ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಧೀಶಕ್ತಿಯ ಪ್ರಚೋದನೆ

Last Updated 20 ಜನವರಿ 2022, 16:02 IST
ಅಕ್ಷರ ಗಾತ್ರ

ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ||
ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |
ಶ್ರೇಯಸ್ಸು ಧೀ ಮಹಿಮೆ – ಮಂಕುತಿಮ್ಮ || 546 ||

ಪದ-ಅರ್ಥ: ಶ್ರೀಯನಾಯುವ=ಶ್ರೀಯನ್ನು(ಐಶ್ವರ್ಯವನ್ನು)+ಆಯುವ(ಆಯುಷ್ಯವನ್ನು), ಬೇಡಿರ್ದೊಡಂ(ಬೇಡಿಕೊಂಡರೂ), ಆರ್ಯರ್=ಹಿರಿಯರು, ದೃಷ್ಟಾರರು. ಧೀಯಂ=ಬುದ್ಧಿಯನ್ನು, ಪ್ರಚೋದಿಸೆಂದನುದಿನದಿ=ಪ್ರಚೋದಿಸು+
ಎಂದು+ಅನುದಿನದಿ.

ವಾಚ್ಯಾರ್ಥ: ಐಶ್ವರ್ಯವನ್ನು, ಆಯುಷ್ಯವನ್ನು, ಶಕ್ತಿಯನ್ನು, ಜಯವನ್ನು ಬೇಡಿದಾಗ ಅದಕ್ಕೆಲ್ಲ ಗಾಯತ್ರಿಯೇ ಪರಮಮಂತ್ರವೆಂದರು ದೃಷ್ಟಾರರು. ಬುದ್ಧಿಯನ್ನು ಪ್ರಚೋದಿಸು ಎಂದು ಪ್ರತಿನಿತ್ಯವೂ ಬೇಡಿದರು. ಶ್ರೇಯಸ್ಸು ಬುದ್ಧಿಯ ಮಹಿಮೆ.

ವಿವರಣೆ: ನಮ್ಮ ಬದುಕೇ ಸದಾ ಬೇಡುತ್ತಲೇ ಇರುವುದು. ಮೇಲಿನವರನ್ನು, ಪಕ್ಕದವರನ್ನು, ಭಗವಂತನನನ್ನು ಬೇಡುತ್ತಲೇ ಇರುತ್ತೇವೆ. ರವೀಂದ್ರನಾಥ್ ಟ್ಯಾಗೋರರು ತಮ್ಮ ಗೀತಾಂಜಲಿಯಲ್ಲಿ ಹೇಳಿದಂತೆ, ‘ಭಗವಂತಾ, ನೀನು ನನ್ನ ಬೇಡಿಕೆಯ ಭಿಕ್ಷಾಪಾತ್ರೆಯನ್ನು ತುಂಬುತ್ತಲೇ ಇದ್ದರೂ, ಅದು ಸದಾಕಾಲ ಖಾಲಿಯಾಗಿಯೇ ಇರುತ್ತದೆ’. ನಾವು ಬೇಡುವುದು ಐಶ್ವರ್ಯವನ್ನು, ದೀರ್ಘ ಆಯುಸ್ಸನ್ನು, ಶಕ್ತಿಯನ್ನು ಜಯವನ್ನು. ಹೀಗೆ ನಾವು ಬೇಡಿದಾಗ ಅಂದಿನ ದೃಷ್ಯಾರರು ಗಾಯತ್ರಿಯ ಮಹಿಮೆಯನ್ನು ಹೇಳಿ, ನಮ್ಮೆಲ್ಲ ಬೇಡಿಕೆಗಳನ್ನು ಪೂರೈಸಲು ಗಾಯತ್ರಿಯೇ ಪರಮ ಮಂತ್ರ ಎಂದರು. ಆ ಮಂತ್ರದ ಮೂಲಕ ನಿನ್ನ ಧೀಶಕ್ತಿಯನ್ನು ಅಂದರೆ ಬುದ್ಧಿಶಕ್ತಿಯನ್ನು ಪ್ರಚೋದಿಸಿಕೋ ಎಂದು ಸೂಚಿಸಿದರು. ಯಾಕೆಂದರೆ ವಿವೇಕಯುತವಾದ ಬುದ್ಧಿ ನಮ್ಮೆಲ್ಲ ಅಪೇಕ್ಷೆಗಳನ್ನು ನಡೆಸುತ್ತದೆ. ಗಾಯತ್ರಿ ಮಂತ್ರ ಇಂತಿದೆ:

ತತ್ ಸವಿತೃ ವರೇಣ್ಯಮ್ ||
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋನ: ಪ್ರಚೋದಯಾತ್ ||

‘ಧರ್ಮಶಾಸ್ತ್ರಗಳ ಚರಿತ್ರೆ’ ಎಂಬ ಬೃಹತ್ ಆಧಾರ ಗ್ರಂಥವನ್ನು ರಚಿಸಿರುವ ಶ್ರೀ ಪಿ.ವಿ. ಕಾಣೆಯವರು ನೀಡಿದ ಗಾಯತ್ರಿ ಮಂತ್ರದ ಅರ್ಥ: ‘ನಮ್ಮ ಬುದ್ಧಿಯನ್ನು ಪ್ರಚೋದಿಸುವ ಸವಿತೃದೇವನ ಮಹತ್ತಾದ ತೇಜಸ್ಸನ್ನು ನಾವು ಧ್ಯಾನಿಸುತ್ತೇವೆ’. ಸರಳವಾಗಿ ಹೇಳುವುದಾದರೆ ಗಾಯತ್ರಿ ಮಂತ್ರವು ಸೂರ್ಯನ ಉಪಾಸನಾ ಮಂತ್ರ.

ಈ ಮಂತ್ರವನ್ನು ರಚಿಸಿದ್ದು ವಿಶ್ವಾಮಿತ್ರ ಮಹರ್ಷಿಗಳು ಎಂದು ಕೆಲವರು ನಂಬುತ್ತಾರೆ. ಈ ಮಂತ್ರ ಋಗ್ವೇದದ ಒಂದು ಭಾಗವೂ ಹೌದು. ಇದರ ಮೂರನೆಯ ಸಾಲು ಕಗ್ಗದ ಪ್ರಮುಖ ಅಂಶ. ‘ಧಿಯೋ ಯೋ ನಃ ಪ್ರಚೋದಯಾತ್’ ಮಂತ್ರದ ಪ್ರಾರ್ಥನಾ ಭಾಗ. ಮೊದಲು ಸಾಲು ಸ್ತೋತ್ರ, ಎರಡನೆಯ ಸಾಲು ಧ್ಯಾನದ ಭಾಗಗಳು. ಧೀ ಎಂದರೆ ಬುದ್ಧಿಶಕ್ತಿ. ಭಗವಂತ ಸರ್ವಲೋಕಗಳಲ್ಲಿ, ಸರ್ವಜೀವಗಳಲ್ಲಿ ಇದ್ದಾನೆ. ಅವನು ಬೆಳಕಿನ ಬೆಳಕಾಗಿದ್ದಾನೆ. ಎಲ್ಲರಿಗಿಂತ ಹಿರಿಯನಾಗಿದ್ದಾನೆ, ಅತ್ಯಂತ ಪ್ರಕಾಶಮಾನನಾಗಿದ್ದಾನೆ ಎಂದು ಹೃದಯದಲ್ಲಿ ಸ್ಥಾಪಿಸಿಕೊಂಡ ಮೇಲೆ ಆ ಭಗವಂತನ ಕೃಪೆ ತನ್ನ ಮನಸ್ಸು ಹಾಗೂ ಬುದ್ಧಿಗಳ ಮೇಲೆ ಆಗಲಿ ಎಂದು ಪ್ರಾರ್ಥಿಸುತ್ತಾನೆ. ಧೀ ಶಕ್ತಿ ಮನುಷ್ಯನನ್ನು ಚಿಂತನೆಗೆ ಒಡ್ಡುತ್ತದೆ, ಬ್ರಹ್ಮಜ್ಞಾನದ ಕಡೆಗೆ ಕರೆದೊಯ್ಯುತ್ತದೆ. ಅದು ವಿಶೇಷ ಹಾಗೂ ಉನ್ನತ ಕ್ರಿಯಾಶೀಲತೆಯತ್ತ ಪ್ರಚೋದಿಸುತ್ತದೆ. ಈ ಜ್ಞಾನ ಮತ್ತು ಕ್ರಿಯೆಗಳು ಆನಂದದೆಡೆಗೆ ಮಾರ್ಗದರ್ಶನ ಮಾಡುತ್ತವೆ. ಆದ್ದರಿಂದ, ಭಗವಂತನಿಂದ ಪ್ರಚೋದಿತವಾದ ಧೀಶಕ್ತಿ ನಮ್ಮೆಲ್ಲ ಶ್ರೇಯಸ್ಸುಗಳಿಗೆ ಕಾರಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT