ವಿವೇಕದ ಕಣ್ಣು

7

ವಿವೇಕದ ಕಣ್ಣು

Published:
Updated:
ಬೆಳದಿಂಗಳು

ನಾವು ಜಗತ್ತನ್ನು ನೋಡುವುದು ಹೇಗೆ? ಕಣ್ಣಿನಿಂದ ತಾನೆ!

ಆದರೆ ಕಣ್ಣು ಎಂದರೆ ಏನು? ಅದೊಂದು ಇಂದ್ರಿಯ; ನಮಗೆ ನೋಟವನ್ನು ಒದಗಿಸುವ ಇಂದ್ರಿಯ ಎನ್ನಬಹುದು. ಅದು ಸರಿ, ಇಷ್ಟಕ್ಕೂ ನೋಡುವುದು ಎಂದರೇನು? ಈಗ ಸಮಸ್ಯೆ ಶುರುವಾಗುತ್ತದೆ. ಕಣ್ಣು ಏನನ್ನು ನಮಗೆ ದೃಶ್ಯವಾಗಿ ಒದಗಿಸುತ್ತದೆಯೋ, ಅದನ್ನು ನಾವು ಕಾಣುವ ಪ್ರಕ್ರಿಯೆಯೇ ‘ನೋಡುವುದು’ ಎಂದು ವಿವರಿಸಲಾದೀತು. 

ಕಣ್ಣು ನಮಗೆ ಎಲ್ಲವನ್ನೂ ತೋರಿಸಬಲ್ಲದೆ? ಅಥವಾ ಕಣ್ಣು ತೋರಿಸುವುದೆಲ್ಲವನ್ನೂ ನಾವು ನೋಡಿರುತ್ತೇವೆಯೆ? ಇಲ್ಲೊಂದು ಸುಭಾಷಿತವನ್ನು ನೋಡಬಹುದು:

ಏಕಂ ಹಿ ಚಕ್ಷುರಮಲಂ ಸಹಜೋ ವಿವೇಕಃ

ವಿದ್ವದ್ಭಿರೇವ ಸಹ ಸಂವಸನಂ ದ್ವಿತೀಯಂ |

ಯಸ್ಯಾಸ್ತಿ ನ ದ್ವಯಮಿದಂ ಸ್ಫುಟಮೇವ ಸೋsಧಃ

ತಸ್ಯಾಪಮಾರ್ಗಚಲನೇ ವದ ಕೋsಪರಾಧಃ ||

ಇದರ ತಾತ್ಪರ್ಯ ಹೀಗೆ:

‘ಸಹಜವಾದ ವಿವೇಕವು ಸ್ವಚ್ಛವಾದ ಒಂದು ಕಣ್ಣಷ್ಟೆ? ವಿದ್ವಾಂಸರೊಡನೆಯೇ ವಾಸಿಸುವುದು ಎರಡನೆಯ ಕಣ್ಣು. ಯಾರಿಗೆ ಇವರೆಡೂ ಇಲ್ಲವೋ ಅವನು ಸ್ಪಷ್ಟವಾಗಿ ಕುರುಡನೇ ಸರಿ. ಅವನು ಕೆಟ್ಟ ಮಾರ್ಗದಲ್ಲಿ ನಡೆದರೆ ಯಾರ ತಪ್ಪು? ಹೇಳು!‘

ಕಣ್ಣಿನ ದೃಷ್ಟಿಶಕ್ತಿಯ ಬಗ್ಗೆ ಇನ್ನೊಂದು ವಿವರವನ್ನೂ ಈ ಸುಭಾಷಿತ ನೀಡುತ್ತಿದೆ: ನಮಗೆ ಇರುವುದು ಎರಡು ಕಣ್ಣುಗಳು. ಆದರೆ ಎರಡು ಕಣ್ಣುಗಳು ಸೇರಿ ಒಂದೇ ದೃಶ್ಯವನ್ನು ನಮಗೆ ಕಟ್ಟಿಕೊಡುತ್ತದೆ.

ನಾವು ಯಾವುದರಿಂದ ನೋಡುತ್ತೇವೆಯೋ ಆ ಅಂಗವನ್ನು ಇಲ್ಲಿ ‘ಕಣ್ಣು’ ಎಂದು ಹೇಳುತ್ತಿಲ್ಲ; ಆ ಕಣ್ಣನ್ನೇ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದೆ.  ವಿವೇಕ ಮತ್ತು ಸಜ್ಜನ ಸಂಗ – ಇವು ಎರಡು ಕಣ್ಣುಗಳು ಎನ್ನುವುದು ಸುಭಾಷಿತದ ನಿಲುವು.

ನಾವು ದಾರಿಯಲ್ಲಿ ನಡೆಯಲು ಅದು ನಮಗೆ ‘ಕಾಣಬೇಕು’. ಜೀವನ ಎಂಬ ದಾರಿಯಲ್ಲಿ ನಡೆಯಬೇಕಾದರೂ ಕಣ್ಣಿನಿಂದ ನಾವು ನೋಡಲೇಬೆಕಷ್ಟೆ! ಆದರೆ ಈ ಕಣ್ಣು ನಮ್ಮ ಶರೀರದೊಂದಿಗೆ ಸೇರಿಕೊಂಡಿರುವ ಚರ್ಮಚಕ್ಷು ಅಲ್ಲ; ಅರಿವು ಎಂಬ ಶಕ್ತಿಯೇ ನಿಜವಾದ ಕಣ್ಣು, ನೋಟ – ಎನ್ನುತ್ತಿದೆ, ಸುಭಾಷಿತ.

ಇಲ್ಲಿ ಮಹಾಭಾರತದ ಶ್ಲೋಕವೊಂದನ್ನು ನೋಡಬಹುದು:

ನಾಸ್ತಿ ವಿದ್ಯಾಸಮಂ ಚಕ್ಷುರ್ನಾಸ್ತಿ ಸತ್ಯಸಮಂ ತಪಃ |

ನಾಸ್ತಿ ರಾಗಸಮಂ ದುಃಖ ನಾಸ್ತಿ ತ್ಯಾಗಸಮಂ ಸುಖಮ್‌ ||

ಎಂದರೆ, ‘ವಿದ್ಯೆಗೆ ಸಮವಾದ ಇನ್ನೊಂದು ಕಣ್ಣು ಇಲ್ಲ; ಸತ್ಯಕ್ಕೆ ಸಮವಾದ ತಪಸ್ಸಿಲ್ಲ; ಆಸಕ್ತಿಗೆ ಸಮವಾದ ದುಃಖವಿಲ್ಲ; ತ್ಯಾಗಕ್ಕೆ ಸಮವಾದ ಸುಖವಿಲ್ಲ.’

ಇಲ್ಲಿ ವಿದ್ಯೆ ಎಂದರೆ ವಿವೇಕ ಎಂದೇ ಅರ್ಥ.

ಎಂದರೆ ಬರಿಯ ಕಣ್ಣು ತೋರಿಸುವುದೇ ನಿಜವಾದ ವಸ್ತುವೂ ಅಲ್ಲ, ಜೀವನವೂ ಅಲ್ಲ; ವಿವೇಕ ನಮಗೆ ಯಾವುದನ್ನು ತೋರಿಸುತ್ತದೆಯೋ ಅದೇ ನಿಜವಾದ ‘ನೋಟ’, ‘ದೃಷ್ಟಿ’; ಅದೇ ನಮ್ಮ ಜೀವನದರ್ಶನವಾಗಬೇಕು ಎನ್ನುವುದು ಸುಭಾಷಿತದ ಆಶಯ. ಅಷ್ಟೇ ಅಲ್ಲ, ಎಷ್ಟೋ ಸಲ ನಾವು ಪ್ರಪಂಚವನ್ನು ಕಣ್ಣಿನಿಂದ ದೃಷ್ಟಿಸುತ್ತಿದ್ದರೂ ವಾಸ್ತವಾಗಿ ಅದು ನಮಗೆ ‘ಕಾಣುತ್ತಿರುವುದಿಲ್ಲ’.

ಕಣ್ಣು ನೋಡುತ್ತಿರುತ್ತದೆ; ಆದರೆ ನಮ್ಮ ಮೆದುಳು ನಾವು ನೋಡಿರುವುದನ್ನು ಗುರುತಿಸಿರುವುದೇ ಇಲ್ಲ. ಎಂದರೆ ನಾವು ನೋಡುತ್ತಿದ್ದರೂ ನೋಡುತ್ತಿರುವುದಿಲ್ಲ! ಹೀಗಾಗಿ ‘ನೋಡುವುದು’ ಎನ್ನುವುದೇ ಒಂದು ವಿಶೇಷವಾದ ಕ್ರಿಯೆ. ಕಣ್ಣಿನ ನೋಟದ ಜೊತೆಗೆ ನಮ್ಮ ಮೆದುಳು ಕೂಡ ಆ ಪ್ರಕ್ರಿಯೆಯಲ್ಲಿ ಭಾಗವಹಿಸಿಬೇಕು; ಆಗಷ್ಟೇ ದೃಶ್ಯಪ್ರಪಂಚ ನಮ್ಮ ಪಾಲಿಗೆ ಒದಗುವುದು. ಇದು ನಮ್ಮ ಎದುರಿಗಿರುವ ಪ್ರಪಂಚವನ್ನು ನೋಡುವುದಕ್ಕೆ ಸಂಬಂಧಿಸಿದಾಯಿತು. ಇನ್ನು ಜೀವವನ್ನು ನೋಡಲು?

ಅದನ್ನೇ ಸುಭಾಷಿತ ಹೇಳುತ್ತಿರುವುದು – ಜೀವನವನ್ನು ಕಾಣಲು ನಮಗೆ ವಿವೇಕ ಬೇಕು; ಅದರ ಜೊತೆಗೆ ವಿವೇಕಿಗಳ ಮಾರ್ಗದರ್ಶನವೂ ಬೇಕು. ವಿವೇಕವನ್ನೇ ಕಣ್ಣಿಗೆ ಹೋಲಿಸಿರುವುದು ಮನೋಜ್ಞವಾಗಿದೆ. ವಸ್ತುಗಳು ನಮ್ಮ ಮುಂದೆ ಇರಬಹುದು; ಕಣ್ಣು ಕೂಡ ನಮಗೆ ಇರಬಹುದು. ಆದರೆ ಇರುವ ವಸ್ತುಗಳನ್ನು ಕಾಣಬೇಕಾದರೆ ಇವೆರಡು ಮಾತ್ರವೇ ಸಾಕಾಗದು; ಅದರ ಜೊತೆಗೆ ವಿವೇಕವೂ ಬೇಕು ಎನ್ನುವುದು ಇಲ್ಲಿಯ ಸಂದೇಶ.

‘ವಿದ್ಯಾ ನಾಮ ನರಸ್ಯ ರೂಪಮಧಿಕಂ ಪ್ರಚ್ಛನ್ನಗುಪ್ತಂ ಧನಂ’ ಎಂದಿದ್ದಾನೆ, ಭರ್ತೃಹರಿ. ‘ವಿದ್ಯೆಯೆಂಬುದು ಮನುಷ್ಯನ ವಿಶೇಷವಾದ ರೂಪ; ಅದು ಅವನ ಗುಪ್ತನಿಧಿ’ ಎನ್ನುವುದು ಅವನ ಮಾತು. ನಮ್ಮ ಅಂತರಂಗದ ಬೆಳಕೇ ವಿದ್ಯೆ, ವಿವೇಕ; ಅದು ಇಲ್ಲದಿದ್ದರೆ ಜೀವನಮಾರ್ಗ ನಮಗೆ ಕಾಣಿಸದು. ಆದುದರಿಂದ ವಿದ್ಯೆಯನ್ನು ನಾವು ಎಲ್ಲ ಮೂಲಗಳಿಂದಲೂ ಪಡೆಯಬೇಕು ಎಂಬ ಧ್ವನಿಯನ್ನೂ ಈ ಸುಭಾಷಿತದಲ್ಲಿ ಕಾಣಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !