ಬುಧವಾರ, ಡಿಸೆಂಬರ್ 1, 2021
22 °C

ಬ್ಲೂಟೂತ್ ಸ್ಪೀಕರ್ ಜೋಡಿ

ಯು.ಬಿ. ಪವನಜ   Updated:

ಅಕ್ಷರ ಗಾತ್ರ : | |

ಮೋನೋ ವಿಧಾನ ಅಥವಾ ಸ್ಟೀರಿಯೊ ವಿಧಾನ – ಎರಡು ರೀತಿಯಲ್ಲೂ ಬಳಸಬಹುದಾದ ಒಂದು ವಿಶಿಷ್ಟ ಸ್ಪೀಕರ್ ಜೋಡಿ.

ಈ ಅಂಕಣದಲ್ಲಿ ಹಲವು ನಮೂನೆಯ ಸ್ಪೀಕರ್‌ಗಳ ಬಗ್ಗೆ ಬರೆಯಲಾಗಿದೆ. ಮೋನೋ ಮತ್ತು ಸ್ಟೀರಿಯೊ ಬ್ಲೂಟೂತ್ ಸ್ಪೀಕರ್‌ಗಳು, ಕೇಬಲ್ ಮೂಲಕ ಜೋಡಿಸಬಹುದಾದವುಗಳು. ಬ್ಲೂಟೂತ್ ಮತ್ತು ಕೇಬಲ್ ಮೂಲಕ ಎರಡು ವಿಧಾನದಲ್ಲೂ ಜೋಡಿಸಬಹುದಾದವು. ಅತಿ ದುಬಾರಿಯ ಬೋಸ್ ಸ್ಪೀಕರ್ ಇತ್ಯಾದಿ. ಈ ಸಲ ಒಂದು ವಿಶಿಷ್ಟ ಸ್ಪೀಕರ್ ಜೋಡಿಯ ಕಡೆ ಗಮನ ಹರಿಸೋಣ. ಝೆಬ್ರೋನಿಕ್ಸ್ ಜೈವ್ ಸ್ಪೀಕರ್ ಜೋಡಿ (Zebronics Jive Bluetooth speaker set).

ಝೆಬ್ರೋನಿಕ್ಸ್ ಕಂಪನಿ ಕಡಿಮೆ ಬೆಲೆಗೆ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವುಗಳಲ್ಲಿ ಪವರ್‌ಬ್ಯಾಂಕ್, ಬ್ಲೂಟೂತ್ ಇಯರ್‌ಫೋನ್, ಬ್ಲೂಟೂತ್ ಸ್ಪೀಕರ್‌ಗಳು ಸೇರಿವೆ. ಅವರ ಉತ್ಪನ್ನಗಳು ಕಡಿಮೆ ಬೆಲೆಯವು; ಮಾತ್ರವಲ್ಲ ಬೆಲೆಗೆ ತಕ್ಕ ಗುಣಮಟ್ಟದವೂ ಆಗಿವೆ. ಅಂದರೆ ಹೇಳಿಕೊಳ್ಳುವಂತಹ ಉತ್ತಮ ಗುಣಮಟ್ಟದವೇನಲ್ಲ. ಆದರೆ ಈ ಜೈವ್ ಸ್ಪೀಕರ್ ಜೋಡಿ ಝೆಬ್ರೋನಿಕ್ಸ್‌ನವರ ಇತರೆ ಸ್ಪೀಕರ್‌ಗಳಿಗಿಂತ ಚೆನ್ನಾಗಿದೆ.

ರಚನೆ ಮತ್ತು ವಿನ್ಯಾಸ ತಕ್ಕಮಟ್ಟಿಗೆ ಚೆನ್ನಾಗಿದೆ. ಸಂಪೂರ್ಣ ಪ್ಲಾಸ್ಟಿಕ್‌ನ ದೇಹವಿದೆ. ಈ ಸ್ಪೀಕರ್‌ಗಳ ವೈಶಿಷ್ಟ್ಯ ಇರುವುದು ಇವನ್ನು ಮೋನೋ ಸ್ಪೀಕರ್ ಆಗಿ ಅಥವಾ ಸ್ಟಿರಿಯೊ ಜೋಡಿ ಆಗಿಯೂ ಬಳಸಬಹುದು ಎಂಬುದು. ಆದರೆ ಒಂದು ಸ್ಪೀಕರ್ ಮಾತ್ರ ಆಗಿ ಕೊಳ್ಳಲು ಲಭ್ಯವಿಲ್ಲ. ಒಂದನ್ನು ಮಾತ್ರ ಆನ್ ಮಾಡಿದರೆ ಅದು ಆಗ ಮೋನೋ ಆಗಿ ಕೆಲಸ ಮಾಡುತ್ತದೆ. ಎರಡನ್ನೂ ಆನ್ ಮಾಡಿ ಒಂದಕ್ಕೊಂದು ಸಂಪರ್ಕ ಮಾಡಿಕೊಂಡು ನಂತರ ಬ್ಲೂಟೂತ್ ಮೂಲಕ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಇತ್ಯಾದಿಗಳಿಗೆ ಜೋಡಿಸಿದರೆ ಆಗ ಅದು ಸ್ಟೀರಿಯೊ ಸ್ಪೀಕರ್ ಜೋಡಿಯಾಗಿ ಕೆಲಸ ಮಾಡುತ್ತದೆ. ಎರಡನ್ನೂ ನಿಮಗೆ ಬೇಕಾದಷ್ಟು ದೂರ ಇಟ್ಟು ಕೊಳ್ಳಬಹುದು. ನಾನು ಸಾಮಾನ್ಯವಾಗಿ ಎಡಕ್ಕೊಂದು ಬಲಕ್ಕೊಂದು ಇಟ್ಟುಕೊಂಡು ಎರಡನ್ನೂ ಸ್ವಲ್ಪ ನನ್ನ ಕಡೆಗೆ ತಿರುಗಿಸಿಕೊಂಡು ಸಂಪೂರ್ಣ ಸ್ಟೀರಿಯೊ ಸಂಗೀತದ ಆನಂದ ಅನುಭವಿಸುತ್ತೇನೆ.

ಪ್ರತಿ ಸ್ಪೀಕರ್ ಪೆಟ್ಟಿಗೆಯ ಒಳಗೂ ಒಂದು ಸ್ಪೀಕರ್‌ ಇದೆ. ಈ ಪೆಟ್ಟಿಗೆಯ ವಿನ್ಯಾಸವು ಸಬ್‌ವೂಫರ್ ಕೆಲಸವನ್ನೂ ಮಾಡುವಂತಿದೆ. ಪ್ರತಿ ಸ್ಪೀಕರಿನಲ್ಲೂ ವಾಲ್ಯೂಮ್ ಅನ್ನು ಹೆಚ್ಚು ಮತ್ತು ಕಡಿಮೆ ಮಾಡಲು ಬಟನ್‌ಗಳಿವೆ. ಎರಡನ್ನೂ ಜೋಡಿ ಮಾಡಿದಾಗ ಯಾವುದಾದರೂ ಒಂದರಲ್ಲಿ ವಾಲ್ಯೂಮ್ ಹೆಚ್ಚು ಅಥವಾ ಕಡಿಮೆ ಮಾಡಿದರೆ ಎರಡರಲ್ಲೂ ಹೆಚ್ಚು ಕಡಿಮೆ ಆಗುತ್ತದೆ.

ಪ್ರತಿ ಸ್ಪೀಕರ್‌ನಲ್ಲೂ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಇದರ ಮೂಲಕ ನಿಮ್ಮ ಮೊಬೈಲ್ ಫೋನ್, ಟ್ಯಾಬ್ಲೆಟ್, ಎಂಪಿ3 ಪ್ಲೇಯರ್, ಲ್ಯಾಪ್‌ಟಾಪ್ ಇತ್ಯಾದಿಗಳಿಗೆ ಜೋಡಿಸಬಹುದು. ಒಂದು ವಿಶೇಷ ಕೇಬಲ್ ನೀಡಿದ್ದಾರೆ. ಅದರ ಒಂದು ತುದಿಯಲ್ಲಿ 3.5 ಮಿ.ಮೀ. ಸ್ಟೀರಿಯೊ ಕನೆಕ್ಟರ್ ಇದೆ. ಅದಕ್ಕೆ ಎರಡು ಕೇಬಲ್ ಜೋಡಿಸಿದ್ದಾರೆ. ಪ್ರತಿ ಕೇಬಲ್‌ನ ತುದಿಯಲ್ಲೂ 3.5 ಮಿ.ಮೀ. ಇಯರ್‌ಫೋನ್ ಕನೆಕ್ಟರ್ ಇದೆ. ಅಂದರೆ ಒಂದು ತುದಿಯನ್ನು ಧ್ವನಿಯ ಆಕರಕ್ಕೆ (ಮೊಬೈಲ್ ಫೋನ್, ಟ್ಯಾಬ್ಲೆಟ್, ಎಂಪಿ3 ಪ್ಲೇಯರ್, ಲ್ಯಾಪ್‌ಟಾಪ್ ಇತ್ಯಾದಿ) ಸೇರಿಸಿ ಇನ್ನೆರಡು ತುದಿಗಳನ್ನು ಪ್ರತಿ ಸ್ಪೀಕರಿಗೆ ಜೋಡಿಸಬಹುದು. ಈ ವಿಧಾನದಲ್ಲಿ ಜೋಡಿಸುವಾಗ ಬ್ಲೂಟೂತ್ ಅಗತ್ಯವಿಲ್ಲ. ಗಣಕ, ಟಿವಿ, ಎಂಪಿ3 ಪ್ಲೇಯರ್, ಇತ್ಯಾದಿಗಳಲ್ಲಿ ಬ್ಲೂಟೂತ್ ಸೌಲಭ್ಯ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ವಿಧಾನದಲ್ಲಿ ಜೋಡಿಸಬಹುದು. ಆದರೆ ಹೀಗೆ ಮಾಡಿದಾಗ ಒಂದೊಂದು ಸ್ಪೀಕರಿಗೆ ಅದರದೇ ವಾಲ್ಯೂಮ್ ಅನ್ನು ಹೆಚ್ಚು ಕಡಿಮೆ ಮಾಡಬಹುದು. ಎರಡರಲ್ಲೂ ಒಂದೇ ಮಟ್ಟದ ವಾಲ್ಯೂಮ್ ಇರುವಂತೆ ನೋಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವಾಗುತ್ತದೆ.

ಧ್ವನಿಯ ಗುಣಮಟ್ಟ ಅಂತಹ ಅದ್ಭುತವೇನೂ ಅಲ್ಲ. ನೀಡುವ ಹಣಕ್ಕೆ ಹೋಲಿಸಿದರೆ ತೃಪ್ತಿದಾಯಕವಾಗಿದೆ ಎಂದು ಹೇಳಬಹುದು. ಹಾಗೆ ನೋಡಿದರೆ ನಾನು ಈ ತನಕ ಬಳಸಿ ನೋಡಿದ ಇತರೆ ಝೆಬ್ರೋನಿಕ್ಸ್ ಸ್ಪೀಕರುಗಳಿಗಿಂತ ಇದು ಚೆನ್ನಾಗಿಯೇ ಇದೆ. ಬಹುಮಟ್ಟಿಗೆ ತೃಪ್ತಿದಾಯಕವಾಗಿಯೇ ಆಲಿಸಬಹುದು.

ಎರಡನ್ನೂ ಪ್ರತ್ಯೇಕವಾಗಿ ಚಾರ್ಜ್ ಮಾಡಿಕೊಳ್ಳಬೇಕು. ಎರಡು ಪ್ರತಿ ಚಾರ್ಜಿಂಗ್ ಕೇಬಲ್ ನೀಡಿದ್ದಾರೆ. ಆದರೆ ಚಾರ್ಜರ್ ನೀಡಿಲ್ಲ. ನಿಮ್ಮಲ್ಲಿರುವ ಯಾವುದೇ ಚಾರ್ಜರ್ ಜೋಡಿಸಿ ಚಾರ್ಜ್ ಮಾಡಬಹುದು. ಎರಡು ಚಾರ್ಜರ್ ಬಳಸಿದರೆ ಒಟ್ಟಿಗೆ ಚಾರ್ಜ್ ಮಾಡಬಹುದು. ಇಲ್ಲವಾದಲ್ಲಿ ಒಂದರ ನಂತರ ಇನ್ನೊಂದನ್ನು ಚಾರ್ಜ್ ಮಾಡಬೇಕು.

ವಾರದ ಆಪ್ (app)
ನಿಮಗೆ ನಿಮ್ಮ ಆ್ಯಂಡ್ರಾಯಿಡ್‌ ಫೋನಿನಲ್ಲಿ ಕನ್ನಡದಲ್ಲಿ ಕುಟ್ಟುವುದು ಕಷ್ಟವಾಗುತ್ತಿದೆಯೇ? ನೀವು ಮಾತನಾಡುತ್ತಿದ್ದಂತೆ ಅದನ್ನು ಪಠ್ಯವನ್ನಾಗಿಸಿದರೆ ಉತ್ತಮ ಎಂದು ಅನ್ನಿಸಿದೆಯೇ? ಹಾಗಿದ್ದರೆ ನಿಮಗೆ ಕನ್ನಡದ ಧ್ವನಿಯಿಂದ ಪಠ್ಯಕ್ಕೆ ಬದಲಿಸುವ ಕಿರುತಂತ್ರಾಂಶ (ಆ್ಯಪ್‌) ಬೇಕು. ಅದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ Kannada Speech To Text Converter ಎಂದು ಹುಡುಕಿ ಅಥವಾ http://bit.ly/gadgetloka339 ಜಾಲತಾಣಕ್ಕೆ ಭೇಟಿ ನೀಡಿ. ಒಂದೊಂದೇ ವಾಕ್ಯವನ್ನು ನಿಧಾನವಾಗಿ ಮಾತನಾಡಿದರೆ ಅದು ನೀವು ಮಾತನಾಡಿದ್ದನ್ನು ಪಠ್ಯವನ್ನಾಗಿಸುತ್ತದೆ. ನಂತರ ಅದನ್ನು ಉಳಿಸಬಹುದು ಅಥವಾ ನಕಲಿಸಿ ಇನ್ಯಾವುದಾದರೂ ಕಿರುತಂತ್ರಾಂಶಕ್ಕೆ (ಉದಾ – ಫೇಸ್‌ಬುಕ್) ಅಂಟಿಸಬಹುದು. ಸಾಮಾನ್ಯ ಪದಗಳನ್ನು ಆರಾಮವಾಗಿ ಪಠ್ಯವನ್ನಾಗಿಸುತ್ತದೆ. ಕ್ಲಿಷ್ಟ ಪದಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.

ಗ್ಯಾಜೆಟ್ ಪದ
Uninstall = ಅಸ್ಥಾಪಿಸು (ಕ್ರಿಯಾಪದ)

ಸ್ಮಾರ್ಟ್‌ಫೋನ್‌ಗಳಲ್ಲಿ ಕಿರುತಂತ್ರಾಂಶಗಳನ್ನು (ಆ್ಯಪ್‌) ಬಳಸಲು ಅನುವು ಮಾಡಿಕೊಡಲು ಸಹಾಯವಾಗುವಂತೆ ಅದನ್ನು ಕಾರ್ಯಾಚರಣ ವ್ಯವಸ್ಥೆಗೆ ಸೇರಿಸುವ ಕ್ರಿಯೆಗೆ ಅನುಸ್ಥಾಪನೆ ಎಂದು ಹೆಸರು. ಈ ಕ್ರಿಯೆಗೆ ವಿರುದ್ಧವಾದ ಕ್ರಿಯೆಯೇ ಅಸ್ಥಾಪನೆ. ಲೇಖನದಲ್ಲಿ ಈ ರೀತಿ ಬರೆಯಬಹುದು – ನಿಮ್ಮ ಮೊಬೈಲ್ ಫೋನಿನಿಂದ ಟ್ರೂಕಾಲರ್ ಕಿರುತಂತ್ರಾಂಶವನ್ನು ಅಸ್ಥಾಪಿಸಿ.

ಗ್ಯಾಜೆಟ್ ತರ್ಲೆ
ಈಗಿನ ಕಾಲದ ಎಲ್ಲ ವಿದ್ಯಾರ್ಥಿಗಳು ಮತ್ತು ಹಲವು ಅಧ್ಯಾಪಕರು ಸ್ಮಾರ್ಟ್‌ಫೋನ್ ಮತ್ತು ವಾಟ್ಸ್‌ಆ್ಯಪ್‌ ಬಳಸುತ್ತಾರೆ. ಯಾವ ವಿದ್ಯಾರ್ಥಿ ತಮ್ಮ ತರಗತಿಯಲ್ಲಿ ಮೊಬೈಲ್ ಫೋನ್ ಬಳಸಿದ್ದಾರೆ ಎಂದು ತಿಳಿಯಲು ಅಧ್ಯಾಪಕರೊಬ್ಬರು ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾರೆ. ಕ್ಲಾಸಿನ ಒಳಗೆ ಹೋಗುವ ಮೊದಲು ತಮ್ಮ ಸ್ಥಿತಿಯನ್ನು (status) ವಾಟ್ಸ್ಆ್ಯಪ್‌ ನವೀಕರಿಸಿ ಒಳಗೆ ಹೋಗುತ್ತಾರೆ. ಕ್ಲಾಸಿನ ಕೊನೆಗೆ ಯಾರೆಲ್ಲ ತಮ್ಮ ಸ್ಥಿತಿಯನ್ನು ನೋಡಿದ್ದಾರೆ ಎಂದು ನೋಡುತ್ತಾರೆ. ಕ್ಲಾಸಿನೊಳಗೆ ಯಾರೆಲ್ಲ ಮೊಬೈಲ್ ಫೋನ್ ಬಳಸಿದ್ದಾರೆ ಎಂದು ಅವರಿಗೆ ಆಗ ತಿಳಿಯುತ್ತದೆ!

ಗ್ಯಾಜೆಟ್ ಸಲಹೆ
ಚಂದ್ರಶೇಖರ ಅವರ ಪ್ರಶ್ನೆ: ಆಡಿಯೊ ಕ್ಯಾಸೆಟ್‌ಗಳನ್ನು ಸಿ.ಡಿ. ಅಥವಾ ಪೆನ್‌ಡ್ರೈವ್‌ಗೆ ಪರಿವರ್ತಿಸುವುದು ಹೇಗೆ? ಅಮೆಝಾನ್, ಫ್ಲಿಪ್‌ಕಾರ್ಟ್‌ಗಳಲ್ಲಿ ಅಂತಹ ಸಾಧನಗಳನ್ನು ನೋಡಿದೆ. ಅವುಗಳನ್ನು ಕೊಳ್ಳಬಹುದೇ?
ಉ: ಈ ಬಗ್ಗೆ ಗ್ಯಾಜೆಟ್‌ಲೋಕದ ನವೆಂಬರ್ 15, 2012ರ ಸಂಚಿಕೆಯಲ್ಲಿ ಬರೆದಿದ್ದೆ. ನನ್ನಲ್ಲಿರುವ ಐಯಾನ್ ಆಡಿಯೊ (Ion Audio) ಸಾಧನವನ್ನು ಬಳಸಿ ಕ್ಯಾಸೆಟ್‌ನಲ್ಲಿರುವ ಧ್ವನಿಯನ್ನು ಎಂಪಿ3 ಫೈಲ್ ಆಗಿ ಪರಿವರ್ತಿಸುವುದು ಹೇಗೆ ಎಂದು ವಿಸ್ತಾರವಾಗಿ ಬರೆದಿದ್ದೆ. ನೀವು Ion Audio Tape Express ಕೊಳ್ಳಬಹುದು. ಇದು ಈಗ ಭಾರತದ ಅಮೆಝಾನ್‌ನಲ್ಲೂ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು