ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಶಿವದೀಕ್ಷೆ ಪಡೆದು ಕೇಳಬೇಕು

ಅಕ್ಷರ ಗಾತ್ರ

ಸೂತಮುನಿಯಿಂದ ಶಿವಪುರಾಣವನ್ನ ಶ್ರವಣ ಮಾಡುವ ವಿಧಿ-ವಿಧಾನಗಳನ್ನು ಕೇಳಿದ ನಂತರ, ಶೌನಕಮುನಿಯ ಶಿವಪುರಾಣದ ನಿಯಮಗಳನ್ನು ತಿಳಿಸುವಂತೆ ಕೋರುತ್ತಾನೆ. ಆಗ ಸೂತಮುನಿಯು ಶಿವಪುರಾಣದ ನಿಯಮಗಳನ್ನು ಹೀಗೆ ಹೇಳುತ್ತಾನೆ:

ಶಿವಪುರಾಣವನ್ನು ನಿಯಮದಂತೆ ಕೇಳಿದರೆ ಉತ್ತಮವಾದ ಫಲ ಸಿಗುವುದು. ಸರಿಯಾದ ನಿಯಮ ಅನುಸರಿಸದೆ ಕೇಳಿದರೆ ನಿಷ್ಫಲವಾಗುವುದು. ಇದಕ್ಕಾಗಿ ಶಿವಪುರಾಣ ಕೇಳುವ ಮುನ್ನಾ ಶಿವದೀಕ್ಷೆ ತೆಗೆದುಕೊಳ್ಳಬೇಕು. ಶಿವದೀಕ್ಷೆ ಪಡೆಯದೆ ಜನರಿಗೆ ಪುರಾಣ ಕೇಳಲು ಅವಕಾಶವಿಲ್ಲ. ಆದುದರಿಂದ ಪುರಾಣವನ್ನು ಕೇಳ ಬಯಸುವವರು ಕಥೆ ಹೇಳುವ ಪುರಾಣಿಕನಿಂದ ಶಿವದೀಕ್ಷೆ ತೆಗೆದುಕೊಳ್ಳಬೇಕು. ಇದರ ಜೊತೆಗೆ ಪುರಾಣ ಕೇಳಲು ಅನೇಕ ನಿಯಮಗಳನ್ನು ಪಾಲಿಸಬೇಕು. ಅವುಗಳಲ್ಲಿ ಬ್ರಹ್ಮಚರ್ಯಪಾಲನೆಯೂ ಒಂದು. ಶಿವಪುರಾಣವನ್ನು ಸಂಪೂರ್ಣವಾಗಿ ಕೇಳುವವರೆಗೂ ಹಾಸಿಗೆ, ಚಾಪೆ, ಬಟ್ಟೆ ಮೇಲೆ ಮಲಗದೆ ಬರೀ ನೆಲದ ಮೇಲೆ ಮಲಗಬೇಕು. ತಟ್ಟೆಯಲ್ಲಿ ಊಟ ಮಾಡದೆ, ಎಲೆಯಲ್ಲಿ ಊಟ ಮಾಡಬೇಕು. ಹಾಗೆಯೇ, ಕಥೆಯನ್ನು ಕೇಳಿದಮೇಲೆ ಮಾತ್ರ ಊಟಮಾಡಬೇಕು.

ಪುರಾಣವು ಮುಗಿಯುವವರೆಗೂ ಉಪವಾಸವಿರಲು ಶಕ್ತನಾದವನು ಉಪವಾಸವಿದ್ದು, ಶುಚಿಯಾಗಿ ಭಕ್ತಿಯಿಂದ ಶಿವಪುರಾಣವನ್ನು ಕೇಳಬೇಕು. ಉಪವಾಸವಿರಲು ಅಶಕ್ತನಾದವನು ತುಪ್ಪ ತಿಂದೋ ಅಥವಾ ಹಾಲನ್ನು ಕುಡಿದು ಪುರಾಣವನ್ನು ಕೇಳಬಹುದು. ಈ ರೀತಿಯ ಉಪವಾಸ ಮಾಡಲು ಶಕ್ತನಲ್ಲದವನು, ಫಲಾಹಾರವನ್ನಾದರೂ ಸೇವಿಸಿ ಪುರಾಣ ಕೇಳಬಹುದು. ಹಾಗೆ ಮಾಡಲೂ ಅಸಮರ್ಥನಾದವನು ಒಂದು ಹೊತ್ತು ಊಟವನ್ನು ಮಾಡಿ ಶಿವಪುರಾಣವನ್ನು ಕೇಳುವುದನ್ನು ಮುಂದುವರೆಸಬಹುದು. ಶಿವಪುರಾಣವನ್ನು ಕೇಳುವವರು ಒಂದು ಸಾರಿ ಹವಿಷ್ಯಾನ್ನವನ್ನು ತೆಗೆದುಕೊಳ್ಳಬಹುದು. ಸಾವಧಾನವಾಗಿ ಪುರಾಣ ಕೇಳಲು ಸಾಧ್ಯವಾಗುವಷ್ಟು ಮಾತ್ರ ಆಹಾರವನ್ನು ತೆಗೆದುಕೊಳ್ಳಬಹುದು. ಉಪವಾಸವಿದ್ದು ಪುರಾಣವನ್ನು ಕೇಳಲು ಕಷ್ಟವಾದರೆ, ಊಟಮಾಡಿ ಕೇಳುವುದೇ ಉತ್ತಮ. ಉಪವಾಸದ ಸಂಕಟದಿಂದ ಕೇಳಿದರೆ, ಶಿವಪುರಾಣದ ಸಾರ ಸರಿಯಾಗಿ ಅರ್ಥೈಸಲು ಕಷ್ಟವಾಗುತ್ತದೆ. ಆದರೆ ತಿನ್ನುವ ಆಹಾರದಲ್ಲಿ ಮಾತ್ರ ದ್ವಿದಳಧಾನ್ಯವಾಗಿರುವ ಅವರೆ ಮತ್ತು ಮಸೂರಿಕಾಗಳನ್ನು ಬೇಯಿಸಿ ತಿನ್ನಬಾರದು. ಪುರಾಣವನ್ನು ಕೇಳುವವರ ಮನಸ್ಸಿನ ಭಾವನೆ ವ್ಯತ್ಯಾಸವಾಗುವಂತಹ ಆಹಾರವನ್ನಾಗಲಿ, ತಂಗಳು ಪದಾರ್ಥವನ್ನಾಗಲಿ ತಿನ್ನಬಾರದು. ಬದನೆಕಾಯನ್ನೂ ಕೊಡಶೀಹಣ್ಣನ್ನೂ ಸೋರೇಕಾಯನ್ನೂ ಮೂಲಂಗಿಯನ್ನೂ ಕುಂಬಳಕಾಯನ್ನೂ ತೆಂಗಿನಕಾಯನ್ನೂ ತಿನ್ನುವ ಆಹಾರದಲ್ಲಿ ಉಪಯೋಗಿಬಾರದು. ಹಾಗೇ, ಈರುಳ್ಳಿ, ಬೆಳ್ಳುಳ್ಳಿ, ಇಂಗು, ಗಾಂಜಾ ಮೊದಲಾದ ಮಾದಕಪದಾರ್ಥಗಳನ್ನು ಸಹ ಸೇವಿಸಬಾರದು. ನಿಷಿದ್ದ ಆಹಾರಗಳನ್ನು ಸೇವಿಸಿ ಶಿವಪುರಾಣ ಕೇಳಬಾರದು.

ಶಿವಪುರಾಣ ಕೇಳುವವರು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಆರು ವಿಕಾರಗಳನ್ನು ಬಿಟ್ಟಿರಬೇಕು. ಬ್ರಾಹ್ಮ, ಕ್ಷಾತ್ರ, ವೈಶ್ಯ, ಶೂದ್ರರನ್ನು ನಿಂದಿಸಬಾರದು. ಪತಿವ್ರತೆಯರನ್ನೂ ಸತ್ಪುರುಷರನ್ನೂ ಹೀಯಾಳಿಸಬಾರದು. ಸಜ್ಜನರನ್ನು ದ್ವೇಷಿಸುವವನೊಡನೆ ಮತ್ತು ವೇದಮಾರ್ಗವನ್ನು ಬಿಟ್ಟು ನಡೆಯುತ್ತಿರುವವನೊಡನೆಯೂ ಮಾತನಾಡಬಾರದು. ಶಿವಪುರಾಣವನ್ನು ಕೇಳುವವನು ಸತ್ಯವನ್ನು ನುಡಿಯುವವನಾಗಿರಬೇಕು. ಶುದ್ಧನಾಗಿರಬೇಕು. ದಯಾಶೀಲನಾಗಿರಬೇಕು. ಸಾಧ್ಯವಾದಷ್ಟು ಮೌನವನ್ನವಲಂಬಿಸಬೇಕು. ಮೃದುವಾಗಿಯೂ ನಮ್ರನಾಗಿಯೂ, ಉದಾರ ಮನಸ್ಸಿನವನಾಗಿರಬೇಕು.

ಹೀಗೆ ಶಿವಪುರಾಣದ ನಿಯಮಗಳನ್ನು ಪಾಲಿಸುತ್ತಾ ಯಾರು ಪುರಾಣವನ್ನು ಶ್ರದ್ಧಾ-ಭಕ್ತಿಯಿಂದ ಕೇಳುವರೋ, ಅಂತಹವರ ಫಲಾಪೇಕ್ಷೆಗಳು ಈಡೇರುವುವು. ಯಾವ ಫಲಾಪೇಕ್ಷೆಯಿಲ್ಲದವರಿಗೆ ಸಂಪೂರ್ಣ ಮೋಕ್ಷ ಸಿಗುವುದು. ಶಿವಪುರಾಣವನ್ನು ಶಾಸ್ತ್ರೋಕ್ತವಾಗಿ ನಿಯಮಬದ್ದವಾಗಿ ಕೇಳಿದವರು ಒಂದು ಕಲ್ಪಕಾಲ ಬ್ರಹ್ಮಸ್ಥಾನವನ್ನು ಪಡೆದು, ಅನಂತರ ಈಶ್ವರನ ಸ್ಥಾನಕ್ಕೆ ಹೋಗುವರು ಎಂದು ಸೂತಮುನಿಯು ಶಿವಪುರಾಣ ಕೇಳುವ ನಿಯಮಗಳನ್ನು ಶೌನಕಮುನಿಗೆ ತಿಳಿಸುತ್ತಾನೆ. ಆಗ ಶೌನಕಮುನಿ ಧನ್ಯತಾಭಾವದಿಂದ ‘ಎಲೈ ಮುನಿಶ್ರೇಷ್ಠನೇ, ನಿನ್ನ ದಯೆಯಿಂದ ಶಿವಪುರಾಣ ಕೇಳಿ ನಾನು ಧನ್ಯನಾದೆ. ಪರಮೇಶ್ವರನು ತಮೋಗುಣರಹಿತನಾದ ಅವ್ಯಕ್ತಸ್ವರೂಪನು. ತನ್ನ ಅಸಾಧಾರಣ ಮಹಿಮೆಯಿಂದ ಪ್ರಪಂಚದ ಹೊರಗೂ ಒಳಗೂ ಪ್ರಕಾಶಿಸುತ್ತಿರುವನು. ಭಕ್ತರ ಮನಸ್ಸಿನ ಒಳಗೆ ಸಚ್ಚಿದಾನಂದ ಸ್ವರೂಪನಾಗಿ, ಮನಸ್ಸಿನ ಹೊರಗೆ ವಾಕ್ ಸ್ವರೂಪನಾಗಿ ಇರುವ ಪರಶಿವನನ್ನು ಭಕ್ತಿಯಿಂದ ಧ್ಯಾನ ಮಾಡುವೆನು‘ ಎನ್ನುತ್ತಾನೆ, ಶೌನಕಮುನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT