ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಾತಿಗಳು

ಬೆರಗಿನ ಬೆಳಕು
Last Updated 28 ನವೆಂಬರ್ 2019, 18:52 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಹತ್ತಿರದ ಹಳ್ಳಿಯಲ್ಲಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದ. ಬೆಳೆಯುತ್ತಿದ್ದಂತೆ ತಕ್ಕಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು ಕಲಿತು ತನ್ನ ಊರಿಗೆ ಮರಳಿ ಬಂದ. ತಂದೆ-ತಾಯಿಯರ ಅಪೇಕ್ಷೆಯಂತೆ ಮದುವೆಯಾದ. ಅವನಿಗೊಂದು ಮಗು ಹುಟ್ಟಿದಾಗ ಹೆಂಡತಿ ತೀರಿ ಹೋದಳು. ಆಗ ಬ್ರಾಹ್ಮಣ ತಾನೇ ತಾಯಿ-ತಂದೆ ಎರಡೂ ಆಗಿ ಮಗುವನ್ನು ಪೋಷಿಸಿದ. ಮಗನಿಗೆ ಮುಂಜಿ ಮಾಡಿ ಸಕಲ ವಿದ್ಯೆಗಳನ್ನು ತಾನೇ ಕಲಿಸಿದ.

ನಂತರ ಒಂದು ದಿನ ಮಗನನ್ನು ಹಿಮಾಲಯಕ್ಕೆ ಕರೆದೊಯ್ದು ಋಷಿ-ಪ್ರವ್ರಜ್ಯವನ್ನು ಸ್ವೀಕರಿಸಿದ. ಬಾಲಕ ತಂದೆಯೊಂದಿಗೆ ಆಶ್ರಮದಲ್ಲೇ ವಾಸಿಸುತ್ತಿದ್ದ. ತಂದೆಯೇ ಅವನ ಕಲಿಕೆ, ಊಟ ವಸತಿಗಳ ವ್ಯವಸ್ಥೆ ಮಾಡಿದ್ದ.

ಈ ಸಮಯದಲ್ಲಿ ಕೆಲವು ಕಳ್ಳರು ಹಿಮಾಲಯದ ಅಂಚಿನಲ್ಲಿರುವ ಹಳ್ಳಿಗಳನ್ನು ಲೂಟಿಮಾಡಿ ಮಕ್ಕಳನ್ನು ಹೊತ್ತುಕೊಂಡು ಓಡಿ ಹೋಗುತ್ತಿದ್ದರು. ಮುಂದೆ ಇದೇ ಮಕ್ಕಳಿಗೆ ಕಳ್ಳರನ್ನಾಗುವಂತೆ ತರಬೇತಿ ನೀಡುತ್ತಿದ್ದರು. ಕಳ್ಳ ಗುಂಪುಗಳಲ್ಲಿ ಕೆಲವು ಸುಂದರವಾದ ತರುಣಿಯರೂ ಇದ್ದರು. ಅವರು ತರುಣರನ್ನು ಆಕರ್ಷಿಸಿ ತಮ್ಮತ್ತ ಸೆಳೆದುಕೊಂಡು ಹೋಗಿ ಅವರನ್ನು ಕಳ್ಳರನ್ನಾಗಿ ಮಾಡುತ್ತಿದ್ದರು. ಇಂಥ ಕಳ್ಳ ಗುಂಪಿನಲ್ಲಿದ್ದ ತರುಣಿಯೊಬ್ಬಳು ಈ ಋಷಿಯ ಮಗನನ್ನು ಕಂಡಳು. ಆಕೆ ತಪಸ್ವಿ-ಕುಮಾರನನ್ನು ತನ್ನತ್ತ ಸೆಳೆದುಕೊಂಡು ಅವನ ಶೀಲ ನಾಶಮಾಡಿ ಕರೆದುಕೊಂಡು ಹೋಗಲೆಂದು ಆಶ್ರಮಕ್ಕೆ ಬಂದಳು. ಹುಡುಗ ತಕ್ಷಣವೇ ಅವಳಿಂದ ಆಕರ್ಷಿತನಾದ. ಆದರೆ ತಂದೆ ನೀಡಿದ್ದ ಶಿಕ್ಷಣ ಸ್ವಲ್ಪ ಸಹಾಯಕ್ಕೆ ಬಂದಿತು. ಆತ ಆಕೆಯೊಡನೆ ಹೊರಟು ಹೋಗದೆ, “ನನ್ನ ತಂದೆ ಆಶ್ರಮದಿಂದ ಹೊರಗೆ ಹೋಗಿದ್ದಾರೆ. ಅವರು ಬಂದ ತಕ್ಷಣ ಅವರ ಅಪ್ಪಣೆ ಪಡೆದು ನಿನ್ನೊಂದಿಗೆ ಬರುತ್ತೇನೆ” ಎಂದ. ಆಕೆ, “ಹಾಗೆಯೇ ಆಗಲಿ, ನಾನು ಆಶ್ರಮದ ಹೊರಗೆ ರಸ್ತೆ ಬದಿಯಲ್ಲಿ ನಿನಗಾಗಿ ಕಾಯುತ್ತೇನೆ” ಎಂದು ಹೊರಟಳು.

ತಪಸ್ವಿ ತಂದೆ ಆಶ್ರಮಕ್ಕೆ ಬಂದ ಮೇಲೆ ಮಗ ಹೋಗಿ ಕೇಳಿದ, “ತಂದೆ, ನಾನು ಈಗ ಆಶ್ರಮವನ್ನು ತೊರೆದು ನಾಡಿಗೆ ಹೋಗಬಯಸುತ್ತೇನೆ. ನಾನು ಪ್ರಪಂಚವನ್ನು ನೋಡಬೇಕು. ಆದರೆ ಅಲ್ಲಿ ಹೇಗೆ ಬದುಕಬೇಕೆಂಬುದು ನನಗೆ ತಿಳಿದಿಲ್ಲ. ನಾನು ಎಂಥವರ ಜೊತೆಗೆ ಸಂಗ ಮಾಡಬೇಕು ಎಂಬುದನ್ನು ದಯವಿಟ್ಟು ತಿಳಿಸಿ”. ತಂದೆ ಮಗನನ್ನು ಉದ್ದೇಶಿಸಿ ಕೆಲವು ಅತ್ಯಂತ ಮಾರ್ಮಿಕವಾದ ಮಾತುಗಳನ್ನು ಹೇಳಿದ, “ನೀನು ನಾಡಿಗೆ ಹೋದ ಮೇಲೆ ಜನರನ್ನು ಪರೀಕ್ಷಿಸಿ ನಿನ್ನಲ್ಲಿ ವಿಶ್ವಾಸವನ್ನು ಇಡುವ ಜನರನ್ನು ಗುರುತಿಸು. ನಿನ್ನ ಮಾತನ್ನು ಕೇಳಬಯಸುವ ಮತ್ತು ನಿನ್ನ ದೋಷಗಳನ್ನು ಕ್ಷಮಿಸಬಲ್ಲಂತಹ ವ್ಯಕ್ತಿಯ ಸಹವಾಸ ಮಾಡು. ನೀನು ಸೂಕ್ಷ್ಮವಾಗಿ ಗಮನಿಸಿ ಕಾಯಾ, ವಾಚಾ, ಮನಸಾ ಕೆಟ್ಟ ಕೆಲಸ ಮಾಡದಿರುವ ಮನುಷ್ಯನ ಸಂಗಮಾಡು. ಅಂಥವರು ನಿನಗೆ ಸಿಗದೇ ಹೋದರೆ ಎಂದಿಗೂ ಅರಿಷಿಣದ ಬಣ್ಣದಂತೆ ಅಸ್ಥಿರವಾದ, ಕೋತಿಯಂತೆ ಚಂಚಲ ಮನಸ್ಸುಳ್ಳ, ಬೇಗನೆ ನಿನ್ನ ಮನಸ್ಸನ್ನು ಆಕರ್ಷಿಸಲು ಪ್ರಯತ್ನಿಸುವ ಮತ್ತು ಅಷ್ಟೇ ಬೇಗನೆ ನಿನ್ನನ್ನು ತೊರೆದು ಹೋಗಬಹುದಾದ ವ್ಯಕ್ತಿಯನ್ನು ಹತ್ತಿರ ಬರಗೊಡಬೇಡ”.

ಮಗ ಈ ಮಾತುಗಳನ್ನು ಕೇಳಿ ನಾಡಿಗೆ ಬಂದು ಸಜ್ಜನರ ಸಂಗ ಮಾಡಿ ಶ್ರೇಷ್ಠನಾದ. ನಮಗೂ ಈ ಬೋಧನೆ ಅತ್ಯಂತ ಪ್ರಯೋಜನಕಾರಿ. ಅತ್ಯಂತ ಒಳ್ಳೆಯವರು ಸಿಗದೆ ಹೋದರೆ ದುರ್ಜನರ ಸಂಗ ಮಾಡದಿದ್ದರೂ ಸಾಕು, ಬದುಕು ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT