ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯತ್ವದ ಲಕ್ಷ – ಕೃತಜ್ಞತೆ

Last Updated 30 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಬೋಧಿಸತ್ವ ವಾರಾಣಸಿಯ ರಾಜನಾಗಿ ಹುಟ್ಟಿದ್ದ. ಅತ್ಯಂತ ಧರ್ಮದಿಂದ, ಪರಿಶ್ರಮದಿಂದ ಪ್ರಜೆಗಳನ್ನು ನೋಡಿಕೊಂಡು ರಾಜ್ಯಭಾರ ಮಾಡುತ್ತಿದ್ದ.

ಒಂದು ಬಾರಿ ಗಡಿಯಲ್ಲಿ ದಂಗೆ ಎದ್ದಾಗ ಅದನ್ನು ಅಡಗಿಸಲು ಒಂದು ಸಣ್ಣ ಸೈನ್ಯವನ್ನು ತೆಗೆದುಕೊಂಡು ಹೋದ. ಆದರೆ ಅಲ್ಲಿ ದಂಗೆಕೋರರ ಸಂಖ್ಯೆ ಅವನು ಕಲ್ಪನೆ ಮಾಡಿದ್ದಕ್ಕಿಂತ ತುಂಬ ಹೆಚ್ಚಾಗಿತ್ತು. ಅವರು ರಾಜನ ಮೇಲೆ ದಾಳಿ ಮಾಡಿದಾಗ ಅವರಿಂದ ತಪ್ಪಿಸಿಕೊಳ್ಳಲು ಕುದುರೆಯನ್ನೇರಿ ಕಾಡಿನೊಳಗೆ ಹೋಗಿಬಿಟ್ಟ. ಹಾಗೆ ತಪ್ಪಿಸಿಕೊಂಡು ದೂರ, ದೂರ ಸಾಗಿ ಗಡಿಪ್ರದೇಶದ ಒಂದು ಪುಟ್ಟ ಹಳ್ಳಿಗೆ ಬಂದ.

ಅಲಂಕೃತವಾದ ಕುದುರೆಯ ಮೇಲೆ ಬಂದ ಸವಾರ ಯಾರು ಎಂಬುದು ಜನರಿಗೆ ತಿಳಿಯಲಿಲ್ಲ. ಅವನು ವೈರಿ ಪಕ್ಷದವನೋ, ಮತ್ತಾವನೋ ದಾಳಿಕೋರನೋ ತಿಳಿಯದೆ ಎಲ್ಲರೂ ತಮ್ಮ ಮನೆಯನ್ನು ಸೇರಿಕೊಂಡು ಬಾಗಿಲು ಹಾಕಿಕೊಂಡರು.

ಆದರೆ ಒಬ್ಬ ಮನುಷ್ಯ ಮಾತ್ರ ಈ ಕುದುರೆ ಸವಾರ ಬಹಳ ದಣಿದು ಬಂದದ್ದನ್ನು, ಅವನ ಮುಖದಲ್ಲಿ ನೋವಿದ್ದುದನ್ನು ಕಂಡ. ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದ. “ಅಯ್ಯಾ, ನೀನು ಯಾರು? ನಮ್ಮ ದೇಶದವನೇ, ವೈರಿ ದೇಶದವನೇ?” “ನಾನು ಈ ದೇಶದವನೇ”, ಎಂದ ರಾಜ.

ಆ ಮನೆಯ ಗೃಹಸ್ಥ ಈ ಕುದುರೆ ಸವಾರನ ಸೇವೆಯನ್ನು ಅತ್ಯಂತ ಪ್ರೀತಿಯಿಂದ, ಗೌರವದಿಂದ ಮಾಡಿದ. ಅವನಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಮಾತ್ರವಲ್ಲ, ಅವನ ಕುದುರೆಗೆ ಚೆನ್ನಾಗಿ ಆರೈಕೆ ಮಾಡಿದ. ಒಂದು ವಾರದ ನಂತರ ಕುದುರೆ ಸವಾರ ಚೇತರಿಸಿಕೊಂಡು ತನ್ನ ಊರಿಗೆ ಹೊರಡಲು ಸಿದ್ಧನಾದ. ಹೊರಡುವ ಮುನ್ನ ಮನೆಯ ಯಜಮಾನನನ್ನು ಕರೆದು, “ಸ್ನೇಹಿತ, ನಾನು ನಿನ್ನ ಋಣವನ್ನು ಎಂದಿಗೂ ತೀರಿಸಲಾರೆ.

ನನ್ನ ಹೆಸರು ಮಹಾಶ್ವಾರೋಹಿ. ನಾನು ರಾಜಧಾನಿಯಲ್ಲಿರುತ್ತೇನೆ. ನೀನು ರಾಜಧಾನಿಗೆ ಬಂದಾಗ ನಗರದ್ವಾರದಲ್ಲಿರುವ ದ್ವಾರಪಾಲಕನಿಗೆ ಮಹಾಶ್ವಾರೋಹಿಯನ್ನು ಕಾಣಬೇಕೆಂದು ಹೇಳು. ಆತ ನಿನ್ನನ್ನು ನನ್ನ ಬಳಿಗೆ ಕರೆತರುತ್ತಾನೆ. ದಯವಿಟ್ಟು ನನ್ನ ಮನೆಗೆ ಬಂದು ನನ್ನ ಅತಿಥ್ಯ ಸ್ವೀಕರಿಸು” ಎಂದು ಹೇಳಿದ. ನಂತರ ರಾಜಧಾನಿಗೆ ಬಂದಾಗ ರಾಜನನ್ನು ಕಾಣದೆ ಕಂಗಾಲಾಗಿದ್ದ ಸೈನಿಕರು, ಪ್ರಜಾಪ್ರಮುಖರು ತುಂಬ ಸಂತೋಷಪಟ್ಟು ಮೆರವಣಿಗೆಯಲ್ಲಿ ಅವನನ್ನು ಕರೆದುಕೊಂಡು ಅರಮನೆಗೆ ಹೋದರು. ರಾಜ ದ್ವಾರಪಾಲಕನನ್ನು ಕರೆದು “ಯಾರಾದರೂ ಮಹಾಶ್ವಾರೋಹಿಯನ್ನು ಕಾಣಬೇಕೆಂದು ಬಂದರೆ ಆ ವ್ಯಕ್ತಿಯನ್ನು ಅತ್ಯಂತ ಗೌರವದಿಂದ ಅರಮನೆಗೆ ಕರೆದು ತಾ” ಎಂದು ಹೇಳಿ ವ್ಯವಸ್ಥೆ ಮಾಡಿದ.

ಈ ಹಳ್ಳಿಯ ವ್ಯಕ್ತಿ ಬರಲೇ ಇಲ್ಲ. ಅವನನ್ನು ತನ್ನ ಕಡೆಗೆ ಬರಮಾಡಿಕೊಳ್ಳಲು ರಾಜ ಆ ಹಳ್ಳಿಯ ಜನರ ಮೇಲೆ ತೆರಿಗೆ ಹೆಚ್ಚು ಮಾಡಿದ. ಅದೂ ಫಲ ಕೊಡಲಿಲ್ಲ, ತೆರಿಗೆಯನ್ನು ನಾಲ್ಕು ಪಟ್ಟು ಏರಿಸಿದ. ಆಗ ಹಳ್ಳಿ ಜನ, ಈ ಯಜಮಾನನಿಗೆ, “ಅಯ್ಯಾ, ನಿನಗೆ ಮಹಾಶ್ವಾರೋಹಿಯ ಪರಿಚಯ ಇರುವುದರಿಂದ ರಾಜಧಾನಿಗೆ ಹೋಗಿ ಅವನ ಮೂಲಕ ರಾಜನಿಗೆ ಹೇಳಿಸಿ ತೆರಿಗೆ ಕಡಿಮೆ ಮಾಡಿಸು” ಎಂದು ಒತ್ತಾಯಿಸಿದರು.

ಈತ ರಾಜಧಾನಿಗೆ ಬಂದು ದ್ವಾರಪಾಲಕನಿಗೆ ಕೇಳಿದಾಗ ಆತ ಅವನನ್ನು ಅರಮನೆಗೆ ಕರೆತಂದ. ರಾಜ ಅವನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡ. ಹೆಂಡತಿಯೊಂದಿಗೆ ಅವನ ಪಾದ ತೊಳೆದ. ರಾಶಿ ರಾಶಿ ಕಾಣಿಕೆಗಳನ್ನು ಕೊಟ್ಟ. ಆಗ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಮುಜುಗರವಾಯಿತು. ರಾಜನಾದವನು ಹೀಗೆ ಸಾಮಾನ್ಯ ವ್ಯಕ್ತಿಗೆ ಇಷ್ಟು ಮರ್ಯಾದೆ ಕೊಡುವುದು ಸರಿಯಲ್ಲ, ಜನ ಅದರ ದುರುಪಯೋಗ ಪಡೆದಾರು ಎನ್ನಿಸಿತು.

ಆಗ ರಾಜ ಹೇಳಿದ, 'ನಾನು ಒಂದು ವಾರ ಕಾಣೆಯಾದಾಗ ಎಲ್ಲರೂ ಕೇವಲ ಆತಂಕಗೊಂಡಿದ್ದಿರಿ. ಆದರೆ ಯಾರೂ ನನ್ನ ಹುಡುಕಿಸಲಿಲ್ಲ. ಸೈನಿಕರೂ ನನ್ನನ್ನು ಶೋಧಿಸಲಿಲ್ಲ. ಈ ಮನುಷ್ಯ ನಾನು ರಾಜ ಎಂಬುದು ಗೊತ್ತಿಲ್ಲದಿದ್ದರೂ ನನ್ನನ್ನು ದೇವರಂತೆ ನೋಡಿಕೊಂಡ. ಆ ಪ್ರೀತಿಯ ಋಣ ತೀರಿಸಲು ಈ ಕೃತಜ್ಞತೆ. ಅದು ಮನುಷ್ಯನ ಮುಖ್ಯ ಲಕ್ಷಣ. ಕೃತಜ್ಞತೆ ಇಲ್ಲದ ಬದುಕು ವ್ಯರ್ಥ.'ಇಂದು ಕೃತಜ್ಞತೆ ತುಂಬ ಅಪರೂಪದ ಗುಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT