ಶನಿವಾರ, ಸೆಪ್ಟೆಂಬರ್ 26, 2020
22 °C

ಬೆರಗಿನ ಬೆಳಕು | ಕೃತಜ್ಞತೆಯ ನಡೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುರುರಾಜ ಕರಜಗಿ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ, ನಗರದ ಅತ್ಯಂತ ಶ್ರೀಮಂತ ಶ್ರೇಷ್ಠಿಗೆ ಒಬ್ಬ ಮಗ ಹುಟ್ಟಿದ. ಅವನಿಗೆ ಮಹಾಧನಿಕ ಎಂದು ಹೆಸರಿಟ್ಟರು. ಮನೆಯಲ್ಲಿ ಇಷ್ಟೊಂದು ಶ್ರೀಮಂತಿಕೆ ಇರುವಾಗ ಮಗನಿಗೆ ಶಿಕ್ಷಣ ಯಾಕೆ ಬೇಕು ಎಂದು ತಂದೆ ವಿದ್ಯೆ ಕಲಿಸಲಿಲ್ಲ. ಮಗ ಬೆಳೆದಂತೆಲ್ಲ ತಿನ್ನುವುದು, ಕುಡಿಯುವುದು, ಸ್ತ್ರೀಸಂಗ ಮಾಡುವುದು ಮುಂತಾದ ಚಟಗಳನ್ನು ಅಭ್ಯಾಸ ಮಾಡಿಕೊಂಡ. ತಂದೆ-ತಾಯಿಯರು ತೀರಿ ಹೋದ ಮೇಲಂತೂ ಅವನ ದುಶ್ಚಟಗಳಿಗೆ ಮಿತಿಯೇ ಇರಲಿಲ್ಲ. ಮನೆಯ ಆಸ್ತಿ ಕರಗಿ ಹೋಗಿ ಮೈತುಂಬ ಸಾಲ ಮಾಡಿಕೊಂಡ. ಸಾಲಕೊಟ್ಟವರು ಪದೇ ಪದೇ ಪೀಡಿಸತೊಡಗಿದರು. ಇನ್ನು ತಾನು ಸಾಯುವುದೇ ಮೇಲು ಎಂದುಕೊಂಡು ಗಂಗಾತೀರಕ್ಕೆ ಹೋಗಿ ಪ್ರವಾಹಕ್ಕೆ ಹಾರಿಕೊಂಡ. ನಂತರ ಗಾಬರಿಯಾಗಿ ಬೊಬ್ಬೆ ಹಾಕತೊಡಗಿದ.

ಅದೇ ಸಮಯದಲ್ಲಿ ಬೋಧಿಸತ್ವ ಅತ್ಯಂತ ವಿಶೇಷವಾದ ಜಿಂಕೆಯಾಗಿ ಜನ್ಮವೆತ್ತಿದ್ದ. ಆತ ಗುಂಪಿನಿಂದ ದೂರವಾಗಿ ಗಂಗೆಯ ತಿರುವಿನಲ್ಲಿ ಒಂದು ಸುಂದರ ಮಾವಿನ ತೋಪಿನಲ್ಲಿ ನೆಲೆಸಿದ್ದ. ಆ ಪ್ರದೇಶ ನಳನಳಿಸುವ ಹುಲ್ಲಿನಿಂದ, ಹೂಗಳಿಂದ ಅತ್ಯಂತ ಚೆಲುವಾಗಿತ್ತು. ಈ ಜಿಂಕೆಯ ಮೈಬಣ್ಣ ಸುವರ್ಣದ್ದಾಗಿತ್ತು. ಅದರ ಕಾಲುಗಳು ರಕ್ತವರ್ಣದ್ದಾಗಿದ್ದವು. ಅದರ ಬಾಲ ಹಸುವಿನ ಬಾಲದಂತಿತ್ತು. ಕೋಡುಗಳು ಬೆಳ್ಳಿಯ ಮಾಲೆಗಳಿಂತಿದ್ದವು. ಅದರ ಸುಂದರವಾದ ಕಣ್ಣುಗಳು ಥಳಥಳ ಹೊಳೆಯುತ್ತಿ
ದ್ದವು. ಆ ಜಿಂಕೆ ಒಂದು ಎತ್ತಿನಷ್ಟು ದೊಡ್ಡದಾಗಿತ್ತು.

ಈ ಮಹಾಧನಿಕ ಕೂಗುವುದನ್ನು ಕೇಳಿಸಿಕೊಂಡ ಜಿಂಕೆ, ಅವನನ್ನು ಉಳಿಸುವುದಕ್ಕಾಗಿ ಓಡಿ ಬಂದಿತು. ‘ಭಯಪಡಬೇಡ, ನಾನು ನಿನ್ನನ್ನು ರಕ್ಷಿಸುತ್ತೇನೆ’ ಎನ್ನುತ್ತ ನೀರಿಗೆ ಹಾರಿ, ನೀರನ್ನು ಸೀಳುತ್ತ ಅವನೆಡೆಗೆ ಬಂದಿತು. ಅವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ದಂಡೆಗೆ ಬಂದಿತು. ಅವನನ್ನು ತನ್ನ ಮಾವಿನ ತೋಪಿಗೆ ಕರೆದೊಯ್ದು ಆರೈಕೆ ಮಾಡಿ, ಹಣ್ಣು ಹಂಪಲಗಳನ್ನು ಕೊಟ್ಟು ವಾರಾಣಸಿಯ ಹತ್ತಿರದವರೆಗೂ ತಂದು ಬಿಟ್ಟು ಹೋಯಿತು.

ಮಹಾಧನಿಕ ವಾರಾಣಸಿಗೆ ಬಂದ ದಿನವೇ ಪಟ್ಟಮಹಿಷಿ ಖೇಮಾಳಿಗೆ ಒಂದು ಕನಸು ಬಿತ್ತು. ಅದರಲ್ಲಿ ಒಂದು ಸುವರ್ಣಮಯವಾದ ಜಿಂಕೆ ಬಂದು ಧರ್ಮೋಪದೇಶ ಮಾಡಿದಂತೆ ಆಗಿತ್ತು. ಆಕೆಗೆ ಅಂಥ ಜಿಂಕೆಯನ್ನು ಕಾಣುವ, ಅದರ ಉಪದೇಶವನ್ನು ಕೇಳುವ ಆಸೆ ಅತಿಯಾಯಿತು. ಯಾರಾದರೂ ಅಂಥ ಜಿಂಕೆಯನ್ನು ಕಂಡಿದ್ದರೆ ಅವರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ರಾಜ ಡಂಗುರ ಸಾರಿಸಿದ. ಮಹಾಧನಿಕ ಹಣದಾಸೆಗೆ ರಾಜನ ಬಳಿ ಹೋಗಿ ಅಂತಹ ಜಿಂಕೆಯನ್ನು ತಾನು ತೋರಿಸುವುದಾಗಿ ಹೇಳಿ ಅವನನ್ನು ಮತ್ತು ದೊಡ್ಡ ಸೈನ್ಯವನ್ನು ಕರೆದುಕೊಂಡು ಜಿಂಕೆಯ ಸ್ಥಾನವನ್ನು ತೋರಿಸಿದ. ಸೈನ್ಯ ತೋಪನ್ನು ಸುತ್ತುವರೆದಾಗ ಜಿಂಕೆಗೆ ಈ ಮನುಷ್ಯ ಮಾಡಿದ ಅಪಕಾರ ತಿಳಿಯಿತು. ಮುಂದೆ ಬಂದ ರಾಜನಿಗೆ ಹೇಳಿತು, ‘ಮುಳುಗಿ ಸಾಯುತ್ತಿರುವ ಕೃತಘ್ನ ಮನುಷ್ಯನನ್ನು ಉಳಿಸುವುದಕ್ಕಿಂತ ಮರದ ದಿಮ್ಮೆಯನ್ನು ರಕ್ಷಿಸುವುದು ಒಳ್ಳೆಯದು’. ನಂತರ ಈ ಮನುಷ್ಯ ಮಾಡಿದ ನಂಬಿಕೆ ದ್ರೋಹವನ್ನು ಹೇಳಿತು. ‘ನಾನು ಬಂದು ರಾಣಿಗೆ ಧರ್ಮೋಪದೇಶ ಮಾಡುತ್ತೇನೆ, ನಡೆಯಿರಿ’ ಎಂದು ಸಿದ್ಧವಾಯಿತು. ರಾಜನಿಗೆ ಮಹಾಧನಿಕನ ಕೃತಘ್ನತೆಯ ಬಗ್ಗೆ ಕೋಪ ಬಂದು ಕೊಲ್ಲ ಹೋದಾಗ, ‘ರಾಜಾ ಅವನನ್ನು ಕೊಲ್ಲಬೇಡ. ಅವನು ಪಶ್ಚಾತ್ತಾಪದಲ್ಲಿ ಬೇಯಲಿ’ ಎಂದು ಬಿಡಿಸಿಬಿಟ್ಟಿತು. ರಾಜ ಜಿಂಕೆಗೆ ಸನ್ಮಾನ ಮಾಡಿ ಯಾವ ತೊಂದರೆಯೂ ಆಗದಂತೆ ನೋಡಿದ.

‘ಕೃತಂಸ್ಮರ, ಕೃತೋಸ್ಮರ’ ಮಾಡಿದವರನ್ನು ನೆನೆ, ಮಾಡಿದ್ದನ್ನು ನೆನೆ ಎನ್ನುವುದು ಮನುಷ್ಯ ಧರ್ಮ. ಅದನ್ನು ಮರೆತವರು ಮನುಷ್ಯ ರೂಪದ ರಾಕ್ಷಸರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.