ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಬಗ್ಗೆ ಹೀಗೊಂದು ಉಪಾಖ್ಯಾನ

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನಿನ್ನೆ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ (ನಂಜನಗೂಡು ಮತ್ತು ಗುಂಡ್ಲುಪೇಟೆ) ಉಪಚುನಾವಣೆಯಲ್ಲಿ ಮತ ಹಾಕಿದ ಮಂದಿಯ ಬೆರಳ ಮೇಲೆ ಮೂಡಿಸಿದ ಶಾಯಿಯ ಗುರುತು ಇಷ್ಟೊತ್ತಿಗೆ ಒಣಗಿರಬಹುದು.

ಮತದಾನದ ಮುನ್ನಾ ದಿನಗಳಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹಂಚಿದ ಹಣ ಇಷ್ಟೊತ್ತಿಗೆ ಖರ್ಚಾಗಿ ಆ ಹಣ ಯಾವ ಯಾವ ಮೂಲಗಳಿಂದ ಬಂತೋ ಅದೇ ಮೂಲಗಳನ್ನು ಪರೋಕ್ಷವಾಗಿ ಸೇರಿರಬಹುದು. ಅಂತೂ ಗದ್ದಲ ಮುಗಿದಿದೆ.
 
ಗದ್ದಲ ಇದ್ದಷ್ಟು ಕಾಲ ಮೆದುಳಿಗೆ ಗೆದ್ದಲು ಹಿಡಿದ ಸ್ಥಿತಿ ಇದ್ದು ಯೋಚಿಸಲಾಗುವುದಿಲ್ಲ. ಮತದಾರರಿಗೂ ಯೋಚಿಸಲಾಗುವುದಿಲ್ಲ, ಮತದಾರರನ್ನು ಮತ್ತು ಮತ ಕೇಳುವವರನ್ನು ದೂರದಿಂದ ನೋಡುವವರಿಗೂ ಯೋಚಿಸಲಾಗುವುದಿಲ್ಲ. ಯೋಚನಾ ಶಕ್ತಿಗೆ ಮಂಕು ಕವಿಸುವುದೇ ಚುನಾವಣಾ ಪ್ರಚಾರದ ಹೆಸರಿನಲ್ಲಿ ನಡೆಯುವ ಗದ್ದಲದ ಮೂಲ ಉದ್ದೇಶ.
 
ಉಪಚುನಾವಣೆಗಳು ಸಣ್ಣ ಪ್ರದೇಶಕ್ಕೆ ಸೀಮಿತವಾಗಿ ನಡೆಯುವುದರಿಂದ ಅಲ್ಲಿ ಗದ್ದಲದ ಸಾಂದ್ರತೆ ಮತ್ತು ಅದು ಮಾಡುವ ಮೋಡಿ ಎರಡೂ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ ಹೆಚ್ಚು ತೀವ್ರವಾಗಿರುತ್ತವೆ.  ಈಗ ಗದ್ದಲ ಮುಗಿದ ಸ್ಥಿತಿಯಲ್ಲಿ ಶಾಂತವಾಗಿ ಯೋಚನೆ ಮಾಡಬಹುದು- ಯೋಚನೆ ಮಾಡಬೇಕು. ಉಪಚುನಾವಣೆಗಳ ಬಗ್ಗೆ ನಿನ್ನೆ ನಡೆದ ಉಪಚುನಾವಣೆಗಳಾಚೆಗೆ ಉಪಾಖ್ಯಾನಿಸಬೇಕು.
 
ಕೆಲ ಉಪಚುನಾವಣೆಗಳು ಸೃಷ್ಟಿಯಾಗುತ್ತವೆ. ಇನ್ನು ಕೆಲ ಉಪಚುನಾವಣೆಗಳನ್ನು ಸೃಷ್ಟಿಸಲಾಗುತ್ತದೆ. ಸೃಷ್ಟಿಯಾಗುವ ಉಪಚುನಾವಣೆಗಳು ಅನಿವಾರ್ಯ. ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ವ್ಯಕ್ತಿ ಸಾವನ್ನಪ್ಪಿದಾಗ ಅಥವಾ ಗೆದ್ದ ವ್ಯಕ್ತಿ ಇನ್ನೊಂದು ಹಂತದ ಚುನಾವಣೆಗೆ ಸ್ಪರ್ಧಿಸಿ ಗೆದ್ದಾಗ (ಉದಾಹರಣೆಗೆ ವಿಧಾನಸಭಾ ಸದಸ್ಯ ಲೋಕಸಭೆಗೆ ಅಥವಾ ರಾಜ್ಯಸಭೆಗೆ ಸ್ಪರ್ಧಿಸಿ ಗೆದ್ದಾಗ) ಉಪಚುನಾವಣೆಯೊಂದು ಸೃಷ್ಟಿಯಾಗುತ್ತದೆ. ಇನ್ನೊಂದು ರೀತಿಯ ಉಪಚುನಾವಣೆಗಳನ್ನು ಕೃತಕವಾಗಿ ಸೃಷ್ಟಿಸಲಾಗುತ್ತದೆ.
 
ಅವುಗಳನ್ನು ವೃಥಾ ಜನರ ಮೇಲೆ ಹೇರಲಾಗುತ್ತದೆ. ಉದಾಹರಣೆಗೆ ಅಲ್ಪಮತದಲ್ಲಿ ಗೆದ್ದ ಪಕ್ಷವೊಂದು ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವಿರೋಧ ಪಕ್ಷದಿಂದ ಗೆದ್ದವರನ್ನು ಖರೀದಿಸಿ, ಅವರಿಂದ ರಾಜೀನಾಮೆ ಕೊಡಿಸುವ ಮೂಲಕ ಉಪಚುನಾವಣೆಯನ್ನು ಸೃಷ್ಟಿಸಬಹುದು.
 
ಬಿಜೆಪಿ ಆಡಳಿತ ಕಾಲದ ಕುಖ್ಯಾತ ‘ಆಪರೇಷನ್ ಕಮಲ’ದಿಂದಾಗಿ ನಡೆದ ಸಾಲು ಸಾಲು ಉಪಚುನಾವಣೆಗಳನ್ನು ಜ್ಞಾಪಿಸಿಕೊಳ್ಳಿ (ಅಂದಹಾಗೆ ಇಂತಹ ಘನ ಕೆಲಸಕ್ಕೆ ಭಾರತದ ರಾಷ್ಟ್ರೀಯ ಪುಷ್ಪ ಎಂದು ಅಧಿಕೃತವಾಗಿ ಮಾನ್ಯವಾಗಿರುವ ಕಮಲದ ಹೆಸರನ್ನು ಬಳಸುವ ಮೂಲಕ ಅದನ್ನು ಅಪವಿತ್ರಗೊಳಿಸಲಾಯಿತು ಎಂದು ಅಂದು ಯಾವ ದೇಶಭಕ್ತರಿಗೂ ಅನ್ನಿಸಲಿಲ್ಲ ಎನ್ನುವುದು ಸೋಜಿಗದ ವಿಷಯ). 
 
‘ಆಪರೇಷನ್ ಕಮಲ’ದಂತಹ ಸನ್ನಿವೇಶಗಳಲ್ಲಿ ಗೆದ್ದ ವ್ಯಕ್ತಿಗಳು ತಮ್ಮ ವ್ಯಕ್ತಿತ್ವ ಮತ್ತು ಆತ್ಮಸಾಕ್ಷಿಗಳನ್ನು ಮಾರಾಟಕ್ಕಿಟ್ಟು ಉಪಚುನಾವಣೆ ಸೃಷ್ಟಿಸಿದಂತೆ, ಅದಕ್ಕೆ ತದ್ವಿರುದ್ಧವಾದ ಇನ್ನೊಂದು ಸನ್ನಿವೇಶದಲ್ಲೂ ಉಪಚುನಾವಣೆಗಳು ಜನರ ಮೇಲೆ ಎರಗುತ್ತವೆ. ಇದು ಚುನಾಯಿತ ವ್ಯಕ್ತಿಗಳು ತಮ್ಮ ಮರ್ಯಾದೆಗೆ ಧಕ್ಕೆಯಾಯಿತು ಎಂದು ರಾಜೀನಾಮೆ ನೀಡಿ ಚುನಾವಣೆಗಳನ್ನು ತಂದೊಡ್ಡುವ ಸನ್ನಿವೇಶ.
 
ಮರ್ಯಾದೆಗೆ ಧಕ್ಕೆಯಾಯಿತು ಎಂದರೆ ಮಂತ್ರಿ ಸ್ಥಾನ ಸಿಗಲಿಲ್ಲ ಅಥವಾ ಇದ್ದ ಮಂತ್ರಿ ಸ್ಥಾನವನ್ನು ಹೇಳಿಯೋ ಹೇಳದೆಯೋ ಕಿತ್ತುಕೊಳ್ಳಲಾಯಿತು, ಅಥವಾ ಪಕ್ಷದ ನಾಯಕರ ಜತೆ ವಿರಸ ಬಂತು, ಅಥವಾ ತನ್ನ ಜಾತಿಯವರಿಗೆ, ಬಳಗದವರಿಗೆ ಸಿಗಬೇಕಾದದ್ದು ಸಿಗಲಿಲ್ಲ ಇತ್ಯಾದಿ ಆಗಿರಬಹುದು. ಏನಿದ್ದರೂ ಎರಡೂ ಸಂದರ್ಭಗಳಲ್ಲಿ   ವಿಜೃಂಭಿಸುವುದು ಅಪ್ಪಟ ವೈಯಕ್ತಿಕ ಹಿತಾಸಕ್ತಿ.
 
ಉಪಚುನಾವಣೆಗಳ ವಿಷಯದಲ್ಲಿ ಮೊದಲು ಕೇಳಬೇಕಾದ ಪ್ರಶ್ನೆ ಎಂದರೆ ಹೀಗೆ ಬಲವಂತವಾಗಿ ಹೇರಲಾಗುವ ಉಪಚುನಾವಣೆಗಳನ್ನು ಒಪ್ಪಿಕೊಳಬೇಕೇ ಎನ್ನುವುದು. ಇಡೀ ಪ್ರಜಾತಂತ್ರ ವ್ಯವಸ್ಥೆ ಅತ್ಯಂತ ಕ್ಲಿಷ್ಟಕರವಾಗಿ ಕಾಣಿಸುವುದು ಇಂತಹ ಪರಿಸ್ಥಿತಿಯಲ್ಲಿ.

ಯಾವ ದೃಷ್ಟಿಯಿಂದ ನೋಡಿದರೂ ಅನಪೇಕ್ಷಣೀಯ, ಅನಗತ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಲವಲೇಶವೂ ಇಲ್ಲದೆ ರಾಜಕೀಯ ಪಕ್ಷಗಳ ಮತ್ತು ವ್ಯಕ್ತಿಗಳ ಸ್ವಾರ್ಥ ಸಂರಕ್ಷಣೆಯನ್ನೇ ಉದ್ದೇಶವಾಗಿರಿಸಿಕೊಂಡ ಇಂತಹ ಉಪಚುನಾವಣೆಗಳನ್ನು ಯಾವ ಕಾರಣಕ್ಕೂ ಒಪ್ಪಲಾಗದು.
 
ಹಾಗೆಂದು ಸ್ವೀಕರಿಸದೆ ಇರಲೂ  ಸಾಧ್ಯವಾಗದು. ಒಪ್ಪದ ವಿಚಾರವನ್ನು, ಒಪ್ಪಲಾಗದ ವಿಚಾರವನ್ನು ಸ್ವೀಕರಿಸಲೇಬೇಕಾದ ಪರಿಸ್ಥಿತಿ ಇದು. ಯಾಕೆಂದರೆ ಚುನಾಯಿತ ವ್ಯಕ್ತಿಯೊಬ್ಬರು  ಪಕ್ಷ ಬಿಡಬಾರದು, ರಾಜೀನಾಮೆ ನೀಡಬಾರದು ಎನ್ನುವ ನಿರ್ಬಂಧವನ್ನು  ಸುಲಭದಲ್ಲಿ ಹೇರುವ ಹಾಗಿಲ್ಲ.
 
ಹಾಗೆ ನಿರ್ಬಂಧಿಸಿದರೆ ನೈತಿಕ ನೆಲೆಯಲ್ಲಿ ಪಕ್ಷ ಮತ್ತು ಚುನಾಯಿತ ಸ್ಥಾನ ತ್ಯಜಿಸಬೇಕೆನ್ನುವ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ಆ ವ್ಯಕ್ತಿಯನ್ನು ಐದು ವರ್ಷಗಳ ಕಾಲ ಪಕ್ಷವೊಂದಕ್ಕೆ ಕಟ್ಟಿ ಹಾಕಿದಂತಾಗುತ್ತದೆ. 
 
ಆದರೆ ನಿನ್ನೆಯ ನಂಜನಗೂಡು ಉಪಚುನಾವಣೆಯೂ ಸೇರಿದಂತೆ ಈ ತನಕ ರಾಜೀನಾಮೆ ನೀಡಿ ಅನಗತ್ಯ ಉಪಚುನಾವಣೆ ಹೇರಿದವರಲ್ಲಿ ಯಾರೂ ಇಂತಹ ದೊಡ್ಡ ನೈತಿಕ ನಿಲುಮೆ ತಳೆದು ಹಾಗೆ ಮಾಡಿದ ಉದಾಹರಣೆಗಳಿಲ್ಲ. ಅವರೆಲ್ಲ ದುಡ್ಡಿನ ಆಸೆಗೆ, ಸ್ವಪ್ರತಿಷ್ಠೆಯ ಒತ್ತಾಸೆಗೆ ಮಣಿದವರೇ.

ಹಾಗಿರುವಾಗ ಈ ವಿಚಾರದಲ್ಲಿ ಕೆಲ ನಿರ್ಬಂಧಗಳನ್ನು ಯಾಕೆ ವಿಧಿಸಬಾರದು ಎನ್ನುವ ಪ್ರಶ್ನೆ ಎತ್ತುವ ಅಗತ್ಯವಿದೆ. ರಾಜೀನಾಮೆ ನೀಡುವುದನ್ನು ನಿರ್ಬಂಧಿಸಲಾಗದೆ ಹೋದರೂ ಹಾಗೆ ರಾಜೀನಾಮೆ ನೀಡಿದವರು ಮರುಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ನಿರ್ಬಂಧವನ್ನಾದರೂ ಹೇರಿದರೆ ತಪ್ಪಿಲ್ಲ ಅನ್ನಿಸುತ್ತದೆ.

ಬಹುಶಃ ಸಂವಿಧಾನ ನಿರ್ಮಾತೃಗಳು ಇಂತಹ ಪರಿಸ್ಥಿತಿ ಬರಬಹುದು ಎಂದು ಊಹಿಸಿರಲಿಲ್ಲ. ಊಹಿಸಿದ್ದರೂ ಇದಕ್ಕೆಲ್ಲಾ ಜನರೇ ಪಾಠ ಕಲಿಸಬಹುದು ಎಂದು ಅವರು ನಿರೀಕ್ಷಿಸಿದ್ದಿರಬಹುದು.  ಅಂದರೆ ಹೀಗೆ ಹಣದಾಸೆಗೆ, ಸ್ವಪ್ರತಿಷ್ಠೆ ಎತ್ತಿ ಹಿಡಿಯುವುದಕ್ಕೆ ರಾಜೀನಾಮೆ ನೀಡಿ, ಮತ್ತೊಂದು ಪಕ್ಷದಿಂದ ಸ್ಪರ್ಧಿಸುವವರನ್ನು ಜನ ಒಪ್ಪಲಾರರು ಎನ್ನುವ ಯೋಚನೆ ಸಂವಿಧಾನ ಬರೆದವರಿಗೆ ಇದ್ದಿರಬಹುದು. ಅದೀಗ ಹುಸಿಯಾಗಿದೆ.

ಜನರು ಚುನಾವಣೆಯಲ್ಲಿ ಎಂಥವರನ್ನಾದರೂ ಗೆಲ್ಲಿಸಲು ಹಿಂದೆ ಮುಂದೆ ನೋಡುವುದಿಲ್ಲ. ಭಾರತದಲ್ಲಿ ಜನರನ್ನು ನಾಯಕರು ಕೆಡಿಸುತ್ತಿದ್ದಾರೋ, ನಾಯಕರನ್ನು ಜನ ಕೆಡಿಸುತ್ತಿದ್ದಾರೋ ಎನ್ನುವುದು ಬೀಜ–ವೃಕ್ಷ ನ್ಯಾಯ.
 
ಉಪಚುನಾವಣೆಗಳ ವಿಷಯದಲ್ಲಿ ಕೇಳಬೇಕಾದ  ಇನ್ನೊಂದು ಪ್ರಶ್ನೆ ಎಂದರೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಒಂದೇ ಒಂದು ವರ್ಷ ಉಳಿದಿರುವಾಗ ಉಪಚುನಾವಣೆಯ ಅಗತ್ಯ ಇದೆಯೇ ಎನ್ನುವುದು. ಇಲ್ಲ ಅಗತ್ಯವಿಲ್ಲ ಎಂದಾಕ್ಷಣ ಹಾಗಾದರೆ ಒಂದು ವರ್ಷ ಕ್ಷೇತ್ರಕ್ಕೆ ಶಾಸಕರೇ ಇರುವುದಿಲ್ಲವಲ್ಲ ಎನ್ನುವ ಮರು ಪ್ರಶ್ನೆ ಎತ್ತುವವರು ಇರಬಹುದು. ಅದಕ್ಕೆ ಉತ್ತರ ಇಷ್ಟೇ.

ಹೌದು ಒಂದು ವರ್ಷ ಒಂದು ಕ್ಷೇತ್ರಕ್ಕೆ ಶಾಸಕರು ಇಲ್ಲದೆ ಹೋದರೆ ಏನೂ ಆಗುವುದಿಲ್ಲ. ಒಂದು ವರ್ಷ ಒಂದು ಕ್ಷೇತ್ರಕ್ಕೆ ಶಾಸಕರೋ   ಅಥವಾ ಸಂಸದರೋ ಇಲ್ಲದೆ ಹೋದರೆ ಜನ ಉಪವಾಸ ಬೀಳುವುದಿಲ್ಲ. 
 
ಎಂಎಲ್ಎ, ಎಂಪಿ ಇಲ್ಲದೆ ಹೋದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳೆಲ್ಲಾ ಕಾಲುಮುರಿದು ಬೀಳುತ್ತವೆ ಎನ್ನುವಂತೆ ಒಂದು ಅಭಿಪ್ರಾಯ  ನಮ್ಮ ಮಧ್ಯೆ ಸೃಷ್ಟಿಯಾಗಿದೆ. ಈ ಅಸಂಗತ ಅಭಿಪ್ರಾಯ ಅದು ಹೇಗೆ ಸೃಷ್ಟಿಯಾಯಿತೋ ಗೊತ್ತಿಲ್ಲ. ಇದನ್ನು ಸೃಷ್ಟಿಸುವಲ್ಲಿ ಮಾಧ್ಯಮಗಳ ಪಾತ್ರವೂ ದೊಡ್ಡದೇ ಇದೆ.

ಅಷ್ಟಕ್ಕೂ ಈ ಅಭಿವೃದ್ಧಿ ಕೆಲಸ ಎಂದರೆ ಏನು ಅಂತ ಯಾರನ್ನಾದರೂ ಕೇಳಿ ನೋಡಿ. ಈ ಪ್ರಶ್ನೆಗೆ ಯಾರೂ ವಾಕ್ಯಗಳಲ್ಲಿ ಉತ್ತರಿಸುವುದಿಲ್ಲ. ಪದಗಳಲ್ಲಿ ಉತ್ತರಿಸುತ್ತಾರೆ. ಆ ಪದಗಳಾದರೂ ಯಾವುವು? ರಸ್ತೆ, ನೀರು, ಚರಂಡಿ, ಕಸವಿಲೇವಾರಿ, ನೀರಾವರಿ, ಕಲ್ಯಾಣ ಮಂಟಪ, ಬಸ್ ಶೆಲ್ಟರ್-  ಹೀಗೆ ಪದಪ್ರವಾಹ ಮುಂದುವರಿಯುತ್ತದೆ.

ಈ ಕೆಲಸಗಳನ್ನೆಲ್ಲಾ ಒಂದು ಕ್ಷೇತ್ರದಲ್ಲಿ ಎಂಎಲ್ಎ, ಎಂಪಿ ಮಾಡುವುದಾದರೆ ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಗರ–ಪುರ ಸಭೆಗಳು ಮತ್ತು ಅವುಗಳ ಸದಸ್ಯರು, ಜಿಲ್ಲಾ–ತಾಲ್ಲೂಕು–ಗ್ರಾಮ ಪಂಚಾಯಿತಿಗಳು ಮತ್ತು ಅವುಗಳ ಸದಸ್ಯರಿಗೆಲ್ಲಾ ಏನು ಕೆಲಸ? ಅವರನ್ನೆಲ್ಲಾ ಜನ ಚುನಾಯಿಸುವುದು ಎಂಎಲ್ಎ, ಎಂಪಿಗಳಿಗೆ ಚಾಮರ ಬೀಸುವ, ಛತ್ರ ಹಿಡಿಯುವ ಕೆಲಸ ಮಾಡುವುದಕ್ಕಾಗಿಯೇ? 
 
ಸಾಂವಿಧಾನಿಕವಾಗಿ ಎಂಎಲ್ಎ, ಎಂಪಿಗಳ ಕೆಲಸ ಕೇವಲ ಶಾಸನ ಮಾಡುವುದು ಮತ್ತು ಸರ್ಕಾರ ಅಂಕೆ ಮೀರಿ ನಡೆಯದಂತೆ ಒಂದು ಕಣ್ಣಿಟ್ಟುಕೊಳ್ಳುವುದು. ಅದರಿಂದಾಚೆಗಿನ ಎಲ್ಲಾ ಕೆಲಸಗಳನ್ನು ತಾವಾಗಿಯೇ ತಮ್ಮ ಮೈಮೇಲೆ  ಆವಾಹಿಸಿಕೊಂಡದ್ದು.

ತನ್ನ ಕೋಳಿ ಕೂಗದೆ ಇದ್ದರೆ ಊರಲ್ಲಿ ಬೆಳಗಾಗುವುದಿಲ್ಲ ಎನ್ನುವ ಜಾನಪದ ಕತೆಯ ಅಜ್ಜಿಯಂತೆ, ಅರೆಕ್ಷಣ ತಾವಿಲ್ಲದೆ ಇದ್ದರೆ ಕ್ಷೇತ್ರದಲ್ಲಿ ಗಾಳಿ ಬೀಸುವುದಿಲ್ಲ, ನೀರು ಹರಿಯುವುದಿಲ್ಲ ಅಂತ ಎಂಪಿ, ಎಂಎಲ್ಎಗಳು ತಿಳಿದುಕೊಂಡಿರಬಹುದು.

 ಅದನ್ನು ಜನ ಒಪ್ಪಿಕೊಂಡಿರಬಹುದು ಕೂಡಾ. ವಾಸ್ತವದಲ್ಲಿ ಒಂದು ವರ್ಷದ ಮಟ್ಟಿಗೆ ಒಂದು ಕ್ಷೇತ್ರದ ಪ್ರತಿನಿಧಿ ವಿಧಾನಸಭೆ ಅಥವಾ ಲೋಕಸಭೆಯಲ್ಲಿ  ಇಲ್ಲದೆ ಹೋದರೆ ಆಕಾಶವೇನೂ ಬಿದ್ದುಹೋಗುವುದಿಲ್ಲ.

ಕ್ಷೇತ್ರದ ಜನ ಉಸಿರಾಡುವುದು ಎಂಎಲ್ಎ, ಎಂಪಿಗಳ ಶ್ವಾಸನಾಳದ ಮೂಲಕವಲ್ಲ. ಆದುದರಿಂದ ವಿಧಾನಸಭಾ ಚುನಾವಣೆಗೆ ಕೇವಲ ಒಂದು-ಒಂದೂವರೆ ವರ್ಷ ಅವಧಿ ಉಳಿದಿರುವಾಗ ಉಪಚುನಾವಣೆ ಬೇಕೇ ಬೇಡವೇ ಎನ್ನುವುದರ ಬಗ್ಗೆ ಮರು ಯೋಚಿಸಬೇಕಾಗಿದೆ.
 
ಆಗುವುದು ಹೋಗುವುದು ಏನೂ ಇಲ್ಲ ಎಂದಾದರೂ ಒಂದು ಜನತಂತ್ರದ ತತ್ವಕ್ಕೆ-ಸಿದ್ಧಾಂತಕ್ಕೆ ಮೌಲ್ಯ ನೀಡುವ ಕಾರಣಕ್ಕಾಗಿ ಅವಧಿ ಅಲ್ಪ ಎಂದಾದರೂ ಈ ಉಪಚುನಾವಣೆಗಳನ್ನು ಒಪ್ಪಿಕೊಳ್ಳೋಣ ಎಂದರೆ ಇನ್ನೊಂದು ವಿಚಾರವಿದೆ. ಸಾರ್ವತ್ರಿಕ ಚುನಾವಣೆಗೆ ಎಷ್ಟು ಹತ್ತಿರದ ಅವಧಿಯಲ್ಲಿ ಉಪಚುನಾವಣೆಯೊಂದು ನಡೆಯುತ್ತದೋ ಅಷ್ಟು ಆ ಉಪಚುನಾವಣೆಯ ಗಬ್ಬು-ಗದ್ದಲ ಹೆಚ್ಚಿರುತ್ತದೆ.

ಇದನ್ನು ಬೇಕಾದರೂ ಪ್ರಜಾತಂತ್ರದ ಹೆಸರಿನಲ್ಲಿ ತಾಳಿಕೊಳ್ಳೋಣ. ಆದರೆ ಅಲ್ಪಾವಧಿಗೆ ನಡೆಯುವ ಉಪಚುನಾವಣೆಗಳಿಂದಾಗಿ ಇಡೀ ವ್ಯವಸ್ಥೆಗೆ ಆಗುವ ನಷ್ಟವೆಷ್ಟು ಎಂದು ಯೋಚಿಸಬೇಕು. ಸಾರ್ವತ್ರಿಕ ಚುನಾವಣೆಯಲ್ಲಿ ಖರ್ಚು ಮಾಡುವುದಕ್ಕಿಂತ ಹತ್ತಾರು  ಪಟ್ಟು ಹೆಚ್ಚು ದುಡ್ಡನ್ನು ಎಲ್ಲಾ ಪಕ್ಷಗಳೂ ಉಪಚುನಾವಣೆಯಲ್ಲಿ ಸುರಿಯುತ್ತವೆ.
 
ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆ ಆದಷ್ಟೂ ವೆಚ್ಚ ಮಾಡುವ ಹಣದ ಮೊತ್ತ ಹೆಚ್ಚುತ್ತದೆ. ಈ ಹಣದ ಮೂಲ ಎಲ್ಲೆಲ್ಲಿ ಎಂದು ಯಾರೂ ಕೇಳುವುದಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಸುರಿದ ಹಣವನ್ನು ಬಡ್ಡಿ ಸಮೇತ ಹಿಂದೆ ಪಡೆಯಲು ಸಂಬಂಧಪಟ್ಟವರಿಗೆ ಐದು ವರ್ಷಗಳ ಕಾಲಾವಧಿ ಇರುತ್ತದೆ.

ಉಪಚುನಾವಣೆಯಲ್ಲಿ ಸುರಿದ ದುಡ್ಡನ್ನು ಹಿಂದೆ ಪಡೆಯಲು ಅಥವಾ ಅದನ್ನು ಒದಗಿಸಿದವರಿಗೆ ಅನುಕೂಲ ಮಾಡಿಕೊಡಲು ಇರುವ ಅವಧಿ ಕೇವಲ ಒಂದೇ ಒಂದು ವರ್ಷ. ಇದರ ಪರಿಣಾಮ ಯಾವ ಯಾವ ರೀತಿ ರಾಜಕೀಯದ ಮೇಲೆ, ಆಡಳಿತದ ಮೇಲೆ ಬೀರುತ್ತದೆ ಎನ್ನುವುದು ನಮಗೆ ಮುಖ್ಯವಾಗುವುದೇ ಇಲ್ಲ.
 
ಉಪಚುನಾವಣೆಯ ಅವಧಿಯುದ್ಧಕ್ಕೂ ಇಡೀ ಸರ್ಕಾರಿ ಯಂತ್ರ ಸ್ತಬ್ಧವಾಗುತ್ತದೆ. ಕಂದಾಯ ಇಲಾಖೆ ಜನಜೀವನದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.  ಚುನಾವಣೆ, ಉಪಚುನಾವಣೆ ಬಂದರೆ ಈ ಇಲಾಖೆಯಲ್ಲಿ ಕಡ್ಡಿಯೂ ಅಲುಗಾಡುವುದಿಲ್ಲ. ಶಾಲಾ ಶಿಕ್ಷಕರಿಗೆ ವೃಥಾ ತೊಂದರೆ. ಕೃಷಿ ಕೆಲಸಗಳಿಗೆ ಎಡರು-ತೊಡರುಗಳು. ಬಹುಶಃ  ಅಬಕಾರಿ ಇಲಾಖೆ ಬಿಟ್ಟು ಉಳಿದೆಲ್ಲಾ ಇಲಾಖೆಗಳಿಗೆ ಒಂದಲ್ಲ ಒಂದು ರೀತಿಯ ನಷ್ಟ.

ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯ ಸಂದರ್ಭ ಅಷ್ಟೂ ಜನ ಮಂತ್ರಿಗಳು ಕೆಲಸ ಬಿಟ್ಟು ಚುನಾವಣಾ ಕಣದಲ್ಲೇ ಬೀಡುಬಿಟ್ಟದ್ದಾಯಿತು. ಚುನಾವಣೆಯ ಕೆಲಸಕ್ಕೆ ಹೋಗುವಾಗ ಅವರು ಸರ್ಕಾರಿ ಕಾರು ಬಳಸುವುದಿಲ್ಲ, ಸರ್ಕಾರಿ ವಸತಿ ಬಳಸಿಕೊಳ್ಳುವುದಿಲ್ಲ ಎನ್ನುವುದೇನೋ ನಿಜ.  ಆದರೆ ಯಾವ  ಸಚಿವನೂ ಚುನಾವಣಾ ಕೆಲಸಕ್ಕೆ೦ದು ಕಚೇರಿಗೆ ರಜೆ ಹಾಕಿ ಹೋಗುವುದಿಲ್ಲ.

ಕೆಲಸ ಮಾಡದ ಅವಧಿಗೂ ಅವರಿಗೆ ಸಿಗುವ ಸಂಬಳ-ಭತ್ಯೆ ಎಲ್ಲಾ ಲಭಿಸುತ್ತದೆ. ಇದರಲ್ಲೇನು ಮಹಾ ಎನ್ನಬಹುದು.  ಇವೆಲ್ಲ ಸಣ್ಣ ಮೊತ್ತದ ನಷ್ಟ ಎನ್ನಬಹುದು. ಇದು ಮೊತ್ತದ ಪ್ರಶ್ನೆಯಲ್ಲ.
 
ಉಪಚುನಾವಣೆಯನ್ನು ಒಂದು ತತ್ವದ ಹಿನ್ನೆಲೆಯಲ್ಲಿ ಒಪ್ಪಿಕೊಳ್ಳಬೇಕು ಎಂದರೆ ಅದೇ ತತ್ವದ ಹಿನ್ನೆಲೆಯಲ್ಲಿ ಇಂತಹ ಅಪಸವ್ಯಗಳನ್ನೂ ಪ್ರಶ್ನಿಸಬೇಕಾಗುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಪ್ರಜಾತಂತ್ರದ ಹೆಸರಿನಲ್ಲಿ ಅನಗತ್ಯವಾದ ಏನೇನನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳಬೇಕು ಎಂಬುದರ ಬಗ್ಗೆ ಮರುಚಿಂತನೆ ನಡೆಸಬೇಕಾಗಿರುವುದು ಈ ಕಾಲದ ಅಗತ್ಯ ಎಂದು ಕಾಣುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT