ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಲೋಕಗಳ ಬಾಂಧವ್ಯ

Last Updated 14 ಏಪ್ರಿಲ್ 2023, 0:15 IST
ಅಕ್ಷರ ಗಾತ್ರ

ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್|
ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||
ಪರಮಾರ್ಥಗಣಿತದಿಂದಹದರ್ಥಗಳನೆಣಿಸೆ |
ಸರಿ ಲೋಕ ಬಾಂಧವ್ಯ – ಮಂಕುತಿಮ್ಮ || 862 ||

ಪದ-ಅರ್ಥ:ಇರುವುದರೊಳಾದನಿತು=ಇರುವುದರೊಳು+ಆದನಿತು(ಆದಷ್ಟು), ಪಡೆವೊಡೆ=ಪಡೆಯುವುದಾದರೆ, ಲೋಗರ್=ಜನರು, ಅರಿಗೆ+ಅರಿತರೆ, ಇಹಕೆ=ಭೂಮಿಯ ಬದುಕಿಗೆ, ಪರದಾವರಣವಿಹುದನ್=ಪರದ+ಆವರಣ+ಇಹುದನ್(ಇರುವುದನ್ನು) , ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ=ಪರಮಾರ್ಥ+ಗಣಿತದಿಂದ+ಇಹದ+ಅರ್ಥಗಳನು+ಎಣಿಸೆ.

ವಾಚ್ಯಾರ್ಥ: ಇರುವ ಬದುಕಿನಲ್ಲಿ ಸಂತೋಷ ಪಡೆಯಬೇಕಾದರೆ, ಮೊದಲು ಇಹಕ್ಕೆ ಪರದ ಆವರಣವಿರುವುದನ್ನು ತಿಳಿಯಬೇಕು. ಪರಮಾರ್ಥದ ಯೋಚನೆಗಳಿಂದಂ ಇಹದ ಬದುಕನ್ನು ತಿಳಿದು ಬಾಳಿದರೆ ಲೋಕಗಳ ಬಾಂಧವ್ಯದ ಅರಿವಾಗುತ್ತದೆ.‌

ವಿವರಣೆ: ನಮ್ಮ ಸುತ್ತಮುತ್ತಲಿನ ಜಗತ್ತು, ಇಹದ ಜಗತ್ತು, ಅನುಭವದ ಜಗತ್ತು. ಅದು ನಮ್ಮ ಕಣ್ಣು ಕಾಣುವ ಸತ್ಯದ ಅಭಿವ್ಯಕ್ತಿ. ಅದು ಹೊರಗಣ್ಣಿನ ನೋಟ. ಅದನ್ನು ಮುಚ್ಚಿ ಮನದ ಒಳಕಣ್ಣನ್ನು ತೆರೆದಾಗ ಅಲೌಕಿಕವಾದ ದರ್ಶನವಾಗುತ್ತದೆ. ಅದೂ ಸತ್ಯವೇ, ಪರಮಸತ್ಯ. ಹೀಗೆ ನಮಗೆ ಎರಡು ಸತ್ಯಗಳು. ಒಂದು, ಭಗವಂತ ನಮ್ಮ ಕಣ್ಣಿಗೆ ರೂಪವಾಗಿ, ಕಿವಿಗೆ ಶಬ್ದವಾಗಿ, ನಾಲಿಗೆಗೆ ರುಚಿಯಾಗಿ,ಮನಸ್ಸಿಗೆ ಭಾವನೆಯಾಗಿ, ಮಾತಿಗೆ ವಿಚಾರವಾಗಿ, ಇಹದಲ್ಲಿ ತೋರುತ್ತಾನೆ. ಮನದ ಕಣ್ಣಿಂದ ನೋಡಿದರೆ ಇಹಲೋಕದ ಸತ್ಯವನ್ನು ಆವರಿಸಿದ ಸರ್ವತ್ರ ಸತ್ಯ ಗೋಚರಿಸುತ್ತದೆ. ಇದೇ ಜ್ಞಾನದೃಷ್ಟಿ. ಹಾಗೆಂದರೆ ಇಹಲೋಕದ ಸತ್ಯಕ್ಕೆ ಪರರ ಪರಮಸತ್ಯದ ಆವರಣವಿದೆ. ಇದನ್ನು ಅರಿತರೆ ಮಾತ್ರ ಬದುಕಿನಲ್ಲಿ ಸೊಗಸು, ಸಂತೋಷ. ಹಾಗೆ ಅರಿತವನಿಗೆ ಜಗತ್ತು ಒಳ್ಳೆಯದೂ
ಅಲ್ಲ, ಕೆಟ್ಟದ್ದೂ ಅಲ್ಲ, ಅದೊಂದು ದಿವ್ಯತೆಯ ಅನುಭವ. ಏಕನಾಥರು ಮಹಾರಾಷ್ಟ್ರದ ಸಂತರು. ಅವರು ಬಾಲ್ಯದಲ್ಲಿ ಜನಾರ್ದನ ಗೋಸ್ವಾಮಿಯವರ ಶಿಷ್ಯ. ಗುರುಸೇವೆಯೇ ಏಕನಾಥರ ಪರಮ ಗುರಿಯಾಗಿತ್ತು. ಒಂದು ದಿನ ಗುರುಗಳು
ಶಿಷ್ಯನಿಗೆ, ಕೂಡಿದ್ದ ಹಣದ ಲೆಕ್ಕ ಇಡಲು ಹೇಳಿದರು. ಅದು ಹತ್ತೇ ನಿಮಿಷದಲ್ಲಿ ಮುಗಿಯಬಹುದಾದ ಕೆಲಸ. ಆದರೆ ಏಕನಾಥರು ಮಧ್ಯರಾತ್ರಿಯವರೆಗೆ ಲೆಕ್ಕವನ್ನು ಮಾಡುತ್ತಲೇ ಇದ್ದರು. ಯಾಕೆಂದರೆ ಲೆಕ್ಕದಲ್ಲಿ ಒಂದು ಪೈಸೆ ಕಡಿಮೆಯಾಗಿತ್ತು. ಮಧ್ಯರಾತ್ರಿಯ ಹೊತ್ತಿಗೆ ಆ ಪೈಸೆಯ ಲೆಕ್ಕ ಸಿಕ್ಕಿತು. ಬಾಲಕ ಏಕನಾಥ ಸಂತೋಷದಿಂದ “ಸಿಕ್ಕಿಬಿಟ್ಟಿತು” ಎಂದು ಕೂಗಿದ. ಗುರುಗಳು ಬಂದು “ಏನು ಸಿಕ್ಕಿತು?” ಎಂದು ಕೇಳಿದರು. “ಲೆಕ್ಕದಲ್ಲಿ ಕಳೆದ ಹೋದ ಪೈಸೆ ಸಿಕ್ಕಿತು” ಎಂದ ಏಕನಾಥ. ಗುರುಗಳು ಹೇಳಿದರು, ಇದೇ ಏಕಾಗ್ರತೆಯಿಂದ ಪರಮಾತ್ಮನನ್ನು ಹುಡುಕು, ಪೈಸೆಯನ್ನು ಹುಡುಕಬೇಡ”, ಏಕನಾಥ ಹಾಗೆಯೇ ಮಾಡಿದ. ಪೈಸೆಯನ್ನು ಕಳೆದುಕೊಂಡು ಪರಮಾತ್ಮನನ್ನು ಪಡೆದ. ಕಗ್ಗ ಅದನ್ನು ತಿಳಿಸುತ್ತದೆ. ಪರಮಾರ್ಥದ, ಪರಮಸತ್ಯದ ಕಣ್ಣಳತೆಯಲ್ಲಿ ಇಹದ ಅರ್ಥವನ್ನು ತಿಳಿದು ಬದುಕಿದರೆ, ಎರಡೂ ಲೋಕಗಳ ನಡುವಿನ ಬಾಂಧವ್ಯ ಸರಿಯಾಗಿರುತ್ತದೆ ಮತ್ತು ಇಹದ ಬದುಕು ಅಸಹನೀಯವೆನ್ನಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT