ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಹಂಚಿಕೆ ಎಂಬುದು ಹೊಚ್ಚ ಹೊಸತಲ್ಲ!

ಬಲವಂತದಿಂದ ಕಸಿದು ಕೊಟ್ಟರೆ ದರೋಡೆ, ಒಲಿದು ಕೊಟ್ಟರೆ ದಾನ
Published 30 ಏಪ್ರಿಲ್ 2024, 0:00 IST
Last Updated 30 ಏಪ್ರಿಲ್ 2024, 0:00 IST
ಅಕ್ಷರ ಗಾತ್ರ

‘ಸಂಪತ್ತಿನ ಸಮಾನ ಹಂಚಿಕೆ’ ಎಂಬ ಪದಗುಚ್ಛ ಒಂದು ಮಾಯೆ ಇದ್ದಂತೆ. ವಾಸ್ತವದಲ್ಲಿ ಅದು ಕಾರ್ಯಸಾಧುವೇ, ಕಾರ್ಯಸಾಧು ಎಂದಾದರೆ ಎಷ್ಟರಮಟ್ಟಿಗೆ ಎಂಬ ಪ್ರಶ್ನೆಗಳು ಮೂಡುತ್ತವೆ. ಅದರ ಉದ್ದೇಶವು ಮನುಷ್ಯ ಸ್ವಭಾವಕ್ಕೆ ಒಗ್ಗುವಂಥದ್ದೇ? ಮನುಷ್ಯ ಸಂಪತ್ತನ್ನು ಗಳಿಸುವುದೇ ಅದು ತನಗೆ, ತನ್ನ ಮುಂದಿನವರಿಗೆ, ಅವರ ಮುಂದಿನವರಿಗೆ ಇರಲಿ ಎಂಬ ಉದ್ದೇಶದಿಂದ. ಮನುಷ್ಯನ ಆ ಗುಣವು ಒಳಿತನ್ನು ಮಾಡಿದೆ, ಮನುಷ್ಯ ಅಸಾಧ್ಯ ಎಂಬಂತಹ ಸಾಹಸಗಳನ್ನು ಕೈಗೊಳ್ಳುವಂತೆ ಮಾಡಿದೆ. ಹಾಗೆಯೇ, ಸಂಪತ್ತಿನ ಸಂಗ್ರಹವು ಮನುಷ್ಯನನ್ನು ಲೋಭಿಯನ್ನಾಗಿಯೂ ಕ್ರೂರಿಯನ್ನಾಗಿಯೂ ಮಾಡಿದೆ. ಇತಿಹಾಸ ಇವುಗಳಿಗೆಲ್ಲ ಅಸಂಖ್ಯ ನಿದರ್ಶನಗಳನ್ನು ನೀಡುತ್ತದೆ.

ಈ ಚುನಾವಣಾ ಪರ್ವದಲ್ಲಿ, ‘ದೇಶದ ಸಂಪತ್ತನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತೇವೆ’ ಎಂದು ಕಾಂಗ್ರೆಸ್ಸಿನ ಮುಖಂಡರು ಹೇಳಿದ್ದಾರೆ ಎಂದು ಆರೋಪಿಸಿ, ಬಿಜೆಪಿ ನಾಯಕರು ಆ ಮಾತಿಗೆ ಪ್ರತಿಮಾತು ಹೊಸೆದ ನಂತರದಲ್ಲಿ ದೇಶದಲ್ಲಿ ಭೂಕಂಪನವೇ ಆದಂತಿದೆ! ‘ಸಂಪತ್ತಿನ ಸಮಾನ ಹಂಚಿಕೆ’ ಎಂಬುದು ಈಗ ದೊಡ್ಡ ವಿವಾದದ ಸ್ವರೂಪವನ್ನೂ ಪಡೆದುಕೊಂಡಿದೆ. ಈ ಬಗೆಯ ಪ್ರಸ್ತಾಪ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಇಲ್ಲ ಎಂದು ಆ ಪಕ್ಷದ ಮುಖಂಡರು ಪದೇಪದೇ ಸ್ಪಷ್ಟ ಪಡಿಸಿದ್ದರೂ ವಿವಾದ ಕಾವು ಕಳೆದುಕೊಂಡಿಲ್ಲ. ಸಂಪತ್ತಿನ ಸಮಾನ ಹಂಚಿಕೆಯ ಮಾತನ್ನು ಯಾವ ಪಕ್ಷವೇ ಹೇಳಲಿ, ಅದು ಹೇಳಿದಂತೆಯೇ ನಡೆದು
ಕೊಳ್ಳುವುದೇ?! ಅದೇನೇ ಇರಲಿ, ಸಂಪತ್ತಿನ ಸಮಾನ ಹಂಚಿಕೆ ಎಂಬ ಮಾತನ್ನು ಒಮ್ಮೆ ಸದಾಶಯದಿಂದ ಸ್ವೀಕರಿಸಲು ಅಡ್ಡಿಯೇನೂ ಇಲ್ಲ. ಏಕೆಂದರೆ ಸಂಪತ್ತನ್ನು ಸಮಾನವಾಗಿ ಹಂಚುವುದು ಒಂದು ಆದರ್ಶ. ಹಂಚುವುದು ಎಂದರೆ ಅದು ಕಸಿದುಕೊಳ್ಳುವುದಲ್ಲ. ಇದ್ದವರು ಇಲ್ಲದವರಿಗೆ ಕೊಡುವುದು ಅಷ್ಟೆ. ಬಡವರನ್ನು ಕೈಹಿಡಿದು ಮೇಲೆತ್ತುವುದು. ಅವರೂ ಒಂದು ಹೆಜ್ಜೆ ಮುಂದೆ ಬರುವಂತೆ ಮಾಡುವುದು. ಹಾಗೆ ಮಾಡಿದರೆ ದೇಶಕ್ಕೆ ಕ್ಷೇಮ. ಸ್ವಾರ್ಥವೇ ತುಂಬಿತುಳುಕಾಡುತ್ತಿರುವ ಸಮಾಜದಲ್ಲಿ ಇದು ಬರೀ ಕನಸು ಎಂದು ಕೈತೊಳೆದುಕೊಳ್ಳುವುದು ಬೇಡ. ಶ್ರೀಮಂತರ ಮನವೊಲಿಸಿ ಸಂಪತ್ತನ್ನು ಸಮಾನವಾಗಿ ಹಂಚುವ ಪ್ರಯತ್ನ ಈ ದೇಶದಲ್ಲಿ ಈಗಾಗಲೇ ಕೆಲವು ಬಾರಿ ನಡೆದಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ವಿನೋಬಾ ಭಾವೆ ಅವರ ಭೂದಾನ ಚಳವಳಿ.

1951ರ ಏಪ್ರಿಲ್ 18ರಂದು ಅವರು ಭೂದಾನ ಚಳವಳಿ ಆರಂಭಿಸಿದರು. ಸುಮಾರು 13 ವರ್ಷ ಪಾದಯಾತ್ರೆ ನಡೆಸಿದ ಅವರು ಭೂಮಾಲೀಕರಿಂದ ದಾನವಾಗಿ ಪಡೆದ 5 ಕೋಟಿ ಎಕರೆಗೂ ಹೆಚ್ಚಿನ ಭೂಮಿಯನ್ನು ಭೂರಹಿತರಿಗೆ ಹಂಚಿದರು. ಇದರಲ್ಲಿ ಯಾವ ಸಂಘರ್ಷವೂ ಇರಲಿಲ್ಲ. ಭೂಮಾಲೀಕರು ಸ್ವಇಚ್ಛೆ ಇಂದಲೇ ದಾನ ಕೊಟ್ಟಿದ್ದರು. ಕರ್ನಾಟಕದಲ್ಲಿಯೂ ಇದು ಯಶಸ್ವಿಯಾಗಿಯೇ ನಡೆದಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪ ಗೌಡ ತಮ್ಮ ಒಂದು ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. 70ರ ದಶಕದಲ್ಲಿ ಕರ್ನಾಟಕದಲ್ಲಿ ಭೂಸುಧಾರಣೆ ಕಾಯ್ದೆ ಜಾರಿಗೆ ಬಂದಾಗಲೂ ಇಂತಹದೇ ಚಳವಳಿ ನಡೆಯಿತು. ಲಕ್ಷಾಂತರ ಮಂದಿ ಭೂರಹಿತರು ಭೂಮಾಲೀಕರಾದರು. ಭೂಮಿ ಇಲ್ಲದವರಿಗೆ ಭೂಮಿಯನ್ನು ಹಂಚುವ ಹೃದಯವಂತಿಕೆಯಿಂದ ನಾವು ಈಗ ‘ಸಂಪತ್ತಿನ ಸಮಾನ ಹಂಚಿಕೆ’ ಎಂಬ ಶಬ್ದವನ್ನು ಕೇಳಿದರೇ ಬೆಚ್ಚಿಬೀಳುವ ಹಂತಕ್ಕೆ ಬಂದು ನಿಂತಿದ್ದೇವೆ.

ದೇಶದ ಸಂಪತ್ತನ್ನು ಹಂಚಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎಂಬುದಾಗಿ ಭಾವಿಸಿ, ಆ ಮಾತನ್ನು ಖಂಡಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳ ಸೂತ್ರವನ್ನೂ ಕಸಿದುಕೊಳ್ಳಲಾಗುತ್ತದೆ’ ಎಂದು ಆರೋಪಿಸಿದರು. ಪ್ರಧಾನಿಯೊಬ್ಬರ ಬಾಯಿಯಿಂದ ಇಂತಹ ಮಾತು ಬರಬಾರದಿತ್ತು.ಆದರೂ ಬಂದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಅತ್ಯಂತ ಪೂಜ್ಯ ಭಾವನೆ ಇದೆ. ಭಾರತೀಯ ಮಹಿಳೆಯರಿಗೆ ಚಿನ್ನದ ಆಭರಣದ ಹುಚ್ಚು ಇದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಅದನ್ನು ಹೊಂದುವುದು ಮಹಿಳೆಯರಿಗೆ ಸಹಜವಾದ ಆಸೆ ಎನ್ನುವುದನ್ನೂ ಮನ್ನಿಸೋಣ. ಆದರೆ ಈ ಆಸೆ ಬಹುತೇಕ ಸಂದರ್ಭದಲ್ಲಿ ಕುಟುಂಬದ ರಕ್ಷಣೆಯನ್ನು ಮಾಡಿದೆ. ಬಹಳಷ್ಟು ಬಾರಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಗಂಡಿನ ಆಸರೆಗೆ ಬಂದಿದ್ದು ಮಹಿಳೆಯರ ಈ ಚಿನ್ನದ ಆಭರಣಗಳು ಎನ್ನುವುದರಲ್ಲಿ ಸಂಶಯವಿಲ್ಲ. ದೇಶ ಸಂಕಷ್ಟಕ್ಕೆ ಸಿಲುಕಿದಾಗಲೂ ನಮ್ಮ ಹೆಣ್ಣುಮಕ್ಕಳು ತಮ್ಮ ಆಭರಣಗಳನ್ನು ದೇಶಕ್ಕಾಗಿ ವಿನಿಯೋಗಿಸಿದ ಉದಾಹರಣೆಗಳೂ ಬಹಳಷ್ಟಿವೆ.

ಭಾರತ ಇನ್ನೂ ಸ್ವತಂತ್ರವಾಗದೇ ಇದ್ದ ಸಂದರ್ಭದಲ್ಲಿ ಗಾಂಧೀಜಿ ಅವರು ಹರಿಜನೋದ್ಧಾರಕ್ಕೆ ಮತ್ತು ಭೂಕಂಪ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಮುಂದಾದಾಗ ಅನೇಕ ಮಹಿಳೆಯರು ತಮ್ಮ ಮೈಮೇಲೆ ಇದ್ದ ಬಂಗಾರವನ್ನು ದೇಣಿಗೆಯಾಗಿ ನೀಡಿದ್ದರು. ಕನ್ನಡದ ಖ್ಯಾತ ಕತೆಗಾರ್ತಿ ಕೊಡಗಿನ ಗೌರಮ್ಮ ಕೂಡ ತಮ್ಮಲ್ಲಿರುವ ಚಿನ್ನದ ಎಲ್ಲ ಆಭರಣಗಳನ್ನೂ ಗಾಂಧೀಜಿಗೆ ಒಪ್ಪಿಸಿದ್ದರು.

ಸ್ವಾತಂತ್ರ್ಯಾನಂತರ ಕೂಡ ಇಂತಹ ಘಟನೆಗಳು ನಡೆದಿವೆ. 1962ರಲ್ಲಿ ಚೀನಾ ಜೊತೆಗಿನ ಯುದ್ಧದಲ್ಲಿ ಭಾರತ ಸೋತಿತು. ಅದಕ್ಕೆ ಮುಖ್ಯ ಕಾರಣ, ನಮ್ಮ ರಕ್ಷಣಾ ವ್ಯವಸ್ಥೆ ಆಧುನೀಕರಣಗೊಂಡಿರಲಿಲ್ಲ. ಸೈನಿಕರಿಗೆ ಸೂಕ್ತ ಮೂಲ ಸೌಲಭ್ಯಗಳೂ ಇರಲಿಲ್ಲ. ಆಗ ಪ್ರಧಾನಿ ಆಗಿದ್ದ ಜವಾಹರಲಾಲ್ ನೆಹರೂ ರಾಷ್ಟ್ರೀಯ ರಕ್ಷಣಾ ನಿಧಿ ಸಂಗ್ರಹಣಾ ಪರಿಷತ್ ಸ್ಥಾಪಿಸಿದರು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ದೇಣಿಗೆ ಸಂಗ್ರಹಕ್ಕೆ ಮುಂದಾದರು.

ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರೂ ಈ ನಿಧಿಗೆ ರಾಜ್ಯದಿಂದ ಸಾಕಷ್ಟು ಹಣವನ್ನು ಸಂಗ್ರಹಿಸಲು ಬಯಸಿದ್ದರು. ಅದಕ್ಕಾಗಿ ವಿಜಾಪುರದಲ್ಲಿ ಸಮಾರಂಭ ನಡೆಸಲಾಯಿತು. ಅದರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಅಧ್ಯಕ್ಷೆ ಇಂದಿರಾ ಗಾಂಧಿ ಅವರೂ ಭಾಗಿಯಾಗಿದ್ದರು. ಆಗ ಬಾದಾಮಿ ತಾಲ್ಲೂಕಿನ ಜಮೀನ್ದಾರ ಮಲ್ಲನಗೌಡರ ಪತ್ನಿ ನೀಲಮ್ಮ ಗೌಡತಿ ವೇದಿಕೆಗೆ ಬಂದು ತಮ್ಮ ಕೊರಳಿನಲ್ಲಿದ್ದ ಬಂಗಾರದ ಗುಂಡಿಗಡಿಗೆಯನ್ನು ಇಂದಿರಾ ಗಾಂಧಿ ಅವರ ಕೊರಳಿಗೆ ಹಾಕಿದರು. ಅಲ್ಲದೆ ತಮ್ಮ ಮೈಮೇಲೆ ಇದ್ದ ಎಲ್ಲ ಆಭರಣ ಗಳನ್ನೂ ರಕ್ಷಣಾ ನಿಧಿಗೆ ನೀಡಿದರು. ಅವರು ನೀಡಿದ ಆಭರಣಗಳ ತೂಕ 1,150 ಗ್ರಾಂ ಇತ್ತು. ಸಂಕಷ್ಟ ಬಂದಾಗ ನಮ್ಮ ಹೆಣ್ಣುಮಕ್ಕಳು ಚಿನ್ನದ ಮೋಹ ತೊರೆಯುತ್ತಾರೆ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನವಾಯಿತು. ನಮ್ಮ ಮಹಿಳೆಯರಿಗೆ ಬಂಗಾರದ ಮೇಲೆ ಆಸೆ ಇದೆ ನಿಜ, ಆದರೆ ಅದು ಕುಟುಂಬದ ಮಾನ, ದೇಶದ ಘನತೆ ರಕ್ಷಣೆಗೆ ಬಳಕೆಯಾದರೆ ಅದಕ್ಕಿಂತ ಧನ್ಯತೆ ಅವರಿಗೆ ಬೇರೊಂದಿಲ್ಲ.

ವಿಜಾಪುರದ ಈ ಕಾರ್ಯಕ್ರಮ ಇನ್ನೂ ಹಲವಾರು ಕಾರಣಗಳಿಗೆ ವಿಶಿಷ್ಟವಾಗಿತ್ತು. ನಿಜಲಿಂಗಪ್ಪ ಅವರು ರಕ್ಷಣಾ ನಿಧಿಗೆ ಸಂಬಂಧಿಸಿದಂತೆ ಒಂದು ಸಭೆಯನ್ನು ಕರೆದಿದ್ದರು. ಅದರಲ್ಲಿ ಭಾಗವಹಿಸಿದ್ದ ಬಹುತೇಕ ಮಂದಿ ‘ರಾಜ್ಯದಲ್ಲಿ ಬರಗಾಲವಿದೆ. ಜನರಲ್ಲಿ ಹಣವೇ ಇಲ್ಲ. ಈ ಸಂದರ್ಭದಲ್ಲಿ ದೇಣಿಗೆ ನೀಡುವಂತೆ ಕೇಳಿದರೆ ಕೊಡುವುದು ಕಷ್ಟ’ ಎಂದರು. ಆಗ ನಿಜಲಿಂಗಪ್ಪ ಅವರು ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಂ.ನಾಡಗೌಡರಿಗೆ ‘ಏನ್ ಗೌಡ್ರೇ, ರಕ್ಷಣಾ ನಿಧಿಗೆ ಹಣ ಕೊಡಿಸುವ ವಿಚಾರದಲ್ಲಿ ಮೌನವಾಗಿದ್ದೀರಿ. ನಿಮ್ಮ ನಿಲುವೇನು?’ ಎಂದು ಪ್ರಶ್ನಿಸಿದರು. ಆಗ ಗೌಡರು ‘ದೇಶ ಕಾಯುವ ಸೇನೆ ಬಲಪಡಿಸಲು ಎಷ್ಟು ಕೊಟ್ಟರೂ ಸಾಲದು. ನಾನು ನಿಮ್ಮ ತೂಕದಷ್ಟು ಬಂಗಾರ ಕೊಡುತ್ತೇನೆ’ ಎಂದರು. ಅದನ್ನು ಕೇಳಿ ಸಭೆಯಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಅಚ್ಚರಿ. ನಿಜಲಿಂಗಪ್ಪನವರು ‘ಗೌಡ್ರೇ ಆ ದಿನ ಇಂದಿರಾ ಗಾಂಧಿ ಅವರು ಸಭೆಯಲ್ಲಿ ಇರುತ್ತಾರೆ. ಅವರ ಮುಂದೆ ನನಗೆ ಬಂಗಾರದಲ್ಲಿ ತುಲಾಭಾರ ಮಾಡಿದರೆ ಸರಿಯಾಗುವುದಿಲ್ಲ’ ಎಂದರು. ಅದಕ್ಕೆ ಗೌಡರು ‘ದೇಶದ ಹಿತಕ್ಕಿಂತ ಬಂಗಾರ ದೊಡ್ಡದಲ್ಲ. ದುಡಿದ ಹಣದಲ್ಲಿ ಒಂದು ಭಾಗವನ್ನು ದೀನದಲಿತರ ಉದ್ಧಾರಕ್ಕೆ ಮೀಸಲಿಡಬೇಕು ಎಂಬ ಬಸವಣ್ಣನ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು ನಾವು. ನಿಮ್ಮ ತೂಕದ ಬಂಗಾರ ಕೊಟ್ಟ ಹಾಗೆ ಇಂದಿರಾ ಗಾಂಧಿ ಅವರಿಗೂ ತುಲಾಭಾರ ಮಾಡಿ ಅವರ ತೂಕದಷ್ಟು ಬಂಗಾರವನ್ನು ನೀಡುತ್ತೇವೆ. ದೇಶ ಉಳಿದರೆ, ವಿಜಾಪುರವೂ ಉಳಿಯುತ್ತದೆ’ ಎಂದರು.

1963ರ ಜುಲೈ 2ರಂದು ವಿಜಾಪುರದ ಆದಿಲ್ ಶಾಹಿ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಇಬ್ಬರಿಗೂ ಚಿನ್ನದ ತುಲಾಭಾರ ನಡೆಸಲಾಯಿತು. ವಿಜಾಪುರದ ಜನ 120 ಕೆ.ಜಿ. ತೂಕದ ಬಂಗಾರವನ್ನು ದೇಣಿಗೆ ನೀಡಿದರು. ನಾಡಗೌಡರು ಹೇಳಿದ ಹಾಗೆ ಈಗಲೂ ಜನಕ್ಕೆ ದೇಶ ಮುಖ್ಯ. ದೇಶ ಉಳಿದರೆ ನಾವು ಉಳಿಯುತ್ತೇವೆ ಎಂಬ ಜ್ಞಾನ ಅವರಿಗೆ ಇದೆ. ದೇಶ ಉಳಿಸಿಕೊಳ್ಳಲು ಜನರು ಸಿದ್ಧರಿದ್ದಾರೆ. ನಾಯಕರ ಬಗ್ಗೆಯೇ ಕೊಂಚ ಡೌಟು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT