ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶರಾಜಕಾರಣ ಈಗ ಸವಕಲು ವಾದ

ನಾಯಕರ ಮೂಲ ಯಾವುದಾದರೂ ಸಂಕುಚಿತ ಮಾದರಿಗೆ ಜೋತು ಬೀಳದಿರಲಿ
Last Updated 30 ಜನವರಿ 2019, 20:15 IST
ಅಕ್ಷರ ಗಾತ್ರ

ಕೆಲವೊಮ್ಮೆ ಹಾಗಾಗುತ್ತದೆ. ಜರುಗಿದ ಆಗುಹೋಗುಗಳಿಗಿಂತ ಹೆಚ್ಚಾಗಿ ಅವುಗಳಿಗೆ ಬರುವ ಪ್ರತಿಕ್ರಿಯೆಗಳು ಯಾರ‍್ಯಾರು ಹೇಗೆಲ್ಲಾ ಇರುತ್ತಾರೆ ಎನ್ನುವ ಬಗ್ಗೆ ಬಹಳಷ್ಟು ತಿಳಿಸುತ್ತವೆ. ಜವಾಹರಲಾಲ್ ನೆಹರೂ ಅವರ ಕುಟುಂಬದ ಮೂರನೆಯ ತಲೆಮಾರಿನ ಎರಡನೆಯ ಕುಡಿಯಾಗಿ ಪ್ರಿಯಾಂಕಾ ಗಾಂಧಿಯವರ ಅಧಿಕೃತ ರಾಜಕೀಯ ಪ್ರವೇಶ ಹೋದವಾರ ಘೋಷಣೆ ಆದಂದಿನಿಂದ, ಅತ್ತ ಕಾಂಗ್ರೆಸ್ಸಿಗರಿಂದ ಇತ್ತ ಬಿಜೆಪಿಯ ಮಂದಿಯಿಂದ ಬರುತ್ತಿರುವ ಪ್ರತಿಕ್ರಿಯೆ ಆಯಾ ಪಕ್ಷದ ಸದ್ಯದ ಮನಸ್ಥಿತಿಯನ್ನು ದೇಶದ ಮುಂದೆ ಅನಾವರಣಗೊಳಿಸಿದೆ. ಕಾಂಗ್ರೆಸ್ಸಿನ ಪ್ರತಿಕ್ರಿಯೆಯಲ್ಲಿ ಭ್ರಮೆಯಿದೆ, ಅಹಂಕಾರವಿದೆ. ಎಲ್ಲಿ ಅಹಂಕಾರವಿರುತ್ತದೋ ಅಲ್ಲಿ ಭ್ರಮೆ ಇರುವುದು ಸಹಜ.

ಬಿಜೆಪಿಯ ಪ್ರತಿಕ್ರಿಯೆಯಲ್ಲಿ ಎಂದಿನಂತೆ ಅಪ್ರಬುದ್ಧತೆ ಇದೆ, ಅಳುಕಿದೆ. ಅದಕ್ಕಿಂತ ಹೆಚ್ಚಾಗಿ ಆ ಪಕ್ಷವನ್ನು ಕಾಡುತ್ತಿರುವ ಅಭದ್ರ ಮನಸ್ಥಿತಿಯ ನೇರಾನೇರ ಪ್ರತಿಫಲನವಿದೆ. ಅಧಿಕಾರ ಇದ್ದಲ್ಲಿ ಅಭದ್ರತೆಯ ಭಾವನೆ ಇರಲೇಬೇಕಲ್ಲ.

ಸುದ್ದಿ ಕೇಳುತ್ತಲೇ ಕಾಂಗ್ರೆಸ್ಸಿನವರು ‘ಬಿಜೆಪಿಯ ಆಧಿಪತ್ಯದ ಅಂತ್ಯ ಪ್ರಾರಂಭವಾಗಿದೆ’ ಎಂದರು. ‘ಇನ್ನೇನು ಮೋದಿಯವರ ಗಾದಿ ಕುಸಿಯುತ್ತಿದೆ’ ಎಂದರು. ಬಿಜೆಪಿಯವರಂತೂ ಕಾಂಗ್ರೆಸ್ಸಿನ ಮೇಲೆ ಮುಗಿಬಿದ್ದರು. ಕಾಂಗ್ರೆಸ್ಸಿನ ವಂಶಪಾರಂಪರ್ಯದ ರಾಜಕಾರಣವನ್ನು ಬಿಜೆಪಿಯ ಡಿಜಿಟಲ್ ಕರಸೇವಕರಿಂದ ಪಕ್ಷದ ಅಧ್ಯಕ್ಷರ ತನಕ ಅಣಕಿಸಿದರು.

ಕೆಲವರು ಪ್ರಿಯಾಂಕಾ ಅವರ ದೇಹದ ಬಗ್ಗೆ ಮಾತನಾಡಿದರು, ಅವರ ಕುಟುಂಬದ ಬಗ್ಗೆ ಆಡಿದರು, ಆರೋಗ್ಯದ ಬಗ್ಗೆ ಕತೆ ಕಟ್ಟಿದರು. ಅವರ ಜಾತಿ ಮತ್ತು ಧರ್ಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಅವರು ಬಳೆ ತೊಡಲ್ಲ, ಕುಂಕುಮ ಇಡಲ್ಲ ಎಂದು ಚಿತ್ರಸಹಿತ ಸಾಕ್ಷ್ಯಗಳನ್ನು ದೇಶದ ಜನರ ವಾಟ್ಸ್‌ಆ್ಯಪ್‌ ಖಾತೆಗಳಿಗೆ ರವಾನಿಸಿದರು. ಚುನಾವಣೆಯ ಕಾಲದಲ್ಲಿ ಇನ್ನೂ ಏನೇನು ನೋಡಬೇಕೋ? ಅಂದಹಾಗೆ ಪ್ರಿಯಾಂಕಾ ಬಗ್ಗೆ ಅಧಿಕೃತವಾಗಿ ಲಭ್ಯ ಇರುವ ಮಾಹಿತಿ ಅವರು ಬೌದ್ಧ ಧರ್ಮಕ್ಕೆ ಸೇರಿದವರು ಎಂದು ಸಾರುತ್ತದೆ.

ಪ್ರಿಯಾಂಕಾ ಪ್ರವೇಶ ಕಾಂಗ್ರೆಸ್ಸಿನವರಿಗೆ ಸಂಭ್ರಮಪಡಬೇಕಾದ ವಿಚಾರ ಆಗಿರಬಹುದು, ಆಗಿದೆ. ಹಾಗೆಂದು, ಅವರ ಪ್ರವೇಶಮಾತ್ರದಿಂದ ಬಿಜೆಪಿ ಆಡಳಿತದ ಅಂತ್ಯ ಪ್ರಾರಂಭವಾಗಿದೆ ಎಂದು ಕಾಂಗ್ರೆಸ್‌ನವರು ಸಾರ್ವಜನಿಕವಾಗಿ ಹೇಳುತ್ತಿರುವುದು ಹಾಸ್ಯಾಸ್ಪದ. ಪ್ರಿಯಾಂಕಾ ಇನ್ನೂ ನಾಯಕತ್ವದ ನೆಲೆಯಿಂದ ಒಂದು ಮಾತೂ ಆಡಿಲ್ಲ. ಅವರು ದೇಶವನ್ನು ಅರ್ಥ ಮಾಡಿಕೊಂಡ ಆಳ ಎಷ್ಟು, ಅವರಿಗೆ ಈ ದೇಶದ ಜನಮನದ ನಾಡಿಮಿಡಿತ ಎಷ್ಟು ಗೊತ್ತು ಎಂಬಂತಹ ಯಾವ ವಿವರವೂ ಪಕ್ಷದ ಮಂದಿಗೂ ಸೇರಿದಂತೆ ಯಾರಿಗೂ ಗೊತ್ತಿಲ್ಲ. ಅವರು ಕುಟುಂಬದ ಕುಡಿಯಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ, ಮೋದಿ ಎಂಬ ರಾಜಕಾರಣಿ ಕಳೆದ 15 ವರ್ಷಗಳಿಂದ ಅಭೂತಪೂರ್ವವಾಗಿ ಕಟ್ಟಿದ ರಾಜಕೀಯ ಭದ್ರಕೋಟೆ ಇನ್ನೇನು ಕುಸಿದೇಬಿಟ್ಟಿತು ಅಂತ ಕಾಂಗ್ರೆಸ್ಸಿಗರು ಭಾವಿಸಿದರೆ ಅದು ಭ್ರಮೆ ಅಥವಾ ಅಹಂಕಾರದ ಮಾತು.

ಕಾಂಗ್ರೆಸ್ಸಿನ ಅನಿರೀಕ್ಷಿತ ನಿರ್ಧಾರವು ವಂಶಾಡಳಿತದ ಅಸ್ತ್ರ ಪ್ರಯೋಗಿಸಲು ಬಿಜೆಪಿಗೆ ಇನ್ನೂ ಹೆಚ್ಚಿನ ಅವಕಾಶ ಒದಗಿಸಿದೆ. ದೇಶದಲ್ಲಿ ಕಾಂಗ್ರೆಸ್ಸಿನ ಏಕಪಕ್ಷಾಧಿಪತ್ಯ ಇದ್ದಷ್ಟು ಕಾಲ ಈ ವಂಶಾಡಳಿತದ ವಿಚಾರ ಪ್ರಸ್ತುತವಾಗಿತ್ತು. ಕಾಂಗ್ರೆಸ್ ಆಧಿಪತ್ಯ ಅಂತ್ಯಗೊಂಡು ರಾಜ್ಯಕ್ಕೊಂದು, ಜಾತಿಗೊಂದು, ಧರ್ಮಕ್ಕೊಂದು, ಕುಟುಂಬಕ್ಕೊಂದು ಎಂಬಂತೆ ರಾಜಕೀಯ ಪಕ್ಷಗಳು ತಲೆಎತ್ತಿ ನಿಂತಿರುವ ಸಮಕಾಲೀನ ಭಾರತದಲ್ಲಿ ವಂಶಾಡಳಿತದ ಪ್ರಶ್ನೆ ಅರ್ಥ ಕಳೆದುಕೊಂಡಿದೆ. ಈಗ ಕಾಂಗ್ರೆಸ್ಸಿನ ವಂಶಾಡಳಿತವನ್ನು ಬೇರೆಯದೇ ರೀತಿಯಲ್ಲಿ ನೋಡಬೇಕಿದೆ. ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿಯಬೇಕಾದರೆ ಅದಕ್ಕೆ ‘ಗಾಂಧಿ’ ನಾಮ ತಗುಲಿಸಿಕೊಂಡಿರುವ ನೆಹರೂ ವಂಶಸ್ಥರ ಆಸರೆ ಬೇಕು. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಉಳಿಯಬೇಕಾದರೆ ಅದಕ್ಕೆ ಜನರಿಗೆ ಧರ್ಮದ ಅಮಲು ಹಚ್ಚುವ ಆರ್‌ಎಸ್‌ಎಸ್‌ನ ಆಸರೆ ಬೇಕು. ಪ್ರಜಾಸತ್ತೆಗೆ ಎರಡೂ ಮಾರಕವೇ.

ಕುಟುಂಬದ ಮೋಹ ಅಥವಾ ಧರ್ಮದ ನಶೆ ಹೊರತುಪಡಿಸಿ ಇನ್ನೊಂದು ವಿಚಾರದ ಆಧಾರದ ಮೇಲೆ ದೇಶದ ಉದ್ದಗಲವನ್ನು ವ್ಯಾಪಿಸಬಲ್ಲ ಒಂದೇ ಒಂದು ರಾಜಕೀಯ ಪಕ್ಷ ಸ್ವಾತಂತ್ರ್ಯಾನಂತರ ಭಾರತದಲ್ಲಿ ಬೆಳೆದಿಲ್ಲ ಎಂದರೆ ಅದಕ್ಕೆ ಯಾರನ್ನು ದೂರುವುದು? ಈ ಎರಡು ಪಕ್ಷಗಳನ್ನು ದೂರಬೇಕೋ ಅಥವಾ ಪ್ರಜಾಸತ್ತೆಯ ಕುರಿತಾಗಿ ಜನರಿಗೆ ಇರುವ ಅಪಕ್ವತೆಯನ್ನು ದೂರಬೇಕೋ ಅಥವಾ ಇಡೀ ದೇಶ ಅರ್ಥಮಾಡಿಕೊಳ್ಳಬಲ್ಲ ಇನ್ನೊಂದು ರಾಜಕೀಯ ನುಡಿಗಟ್ಟು ಹೊಂದಿದ ಒಬ್ಬ ನಾಯಕನೂ ಸೃಷ್ಟಿಯಾಗುತ್ತಿಲ್ಲ ಎನ್ನುವ ವಸ್ತುಸ್ಥಿತಿಯನ್ನು ದೂರಬೇಕೋ?

ನೆಹರೂ ಕುಟುಂಬದ ಹೊರಗಿನವರಿಗೆ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಸ್ಥಾನ ನೀಡಿದ್ದರೆ ಕಾಂಗ್ರೆಸ್ಸಿನೊಳಗೆ ಅಂತಹದ್ದೊಂದು ನಾಯಕತ್ವ ಬೆಳೆಯುತ್ತಿತ್ತು ಅಂತ ಕಾಂಗ್ರೆಸ್ಸಿನ ಒಳಗಿನವರು ಮತ್ತು ಹೊರಗಿನವರು ಆಗಾಗ ಹೇಳುವುದುಂಟು. ನೆಹರೂ ಕುಟುಂಬಕ್ಕೆ ಕಲ್ಲೆಸೆಯಲು ಇಂತಹದ್ದೊಂದು ವಾದವನ್ನು ಕವಣೆಯಾಗಿ ಬಳಸಿಕೊಳ್ಳಬಹುದು. ಆದರೆ ವಾಸ್ತವ ಅಷ್ಟು ಸರಳವಾಗಿಲ್ಲ. ನೆಹರೂ ವಂಶದವರು ನಾಯಕತ್ವದ ಸ್ಥಾನ ಬಿಟ್ಟುಕೊಡದ್ದಕ್ಕೆ ಕಾಂಗ್ರೆಸ್ಸಿನಲ್ಲಿ ವಂಶಾಡಳಿತ ಅಂತ್ಯಗೊಂಡಿಲ್ಲವೋ ಅಥವಾ ಕಾಂಗ್ರೆಸ್ಸಿನೊಳಗೆ ಅಂತಹ ಒಬ್ಬ ನಾಯಕ ಸೃಷ್ಟಿಯಾಗದ ಕಾರಣ ವಂಶಸ್ಥರು ಜಾಗ ಬಿಟ್ಟುಕೊಡಲಾಗಲಿಲ್ಲವೋ ಎನ್ನುವ ಪ್ರಶ್ನೆಗೆ ಸರಳವಾದ ಉತ್ತರ ಇಲ್ಲ.

ಬಿಜೆಪಿಯಲ್ಲಿ ಮೋದಿ ಬೆಳೆದ ಉದಾಹರಣೆಯನ್ನೇ ನೋಡೋಣ. ಅವರು ವರ್ಚಸ್ವಿ ನಾಯಕನಾಗಿ ಬೆಳೆದದ್ದು ಆ ಪಕ್ಷ ಅವರ ನಾಯಕತ್ವದ ಗುಣವನ್ನು ಇನ್‌ಕ್ಯುಬೇಟರ್‌ನಲ್ಲಿ ಇಟ್ಟು ಕಾವು ಕೊಟ್ಟ ಕಾರಣಕ್ಕಲ್ಲ. ನಾಯಕನಾಗಿ ಬೆಳೆದು ದೇಶದ ಬಹುಪಾಲು ಜನರಲ್ಲಿ ಒಂದು ಭರವಸೆ ಮೂಡಿಸಿದ ನಂತರವಷ್ಟೇ ಅವರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾದದ್ದು. ಮೋದಿ ಅವರನ್ನು ಬಿಜೆಪಿ 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯನ್ನಾಗಿ ಮಾಡಿತು. ಆನಂತರ ಅವರು ಬೆಳೆದದ್ದು ಸ್ವಂತ ಬಲದಿಂದ. ಅವರ ತಂತ್ರಗಾರಿಕೆ, ಯೋಚನೆ, ವಿವೇಚನೆಯ ಬಗ್ಗೆ ಹಲವರಿಗೆ ತಕರಾರಿರ ಬಹುದು. ಅದು ಬೇರೆ ಪ್ರಶ್ನೆ.

ಮೋದಿಯವರು ವರ್ಚಸ್ವಿ ನಾಯಕನಾಗಿ ಬೆಳೆದ ಕತೆಯ ರಾಜಕೀಯ ಪಾಠ ಏನೆಂದರೆ, ಎಲ್ಲ ಅಡೆತಡೆಗಳನ್ನೂ ಮೀರಿ, ಸಿಕ್ಕ ಅವಕಾಶ ಬಳಸಿಕೊಂಡು ದೇಶದಾದ್ಯಂತ ಸಂಚಲನ ಹುಟ್ಟಿಸಬಲ್ಲ ಮಟ್ಟಕ್ಕೆ ಬೆಳೆದ ನಾಯಕನೊಬ್ಬನನ್ನು ಯಾವ ಪಕ್ಷವೂ ಕಡೆಗಣಿಸಲು ಸಾಧ್ಯವಿಲ್ಲ ಎನ್ನುವುದು. ಆದುದರಿಂದ, ಕಾಂಗ್ರೆಸ್ ಮುಖ್ಯಮಂತ್ರಿ ಗಳನ್ನಾಗಿ ಮಾಡಿದ ಯಾರೊಬ್ಬರೂ ಅವರ ಹೆಸರು ತಮ್ಮ ರಾಜ್ಯಗಳ ಗಡಿಗಳಾಚೆಗೆ ಪರಿಚಯವಿರುವಷ್ಟರ ಮಟ್ಟಿಗೂ ಬೆಳೆಯದೆ ಇದ್ದದ್ದಕ್ಕೆ ಕಾಂಗ್ರೆಸ್ಸಿನ ವಂಶರಾಜ ಕಾರಣವೇ ಕಾರಣ ಎನ್ನುವ ಸಬೂಬು ಈ ಹಿಂದೆ ಪ್ರಸ್ತುತವಾಗುತ್ತಿತ್ತೋ ಏನೋ. ಆದರೆ ಈಗಲ್ಲ.

ಭಾರತಕ್ಕೆ ಇಂದು ಬೇಕಾಗಿರುವುದು ಸೂಕ್ತ ರಾಜಕೀಯ ನಾಯಕತ್ವ. ಧರ್ಮ, ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಅಪಾಯಕಾರಿ ಸಂಕುಚಿತ ಮಾದರಿಗಳಿಗೆ ಜೋತುಬೀಳದೆ ಸಂವಿಧಾನಕ್ಕೆ ತ್ರಿಕರಣಪೂರ್ವಕವಾಗಿ ಬದ್ಧವಾಗಿದ್ದು, ಮುಕ್ತವಾಗಿ ಯೋಚಿಸಬಲ್ಲ ನಾಯಕತ್ವ. ಆ ನಾಯಕತ್ವ ವಂಶಪಾರಂಪರ್ಯದಿಂದಾದರೂ ಬರಲಿ, ಬೀದಿ ರಾಜಕೀಯದಿಂದಾದರೂ ಬರಲಿ, ಎಲ್ಲಾ ಒಂದೇ. ಮತದಾರರು ವಂಶದ ಕುಡಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವಷ್ಟು ಕಾಲವಷ್ಟೇ ವಂಶಪಾರಂಪರ್ಯದ ರಾಜಕಾರಣ ನಡೆಯುವುದು. ತೆರೆಮರೆಯಲ್ಲಿ ನಿಂತು ಪೌರೋಹಿತ್ಯ ನಡೆಸಿ ಸರ್ಕಾರದ ಆಗುಹೋಗುಗಳನ್ನು ನಿರ್ಣಯಿಸುವ ವ್ಯವಸ್ಥೆ ಇದೆಯಲ್ಲ, ಅದು ಹಾಗಲ್ಲ. ಸ್ಪಷ್ಟವಾಗಿ ಮತದಾರರ ಕಣ್ಣಿಗೆ ಕಾಣಿಸಿಕೊಳ್ಳದೆ ಉಳಿಯುವ ಕಾರಣ, ಅದು ಪ್ರಜಾತಂತ್ರವನ್ನು ವಂಶ ರಾಜಕೀಯ ಕೆಡಿಸಿದ್ದಕ್ಕಿಂತ ಹೆಚ್ಚು ಕೆಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT