲಾ ಇಲ್ಲಿ ಮತೀಯ ಬಣ್ಣ ಪಡೆಯುತ್ತಿರುವ ಗತಿ ನೋಡಿದರೆ ಈ ಪ್ರದೇಶದ ನಾಳೆಗಳ ಕುರಿತಾಗಿ ಭಯ ಹುಟ್ಟುತ್ತಿದೆ.

ಆಧುನಿಕ ಶಿಕ್ಷಣ, ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸಂಪರ್ಕ ಮನುಷ್ಯ ಸಮಾಜವನ್ನು ಸಂಕುಚಿತತೆಯಿಂದ ಮೇಲೆತ್ತುತ್ತದೆ ಎಂಬ ಆಶಾವಾದದ ಸಂಪೂರ್ಣ ಪತನವನ್ನು ಕಾಣಬೇಕಾದರೆ ದಕ್ಷಿಣ ಕನ್ನಡಕ್ಕೆ ಹೋಗಬೇಕು. ಪುರೋಗತಿಯ ತುತ್ತತುದಿಯಲ್ಲಿರುವ ದಕ್ಷಿಣ ಕನ್ನಡದಲ್ಲಿ  ಪಕ್ಕಾ ಆಫ್ಘಾನಿಸ್ತಾನದ ಮಾದರಿಯ, ಮಧ್ಯಯುಗವನ್ನು ನೆನಪಿಸುವ  ಘಟನಾವಳಿಗಳು ನಡೆಯುತ್ತವೆ ಎನ್ನುವಲ್ಲಿ ಆಧುನಿಕತೆಯ ಬಗೆಗಿನ ಎಲ್ಲಾ ಸಿದ್ಧಾಂತಗಳೂ ತಲೆಕೆಳಗಾಗಿ ಬಿದ್ದಂತಾಯಿತು. ಇಷ್ಟೆಲ್ಲಾ ಆಗುತ್ತಿದ್ದರೂ  ಇದರ ಮೂಲ ದಲ್ಲಿ ಪ್ರವಹಿಸುತ್ತಿರುವ ಕಾರಣಗಳು ಯಾವುವು ಎನ್ನುವು ದರ ಬಗ್ಗೆ ಸ್ಪಷ್ಟ ಕಲ್ಪನೆ ಯಾರಿಗೂ ಇದ್ದಂತಿಲ್ಲ.

ಅಕಾಡೆಮಿಕ್ ವಲಯದಲ್ಲಿ ಇರುವ ಕೆಲವರು ಸುಲಭವಾಗಿ ಎಲ್ಲದಕ್ಕೂ ಜಾಗತೀಕರಣವೇ ಕಾರಣ ಎಂದು ಬಿಡುತ್ತಾರೆ. ಇನ್ನು ಕೆಲವರು ಅಷ್ಟೇ ಸುಲಭವಾಗಿ  ಪ್ರಪಂಚದಾದ್ಯಂತ ಜನಸಮುದಾಯಗಳು ಬಲಪಂಥೀಯತೆಯೆಡೆಗೆ ವಾಲುತ್ತಿರುವುದರ ಪ್ರಖರ ರೂಪ ಇದು ಎಂದು ಕೈತೊಳೆದುಕೊಂಡು ಬಿಡುತ್ತಾರೆ. ಇನ್ನೂ ಕೆಲವರು ಸಮಸ್ಯೆಯ ಮೂಲವನ್ನು ಇಲ್ಲಿನ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ವಿವಿಧ ಸಮುದಾಯಗಳ ಮಧ್ಯೆ ಇರುವ ಪೈಪೋಟಿಯಲ್ಲಿ ಗುರುತಿಸುತ್ತಾರೆ. ಇನ್ನು ಪೊಲೀಸರದ್ದು   ಕೈಯಲ್ಲಿ ಲಾಠಿ ಮತ್ತು ಕಾಲಿನಲ್ಲಿ ಬೂಟು ಇದ್ದು ಬಿಟ್ಟರೆ ಎಂತಹ ಡೊಂಕುಗಳನ್ನೂ ನೇರವಾಗಿಸಬಹುದು ಎನ್ನುವ ಮನೋಸ್ಥಿತಿ. ಇವೆಲ್ಲವೂ ಅವರವರ ಮೂಗಿನ ನೇರಕ್ಕೆ ಸಮಸ್ಯೆಯನ್ನು ಅರ್ಥೈಸುವ ಪ್ರಕ್ರಿಯೆಗಳು. ಇಲ್ಲಿನ ಸಮಸ್ಯೆಯ ಆಳ ಅಗಲ ಇವರು ಯಾರೂ ತಿಳಿದುಕೊಂಡಷ್ಟು ನೇರ ಮತ್ತು ಸರಳ ಅಂತ ಅನ್ನಿಸುವುದಿಲ್ಲ.

ಬಹುಶಃ ಈ ಜಿಲ್ಲೆಗೊಂದು ಸಮರ್ಥ ರಾಜಕೀಯ ನಾಯಕತ್ವ ಇದ್ದಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಆದರೆ ಇಲ್ಲಿನ ರಾಜಕೀಯ ನಾಯಕತ್ವದ್ದು ಇನ್ನೊಂದು ದುರಂತ ಕತೆ. ಎಲ್ಲವನ್ನೂ ಗಳಿಸಿದ ಈ ಪ್ರದೇಶದ ಸಾಮಾಜಿಕ ಸಂಕೀರ್ಣತೆಯನ್ನು ಅರ್ಥೈಸಿಕೊಂಡು ಎಲ್ಲಾ ವರ್ಗಗಳ ಜನರಲ್ಲಿ ವಿಶ್ವಾಸ ಮೂಡಿಸಬಲ್ಲ ಒಬ್ಬನೇ ಒಬ್ಬ ರಾಜಕೀಯ ನಾಯಕ ಇಲ್ಲಿ ಸೃಷ್ಟಿಯಾಗಿಲ್ಲ, ಆಗುತ್ತಲೂ ಇಲ್ಲ. ಹೆಸರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದೆ. ಇಬ್ಬರೂ ಜಿಲ್ಲೆಯನ್ನು ಮತ್ತು ಅದರ ಕ್ಲಿಷ್ಟ ಅಸ್ಮಿತೆಯ ರಾಜಕೀಯವನ್ನು ಅದರ ಪಾಡಿಗೆ ಬಿಟ್ಟು ಅನಾಮಿಕ ಮತದಾರರೇ ಹೆಚ್ಚಿರುವ ಬೆಂಗಳೂರಿನ ಸುತ್ತಮುತ್ತಲ ಕ್ಷೇತ್ರಗಳಿಗೆ ಪಲಾಯನ ಮಾಡಿಬಿಟ್ಟಿದ್ದಾರೆ.

ಈಗಿನ ದಕ್ಷಿಣ ಕನ್ನಡದ ಎಂಟು ಮಂದಿ ಶಾಸಕರಲ್ಲಿ ಇಬ್ಬರು ಹಣವಿದೆ ಎನ್ನುವ ಕಾರಣಕ್ಕೆ ಶಾಸಕರಾದವರು. ಇನ್ನೊಬ್ಬರು ಅವರ ಧರ್ಮದ ಕಾರಣಕ್ಕೆ ಆರಿಸಿಬಂದವರು. ಇನ್ನೊಬ್ಬರಿಗೆ ತಂದೆ ಗಳಿಸಿದ ಹೆಸರಿದೆ. ಇನ್ನೊಬ್ಬರು ಅವರು ಶಾಸಕರು ಎಂದು ಯಾರಾದರೂ ಹೇಳಿ ಎಚ್ಚರಿಸಬೇಕಾದ ಸ್ಥಿತಿಯಲ್ಲಿರುವ ರಾಜಕೀಯ ‘ಮುಗ್ಧ’. ಉಳಿದ ಮೂವರು ಸ್ವಲ್ಪಮಟ್ಟಿಗೆ ಕೆಳಹಂತದಿಂದ ಬೆಳೆದ ನಾಯಕರು ಎಂದು ಹೇಳಬಹುದಾದರೂ ಇವರ್‍್ಯಾರಿಗೂ ರಾಜಕೀಯ ಸಮರ್ಪಕತೆಯನ್ನು (political correctness) ಮೀರಿ ಮಾತನಾಡುವ ಚಾತಿ ಇಲ್ಲ. ಯಾರಿಗೂ ಅವರ ಕ್ಷೇತ್ರದಿಂದಾಚೆಗೆ ಚಿಕ್ಕಾಸಿನ ಪ್ರಸಿದ್ಧಿಯೂ ಇಲ್ಲ. ಪಕ್ಕದ ಉಡುಪಿ ಜಿಲ್ಲೆಯ ಆಳುವ ಪಕ್ಷದ ಶಾಸಕರ ಕತೆ ಹೆಚ್ಚು ಕಡಿಮೆ ಹೀಗೆಯೇ. ಅಲ್ಲಿನ ಒಬ್ಬ ವಿಪಕ್ಷದ  ಶಾಸಕರನ್ನು ಸಮಸ್ಯೆಯ ಮೂಲದಲ್ಲಿ ಗುರುತಿಸಬೇಕಾದ ಕಾರಣ ಅವರಿಂದ ಪರಿಹಾರ ನಿರೀಕ್ಷಿಸುವ ಹಾಗಿಲ್ಲ. ಇನ್ನೊಬ್ಬರು ತಟಸ್ಥರು ಎಂದು ಎಲ್ಲರೂ ಹೇಳುತ್ತಾರೆ. ಒಟ್ಟಿನಲ್ಲಿ  ಈ ಪ್ರದೇಶದ ಅತ್ಯಂತ ಜ್ವಲಂತ ಮತ-ಸಂಘರ್ಷ ಸಮಸ್ಯೆಯ ಕುರಿತ೦ತೆ ಇವರೆಲ್ಲರದ್ದೂ ಗಾಂಧೀಜಿಯ ಮೂರು ಮಂಗಗಳ ಧೋರಣೆ. ಎಲ್ಲರೂ ನಾಯಕರಾಗಲಾರದ ಶಾಸಕರು.

ಇನ್ನು ದಕ್ಷಿಣ ಕನ್ನಡದಲ್ಲಿ ಕಾಲಿಟ್ಟಲ್ಲೆಲ್ಲಾ ಮಠ, ಮಂದಿರ, ಮಸೀದಿ, ಚರ್ಚು, ಬಸದಿಗಳು, ಭೂತಸ್ಥಾನಗಳು. ಶತಶತಮಾನದಿಂದ ಇರುವಂತಹವುಗಳು ಜತೆಗೆ  ಇತ್ತೀಚೆಗೆ ಇಂತಹ ಸಾವಿರಾರು ಧರ್ಮಸಂಸ್ಥಾನಗಳು ತಲೆ ಎತ್ತಿವೆ. ಬಹುಶಃ ತಲಾ ಲೆಕ್ಕ ಹಾಕಿದರೆ ಪ್ರಪಂಚದ ಇನ್ಯಾವುದೇ ಕಡೆ ಒಂದು ತಲೆಗೆ ಇಷ್ಟೊಂದು ಸಂಖ್ಯೆಯ ಧಾರ್ಮಿಕ ಸಂಸ್ಥೆಗಳು ಇರಲು ಸಾಧ್ಯವಿಲ್ಲ. ಇಲ್ಲಿನ ಪರಿಸ್ಥಿತಿ ಕೆಟ್ಟ ಕಾರಣಕ್ಕೆ ಇವೆಲ್ಲ ತಲೆ ಎತ್ತುತ್ತಿವೆಯೋ ಅಥವಾ ಇವುಗಳು ತಲೆ ಎತ್ತಿರುವ ಕಾರಣಕ್ಕೆ ಪರಿಸ್ಥಿತಿ ಕೆಟ್ಟಿತೋ ಎನ್ನುವುದನ್ನು ಜಿಲ್ಲೆಯ  ಜನ ಮೂಲದಿಂದ  ಆರಾಧಿಸುತ್ತಾ ಬಂದಿರುವ  ಭೂತ-ದೈವಗಳೇ ತಿಳಿಸಬೇಕು.

ಎದ್ದು ಕಾಣುವ ಸತ್ಯ ಏನು ಎಂದರೆ ಇಷ್ಟೆಲ್ಲಾ ಸಂಖ್ಯೆಯಲ್ಲಿ ಇರುವ ಧರ್ಮ ಸಂಸ್ಥಾನಗಳ ಮಧ್ಯದಿಂದ ಒಂದೇ ಒಂದು ಸಂಯಮದ ಧ್ವನಿ, ಸಮತೂಕದ ಸಂದೇಶ ಇನ್ನೂ ಯಾರಿಗೂ ಕೇಳಿಸಿಲ್ಲ ಎನ್ನುವುದು. ಈ ಧರ್ಮ ಸಾಮ್ರಾಜ್ಯಗಳ ಮುಖ್ಯಸ್ಥರು ಧರ್ಮದ ಮೇಲ್ಮೈಯಲ್ಲೇ ಅಕ್ಷರಶಃ ವ್ಯವಹಾರ ನಡೆಸುತ್ತಿರುವವರು. ಎಲ್ಲಾ ಧರ್ಮಗಳ ಆಳದಲ್ಲಿರುವ ಏಕತೆಯನ್ನು ಮತ್ತು ಮಾನವೀಯ ಆಶಯಗಳನ್ನೂ ಗುರುತಿಸಲಾರದ, ಒಂದು ರೀತಿಯ ಸೋತ ಸಂತರು. ಯಾಕೆಂದರೆ ಜಿಲ್ಲೆಯ ಚಾರಿತ್ರಿಕ ಧಾರ್ಮಿಕ ಸಾಮರಸ್ಯ ಇವರ ಮೂಗಿನ ಕೆಳಗೆ ತಲೆಕೆಳಗಾಗಿರುವುದು. ಈ ದುರಂತಕ್ಕೆ ಇವರೆಲ್ಲರೂ ನೇರವಾಗಿ ನೈತಿಕ ಹೊಣೆಗಾರರಾಗುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳದಲ್ಲಿ ಏನು ನಡೆಯಿತೋ ಅದು ಮುಂದೊಂದು ದಿನ ಇಡೀ ದೇಶದಲ್ಲಿ ನಡೆಯಲಿದೆ ಎನ್ನುವ ಮಾತಿತ್ತು. ಕರ್ನಾಟಕದ ಮಟ್ಟಿಗೆ ಈ ಮಾತನ್ನು ಮಂಗಳೂರಿಗೂ ಅನ್ವಯಿಸಿ ಹೇಳಬಹುದು. ಮಂಗಳೂರಿನಲ್ಲಿ ನಡೆದ ಹಲವು ಮಹತ್ವದ ಬೆಳವಣಿಗೆಗಳು ಮುಂದೆ ದೇಶವ್ಯಾಪಿ ನಡೆದಿವೆ. ಮೊದಲ ಕನ್ನಡ ಪತ್ರಿಕೆ ಹೊರಬಂದದ್ದು ಮಂಗಳೂರಿನಿಂದ. ದೇಶದೆಲ್ಲೆಡೆ ಬ್ಯಾ೦ಕಿಂಗ್ ಕ್ರಾಂತಿ ಆಗುವುದಕ್ಕೆ ಮೊದಲೇ ಈ ಪ್ರದೇಶದಲ್ಲಿ ಬ್ಯಾ೦ಕುಗಳ ಜಾಲ ವಿಸ್ತೃತವಾಗಿತ್ತು. ಇಂದಿನ ನಾಲ್ಕು ರಾಷ್ಟ್ರೀಕೃತ ಬ್ಯಾ೦ಕುಗಳು ಹುಟ್ಟಿಕೊಂಡದ್ದು ಈ ಪ್ರದೇಶದಲ್ಲಿ.  ಇಂದು ಇಡೀ ದೇಶದಲ್ಲಿ ಪ್ರವರ್ಧಮಾನವಾಗಿರುವ ಸ್ವಯ೦-ಸಂಪನ್ಮೂಲ ಆಧರಿತ ಶಿಕ್ಷಣ ಸಂಸ್ಥೆಗಳ - ಆಸ್ಪತ್ರೆಗಳ ವ್ಯವಸ್ಥೆಗೆ ಈ ಪ್ರದೇಶ ಮುನ್ನುಡಿ ಬರೆಯಿತು...

ಹೀಗೆ ಪ್ರತಿಯೊಂದರಲ್ಲೂ ಮುಂಚೂಣಿಯಲ್ಲಿ ನಿಲ್ಲುವ ಕೆಲಸವನ್ನು ಈಗ ಈ ಪ್ರದೇಶ ಇನ್ನೊಂದು ರೀತಿಯಲ್ಲಿ ಮುಂದುವರಿಸುತ್ತಿದೆ. ಅನೈತಿಕ ಪೊಲೀಸ್‌ಗಿರಿ, ಗೋಸಂರಕ್ಷಣೆಯ ಹೆಸರಲ್ಲಿ ನಡೆಯುವ ಅಮಾನವೀಯ ಕ್ರೌರ್ಯ, ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಹಿಜಾಬ್- ಕೇಸರಿ ಶಾಲುಗಳ ಮುಖಾಮುಖಿ. ಹೀಗೆ ಆಧುನಿಕ ಸಮಾಜದಲ್ಲಿ ಕಲ್ಪಿಸಿಕೊಳ್ಳಲಾಗದ ಹಲವು ಅಪಭ್ರಂಶಗಳು ಈ ಜಿಲ್ಲೆಯಲ್ಲಿ ಹುಟ್ಟಿಕೊಂಡು ರಾಜ್ಯವ್ಯಾಪಿಯಾಗುತ್ತಿವೆ. ಇವುಗಳಲ್ಲಿ ಕೆಲವು ರಾಜ್ಯದ ಗಡಿ ದಾಟಿವೆ.

ಒಂದು ಕಾಲಕ್ಕೆ ದೇಶದ ಪ್ರಮುಖ ನಗರಗಳಿಗೆ ಭೂಗತ ಜಗತ್ತಿನ ಕಾಲಾಳುಗಳನ್ನು ಕಳುಹಿಸಿ ಧನ್ಯವಾದಂತಹ, ಪರಶುರಾಮ ಸೃಷ್ಟಿಯದ್ದೆನ್ನಲಾದ  ಈ ನೆಲ, ಈಗ ಅದಕ್ಕಿಂತಲೂ ವಿನಾಶಕಾರಿಯಾದ ವೈರಸ್ಸೊಂದನ್ನು ಸೃಷ್ಟಿಸಿ ಹಬ್ಬಿಸುತ್ತಿದೆ ಇಂದು ಮಂಗಳೂರಿನಲ್ಲಿ ನಡೆದದ್ದು ನಾಳೆ ಎಲ್ಲೆಡೆ ನಡೆಯುವ ಹಿನ್ನೆಲೆ ಇರುವ ಕಾರಣ ಇಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ರಾಜ್ಯ ಸರ್ಕಾರ ವಿಶೇಷವಾಗಿ ಗಮನ ಹರಿಸುವ ಅಗತ್ಯ ಇರುವುದು. ಪರಿಸ್ಥಿತಿಯನ್ನು ಹೀಗೇ ಮುಂದುವರಿಯಲು ಬಿಟ್ಟರೆ ಮುಂದೊಂದು ದಿನ 1984ನ್ನು ದೆಹಲಿಯ ಜತೆ ಗುರುತಿಸುವಂತೆ, 2002ನ್ನು ಗುಜರಾತ್ ಜತೆ ಗುರುತಿಸುವಂತೆ, ಭವಿಷ್ಯದಲ್ಲಿ ದೂರವಿಲ್ಲದ ಒಂದು ವರ್ಷದ ಜತೆ ಕರ್ನಾಟಕವನ್ನು ಚರಿತ್ರೆ ಗುರುತಿಸುವ ಸ್ಥಿತಿ ಬರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಸ್ಪ್ಯಾನಿಷ್ ಬರಹಗಾರ ಗ್ಯಾಬ್ರಿಯೆಲ್ ಗ್ರಾಸಿಯಾ ಮಾರ್ಕ್ವೆಜ್ ಅವರ ‘ಕ್ರೋನಿಕ್ಲ್ ಆಫ್ ಆ ಡೆತ್ ಫೋರ್ ಟೋಲ್ಡ್’ (ಒಂದು ಸಾವಿನ ಪೂರ್ವ ವೃತ್ತಾ೦ತ) ಎನ್ನುವ ಒಂದು ಕಾದಂಬರಿ ಇದೆ. ಇದರ ಪ್ರಮುಖ ಪಾತ್ರ ಸಾ೦ಟಿಯಾಗೋ ನಾಸರ್ ಎಂಬುವನ ಕೊಲೆ ಆಗುತ್ತದೆ. ಹಾಗೆಂದು ಆತನ ಸುತ್ತಮುತ್ತ ಇದ್ದ  ಪ್ರತಿಯೊಬ್ಬರಿಗೂ ಮೊದಲೇ ಗೊತ್ತಿರುತ್ತದೆ. ಆದರೆ ಯಾರೂ ಅದನ್ನು ತಡೆಯಲು ಏನೂ ಮಾಡುವುದಿಲ್ಲ.  ಅದಕ್ಕೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಕಾರಣಗಳಿರುತ್ತವೆ. ಈಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಮತ್ತು ಅವುಗಳ ಕುರಿತಾದ ನಿರ್ಲಕ್ಷ್ಯವನ್ನು ನೋಡುತ್ತಿದ್ದರೆ ಇಡೀ ಜಿಲ್ಲೆಗೆ ಜಿಲ್ಲೆಯೇ ಸಾಂಟಿಯಾಗೋ ನಾಸರ್‌ನ ಪಾತ್ರದ ಸ್ಥಿತಿಯಲ್ಲಿ ಇರುವಂತೆ ತೋರುತ್ತದೆ.

ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಆಳವಾಗಿ ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯವಿದೆ. ಇದು ಕೇವಲ ಅಕಾಡೆಮಿಕ್ ನೆಲೆಯಲ್ಲಿ ನಡೆದರೆ ಸಾಲದು. ಇಂತಹ ಒಂದು ಅರ್ಥೈಸುವಿಕೆಗೆ ಬೇಕಾದ ಪರಿಕರಗಳು ಸಿಗುವಂತಾಗಬೇಕಾದರೆ ಸ್ವತಃ ಸರ್ಕಾರವೇ ಮುಂದೆ ನಿಂತು ಇದನ್ನು ಮಾಡಬೇಕಾಗುತ್ತದೆ ಮತ್ತು ಇದರಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಾ ಪಾಲ್ಗೊಳ್ಳಬೇಕಾಗುತ್ತದೆ.

ಹೀಗೆ ಆಳ ಅರ್ಥೈಸುವಿಕೆಯ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ  ನಡೆಯದಿದ್ದರೆ ಪೊಲೀಸರು ಎಂದಿನಂತೆ  ರೋಗ ಲಕ್ಷಣಕ್ಕೆ ತಮ್ಮದೇ ಆದ ಚಿಕಿತ್ಸೆ ಮಾಡುತ್ತಾ ಇರುತ್ತಾರೆ. ಒಳಗಡೆಯ ಅರ್ಬುದ ಬೆಳೆದು ದೊಡ್ಡ ಪೆಡಂಭೂತವಾಗಿ ಎಲ್ಲರನ್ನೂ  ಕಾಡಲಿದೆ. ಈಗಾಗಲೇ ಕೇಸರಿ ಅಬ್ಬರದ ಮುಂದೆ ನಿಸ್ತೇಜವಾಗಿರುವ ದಕ್ಷಿಣ ಕನ್ನಡದ ಅಪಾರ ಅಮಾನುಷ ಶಕ್ತಿಯ ಭೂತ-ದೈವಗಳೂ  ಆಗ ಜಿಲ್ಲೆಯನ್ನು ರಕ್ಷಿಸಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT