ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ | ಬಡವರನ್ನು ಅವಮಾನಿಸುವ ರಾಜಕೀಯ

ಗ್ಯಾರಂಟಿ: ವಿರೋಧ ಪಕ್ಷಗಳ ಆತ್ಮವಂಚನೆ, ಗಟ್ಟಿಯಾಗಿ ಸಮರ್ಥಿಸುವಲ್ಲಿ ಸೋತ ಆಳುವ ಪಕ್ಷ
Published 25 ಫೆಬ್ರುವರಿ 2024, 23:50 IST
Last Updated 25 ಫೆಬ್ರುವರಿ 2024, 23:50 IST
ಅಕ್ಷರ ಗಾತ್ರ

ಬಡವರ ಬದುಕಿನಲ್ಲಿ ಚೂರುಪಾರು ನೆಮ್ಮದಿ ಮೂಡಿಸಿರುವ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳ ಕುರಿತಂತೆ ವಿರೋಧ ಪಕ್ಷ ಬಿಜೆಪಿಯದ್ದು ಆತ್ಮವಂಚನೆ, ಆಳುವ ಪಕ್ಷ ಕಾಂಗ್ರೆಸ್ಸಿನದ್ದು ಅರೆಬರೆ ಆತ್ಮಸ್ಥೈರ್ಯ.

ಈ ಯೋಜನೆಗಳ ಬಗ್ಗೆ ಬಿಜೆಪಿ ಆತ್ಮವಂಚನೆ ಮಾಡಿಕೊಳ್ಳುತ್ತಿದೆ ಎನ್ನಲು ಕಾರಣ ಹೀಗಿದೆ: ಹೋದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋತದ್ದಲ್ಲ, ಅದು ಈ ರಾಜ್ಯದ ಬಡಜನರ ಕಣ್ಣೀರಿನಲ್ಲಿ ಅಕ್ಷರಶಃ ಕೊಚ್ಚಿಹೋಗಿದ್ದು. ಬಿಜೆಪಿಗಿದು ಗೊತ್ತಿದೆ. ಹೊಟ್ಟೆ ತುಂಬಿದ ಮತದಾರರು ಹೆಚ್ಚಾಗಿರುವ ಕರಾವಳಿ ಜಿಲ್ಲೆಗಳು ಹಾಗೂ  ಬೆಂಗಳೂರಿನಂತಹ ನಗರಗಳಲ್ಲಿ ತಾನು ಗೆದ್ದ ಕತೆ, ಬಡವರು ಬಹುಸಂಖ್ಯಾತರಾಗಿರುವ ಕ್ಷೇತ್ರಗಳಲ್ಲಿ ಹೀನಾಯವಾಗಿ ನೆಲಕಚ್ಚಿದ ಕತೆ ಖಂಡಿತವಾಗಿಯೂ ಅದಕ್ಕೆ ನೆನಪಿದೆ. ಆದರೂ ಬಿಜೆಪಿಯ ಉನ್ನತ ನಾಯಕ ರಿಂದ ಹಿಡಿದು ಕಾರ್ಯಕರ್ತರವರೆಗೆ ಎಲ್ಲರೂ ಗ್ಯಾರಂಟಿ ಯೋಜನೆಗಳನ್ನು ವಿಧವಿಧವಾಗಿ ಗೇಲಿ ಮಾಡುತ್ತಿದ್ದಾರೆ. ಬಿಟ್ಟಿ ಭಾಗ್ಯಗಳು ಎಂದು ಹಂಗಿಸುತ್ತಿದ್ದಾರೆ.

ರಾಜ್ಯದಲ್ಲಿ ಏನೇ ಸಮಸ್ಯೆ ಬಂದರೂ ಅದಕ್ಕೆ ಬಿಜೆಪಿಯ ಕಡೆಯಿಂದ ಬರುವ ಮೊದಲ ಪ್ರತಿಕ್ರಿಯೆ, ದುಡ್ಡೆಲ್ಲಾ ಗ್ಯಾರಂಟಿಗಳಿಗೆ ಹೋಗಿದೆ ಎಂಬುದು. ಈ ರಾಜ್ಯದಲ್ಲಿ ಯಾವ ಕಾಲದಲ್ಲೂ ಎಲ್ಲಾ ಕಡೆ ಎಲ್ಲಾ ರಸ್ತೆಗಳೂ ಸುವ್ಯವಸ್ಥೆಯಲ್ಲಿ ಇರಲಿಲ್ಲ. ಗುತ್ತಿಗೆದಾರರ ಬಿಲ್ಲು ಪಾವತಿ ಆಗುವಲ್ಲಿ ವಿಳಂಬ ಎಲ್ಲಾ ಕಾಲದಲ್ಲೂ ಆಗಿದೆ. ಕೆಲವೊಂದು ವರ್ಗದ ಸರ್ಕಾರಿ ನೌಕರರಿಗೆ ತಡವಾಗಿ ವೇತನ ಪಾವತಿ ಆಗುವ ವಿದ್ಯಮಾನ ಎಲ್ಲಾ ಕಾಲದಲ್ಲೂ ಆಗಿಹೋಗಿದೆ. ಆದರೆ ಈಗ ರಸ್ತೆಯಲ್ಲಿ ಗುಂಡಿ ಕಂಡರೆ, ಗುತ್ತಿಗೆದಾರರ ಬಿಲ್ಲು ಬಟವಾಡೆ ವಿಳಂಬವಾದರೆ ತತ್‌ಕ್ಷಣ ಬಿಜೆಪಿಯ ಮತ್ತು ಅದರ ಪರಮಾಪ್ತ ಪಕ್ಷವಾದ ಜೆಡಿಎಸ್‌ನ ನಾಯಕರೆಲ್ಲಾ ಮುಗಿಬೀಳುವುದು ಗ್ಯಾರಂಟಿ ಯೋಜನೆಗಳ ಮೇಲೆ.

ಕರ್ನಾಟಕವು ಸಾಂವಿಧಾನಿಕವಾಗಿ ತನಗೆ ಕೇಂದ್ರದಿಂದ ಬರಬೇಕಿರುವ ತೆರಿಗೆ ಪಾಲು ಬರುತ್ತಿಲ್ಲ ಎಂದು ತಗಾದೆ ತೆಗೆದರೆ, ಕೇಂದ್ರದ ಹಣಕಾಸು ಸಚಿವೆ ಮತ್ತು ಗೃಹ ಸಚಿವರು ಅದಕ್ಕೂ ಗ್ಯಾರಂಟಿಗಳ ಮೇಲೆ ತಿರುಗಿಬಿದ್ದರು. ಬಡವರಿಗೆ ಹಣ ನೀಡಿದರೆ ಅದು ದುಂದುವೆಚ್ಚ ಎನ್ನುವಂತೆ ಮಾತನಾಡಿದರು. ಇವರ ಪದ ಪ್ರಯೋಗ, ಹಾವಭಾವ ಹೇಗಿರುತ್ತದೆ ಎಂದರೆ, ಈ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಬಡಜನ ತಾವೇನೋ ಅಪರಾಧ ಮಾಡಿದ್ದೇವೋ ಎಂಬಂತೆ ಬೆಚ್ಚಿಬೀಳುವ ರೀತಿ ಇರುತ್ತದೆ. ಯಾವ ರಾಜ್ಯದಲ್ಲೂ ಯಾವ ಕಾಲದಲ್ಲೂ ರಾಜಕೀಯ ಜಿದ್ದು ಸಾಧಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ಬಡವರನ್ನು ಈ ಪರಿ ಅವಮಾನಿಸುವಂತಹ, ಅಣಕಿಸುವಂತಹ ಕೆಲಸ ಮಾಡಿದ್ದಿಲ್ಲ.

ಮೊನ್ನೆ ಗ್ಯಾರಂಟಿ ಯೋಜನೆಯ ಕುರಿತಂತೆ ಮನಕಲಕುವ ವಿಡಿಯೊವೊಂದು ವೈರಲ್ ಆಯಿತು. ಇದ್ದ ಏಕೈಕ ಮಗನನ್ನು ಕಳೆದುಕೊಂಡ ತಾಯಿಯೊಬ್ಬರು ಚಿತೆಯ ಮುಂದೆ ನಿಂತು, ‘ನನಗಿನ್ನು ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುವ ₹ 2,000 ಮಾತ್ರ ಗತಿ’ ಎಂದು ಗೋಳಿಡುತ್ತಿದ್ದ ದೃಶ್ಯವದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಆರಂಭವಾದ ದಿನ ವೃದ್ಧ ಮಹಿಳೆಯೊಬ್ಬರು, ಗುಡಿಯ ಮುಂದೆ ನಿಂತು ನಮಸ್ಕರಿಸುವಂತೆ ಸರ್ಕಾರಿ ಬಸ್‌ನ ಮೆಟ್ಟಿಲಿಗೆ ಕೈಮುಗಿದು ಅಡ್ಡಬೀಳುವ ದೃಶ್ಯವಿದ್ದ ವಿಡಿಯೊವನ್ನು ಹಲವರು ನೋಡಿರಬಹುದು. ಇವೆಲ್ಲಾ ನಟನೆಗಳಲ್ಲ. ಈ ರಾಜ್ಯದ ಲಕ್ಷಾಂತರ ಮಂದಿಯನ್ನು ಕಾಡುವ ಬಡತನದ ಕ್ರೌರ್ಯ ಎಂತಹದ್ದು ಎಂದು ಸಾರುವ ಚಿತ್ರಣಗಳು.

ಗ್ಯಾರಂಟಿಗಳನ್ನು ಅಣಕಿಸುವುದೆಂದರೆ ಜೀವಗಳನ್ನು ಅಣಕಿಸಿದಂತೆ.
ಗ್ಯಾರಂಟಿಗಳಿಂದ ಅಭಿವೃದ್ಧಿ ನಿಂತೇಹೋಯಿತು ಎನ್ನುವವರ ಮಾತುಗಳು ಫ್ರಾನ್ಸ್‌ನ ರಾಣಿ ಮೇರಿ ಅಂಟಾಯಿನೇಟ್, ಹಸಿವಿನಿಂದ ಗೋಗರೆಯುತ್ತಿದ್ದ ಜನರನ್ನು ಉದ್ದೇಶಿಸಿ ‘ತಿನ್ನಲು ಬ್ರೆಡ್ ಇಲ್ಲದೇ ಹೋದರೆ ಕೇಕ್ ತಿನ್ನಿ’ ಎಂದು ಅಣಕಿಸಿದಂತೆ ಕೇಳಿಸುತ್ತದೆ. ಅಭಿವೃದ್ಧಿ ನಿಂತುಹೋಗಿದೆಯಂತೆ, ಶಾಸಕರಿಗೆ ಅನುದಾನ ಸಿಗುತ್ತಿಲ್ಲವಂತೆ. ಏನಿದು ಅನುದಾನ? ಈ ಅನುದಾನದಿಂದ ಆಗುವ ಅಭಿವೃದ್ಧಿಯಾದರೂ ಎಂತಹದ್ದು? ಕಾಮಗಾರಿ, ಕಾಮಗಾರಿ, ಮತ್ತಷ್ಟು ಕಾಮಗಾರಿ. ಅಭಿವೃದ್ಧಿ ಎಂದರೆ ಕಾಮಗಾರಿ, ಅಭಿವೃದ್ಧಿ ಎಂದರೆ ಗಗನಚುಂಬಿ ಕಟ್ಟಡಗಳು, ಅಭಿವೃದ್ಧಿ ಎಂದರೆ ಐಷಾರಾಮಿ ಕಾರುಗಳು ಮತ್ತು ಆ ಕಾರುಗಳು ಯಮವೇಗದಲ್ಲಿ ಓಡಲು ಬೇಕಿರುವ ದಶಪಥ ರಸ್ತೆಗಳು, ಅಭಿವೃದ್ಧಿ ಎಂದರೆ ಜಿಲ್ಲೆಗೊಂದು ವಿಮಾನ ನಿಲ್ದಾಣ, ಅಭಿವೃದ್ಧಿ ಎಂದರೆ ಷೇರು ಮಾರುಕಟ್ಟೆ ಸೂಚ್ಯಂಕ ಎಂದು ಆಗಿರುವುದರಿಂದಲೇ ಹೋದ ಚುನಾವಣೆಯ ವೇಳೆಗೆ, ದಕ್ಷಿಣ ಭಾರತದ ಮುಂದುವರಿದ ರಾಜ್ಯವಾದ ಕರ್ನಾಟಕದಲ್ಲೂ ಜನಜೀವನ ಅಷ್ಟೊಂದು ದುರ್ಬರವಾಗಿ ಹೋಗಿದ್ದು ಮತ್ತು ಹಾಗಾಗಿದೆ ಎಂಬುದು ಆಡಳಿತ ನಡೆಸುವವರಿಗೆ ತಿಳಿಯದೇ ಹೋಗಿದ್ದು.

ವಾಸ್ತವದಲ್ಲಿ ಕರ್ನಾಟಕದ ಚುನಾವಣೆಯ ಫಲಿತಾಂಶ ನೋಡಿಯಾದರೂ ಅಭಿವೃದ್ಧಿ ಎನ್ನುವ ಪರಿಕಲ್ಪನೆಯನ್ನು ಮುರಿದು ಕಟ್ಟುವ ಕಾರ್ಯವೊಂದು ಪ್ರಾರಂಭ ಆಗಬೇಕಿತ್ತು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದೇ ಬೇರೆ. ಗ್ಯಾರಂಟಿ ಯೋಜನೆಗಳ ಕುರಿತಂತೆ ಆಳುವ ಪಕ್ಷ ಕಾಂಗ್ರೆಸ್ಸಿನದ್ದು ಅರ್ಧಂಬರ್ಧ ಆತ್ಮಸ್ಥೈರ್ಯದ ಕತೆ ಅಂತ ಹೇಳಿದ್ದು ಯಾಕೆಂದರೆ, ಆ ಪಕ್ಷದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ನಾಲ್ಕೈದು ಮಂದಿ ಸಚಿವರನ್ನು ಬಿಟ್ಟರೆ ಉಳಿದವರ ಯೋಚನೆಯು ವಿರೋಧ ಪಕ್ಷದವರ ಯೋಚನೆಗಿಂತ ತೀರಾ ಭಿನ್ನವಾಗಿ ಏನೂ ಇದ್ದಂತೆ ತೋರುತ್ತಿಲ್ಲ. ಆಳುವ ಪಕ್ಷದ 135 ಶಾಸಕರೆಲ್ಲ ಸಕಾರಣ ನೀಡಿ ಗ್ಯಾರಂಟಿಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದರೆ, ಇಷ್ಟೊತ್ತಿಗೆ ಈ ಯೋಜನೆಗಳನ್ನು ಅಣಕಿಸುವ ಒಂದೇ ಒಂದು ಮಾತು ಆಡುವುದೂ ಕಷ್ಟವಾಗುತ್ತಿತ್ತು. ಇದರ ಅರ್ಥ, ಈ ಯೋಜನೆಗಳನ್ನು ಮತ್ತು ಅವುಗಳ ಅನುಷ್ಠಾನವನ್ನು ವಿಮರ್ಶಿಸಬಾರದು ಎಂದಲ್ಲ. ಗ್ಯಾರಂಟಿಗಳಾಚೆಗಿನ ಅಭಿವೃದ್ಧಿ ಏನು ಎಂದು ಕೇಳಬಾರದು ಎಂದಲ್ಲ.

ಬಜೆಟ್ ಭಾಷಣವು ಈ ತನಕದ ಅರ್ಥಶಾಸ್ತ್ರದ ಗ್ರಹೀತ ನಿಲುವುಗಳನ್ನೇ ಬುಡಮೇಲು ಮಾಡುವ ರೀತಿಯಲ್ಲಿ ‘ಜನ ಸಂಕಷ್ಟದಲ್ಲಿ ಮುಳುಗಿರುವಾಗ ಮಿಗತೆ ಬಜೆಟ್ ಮಂಡಿಸಿ ಸಾಧಿಸುವುದಾದರೂ ಏನನ್ನು?’ ಎನ್ನುವ ಕ್ರಾಂತಿಕಾರಿ ಪ್ರಶ್ನೆಯನ್ನು ಮುಂದಿರಿಸಿದೆ. ಗ್ಯಾರಂಟಿಗಳನ್ನೂ ಗಟ್ಟಿಯಾಗಿ ಉಳಿಸಿಕೊಳ್ಳುತ್ತಲೇ ಕರ್ನಾಟಕವನ್ನು ಅಭಿವೃದ್ಧಿಯ ಇನ್ನೊಂದು ಹಂತಕ್ಕೆ ಒಯ್ಯುತ್ತೇವೆ ಎನ್ನುವ ಧೀರೋದಾತ್ತ ಭರವಸೆ ಇದೆ. ಇವೆಲ್ಲ ಬರೀ ಪದಪುಂಜಗಳು ಮಾತ್ರವೇ? ಅಥವಾ ಇಲ್ಲೊಂದು ಹೊಸ ಆರ್ಥಿಕ ಕಾರ್ಯತಂತ್ರ ಇದೆಯೇ? ಈ ಪ್ರಶ್ನೆಗಳನ್ನು ಕೇಳುವ ಅಗತ್ಯ ಖಂಡಿತ ಇದೆ. ಏನೇ ಇರಲಿ, ಇದು ಮಾಮೂಲಿ ಬಜೆಟ್‌ನ ವರಸೆಗಿಂತ ಭಿನ್ನವಾಗಿರುವ ಹೊಸ ಆರ್ಥಿಕ ಪರಿಭಾಷೆ. ಇದು ಹುಟ್ಟಿಕೊಂಡದ್ದು ಗ್ಯಾರಂಟಿಗಳ ಕಾರಣದಿಂದ.

ಮದರಾಸು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಇಬ್ಬರು ಅರ್ಥಶಾಸ್ತ್ರಜ್ಞರು (ಕಲೈಯರಸನ್ ಎ. ಮತ್ತು ವಿಜಯಭಾಸ್ಕರ್‌ ಎಂ.) ‘ದಿ ದ್ರಾವಿಡಿಯನ್ ಮಾಡೆಲ್- ಇಂಟರ್‌ಪ್ರಿಟಿಂಗ್‌ ದಿ ಪೊಲಿಟಿಕಲ್ ಎಕಾನಮಿ ಆಫ್‌ ತಮಿಳ್‌ನಾಡು’ ಎಂಬ ಹೊಸ ಪುಸ್ತಕದಲ್ಲಿ, ತಮಿಳುನಾಡಿನ ಜನಕಲ್ಯಾಣ ಯೋಜನೆಗಳಿಂದಾಗಿ ಆ ರಾಜ್ಯದ ಆರ್ಥಿಕ ವ್ಯವಸ್ಥೆಯೇ ಮರುರೂಪ ಪಡೆಯುತ್ತಿದೆ ಅಂತಲೂ ವಂಚಿತ ಸಮುದಾಯಗಳು ಅಲ್ಲೀಗ ಗ್ಯಾರಂಟಿಗಳ ಅವಲಂಬನೆಯಾಚೆಗೆ ಸಂಪತ್ತಿನಲ್ಲಿ ಪಾಲು ಪಡೆಯುವ ಹಂತ ಪ್ರವೇಶಿಸುತ್ತಿವೆ ಅಂತಲೂ ಸಂಶೋಧನೆ ಮಂಡಿಸಿದ್ದಾರೆ. ಅದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗೆ ಪರಿಹಾರವಾಗಿ ಕರ್ನಾಟಕದಲ್ಲಿ ಕರ್ನಾಟಕದ್ದೇ ಆದ ಒಂದು ಪ್ರಯೋಗ ನಡೆಯುತ್ತಿದೆ. ಅದೀಗ ತನ್ನದೇ ಆದ ಒಂದು ಮಾದರಿಯನ್ನು ಸೃಷ್ಟಿಸುತ್ತಿದೆ. ಇದು ಉಳಿದವರಿಗೆ ಅರ್ಥವಾಗುವುದಕ್ಕೆ ಮೊದಲು ಅರ್ಥವಾಗಬೇಕಿದ್ದು ಆಳುವ ಪಕ್ಷದ ಶಾಸಕರಿಗೆ. ಇದು ‘ಕರ್ನಾಟಕ ಮಾದರಿ’ ಎಂದು ಆತ್ಮಸ್ಥೈರ್ಯದಿಂದ ಹೇಳಬೇಕಾದ ಅಗತ್ಯ ಇರುವುದು ಅವರಿಗೆ. ಅವರು ಹಾಗೆ ಮಾಡುತ್ತಿಲ್ಲ ಎಂಬಲ್ಲಿ ವಿಶೇಷವೇನೂ ಇಲ್ಲ. ಕಾಂಗ್ರೆಸ್ ಇರುವುದೇ ಹಾಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT