ಗುರುವಾರ , ಮಾರ್ಚ್ 4, 2021
23 °C
ಸಂವಿಧಾನದ ಮೂಲಾಧಾರವನ್ನು ಸಣ್ಣಗೆ ಸಡಿಲಿಸಿದರೂ ಭಾರತದ ನಾಳೆಗಳು ಕರಾಳವಾಗಬಹುದು

ಸಿಎಎ, ಎನ್‌ಆರ್‌ಸಿ | ಸುಳ್ಳಾಡಬೇಡಿ ಮೋದಿ, ಆತಂಕ ಅರಿತುಕೊಳ್ಳಿ

ನಾರಾಯಣ ಎ. Updated:

ಅಕ್ಷರ ಗಾತ್ರ : | |

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್‌ಸಿ) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಇರುವುದು ಆತಂಕ. ಆ ಆತಂಕ ಸ್ವಲ್ಪ ಹೆಚ್ಚಾಗಿರಬಹುದು. ಅಂದಮಾತ್ರಕ್ಕೆ ಆತಂಕಪಡುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ. ಸರ್ಕಾರ ಈ ವಿಚಾರದಲ್ಲಿ ತೀರಾ ಅಪ್ರಾಮಾಣಿಕವಾಗಿ, ಅಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹಿತೈಷಿ ಜಗ್ಗಿ ವಾಸುದೇವ್ ಅವರು ಈ ವಿಚಾರದಲ್ಲಿ ಸುಳ್ಳುಗಳನ್ನು ಮತ್ತು ಅರ್ಧಸತ್ಯಗಳನ್ನು ಎಗ್ಗಿಲ್ಲದೇ ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದಾರೆ. ಇದು ತಪ್ಪು, ದುರದೃಷ್ಟಕರ. ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕಾದವರು ಈ ರೀತಿ ಅರ್ಧಸತ್ಯ, ಅಡ್ಡಗೋಡೆಯ ಮೇಲೆ ದೀಪ ಇಡುವ ಮಾತುಗಳನ್ನು ಆಡಬಾರದು. ಪ್ರತಿಭಟನೆಯ ಹಿಂದಿರುವ ಆತಂಕಗಳನ್ನು ಇಂತಹ ಮಾತುಗಳು ಇನ್ನಷ್ಟು ಹೆಚ್ಚಿಸುತ್ತವೆ.

ಸರ್ಕಾರ ಮತ್ತು ಅದನ್ನು ನಡೆಸುತ್ತಿರುವ ಬಿಜೆಪಿಯವರು ಈ ಪ್ರತಿಭಟನೆಗಳೆಲ್ಲಾ ದೇಶದ್ರೋಹಿಗಳ ಕೆಲಸವೆಂದೂ ಕಾಂಗ್ರೆಸ್ಸಿನ ಷಡ್ಯಂತ್ರವೆಂದೂ ಯಥಾಪ್ರಕಾರ ಹೇಳುತ್ತಿದ್ದಾರೆ. ಪ್ರತಿಭಟನಕಾರರು ಕೈಯ್ಯಲ್ಲಿ ರಾಷ್ಟ್ರಧ್ವಜ ಹಿಡಿದು, ‘ಸಂವಿಧಾನ ರಕ್ಷಿಸಿ’ ಅಂತ ಬೇಡಿಕೊಳ್ಳುತ್ತಿರುವ ಕಾರಣ, ಬಿಜೆಪಿಯ ರಾಷ್ಟ್ರದ್ರೋಹದ ಆಪಾದನೆ ಕೆಲಸಕ್ಕೆ ಬರುತ್ತಿಲ್ಲ. ಕಾಂಗ್ರೆಸ್ಸಿಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರತಿಭಟನೆ ಸಂಘಟಿಸುವ ಸಾಮರ್ಥ್ಯ ಇದೆ ಅಂತ ಯಾರೂ ನಂಬಲು ಸಿದ್ಧರಿಲ್ಲ. ಈ ಎಲ್ಲ ಕಾರಣಗಳಿಗಾಗಿ ಬಿಜೆಪಿಯವರು ಪ್ರತಿಭಟನ
ಕಾರರನ್ನು ಟೀಕಿಸಿದಷ್ಟೂ ಈ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿಶ್ವಾಸಾರ್ಹತೆ ಕುಸಿಯುತ್ತಿದೆ.

ಇದನ್ನೂ ಓದಿ: ಪೌರತ್ವ ಮಸೂದೆ ಸಂವಿಧಾನಬದ್ಧ: ಹರೀಶ್ ಸಾಳ್ವೆ ನೀಡುವ 10 ಕಾರಣಗಳು

ಪ್ರತಿಭಟನೆ ನಡೆಸುತ್ತಿರುವವರು ಮುಸ್ಲಿಮರು ಮಾತ್ರವಲ್ಲ, ಪ್ರಶ್ನಿಸುತ್ತಿರುವವರು ಬಿಜೆಪಿಯ ಸಾಂಪ್ರದಾಯಿಕ ಶತ್ರುಗಳಾದ ಎಡಪಂಥೀಯ ಉದಾರವಾದಿಗಳು ಮಾತ್ರವಲ್ಲ, ಇವೆರಡೂ ವರ್ಗಗಳಿಗೆ ಸೇರದ ಲಕ್ಷಾಂತರ ಮಂದಿ ಬೀದಿಗಿಳಿದಿದ್ದಾರೆ. ಪ್ರತಿಭಟಿಸುವವರೆಲ್ಲಾ ‘ಅಕ್ಷರಹೀನರು’ ಅಂತ ಬಿಜೆಪಿಯ ಕೆಲವರು ಮತ್ತು ಅವರ ಹಿತೈಷಿ ‘ಸದ್ಗುರು’ ಹೇಳಿದ್ದಾರೆ. ಯಾರು ಯಾವ ರೀತಿಯ ಹೀನತೆಯಿಂದ ಬಳಲುತ್ತಿದ್ದಾರೆ ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ.

ಸಿಎಎ, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಿಲ್ಲ, ಧಾರ್ಮಿಕ ಕಿರುಕುಳಕ್ಕೊಳಗಾದ ಸಂತ್ರಸ್ತತೆಯ ಆಧಾರದಲ್ಲಿ ಪೌರತ್ವ ನೀಡುತ್ತದೆ; ಆದಕಾರಣ ಇಲ್ಲಿ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಅಂತ ಸರ್ಕಾರ ಹೇಳಬಹುದು. ಆದರೆ ಕಾಯ್ದೆಯಲ್ಲಿ ಎಲ್ಲೂ ‘ಧಾರ್ಮಿಕ ಕಿರುಕುಳಕ್ಕೊಳಗಾದ’ ಆಧಾರದ ಮೇಲೆ ಮುಸ್ಲಿಮೇತರರಿಗೆ ಪೌರತ್ವ ನೀಡಲಾಗುವುದು ಅಂತ ಹೇಳಿಲ್ಲ. ಅದರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಬಂದ ಹಿಂದೂ, ಬೌದ್ಧ, ಜೈನ, ಪಾರ್ಸಿ, ಸಿಖ್ ಮತ್ತು ಕ್ರೈಸ್ತ ಅಕ್ರಮವಾಸಿಗಳಿಗೆ ಆದ್ಯತೆಯ ಮೇಲೆ ಪೌರತ್ವ ನೀಡಲಾಗುವುದು ಅಂತ ಇರುವುದು. ಇದರ ಬದಲಿಗೆ ಈ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಬಂದವರಿಗೆ ಅಂತ ಸ್ಪಷ್ಟವಾಗಿ ಹೇಳಿದ್ದರೆ ಮತ್ತು ಆ ಕಾರಣಕ್ಕೋಸ್ಕರ ಬಹುತೇಕ ಮುಸ್ಲಿಮರು ಕಾಯ್ದೆಯಡಿ ಅನುಕೂಲ ಪಡೆಯಲು ಅನರ್ಹರಾಗಿದ್ದರೆ ಆಗ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಇರಲಿಲ್ಲ. ಹಾಗೆ ಮಾಡಲು ಸರ್ಕಾರ ಸಿದ್ಧವಿಲ್ಲ. ಯಾಕೆಂದರೆ ಅದಕ್ಕೆ ಮುಸ್ಲಿಮರನ್ನು ಹೊರದಬ್ಬಿದ್ದೇವೆ ಎನ್ನುವ ಸಂದೇಶವನ್ನು ರವಾನಿಸಿ ತನ್ನ ರಾಜಕೀಯ ನೆಲೆಯನ್ನು ಇನ್ನಷ್ಟು ಭದ್ರಪಡಿಸುವ ಉದ್ದೇಶವಿದ್ದಂತೆ ತೋರುತ್ತದೆ.

ಇದನ್ನೂ ಓದಿ: ಸಂಪಾದಕೀಯ | ಪೌರತ್ವ ಮಸೂದೆ: ಧರ್ಮ ನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ

ಧರ್ಮನಿರಪೇಕ್ಷತೆಯನ್ನು ಸಾಂವಿಧಾನಿಕ ಮೂಲ ಆಶಯ ಅಂತ ಒಪ್ಪಿರುವ ದೇಶದಲ್ಲಿ ಈ ರೀತಿಯ ರಿಯಾಯಿತಿಯನ್ನು ಒಮ್ಮೆ ನೀಡಿದರೆ, ಮುಂದೆ ಅದು ಹಲವು ರೀತಿಯ ಅಧಿಕೃತ ಅಕ್ರಮಗಳಿಗೆ ಕಾರಣವಾದೀತು ಎಂಬ ಆತಂಕವನ್ನು ರಾಜಕೀಯಪ್ರೇರಿತ ಅಂತ ಹೇಗೆ ಹೇಳುವುದು? ನಾಳೆ ಇನ್ಯಾರೋ ಅಧಿಕಾರಕ್ಕೆ ಬಂದ ಕಾಲಕ್ಕೆ ಇದೇ ಪೂರ್ವನಿದರ್ಶನವನ್ನು ಇಟ್ಟುಕೊಂಡು ಇನ್ಯಾವುದೋ ವರ್ಗಗಳ ವಿರುದ್ಧ ಕಾನೂನು ರೂಪಿಸಲು ಮುಂದಾದರೆ ಏನಾದೀತು? ಮುಸ್ಲಿಮರನ್ನು ಹೊರಗಿಟ್ಟದ್ದಕ್ಕೆ ಸಂಭ್ರಮಿಸುವ ವರ್ಗಗಳೇ ನಾಳೆ ಇನ್ನೊಂದು ಸರ್ಕಾರದ ಇನ್ನೊಂದು ರೀತಿಯ ರಾಜಕೀಯದಾಟಕ್ಕೆ ಬಲಿಯಾಗಬಹುದು. ಸಂವಿಧಾನದ ಮೂಲಾಧಾರವನ್ನು ಪರೋಕ್ಷವಾಗಿಯಾದರೂ ಅಸ್ಥಿರಗೊಳಿಸಿದರೆ ಎಲ್ಲರಿಗೂ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೆಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಲ್ಲಾ, ಪ್ರತಿಭಟನೆ ಯಾಕೆ ಎಂಬ ಪ್ರಶ್ನೆ ಬಹಳ ವಿವೇಚನಾಯುತ ಎಂಬಂತೆ ಕೇಳಿಸಬಹುದು. ಆದರೆ, ಈ ದೇಶದ ನ್ಯಾಯಾಂಗ ಹಲವು ಬಾರಿ ಸಾಂವಿಧಾನಿಕ ಅಂಶಗಳನ್ನು ಬದಿಗಿಟ್ಟು ಜನಪ್ರಿಯ ಆಶೋತ್ತರಗಳಿಗೆ ಮಣಿದಿದೆ ಎನ್ನುವ ವಾದವೇ ಇಂತಹ ಆತಂಕ ಮತ್ತು ಪ್ರತಿಭಟನೆಗಳಿಗೆ ಹಾದಿ ಮಾಡಿಕೊಡುವುದು. ಇಂಥದ್ದೆಲ್ಲಾ ಮುಂದುವರಿದು ಅರಾಜಕತೆ ಸೃಷ್ಟಿಯಾಗದಿರಲಿ ಅಂತಲೇ ಸಾಂವಿಧಾನಿಕ ಮೂಲತತ್ವಗಳನ್ನು ಉಳಿಸಿ ಅಂತ ‘ಅಕ್ಷರಹೀನರು’ ಆಗ್ರಹಿಸುತ್ತಿರುವುದು.

ಇದನ್ನೂ ಓದಿ: Explainer | ಏನಿದು ಪೌರತ್ವ ತಿದ್ದುಪಡಿ ಮಸೂದೆ?

ಇನ್ನು ಎನ್ಆರ್‌ಸಿ (ಅದಕ್ಕೆ ಪೂರ್ವಭಾವಿಯಾಗಿರುವ ಎನ್‌ಪಿಆರ್) ಸೃಷ್ಟಿಸಿರುವ ಆತಂಕ ಎಂತಹದ್ದು ಅಂತ ತಿಳಿಯಬೇಕಾದರೆ ಸಮಸ್ಯೆಯನ್ನು ವಿಶಾಲವಾಗಿ ಅರ್ಥಮಾಡಿಕೊಳ್ಳಬೇಕು. ಸಮಸ್ಯೆ ಮೂಲಭೂತವಾಗಿ ವಲಸೆಯದ್ದು. ಮನುಕುಲದ ಚರಿತ್ರೆಯೇ ವಲಸೆಯ ಚರಿತ್ರೆ. ಬದುಕನ್ನು ಅರಸಿಕೊಂಡು ಜನ ಅನ್ಯ ದೇಶಗಳಿಗೆ ಅಕ್ರಮವಾಗಿ ನುಸುಳುವುದು, ಉಳಿದುಕೊಳ್ಳುವುದು ಇತ್ಯಾದಿ ಸಾರ್ವಕಾಲಿಕ ವಿದ್ಯಮಾನ. ಇದನ್ನು ನೋಡಿಕೊಂಡು ಯಾವ ದೇಶವೂ ಕೈಕಟ್ಟಿಕೊಂಡು ಕುಳಿತುಕೊಳ್ಳುವುದಿಲ್ಲ. ಹಾಗಂತ, ಇದು ಮಾನವೀಯವಾಗಿ ನಿಭಾಯಿಸಬೇಕಾದ ಒಂದು ಸಮಸ್ಯೆ. ಇದನ್ನು ಪೆಟ್ಟೊಂದು ತುಂಡೆರಡು ಎಂಬ ಮಾದರಿಯಲ್ಲಿ ಪರಿಹರಿಸಿಬಿಡುವ ಸೂತ್ರವೊಂದು ಇಲ್ಲ. ದೇಶದ ಭದ್ರತೆಯೂ ಸೇರಿದಂತೆ ಹಲವು ಸವಾಲುಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಸಮಸ್ಯೆಯನ್ನು ಸಂವಿಧಾನದ ಚೌಕಟ್ಟಿನೊಳಗೇ ನಿಭಾಯಿಸುವುದು ಸುಲಭವಲ್ಲ ಅಂತ ಎಲ್ಲರಿಗೂ ಗೊತ್ತು. ಆದರೆ ಎನ್ಆರ್‌ಸಿಯಂತಹ ಪರಿಹಾರ ಈ ಸಮಸ್ಯೆಯಲ್ಲಿರುವ ಮಾನವೀಯ ಮುಖವನ್ನು ಕಡೆಗಣಿಸಿ, ಸಾಂವಿಧಾನಿಕ ಪ್ರಶ್ನೆಗಳನ್ನು ಧಿಕ್ಕರಿಸಿ, ಪ್ರಾಯೋಗಿಕ ಸವಾಲುಗಳನ್ನು ಸರಳೀಕರಿಸಿ, ಭವಿಷ್ಯದಲ್ಲಿ ದೊಡ್ಡ ಮಾನವೀಯ ಬಿಕ್ಕಟ್ಟಿಗೆ ಆಹ್ವಾನ ನೀಡುವಂತಿದೆ.


ನಾರಾಯಣ ಎ.

ತಲೆತಲಾಂತರಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ನೆಲೆಸಿದ ಜನ ಅಕ್ರಮವಾಸಿಗಳೇ ಆಗಿದ್ದರೂ ಅವರನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಿ ಬಂಧನ ಗೃಹದಲ್ಲಿರಿಸುವ ಪ್ರಸ್ತಾವ ಹಿಟ್ಲರನ ಕಾನ್ಸಂಟ್ರೇಶನ್ ಕ್ಯಾಂಪ್‌ಗಳನ್ನು ನೆನಪಿಗೆ ತರುತ್ತದೆ. ಎಷ್ಟು ಜನರನ್ನು, ಎಷ್ಟು ಸಮಯ ಅಂತ ಬಂಧನದಲ್ಲಿ ಇಟ್ಟುಕೊಳ್ಳಲು ಸಾಧ್ಯ? ಇಡೀ ಪ್ರಕ್ರಿಯೆಯಲ್ಲಿ ದೇಶವಾಸಿಗಳೂ ಅಕ್ರಮವಾಸಿಗಳೆಂದು ಪರಿಗಣಿಸಲ್ಪಟ್ಟು ಇಂತಹ ಕೇಂದ್ರ ಸೇರುವ ಅಪಾಯವೂ ಇದೆ ಎನ್ನುವ ಅಂಶವನ್ನು ಅಸ್ಸಾಂನಲ್ಲಿ ನಡೆದ ಎನ್ಆರ್‌ಸಿ ತೋರಿಸಿಕೊಟ್ಟಿದೆ. ಇಂತಹ ಕರಾಳ ಯೋಜನೆಯೊಂದನ್ನು ಚುನಾಯಿತ ಸರ್ಕಾರವೊಂದು ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದನ್ನು ನೋಡುತ್ತಿದ್ದರೆ ‘ಎಂತಹವರು ನಮ್ಮನ್ನು ಆಳುತ್ತಿದ್ದಾರೆ’ ಎನ್ನುವ ಆತಂಕ ಮನುಷ್ಯಮಾತ್ರರನ್ನು ಕಾಡಲೇಬೇಕು.

ಒಬ್ಬ ಬಿಜೆಪಿ ನಾಯಕ ‘ಅವರೆಲ್ಲಾ ಹೋಗಿ ಹಿಂದೂ ಮಹಾಸಾಗರದಲ್ಲಿ ಮುಳುಗಿ ಸಾಯಲಿ’ ಎಂದಿದ್ದಾರೆ! ಬಂದವರನ್ನೆಲ್ಲಾ ಇಟ್ಟುಕೊಳ್ಳಲು ಭಾರತವೇನು ಧರ್ಮಛತ್ರವೋ ಅಂತ ಬಿಜೆಪಿಯ ಬುದ್ಧಿಜೀವಿಗಳು ಪ್ರಶ್ನಿಸುತ್ತಿದ್ದಾರೆ. ಇವರೆಲ್ಲಾ ಒಂದು ವಿಚಾರ ಮರೆಯುತ್ತಾರೆ. ಎಲ್ಲ ಶ್ರೀಮಂತ ದೇಶಗಳಲ್ಲೂ ಅಕ್ರಮವಾಗಿ ನೆಲೆಸಿದ ಲಕ್ಷಲಕ್ಷ ಭಾರತೀಯರಿದ್ದಾರೆ.

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ (2019, ಡಿ. 1), 2010-17ರ ನಡುವೆ ಅಮೆರಿಕವೊಂದರಲ್ಲೇ ಅಕ್ರಮವಾಗಿ ಉಳಿದುಕೊಂಡಿರುವವರಲ್ಲಿ ಅತೀ ಹೆಚ್ಚಿರುವುದು ಭಾರತೀಯರು (3.30 ಲಕ್ಷ). ಎಲ್ಲ ದೇಶಗಳೂ ಅಕ್ರಮವಾಸಿಗಳ ಬಗ್ಗೆ ಕ್ರೂರ ತೀರ್ಮಾನವೊಂದನ್ನು ಕೈಗೊಂಡದ್ದೇ ಆದರೆ, ಅದಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಲಿರುವವರು ಭಾರತದ ಹಿಂದೂಗಳೇ ಆಗಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು