ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಾರ್ಥಕವಾಗುವ ಮುನ್ನೋಟ

Last Updated 20 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಮುನ್ನಾದ ಜನುಮಗಳ ನೆನಪಿನಿಂ ನಿನಗೇನು? |
ಇನ್ನುಮಿಹುದಕೆ ನೀಡುಮನವನ್:
ಎನ್ನುವವೋಲ್ ||

ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ |
ಕಣ್ಣನಿಟ್ಟನು ಮುಖದಿ - ಮಂಕುತಿಮ್ಮ || 760 ||

ಪದ-ಅರ್ಥ: ಮುನ್ನಾದ=ಹಿಂದೆ ಆಗಿ ಹೋದ, ನೆನಪಿನಿಂ=ನೆನಪುಗಳಿಂದ, ಇನ್ನುಮಿಹುದಕೆ=ಇನ್ನುಮ್ (ಇನ್ನು)+ಇಹುದಕೆ(ಇರುವುದಕ್ಕೆ), ಎನ್ನುವವೊಲ್=ಎನ್ನುವಂತೆ, ಪಿಂತಿನದು=ಹಿಂದಿನದು, ಕಣ್ಣನಿಟ್ಟನು=ಕಣ್ಣನು+ಇಟ್ಟನು.
ವಾಚ್ಯಾರ್ಥ: ಹಿಂದೆ ಆಗಿಹೋದ ಜನ್ಮಗಳ ನೆನಪಿನಿಂದ ಆಗುವುದೇನು? ಇನ್ನು ಮುಂದೆ ಇರುವುದಕ್ಕೆ ಮನಸ್ಸನ್ನು ನೀಡು ಎನ್ನುವಂತೆ ಸೃಷ್ಟಿಕರ್ತ, ಬೆನ್ನಹಿಂದಿರುವುದು ಕಾಣದಿರಲೆಂದು ಮುಂದೆ ಮುಖದಲ್ಲಿ ಕಣ್ಣುಗಳನ್ನು ಇಟ್ಟಿದ್ದಾನೆ.

ವಿವರಣೆ: ನಮ್ಮ ಸನಾತನ ಧರ್ಮದಲ್ಲಿ ಜನ್ಮಾಂತರಗಳ ಅಸ್ತಿತ್ವದಲ್ಲಿ ನಂಬಿಕೆ ಇದೆ. ಅದು ಇದೆಯೋ ಇಲ್ಲವೋ ಎನ್ನುವುದು ಅವರವರ ನಂಬಿಕೆಯಲ್ಲಿದೆ. ಆತ್ಮನಿಗೆ ಜನ್ಮಾಂತರವಿದೆಯೆ?

ಆತ್ಮನಿಗೆ ಹಿಂದೆ ಯಾವ ಜನ್ಮವಿತ್ತು? ಮುಂದೆ ಈ ಆತ್ಮನು ಏನಾಗಿ ಹುಟ್ಟುತ್ತಾನೆ? ಇಂತಹ ವಿಷಯಗಳು ಬಹಳ ಸಂದಿಗ್ಧವಾದವುಗಳು. ಈ ವಿಷಯದಲ್ಲಿ ಮನುಷ್ಯರಿಗೆ ಮಾತ್ರವಲ್ಲ, ದೇವತೆಗಳಿಗೂ ಸಂಶಯವಿದೆಯಂತೆ. ಕಠೋಪನಿಷತ್ತಿನಲ್ಲಿ ಯಮಧರ್ಮ ನಚಿಕೇತನಿಗೆ ಹೇಳುತ್ತಾನೆ,

“ದೇವೈರತ್ರಾಪಿ ವಿಚಿಕಿತ್ಸಿತಂ ಪುರಾ| ನ ಹಿ ಸುವಿಜ್ಞೇಯಮಣುರೇಷ ಧರ್ಮ:” ಹಾಗೆಂದರೆ, ಮರಣಾನಂತರ ಆತ್ಮನು ಇರುತ್ತಾನೋ, ಇಲ್ಲವೋ ಎನ್ನುವ ವಿಷಯದಲ್ಲಿ ದೇವತೆಗಳಿಗೂ ಸಂಶಯವಿದೆ. ಯಾಕೆಂದರೆ ಈ ವಿಷಯ ಅತ್ಯಂತ ಸೂಕ್ಷ್ಮವು, ಅವಿಜ್ಞೇಯವೂ ಆಗಿರುತ್ತದೆ. ಈ ವಿಷಯಗಳು ಪ್ರತ್ಯಕ್ಷಗೋಚರವಲ್ಲ! ಒಂದು ವೇಳೆ ನಾವು ಹಿಂದಿನ ಅನೇಕ ಜನ್ಮಗಳಲ್ಲಿ ಏನಾಗಿದ್ದೆವು ಎಂಬುದು ತಿಳಿದರೂ ಏನು ಪ್ರಯೋಜನ?ಅವುಗಳಲ್ಲಿ ಬದಲಾವಣೆ ಮಾಡುವುದು ಸಾಧ್ಯವಿಲ್ಲ. ನಾವು ಮಾಡಬಹುದಾದದ್ದು ನಮ್ಮ ಬದುಕಿನ ಉಳಿದ ಅವಧಿಯಲ್ಲಿ, ಅಲ್ಲಿ ಧರ್ಮದಿಂದ ಪರಿಶ್ರಮವಹಿಸಿ ದುಡಿದರೆ ಆ ಅವಧಿ ಪ್ರಯೋಜನಕಾರಿಯಾದೀತು. ಆದ್ದರಿಂದ ಹಿಂದಿನ ಜನ್ಮಗಳಲ್ಲಿ ಅಲ್ಲ,

ಈ ಜನ್ಮದಲ್ಲೇ ಹಿಂದಾದದ್ದನ್ನು ನೆನಪಿಸಿಕೊಂಡರೆ ಏನು ಸುಖ? ಮುಂದೆ ಮಾಡಬಹುದಾದ ಸಾರ್ಥಕ ಕರ್ಮಗಳ ಕಡೆಗೆ ಮನಸ್ಸನ್ನು ಹರಿಸಬೇಕು. ಇದು ಧನಾತ್ಮಕ ಚಿಂತನೆ. ಕಗ್ಗ ಒಂದು ಉದಾಹರಣೆಯಿಂದ, ಭಗವಂತನೂ ಇದನ್ನೇ ಸೂಚಿಸುತ್ತಾನೆ ಎನ್ನುತ್ತದೆ. ನಮ್ಮ ಕಣ್ಣುಗಳು ಬೆನ್ನ ಮೇಲಿದ್ದರೆ ನಮಗೆ ಕಾಣುವುದೇನು? ಬರೀ ಹಿಂದಿದ್ದ ಚಿತ್ರಗಳೇ. ಮನುಷ್ಯ ಕೇವಲ ಹಿಂದಾದದ್ದನ್ನು ನೋಡುತ್ತ ಬದುಕನ್ನು ವ್ಯಯಮಾಡದಿರಲಿ ಎಂದು ಆತ ನಮ್ಮ ಕಣ್ಣುಗಳನ್ನು ಮುಂದಕ್ಕೆ ನೋಡುವಂತೆ ಮುಖದಲ್ಲಿ ಇಟ್ಟನಂತೆ!. ಕಗ್ಗದ ಸಂದೇಶವೇ ಅದು. ಜೀವ ಶ್ರೇಷ್ಠತೆಯ ಕಡೆಗೆ ಸಾಗಲು ಧನಾತ್ಮಕವಾಗಿ ಮುಂದಾಗುವುದರ ಬಗ್ಗೆ ಯೋಚಿಸಬೇಕೇ ವಿನಃ ಋಣಾತ್ಮಕವಾಗಿ ಹಿಂದೆ ಆಗಿಹೋದದ್ದರ ಬಗ್ಗೆ ಚಿಂತಿಸುತ್ತ ಕೂಡ್ರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT