ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಭ ನಿವಾರಿಸುವ ರೀತಿ

Last Updated 23 ಅಕ್ಟೋಬರ್ 2018, 18:44 IST
ಅಕ್ಷರ ಗಾತ್ರ

ವಾರಾಣಸಿಯಲ್ಲಿ ಕೋಸಿಯ ಶ್ರೇಷ್ಠಿ ಎಂಬುವವನು ಎಂಭತ್ತು ಕೋಟಿ ಸಂಪತ್ತಿಗೆ ಒಡೆಯನಾಗಿದ್ದ. ಅವನು ಅತ್ಯಂತ ಜಿಪುಣ. ಮನೆಯ ಕಸವನ್ನೂ ಹೊರಗೆ ಎಸೆಯುವವನಲ್ಲ. ತಾನೂ ತಿನ್ನುವವನಲ್ಲ. ಒಂದು ದಿನ ಅರಮನೆಗೆ ಹೋಗಿ ಬರುವಾಗ ದಾರಿಯಲ್ಲೊಬ್ಬ ಕಜ್ಜಾಯ ತಿನ್ನುವುದನ್ನು ಕಂಡ. ಅವನಿಗೂ ತಿನ್ನುವ ಆಸೆಯಾಯಿತು. ಆದರೆ ಆಸೆ ಪೂರೈಸಬೇಕಾದರೆ ಖರ್ಚಾಗುತ್ತದಲ್ಲ? ಹಾಗೆಯೇ ಆಸೆಯನ್ನು ಅದುಮಿಕೊಂಡು ಕುಳಿತ. ಒಳಗಿದ್ದ ಆಸೆ ಪ್ರಬಲವಾಗಿ ರೋಗವೇ ಆಯಿತು.

ಹೆಂಡತಿ ಆತಂಕದಿಂದ ಕೆದಕಿ, ಕೇಳಿದಾಗ ತನ್ನ ಆಸೆಯನ್ನು ಹೇಳಿದ. ಆಕೆ, ‘ಅಯ್ಯೋ ಅದಕ್ಕೇಕೆ ಇಷ್ಟು ಚಿಂತೆ? ಇಡೀ ಊರಿಗೇ ಆಗುವಷ್ಟು ಮಾಡಿ ಹಾಕುತ್ತೇನೆ’ ಎಂದಳು. ಆತ, ‘ನನಗೆ ಅದೇ ಭಯ, ಮಾಡುವುದಿದ್ದರೆ ನನಗೊಬ್ಬನಿಗೇ ಮಾಡು. ನೀನೂ ತಿನ್ನಬೇಡ. ನಮ್ಮ ಮನೆಯ ಏಳನೆಯ ಅಂತಸ್ತಿನಲ್ಲಿ ನನ್ನ ಕಜ್ಜಾಯಕ್ಕೆ ಬೇಕಾದಷ್ಟೇ ಸಾಮಗ್ರಿಗಳನ್ನು ಕೊಂಡೊಯ್ದು ಮಾಡು. ನಾನೂ ಅಲ್ಲಿಗೇ ಬರುತ್ತೇನೆ. ಅಡಿಗೆಯ ವಾಸನೆಯೂ ಬೇರೆಯವರಿಗೆ ಬರುವುದು ಬೇಡ’ ಎಂದ. ಆಕೆ ಹಾಗೆಯೇ ಮಾಡಿದಳು.

ಅದೇ ಸಮಯಕ್ಕೆ ಬುದ್ಧ ಕರುಣಾ ಸಮಾಪತ್ತಿಯಿಂದ ನೋಡುವಾಗ ಈ ಶ್ರೇಷ್ಠಿಯ ಜಿಪುಣತನ ಕಳೆದರೆ ಆತ ಜ್ಞಾನವನ್ನು ಪಡೆಯುತ್ತಾನೆ ಎಂದು ಅರಿತು ತನ್ನ ಶಿಷ್ಯನಾದ ಮೊಗ್ಗಲ್ಲಾನ ಸಂತನನ್ನು ಕರೆದು, ‘ಜಿಪುಣಾಗ್ರೇಸರ ಕೋಸಿಯ ಶ್ರೇಷ್ಠಿಯನ್ನು ಅವನ ಹೆಂಡತಿಯ ಸಹಿತ ಕರೆದುಕೊಂಡು ಬಾ. ಅವನು ಐದು ನೂರು ಜನ ಆಶ್ರಮವಾಸಿಗಳಿಗೆ ಆಗುವಷ್ಟು ಕಜ್ಜಾಯ ತರುವಂತೆ ಮಾಡು’ ಎಂದ. ಆತ ತನ್ನ ಶಕ್ತಿಯಿಂದ ಆಕಾಶದಲ್ಲಿ ಹಾರುತ್ತ ಶ್ರೇಷ್ಠಿಯ ಅರಮನೆಯ ಏಳನೇ ಅಂತಸ್ತಿಗೆ ಬಂದು ಕಿಟಕಿಯಲ್ಲಿ ನಿಂತ. ಅವನನ್ನು ನೋಡಿ ಶ್ರೇಷ್ಠಿ ಹೌಹಾರಿದ. ಯಾರೂ ಬರಬಾರದೆಂತಲೇ ಆತ ಈ ವ್ಯವಸ್ಥೆ ಮಾಡಿಕೊಂಡಿದ್ದ. ‘ಅಯ್ಯಾ ಥೇರ (ಸನ್ಯಾಸಿ), ನೀನು ಏನು ಮಾಡಿದರೂ ನಿನಗೆ ಕಜ್ಜಾಯ ಕೊಡಲಾರೆ, ಹೋಗು’ ಎಂದ. ಥೇರ ಮುಗುಳ್ನಗುತ್ತ ಅಲ್ಲಿಯೇ ನಿಂತು, ‘ನೀನು ಮತ್ತು ನಿನ್ನ ಹೆಂಡತಿ ಐನೂರು ಜನರಿಗಾಗುವಷ್ಟು ಕಜ್ಜಾಯ ತೆಗೆದುಕೊಂಡು ಚೇತವನಕ್ಕೆ ಬಾ. ಬುದ್ಧರು ನಿಮಗಾಗಿ ಕಾಯುತ್ತಿದ್ದಾರೆ’ ಎಂದ. ಇವನಿಗೆ ಮತ್ತಷ್ಟು ಸಂಕಟವಾಯಿತು.

ಹೆಂಡತಿಗೆ ಹೇಳಿದ, ‘ಈತ ಹೋಗಲಾರ, ಒಂದು ಅತ್ಯಂತ ಚಿಕ್ಕದಾದ ಕಜ್ಜಾಯ ಮಾಡಿ ಈತನಿಗೆ ಕೊಟ್ಟು ಕಳುಹಿಸು’. ಆಕೆ ಒಂದು ಚೂರು ಹಿಟ್ಟನ್ನು ಕಡಾಯಿಗೆ ಹಾಕಿದಾಕ್ಷಣ ಅದು ಅರಳಿ ಕಡಾಯಿ ತುಂಬಿತು. ಶ್ರೇಷ್ಠಿ ಅದರಲ್ಲಿ ಒಂದು ಚೂರನ್ನು ಕತ್ತರಿಸಿದಾಗ ಅದು ಮತ್ತೆ ಬೆಳೆಯಿತು. ‘ಆಯ್ತು, ಒಂದು ಪೂರ್ತಿ ಕಜ್ಜಾಯವನ್ನೇ ಅವನಿಗೆ ಕೊಟ್ಟು ಬಿಡು’ ಎಂದ ಶ್ರೇಷ್ಠಿ. ಆಕೆ ತೆಗೆಯಲು ಹೋದಾಗ ಎಲ್ಲ ಕಜ್ಜಾಯಗಳು ಒಂದಕ್ಕೊಂಡು ಅಂಟಿಕೊಂಡು ಬಿಡಿಸಲಾಗಲಿಲ್ಲ. ಶ್ರೇಷ್ಠಿಯೂ ಬಿಡಿಸಲು ಗುದ್ದಾಡಿದ. ಆಗಲಿಲ್ಲ. ತಲೆ ಕೆಟ್ಟು ಹೋಯಿತು. ‘ಆಗಲಿ, ಇಡೀ ಬುಟ್ಟಿಯನ್ನೇ ಕೊಟ್ಟು ಬಿಡು’ ಎಂದ. ಆಗ ಥೇರ, ‘ಹೇಗೂ ಕೊಡುತ್ತಿದ್ದೀಯಾ, ನೀನು ಹೆಂಡತಿಯೊಂದಿಗೆ ಬಂದು ಬುದ್ಧರಿಗೇ ಕೊಟ್ಟು ಬಿಡು. ನಾನು ನಿಮ್ಮನ್ನು ಶಕ್ತಿಯಿಂದ ಕ್ಷಣದಲ್ಲೇ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ’ ಎಂದ. ಅದನ್ನು ಒಪ್ಪಿ ದಂಪತಿ ಕಜ್ಜಾಯದ ಬುಟ್ಟಿಯೊಂದಿಗೆ ಥೇರನ ಜೊತೆಗೆ ಬಂದು ಬುದ್ಧನನ್ನು ಕಂಡರು. ಬುದ್ಧ ಕಜ್ಜಾಯವನ್ನು ಎಲ್ಲರಿಗೂ ಹಂಚಿದ. ಆಶ್ಚರ್ಯ ಎಷ್ಟು ಹಂಚಿದರೂ ಕಜ್ಜಾಯಗಳು ಮುಗಿಯಲೇ ಇಲ್ಲ. ಅದನ್ನು ನೋಡುತ್ತಲೇ ನಿಂತಿದ್ದ ಶ್ರೇಷ್ಠಿಗೆ ತನ್ನ ಲೋಭದ ಬಗ್ಗೆ ಜುಗುಪ್ಸೆ ಬಂದಿತು. ಯಾವುದೇ ಸಾಮಗ್ರಿ ಇಲ್ಲದೆ ಬುದ್ಧ ಇಷ್ಟು ಕಜ್ಜಾಯಗಳನ್ನು ಸೃಷ್ಟಿಸುವುದಾದರೆ, ಆತನಿಗೆ ತಮ್ಮ ಕಜ್ಜಾಯದಲ್ಲಿ ಯಾವ ಆಸಕ್ತಿಯೂ ಇಲ್ಲ, ಇದೆಲ್ಲ ತನ್ನಲ್ಲಿದ್ದ ಲೋಭವನ್ನು ತೆಗೆಯಲು ಮಾಡಿದ ಕಾರ್ಯ ಎಂದು ಅರಿವಾಗಿ, ತನ್ನ ಎಂಭತ್ತು ಕೋಟಿ ಸಂಪತ್ತನ್ನು ಬುದ್ಧನ ಚರಣಗಳಿಗರ್ಪಿಸಿ, ಜ್ಞಾನಿಯಾಗಿ ಬದುಕು ಸವೆಸಿದ.

ಬುದ್ಧ ಹೇಳಿದ, ‘ಗೃಹಸ್ಥನ ಮನಸ್ಸನ್ನು ಬದಲಿಸಬೇಕಾದರೆ, ಮನದಲ್ಲಿಯ ಲೋಭ, ಮೋಹ, ಅಹಂಕಾರಗಳನ್ನು ತೆಗೆಯಬೇಕಾದರೆ, ದುಂಬಿ ಹೇಗೆ ಹೂವಿನ ಬಣ್ಣ, ರೂಪ ಹಾಗೂ ಗಂಧಕ್ಕೆ ತೊಂದರೆಯಾಗದಂತೆ ಮಕರಂದವನ್ನು ಹೀರಿಬಿಡುತ್ತದೆಯೊ, ಹಾಗೆಯೇ ದುರ್ಗುಣಗಳನ್ನು ಹೀರಿಬಿಡಬೇಕು’. ಅದು ಧರ್ಮಗುರುಗಳು, ನಾಯಕರು ಮಾಡಬೇಕಾದ ಕಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT