ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನುರಣನ ಅಂಕಣ : ಚುನಾವಣೆ ಜನಾಂದೋಲನವಾದಾಗ...

Published 12 ಜೂನ್ 2024, 0:04 IST
Last Updated 12 ಜೂನ್ 2024, 0:04 IST
ಅಕ್ಷರ ಗಾತ್ರ

ಜರ್ಮನ್ ತತ್ವಶಾಸ್ತ್ರಜ್ಞ ಫ್ರೆಡೆರಿಕ್ ನೀಷೆ ‘ದೇವರು ಸತ್ತ’ ಎನ್ನುವ ಜಗತ್ಪ್ರಸಿದ್ಧ ಹೇಳಿಕೆ ನೀಡಿದ್ದ. ಆತ ಅದನ್ನು ಯಾವ ಅರ್ಥದಲ್ಲಿ ಹೇಳಿರಬಹುದು ಎಂಬ ಬಗ್ಗೆ ಪ್ರಪಂಚ ಈಗಲೂ ತಲೆಕೆಡಿಸಿಕೊಂಡಿದೆ. ಆದರೆ, 2024ರಲ್ಲಿ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ‘ದೇವರು ಸೋತ’ ಅಂತ ಚರಿತ್ರಕಾರರು ದಾಖಲಿಸಿದರೆ, ಅದನ್ನು ಅರ್ಥೈಸುವುದಕ್ಕೆ ಯಾರಿಗೂ ಕಷ್ಟವಾಗಲಾರದು. ಯಾಕೆಂದರೆ, ತಾನು ಜೈವಿಕವಾಗಿ
ಹುಟ್ಟಿದವನಲ್ಲ, ದೈವಿಕವಾಗಿ ಭೂಮಿಗೆ ರವಾನಿಸಲ್ಪಟ್ಟವನು ಅಂತ ಚುನಾವಣೆಗೆ ಕೆಲವೇ ದಿನಗಳ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದನ್ನು ದೇಶಕ್ಕೆ ದೇಶವೇ ಕೇಳಿಸಿಕೊಂಡಿದೆ. ಮೋದಿಯವರ ನಾಮಬಲವನ್ನು ಅರ್ಥಾತ್ ಸಾಕ್ಷಾತ್ ‘ದೇವರ’ ನಾಮದ ವರ್ಚಸ್ಸನ್ನು ಪಣಕ್ಕಿಟ್ಟು ಸೆಣಸಿದ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಬೇಕಾದಷ್ಟು ಸ್ಥಾನಗಳನ್ನೂ ಗೆಲ್ಲಲಾಗಿಲ್ಲ. ಅಂದರೆ, ಭಾರತದ ಪ್ರಜಾತಂತ್ರ ‘ದೇವರನ್ನೂ’ ಮಣಿಸುತ್ತದೆ ಎಂದಾಯಿತು. ಪ್ರಜಾತಂತ್ರಕ್ಕೆ ಭಾರತ ಬರೆದ ಹೊಸ ಭಾಷ್ಯ ಇದು.

ಬಿಜೆಪಿಗೆ ಸರಳ ಬಹುಮತವೂ ದಕ್ಕಲಿಲ್ಲ ಎನ್ನುವುದು ಬಹುಮುಖ್ಯವಾದ ಬೆಳವಣಿಗೆ. ಆದರೆ, ಇಷ್ಟಾದದ್ದಕ್ಕೆ ಭಾರತದ ಪ್ರಜಾತಂತ್ರದ ಬಗ್ಗೆ ಭಾರಿ ಆಶಾವಾದವನ್ನು ತಳೆಯುವ ಮುನ್ನ ಸೂಕ್ಷ್ಮವಾಗಿ ಯೋಚಿಸುವ ಅಗತ್ಯವಿದೆ. ಈ ಫಲಿತಾಂಶದ ಕಾರಣಕ್ಕೆ ಸರ್ವಾಧಿಕಾರ ಸೋತಿತು ಎಂದಾಗಲೀ ಸಂವಿಧಾನ ಗೆದ್ದಿತು ಎಂದಾಗಲೀ ಧರ್ಮದ ಹೆಸರಲ್ಲಿ ಮಾಡುವ ರಾಜಕೀಯಕ್ಕೆ ಭಾರತದ ಮತದಾರ ಸೊಪ್ಪು ಹಾಕುವುದಿಲ್ಲ ಎಂದಾಗಲೀ ಸಂಭ್ರಮಿಸಿದರೆ ಅದು ಅವಸರದ ತೀರ್ಮಾನವಾದೀತು ಅನ್ನಿಸುತ್ತದೆ.

ಚುನಾವಣೆಯ ವೇಳೆಗೆ ದೇಶದ ಮುಂದೆ ಏನೇನು ಆತಂಕಗಳಿದ್ದವೋ ಅವೆಲ್ಲವೂ ಈಗಲೂ ಇವೆ. ಇಲ್ಲ ಎಂದುಕೊಂಡು ಎಚ್ಚರ ತಪ್ಪಿದರೆ ಪ್ರಮಾದವಾದೀತು. ಬಿಜೆಪಿಗೆ ಮತ್ತೊಮ್ಮೆ ಹಿಂದಿನಂತೆಯೇ ಬಹುಮತ ಬಂದಿದ್ದರೆ ಪ್ರಜಾತಂತ್ರಕ್ಕೆ ಮತ್ತು ಸಮಾಜಕ್ಕೆ ಕಾದಿದ್ದ ತತ್‌ಕ್ಷಣದ ಅಪಾಯಗಳಿಂದ ದೇಶ ಸದ್ಯಕ್ಕೆ ಪಾರಾಗಿದೆ. ಉಳಿದಂತೆ, ಈ ಚುನಾವಣೆ ಮಹತ್ವ ಪಡೆಯುವುದು ಅದರ ಫಲಿತಾಂಶದ ಕಾರಣಕ್ಕಲ್ಲ. ಬದಲಿಗೆ, ಚುನಾವಣಾ ಕದನ ಪಡೆದುಕೊಂಡ ಸ್ವರೂಪದ ಕಾರಣಕ್ಕೆ. ಈ ವಿಷಯಕ್ಕೆ ಮತ್ತೆ ಬರೋಣ.

ಹಿಂದಿನ ಹತ್ತು ವರ್ಷಗಳಲ್ಲಿ ಏಕಪಕ್ಷ ಕೇಂದ್ರಿತ, ಏಕನಾಯಕ ಕೇಂದ್ರಿತ ಆಳ್ವಿಕೆಯ ಅನಾಹುತಗಳನ್ನು ಕಂಡ ಕಾರಣ, ಮತ್ತೀಗ ಪುನರಾರಂಭಗೊಂಡಿರುವ ಸಮ್ಮಿಶ್ರ ಸರ್ಕಾರದ ಯುಗ ಒಂದು ಸಣ್ಣ ಹಿತಾನುಭವವನ್ನೇನೋ ಹುಟ್ಟುಹಾಕಬಹುದು. ಆದರೆ, ನಿಜಕ್ಕೂ ಸಮ್ಮಿಶ್ರ ಸರ್ಕಾರವೊಂದರಲ್ಲಿ ಇರಬೇಕಿರುವ ಒಂದು ನಿಯಂತ್ರಣ, ಒಂದು ಸಮತೋಲನ ಈ ಸರ್ಕಾರದಲ್ಲೂ ಇರಬಹುದು ಎಂಬ ಭರವಸೆ ಹುಟ್ಟುವುದಿಲ್ಲ.

ಹೊಸ ಮಂತ್ರಿಮಂಡಲವನ್ನೇ ಒಮ್ಮೆ ಗಮನಿಸಿ. ಆಯಕಟ್ಟಿನ ಪ್ರಬಲ ಖಾತೆಗಳನ್ನೆಲ್ಲ ಬಿಜೆಪಿಯೇ ಇಟ್ಟುಕೊಂಡಿದೆ. ಮಾತ್ರವಲ್ಲ, ಹಳೆಯ ಮಂತ್ರಿಗಳೇ ಮುಂದುವರಿದಿದ್ದಾರೆ. ಬಹುಮತ ಇಲ್ಲದೇ ಹೋದರೇನಂತೆ, ಎಲ್ಲವೂ ಹಾಗೆಯೇ ಇವೆ, ಏನೂ ಬದಲಾಗಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ. ಜೆಡಿಯು ಮತ್ತು ತೆಲುಗುದೇಶಂ ಪಕ್ಷಗಳು ಬಿಜೆಪಿಯ ನಾಯಕತ್ವದ ಮಹತ್ವಾಕಾಂಕ್ಷೆಗಳು ಅಂಕೆ ಮೀರುವ ಸಾಧ್ಯತೆಗಳನ್ನು ಎಷ್ಟರಮಟ್ಟಿಗೆ ತಡೆಯಬಹುದು ಅಂತ ಸ್ಪಷ್ಟವಾಗುತ್ತಿಲ್ಲ.

ಅಷ್ಟೇ ಅಲ್ಲ, ಬಿಜೆಪಿ ತನ್ನ ಅಲ್ಪಮತವನ್ನು ಬಹುಮತ ಆಗಿಸಿಕೊಳ್ಳಬಹುದಾದ ಸಾಧ್ಯತೆಯೂ ಜೀವಂತವಾಗಿದೆ. ಇದು ಜನಾದೇಶವನ್ನು ಎಗ್ಗಿಲ್ಲದೆ ಖರೀದಿಸಬಹುದಾದ ಕಾಲ. ಈ ವ್ಯಾಪಾರದಲ್ಲಿ ಬಿಜೆಪಿಯದ್ದು ಎತ್ತಿದ ಕೈ. ವಿವಿಧ ಪಕ್ಷಗಳ ಸದ್ಯದ ಸಂಖ್ಯಾಬಲವನ್ನು ಗಮನಿಸಿದರೆ, ಇದು ತುಸು ಕಷ್ಟವಾದರೂ ಅಸಾಧ್ಯ ಎಂದೇನೂ ಇಲ್ಲ. ರಾಜಕೀಯದ ಸಂತೆಯಲ್ಲಿ ತಮ್ಮನ್ನು ತಾವೇ ಮಾರಾಟಕ್ಕೆ ಇಟ್ಟುಕೊಂಡಿರುವ ಮೂವತ್ತೋ ಮೂವತ್ತೈದೋ ಸಂಸದರು ಸಿಕ್ಕಿಬಿಟ್ಟರೆ ಸಾಕು ಅಲ್ಲಿಗೆ ಬಿಜೆಪಿಗೆ ಮತ್ತೊಮ್ಮೆ ಸ್ವಂತ ಬಲದಿಂದ ಅಧಿಕಾರ ಚಲಾಯಿಸುವ ಶಕ್ತಿ ಬಂದಂತೆ.

ಇನ್ನು ಸಂವಿಧಾನ ವಿರೋಧಿ ಧೋರಣೆಗಳನ್ನು ಮತ್ತು ಧರ್ಮದ ಹೆಸರಲ್ಲಿ ನಡೆಯುವ ರಾಜಕೀಯವನ್ನು ಜನ ತಿರಸ್ಕರಿಸಿದ್ದಾರೆ ಅಂತ ನಿಟ್ಟುಸಿರಿಡೋಣವೇ? ಹೋದ ವರ್ಷ ಇದೇ ವೇಳೆ ಕರ್ನಾಟಕದ ಚುನಾವಣೆಯ ಫಲಿತಾಂಶ ಬಂದಾಗಲೂ ಮತದಾರರ ವಿವೇಕ, ವಿವೇಚನೆಯ ಬಗ್ಗೆ ಭಾರಿ ಭರವಸೆ ಹುಟ್ಟಿತ್ತು. ಆದರೆ ವರ್ಷ ಒಂದು ಮುಗಿಯುವುದರೊಳಗೆ ಬಂದ ಲೋಕಸಭಾ ಚುನಾವಣೆಯಲ್ಲಿ ಅಂದು ತಿರಸ್ಕರಿಸಿದ ಪಕ್ಷವನ್ನೇ ಕರ್ನಾಟಕದ ಮತದಾರರು ಮತ್ತೆ ಬೆಂಬಲಿಸಿದ್ದಾರಲ್ಲ! ಇಲ್ಲಿ ಮತದಾರರು ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ಬೇರೆಬೇರೆಯಾಗಿ ಪರಿಗಣಿಸುತ್ತಾರೆ ಎಂದು ಸಮಜಾಯಿಷಿ ನೀಡಬಹುದು. ಒಪ್ಪಿಕೊಳ್ಳೋಣ. ಆದರೆ ಬರೀ ವರ್ಷದ ಹಿಂದೆ ಮತದಾರರಲ್ಲಿ ಜಾಗೃತವಾಗಿದ್ದ ಸಂವಿಧಾನ ಪ್ರಜ್ಞೆ, ದ್ವೇಷ ರಾಜಕಾರಣ ವಿರೋಧಿ ನಿಲುವುಗಳೆಲ್ಲಾ ಎಲ್ಲಿ ಹೋದವು ಎನ್ನುವುದು ಪ್ರಶ್ನೆ.

ಸ್ವತಃ ಪ್ರಧಾನ ಮಂತ್ರಿಯವರೇ ರಂಗಕ್ಕಿಳಿದು ಹಸಿ ಹಸಿ ದ್ವೇಷವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಬಿತ್ತರಿಸಿದ ಹೊರತಾಗಿಯೂ ಕರ್ನಾಟಕದ ಮತದಾರರು ಹಿಂದೆ ತಿರಸ್ಕರಿಸಿದ್ದನ್ನೇ ಈಗ ಒಪ್ಪಿಕೊಂಡದ್ದು ಯಾಕೆ ಮತ್ತು ಹೇಗೆ? ಇದು ಕರ್ನಾಟಕದ ಮತದಾರರ ಕತೆ ಮಾತ್ರವಲ್ಲ, ದೇಶದ ಮತದಾರರ ಕತೆಯೂ ಅಷ್ಟೆ. ಈ ಚುನಾವಣೆಯಲ್ಲಿ ಅವರು ಏನನ್ನು ತಿರಸ್ಕರಿಸಿದ್ದಾರೋ ಅದನ್ನೇ ಮುಂದೆ ಒಪ್ಪಿ ಅಪ್ಪಿಕೊಳ್ಳಬಹುದು. ಈ ಬಾರಿ ಏನನ್ನು ಸ್ವೀಕರಿಸಿದ್ದರೋ ಅದನ್ನೇ ಮುಂದೆ ತಿರಸ್ಕರಿಸಬಹುದು. ನಿಜ, ಸಂವಿಧಾನದ ಅಳಿವು ಉಳಿವಿನ ಪ್ರಶ್ನೆ ಈ ಚುನಾವಣೆಯಲ್ಲಿ ಕೆಲವೆಡೆ ದೊಡ್ಡ ಮಟ್ಟದಲ್ಲೇ ಮುನ್ನೆಲೆಗೆ ಬಂದಿತ್ತು. ಮತ್ತೊಮ್ಮೆ ಬಿಜೆಪಿ ಬಹುಮತದಿಂದ ಗೆದ್ದರೆ ಸಂವಿಧಾನ ಉಳಿಯದು ಎಂದು ಆತಂಕಿತರಾಗಿ ಬಿಜೆಪಿಯ ವಿರುದ್ಧ ಮತ ಚಲಾಯಿಸಿರಬಹುದು. ಆದರೆ ಈ ವಿದ್ಯಮಾನವನ್ನು ಹತ್ತಿರದಿಂದ ಕಂಡವರು ಹೇಳುವ ಪ್ರಕಾರ, ಸಂವಿಧಾನವನ್ನು ಉಳಿಸಿಕೊಳ್ಳಬೇಕು ಎಂಬ ಕಾಳಜಿಯು ಒಂದು ಸಮುದಾಯದ ಮತದಾರರಿಗಷ್ಟೇ ಮುಖ್ಯವಾಗಿತ್ತು. ಅದು, ಸಮಸ್ತ ಜನಸಮೂಹದಲ್ಲಿ ಒಂದು ರಾಜಕೀಯ ಪ್ರಜ್ಞೆಯಾಗಿ ಕಾಣಿಸಿಕೊಳ್ಳಲಿಲ್ಲ. ಸಂವಿಧಾನಕ್ಕೆ ಎದುರಾಗಿರುವ ಆತಂಕ ಈ ಫಲಿತಾಂಶದಿಂದ ಕೊನೆಗೊಳ್ಳುವುದಿಲ್ಲ.

ಫಲಿತಾಂಶದ ಆಚೆಗೆ ಇಲ್ಲಿ ಒಂದು ಚಾರಿತ್ರಿಕ ಬೆಳವಣಿಗೆಯನ್ನು ಗಮನಿಸಬೇಕಿದೆ. ಈ ಚುನಾವಣೆಯಲ್ಲಿ ಕಂಡದ್ದು ರಾಜಕೀಯ ಪಕ್ಷಗಳ ನಡುವಣ ಸ್ಪರ್ಧೆಯನ್ನಷ್ಟೇ ಅಲ್ಲ. ಚುನಾವಣೆ ಅಂತ ಆರಂಭವಾದದ್ದು ಬರಬರುತ್ತಾ ಒಂದು ಜನಸಂಗ್ರಾಮವಾಗಿ ರೂಪುಗೊಂಡಿತು. ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ರಾಜಕೀಯವನ್ನು ರಾಜಕಾರಣಿಗಳಿಗಷ್ಟೇ ಬಿಟ್ಟು ಸುಮ್ಮನಿರುವುದು ಅಪಾಯ ಅಂತ. ಈ ಮಾತನ್ನು ಈ ದೇಶದ ಜನ ಮನಗಂಡರೋ ಎಂಬಂತೆ ಅವರು ಈ ಚುನಾವಣೆಯನ್ನು ರಾಜಕೀಯ ಪಕ್ಷಗಳಿಗೆ ಮತ್ತು ರಾಜಕಾರಣಿಗಳಿಗಷ್ಟೇ ಬಿಟ್ಟುಬಿಡಲಿಲ್ಲ. ಸಾವಿರಾರು ಸಂಘಟನೆಗಳು, ಲಕ್ಷೋಪಲಕ್ಷ ವ್ಯಕ್ತಿಗಳು ನೇರವಾಗಿ ಚುನಾವಣಾ ಕಣಕ್ಕಿಳಿದು, ದೇಶದ ಪ್ರಜಾತಂತ್ರ ವ್ಯವಸ್ಥೆ ಅದೆಂತಹ ಗಂಡಾಂತರವನ್ನು ಎದುರಿಸುತ್ತಿದೆ ಅಂತ ಜನರಿಗೆ ವಿವರಿಸಿದರು. ನಿಸ್ತೇಜವಾಗಿದ್ದ ವಿರೋಧ ಪಕ್ಷಗಳಿಗೆ ಆತ್ಮಸ್ಥೈರ್ಯ ತುಂಬಿದರು. ಸ್ವತಃ
ಪ್ರಧಾನಮಂತ್ರಿಯೇ ಮುಂದೆ ನಿಂತು ಹೇಗೆ ಸುಳ್ಳು ಹೇಳುತ್ತಿದ್ದಾರೆ, ಎಂತಹ ದ್ವೇಷ ಬಿತ್ತುತ್ತಿದ್ದಾರೆ ಅಂತ ಯಾವುದೇ ಅಳುಕಿಲ್ಲದೆ ಪ್ರಚಾರ ಮಾಡಿದರು. ಎಪ್ಪತ್ತೈದು ವರ್ಷಗಳಲ್ಲಿ ಕಟ್ಟಿದ ಪ್ರಜಾತಂತ್ರದ ಸೌಧವನ್ನು ಆಳುವ ಪಕ್ಷ ಹತ್ತು ವರ್ಷಗಳಲ್ಲಿ ಹೇಗೆ ಒಳಗಿನಿಂದಲೇ ದುರ್ಬಲಗೊಳಿಸುತ್ತಿದೆ ಎಂದು ವಿವರಿಸಿದರು.

ಈ ಚುನಾವಣೆಯ ಫಲಿತಾಂಶ ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಒಂದು ಸಣ್ಣ ಸಮಾಧಾನವನ್ನಾದರೂ ತಂದಿದ್ದರೆ ಅದರ ಹಿಂದೆ ಈ ಜನಾಂದೋಲನದ ಪಾತ್ರವೂ ಇದೆ. ಆದರೆ ಜನಾಂದೋಲನವು ಸಮಸ್ತ ಜನಸಮೂಹದ ಪ್ರಜ್ಞೆಯಾಗಿ ರೂಪುಗೊಳ್ಳುವುದು ಇನ್ನೂ ಬಾಕಿ ಇದೆ. ಭಾರತದಲ್ಲಿ ಜನತಂತ್ರ ಉಳಿದು ಬೆಳೆಯಬೇಕು ಎಂದಾದರೆ ಈ ಜನಾಂದೋಲನ ಮುಂದುವರಿಯುವ ಅಗತ್ಯವಿದೆ. ಈ ಚುನಾವಣೆ ನಿಜಕ್ಕೂ ಪ್ರಜಾತಂತ್ರದ ಉಳಿವಿಗಾಗಿ ನಡೆದ ಹೋರಾಟವಾಗಿತ್ತು ಎಂದಾದರೆ ಚುನಾವಣೆ ಇನ್ನೂ ಮುಗಿದಿಲ್ಲ. ಅದು ಸದ್ಯಕ್ಕೆ ಮುಗಿಯುವ ಸೂಚನೆಯೂ ಕಾಣಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT