ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಜ್ಞಾನಿಯ ಬಗೆ

Last Updated 26 ಜುಲೈ 2022, 19:31 IST
ಅಕ್ಷರ ಗಾತ್ರ

ಉಂಡಾತನುಣುತಿರುವರನು ಕಾಣ್ಬ ನಲವಿಂದ |
ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ ||
ಕಂಡು ಲೋಕವನು ಸಂತೈಸುತಿರುವವ ಜ್ಞಾನಿ |
ಕಂಡೆಲ್ಲರೊಳು ತನ್ನ – ಮಂಕುತಿಮ್ಮ || 680 ||

ಪದ-ಅರ್ಥ: ಉಂಡಾತನುಣುತಿರುವರನು= ಉಂಡಾತನು(ಉಂಡವನು)+ಉಣುತಿರುವರನು, ಕಾಣ್ಬ=ಕಾಣುವ, ನಲವಿಂದ=ಪ್ರೀತಿಯಿಂದ, ವಿದ್ಯಾರ್ಥಿಗಳಿಗೊರೆವ= ವಿದ್ಯಾರ್ಥಿಗಳಿಗೆ+ಒರೆವ(ತಿಳಿಸುವ), ಕಂಡೆಲ್ಲರೊಳು=ಕಂಡು+ಎಲ್ಲರೊಳು.
ವಾಚ್ಯಾರ್ಥ: ಊಟ ಮಾಡಿ ಮುಗಿಸಿದವ ಊಟ ಮಾಡುವವರನ್ನು ಪ್ರೀತಿಯಿಂದ ಆರೈಕೆ ಮಾಡುವಂತೆ, ಪಂಡಿತ ತನ್ನ ವಿದ್ಯಾರ್ಥಿಗಳಿಗೆ ತಾಳ್ಮೆಯಿಂದ, ಅಕ್ಕರೆಯಿಂದ ಬೋಧಿಸುವಂತೆ, ಜ್ಞಾನಿ ಎಲ್ಲರಲ್ಲೂ ತನ್ನನ್ನೇ ಕಾಣುತ್ತ ಲೋಕವನ್ನು ಸಂತೈಸುತ್ತಾನೆ.

ವಿವರಣೆ: ಶ್ರೀರಾಮ ಕಂಡ, ಅನುಭವಿಸಿದ ನೋವು ಸಣ್ಣದೆ? ಕೃಷ್ಣ ಕಂಡಷ್ಟು ಹಿಂಸೆಯನ್ನು, ರಕ್ತಪಾತವನ್ನು ಮತ್ತಾರೂ ಕಂಡಿರಲು ಸಾಧ್ಯವಿಲ್ಲ. ರಾಜಕುಮಾರನ ಸುಖಶಯ್ಯೆಯಿಂದ ಸನ್ಯಾಸಿ ಬದುಕಿಗೆ ನೆಗೆದ ಬುದ್ಧನ ಕಣ್ಣುಗಳು ಕಷ್ಟಗಳನ್ನು ಕಂಡಿರಲಾರವೆ? ತಮ್ಮ ವಂಶದ ಕುಡಿಗಳೇ ಪರಸ್ಪರ ಹೋರಾಡಿ ಮಣ್ಣಲ್ಲಿ ಮಣ್ಣಾಗಿ ಹೋದದ್ದನ್ನು ಕಂಡ ವೇದವ್ಯಾಸರ ನೋವು ಎಂಥದ್ದು?

ಆದರೆ ಇವರೆಲ್ಲ ಅಜರಾಮರವಾದದ್ದು ತಾವು ಕಂಡ, ಪಟ್ಟ ಕಷ್ಟ, ನೋವುಗಳಿಂದಲ್ಲ. ತಮ್ಮ ನೋವುಗಳ ಲಾವಾರಸದ ನಡುವೆಯೂ ತಣ್ಣಗಿದ್ದು ತಮ್ಮ ಸುತ್ತಮುತ್ತಲಿನ ಜನಕ್ಕೆ, ಮುಂಬರುವ ತಲೆಮಾರುಗಳಿಗೆ ತಿಳಿ ಹೇಳಿದ ಸಾಂತ್ವನದ ಮಾತುಗಳಿಂದ. ಅದಕ್ಕೇ ಅವರು ದೇವರಾದರು, ಜ್ಞಾನಿಗಳಾದರು, ಸಾಂತ್ವನದ ತಿಳಿಗೊಳಗಳಾದರು. ಅವರೆಲ್ಲ ಕಂಡದ್ದು ಬೆಂಕಿಯುರಿಯಾದರೂ ಜಗತ್ತನ್ನು ನಯದಿಂದ ಕಂಡರು. ಕಂಡದ್ದನ್ನು ಪ್ರೀತಿಯಿಂದ ಹೇಳಿದರು. ಜನರ ಮನಸ್ಸಿಗೆ ತಂಗಾಳಿಯನ್ನು ತಂದರು. ಆಸೆ, ಆತ್ಮವಿಶ್ವಾಸಗಳನ್ನು ಕುದುರಿಸಿದರು. ಅಂಥ ಜ್ಞಾನಿಗಳ ಉಸುರುವಿಕೆಯಿಂದ ಪ್ರಪಂಚ ಇನ್ನೂ ನಿಂತಿದೆ.

ಕಗ್ಗ, ಜ್ಞಾನಿಗಳ ಈ ಕಾರ್ಯವನ್ನು ಎರಡು ಸುಂದರ ಉದಾಹರಣೆಗಳೊಂದಿಗೆ ವಿವರಿಸುತ್ತದೆ. ಹೊಟ್ಟೆ ತುಂಬ ಊಟ ಮಾಡಿ ತೃಪ್ತನಾದ ವ್ಯಕ್ತಿ, ತನ್ನ ಜೊತೆಗಾರರು ಊಟಕ್ಕೆ ಕುಳಿತಾಗ ಅವರನ್ನು ಪ್ರೀತಿಯಿಂದ ಉಪಚರಿಸುತ್ತಾನೆ. ಇದಕ್ಕೆ ಎರಡು ಕಾರಣಗಳು. ಒಂದು, ಅವನಿಗೆ ಜೊತೆಗಾರರ ಬಗ್ಗೆ ಪ್ರೀತಿಯಿದೆ. ಎರಡು, ತನ್ನ ಹೊಟ್ಟೆ ತುಂಬಿದೆ, ತೃಪ್ತಿಯಾಗಿದೆ. ತನ್ನ ಹೊಟ್ಟೆ ಹಸಿದಿದ್ದರೆ ಆ ಪ್ರೀತಿಯಿಂದ ಉಪಚರಿಸುತ್ತಿದ್ದನೇ? ಅವರ ಊಟವನ್ನು ಬೇಗ ಮುಗಿಸಿ ತನ್ನ ಊಟಕ್ಕೆ ಅವಸರಿಸುತ್ತಿದ್ದನೆ? ಇದೇ ರೀತಿ ಒಬ್ಬ ಒಲವಿನ ಶಿಕ್ಷಕ ತನ್ನ ಶಿಷ್ಯರಿಗೆ ಪಾಠಗಳನ್ನು ತಿಳಿಸುವ ಪರಿ.

ತಾನು ಚೆನ್ನಾಗಿ ತಿಳಿದುಕೊಂಡಿದ್ದಾನೆ, ತಿಳಿದದ್ದನ್ನು ಮಕ್ಕಳಿಗೆ ಅರ್ಥವಾಗುವಂತೆ ಪ್ರೀತಿಯಿಂದ ತಿಳಿಸುತ್ತಾನೆ.

ಹೊಟ್ಟೆ ತುಂಬಿ ತೃಪ್ತನಾದ ವ್ಯಕ್ತಿ, ಮತ್ತೊಬ್ಬರ ಹಸಿವನ್ನು ತಣಿಸುವುದರಲ್ಲಿ ನಿರತನಾಗಿರುವಂತೆ, ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡ ಶಿಕ್ಷಕ ತನ್ಮಯತೆಯಿಂದ ತನ್ನ ವಿದ್ಯಾರ್ಥಿಗಳಿಗೆ ತಿಳಿಹೇಳುವಂತೆ, ಜ್ಞಾನಿಯಾದವನು ಈ ಪ್ರಪಂಚವನ್ನು ಅತ್ಯಂತ ಪ್ರೀತಿಯಿಂದ, ನಯದಿಂದ ತಿಳಿದು ತಿಳುವಳಿಕೆಯನ್ನು, ಸಾಂತ್ವನವನ್ನು ನೀಡುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT