ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಸುಸ್ಥಿರತೆ ಪಾಠ ಹೇಳುವ ಮುನ್ನ...

ಮಾನವ ನಿರ್ಮಿತ ಮಹಾನ್ ದುರಂತ ಅಂತ ಒಂದಿದ್ದರೆ ಅದರ ಹೆಸರು ‘ಅಭಿವೃದ್ಧಿ’
Last Updated 27 ಆಗಸ್ಟ್ 2018, 20:30 IST
ಅಕ್ಷರ ಗಾತ್ರ

ಕೊಡಗು ಮತ್ತು ಕೇರಳದಲ್ಲಿ ಆಗಿಹೋಗಿದ್ದು ಮಾನವ ನಿರ್ಮಿತ ಮಹಾದುರಂತ ಎನ್ನುವ ಅಭಿಪ್ರಾಯ ಈಗ ಎಲ್ಲೆಡೆ ಧ್ವನಿಸುತ್ತಿದೆ. ಆ ಅಭಿಪ್ರಾಯಕ್ಕೆ ಮಾರ್ದನಿಯಾಗುತ್ತಾ ಇಲ್ಲಿ ಇನ್ನೊಂದು ಹಂತದ ಕೆಲ ಪ್ರಶ್ನೆಗಳನ್ನು ಎತ್ತಿದರೆ ಅದು ತಪ್ಪಾಗಲಾರದು ಅನ್ನಿಸುತ್ತದೆ. ಈ ಮಾನವ ನಿರ್ಮಿತಿಯಲ್ಲಿ ಅಲ್ಲಿನ ಜನ ತಮ್ಮ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಂಡದ್ದರ ಪಾತ್ರ ಎಷ್ಟಿರಬಹುದು? ಅಲ್ಲಿನ ಜನ ತಮ್ಮ ಅತಿ ಆಸೆಗಳನ್ನು ಪೂರೈಸಿಕೊಂಡದ್ದರ ಪಾಲು ಎಷ್ಟಿರಬಹುದು? ಮತ್ತು ಜನ ತಮ್ಮ ದುರಾಸೆಗಳನ್ನು ಪೂರೈಸಿಕೊಂಡ ಕಿಮ್ಮತ್ತು ಎಷ್ಟಿರಬಹುದು?

ಈ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರ ಇದೆ ಅಂತ ಅನ್ನಿಸುವುದಿಲ್ಲ. ಉತ್ತರ ಕಂಡುಕೊಳ್ಳುವ ತನಕ ಮಾನವ ನಿರ್ಮಿತ ಎನ್ನುವ ಆಪಾದನೆ ಕೇವಲ ಆಪಾದನೆಯಾಗಿಯೇ ಉಳಿಯುತ್ತದೆ ಹೊರತು, ಯಾವುದೇ ಪರಿಹಾರಕ್ಕೆ ಮೂಲವಾಗುವುದಿಲ್ಲ. ಒಬ್ಬ ಸ್ಥಳೀಯ ಜನನಾಯಕರು ‘ಇದು ಮೂವತ್ತು ಪರ್ಸೆಂಟ್ ಮಾನವನಿರ್ಮಿತ’ ಅಂತ ಹೇಳಿಕೆ ನೀಡಿದ್ದಾಗಿ ವರದಿಯಾಗಿದೆ. ಇಷ್ಟೊಂದು ಕರಾರುವಾಕ್ಕಾಗಿ ಅವರಿಗೆ ಎಲ್ಲಿಂದ ಲೆಕ್ಕ ಸಿಕ್ಕಿತೋ ಗೊತ್ತಿಲ್ಲ. ಅವರು ಸದುದ್ದೇಶದಿಂದಲೇ ಈ ಹೇಳಿಕೆ ನೀಡಿರಬಹುದು. ವಿಷಯ ಅದಲ್ಲ. ಲೆಕ್ಕಕ್ಕೆ ಸಿಗದ್ದರ, ಲೆಕ್ಕ ಹಾಕಲಾಗದ್ದರ ಲೆಕ್ಕಾಚಾರಗಳೆಲ್ಲ ನಮಗೆ ಪಕ್ಕಾ ಗೊತ್ತಿದೆ ಎಂದು ಭಾವಿಸುವುದು ಕೂಡಾ ಇಂತಹ ದುರಂತಗಳ ಹಿಂದಿನ ದುರಂತ.

ಮನುಷ್ಯ ತನ್ನ ಅವಶ್ಯಕತೆ, ಅತಿ ಆಸೆ ಮತ್ತು ದುರಾಸೆಗಳನ್ನೆಲ್ಲಾ ಪರಸ್ಪರ ಪ್ರತ್ಯೇಕಿಸದೆ ಪೂರೈಸಿಕೊಳ್ಳುವ ಪ್ರಕ್ರಿಯೆಯೇ ಅಭಿವೃದ್ಧಿ ಅಂತ ಕರೆಯಲ್ಪಡುವುದರಿಂದ ಮತ್ತು ಈ ಅಭಿವೃದ್ಧಿ ಎನ್ನುವ ಪತಾಕೆ ಹಿಡಿದು ಏನನ್ನೇ ಆದರೂ ಸಮರ್ಥಿಸಿಕೊಳ್ಳಬಹುದಾದ ಕಾಲಘಟ್ಟವೊಂದರಲ್ಲಿ ನಾವಿರುವುದರಿಂದ ಕೆಲವು ಪ್ರಶ್ನೆಗಳನ್ನು ನಾವು ಕೇಳುವುದಿಲ್ಲ, ಕೇಳಿದರೂ ಅವುಗಳಿಗೆ ಉತ್ತರ ಲಭಿಸುವುದಿಲ್ಲ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿದ್ದು ಅಭಿವೃದ್ಧಿಯ ಹೆಸರಲ್ಲಿ. ಅಳೆದು ಸುರಿದು ತಯಾರಾದ ಕಸ್ತೂರಿ ರಂಗನ್ ವರದಿಯೂ ಜಾರಿಯಾಗುವುದು ಬೇಡ ಅಂತ ಘಟ್ಟಗಳ ಮತ್ತು ಘಟ್ಟಗಳ ಸುತ್ತಣ ಬಹಳಷ್ಟು ಮಂದಿ ಪಟ್ಟು ಹಿಡಿಯುತ್ತಿರುವುದು ಅಭಿವೃದ್ಧಿಯ ಹೆಸರಿನಲ್ಲಿ. ಈ ವರದಿಗಳನ್ನು ಯಾರೂ ಸರಿಯಾಗಿ ಓದುವ, ಚರ್ಚಿಸುವ ಗೋಜಿಗೆ ಹೋದಂತಿಲ್ಲ. ದುರಂತ ನಡೆದು ಇಷ್ಟು ಸಮಯದ ನಂತರವೂ ಈ ವರದಿಗಳಲ್ಲಿ ಏನಿದೆ, ಅವುಗಳನ್ನು ವಿರೋಧಿಸುವವರು ಯಾಕೆ ವಿರೋಧಿಸುತ್ತಿದ್ದಾರೆ, ಸಮರ್ಥಿಸುವವರು ಯಾಕೆ ಸಮರ್ಥಿಸುತ್ತಿದ್ದಾರೆ ಅಂತ ಒಂದು ಕೂಲಂಕಷ ಚರ್ಚೆ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಕಾಣಿಸುತ್ತಿಲ್ಲ. ಇರಲಿ.

ಈ ಎಲ್ಲಾ ಪರಿಣತರ ವರದಿಗಳು ಅಲ್ಲಿನ ಜನರ ಅವಶ್ಯಕತೆಗಳನ್ನು, ಅತಿ ಆಸೆ ಮತ್ತು ದುರಾಸೆಗಳನ್ನು ಪ್ರತ್ಯಪ್ರತ್ಯೇಕವಾಗಿ ದೃಷ್ಟಿಯಲ್ಲಿಟ್ಟುಕೊಂಡೇ ಏನಾಗಬೇಕು, ಏನಾಗಬಾರದು ಎನ್ನುವುದನ್ನು ಸೂಚಿಸಿವೆ ಅಂತಲೇ ಇಟ್ಟುಕೊಳ್ಳೋಣ. ಹಾಗಿದ್ದರೂ ಅಲ್ಲಿನ ಜನ ಇನ್ನೊಂದು ಪ್ರಶ್ನೆ ಎತ್ತಬಹುದು, ಎತ್ತುತ್ತಾರೆ, ಎತ್ತುತ್ತಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಎಲ್ಲೆಡೆ ಜನ ತಮ್ಮ ದುರಾಸೆಗಳನ್ನೂ ನೀಗಿಕೊಳ್ಳಬಹುದಾದರೆ ನಾವು ಮಾತ್ರ ನಮ್ಮ ಅವಶ್ಯಕತೆಗಳನ್ನು ಪೂರೈಸುವಾಚೆಗೆ ಯಾಕೆ ‘ಅಭಿವೃದ್ಧಿ’ ಹೊಂದಬಾರದು ಎಂದು ಕೇಳುತ್ತಾರೆ. ‘ಈ ಪ್ರದೇಶದಲ್ಲಿ ಹುಟ್ಟಿದ ತಪ್ಪಿಗೆ ನಮ್ಮ ಬದುಕನ್ನು ಕೃಷಿ ಜೀವನಕ್ಕೆ, ಋಷಿ ಜೀವನಕ್ಕೆ ಸೀಮಿತಗೊಳಿಸಬೇಕು ಅಂತ ನೀವೆಲ್ಲಾ ಯಾಕೆ ಹೇಳುತ್ತಿದ್ದೀರಿ’ ಅಂತ ಪ್ರಶ್ನಿಸಬಹುದು, ಪ್ರಶ್ನಿಸುತ್ತಾರೆ, ಪ್ರಶ್ನಿಸುತ್ತಿದ್ದಾರೆ. ಇವೆಲ್ಲಾ ಅಭಿವೃದ್ಧಿ ಎಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದರೊಳಗಣ ಸಮಾನತೆಗೆ ಸಂಬಂಧಿಸಿದ ಪ್ರಶ್ನೆಗಳು. ಇಂತಹ ಪ್ರಶ್ನೆಗಳನ್ನು ತಾಂತ್ರಿಕವಾಗಿ ಯೋಚಿಸುವ ಪರಿಣತರು ಕಡೆಗಣಿಸಬಹುದು. ಆದರೆ ಇಂತಹ ಪ್ರಶ್ನೆಗ
ಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಯೋಚಿಸಬೇಕಾದ ಜನನಾಯಕರು ಕಡೆಗಣಿಸುವಂತಿಲ್ಲ. ಹಾಗಂತ ಇಂತಹ ಪ್ರಶ್ನೆಗಳಿಗೆ ರಾಜಕೀಯವಾಗಿ ಯಾರ ಬಳಿಯೂ ಉತ್ತರವೂ ಇಲ್ಲ, ಅವುಗಳ ಮೂಲದಲ್ಲಿರುವ ಸಮಸ್ಯೆಗಳಿಗೆ ಪರಿಹಾರವೂ ಇಲ್ಲ. ಸಮಸ್ಯೆ ಜಟಿಲವಾಗುವುದು ಇಲ್ಲಿ.

ನಾವು ನಿರಂತರ ಹಪಹಪಿಸುವ ಅಭಿವೃದ್ಧಿ ಎಂದರೆ ಅದು ಯಾವುದು? ಎತ್ತರ ಎತ್ತರ ಮತ್ತೂ ಎತ್ತರದ ಕಾಂಕ್ರೀಟ್ ಕಟ್ಟಡಗಳನ್ನು ಎಬ್ಬಿಸುವುದು ಅಭಿವೃದ್ಧಿ. ಆ ಸರಕು, ಈ ಸರಕು, ಎಲ್ಲಾ ಸರಕುಗಳು ಒಂದೆಡೆ ರಾಶಿ ಹಾಕುವ ದೊಡ್ಡ ದೊಡ್ಡ ಇನ್ನೂ ದೊಡ್ಡ ಮಾಲ್‌ಗಳನ್ನು ಹಬ್ಬಿಸುವುದು ಅಭಿವೃದ್ಧಿ. ಅಗಲ ಅಗಲ ಮತ್ತೂ ಅಗಲದ ಡಾಂಬರು ರಸ್ತೆಗಳನ್ನು ನಿರ್ಮಿಸುವುದು ಮತ್ತು ಆ ನಂತರ ಅವುಗಳನ್ನು ಕಾಂಕ್ರೀಟೀಕರಣಗೊಳಿಸುವುದು ಅಭಿವೃದ್ಧಿ. ಆ ವಿನ್ಯಾಸದ, ಈ ವಿನ್ಯಾಸದ, ದೊಡ್ಡ ಹಡಗಿನ ವಿನ್ಯಾಸದ ಕಾರುಗಳನ್ನು ಖರೀದಿಸುವುದು ಮತ್ತು ಅವುಗಳನ್ನು ಆಗಾಗ ಬದಲಿಸಿಕೊಳ್ಳುವುದು ಅಭಿವೃದ್ಧಿ. ಹೆಚ್ಚು ಹೆಚ್ಚು ಇನ್ನೂ ಹೆಚ್ಚು ವಿದ್ಯುತ್ ಹೀರುವ ಪರಿಕರಗಳನ್ನು ಹೊಂದುವುದು ಅಭಿವೃದ್ಧಿ. ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಅರಮನೆಯಷ್ಟು ವಿಸ್ತಾರವಾದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದು ಅಭಿವೃದ್ಧಿ. ಅರೆ ಕ್ಷಣವೂ ಮೊಬೈಲ್ ಬಿಟ್ಟಿರಲಾಗದ ಗೀಳು ಬೆಳೆಸಿಕೊಳ್ಳುವುದು ಅಭಿವೃದ್ಧಿ, ಒಟ್ಟಿನಲ್ಲಿ ಅಭಿವೃದ್ಡಿ ಎಂದರೆ ಉತ್ಪಾದನೆ, ಉತ್ಪಾದನೆ, ಉತ್ಪಾದನೆ- ಈ ಅಭಿವೃದ್ಧಿಯ ಹುಚ್ಚಿನಲ್ಲಿ ನಾವು ನೀವು ಎಲ್ಲರೂ ಸಾರ್ವತ್ರಿಕವಾಗಿ ಮಿಂದೇಳುತ್ತಿರುವಾಗ ಯಾರಿಗೆ ಯಾರೂ ಪರಿಸರ ಸಂರಕ್ಷಣೆಯ, ಸುಸ್ಥಿರ ಬದುಕಿನ ಪಾಠ ಹೇಳುವ ಸ್ಥಿತಿಯಲ್ಲಿಲ್ಲ. ಅಭಿವೃದ್ಧಿ ಅಂದರೆ ಅನಗತ್ಯ ಅನುಕೂಲಗಳನ್ನು ಮತಿಯಿಲ್ಲದೆ ಮಿತಿಮೀರಿ ಸೃಷ್ಟಿಸಿಕೊಳ್ಳುವ ಮನಸ್ಥಿತಿ. ಒಂದಷ್ಟು ಮಂದಿ ಅನಗತ್ಯ ಅನುಕೂಲಗಳನ್ನು ಬಯಸುತ್ತಿರುವುದರಿಂದ ಇನ್ನೊಂದಷ್ಟು ಮಂದಿಗೆ ತಮ್ಮ ಬದುಕಿನ ಅವಶ್ಯಕತೆಗಳನ್ನು ಪೂರೈಸಲು ಬೇಕಾದ ಜೀವನಾವಕಾಶಗಳು ಸೃಷ್ಟಿಯಾಗುತ್ತವೆ ಎನ್ನುವುದು ನಮ್ಮ ನಡುವಿನ ಆರ್ಥಿಕ ವಸ್ತುಸ್ಥಿತಿ. ಇದು ಕೊಡಗಿನ ಮತ್ತು ಕೇರಳದ ಕತೆ ಹೇಗೋ, ಹಾಗೆಯೇ ಸಮಸ್ತ ಭಾರತದ ಕತೆ, ಭಾರತದಾಚೆಗಿನ ಕತೆ ಕೂಡ.

ಈ ಅಭಿವೃದ್ಧಿ ಮಾದರಿಯನ್ನು ಹೀಗೆಯೇ ಒಪ್ಪಿಕೊಂಡು ಅಪ್ಪಿಕೊಂಡು ಇದ್ದಷ್ಟು ಕಾಲ ಗಾಡ್ಗೀಳ್ ಅಲ್ಲ, ಕಸ್ತೂರಿ ರಂಗನ್ ಅಲ್ಲ, ಸ್ವತಃ ಕಾಲಪುರುಷನೇ ಬಂದು ವರದಿ ನೀಡಿದರೂ ಅದನ್ನು ಸ್ವೀಕರಿಸಿ ಅನುಷ್ಠಾನಗೊಳಿಸುವ ಸಿದ್ಧತೆಯನ್ನಾಗಲೀ ಬದ್ಧತೆಯನ್ನಾಗಲೀ ಯಾರೂ ತೋರಲು ಸಾಧ್ಯವಿಲ್ಲ. ಹೆಚ್ಚು ಹೆಚ್ಚು ಉತ್ಪಾದನೆ ಮತ್ತು ಹೆಚ್ಚು ಹೆಚ್ಚು ಬಳಕೆಯ ಹಾದಿಯಲ್ಲೇ ಸಾಗುವ ಅಭಿವೃದ್ಧಿ ಪಥವನ್ನು ಸುಸ್ಥಿರವಾಗಿ ಕಟ್ಟಬಹುದು (sustainable development) ಎನ್ನುವ ಆಶಾವಾದವೂ ಬರೀ ಲೊಳಲೊಟ್ಟೆ ಎಂದು ನಮ್ಮ ನಡುವಿನ ಪ್ರಖ್ಯಾತ ಅಭಿವೃದ್ಧಿ ಸಮಾಜಶಾಸ್ತ್ರ ಚಿಂತಕ ಶಿವ್ ವಿಶ್ವನಾಥನ್ ಆಗಾಗ ಹೇಳುತ್ತಿರುತ್ತಾರೆ. ಕಡಿಮೆ ಉತ್ಪಾದನೆ, ಕಡಿಮೆ ಬಳಕೆ ಎನ್ನುವ ಪರ್ಯಾಯ ಅಭಿವೃದ್ಧಿ ಸೂತ್ರದ ಆವಿಷ್ಕಾರವಾಗದಷ್ಟು ಕಾಲ ಸುಸ್ಥಿರತೆ ಎನ್ನುವುದು ಮರೀಚಿಕೆಯಾಗಿಯೇ ಇರುತ್ತದೆ.

ಒಂದೆಡೆ ಶ್ರೀಮಂತ ದೇಶಗಳು ಪರಿಸರ ವಿನಾಶಕಾರಿಯಾದ ಅಭಿವೃದ್ಧಿ ಮಾದರಿಯೊಂದರ ಹೆಗಲೇರಿ ಜೀವನಮಟ್ಟದ ತುತ್ತತುದಿ ತಲುಪಿವೆ. ಅವುಗಳದ್ದೇ ಮಾದರಿ ಅನುಸರಿಸಿ ಈಗಷ್ಟೇ ಜೀವನ ಮಟ್ಟ ಸುಧಾರಿಸಹೊರಟಿರುವ ಅಭಿವೃದ್ಧಿಶೀಲ ದೇಶಗಳಿಗೆ ಈಗ ಆ ದೇಶಗಳು ಪರಿಸರ ಸಂರಕ್ಷಣೆಯ ಪಾಠ ಹೇಳುತ್ತಿವೆ. ನಮಗೆ ನಾವು ಏರಿದ ಜೀವನ ಮಟ್ಟದಿಂದ ಕೆಳಗಿಳಿಯಲಾಗದು; ಆದುದರಿಂದ ನೀವು ಆ ಮಟ್ಟಕ್ಕೆ ಬರಬೇಡಿ, ಹೆಚ್ಚು ಇಂಧನ ಬಳಸಬೇಡಿ, ಪರಿಸರ ಉಳಿಸಿ ಅಂತ ಅವು ಹೇಳುತ್ತವೆ. ಈ ಸಲಹೆಗಳನ್ನು ಅಭಿವೃದ್ಧಿಶೀಲ ದೇಶಗಳು ಒಪ್ಪುತ್ತಿಲ್ಲ. ನೀವು ಮೊದಲು ನಿಮ್ಮ ಉತ್ಪಾದನೆ, ನಿಮ್ಮ ಸಂಪನ್ಮೂಲ ಬಳಕೆ, ನಿಮ್ಮ ಇಂಧನ ಅವಲಂಬನೆ ಕಡಿಮೆ ಮಾಡಿ, ಆ ಬಳಿಕ ನಮಗೆ ಹೇಳಿರಿ ಎನ್ನುತ್ತಿವೆ. ಇದು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ನಡೆಯುತ್ತಿರುವ ಹಗ್ಗ-ಜಗ್ಗಾಟ. ಈಗ ಈ ಜಗ್ಗಾಟ, ಈ ಮೇಲಾಟ ದೇಶ- ದೇಶಗಳ ಒಳಗೆ, ಪ್ರದೇಶ– ಪ್ರದೇಶಗಳ ನಡುವೆ ಅಥವಾ ರಾಜ್ಯ-ರಾಜ್ಯಗಳ ಮಧ್ಯೆ ನಡೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತವೆ. ಪಶ್ಚಿಮಘಟ್ಟಗಳ ತಪ್ಪಲಲ್ಲಿ ಇರುವ ಜನರು ಪರಿಸರ ನಾಶ ಮಾಡಬೇಡಿ ಅಂತ ಹೇಳುವವರು ಯಾರು? ನಗರಗಳಲ್ಲಿ ಬದುಕುತ್ತಾ ಕುಟುಂಬದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಕಾರು ಇರಿಸಿಕೊಂಡು, ರಸ್ತೆಗಳ ಮೇಲೆ ರಸ್ತೆ ಕಟ್ಟಿಕೊಂಡು, ಮೇಲ್ಸೇತುವೆಗಳ ಮೇಲೆ ಮೇಲ್ಸೇತುವೆಗಳನ್ನು ನಿರ್ಮಿಸಿಕೊಂಡು, ರಾಜಕಾಲುವೆಗಳನ್ನೂ ಬಿಡದೆ ಬಂಗಲೆ ನಿರ್ಮಿಸಿಕೊಂಡು, ಬೋರ್‌ವೆಲ್‌ ಬಳಸಿ ಭೂಗರ್ಭದಿಂದ ಬಗೆದ ಜೀವಜಲ ಬಳಸಿ ಈಜುಕೊಳ ನಿರ್ಮಿಸಿಕೊಂಡು ಬದುಕುವ ಮಂದಿಗಳಲ್ಲವೇ? ಕನಿಷ್ಠ ಹಸಿ-ಕಸ, ಒಣ-ಕಸ ಅಂತ ವಿಂಗಡಿಸಲೂ ಪುರುಸೊತ್ತಿಲ್ಲದೆ, ಪ್ಲಾಸ್ಟಿಕ್ ಸಹವಾಸ ಬಿಟ್ಟಿರಲಾರದೆ ಒದ್ದಾಡುವ ಮಂದಿಯಲ್ಲವೇ? ಇವರ ಮಾತುಗಳನ್ನು ಅವರು ಯಾಕೆ ಕೇಳಬೇಕು? ಇವರು ಸ್ವತಃ ಬದಲಾಗದೆ ಅವರಿಗೆ ಯಾಕೆ ಬುದ್ಧಿ ಹೇಳುವ ಉಸಾಬರಿಗೆ ಹೋಗಬೇಕು? ಇವೆಲ್ಲಾ ಪ್ರಶ್ನೆಗಳು ಈಗ ಚಾಲ್ತಿಗೆ ಬರಲಿವೆ. ಧಾರಣಾ ಸ್ಥಿತಿ ಎನ್ನುವುದನ್ನು ಗಮನಿಸಿ ‘ಅಭಿವೃದ್ಧಿ’ ಸಾಧಿಸಬೇಕು ಎನ್ನುವುದು ಪಶ್ಚಿಮಘಟ್ಟ, ಪೂರ್ವಘಟ್ಟ ಶ್ರೇಣಿಗಳಿಗೆ ಮಾತ್ರ ಸೀಮಿತವಾದ ಸತ್ಯವಲ್ಲ, ಅದು ಪರಿಸರ ಸೂಕ್ಷ್ಮವಲಯಗಳಲ್ಲಿ ಮಾತ್ರ ಪಾಲಿಸಬೇಕಾದ ನಿಯಮವಲ್ಲ, ಅದು ಈ ಸೃಷ್ಟಿಯ ಇಂಚಿಂಚು ಪ್ರದೇಶಕ್ಕೂ ಅನ್ವಯವಾಗುವ ಪ್ರಮೇಯ.

ಆದುದರಿಂದ ಮುಳುಗುವುದಾದರೆ ಒಟ್ಟಿಗೆ ಮುಳುಗೋಣ, ತೇಲುವುದಾದರೆ ಒಟ್ಟಿಗೆ ತೇಲೋಣ ಎನ್ನುವ ವಾದವನ್ನು ಸಂಪೂರ್ಣ ಕಡೆಗಣಿಸಲಾಗದು. ನಮ್ಮ ಅಭಿವೃದ್ಧಿ ಮಾದರಿ ಪರಿಸರವನ್ನು ಮಾತ್ರ ಕೆಡಿಸಿದ್ದಲ್ಲ, ಅದು ಪರಿಸರ- ಸಂರಕ್ಷಣಾವಾದದಲ್ಲಿ ಈ ರೀತಿಯ ಒಂದು ದೊಡ್ಡ ಅಸಮಾನತೆಯನ್ನೂ ಸೃಷ್ಟಿಸಿಬಿಟ್ಟು ಪರಿಹಾರದ ಹಾದಿಯನ್ನು ಸಂಘರ್ಷಮಯಗೊಳಿಸಿಬಿಟ್ಟಿದೆ. ಪರಿಸರವಾದಿಗಳು ರಾಜಕೀಯ ನಾಯಕರಿಗೆ ಅಭಿವೃದ್ಧಿಕಂಟಕರಾಗಿ ಕಾಣಿಸುತ್ತಾರೆ, ರಾಜಕಾರಣಿಗಳು ಪರಿಸರವಾದಿಗಳಿಗೆ ಭ್ರಷ್ಟ ಪರಿಸರ ವಿನಾಶಕರಾಗಿ ವ್ಯಕ್ತಿಗಳಾಗಿ ಕಾಣಿಸುತ್ತಾರೆ. ಹೀಗೆ ಪರ–ವಿರೋಧಗಳು ಸದಾ ಸಮಾನಾಂತರ ರೇಖೆಗಳಲ್ಲೇ ಚಲಿಸುತ್ತಾ ಸಂಘರ್ಷಗಳಲ್ಲಿ ಮತ್ತು ತೋರಿಕೆಯ ಪರಿಸರ ಸಂರಕ್ಷಣೆಯಲ್ಲಿ ಮಾತ್ರ ಒಂದಾಗುತ್ತಾರೆ. ಕೊಡಗಿನಲ್ಲಿ, ಕೇರಳದಲ್ಲಿ ಆಗಿರುವುದು ಮಾನವನಿರ್ಮಿತ ದುರಂತ ಅಂತ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರೂ ಉದ್ಗರಿಸಿಬಿಟ್ಟಿದ್ದಾರೆ. ಇಷ್ಟು ಹೇಳುವುದಕ್ಕೆ ನ್ಯಾಯಾಧೀಶರೇ ಬೇಕಿಲ್ಲ. ಮಾನವನಿರ್ಮಿತ ಅಂದು ಬಿಟ್ಟರೆ ಆಗಿ ಹೋದದ್ದಕ್ಕೆಲ್ಲಾ ಬರೀ ಕೊಡಗಿನ ಮತ್ತು ಕೇರಳದ ಜನರನ್ನು ಮಾತ್ರ ಹೊಣೆಮಾಡಿದಂತಾಗುತ್ತದೆ. ಇದನ್ನು ಮಾನವನಿರ್ಮಿತ ಎನ್ನುವುದರ ಬದಲಿಗೆ ಮಾನವರೆಲ್ಲರೂ ನಿರ್ಮಿಸಿದ ದುರಂತ ಅಂತ ಅಂದರೆ ಹೆಚ್ಚು ಸೂಕ್ತ.

ಇಷ್ಟು ಕಾಲ ಒಪ್ಪಿಕೊಂಡ ಅಭಿವೃದ್ಧಿ ಮಾದರಿಯನ್ನು ಬದಲಿಸುವುದು, ಪ್ರಕೃತಿಯ ಜತೆ ದೊಡ್ಡ ಮಟ್ಟದ ಸಂಘರ್ಷ ಇಲ್ಲದ ಅಭಿವೃದ್ಧಿ ಪರ್ಯಾಯಗಳನ್ನು ರೂಪಿಸುವುದು, ಅಭಿವೃದ್ಡಿಯ ಹೊಸ ಪರಿಕಲ್ಪನೆ, ಹೊಸ ನುಡಿಗಟ್ಟು ಇತ್ಯಾದಿಗಳನ್ನು ಸೃಷ್ಟಿಸುವುದು ಮತ್ತು ಅದಕ್ಕೆ ಜನಸಮೂಹವನ್ನು ಒಪ್ಪಿಸುವುದು ಇತ್ಯಾದಿಗಳು ಅತ್ಯಂತ ದುಸ್ತರವಾದ ಕೆಲಸ. ಅದನ್ನು ಮಾಡಬೇಕು ಎಂದಾದರೆ ಬೇಕಿರುವುದು ಅಂತಿಂತಾ ರಾಜಕೀಯ ನಾಯಕತ್ವವಲ್ಲ. ನಮ್ಮ ನಡುವೆ ದೇಶದಾದ್ಯಂತ ಇರುವುದು ಈಗಿನ ವಿನಾಶಕಾರಿ ಅಭಿವೃದ್ಧಿ ಮಾದರಿಗೆ ತಮ್ಮನ್ನು ತಾವೇ ಮಾರಿಕೊಂಡ ನಾಯಕತ್ವ. ಈ ಮಾದರಿಯಾಚೆ ಒಂದಿಂಚೂ ಯೋಚಿಸಲಾಗದ ನಾಯಕತ್ವ. ಈ ಮಾದರಿಯಿಂದಲೇ ರಾಜಕೀಯವಾಗಿ ಜೀವ ಪಡೆದಿರುವ ಮತ್ತು ಪಡೆಯುತ್ತಿರುವ ರಾಜಕೀಯ ನಾಯಕತ್ವ. ‘ಅಭಿವೃದ್ಧಿ’ ಕೆಲಸ ಮಾಡುತ್ತೇನೆ ಎನ್ನುವ ಯಾವ ಜನಪ್ರತಿನಿಧಿಯ ಕಲ್ಪನೆಯಲ್ಲೂ ಕಟ್ಟಡ, ರಸ್ತೆ, ಮೋರಿ, ಕಾಮಗಾರಿ ಬಿಟ್ಟರೆ ಇನ್ನೇನಾದರೂ ಯೋಚನೆ ಇದೆ ಎನ್ನುವ ಪುರಾವೆ ಲಭಿಸುತ್ತಿಲ್ಲ. ಇನ್ನೊಂದು ವಿಷಯ. ಈ ಬದಲಾವಣೆಯನ್ನು ಒಮ್ಮಿಂದೊಮ್ಮೆಲೆ ತರಲಾಗದು. ಇದು ನಿಧಾನವಾದ ಪ್ರಕ್ರಿಯೆ. ಅಷ್ಟೊಂದು ನಿಧಾನವಾಗಿ ಸಾಧಿಸಬೇಕಾದ ಯಾವ ಗುರಿಗಳೂ ನಮ್ಮ ಐದು ವರ್ಷಗಳ ರಾಜಕೀಯ ವರ್ತುಲಕ್ಕೆ ಒಗ್ಗುವುದಿಲ್ಲ.

ಒಟ್ಟಿನಲ್ಲಿ ಏನು ಅಂದರೆ, ಅಪಾಯಕಾರಿ ಮಾದರಿಯೊಂದಿಗೆ ಬಹುದೂರ ನಡೆದುಬಂದಾಗಿದೆ. ಇನ್ನು ಹಿಂತಿರುಗಿ ಹೋಗುವ ಹಾಗಿಲ್ಲ. ಇನ್ನು ಏನಿದ್ದರೂ ವಿನಾಶಗಳೂ, ದುರಂತಗಳೂ ನಮ್ಮನ್ನು ಸರಿದಾರಿಗೆ ಬಲವಂತದಿಂದ ದೂಡಬೇಕು ಅಷ್ಟೇ. ಇದು ದುರಂತದಲ್ಲೇ ಪರಿಹಾರ ಅಡಗಿರುವ ದುರಂತ ಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT