ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನೋಟು, ಹಳೆಯ ಸವಾಲು

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಇನ್ನೆರಡು ದಿನ ಕಳೆದರೆ ಐನೂರು ಮತ್ತು ಸಾವಿರ ರೂಪಾಯಿಗಳ ನೋಟು ಅಮಾನ್ಯಗೊಂಡು ಪ್ರಾರಂಭವಾದ ಆರ್ಥಿಕ ಸಂಚಲನದ ಪರ್ವಕ್ಕೆ ಒಂದು ತಿಂಗಳು ತುಂಬುತ್ತದೆ.
 
ಬರಬರುತ್ತಾ ಒಂದೊಂದೇ  ವಿಚಾರ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಅತೀ ಹೆಚ್ಚು ಸ್ಪಷ್ಟವಾದ ವಿಷಯ ಇಷ್ಟು: ಸರ್ಕಾರದ ಯಾವುದೇ ನಿರ್ಧಾರವಿರಲಿ, ಅದರ ಬಗ್ಗೆ  ಹೊಗಳುವುದಕ್ಕೆ ಮತ್ತು ತೆಗಳುವುದಕ್ಕೆ ಒಂದು ಮಿತಿ ಬೇಕು. ಇದೊಂದು ಸ೦ಸ್ಕಾರ ಈ ಮೂಲಕವಾದರೂ ಸಮಕಾಲೀನ ಭಾರತೀಯ ಸಂಸ್ಕೃತಿಯಲ್ಲಿ ಸಂಚಯವಾದರೆ, ಕಪ್ಪುಹಣ ನಿಯಂತ್ರಣಕ್ಕೆ ಬಂದರೆ ಆಗುವಷ್ಟೇ ದೊಡ್ಡ ಸಾಧನೆ ಅದು. 
 
ದಶಕಗಳ ಹಿಂದೆ ದೂರದರ್ಶನದಲ್ಲಿ ಒಂದು ಹಾಡು ಪ್ರಸಾರವಾಗುತ್ತಿತ್ತು. ಅದು ಯಾವುದೋ ಧಾರಾವಾಹಿಯ ಶೀರ್ಷಿಕೆ ಹಾಡು ಇದ್ದಿರಬೇಕು. ನೆನಪಲ್ಲಿ ಉಳಿದ ಹಾಗೆ ಅದು ಹೀಗೆ ಸಾಗುತ್ತದೆ: ‘ನಮ್ಮ ನಿಮ್ಮ ನಡುವೆ ಸಾವಿರ ಪ್ರಶ್ನೆಗಳು, ನಮ್ಮ ನಿಮ್ಮ ನಡುವೆ ನೋವಿನ ಚಿತ್ರಗಳು’. ನೋಟು ಅಮಾನ್ಯಗೊಂಡಾಕ್ಷಣದಿಂದ  ಈತನಕದ ಸಮಸ್ತ ವಿದ್ಯಮಾನಗಳನ್ನೂ ಹೀಗೆಯೇ ವರ್ಣಿಸಬಹುದು. ಅಲ್ಲಿ ಸಾವಿರ ಸಾವಿರ ಪ್ರಶ್ನೆಗಳಿದ್ದವು.
 
ನೋವಿನ ಚಿತ್ರಗಳಿದ್ದವು. ವಿರೋಧ ಪಕ್ಷಗಳು ನೋವಿನ ಚಿತ್ರಗಳನ್ನೇ ಹಿಡಿದು ರಾಜಕೀಯ ನಡೆಸಿ ಸಾವಿರ ಪ್ರಶ್ನೆಗಳನ್ನು ಕಡೆಗಣಿಸಿಬಿಟ್ಟವು. ಹೇಳಿ ಕೇಳಿ ಇದು ಯುದ್ಧೋನ್ಮಾದದ ಕಾಲ. ಯುದ್ಧ ಮಾಡಿದವ ದೊಡ್ಡ ನಾಯಕನಾಗುತ್ತಾನೆ. ಆದುದರಿಂದ ದೊಡ್ಡ ನಾಯಕರು ಯುದ್ಧ ಮಾಡಬೇಕಾಗುತ್ತದೆ. ಅಥವಾ ಮಾಡಬಹುದಾದ ಎಲ್ಲವನ್ನೂ ಯುದ್ಧೋಪಾದಿಯಲ್ಲೇ ಮಾಡಬೇಕಾಗುತ್ತದೆ. ಯುದ್ಧೋನ್ಮಾದದಲ್ಲಿ ನೋವಿನ ಸ್ಥಾನ ಗೌಣ. ನೋವು ಅನುಭವಿಸುವವರಿಗೂ, ನೋವು ನೋಡುವವರಿಗೂ ನೋವಲ್ಲ ಎನಿಸುವ ದಿವ್ಯ ಸ್ಥಿತಿ ಅದು.
 
ವಿರೋಧ ಪಕ್ಷಗಳು ಇದನ್ನು ಊಹಿಸಿರಲಿಲ್ಲವೋ ಅಥವಾ ಊಹಿಸಿದವರಿಗೆ ಅಲ್ಲಿ ಸ್ಥಾನವಿರಲಿಲ್ಲವೋ. ಅಂತೂ ಜನರ ನೋವನ್ನು ಬಂಡವಾಳವಾಗಿಸಿಕೊಂಡು ನೋಟುಗಳ ಅಮಾನ್ಯತೆಯ ಸುತ್ತ ರಾಜಕೀಯದಾಟ ನಡೆಸಲು ಹೋದ ಅವು, ಕೇಳಬೇಕಾದ ಪ್ರಶ್ನೆಗಳನ್ನು ಕೇಳಲೇ ಇಲ್ಲ. ಅತ್ಯಂತ ಗಾಢವೂ ನಿಗೂಢವೂ ಆಗಿದ್ದ ಸರ್ಕಾರದ ಕ್ರಮವನ್ನು ಅಷ್ಟೇ ಗಾಢವಾಗಿಯೂ, ಪ್ರಖಾಂಡವಾಗಿಯೂ ಪ್ರಶ್ನಿಸಿ ಉತ್ತರ ಅಪೇಕ್ಷಿಸುವ ಮೂಲಕ ಕೊನೆಗೂ ಭಾರತದ ರಾಜಕೀಯ ಚರ್ಚೆಯ ಮಟ್ಟವನ್ನು ಎತ್ತರಿಸಲು ಒದಗಿಬಂದಿದ್ದ  ಅವಕಾಶವನ್ನು ಅಕ್ಷರಶಃ ಅಮಾನ್ಯಗೊಳಿಸಿವೆ. ಕೇಳಿಸಿದ್ದೆಲ್ಲವೂ ಬರಿಯ ಗುಲ್ಲು.
 
ಯಾವುದೇ ನಿಯಂತ್ರಣ ಇಲ್ಲದೆ ಟೀಕಿಸುವ ನಾಯಕರ ವಿಚಾರ ಇರಲಿ. ಅಗ್ಗದ ಪ್ರತಿಭಟನೆ ನಡೆಸುವವರ ವಿಚಾರವೂ ಹಾಗಿರಲಿ. ಅತ್ಯಂತ ನಿರಾಶೆ ಮೂಡಿಸಿದ್ದು ಮನಮೋಹನ್‌ ಸಿಂಗ್ ಅವರು ರಾಜ್ಯಸಭೆಯಲ್ಲಿ ಆಡಿದ ಮಾತುಗಳು.
 
ಅರ್ಥವ್ಯವಸ್ಥೆಯಲ್ಲಿ ಶೇಕಡ 86ರಷ್ಟಿದ್ದ ನೋಟುಗಳನ್ನು ಚುನಾಯಿತ ಸರ್ಕಾರವೊಂದು ಏಕಾಏಕಿ ಅಮಾನ್ಯ ಮಾಡಿದ್ದು ಪ್ರಪಂಚದಲ್ಲೇ ಇದು ಮೊದಲು ಹೇಗೋ, ಹಾಗೆಯೇ ಮಹಾ ಮೇಧಾವಿ ಅರ್ಥಶಾಸ್ತ್ರಜ್ಞರಿಗೂ ಅರ್ಥೈಸಲು ಕಷ್ಟವಾಗುವಷ್ಟು ಸೂಕ್ಷ್ಮವೂ, ಸಂಕೀರ್ಣವೂ ಆದ ಈ ಕ್ರಮದ ಬಗ್ಗೆ ಇದಮಿತ್ತಂ ಎಂದು ಮಾತನಾಡಬಲ್ಲಷ್ಟು ಅರ್ಹತೆ ಹೊಂದಿದ್ದ ವ್ಯಕ್ತಿ ಇಡೀ ಪ್ರಪಂಚದಲ್ಲಿ ಯಾರಾದರೂ ಇದ್ದರೆ ಅದು ಮನಮೋಹನ್ ಸಿಂಗ್ ಮಾತ್ರ.
 
ಇಂತಹ ಒಂದು ನಿರ್ಧಾರದ ಸುತ್ತ ಇರುವ ಎಲ್ಲಾ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದ ಏಕೈಕ ಅರ್ಥಶಾಸ್ತ್ರಜ್ಞ ಅವರು. ರಿಸರ್ವ್‌ ಬ್ಯಾಂಕಿನ ಗವರ್ನರ್,  ಮುಖ್ಯ ಆರ್ಥಿಕ ಸಲಹೆಗಾರ, ಕೇಂದ್ರ ವಿತ್ತ ಕಾರ್ಯದರ್ಶಿ, ಕೇಂದ್ರ ವಿತ್ತ ಸಚಿವ, ಕೊನೆಗೆ ಪ್ರಧಾನಿ- ಇವಿಷ್ಟೂ ಹುದ್ದೆಗಳನ್ನು ನಿರ್ವಹಿಸಿದ ಇನ್ನೊಬ್ಬ ಅರ್ಥಶಾಸ್ತ್ರಜ್ಞ ಪ್ರಪಂಚದಲ್ಲೇ ಇರಲಾರ.
 
ಇಷ್ಟೆಲ್ಲಾ ಇದ್ದ ಅವರೂ ಹೇಳಿದ್ದು, ಜನರಿಗೆ ತೊಂದರೆಯಾಗಿದೆ, ಅನುಷ್ಠಾನ ಸರಿಯಾಗಿಲ್ಲ ಅಂತ. ಇಷ್ಟು ಹೇಳಲು ಅವರೇ ಬೇಕಿತ್ತೆ? ನಿಜ, ಜಿಡಿಪಿ ಶೇ 2ರಷ್ಟು  ಕುಸಿಯಬಹುದು ಎಂದೂ ಹೇಳಿದರು. ಆದರೆ ಅದನ್ನು ವಿವರಿಸಲಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ‘ಇದೊಂದು ಸಂಘಟಿತ ಲೂಟಿ, ಕಾನೂನುಬದ್ಧ ದರೋಡೆ’ ಎಂದರು. ಕಠಿಣ ನುಡಿಗಳು.
 
ಕೇವಲ ಪದಗಳನ್ನು ಬಳಸಿದರೆ ಸಾಕೇ? ಹೇಗೆ ಇದು ಲೂಟಿ, ದರೋಡೆ ಅಂತ ವಿವರಿಸಬೇಡವೇ? ಅವರು ವಿವರಿಸಿದ್ದರೆ ಇಡೀ ದೇಶ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳುತ್ತಿತ್ತು. ವಿವರಿಸಲಾಗದಿದ್ದರೆ ಏನೂ ಹೇಳದೆ ಸುಮ್ಮನಿರಬಹುದಿತ್ತು. ಅತ್ಯಂತ ಗಹನವಾದ ವಿಚಾರದ ಮೇಲೆ ಸಂಸತ್ತಿನಲ್ಲಿ ನಡೆದ ಚರ್ಚೆಯನ್ನು ಬೀದಿ ಬೈಗುಳದ ಮಟ್ಟಕ್ಕೆ ಇಳಿಸುವ ಕೆಲಸ ಮಾಡಬಾರದಿತ್ತು.
 
ಅವರಿಗೆ ವಯಸ್ಸು 80 ದಾಟಿದೆ,  ಪದಗಳು ತಡವರಿಸುತ್ತವೆ ಎನ್ನುವ ಕಾರಣವಿದ್ದರೂ ಇದ್ದೀತು. ಆದರೆ ಮಾತನಾಡಿದಷ್ಟರಲ್ಲೇ ತೂಕವಾದದ್ದನ್ನು ಹೇಳಬಹುದಿತ್ತು. ಆ ಮೂಲಕ ಅವರಿಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡಿದ ಕಾಂಗ್ರೆಸ್ ಮತ್ತು ದೇಶದ ಋಣ ತೀರಿಸಬಹುದಿತ್ತು. ಆದರೆ ಅವರು ಹೇಳಬಾರದ್ದನ್ನು ಹೇಳಿ ಅಥವಾ ಹೇಳಬೇಕಾದದ್ದನ್ನು ಹೇಳಬಾರದ ರೀತಿಯಲ್ಲಿ ಹೇಳಿ ಮತ್ತೊಮ್ಮೆ ಅವರ ಪಕ್ಷ ಜನರ ದೃಷ್ಟಿಯಲ್ಲಿ ಸಣ್ಣದಾಗುವ ಹಾಗೆ ಮಾಡಿದರು.
 
ಇನ್ನು ಸರ್ಕಾರದ ಈ ಕ್ರಮವನ್ನು ಯಾವುದೇ ಪ್ರಶ್ನೆಎತ್ತದೆ ಮೆಚ್ಚಿಕೊಳ್ಳುವವರು ಒಂದು ವಿಷಯವನ್ನು ಸ್ಪಷ್ಟಪಡಿಸಬೇಕಾಗಿದೆ. ಅವರು ಮೆಚ್ಚಿಕೊಂಡದ್ದು ಯಾವುದನ್ನು? ಈ ಕ್ರಮದ ಹಿಂದಿನ ಉದ್ದೇಶಗಳನ್ನೇ?  ಉದ್ದೇಶಗಳನ್ನು ಈಡೇರಿಸಲು ಆರಿಸಿಕೊಂಡ ಮಾರ್ಗವನ್ನೇ?
 
ಸರ್ಕಾರ ಹೇಳುವಂತೆ ನೋಟು ಅಮಾನ್ಯಗೊಳಿಸಿದ್ದರ ಹಿಂದಿನ ಉದ್ದೇಶ ಪ್ರಮುಖವಾಗಿ ಮೂರು: ಮೊದಲನೆಯದ್ದು, ಕಪ್ಪುಹಣ ಮತ್ತು ಅದರ ಬಳಕೆಯನ್ನು (ಭಯೋತ್ಪಾದನೆ ಸೇರಿದಂತೆ) ನಿಯಂತ್ರಿಸುವುದು. ಎರಡನೆಯದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು. ಮೂರನೆಯದ್ದು, ನಕಲಿ ನೋಟುಗಳನ್ನು ಕಿತ್ತೆಸೆಯುವುದು. ಈ ಉದ್ದೇಶಗಳನ್ನು ಯಾರು ಕೂಡಾ ಪ್ರಶ್ನಿಸುವ ಹಾಗಿಲ್ಲ.
 
ಇವು ಮೂರೂ ಸರ್ಕಾರ ಮಾಡಲೇಬೇಕಾದ ಕೆಲಸಗಳು. ಆದರೆ ಪ್ರಶ್ನೆ ಇರುವುದು ಈ ಉದ್ದೇಶಗಳನ್ನು ನೆರವೇರಿಸಿಕೊಳ್ಳಲು ಸಾವಿರಾರು ಅಗೋಚರ, ಅನಿರೀಕ್ಷಿತ ಪರಿಣಾಮಗಳುಳ್ಳ ನೋಟುಗಳ ಅಮಾನ್ಯತೆಯಂತಹ ಕ್ರಮಕ್ಕೆ ಸರ್ಕಾರ   ಮುಂದಾಗಬೇಕಿತ್ತೇ ಎನ್ನುವುದು. ನೋಟುಗಳು ಈಗಾಗಲೇ ಅಮಾನ್ಯಗೊಂಡಿವೆ. ಈ ಕ್ರಮದಿಂದ ಹಿಂದೆ ಸರಿಯುವ೦ತಿಲ್ಲ. ಇನ್ನು ಏನಿದ್ದರೂ ಪರಿಣಾಮಗಳನ್ನು ನಿಭಾಯಿಸಬೇಕಷ್ಟೆ. ಆದುದರಿಂದ ಮೇಲಿನ ಪ್ರಶ್ನೆಯನ್ನು ಸ್ವಲ್ಪ ಬದಲಾಯಿಸಿ ಈಗ ಕೇಳಬೇಕಿದೆ.  ನೋಟು ಅಮಾನ್ಯ ಮಾಡಿದ್ದರಿಂದ ಸರ್ಕಾರದ ಉದ್ದೇಶಿತ ಮೂರು ಗುರಿಗಳು ಎಷ್ಟರಮಟ್ಟಿಗೆ ಈಡೇರಲು ಸಾಧ್ಯ ಎನ್ನುವುದೇ ಆ ಪ್ರಶ್ನೆ. 
 
ಮೊದಲನೆಯದಾಗಿ ಕಪ್ಪುಹಣದ ವಿಚಾರ. ಈ ದೇಶದ ಸಾಮಾನ್ಯ ಜನ ಕಪ್ಪುಹಣ ಎಂದರೆ ಭ್ರಷ್ಟಾಚಾರ, ಕಾಳದಂಧೆ ಮುಂತಾದ ವಾಮಮಾರ್ಗಗಳಿಂದ ಯಾರೋ ಸಂಪಾದಿಸಿದ ಸಂಪತ್ತು ಮಾತ್ರ ಅಂದುಕೊಂಡಿದ್ದಾರೆ. ‘ಅದನ್ನು ಮಟ್ಟಹಾಕುವುದಿದ್ದರೆ ನಾವ್ಯಾಕೆ ಸಹಕರಿಸಬಾರದು’ ಎಂದು ಎಲ್ಲ ನೋವುಗಳನ್ನು ಅನುಭವಿಸಲು ಸನ್ನದ್ಧರಾಗಿದ್ದಾರೆ. ಆದರೆ ಈ ಕಪ್ಪುಹಣ ಬಿಳಿಹಣದ ಕತೆ ಜನ ಅಂದುಕೊಂಡಷ್ಟು ಸರಳವಲ್ಲ. ತೆರಿಗೆ ನೀಡದೆ ಉಳಿಸಿದ ಸಕ್ರಮ ಗಳಿಕೆ ಕೂಡಾ ಕಪ್ಪುಹಣವಾಗುತ್ತದೆ.
 
ಕಪ್ಪುಹಣದ ಸೃಷ್ಟಿ  ಯಾವ ರೀತಿಯ ಸಂಪಾದನೆ ಎನ್ನುವ ಒಂದೇ ಅಂಶವನ್ನು ಆಧರಿಸಿಲ್ಲ. ಯಾರ ಸಂಪಾದನೆ ಎನ್ನುವ ಆಧಾರದಲ್ಲೂ ಕಪ್ಪುಹಣ ಸೃಷ್ಟಿಯಾಗುತ್ತದೆ. ಒಬ್ಬ ಕೃಷಿಕ ಎಷ್ಟು ಸಂಪಾದಿಸಿ ಪೇರಿಸಿಟ್ಟರೂ ಅದು ಕಪ್ಪುಹಣ ಆಗುವುದಿಲ್ಲ. ಯಾಕೆಂದರೆ ಕೃಷಿ ಆದಾಯಕ್ಕೆ ತೆರಿಗೆ ಇಲ್ಲ. ಆದರೆ ಒಬ್ಬ ವಕೀಲ, ವೈದ್ಯ, ವ್ಯಾಪಾರಿ ತನ್ನ ಆದಾಯ ಎಷ್ಟು ಎಂದು ಸರ್ಕಾರಕ್ಕೆ ತಿಳಿಸಿ ಅದಕ್ಕೆ ಸರಿಯಾದ ತೆರಿಗೆ ನೀಡದೆ ಇದ್ದರೆ ಅದು ಕಪ್ಪುಹಣ ಆಗುತ್ತದೆ.
 
ವಾಮಮಾರ್ಗದಿಂದ ಸಂಪಾದಿಸಿದವರು ತಮ್ಮ ಸಂಪಾದನೆಯ ಮೂಲ ತಿಳಿಸಲಾಗದೆ ಆದಾಯವನ್ನು ಸರ್ಕಾರಕ್ಕೆ ತಿಳಿಸುವುದಿಲ್ಲ. ಸಕ್ರಮ ಮಾರ್ಗದಿಂದ ಸಂಪಾದಿಸಿದವರು ವೃಥಾ  ಸರ್ಕಾರಕ್ಕೆ ಯಾಕೆ ಪಾಲು ನೀಡಬೇಕು ಎಂದು ಸರ್ಕಾರಕ್ಕೆ ಆದಾಯ ಘೋಷಿಸುವುದಿಲ್ಲ. ಇದರ ಜತೆಗೆ ಸಾಮಾನ್ಯ ಜನ ಬಿಲ್ ಪಡೆಯದೇ ನಡೆಸುವ ಖರೀದಿ, ಜಮೀನು ಕೊಳ್ಳುವಾಗ ಸ್ಟ್ಯಾಂಪ್ ಡ್ಯೂಟಿ ಉಳಿಸಲು ನೀಡಿದ ಬೆಲೆಯನ್ನು ಸರಿಯಾಗಿ ಹೇಳದಿರುವುದು ಎಲ್ಲವೂ ಕಪ್ಪುಹಣದ ಮೂಲಗಳು. ಕಪ್ಪುಹಣ ವ್ಯವಸ್ಥೆಯಲ್ಲಿ ನಿರಂತರವಾಗಿ ಸೃಷ್ಟಿಯಾಗುತ್ತಿರುತ್ತದೆ. ಅದರಲ್ಲಿ ಸಮಸ್ತ ಭಾರತೀಯರೂ ಒಂದಲ್ಲ ಒಂದು ರೀತಿಯಲ್ಲಿ ಪಾಲುದಾರರು.
 
ಕಪ್ಪುಹಣ ಸೃಷ್ಟಿಯಾಗುವ ಮೂಲಗಳು ಹಳೆಯ ನೋಟುಗಳ ಚಲಾವಣೆ ನಿಂತ ಕೂಡಲೇ ಸ್ತಬ್ಧವಾಗುವುದಿಲ್ಲ. ಹಿಂದೆ ಪೇರಿಸಿಟ್ಟ ಕಪ್ಪುಹಣವನ್ನು ಹೇಗಾದರೂ ಹೊರತಂದು, ಹೆಚ್ಚಿನ ತೆರಿಗೆ ವಿಧಿಸಿ ವ್ಯವಸ್ಥೆಯೊಳಗೆ ತರಬೇಕು ಎಂಬ ಸೀಮಿತ ಉದ್ದೇಶವಷ್ಟೇ ಹಳೆ ನೋಟುಗಳ ಅಮಾನ್ಯತೆಯಿಂದ ಸಾಧ್ಯ. ಆದರೆ ಅದೂ ಸಾಧ್ಯವಾಗದಂತೆ  ಪೇರಿಸಿಟ್ಟ ಹಣ ಒಳಗಿಂದೊಳಗೆ ಹೊಸನೋಟುಗಳಾಗಿ ಪರಿವರ್ತನೆ ಆಗುತ್ತಿದೆ.
 
ಅಲ್ಲಲ್ಲಿ ನಡೆಯುವ ದಾಳಿಗಳಿ೦ದ ಇವೆಲ್ಲಾ ತಹಬಂದಿಗೆ ಬರುತ್ತವೆ ಎಂದುಕೊಳ್ಳುವುದು ಭ್ರಮೆ. ಅಷ್ಟೇ ಅಲ್ಲ, ಕಪ್ಪುಹಣ ಬಿಳುಪಾಗಿಸುವ ಎಷ್ಟೋ ಮೂಲಗಳ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಧಾರ್ಮಿಕ ಸಂಸ್ಥೆಗಳು ಈ ಕೆಲಸಕ್ಕೆ ಬಳಕೆಯಾಗುತ್ತಿವೆ ಎನ್ನುವ ಆಪಾದನೆ ಬಹಳ ಹಳೆಯದು. ಆದರೆ ನ.8ರ ನಂತರ ಧಾರ್ಮಿಕ ಸಂಸ್ಥೆಗಳಲ್ಲಿ (ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೊರತುಪಡಿಸಿ) ಶೇಖರಣೆಯಾದ ದೈವದ್ರವ್ಯ ಎಷ್ಟು ಎನ್ನುವ ಸಣ್ಣ ಕುತೂಹಲ ಕೂಡಾ ಯಾರಿಗೂ ಇದ್ದಂತಿಲ್ಲ. 
 
ಇಲ್ಲಿ ಧರ್ಮದ್ರೋಹ, ದೈವದ್ರೋಹ, ದೇಶದ್ರೋಹ ಏನೂ ಇಲ್ಲ. ಎಲ್ಲಾ ಧರ್ಮಗಳಿಗೆ ಸೇರಿದ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಶ್ನೆಯಾದ ಕಾರಣ ತುಷ್ಟೀಕರಣದ ನೆಪವೂ ಇಲ್ಲ.
 
ಆದರೂ ಈ ವಿಷಯದಲ್ಲಿ ವಿಲಕ್ಷಣ ಮೌನ. ಇನ್ನು ಕಾಳಧನ ಬೇರೆ, ಕಾಳ ಸಂಪತ್ತು ಬೇರೆ. ಕಾಳಸಂಪತ್ತಿನ ಸಣ್ಣ ಪ್ರಮಾಣ ಮಾತ್ರ ಕಾಳಧನದ ರೂಪದಲ್ಲಿರುತ್ತದೆ. ಕಾಳ ಸಂಪತ್ತಿಗೆ ಸವಾಲ್ ಹಾಕುವ ಕೆಲಸ ಮುಂದಿದೆ ಎನ್ನುತ್ತಾರೆ. ಹಾಗಾದರೆ ಅದಕ್ಕೆ ಮೊದಲೇ ನೋಟಿನ ಅಮಾನ್ಯತೆ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಉಳಿಯುತ್ತದೆ. 

ನಗದುರಹಿತ ಅರ್ಥವ್ಯವಸ್ಥೆಯನ್ನು ಕಟ್ಟುವ ಭರವಸೆಯನ್ನು ಸರ್ಕಾರ ನೀಡುತ್ತಿದೆ.   ಅದು ಸಾಧ್ಯ ಎಂದಿಟ್ಟುಕೊಂಡರೂ ಅದಕ್ಕೆ ಪೂರ್ವಭಾವಿಯಾಗಿ ನೋಟುಗಳನ್ನು ಅಮಾನ್ಯ ಮಾಡುವ ಅಗತ್ಯ ಕಾಣುತ್ತಿಲ್ಲ. ಅಷ್ಟಕ್ಕೂ ಅರ್ಥಶಾಸ್ತ್ರೀಯವಾಗಿ ಇದು ನೋಟುಗಳ ಅಮಾನ್ಯಗೊಳಿಸುವಿಕೆ ಅಲ್ಲ. ಈಗ ಆಗುತ್ತಿರುವುದು ಹಳೆಯ ನೋಟುಗಳನ್ನು ಹಿಂತೆಗೆದು ಹೊಸ ನೋಟುಗಳನ್ನು ನೀಡುವ ಕೆಲಸ.
 
ಇನ್ನು  ಹಳೆ ನೋಟುಗಳಲ್ಲಿ ನಡೆದ ಭ್ರಷ್ಟಾಚಾರ ಹೊಸ ನೋಟುಗಳಲ್ಲಿ ನಡೆಯಬಾರದೆಂದೇನೂ ಇಲ್ಲ. ಅದು ಪ್ರಾರಂಭವಾಗಿದೆ. ಭ್ರಷ್ಟಾಚಾರದಲ್ಲಿ ಎಂಥೆಂಥ ಆವಿಷ್ಕಾರಗಳೆಲ್ಲಾ  ನಡೆಯುತ್ತವೆ ಎಂದರೆ, ಒಂದು ವೇಳೆ ಅರ್ಥವ್ಯವಸ್ಥೆಯನ್ನು ಸಂಪೂರ್ಣ ನಗದುರಹಿತಗೊಳಿಸಿದರೂ ಅದು ಇನ್ಯಾವುದೋ ರೀತಿ ಕಾಣಿಸಿಕೊಳ್ಳಬಹುದು.
 
ಮೂರನೆಯ ಉದ್ದೇಶ ನಕಲಿ ನೋಟುಗಳ ಹಾವಳಿ ತಡೆಯುವುದು. ಹೊಸ ನೋಟುಗಳು ಈಗಾಗಲೇ ನಕಲಿಯಾಗುತ್ತಿವೆ. ಹಳೆ ನೋಟುಗಳನ್ನು ಕಳ್ಳಕಾಕರು ನಕಲಿ ಮಾಡುತ್ತಿದ್ದರೆ, ಹೊಸ ನೋಟುಗಳನ್ನು ಕೆಲವು ಪ್ರತಿಷ್ಠಿತರೇ  ನಕಲಿ ಮಾಡಿ ಕಂಬಿ ಎಣಿಸುತ್ತಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದಲ್ಲಿದ್ದದ್ದು ಕೇವಲ ₹ 400 ಕೋಟಿ ಮೌಲ್ಯದ ನಕಲಿ ನೋಟುಗಳು. ಪ್ರಪಂಚದ ಎಲ್ಲಾ ದೇಶಗಳಲ್ಲೂ ಈ ಹಾವಳಿ ಇದೆ.
 
ಅಮೆರಿಕನ್ ಡಾಲರ್ ಅತ್ಯಂತ ಹೆಚ್ಚು ನಕಲಿ ಆಗುವ ಕರೆನ್ಸಿ. ಇದನ್ನು ತಡೆಗಟ್ಟಲು ಬಹುಸಂಖ್ಯೆಯ ನೋಟುಗಳನ್ನು ಅಮಾನ್ಯ ಮಾಡುವ ಕ್ರಮಕ್ಕೆ ಈವರೆಗೆ ಯಾರೂ ಮುಂದಾಗಿಲ್ಲ. ಇಷ್ಟೆಲ್ಲಾ ಆಗಿ ಹೆಚ್ಚೆಂದರೆ ಸರ್ಕಾರಕ್ಕೆ ಒಂದಷ್ಟು ಹಣ ಹರಿದು ಬರಬಹುದು. ಅದನ್ನು ಜನರಿಗೆ ಹಂಚಿ ಸರ್ಕಾರ ತನ್ನ ಹಳೆ ವಾಗ್ದಾನ ಉಳಿಸಿಕೊಳ್ಳಬಹುದು. ಅದರಾಚೆ ಎಲ್ಲವೂ ಎಲ್ಲರಿಗೂ ಅಸ್ಪಷ್ಟ.
 
ಈ ಎಲ್ಲಾ ಕಾರಣಗಳಿಂದಾಗಿ ಸರ್ಕಾರದ ಉದ್ದೇಶ ಈಡೇರಿಕೆಗೆ ನೋಟುಗಳ ಅಮಾನ್ಯತೆಯೇ ಬೇಕಿತ್ತೇ ಎನ್ನುವ ಪ್ರಶ್ನೆಯ ಪ್ರಸ್ತುತತೆ ಹೆಚ್ಚುತ್ತಿದೆ. ಆದರೆ, ವಿಪಕ್ಷಗಳು ಕೂಡ ಈ ಕ್ರಮವನ್ನು ಒಂದು ನೀತಿಯಾಗಿ ಸ್ವಾಗತಿಸುತ್ತೇವೆ, ಅನುಷ್ಠಾನ ಮಾತ್ರ ಸರಿಯಾಗಿಲ್ಲ ಎನ್ನುವ ಮಾಮೂಲಿ ರಾಗ ಹಾಡುತ್ತಿವೆ. ಸದುದ್ದೇಶದಿಂದ ಸರ್ಕಾರ  ಕೈಗೊಳ್ಳುವ ಕ್ರಮಗಳ ಬಗ್ಗೆ ಕೂಡಾ ಪ್ರಶ್ನೆಗಳನ್ನು ಎತ್ತುವ ಪರಿಪಾಠ ಇರಬೇಕು. ಪ್ರಶ್ನೆಗಳು ಉದ್ದೇಶಗಳ ಈಡೇರಿಕೆಗೆ ಮಾರಕವಾಗುವುದಿಲ್ಲ, ಪೂರಕವಾಗುತ್ತವೆ. ಪ್ರಶ್ನೆಗಳನ್ನು ಕೇಳದಿರುವುದು ಮತ್ತು ಕೇಳಿದ ಪ್ರಶ್ನೆಗಳನ್ನು ಅನುಮಾನದಿಂದಲೇ ನೋಡುವುದು ಎಲ್ಲದಕ್ಕೂ ಮಾರಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT