ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ | ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ...

ಬೆತ್ತಲೆಗೊಳಿಸುವುದು ಪೌರುಷ ಅಲ್ಲ, ಸತ್ಯದ ಮುಂದೆ, ನ್ಯಾಯದ ಮುಂದೆ ಬೆತ್ತಲಾಗುವುದು ಪೌರುಷ
Published 29 ಜುಲೈ 2023, 1:06 IST
Last Updated 29 ಜುಲೈ 2023, 1:06 IST
ಅಕ್ಷರ ಗಾತ್ರ

ಜುಲೈ 26. ಕಾರ್ಗಿಲ್ ವಿಜಯ ದಿವಸ. ಇಡೀ ದೇಶ ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸಿದೆ. ವಿಜಯೋತ್ಸವ ಆಚರಿಸಿದೆ. ಹಾಗೆ ಮಾಡಬೇಕಾದುದು ನಮ್ಮ ಕರ್ತವ್ಯವೂ ಹೌದು. ನಮ್ಮ ಸೈನಿಕರು ನಮ್ಮ ಹೆಮ್ಮೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಇದು ಬರೀ ತೋರಿಕೆಗೆ ಆಗಬಾರದಲ್ಲ. ಕಾರ್ಗಿಲ್ ಯೋಧರಿಗೆ ಕೆಲವರು ನಮಿಸಿದ್ದನ್ನು ನೋಡಿದರೆ ಪುರಂದರದಾಸರ ಪದ್ಯ ನೆನಪಿಗೆ ಬರುತ್ತದೆ. ‘ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯ ಮಾಡಿದರೇನು ಫಲ, ಸಟೆಯನ್ನಾಡುವ ಮನುಜರು ಮನದಲಿ ವಿಠಲನ ನೆನೆದರೆ ಏನು ಫಲ, ಹೀನ ಕೃತ್ಯಗಳ ಮಾಡುತ ನದಿಯಲಿ ಸ್ನಾನವ ಮಾಡಿದರೇನು ಫಲ’ ಎಂದು ದಾಸರು ಕೇಳುತ್ತಾರೆ.

ಕಾರ್ಗಿಲ್ ವಿಜಯೋತ್ಸವದ ದಿನ, ದೂರದ ಮಣಿಪುರದ ಬೆಟ್ಟಗುಡ್ಡಗಳ ನಡುವೆ ಇರುವ ಹಳ್ಳಿಯೊಂದರಲ್ಲಿ ಕಾರ್ಗಿಲ್ ಯೋಧರೊಬ್ಬರು ದುಃಖದ ಮಡುವಿನಲ್ಲಿ ಬಿದ್ದಿದ್ದರು. ತಲೆ ಎತ್ತದೆ ತಮ್ಮ ಅಸಹಾಯಕತೆ
ಯನ್ನು ಹಳಿಯುತ್ತ, ಘೋರ ಘಟನೆಯನ್ನು ನೆನೆಯುತ್ತ ಬಿಕ್ಕಳಿಸುತ್ತಿದ್ದರು. ಗಂಡಾಗಿ ಹುಟ್ಟಿದ್ದಕ್ಕೆ ನಾಚಿಕೆ ಪಡುತ್ತಿದ್ದರು. ಮೇ 4ರಂದು ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿದ ಪ್ರಕರಣ ನಡೆದಿತ್ತು. ಅವರಲ್ಲಿ ಒಬ್ಬರು ಈ ಯೋಧನ ಪತ್ನಿ. ಆ ಘಟನೆಯನ್ನು ನೆನೆದು ಕಾರ್ಗಿಲ್ ಯೋಧ ಹೇಳಿದ ಮಾತುಗಳು ಬಂಡೆಗಳನ್ನೂ ಕರಗಿಸುವಂತಿವೆ. ಸ್ವಲ್ಪವಾದರೂ ಮನುಷ್ಯತ್ವ ಇದ್ದರೆ ಕಣ್ಣೀರು ಹರಿಯುತ್ತದೆ. ಪುರುಷರಾಗಿ ಹುಟ್ಟಿದ ಬಗ್ಗೆಯೇ ಜುಗುಪ್ಸೆ ಮೂಡುತ್ತದೆ.

ಮಣಿಪುರದ ಪ್ರಕರಣ ಇಡೀ ಪುರುಷ ಕುಲಕ್ಕೇ ಅವಮಾನ. ಗಂಡಸರಿಗೆಲ್ಲ ನಾಚಿಕೆ ಹುಟ್ಟಿಸುವಂಥದ್ದು. ತಲೆ ಎತ್ತುವುದಕ್ಕೂ ಮುಜುಗರ ಪಡುವಂಥದ್ದು. ಈ ಘಟನೆ ಎಷ್ಟು ಹೇಯ ಎಂದರೆ, ದೇಶದ ಇತರ ಗಂಡಸರಿಗೂ ತಮ್ಮ ತಾಯಿಯ, ಪತ್ನಿಯ, ಸಹೋದರಿಯರ ಮುಖ ನೋಡುವುದಕ್ಕೂ ಹಿಂಜರಿಕೆ ತರುವಂತಹದ್ದು. ಅವಮಾನದಿಂದ ಬೇಯುವಂತಹದ್ದು. ನಿರ್ಭಯಾ ಪ್ರಕರಣ ನಡೆದಾಗಲೂ ದೇಶ ಇಂತಹುದೇ ಸ್ಥಿತಿ ಎದುರಿಸಿತ್ತು. ದೇಶದಲ್ಲಿ ಆಗಾಗ ಇಂತಹ ನಾಚಿಕೆಗೇಡಿನ ಕೃತ್ಯ ನಡೆಯುತ್ತಲೇ ಇರುತ್ತದೆ. ಆಗ ಕೊಂಚ ದಿನಗಳು ನಾವು ಮರುಗುತ್ತೇವೆ. ಮತ್ತೆ ನಮ್ಮ ಪುರುಷತ್ವ ವಿಜೃಂಭಿಸಲು ಆರಂಭಿಸುತ್ತದೆ. ಯಾಕೆಂದರೆ ಈ ನೆಲದಲ್ಲಿ ಬಿತ್ತಿದ್ದು ಪುರುಷತ್ವವನ್ನೇ ವಿನಾ ಹೆಣ್ತನವನ್ನಲ್ಲ!

ಅಸ್ಸಾಂ ರೆಜಿಮೆಂಟ್‌ನ ಸುಬೇದಾರ್ ಆಗಿದ್ದ ಮಣಿಪುರದ ಆ ಯೋಧ ಕಾರ್ಗಿಲ್ ಯುದ್ಧದಲ್ಲಿ ಮುಂದೆ ನಿಂತು ಹೋರಾಡಿದವರು. ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆ ಕಳಿಸಿದಾಗ ಅಲ್ಲಿಗೂ ತೆರಳಿ ಶಾಂತಿ ಸ್ಥಾಪನೆಗೆ ಯತ್ನಿಸಿದವರು. ಅಂತಹ ವ್ಯಕ್ತಿ ಈಗ ತಮ್ಮ ಸ್ಥಿತಿಗೆ ಮಮ್ಮಲ ಮರುಗಿ ‘ಯುದ್ಧ ಭೂಮಿಗಿಂತ ನಾನಿರುವ ಸ್ಥಳದ ಸ್ಥಿತಿಯೇ ಭೀಕರವಾಗಿದೆ’ ಎನ್ನುತ್ತಾರೆ. ‘ಕಾರ್ಗಿಲ್ ಯುದ್ಧದಲ್ಲಿ ನಾನು ದೇಶಕ್ಕಾಗಿ ಹೋರಾಡಿದೆ. ಯುದ್ಧ ಗೆದ್ದೆ. ಆದರೆ ನನ್ನ ಸ್ವಂತ ಗ್ರಾಮದಲ್ಲಿ ಮನೆ ಉಳಿಸಿಕೊಳ್ಳಲು ಆಗಲಿಲ್ಲ. ಪತ್ನಿಗೆ ರಕ್ಷಣೆ ನೀಡಲು ಆಗಲಿಲ್ಲ. ಗ್ರಾಮದ ಇತರರನ್ನು ರಕ್ಷಿಸಲು ಆಗಲಿಲ್ಲ’ ಎಂದು ವೇದನೆಯಿಂದ ಹೇಳಿಕೊಂಡಿದ್ದಾರೆ. ಮಾಜಿ ಯೋಧನೊಬ್ಬನ ಕಣ್ಣೀರು ಒರೆಸದೆ ಕಾರ್ಗಿಲ್ ವಿಜಯೋತ್ಸವ ಆಚರಿಸಿದರೇನು ಫಲ?

ಮಣಿಪುರ ಪ್ರಕರಣದ ಸಂತ್ರಸ್ತೆಯರನ್ನು ಆ ರಾಜ್ಯದ ಮುಖ್ಯಮಂತ್ರಿ ಭೇಟಿ ಮಾಡಿ ಸಾಂತ್ವನ ಹೇಳಲು ಮುಂದಾಗದಿರುವುದು ಅತ್ಯಂತ ದುರದೃಷ್ಟಕರ. ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿ ಎರಡೂವರೆ ತಿಂಗಳಾದರೂ ಇನ್ನೂ ತಹಬಂದಿಗೆ ಬಂದಿಲ್ಲ. ‘ನಾವು ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇವೆ’ ಎನ್ನುವವರೂ ‘ನಿಮ್ಮ ಗಡಿಯೊಳಗೆ ನುಗ್ಗಿ ಬಗ್ಗುಬಡಿಯುತ್ತೇವೆ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡುವವರೂ ಏನನ್ನೂ ಮಾಡುತ್ತಿಲ್ಲ. ಇದಕ್ಕಾಗಿಯೂ ನಾವು ನಾಚಿಕೆ ಪಡಬೇಕಿದೆ. ಮಹಿಳೆಯರ ರಕ್ಷಣೆಗಾಗಿಯೇ ಇರುವ ರಾಷ್ಟ್ರೀಯ ಮಹಿಳಾ ಆಯೋಗ ಸಹ ತುಟಿಪಿಟಕ್ಕೆನ್ನುತ್ತಿಲ್ಲ. ‘ವಿಶ್ವಗುರು’ ಕೂಡ ಮಾತನಾಡುತ್ತಿಲ್ಲ. ಬಾಯಿಮಾತಿನ ಉಪಚಾರ ಸಾಕಾಗುತ್ತಿಲ್ಲ. ಹಿಂಸಾಚಾರ ಹತ್ತಿಕ್ಕಲು ನಾವೀಗ ಪೌರುಷ ತೋರಬೇಕಿದೆ.

ಮಹಿಳೆಯರ ಬೆತ್ತಲೆ ಮೆರವಣಿಗೆಯ ನಂತರ, ಗಂಡಸರು ಬೆತ್ತಲಾಗುತ್ತಲೇ ಇದ್ದಾರೆ. ಗಲಭೆಯನ್ನು ಹತ್ತಿಕ್ಕುವ ಬದಲು, ರಾಜಸ್ಥಾನದಲ್ಲಿಯೂ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಿದೆ, ಪಶ್ಚಿಮ ಬಂಗಾಳದಲ್ಲಿಯೂ ಇಂತಹ ಪ್ರಕರಣಗಳು ನಡೆಯುತ್ತಿವೆ ಎಂದು ದೂರುವುದು ಇನ್ನೂ ನಾಚಿಕೆಗೇಡಿನ ವಿಷಯ. ದೇಶದ ಯಾವುದೇ ಭಾಗದಲ್ಲಿ ನಡೆದರೂ ಅದು ತಪ್ಪು. ಎಲ್ಲಿಯೂ ಇಂತಹ ಪ್ರಕರಣಗಳು ನಡೆಯದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು ನಮ್ಮ ಆದ್ಯತೆಯಾಗಬೇಕು. ಎಲ್ಲಿಯಾದರೂ ಒಂದು ಹೇಯ ಕೃತ್ಯ ನಡೆದರೆ ಅದನ್ನು ಖಂಡಿಸಿ, ಮುಂದೆ ಅಂತಹದ್ದು ಮರುಕಳಿಸದಂತೆ ನೋಡಿಕೊಳ್ಳಬೇಕೇ ವಿನಾ ‘ನಿಮ್ಮಲ್ಲಿ ಇಂತಹ ಘಟನೆಗಳು ಆಗುತ್ತಿಲ್ಲವೇ?’ ಎಂದು ಕೇಳುವುದು ಹೃದಯಹೀನರ ಮಾತಾದೀತು. ರಾಜಕೀಯದ ಮಾಯೆಯಲ್ಲಿ ಮುಳುಗಿರುವ ಈ ಹೊತ್ತಿನಲ್ಲಿ ಮಣಿಪುರಕ್ಕಾಗಿ ಮರುಗುವ ಮನಸ್ಸನ್ನು ಕಡ ತರುವುದು ಎಲ್ಲಿಂದ?

ಮಣಿಪುರ ಎನ್ನುವುದು ಒಂದು ಪುಟ್ಟ ಕಣಿವೆ ರಾಜ್ಯ. ಅಲ್ಲಿರುವವರು ಬಹುತೇಕ ಬುಡಕಟ್ಟು ಜನಾಂಗದವರು. ಮೈತೇಯಿ ಜನಾಂಗದವರು ಬಹುಸಂಖ್ಯಾತರಾದರೆ, ಕುಕಿ ಮತ್ತು ನಾಗಾಗಳು ಅಲ್ಪ ಸಂಖ್ಯಾತರು. ಮೈತೇಯಿ ಜನಾಂಗದ ಮೀಸಲಾತಿ ವಿಚಾರ ಹಿಂಸಾಚಾರಕ್ಕೆ ಮೂಲ. ಮೀಸಲಾತಿ ಪರ ಮತ್ತು ವಿರುದ್ಧ ಹೋರಾಟ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಲ್ಲರ ಹಕ್ಕು. ಪ್ರತಿಭಟನೆ ಮಾಡಲಿ, ಆದರೆ ಹೆಣ್ಣನ್ನು ಅವಮಾನಿಸುವ ನೀಚತನ ಇದೆಯಲ್ಲ ಅದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಅದಕ್ಕಿಂತಲೂ ಭೀಕರ ಎಂದರೆ ಅದನ್ನು ಬೆಂಬಲಿಸುವುದು. ಇನ್ನೂ ಘೋರ ಎಂದರೆ, ಪ್ರಭುಗಳು ಅದನ್ನು ನಿಯಂತ್ರಿಸದೆ ರಾಜಕಾರಣಕ್ಕೆ ಬಳಸಿಕೊಳ್ಳುವುದು.

ಯುದ್ಧ ಮತ್ತು ಶಾಂತಿ ಯಾವುದೇ ಇರಲಿ, ಎಲ್ಲ ಕಾಲದಲ್ಲಿಯೂ ಶೋಷಣೆಗೆ ಒಳಗಾಗುವುದು ಮಹಿಳೆಯೆ. ಅದಕ್ಕೆ ಕಾರಣ ನಮ್ಮ ಜೀವನ ಪದ್ಧತಿ. ನಾವು ಗಂಡಸನ್ನು ಬೈಯ್ಯುವಾಗಲೂ ಮಹಿಳೆಗೆ ಅವಮಾನಿಸಿಯೇ ಬೈಯ್ಯುತ್ತೇವೆ. ನಮ್ಮ ಬೈಗುಳಗಳೆಲ್ಲ ಮಹಿಳಾಕೇಂದ್ರಿತ ಆಗಿವೆ. ಅತ್ಯಂತ ನಾಗರಿಕ ಸಮಾಜ ಎಂದು ಬೆನ್ನು ತಟ್ಟಿಕೊಳ್ಳುವ ನಮಗೆ ಇದನ್ನು ಬದಲಾಯಿಸಲು ಇನ್ನೂ ಸಾಧ್ಯವಾಗಿಲ್ಲ. ಸಮಾಜವು ಪುರುಷಕೇಂದ್ರಿತ, ಬೈಗುಳವು ಮಹಿಳಾಕೇಂದ್ರಿತ. ಇದೆಂತಹ ವಿಪರ್ಯಾಸ? ಸಿಟ್ಟು, ದ್ವೇಷ, ಜಗಳ, ಘರ್ಷಣೆ, ಯುದ್ಧ ಎಲ್ಲವೂ ಪುರುಷ ಅಹಂಕಾರದ ಫಲ. ಶಿಕ್ಷೆ ಮಾತ್ರ ಹೆಣ್ಣು ಕುಲಕ್ಕೆ. ಇದು ಮಹಾಭಾರತದ ಕಾಲಕ್ಕೂ ರಾಮಾಯಣದ ಕಾಲಕ್ಕೂ ಇಂದಿನ 21ನೇ ಶತಮಾನಕ್ಕೂ ಬದಲಾಗಲೇ ಇಲ್ಲ.

ಭಾರತದಲ್ಲಿ ಮರದ ಬೊಂಬೆಗೆ ಅಲಂಕಾರ ಮಾಡಿ ಅದನ್ನು ದೇವಿ ಎಂದು ಪೂಜಿಸಿ ಮೆರವಣಿಗೆ ಮಾಡಲಾಗುತ್ತದೆ. ಅದೇ ಜೀವಂತ ಹೆಣ್ಣನ್ನು ಬೆತ್ತಲೆ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಛೇ, ಇದೆಂತಹ ಸಮಾಜ?

ನಮ್ಮ ಮನೆಯಲ್ಲಿಯೂ ಹೆಣ್ಣುಮಕ್ಕಳ ಮುಖವನ್ನು ನೋಡುವ ಧೈರ್ಯ ಬರಬೇಕು ಎಂದರೆ, ನೈತಿಕ ಸಮಾಜವೊಂದನ್ನು ಕಟ್ಟಬೇಕಿದೆ. ಸಾವಿರ ಸಾವಿರ ವರ್ಷಗಳಿಂದ ನಮ್ಮ ಮನೆಗಳಲ್ಲಿ ಹೆಣ್ಣುಮಕ್ಕಳ ನಡವಳಿಕೆ ಹೇಗಿರಬೇಕು ಎಂದು ಕಲಿಸಿಕೊಡುತ್ತಾ ಬಂದಿದ್ದೇವೆ. ಎಲ್ಲಿ ತಲೆ ಎತ್ತಬೇಕು, ಎಲ್ಲಿ ತಲೆ ತಗ್ಗಿಸಬೇಕು, ಹೇಗೆ ಸಂಸ್ಕಾರಯುತವಾಗಿ ಇರಬೇಕು ಎಂದು ಅಡಿಗಡಿಗೆ ಆಕೆಗೆ ಹೇಳುತ್ತಾ ಬಂದಿದ್ದೇವೆ. ಇನ್ನು ಮುಂದಿನ ಸಾವಿರ ವರ್ಷ, ನಮ್ಮ ಗಂಡುಮಕ್ಕಳು ಹೇಗೆ ನಡೆದುಕೊಳ್ಳಬೇಕು, ಹೆಣ್ಣನ್ನು ಹೇಗೆ ನಡೆಸಿಕೊಳ್ಳಬೇಕು, ಸಮಾಜದಲ್ಲಿ ಹೇಗಿರಬೇಕು, ಸಂಘರ್ಷದ ಕಾಲದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸೋಣ. ಆಗದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT