ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆರಗಿನ ಬೆಳಕು: ಬದುಕಿನ ಪುಣ್ಯವಿಶೇಷ

Last Updated 15 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ದೊರೆವ ಜೀತಕೆ ದುಡಿತ, ಮರುದಿನದ ಚಿಂತೆ ಮಿತ |
ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ||
ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು |
ಸರಿಗೂಡೆ ಸುಕೃತವದು – ಮಂಕುತಿಮ್ಮ || ೭೭೯ ||

ಪದ-ಅರ್ಥ: ಕೆಳೆಯರೊಡನಾಟ=ಕೆಳೆಯರ
(ಗೆಳೆಯರ)+ಒಟನಾಟ; ಪರಿತುಷ್ಟಿ=ತೃಪ್ತಿ, ದೃಷ್ಟಿಯಿವು=ದೃಷ್ಟಿ+ಇವು.

ವಾಚ್ಯಾರ್ಥ: ದೊರೆತ ಹಣಕ್ಕೆ ಸರಿಯಾದ ಶ್ರಮ, ಮರುದಿನದ ಚಿಂತೆ ಹೆಚ್ಚಿಲ್ಲ, ಭಾರವನ್ನು ಕಡಿಮೆಮಾಡುವ ಗೆಳೆಯರ ಸಹವಾಸ, ಸರಳತೆಯಲ್ಲಿ ತೃಪ್ತಿ, ಪರಮಾರ್ಥ ದೃಷ್ಟಿ, ಇವೆಲ್ಲ ಸರಿಹೊಂದಿದರೆ ಪುಣ್ಯದ ಬದುಕು.

ವಿವರಣೆ: ಅವನೊಬ್ಬ ಝೆನ್ ಸಂತ. ಅವನ ಕೆಲಸ ರಸ್ತೆ ಮಾಡುವುದು. ಅದು ತುಂಬ ಶ್ರಮದ
ಕೆಲಸ. ನೆಲವನ್ನು ಅಗಿದು, ಸಮಮಾಡಿ, ಜಲ್ಲಿಕಲ್ಲುಗಳನ್ನು ಹಾಕಿ, ಕುಟ್ಟಿ ನಂತರ ಯಂತ್ರಗಳನ್ನು ಓಡಾಡಲು ಬಿಡುವುದು.
ಆತ ಬೆಳಿಗ್ಗೆ ಹೋದರೆ ಸಾಯಂಕಾಲವೇ ತನ್ನ ಗೂಡಿಗೆ ಬರುವುದು. ಮನೆಗೆ ಬಂದು ತಾನೇ ಅಡುಗೆ ಮಾಡಿಕೊಂಡು ಊಟ ಮಾಡಿ, ಊರ ಮುಂದಿದ್ದ ಅರಳಿಕಟ್ಟೆಗೆ ಹೋಗಿ, ಗೆಳೆಯ
ರೊಂದಿಗೆ ಹರಟೆ ಹೊಡೆದು, ರಾತ್ರಿ ಮನೆಗೆ
ಬಂದು ಗಾಢನಿದ್ರೆ ತೆಗೆಯುತ್ತಿದ್ದ. ಅವನ ಗೆಳೆಯರಿಗೆಲ್ಲ ಅವನನ್ನು ಕಂಡರೆ ಪ್ರೀತಿ ಮತ್ತು ಆಶ್ಚರ್ಯ. ಅವನು ಒಂದು ದಿನವಾದರೂ ತನ್ನ ಬದುಕಿನ ಬಗ್ಗೆ ಗೋಳಾಡಿದವನಲ್ಲ, ಕೊರಗಿದವನಲ್ಲ.

ಅವನನ್ನು ಒಂದು ದಿನ ಸ್ನೇಹಿತನೊಬ್ಬ
ಕೇಳಿದ, 'ಮಿತ್ರಾ, ನಿನ್ನನ್ನು ಅಂದಿನಿಂದ
ಗಮನಿಸುತ್ತಿದ್ದೇನೆ. ಯಾವಾಗಲೂ ನಗು
ನಗುತ್ತಲೇ ಇರುತ್ತೀಯಾ. ನಿನಗೆ ಯಾವ ಕಷ್ಟಗಳೂ ಇಲ್ಲವೆ? ನಮಗೆ ಒಂದಾದ ಮೇಲೆ ಒಂದು ತೊಂದರೆಗಳು ಬರುತ್ತವೆ. ನೀನು ಹೇಗೆ ಸಂತೋಷವಾಗಿದ್ದೀ?’ ಸಂತ ಹೇಳಿದ, ‘ನನಗೆ ತೊಂದರೆಗಳು ಬರಲೇ ಇಲ್ಲ. ಕೇವಲ ಸವಾಲುಗಳಿದ್ದವು. ಸವಾಲುಗಳನ್ನು ಎದುರಿಸುವುದು ಸಂತೋಷವೇ ಅಲ್ಲವೆ? ನಾನು ಸಂಜೆಯವರೆಗೆ ಕೇವಲ ಕರ್ತವ್ಯವನ್ನು ನೆನೆಸಿ ದುಡಿಯುತ್ತೇನೆ. ನಾಳೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾಳೆ ಬಂದಾಗ ನೋಡೋಣ. ಸಂಜೆ ನಿಮ್ಮೊಡನೆ ಮಾತನಾಡಿದಾಗ ದೈಹಿಕ ಶ್ರಮ, ಚಿಂತೆ ಮರೆತು ಹೋಗುತ್ತವೆ. ನಾನು ಎಂದೂ ಕೂಡಿ ಇಡದಿದ್ದುದರಿಂದ ಕಳೆದುಕೊಳ್ಳುವ ಭಯವಿಲ್ಲ. ಮೇಲೆ ಭಗವಂತನಿದ್ದಾನಲ್ಲವೇ? ಅವನಿಗೇ ನನ್ನ ಬದುಕಿನ ಜವಾಬ್ದಾರಿ ವಹಿಸಿ ನಿರಾಳವಾಗಿದ್ದೇನೆ’. ಉಳಿದವರಿಗೆ ಒಂದೇ ಚಿಂತೆ, ತಮಗೇಕೆ ಅವನ ಹಾಗೆ ಬದುಕುವುದು ಸಾಧ್ಯವಾಗುತ್ತಿಲ್ಲ?

ಎಲ್ಲರೂ ತಮ್ಮ ಬದುಕು ಸುಂದರ ಮತ್ತು ಆತಂಕರಹಿತವಾಗಿರಬೇಕೆಂದು ಬಯಸುತ್ತಾರೆ. ಆದರೆ ಹೇಗೆ ಎಂಬುದು ತಿಳಿದಿಲ್ಲ. ಈ ಕಗ್ಗ ಸುಂದರ ಬದುಕಿನ ಸೂತ್ರಗಳನ್ನು ನೀಡುತ್ತದೆ. ಅದು ಝೆನ್ ಸಂತನ ಮಾತೇ. ಒಪ್ಪಿಕೊಂಡ ಕೆಲಸಕ್ಕೆ ತಕ್ಕ ದುಡಿತ, ನಾಳೆಯ ಬಗ್ಗೆ ತುಂಬ ತಲೆಕೆಡಿಸಿಕೊಳ್ಳುವುದು ಬೇಡ. ತಿಳಿಮನಸ್ಸಿನಿಂದ, ಪ್ರೀತಿಯಿಂದ ಮಾತನಾಡಿ ಹಗುರಗೊಳಿಸುವ ಸ್ನೇಹಿತರೊಡನಾಟ, ಆಡಂಬರಕ್ಕೆ ಮನಕೊಡದೆ, ಸರಳತೆಯಲ್ಲಿ ಪಟ್ಟ ತೃಪ್ತಿ ಮತ್ತು ಇವೆಲ್ಲವುಗಳಿಗಿಂತ ಮುಖ್ಯವಾಗಿ ಪರಮಾರ್ಥ ಚಿಂತನೆ ಇವುಗಳನ್ನು ಬದುಕಿನಲ್ಲಿ ಹೊಂದಿಸಿಕೊಂಡರೆ, ಬದುಕೇ ಒಂದು ಅದೃಷ್ಟ, ಪುಣ್ಯವಿಶೇಷ.

⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT