ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಯೋಜಿಸಿದ್ದು, ಆದದ್ದು ಬೇರೆ ಬೇರೆ

Last Updated 11 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮಾವುಸಸಿಯನ್ನು ನೆಟ್ಟು ಬೇವುಣಲು ಸಿದ್ಧನಿರು |

ಭೂವಿಷಯದಿಂದ ರಸ ಮಾರ್ಪಡುವುದುಂಟು ||
ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ |
ಸೇವಕನು ನೀನಲ್ತೆ – ಮಂಕುತಿಮ್ಮ || 733 ||

ಪದ-ಅರ್ಥ: ಬೇವುಣಲು=ಬೇವು+ಉಣಲು, ಭೂವಿಷಯದಿಂದ=ಭೂಮಿಯ ಗುಣದಿಂದ, ಮಾರ್ಪಡುವುದುಟು=ಮಾರ್ಪಡುವುದು(ಬದಲಾಗುವುದು) +ಉಂಟು, ತೋಟದೊಡೆಯನಿಗಿರಲಿ=ತೋಟದ+ಒಡೆಯನಿಗೆ+ಇರಲಿ,
ನೀನಲ್ತೆ=ನೀನಲ್ಲವೆ.

ವಾಚ್ಯಾರ್ಥ: ಮಾವನ್ನು ನೆಟ್ಟು ಬೇವನ್ನು ಸೇವಿಸಲು ಸಿದ್ಧನಿರು. ಭೂಮಿಯ ಗುಣದಿಂದ ರಸ ಬದಲಾಯಿಸುವುದುಂಟು. ಆ ವಿವರಗಳು ನಿನಗೇಕೆ? ಅದು ತೋಟದ ಒಡೆಯನಿಗೆ ಇರಲಿ. ನೀನು ಸೇವಕ ಮಾತ್ರನಲ್ಲವೆ?

ವಿವರಣೆ: ಬದುಕಿನಲ್ಲಿ ಅಪೇಕ್ಷಿಸಿದ್ದೇ ನಡೆದೀತೆಂಬ ನೆಚ್ಚಿಲ್ಲ. ಒಬ್ಬ ತಾಯಿ ಮಗನನ್ನು ಕಣ್ಣಿನ ಪಾಪೆಯಂತೆ ರಕ್ಷಿಸಿ ಬೆಳೆಸಿದಳು. ತನ್ನ ಹೊಟ್ಟೆಕಟ್ಟಿ ಅವನನ್ನು ಪೋಷಿಸಿ, ಅತ್ಯುತ್ತಮ ಶಿಕ್ಷಣ ಕೊಡಿಸಿದಳು. ಆತನೂ ತುಂಬ ಚೆನ್ನಾಗಿ ಓದಿ ಹೆಚ್ಚಿನ ರ‍್ಯಾಂಕ್‌ಗಳನ್ನೇ ಪಡೆದ. ಮಗನನ್ನು ಮೆಡಿಕಲ್ ಕಾಲೇಜಿಗೆ ಸೇರಿಸಿ, ಅವನೊಬ್ಬ ದೊಡ್ಡ ವೈದ್ಯನಾಗುತ್ತಾನೆ ಎಂದು ಕನಸು ಕಂಡಳು. ಆದರೆ ಮುಗ್ಧ ಹುಡುಗ ಕಾಲೇಜಿನ ಕೆಲವು ಶ್ರೀಮಂತ ಹುಡುಗರಲ್ಲಿ ಕಳೆದು ಹೋದ. ಮಾದಕವಸ್ತುಗಳಿಗೆ ಬಲಿಯಾದ. ಕೊನೆಗೆ ಎರಡನೆ ವರ್ಷ
ಕಲಿಯುತ್ತಿರುವಾಗಲೇ ಹೆತ್ತ ಹೊಟ್ಟೆಯ ಮೇಲೆ ನಿರಾಸೆಯ ತಣ್ಣೀರೆರಚಿ ಸತ್ತು ಹೋದ. ಅಪೇಕ್ಷಿಸಿದ್ದು ಒಂದು ಆದದ್ದು ಇನ್ನೊಂದು. ಜೀವನದಲ್ಲಿ ಹೀಗೆಯೇ ಆದೀತೆಂದು ತಿಳಿಯುವುದು ಕಷ್ಟ. ಇಂದ್ರನಾಗಲು ಹೊರಟ ನಹುಷ ಹೆಬ್ಬಾವಾಗಿ ಸಹಸ್ರ ವರ್ಷ ನೆಲದಲ್ಲಿ ಬಿದ್ದ. ಸದಾ ಧರ್ಮದಲ್ಲೇ ಬದುಕಿದ ಧರ್ಮರಾಜ ತಮ್ಮಂದಿರೊಡನೆ ವನವಾಸ ಅನುಭವಿಸಿದ. ಭರತನಿಗೆ ಎರಡು ಬಾರಿ
ರಾಜ್ಯ ಒಲಿದು ಬಂದಿತ್ತು. ಮೊದಲನೆಯ ಬಾರಿ ದಶರಥ ತನ್ನ ಮದುವೆಗೂ ಮೊದಲು ಕೈಕೇಯಿಯ ತಂದೆ ಅಶ್ವಪತಿ ರಾಜನಿಗೆ ಮಾತು ಕೊಟ್ಟಾಗ. ಎರಡನೆಯ ಬಾರಿ ತಾಯಿ ಕೈಕೇಯಿ ಪಡೆದ ವರದಿಂದಾಗಿ. ಆದರೆ ಭರತ ರಾಜನಾಗಲೇ ಇಲ್ಲ. ಹದಿನಾಲ್ಕು ವರ್ಷ ಅಣ್ಣನ ರಾಮನ ಪ್ರತಿನಿಧಿಯಾಗಿ ಸನ್ಯಾಸಿಯಂತೆ ರಾಜಕಾರ್ಯ ನಡೆಸಿದ.

ಅರ್ಜುನನ ಮೊಮ್ಮಗ, ವೀರ ಅಭಿಮನ್ಯುವಿನ ಮಗನಾದಪರೀಕ್ಷಿತ, ಪಾಂಡವ-ಕೌರವ ಸಾಮ್ರಾಜ್ಯದ ಚಕ್ರವರ್ತಿ. ಕಲಿಯನ್ನು ಹಿಂದಕ್ಕೆ ತಳ್ಳುವ ಶಕ್ತಿ ಇದ್ದವ, ಒಂದು ಕ್ಷಣದ ತಾಳ್ಮೆ ಕಳೆದುಕೊಂಡು ಏಳೇ ದಿನಗಳಲ್ಲಿ ಹಾವು ಕಚ್ಚಿಸಿಕೊಂಡು ಸಾಯಬೇಕಾಯಿತು. ಅಹಿಂಸೆಯನ್ನೇ ಬದುಕಿನ ಉಸಿರಾಗಿಸಿಕೊಂಡ ಗಾಂಧೀಜಿ, ಮೂರ್ಖನೊಬ್ಬನ ಹಿಂಸಾತ್ಮಕ ನಡೆಗೆ ಬಲಿಯಾಗಬೇಕಾಯಿತು. ಹೀಗೆ ಅನೇಕ ಬಾರಿ ಅಪೇಕ್ಷಿಸಿದ್ದೇ ಒಂದು, ಆಗಿದ್ದೇ ಒಂದು ಎಂದಾಗುತ್ತದೆ. ಇದನ್ನೇ ಕಗ್ಗ ಹೇಳುತ್ತದೆ. ಭೂಮಿಯ ಗುಣ ವಿಶೇಷದಿಂದ ಹಣ್ಣಿನ ರಸದ ಗುಣ ಬದಲಾಗಬಹುದು. ಮಾವನ್ನು ನೆಟ್ಟಿದ್ದು ಬೇವಾಗಬಹುದು. ಇದು ನಮ್ಮನ್ನು ಮೀರಿದ ವಿಷಯ. ಇದು ಪ್ರಪಂಚವೆಂಬ ತೋಟದ ಯಜಮಾನನಾದ ದೈವ ಯೋಜಿಸಿದ ವಿಷಯ. ನಾವು ಕೇವಲ ಸೇವಕರು. ಆದದ್ದನ್ನು ನೋಡುವುದು, ಶ್ರದ್ಧೆಯಿಂದ ಯಜಮಾನ ಒಪ್ಪಿಸಿದ ಕಾರ್ಯವನ್ನು ಮಾಡುವುದು ನಮಗೆ ಗೊತ್ತಾದ ಕೆಲಸ. ವಿವರಗಳು, ತೀರ್ಮಾನಗಳು ಯಜಮಾನನವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT