ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮನದ ಕೊಳ

Last Updated 23 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ
ತಳದ ಕಸ ತೇಲುತ್ತ ಬಗ್ಗಡವದಹುದು ||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ |
ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ || 829||

ಪದ-ಅರ್ಥ: ಲೋಗರದರೊಳಗಿಳಿಯೆ=ಲೋಗರು(ಜನರು)+ಅದರೊಳ +ಇಳಿಯೆ, ಬಗ್ಗಡವದಹುದು=ಬಗ್ಗಡವದು(ಕೊಳಕು)+ಅಹುದು, ಕಲಕದದ್ದದೆ=ಕಲಕದೆ+ಅದ್ದದೆ, ಬಿಟ್ಟಿದ್ದೊಡದು=ಬಿಟ್ಟು+ಇದ್ದೊಡೆ+ಅದು.

ವಾಚ್ಯಾರ್ಥ: ನಿನ್ನ ಮನಸ್ಸು ಕೊಳದ ನೀರಿದ್ದಂತೆ. ಜನರು ಅದರೊಳಗೆ ಇಳಿದಾಗ ತಳದ ಕಸ ತೇಲುತ್ತ ಮೇಲೆ ಬಂದು ಕೊಳಕಾಗುತ್ತದೆ. ಅದನ್ನು ಕಲಕದೆ, ಅದ್ದದೆ ಸ್ವಲ್ಪ ಹೊತ್ತು ಬಿಟ್ಟಿದ್ದರೆ ಶಾಂತಿಯಲ್ಲಿ ತಿಳಿಯಾಗುತ್ತದೆ.

ವಿವರಣೆ: ಅವನೊಬ್ಬ ಚಕ್ರವರ್ತಿ. ಅವನ ರಾಜ್ಯದ ಗಾತ್ರ ತುಂಬ ದೊಡ್ಡದು. ಅವನ ಪರಾಕ್ರಮಕ್ಕೆ, ಶ್ರೀಮಂತಿಕೆಗೆ ಸಾಟಿ ಇರಲಿಲ್ಲ.
ಅವನಿಗೂ ತನ್ನ ಸರಿಸಮಾನರಾದವರು ಯಾರೂ ಇಲ್ಲ ಎಂಬ ನಂಬಿಕೆ ಬಂದಿತ್ತು. ಇಷ್ಟಾದರೂ ಆತನ ಮನಸ್ಸಿಗೆ ನೆಮ್ಮದಿ ಇಲ್ಲ. ಯಾವುದೋ ತಳಮಳ, ಸಂಕಟ ಕಾಡುತ್ತಿತ್ತು. ಯಾವಾಗ, ಎಲ್ಲಿಂದ ಆಪತ್ತು ಬಂದೀತೋ ಎಂದು ಕೊರಗುತ್ತಿದ್ದ. ಮಂತ್ರಿಗಳು ಅವನಿಗೆ ಯಾವ ಭರವಸೆ ಕೊಟ್ಟರೂ ಸಮಾಧಾನವಾಗಲಿಲ್ಲ. ಒಂದು ದಿನ ಅರಮನೆಗೆ ಸೂಫೀ ಸಂತನೊಬ್ಬ ಬಂದ. ರಾಜನೊಂದಿಗೆ ಮಾತನಾಡಿದ. ರಾಜನ ಕಷ್ಟ ಅವನಿಗೆ ಅರ್ಥವಾಯಿತು.

ರಾಜ ಕೇಳಿದ “ಸಂತರೇ, ನನ್ನ ಹತ್ತಿರ ಎಲ್ಲವೂ ಇದೆ. ರಾಜ್ಯ, ಧನ, ಅಧಿಕಾರ, ಜನಮನ್ನಣೆ ಇವೆಲ್ಲ ಇದ್ದರೂ ನಾನು ಅಭದ್ರತೆಯಿಂದ ನರಳುತ್ತಿದ್ದೇನೆ. ತಮ್ಮ ಬಳಿ ಏನೂ ಇಲ್ಲ. ಆದರೆ ತುಂಬ ನಿರಾಳವಾಗಿದ್ದೀರಿ. ಏನಿದರ ಗುಟ್ಟು? ನನಗೆ ತಮಗೆ ಇರುವಂಥ ಮನಶ್ಯಾಂತಿ ಸಿಗುವುದು ಸಾಧ್ಯವೇ?” ಸಂತ ನಕ್ಕ. ಒಂದು ದೊಡ್ಡ ಗಾಜಿನ ಪಾತ್ರೆಯನ್ನು ತರಿಸಿದ. ಅದರಲ್ಲಿ ನೀರನ್ನು ಹಾಕಿದ. ಅದಕ್ಕೊಂದು ಮುಷ್ಟಿಯಷ್ಟು ಪುಡಿಮಣ್ಣನ್ನು ಹಾಕಿ, ಚೆನ್ನಾಗಿ ಕಲಕಿ ರಾಜನ ಮುಂದಿಟ್ಟು ಅವನ ಮುಖ ನೋಡಿಕೊಳ್ಳಲು ಹೇಳಿದ. ರಾಜನಿಗೆ ಏನೂ ಕಾಣಲಿಲ್ಲ. “ಸಂತರೇ ನೀರು ತುಂಬ ರಾಡಿಯಾಗಿದೆ,ಮುಖ ಕಾಣದು” ಎಂದ. ಸರಿ, ಎಂದ ಸಂತ ಮತ್ತೊಂದು ಗಾಜಿನ ಪಾತ್ರೆಯಲ್ಲಿ ತಿಳಿನೀರನ್ನು ಹಾಕಿ ಅದರಲ್ಲಿ ಒಂದು ಚೂರು ಬೂದಿಯನ್ನು ಬೆರೆಸಿ, ಕಲಕಿ ಕೊಟ್ಟ. ಆಗಲೂ ಮುಖ ಕಾಣಲಿಲ್ಲ. ಈಗ ಸಂತ ಗಾಜಿನ ಪಾತ್ರೆಯಲ್ಲಿ ತಿಳಿನೀರನ್ನು ಹಾಕಿ ಅವನ ಮುಂದಿಟ್ಟು ಚೆನ್ನಾಗಿ ಕಲಕಿದ. ಆಗಲೂ ಮುಖ ಸ್ಪಷ್ಟವಾಗಿ ತೋರಲಿಲ್ಲ.
“ಹಾಗೆಯೇ ನೋಡುತ್ತಿರು” ಎಂದ ಸಂತ.

ಸ್ವಲ್ಪ ಹೊತ್ತಿನ ನಂತರ ನೀರು ಶಾಂತವಾಯಿತು. ಮುಖ ಸ್ಪಷ್ಟವಾಗಿ ಕಂಡಿತು. ಸಂತ ಹೇಳಿದ, “ಮುಖ ಕಾಣದಿರುವುದಕ್ಕೆ ನೀರಿನ ರಾಡಿ ಮತ್ತು ಚಂಚಲತೆಯೇ ಕಾರಣ, ಅದು ಶಾಂತವಾಗಲಿಕ್ಕೆ ಬಿಡು, ಮನದಲ್ಲಿ ಶಾಂತಿ ಇಳಿಯುತ್ತದೆ”. ಇದೇ ಕಗ್ಗದ ಮಾತು. ನಮ್ಮ ಮನಸ್ಸು ನೀರಿನ ಕೊಳವಿದ್ದಂತೆ. ಅದರಲ್ಲಿ ನೂರಾರು ಚಿಂತೆಗಳು, ಆತಂಕಗಳು ಎಂಬ ಜನ ಇಳಿದು ತುಳಿದಾಡಿದರೆ ತಳದಲ್ಲಿದ್ದ ಕಸ ಮೇಲೆದ್ದು ಬಂದು ರಾಡಿಯಾಗುತ್ತದೆ. ನೀರನ್ನು ಕಲಕದೆ ಇದ್ದರೆ ಅದು ತನ್ನಷ್ಟಕ್ಕೆ ತಾನೇ ತಿಳಿಯಾಗಿ ನಿಲ್ಲುತ್ತದೆ.ಅತಿಯಾದ ಲೋಕಸಂಪರ್ಕದಿಂದ ರಾಡಿಯಾದ ಮನಸ್ಸು ಏಕಾಂತದಲ್ಲಿ ತಿಳಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT