ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ: ಲೋಕಸಭೆ ಮತ್ತು ರಾಜ್ಯಪ್ರಜ್ಞೆ

ರಾಜ್ಯಗಳು ರಾಜ್ಯಗಳಾಗಿ ಉಳಿಯಬೇಕಿದ್ದರೆ ಸಂಸತ್ತಿನಲ್ಲಿ ಪ್ರತಿ ರಾಜ್ಯಕ್ಕೂ ಬೇಕೊಂದು ವಿರೋಧ ಪಕ್ಷ
Published 27 ಮಾರ್ಚ್ 2024, 22:11 IST
Last Updated 27 ಮಾರ್ಚ್ 2024, 22:11 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆ ಏನಿದ್ದರೂ ದೇಶಕ್ಕೆ ಸಂಬಂಧಿಸಿದ್ದು, ರಾಜ್ಯಗಳಿಗಲ್ಲ ಎನ್ನುವ, ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಿ ಮತದಾನ ಮಾಡುವುದು ಎನ್ನುವ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರ ಆಯಾ ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಮತದಾನ ಮಾಡಿದರೆ ಸಾಕು ಎನ್ನುವ ರಾಜಕೀಯ ಜನಪದವೊಂದು ಅದ್ಯಾಕೋ ಭಾರತದ ಹಲವೆಡೆ ಚಾಲ್ತಿಯಲ್ಲಿದೆ. ಕರ್ನಾಟಕದ ಮತದಾರರಂತೂ ಈ ಮನಃಸ್ಥಿತಿಗೆ ಬಹುಕಾಲದಿಂದ ಜೋತು ಬಿದ್ದಿದ್ದಾರೆ.

ಈ ನಿಲುವಿನ ಹಿಂದೆ ಒಂದು ಊಹೆ ಇದೆ. ಇಡೀ ದೇಶಕ್ಕೊಂದು ಸರ್ಕಾರವನ್ನು ದೇಶದ ಹಿತವನ್ನು ಪರಿಗಣಿಸಿ ಆರಿಸಿದರೆ ಆ ಸರ್ಕಾರ ರಾಜ್ಯಗಳ ಹಿತವನ್ನೂ ಕಾಪಾಡುತ್ತದೆ ಎನ್ನುವ ಊಹೆ ಅದು. ಅದರಲ್ಲೇನೂ ತಪ್ಪಿರಲಿಲ್ಲ. ಸಾಂವಿಧಾನಿಕವಾಗಿ ವಸ್ತುಸ್ಥಿತಿ ಇರಬೇಕಿರುವುದು ಹಾಗೇನೇ. ಆದರೆ ಈಗ ಕಾಲ ಬದಲಾಗಿದೆ. ಇಡೀ ದೇಶಕ್ಕೆಂದು ಆರಿಸುವ ಕೇಂದ್ರ ಸರ್ಕಾರವು ರಾಜ್ಯಗಳನ್ನು ಕಾಣುವ, ನಡೆಸಿಕೊಳ್ಳುವ ರೀತಿ ಬದಲಾಗುತ್ತಿದೆ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ರಾಜ್ಯಗಳ ಕುರಿತು ಯೋಚಿಸಬೇಕಿಲ್ಲ ಎನ್ನುವ ಮತದಾರರ ನಿಲುವಿನ ಸರಿತಪ್ಪುಗಳ ಬಗ್ಗೆ ಹೊಸತೊಂದು ಜಿಜ್ಞಾಸೆಯ ಅಗತ್ಯವಿದೆ.

ಹೌದು, ರಾಜ್ಯಗಳ ಮಟ್ಟಿಗೆ ಎಲ್ಲವೂ ಪಲ್ಲಟವಾಗುತ್ತಿದೆ. ಈ ದೇಶದಲ್ಲಿ ರಾಜ್ಯಗಳು ಅಸ್ತಿತ್ವದಲ್ಲಿ ಇರುವುದೇ ಒಂದು ಅಪರಾಧ ಎನ್ನುವಂತಹ ಒಂದು ಧೋರಣೆ ಎಗ್ಗಿಲ್ಲದೆ ಪ್ರತಿಪಾದನೆ ಆಗುತ್ತಿರುವ ಕಾಲದಲ್ಲಿ 2024ರ ಲೋಕಸಭಾ ಚುನಾವಣೆಗೆ ರಂಗಸಜ್ಜಿಕೆ ನಡೆಯುತ್ತಿದೆ. ರಾಜ್ಯಗಳು ರಾಜ್ಯಗಳಾಗಿ ಉಳಿದರೆ, ರಾಜ್ಯಗಳು ಸಂವಿಧಾನ ತಮಗೆ ಒದಗಿಸಿದಷ್ಟು ಸಾರ್ವಭೌಮಾಧಿಕಾರವನ್ನು ಪ್ರತಿಪಾದಿಸಿದರೆ ಅದೇನೋ ದೇಶದ್ರೋಹ ಎನ್ನುವ ರೀತಿಯಲ್ಲಿ ಈಗ ದೇಶವನ್ನಾಳುವ ಪಕ್ಷದ ಕಡೆಯಿಂದ ಕಥನ ಕಟ್ಟಲಾಗುತ್ತಿದೆ.

ಕರ್ನಾಟಕದ ಓರ್ವ ಬಿಜೆಪಿ ನಾಯಕ ಇತ್ತೀಚೆಗೆ ‘ಈ ದೇಶವನ್ನು ರಾಷ್ಟ್ರ ಅಂತ ಕರೆಯದೆ ಒಕ್ಕೂಟ ಅಂತ ಕರೆಯುವವರು ದೇಶದ್ರೋಹಿಗಳು!’ ಅಂತ ಹೇಳಿದ್ದು ವರದಿಯಾಗಿದೆ. ಭಾರತ ದೇಶವು ರಾಜ್ಯಗಳನ್ನೆಲ್ಲಾ ಸೇರಿಸಿ ಮಾಡಿದ ದೇಶ. ಹಾಗಾಗಿ ಅದನ್ನು ಒಕ್ಕೂಟ ಅಂತಲೇ ಕರೆಯಬೇಕಿರುವುದು. ಭಾರತವು ಒಂದು ಒಕ್ಕೂಟ ಆಗಿ ಇರುವುದರಿಂದ ಅದೊಂದು ರಾಷ್ಟ್ರ ಆಗಿರುವುದೇ ವಿನಾ ರಾಷ್ಟ್ರವಾಗಿರುವ ಕಾರಣಕ್ಕೆ ಒಕ್ಕೂಟವಾಗಿರುವುದಲ್ಲ. ಆದರೂ ಸದರಿ ಬಿಜೆಪಿ ನಾಯಕರಿಗೆ ಒಕ್ಕೂಟ ಎನ್ನುವ ಪದದಲ್ಲಿ ದೇಶದ್ರೋಹ ಎದ್ದುಕಾಣುತ್ತದೆ. ಯಾಕೆಂದರೆ ಅವರ ಪಕ್ಷದ ಮೂಲ ಸಿದ್ಧಾಂತದ ಪ್ರಕಾರ, ದೇಶದಲ್ಲಿ ರಾಜ್ಯಗಳೇ ಇರಬಾರದು. ಇದ್ದರೂ ಇಲ್ಲದಂತಿರಬೇಕು.

ಇದು ರಾಜಕೀಯ ನಾಯಕರ ಹೇಳಿಕೆಗಳ ವಿಚಾರ ಮಾತ್ರವಲ್ಲ. ವಿವಿಧ ರಾಜ್ಯಗಳಲ್ಲಿ ಏನೇನಾಗುತ್ತದೆ ಅಂತ ಒಮ್ಮೆ ಗಮನಿಸಿ. ಚುನಾಯಿತ ರಾಜ್ಯ ಸರ್ಕಾರಗಳನ್ನು ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ಅಕ್ಷರಶಃ ಪೀಡಿಸುತ್ತಿದೆ. ಇದನ್ನು ನೋಡಿ ಸುಪ್ರೀಂ ಕೋರ್ಟ್‌, ರಾಜ್ಯಪಾಲರಿಗೆ ಛೀಮಾರಿಯ ಮೇಲೆ ಛೀಮಾರಿ ಹಾಕುತ್ತಿದೆ. ಸೈದ್ಧಾಂತಿಕ ಹಟಮಾರಿಗಳು ಕಾನೂನಿನ-ಸಾಂವಿಧಾನಿಕ ನೈತಿಕತೆಯ ಪಾಠಗಳಿಗೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ.

ಇನ್ನೊಂದು ರೀತಿಯ ಬೆಳವಣಿಗೆ ಗಮನಿಸಿ. ಇಷ್ಟುಕಾಲ ಸಹಜ ಸಾಂವಿಧಾನಿಕ ಮಾರ್ಗಗಳ ಮೂಲಕ ಪಡೆಯುತ್ತಿರುವುದನ್ನು ಪಡೆಯಲು ರಾಜ್ಯ ಸರ್ಕಾರಗಳು ನ್ಯಾಯಾಲಯದಲ್ಲಿ ಹೋರಾಡಬೇಕಾದ ಪರಿಸ್ಥಿತಿ. ಬರ ಪರಿಹಾರ ಪಡೆಯಲು ಕರ್ನಾಟಕವು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ತಮಿಳುನಾಡು ವಿವಿಧ ಅನ್ಯಾಯಗಳ ವಿರುದ್ಧ ಮತ್ತೆ ಮತ್ತೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗುತ್ತಲೇ ಇದೆ. ತಾನು ಕಳುಹಿಸಿದ ಮಸೂದೆಗಳಿಗೆ ಅಂಕಿತ ಹಾಕದೆ ಸತಾಯಿಸುತ್ತಿದ್ದಾರೆಂದು ಕೇರಳ ರಾಜ್ಯವು ರಾಷ್ಟ್ರಪತಿ ವಿರುದ್ಧವೇ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ!

ಇಷ್ಟೇ ಅಲ್ಲ, ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದವರು ಮತ್ತು ದೆಹಲಿ ಮುಖ್ಯಮಂತ್ರಿ ಜೈಲು ಸೇರಿ ಆಗಿದೆ. ಭ್ರಷ್ಟಾಚಾರ ಮಾಡಿದ್ದಾರೆ ಅದಕ್ಕೆ ಜೈಲು ಅಂತ ವಾದಿಸಬಹುದು. ಇಲ್ಲ, ವಿಷಯ ಅಷ್ಟೊಂದು ಸರಳವಲ್ಲ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ರಾಜ್ಯ ಮಟ್ಟದ ನಾಯಕರು ಕೇಂದ್ರದಲ್ಲಿ ಆಳುವ ಪಕ್ಷಕ್ಕೆ ಸೇರಿದರೆ ಎಲ್ಲ ಆರೋಪಗಳಿಂದಲೂ ಮುಕ್ತಿ, ಅದಕ್ಕೆ ಒಪ್ಪದೇಹೋದರೆ ಮಾತ್ರ ಜೈಲು. ಹಾಗಾಗಿ, ಭ್ರಷ್ಟಾಚಾರ ತಡೆಯುವುದು ಇಲ್ಲಿನ ಉದ್ದೇಶವಲ್ಲ, ಬದಲಿಗೆ ರಾಜ್ಯ ಮಟ್ಟದ ನಾಯಕರನ್ನು ಮಟ್ಟ ಹಾಕುವುದು ನಿಜವಾದ ಉದ್ದೇಶ ಎನ್ನುವುದು ಪ್ರಾಥಮಿಕ ರಾಜಕೀಯ ಪ್ರಜ್ಞೆ ಇರುವ ಯಾರಾದರೂ ಗ್ರಹಿಸುವಂತಹದ್ದು.

ಬಿಜೆಪಿ ನೇತೃತ್ವದ ಸರ್ಕಾರವೇ ಇರುವ ರಾಜ್ಯಗಳಾದರೆ ಅವು ಕೇಂದ್ರ ಸರ್ಕಾರದ ವಿಸ್ತರಣಾ ಕೌಂಟರ್‌ಗಳು ಇದ್ದಂತೆ. ಅಲ್ಲಿ ರಾಜ್ಯ ಇರುವುದಿಲ್ಲ, ಎಲ್ಲವೂ ಕೇಂದ್ರೀಕೃತ. ವಿರೋಧ ಪಕ್ಷದ ಆಡಳಿತ ಇರುವ ಒಂದೇ ಒಂದು ರಾಜ್ಯದಲ್ಲೂ ಸರ್ಕಾರವು ನೆಮ್ಮದಿಯಿಂದ ಇರುವ ಹಾಗಿಲ್ಲ. ಹಿಮಾಚಲ ಪ್ರದೇಶದಲ್ಲಿ ಚುನಾಯಿತ ಸರ್ಕಾರದ ಸಗಟು ಖರೀದಿಗೆ ವೇದಿಕೆ ಸಿದ್ಧವಾಗಿದೆ. ಲೋಕಸಭಾ ಚುನಾವಣೆ ಒಮ್ಮೆ ಮುಗಿದುಬಿಡಲಿ, ಆ ನಂತರ ಕರ್ನಾಟಕ ಸರ್ಕಾರವನ್ನೂ ಹೇಗೆ ಬೀಳಿಸುತ್ತೇವೆ (ಅರ್ಥಾತ್ ಖರೀದಿಸುತ್ತೇವೆ) ನೋಡಿ ಅಂತ ಹಿಂಜರಿಕೆಯೇ ಇಲ್ಲದೆ ಕೇಸರಿ ಶಾಲು ಹೆಗಲಿಗೇರಿಸಿಕೊಂಡ ಮರಿನಾಯಕರೂ ಸವಾಲು ಹಾಕುತ್ತಿದ್ದಾರೆ.

ಇತ್ತೀಚಿನವರೆಗೆ ರಾಷ್ಟ್ರೀಯ ಪಕ್ಷಗಳ ವಿರುದ್ಧ ಗುಟುರು ಹಾಕುತ್ತಿದ್ದ ಏಕೈಕ ಕನ್ನಡಿಗ ಮಾಜಿ ಪ್ರಧಾನಿ ಕೂಡಾ ಈಗ ಕರ್ನಾಟಕದ ಸಾಂವಿಧಾನಿಕ ಚುನಾಯಿತ ಸರ್ಕಾರವನ್ನು ಕೆಡವಿ ರಾಜ್ಯವನ್ನು ಮತ್ತೆ ದೆಹಲಿ ದೊರೆಗಳಿಗೆ ಒಪ್ಪಿಸಿಬಿಡತಕ್ಕದ್ದು ಅಂತ ಶಾಲು ಕೊಡವಿಕೊಂಡು ಪ್ರತಿಪಾದಿಸುತ್ತಿದ್ದಾರೆ. ಇಡೀ ದೇಶಕ್ಕೆ ದೇಶವನ್ನೇ ದೆಹಲಿಯಿಂದ ಆಳುವ, ರಾಜ್ಯಗಳಲ್ಲಿ ಕೇಂದ್ರದ ಆಣತಿಯಂತೆ ಕಾರ್ಯವೆಸಗುವ ಸ್ಯಾಟಲೈಟ್ ಸರ್ಕಾರಗಳನ್ನು ನಿರ್ಮಿಸುವ ಅರ್ಥಾತ್ ರಾಜ್ಯಗಳನ್ನು ಇದ್ದೂ ಇಲ್ಲದಂತೆ ಮಾಡಿ ಮುಗಿಸುವ ಯೋಜನೆಯೊಂದು ಸದ್ದಿಲ್ಲದೇ ಜಾರಿಯಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ರಾಜ್ಯಪ್ರಜ್ಞೆಯನ್ನೇ ಮರೆತು ತುಣುಕು ಅಧಿಕಾರಕ್ಕಾಗಿ ಹವಣಿಸುವ ಕೆಲ  ಪ್ರಾದೇಶಿಕ ಪಕ್ಷಗಳ ನಾಯಕರೆಲ್ಲಾ ಈ ಸಂವಿಧಾನಾಹುತಿ ಯಜ್ಞದಲ್ಲಿ ಋತ್ವಿಕರಾಗಲು ಕಚ್ಚೆ ಕಟ್ಟಿಕೊಳ್ಳುತ್ತಿದ್ದಾರೆ.

ಲೋಕಸಭಾ ಚುನಾವಣೆ ಏನಿದ್ದರೂ ಇಡೀ ದೇಶಕ್ಕೆ ಸಂಬಂಧಿಸಿದ್ದು, ರಾಜ್ಯಗಳಿಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬ ಮತದಾರರ ಧೋರಣೆ ಅತಿರೇಕಕ್ಕೆ ಹೋಗಿ, ಒಂದು ರಾಜ್ಯದ ಅಷ್ಟೂ ಲೋಕಸಭಾ ಸ್ಥಾನಗಳನ್ನು ರಾಜ್ಯ ವಿರೋಧಿ ಧೋರಣೆ ಹೊಂದಿದ ಒಂದು ಪಕ್ಷದ ಕೈಗೆ ನೀಡಿದ್ದರ ದುಷ್ಪರಿಣಾಮ ಇದು. ಲೋಕಸಭೆಯಲ್ಲಿ ಒಂದು ಆಳುವ ಪಕ್ಷ ಇರಬೇಕು ಮತ್ತು ಒಂದು ವಿರೋಧ ಪಕ್ಷವೂ ಇರಬೇಕು ಎನ್ನುವುದು ದೇಶದ ಹಿತದೃಷ್ಟಿಯಿಂದ ಅಗತ್ಯವಾದರೆ, ಪ್ರತಿಯೊಂದು ರಾಜ್ಯದಲ್ಲೂ ಆಳುವ ಪಕ್ಷದ ಲೋಕಸಭಾ ಸದಸ್ಯರೂ ಇರಬೇಕು ಮತ್ತು ವಿರೋಧ ಪಕ್ಷಗಳ ಲೋಕಸಭಾ ಸದಸ್ಯರೂ ಇರಬೇಕು ಎನ್ನುವುದು ಆಯಾ ರಾಜ್ಯಗಳ ಹಿತದೃಷ್ಟಿಯಿಂದ ಅಷ್ಟೇ ಅಗತ್ಯವಾದ ವಿಚಾರ. ಆಳುವ ಪಕ್ಷದ ರಾಜ್ಯ ವಿರೋಧಿ ಧೋರಣೆಯನ್ನು ಪ್ರಶ್ನಿಸಲು ಲೋಕಸಭೆಯಲ್ಲಿ ಆಯಾ ರಾಜ್ಯಗಳ ಪರವಾಗಿ ನಿಲ್ಲುವವರು ಯಾರಾದರೂ ಬೇಕಲ್ಲ? ಬರೀ ಆಳುವ ಪಕ್ಷದ ಸಂಸದರಷ್ಟೇ ಇದ್ದರೆ ರಾಜ್ಯಗಳು ಹೇಗೆ ಅನಾಥವಾಗಿ ಹೋಗುತ್ತವೆ ಎನ್ನುವುದಕ್ಕೆ ಸಂದು ಹೋಗುತ್ತಿರುವ ಲೋಕಸಭೆಯಲ್ಲಿ ಕರ್ನಾಟಕ ಹೇಗೆ ಅನಾಥವಾಗಿ ಹೋಯಿತು ಎನ್ನುವುದೇ ಒಂದು ಚಾರಿತ್ರಿಕ ಉದಾಹರಣೆ.

ಚುನಾವಣೆಗಳು ಹಿಂದೆಯೂ ಆಗಿವೆ, ಹೋಗಿವೆ. ಪಕ್ಷಗಳು ಗೆದ್ದಿವೆ, ಸೋತಿವೆ. ಹಿಂದೆಯೂ ಕೇಂದ್ರವು ರಾಜ್ಯಗಳ ಮೇಲೆ ಸವಾರಿ ಮಾಡಿದ್ದಿದೆ. ಬೇಕಾದವರನ್ನು ಮುಖ್ಯಮಂತ್ರಿ ಮಾಡಿ, ಬೇಡದವರನ್ನು ಕಿತ್ತೊಗೆದದ್ದಿದೆ. ಆದರೆ, ರಾಜ್ಯಗಳ ಅಸ್ತಿತ್ವವನ್ನೇ ಅಣಕಿಸುವ, ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳನ್ನು ಕಾಡಿಸಿ, ಪೀಡಿಸಿ, ಬರಗಾಲದಂತಹ ಮಾನವೀಯ ಬಿಕ್ಕಟ್ಟಿಗೆ ನೆರವಾಗುವಲ್ಲೂ ಸತಾಯಿಸುವ, ರಾಜ್ಯ ವಿರೋಧಿ ರಾಷ್ಟ್ರ ರಾಜಕೀಯವೊಂದನ್ನು ಈ ದೇಶ ಕಂಡಿರಲಿಲ್ಲ. ಈ ಬಾರಿ ಪ್ರತಿ ರಾಜ್ಯದ ಮತದಾರ ಮತಗಟ್ಟೆಗೆ ಹೋಗುವ ಮುನ್ನ ನೆನಪಿಸಿಕೊಳ್ಳಬೇಕಿರುವುದು ಈ ಸತ್ಯವನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT