ಪಾಕ್ ಸೇನೆಯ ಹೊಸ ಕೈಗೊಂಬೆ ಇಮ್ರಾನ್?

7
ಪಾಕಿಸ್ತಾನದ ‘ಭಾರತ ನೀತಿ’ ಸೇನೆಯ ಕಪಿಮುಷ್ಟಿಯಲ್ಲೇ ಉಳಿಯಲಿದೆ. ಬದಲಾವಣೆಯ ಸಾಧ್ಯತೆ ವಿರಳ

ಪಾಕ್ ಸೇನೆಯ ಹೊಸ ಕೈಗೊಂಬೆ ಇಮ್ರಾನ್?

ಡಿ. ಉಮಾಪತಿ
Published:
Updated:

‘ಹಮ್ ದೇಖೇಂಗೇ’ ಎಂಬುದು ಪಾಕಿಸ್ತಾನದ ಪ್ರಗತಿಪರ ಕವಿ ಫೈಜ್ ಅಹ್ಮದ್ ಫೈಜ್ ಅವರ ಕ್ರಾಂತಿಕಾರಕ ಕವಿತೆಯೊಂದರ ತಲೆಬರೆಹ. 80ರ ದಶಕದಲ್ಲಿ ಅಂದಿನ ಮಿಲಿಟರಿ ಸರ್ವಾಧಿಕಾರಿ ಜನರಲ್ ಜಿಯಾ ಉಲ್ ಹಕ್ ಆಡಳಿತದ ವಿರುದ್ಧ ಪ್ರತಿಭಟನೆಯ ಗೀತೆಯಾಗಿ ಪಾಕಿಸ್ತಾನದ ಗಾಳಿ– ಬೆಳಕಿನಲ್ಲಿ ಮಾರ್ದನಿಸಿತ್ತು.

‘... ರಾಜ್ಯಗಳಳಿಯಲಿ, ರಾಜ್ಯಗಳುಳಿಯಲಿ, ಹಾರಲಿ ಗದ್ದುಗೆ ಮುಕುಟಗಳು...’ ಎಂಬ ನಮ್ಮ ಕ್ರಾಂತಿಕಾರಿ ಕವಿ ಕುವೆಂಪು ಅವರ ‘ನೇಗಿಲಯೋಗಿ’ ಕವಿತೆಯ ಸಾಲನ್ನೇ ಹೋಲುವ ಪದಗಳು ಫೈಜ್ ಅವರ ಈ ಕವಿತೆಯಲ್ಲೂ ಇವೆ.
‘ಸಬ್ ತಾಜ್ ಉಛಾಲೇ ಜಾಯೇಂಗೇ... ಸಬ್ ತಖ್ತ್ಗಿರಾಯೇ ಜಾಯೇಂಗೇ’ (ಸಿಂಹಾಸನಗಳನ್ನು ನೆಲಕ್ಕೆ ಕೆಡವಲಾಗುವುದು... ಮುಕುಟಗಳು ಗಾಳಿಗೆ ಹಾರುವುವು...).

ಮೊನ್ನೆ ನಡೆದ ಚುನಾವಣೆಗಳ ಸಂದರ್ಭದಲ್ಲಿ ಬಹುರಾಷ್ಟ್ರೀಯ ತಂಪು ಪಾನೀಯದ ಕಂಪನಿಯೊಂದು ಈ ಗೀತೆಯನ್ನು ಪುನಃ ಚಲಾವಣೆಗೆ ತಂದಿತ್ತು. ಆದರೆ ಗದ್ದುಗೆ, ಮುಕುಟಗಳ ಸಾಲು ಮರೆಯಾಗಿತ್ತಂತೆ. ಪಾಕಿಸ್ತಾನದಲ್ಲಿ ಯಾರ ಗದ್ದುಗೆ, ಮುಕುಟಗಳು ಹಾರಿದರೇನಂತೆ. ಅಲ್ಲಿನ ಸರ್ವಶಕ್ತ ಸೇನೆಯ ಗದ್ದುಗೆ, ಮುಕುಟಗಳು ಸದಾ ಕಾಯಂ. ಭಾರತದ ಪಾಲಿಗಂತೂ ಅದು ನಿತ್ಯ ಸತ್ಯ.

ಹಾಲಿ ಚುನಾವಣಾ ಫಲಿತಾಂಶಗಳು ಈ ಸತ್ಯವನ್ನುಇನ್ನಷ್ಟು ಹೊಳಪಿನಿಂದ ಸಾರಿವೆ. ನ್ಯಾಯಾಂಗ, ಚುನಾವಣಾ ಆಯೋಗದ ‘ಸಹಕಾರ’ದ ಜೊತೆಗೆ ಸಮೂಹ ಮಾಧ್ಯಮಗಳ ಬಾಯಿ ಬಡಿದು ಫಲಿತಾಂಶಗಳನ್ನು ತನ್ನ ಅನುಕೂಲಕ್ಕೆ ತಿರುಗಿಸಿಕೊಂಡಿದೆ. ಸೇನಾ ಜನರಲ್‌ಗಳು ಮನಸ್ಸು ಮಾಡದಿದ್ದರೆ ಇಮ್ರಾನ್, ಪ್ರಧಾನಿ ಹುದ್ದೆಯ ಸನಿಹ ಸಾರುವುದು ಕೂಡ ಶಕ್ಯವಿರಲಿಲ್ಲ ಎಂಬ ಮಾತುಗಳು ಸೇನೆಯ ಕುರಿತು ಗಟ್ಟಿಯಾಗಿ ಕೇಳಿಬಂದಿವೆ. ಹೀಗಾಗಿ ಸೇನೆಯ ಇಷಾರೆಯನ್ನು ಮೀರಿ ಇಮ್ರಾನ್ ಮುಂದಿನ ಹೆಜ್ಜೆ ಇಡುವುದು ಅಸಾಧ್ಯ. ಭಾರತದೊಂದಿಗೆ ಗೆಳೆತನ- ಹಗೆತನ ಮತ್ತು ಕಾಶ್ಮೀರ ಕುರಿತ ನೀತಿ ನಿರ್ಧಾರಗಳು ಅವರ ಕೈಯಲ್ಲಿ ಇರುವುದಿಲ್ಲ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಕೈಬಿಟ್ಟು, ನೇರವಾಗಿ ತನ್ನೊಂದಿಗೆ ಮಾತುಕತೆ ನಡೆಸಬೇಕೆಂಬ ಪಾಕ್ ಮಿಲಿಟರಿಯ ಬಯಕೆಗೆ ಭಾರತ ಈವರೆಗೆ ಸೊಪ್ಪು ಹಾಕಿಲ್ಲ. ಪಾಕ್ ಪ್ರಧಾನಿಗಳು ಏನನ್ನಾದರೂ ಹೇಳಲಿ, ನಡೆಯುವುದು ತನ್ನ ಮಾತೇ ಎಂಬ ಸಂದೇಶವನ್ನು ಅಲ್ಲಿನ ಮಿಲಿಟರಿ ಮುಖ್ಯಸ್ಥರು ತಾವು ಸಾಕಿಕೊಂಡಿರುವ ಜಿಹಾದಿಗಳು ಇಲ್ಲವೇ ಸೇನೆಯ ಬಂದೂಕಿನ ನಳಿಕೆಯ ಮೂಲಕ ಭಾರತಕ್ಕೆ ಸಾರಿ ಹೇಳಿದ್ದಾರೆ. ವಾಜಪೇಯಿಪ್ರಧಾನಿಯಾಗಿದ್ದಾಗ ಹಠಾತ್ತನೆ ಬಡಿದೆಬ್ಬಿಸಿದ ಕಾರ್ಗಿಲ್ ಯುದ್ಧ ಮತ್ತು ಸಂಸದ್ ಭವನದ ಮೇಲೆ ನಡೆದ ದಾಳಿ ಹಾಗೂ ಯುಪಿಎ ಅವಧಿಯಲ್ಲಿ ಮುಂಬೈ ಮೇಲೆ ಜಿಹಾದಿ ಭಯೋತ್ಪಾದಕರ ಲಗ್ಗೆಯ ಪ್ರಕರಣಗಳು ಈ ಮಾತಿಗೆ ಕಣ್ಣು ಕುಕ್ಕುವ ಉದಾಹರಣೆ. ಈ ಎಲ್ಲ ಪ್ರಕರಣಗಳ ಸೂತ್ರಧಾರ ಪಾಕಿಸ್ತಾನದ ಸೇನೆಯೇ ವಿನಾ ಅಲ್ಲಿನ ಚುನಾಯಿತ ಸರ್ಕಾರಗಳು ಅಲ್ಲ. ಚುನಾಯಿತ ಸರ್ಕಾರಗಳಿಗೆ ಈ ದಾಳಿಗಳ ಪೂರ್ವ ಮಾಹಿತಿ ಕೂಡ ಇರಲಿಲ್ಲ.

ಇಪ್ಪತ್ತು ಕೋಟಿ ಜನಸಂಖ್ಯೆಯ ಪಾಕಿಸ್ತಾನದಲ್ಲಿ ಈ ಸಲ ಹತ್ತು ಕೋಟಿ ಮಂದಿ ಮತ ಚಲಾಯಿಸಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಹೆಚ್ಚೂ ಕಡಿಮೆ ಅರ್ಧದಷ್ಟು ಕಾಲ ಪಾಕಿಸ್ತಾನವನ್ನು ಸೇನೆಯೇ ಆಳಿದೆ. ಜನರೇ ಆಯ್ಕೆ ಮಾಡಿದ ಸರ್ಕಾರದಿಂದ ಜನರಿಂದ ಆಯ್ಕೆಯಾದ ಮತ್ತೊಂದು ಸರ್ಕಾರಕ್ಕೆ ಅಧಿಕಾರದ ಶಾಂತಿಯುತ ಹಸ್ತಾಂತರ ನಡೆಯುತ್ತಿರುವುದು ಪಾಕಿಸ್ತಾನದ ಇತಿಹಾಸದಲ್ಲಿ ಇದು ಎರಡನೆಯ ಬಾರಿ ಮಾತ್ರ. ವಿಶ್ವದ ಆರನೆಯ ಅತಿದೊಡ್ಡ ಸೇನೆ ಎನ್ನಲಾದ ಪಾಕಿಸ್ತಾನಿ ಸೇನೆ, ಚುನಾವಣೆಯ ಮೂಲಕ ಆರಿಸಿ ಬಂದ ಹಲವು ಸರ್ಕಾರಗಳನ್ನು ಕೆಡವಿ ಅಧಿಕಾರ ಕಬಳಿಸಿದೆ.

ಪಾಕಿಸ್ತಾನದ ರಾಜಕಾರಣವನ್ನು ಮೂರು ದಶಕಗಳಿಗೂ ಹೆಚ್ಚು ಕಾಲ ಆಳಿದ ಎರಡು ಪಕ್ಷಗಳು ನೆಲಕಚ್ಚಿದ ಚುನಾವಣೆಯಿದು. ಎರಡೂ ಪಕ್ಷಗಳು ಸೇನೆಯ ಕ್ರೋಧಕ್ಕೆ ಗುರಿಯಾಗಿವೆ. ಸೇನಾ ಮುಖ್ಯಸ್ಥ ಜನರಲ್ ಜಿಯಾ ಉಲ್ ಹಕ್ ಒಂದು ಕಾಲಕ್ಕೆ ನವಾಜ್ ಷರೀಫ್ ಎಂಬ ‘ಜನತಾಂತ್ರಿಕ ಕೈಗೊಂಬೆ’ಯನ್ನು ಆರಿಸಿ ತಂದ ‘ಪದ್ಧತಿ’ ಯಲ್ಲೇ ಇದೀಗ ಅಲ್ಲಿನ ಸೇನೆ ಇಮ್ರಾನ್ ಖಾನ್ ನೇತೃತ್ವದ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸತೊಡಗಿದೆ. ಇಮ್ರಾನ್ ಪರ ಚುನಾವಣೆಯನ್ನು ಪಳಗಿಸಿರುವ ಸೇನೆಗೆ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಗಳು ಸಹಕರಿಸಿರುವ ವರದಿಗಳಿವೆ. ಸ್ವತಂತ್ರ, ನಿರ್ಭೀತ ಸಮೂಹ ಮಾಧ್ಯಮಗಳನ್ನು ಮಣಿಸಿ ಮಟ್ಟ ಹಾಕಲಾಗಿದೆ.

ಪಾಕಿಸ್ತಾನಿ ಸೇನೆ ತನ್ನ ಮೂರೂ ಮುಕ್ಕಾಲು ಲಕ್ಷ ಸೈನಿಕರನ್ನು ಈ ಚುನಾವಣೆಗಳ ದೇಖರೇಖೆಗೆಂದು ನಿಯುಕ್ತಿ
ಮಾಡಿತ್ತು. 2013ರ ಚುನಾವಣೆಗಳಿಗೆ ಹೋಲಿಸಿದರೆ ಈ ಪ್ರಮಾಣ ಮೂರು ಪಟ್ಟು ಹೆಚ್ಚು. ಎಲ್ಲ 85 ಸಾವಿರ ಮತಗಟ್ಟೆಗಳೂ ಸಂಪೂರ್ಣ ಸೇನೆಯ ನಿಯಂತ್ರಣದಲ್ಲಿದ್ದವು. ಮತಗಟ್ಟೆಯ ಒಳಗೂ ಸಶಸ್ತ್ರ ಸೇನಾ ತುಕಡಿಗಳನ್ನು ನೇಮಿಸಲಾಗಿತ್ತು.

ಚುನಾವಣಾ ಪ್ರಚಾರದಲ್ಲಿ ಎಲ್ಲ ಪಕ್ಷಗಳಿಗೂ ಸಮಾನತೆಯಾಗಲೀ, ಅವಕಾಶಗಳಾಗಲೀ ಇರಲಿಲ್ಲ ಎಂದು ಚುನಾವಣೆಯ ಮೇಲೆ ನಿಗಾ ಇಟ್ಟಿದ್ದ ಯುರೋಪಿಯನ್ ಒಕ್ಕೂಟದ ತಂಡ ನೀಡಿರುವ ಹೇಳಿಕೆ ಅತ್ಯಂತ ಗಮನಾರ್ಹ. ಅಮೆರಿಕೆಯೂ ಈ ಮಾತಿಗೆ ದನಿಗೂಡಿಸಿದೆ. ಪ್ರಚಾರ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿತ್ತು ಎಂದಿದೆ ಜಿಯೊ ಟಿ.ವಿ. ಮತ್ತು ಡಾನ್ ಪತ್ರಿಕೆ. ಇವು ಸೇನೆಯಿಂದ ತೀವ್ರ ಒತ್ತಡಗಳನ್ನು ಎದುರಿಸಿದ್ದವು. ಸೇನೆ ಮತ್ತು ನ್ಯಾಯಾಂಗ ಕುರಿತು ಟೀಕೆಗಳನ್ನು ಮಾಡದಂತೆ ನಿರ್ಬಂಧಿಸಲಾಗಿತ್ತು.

ಇಮ್ರಾನ್ ಖಾನ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಬೇರೆಪಕ್ಷಗಳಿಗೆ ದೊರೆಯದಷ್ಟು ಸ್ವಾತಂತ್ರ್ಯ ಕಲ್ಪಿಸಲಾಗಿತ್ತು. ಹರ್ಕತ್ ಉಲ್ ಮುಜಾಹಿದೀನ್‌ನಂತಹ ಭಯೋತ್ಪಾದಕ ಗುಂಪನ್ನು ಸೇರಿಸಿಕೊಂಡ ಪಕ್ಷವಿದು. ಅವಾಮಿ ನ್ಯಾಷನಲ್ ಪಾರ್ಟಿ, ಬಲೂಚಿಸ್ತಾನ್ ಅವಾಮಿ ಪಾರ್ಟಿಗಳ ಪ್ರಚಾರ ಸಭೆಗಳ ಮೇಲೆ ಬಾಂಬ್‌ಗಳನ್ನು ಸಿಡಿಸಲಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಈಗಾಗಲೇ ಬೇನಜೀರ್ ಭುಟ್ಟೋ ಹತ್ಯೆಯನ್ನು ಕಂಡಿದೆ. ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ನಾಯಕರಾದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಮಗಳ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳಲಾಗಿದೆ.

ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮತ್ತು ನವಾಜ್ ಷರೀಫ್ ಪಕ್ಷ ಪಿ.ಎಂ.ಎಲ್-ಎನ್ ನಡುವಣ ಸ್ಪರ್ಧೆಯಾಗಿ ಈ ಚುನಾವಣೆಯನ್ನು ಗ್ರಹಿಸಲಾಗಿತ್ತು. ಫಲಿತಾಂಶಗಳ ಪ್ರಕಾರ 272 ಸೀಟುಗಳ ರಾಷ್ಟ್ರೀಯ ಶಾಸನಸಭೆಯ 115 ಸೀಟುಗಳನ್ನು ಖಾನ್ ಪಕ್ಷ ಈಗಾಗಲೇ ಗೆದ್ದಿದೆ. ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳ ಸಂಖ್ಯೆ 137.ಷರೀಫ್ ಪಕ್ಷ 64ರಿಂದ ಮೇಲೇಳುತ್ತಿಲ್ಲ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಗೆದ್ದಿರುವ ಸೀಟುಗಳು 43. ಪಕ್ಷೇತರರು ಮತ್ತು ಸಣ್ಣಪುಟ್ಟ ರಾಜಕೀಯ ಪಕ್ಷಗಳು 45 ಸೀಟು ಗೆದ್ದಿವೆ.

ಪಾಕಿಸ್ತಾನದ ಉದ್ದಗಲದ ‘ನೆಚ್ಚಿನ ಪ್ರಧಾನಿ ಅಭ್ಯರ್ಥಿ’ಯಾಗಿ ಇಮ್ರಾನ್ ಹೊರಹೊಮ್ಮಿದ್ದಾರೆ. ಈ ಹಿಂದೆ 70ರ ದಶಕದಲ್ಲಿ ಇಂತಹ ಬೆಂಬಲ ದೊರೆತದ್ದು ಜುಲ್ಫಿಕರ್ ಅಲಿ ಭುಟ್ಟೋ ಅವರಿಗೆ. ಪಾಕಿಸ್ತಾನದ ರಾಷ್ಟ್ರೀಯ ಶಾಸನಸಭೆ ಚುನಾವಣೆಗಳಲ್ಲಿ ಯಾರು ಗೆಲ್ಲಬೇಕು ಎಂಬುದು ಮತದಾನಕ್ಕೆ ಮೊದಲೇ ನಿರ್ಧಾರ ಆಗಿರುತ್ತದೆ. ಈ ನಿರ್ಧಾರವನ್ನು ಆಧರಿಸಿ ಫಲಿತಾಂಶಗಳು ಹೊರಬೀಳುತ್ತವೆ ಎಂಬುದು ಜನಜನಿತ ಭಾವನೆ. ಪಾಕಿಸ್ತಾನದ ಸೇನೆಯ ಆಶೀರ್ವಾದ ಇದ್ದವರೇ ಗೆಲ್ಲುತ್ತಾರೆ ಎಂಬುದೂ ನಿಶ್ಚಿತ. ಆದರೆ ಇಮ್ರಾನ್ ಗೆಲುವಿನ ಹಿಂದಿನ ಶಕ್ತಿ ಕೇವಲ ಪಾಕ್ ಸೇನೆ ಅಲ್ಲ, ವೈಯಕ್ತಿಕ ವರ್ಚಸ್ಸೂ ಕೆಲಸ ಮಾಡಿದೆ. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷಕ್ಕೆ ಸೇರಿದ ಗೆದ್ದೇ ಗೆಲ್ಲುವ 61 ಮಂದಿ ಅಭ್ಯರ್ಥಿಗಳು ಇಮ್ರಾನ್ ಪಕ್ಷ ಸೇರಿದ್ದೂ, ಮಾಜಿ ಕ್ರಿಕೆಟಿಗನ ಯಶಸ್ಸಿಗೆ ದಾರಿ ಮಾಡಿತು. ಅದೇ ಹಳೆಯ ಪಕ್ಷಗಳನ್ನು ನೋಡಿ ಬೇಸತ್ತಿರುವ ಜನರಿಗೆ ಬದಲಾವಣೆ ಬೇಕಿತ್ತು ಎಂದು ಅಲ್ಲಿನ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಪಾಕಿಸ್ತಾನ ಹುಟ್ಟಿದ ಒಂದೇ ವರ್ಷದಲ್ಲಿ ಆ ದೇಶದ ಜನಕನೆಂದೇ ಹೆಸರಾದ ಮೊಹಮ್ಮದಾಲಿ ಜಿನ್ನಾ ನಿಧನರಾಗುತ್ತಾರೆ. ಮೊದಲ ಒಂಬತ್ತು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಸಂವಿಧಾನವೇ ಇರಲಿಲ್ಲ. ಜಿನ್ನಾ ನಿಧನ, ಅಧಿಕಾರ ಹಿಡಿಯುವ ಹಣಾಹಣಿಗೆ ದಾರಿ ಮಾಡುತ್ತದೆ. 1958ರ ಹೊತ್ತಿಗೆ ಮೊದಲ ಕ್ಷಿಪ್ರಕ್ರಾಂತಿ ನಡೆದು 1971ರ ತನಕ ಸೇನೆ ಅಧಿಕಾರ ಹಿಡಿಯುತ್ತದೆ. ತನ್ನ ಪಟ್ಟಭದ್ರ ಹಿತಾಸಕ್ತಿಗೆ ಅಡಚಣೆಗಳು ಒದಗಿದಾಗಲೆಲ್ಲ ಮಿಲಿಟರಿಯು ಜನರಿಂದ ಆಯ್ಕೆಯಾದ ಸರ್ಕಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತ ಬಂದಿದೆ. 1977ರಿಂದ 88 ಮತ್ತು 1999ರಿಂದ 2008ರ ತನಕ ಸೇನೆಯದೇ ನೇರ ಆಡಳಿತ. ಜನತಾಂತ್ರಿಕ ಆಡಳಿತವನ್ನು ಗಟ್ಟಿಗೊಳಿಸುತ್ತ ಬಂದಿದ್ದ ನವಾಜ್ ಷರೀಫ್ ಅವರು ಸೇನೆಯ ಮಾಜಿ ಮುಖ್ಯಸ್ಥ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೇರಲು ಮುಂದಾಗಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ‘ಪನಾಮಾ ಪೇಪರ್ಸ್ ಆರ್ಥಿಕ ಹಗರಣ’ದ ನೆವದಲ್ಲಿ ಉರುಳಿಸಿ ಸೆರೆಗೆ ತಳ್ಳಲಾಯಿತು. ಶತ್ರುದೇಶ ಭಾರತ ಕುರಿತು ಮೆದು ಧೋರಣೆ ತಳೆದು ಗೆಳೆತನಕ್ಕೆ ಹಾತೊರೆಯುತ್ತಿದ್ದಾರೆ ಎಂದು ಆರೋಪ ಹೊರಿಸಲಾಯಿತು. ಸೇನೆಯನ್ನು ಬೆಂಬಲಿಸುವ ಮತ್ತು ಸೇನೆಯ ಮಾತು ಕೇಳುವ ಜನಪ್ರಿಯ ನಾಯಕ ಇಮ್ರಾನ್ ಅವರನ್ನು ಮುಂದೆ ತರಲಾಯಿತು.

ಚುನಾವಣೆಗೆ ನಿಂತಿದ್ದ ಕಟ್ಟರ್ ಪಂಥೀಯರ ಪೈಕಿ ಬರೇಲ್ವಿ ಸುನ್ನಿ ಮುಸ್ಲಿಮರ ತೆಹ್ರೀಕ್‌ ಎ ಲಬ್ಬಾಯಿಕ್ ಪಾಕಿಸ್ತಾನ್ ಪಕ್ಷ ಗಣನೀಯ ಯಶಸ್ಸು ಕಂಡಿದೆ. ಉಳಿದಂತೆ ಲಷ್ಕರ್‌ ಎ ತಯಬಾ ಮತ್ತು ಲಷ್ಕರ್‌ ಎ ಜಂಗ್ವೀ ಎಂಬ ಎರಡು ಕಟ್ಟರ್ ಪಂಥೀಯ ಉಗ್ರಗಾಮಿ ಸಂಘಟನೆಗಳು ರಚಿಸಿಕೊಂಡಿದ್ದ ಪಕ್ಷಗಳು ಭಾರಿ ಸೋಲು ಕಂಡಿರುವುದು ಉತ್ತಮ ಬೆಳವಣಿಗೆ. ಹಾಗೆಯೇ ಜಮಿಯತ್ ಉಲೇಮಾ ಇಸ್ಲಾಂ- ಫಜ್ಲ್, ಜಮಾತೆ ಇಸ್ಲಾಮಿಯಂತಹ ಧಾರ್ಮಿಕ ಬಲಪಂಥೀಯ ಪಕ್ಷಗಳೂ ಯಶಸ್ಸು ಕಂಡಿಲ್ಲ.

ನೆರೆ ಹೊರೆಯನ್ನು ಆಯ್ದುಕೊಳ್ಳುವುದು ಅಸಾಧ್ಯ ಎಂಬ ಮಾತೊಂದಿದೆ. ಹಿಂಸೆ, ರಕ್ತಪಾತ, ಭಯೋತ್ಪಾದನೆಗಳಲ್ಲೇ ಬದುಕಿರುವ ನಮ್ಮ ನೆರೆಯ ದೇಶ ಪಾಕಿಸ್ತಾನವು ಸುಖ, ಸಮೃದ್ಧಿ, ಶಾಂತಿಯಿಂದ ಬದುಕಿದಷ್ಟೂ ಭಾರತಕ್ಕೆ ನೆಮ್ಮದಿ. ಇಲ್ಲವಾದರೆ ಅಲ್ಲಿನ ಉತ್ಪಾತಗಳು ಇಲ್ಲಿ ಕಂಪನ ಹುಟ್ಟಿಸುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಲ್ಲಾಹು, ಆಮಿ೯ ಹಾಗೂ ಅಮೆರಿಕ ಆಳಿಕೊಂಡು ಬಂದಿರುವ ಪಾಕಿಸ್ತಾನ ನಿರಂತರ ರಾಜಕೀಯ ಅಸ್ಥಿರತೆಗೆ ಸದಾ ಜೋಲಿ ಹೊಡೆದ ದೇಶ. ಕಳೆದ ಆರೂವರೆ ದಶಕಗಳ ತನ್ನ ಇತಿಹಾಸದಲ್ಲಿ ಈ ದೇಶದ ಜನತಂತ್ರ ಎಂಬ ಸಸಿ ಗಿಡವಾಗಿ ಮರವಾಗಿ ಹೂವು ಕಾಯಿ ಕಟ್ಟಿ ಹಣ್ಣು ಮಾಗಲೇ ಇಲ್ಲ.

ಭಾರತಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರ ನೀತಿ ನಿರ್ಧಾರಗಳು ಕಳೆದ ಏಳು ದಶಕಗಳ ಅವಧಿಯಲ್ಲಿ ಅಲ್ಲಿನ ಸೇನೆಯ ಬಿಗಿಮುಷ್ಟಿಯಲ್ಲೇ ಉಳಿದಿವೆ. ಈ ಸ್ಥಿತಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಅಸಾಧ್ಯ. ಒಂದು ವೇಳೆ ಸೇನೆಯೊಡನೆ ತಮ್ಮ ಮಧುಚಂದ್ರದ ಅವಧಿಯನ್ನು ಬಳಸಿ ಭಾರತದೊಡನೆ ಸಂಬಂಧ ಸುಧಾರಣೆಯ ದಿಟ್ಟ ಹೆಜ್ಜೆಯನ್ನು ಇಮ್ರಾನ್ ಇಡುತ್ತಾರೆಂದು ನಿರೀಕ್ಷಿಸಿದರೂ, ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕಾರಣ ಮೋದಿ ನೇತೃತ್ವದ ಸರ್ಕಾರ ತಾನೂ ಸರಿಸಮನಾಗಿ ಸ್ಪಂದಿಸೀತು ಎಂದು ಹೇಳಲು ಬಾರದು.

ಮೊಸಳೆಗಳ ಮಡುವಿನಂತಹ ಪಾಕಿಸ್ತಾನದ ರಾಜಕಾರಣದಲ್ಲಿ 22 ವರ್ಷಗಳ ಕಾಲ ಸೆಣಸಿದ ಇಮ್ರಾನ್ ಪಕ್ಷ ಕೇಂದ್ರದಲ್ಲಿ ಮಾತ್ರವಲ್ಲದೆ ಪಂಜಾಬ್ ಮತ್ತು ಖೈಬರ್ ಪಖ್ತೂಂಕ್ವಾ ಪ್ರಾಂತಗಳಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ದೇಶವಾಸಿಗಳಿಗೆ ಹೊಸ ಪಾಕಿಸ್ತಾನವನ್ನು ನೀಡುವ ವಚನವನ್ನು ಇಮ್ರಾನ್ ನಡೆಸಿಕೊಡುವರೇ? ಅವರ ಗೆಲುವು ರಾಜಕೀಯ ಸ್ಥಿರತೆಯನ್ನೂ ತಂದೀತೇ ಅಥವಾ ಸೇನೆಯ ತಾಳಕ್ಕೆ ಕುಣಿಯದೆ ಮತ್ತೊಂದು ಮಧ್ಯಂತರ ಚುನಾವಣೆಗೆ ದಾರಿ ಮಾಡೀತೇ? ಕಾದು ನೋಡಬೇಕು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !