ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಎಲ್ಲಕ್ಕೂ ಲೋಕವೇ ಮೂಲ

Last Updated 21 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ |

ನೂಕುನುಗ್ಗುಗಳತ್ತ, ಸೋಂಕುರೋಗಗಳು ||
ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ |
ಲೋಕ ಮೂಲವು ನೋಡೊ – ಮಂಕುತಿಮ್ಮ || 827 ||

ಪದ-ಅರ್ಥ: ಸಾಕಿ ಸಲಹುವರುಮ್ =ಸಾಕಿ ಸಲಹುವವರು, ಅತ್ತಲೆೆ=ಹಾಗೆಯೇ

ವಾಚ್ಯಾರ್ಥ: ಈ ಲೋಕದಲ್ಲಿ ಏನಿಲ್ಲ? ಭಯವಿದೆ, ನಯವಿದೆ, ದಯೆಯಿದೆ. ಅಲ್ಲಿ ನೂಕುನುಗ್ಗಲು ಇದೆ, ಸೋಂಕು ರೋಗಗಳಿವೆ. ನಿನ್ನ ಸಾಕಿ ಸಲಹಿದವರೂ ಅಲ್ಲಿಯೇ ಇದ್ದಾರೆ. ನಿನ್ನ ಎಲ್ಲದಕ್ಕೂ ಈ ಲೋಕವೇ ಮೂಲ.

ವಿವರಣೆ: ಮನುಷ್ಯನ ಬದುಕು ಅನುಭವಗಳ ಸಾಲು. ಅವನ ಬೆಳವಣಿಗೆಗೂ ಅದೇ ಆಧಾರ. ಗರ್ಭದಲ್ಲಿರುವ ಮಗುವಿಗೆ ಸರ್ವವೂ ತಾಯಿಯೇ ಆಗಿರುವಂತೆ ಪ್ರತಿಯೊಬ್ಬ ವ್ಯಕ್ತಿಗೂ ಲೋಕವೇ ಮೂಲ. ಇರುವುದೊಂದೇ ಲೋಕ. ಅದರೊಂದಿಗಿನ
ಕ್ಷಣಕ್ಷಣದ ವ್ಯವಹಾರವೇ ಅನುಭವ. ಇದೇ ಮನುಷ್ಯನನ್ನು ರೂಪಿಸುವುದು. ನಮಗೆ ಏನು ದೊರೆತರೂ ಅಲ್ಲಿಯೇ ದೊರೆಯಬೇಕು ಇದೊಂದು ಅಪರಂಪಾರವಾದ ವಿಶ್ವ.

ಇಲ್ಲಿ ಏನಿಲ್ಲ? ನಮಗೆ ಬೇಕಾದ ವಸ್ತುಗಳು, ಚಿಂತನೆಗಳು, ಜೀವನಪಾಠಗಳು, ಶಿಕ್ಷೆಗಳು ಎಲ್ಲವೂ ಇಲ್ಲಿವೆ. ಇಲ್ಲಿ ಬದುಕುತ್ತ, ನಮ್ಮ ಜೀವನವನ್ನು ಕಟ್ಟಿಕೊಳ್ಳಲು ಬೇಕಾದ ಪರಿಕರಗಳನ್ನು ಇಲ್ಲಿಂದಲೇ ಪಡೆಯುತ್ತೇವೆ. ಈ ಅನುಭವಗಳನ್ನು ಪಡೆಯಲು ನಾವೂ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಲೋಕದಲ್ಲಿ ನಮಗೆ ಭಯವಿರಬೇಕು. ಯಾತರ ಭಯ? ತನ್ನ ನಡವಳಿಕೆಯಿಂದ ಯಾರಿಗಾದರೂ ಅನ್ಯಾಯ, ಅಪಚಾರವಾದೀತೇ? ಲೋಕವ್ಯವಸ್ಥೆಗೆ ತೊಂದರೆಯಾದೀತೇ ಎಂಬ ಭಯವಿರಬೇಕು. ಆ ಭಯ ನಮ್ಮನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತದೆ. ಈ ಲೋಕದಲ್ಲಿ ನಯದಿಂದ ನಡೆಯಬೇಕು.

ನಯವಾದ ಜೀವನ ರೀತಿ ಸಂಸ್ಕೃತಿಯ ಪ್ರದರ್ಶನ. ಕ್ಷಣಕ್ಷಣಕ್ಕೂ ಪರಿವರ್ತಿತವಾಗುವ ಈ ಲೋಕದಲ್ಲಿ ಅನೇಕರು ಕಷ್ಟಗಳಿಗೆ ತೊಂದರೆಗಳಿಗೆ ಈಡಾಗುತ್ತಾರೆ. ಅವರ ಬಗ್ಗೆ ನಮಗೆ ದಯೆ ಇರಲಿ. ಎಲ್ಲ ಧರ್ಮಗಳ ಮೂಲವೇ ದಯೆ. ಮತ್ತೊಬ್ಬರ ನೋವುಗಳಿಗೆ ತುಡಿಯುವುದು ಮನುಷ್ಯ ಧರ್ಮ. ಪ್ರಪಂಚದಲ್ಲಿ ನೂಕುನುಗ್ಗಲಿದೆ. ಯಾವುದೋ ಮೆರುಗೊಂದು ಥಟ್ಟನೆ ಮೇಲೆದ್ದು ಬಂದು ಲೋಕದ ಜನರ ಗಮನವನ್ನು ಸೆಳೆಯುತ್ತದೆ. ಆಗ ಜನ ಈ ಹೊಸ ಆಸೆಯ ಕಡೆಗೆ ನುಗ್ಗುತ್ತಾರೆ. ಆ ನೂಕಾಟದಲ್ಲಿ ನೀನು ಸೇರಬೇಡ.

ದೂರ ನಿಂತು, ನಿನಗೆ ಅದು ಅವಶ್ಯಕವೆ ಎಂದು ಯೋಚನೆ ಮಾಡು. ಸುಮ್ಮನೆ ಆಸೆಯ ಸೆಳೆತಕ್ಕೆ ನುಗ್ಗಿ ಹೋಗುವುದು ಆಪತ್ತಿಗೆ ಆಹ್ವಾನ. ಕೆಲವೊಮ್ಮೆ ಈ ಆಕರ್ಷಣೆಗಳು, ಋಣಾತ್ಮಕ ಚಿಂತನೆಗಳು, ಮನಸ್ಸನ್ನು ಹಿಡಿದು ಹಿಂಡುತ್ತವೆ. ಅವೇ ಸೋಂಕು ರೋಗಗಳಿದ್ದಂತೆ. ಅವುಗಳ ಹತ್ತಿರ ಹೋದರೆ ಹಿಡಿದುಕೊಂಡು ಬಿಡುತ್ತವೆ. ಪ್ರಪಂಚದಲ್ಲಿ ಇದ್ದದ್ದೆಲ್ಲ, ಕೆಟ್ಟದ್ದಲ್ಲ. ನಿನಗೆ ಆಹಾರ, ನೆಲೆ ಕೊಟ್ಟು ಕಾಪಾಡಿ ಒಂದು ವ್ಯಕ್ತಿತ್ವವನ್ನು ನಿರ್ಮಾಣ ಮಾಡಿದ ನಿನ್ನ ಪರಿವಾರದವರೂ ಅಲ್ಲಿಯೇ ಇದ್ದಾರೆ. ನಮಗೆ ಅನುಭವಗಳನ್ನು ಕೊಡುವ, ನಮ್ಮನ್ನು ರೂಪಿಸುವ, ಶಿಕ್ಷಿಸುವ, ನೆಲೆಕೊಡುವ ಎಲ್ಲವೂ ಈ ಲೋಕದಲ್ಲೇ ಇದೆ. ನಮಗೆ ಬೇಕಾದ್ದನ್ನು, ಬೇಕಾದಷ್ಟು ಬಳಸಿಕೊಂಡು ನಮ್ಮ ಬದುಕನ್ನು ಕಟ್ಟಿಕೊಳ್ಳುವುದು ನಮ್ಮ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT