ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ: ಈಗ ‘ರಾಜಕೀಯ ವೈರಸ್‌’ ಸರದಿ

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ‘ವಿಚಾರಗಳ ಬರ’ ಎದುರಾಗಿದೆಯೇ?
Last Updated 22 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಕೋವಿಡ್-19ರ ಮೂರನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವಂತೆಯೇ ರಾಜಕೀಯ ವೈರಸ್‌ವೊಂದು ರಾಜ್ಯದ ಉದ್ದಗಲಕ್ಕೆ ಹರಡುತ್ತಿರುವಂತೆ ಭಾಸವಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಅದು ದೊಡ್ಡದಾಗಿ ಪ್ರತಿಧ್ವನಿಸುತ್ತಿದೆ. ಕಳೆದ ತಿಂಗಳ ಎರಡು ಪ್ರಮುಖ ಬೆಳವಣಿಗೆಗಳು ಹಾಗೂ ರಾಜ್ಯ ರಾಜಕಾರಣದಲ್ಲಿ ಅದರ ವಿಸ್ತೃತ ಧ್ವನಿತಾರ್ಥಗಳನ್ನು ಈ ಲೇಖನ ವಿಶ್ಲೇಷಿಸಲಿದೆ.

ಸ್ವಲ್ಪ ಹಿಂದೆ ನಡೆದ ಘಟನೆಯಿಂದ ಆರಂಭಿಸಿ ನಂತರ ಇತ್ತೀಚಿನದಕ್ಕೆ ಬರೋಣ. ಸಾಂಕ್ರಾಮಿಕದ ಮೂರನೇ ಅಲೆ ಸಂದರ್ಭದಲ್ಲಿನ ಪ್ರಮುಖ ರಾಜಕೀಯ ವಿದ್ಯಮಾನ ಎಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಮ್ಮಿಕೊಂಡ ಪಾದಯಾತ್ರೆ. ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಇರುವ ಜಲ ವಿವಾದದ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ‘ನೀರಿಗಾಗಿ ನಡಿಗೆ’ ಎಂದು ಕರೆಯಲಾಗುತ್ತದೆ. ರಾಜ್ಯದಲ್ಲಿ ‘ಪಾದಯಾತ್ರೆ ರಾಜಕೀಯ’ದ ಇತಿಹಾಸವನ್ನು ಗಮನಿಸಿದಲ್ಲಿ, ಸರ್ಕಾರ ವನ್ನು ತುದಿಗಾಲಲ್ಲಿ ನಿಲ್ಲಿಸುವ ಸುವರ್ಣಾವಕಾಶವನ್ನು ಕೆಪಿಸಿಸಿ ಅಧ್ಯಕ್ಷರು ಕಂಡುಕೊಂಡರು. ಈ ಪ್ರಕ್ರಿಯೆಯಲ್ಲಿ, ರಾಜ್ಯದಲ್ಲಿ ಚುನಾವಣೆ ನಡೆಯಲು ಇನ್ನೂ ಒಂದೂಕಾಲು ವರ್ಷ ಇರುವಾಗಲೇ ರಾಜಕೀಯ ಉಪಕ್ರಮಕ್ಕೆ ನಾಂದಿ ಹಾಡಿದರು.

ಸಾಂಕ್ರಾಮಿಕದ ಮೂರನೇ ಅಲೆ ಇದ್ದಾಗ ರಾಜ್ಯ ದಾದ್ಯಂತ ಹಲವು ದಿನಗಳ ಅವಧಿಗೆ ವಿಸ್ತರಿಸಿಕೊಂಡ ಸಾರ್ವಜನಿಕ ಕಾರ್ಯಕ್ರಮವೊಂದನ್ನು ನಡೆಸುವುದು ಸೂಕ್ತವೇ ಎಂಬ ಬಗ್ಗೆ ಮೊದಲ ದಿನದಿಂದಲೇ ಪ್ರಶ್ನೆಗಳನ್ನು ಎತ್ತಲಾಗಿತ್ತು. ಅಂತಹ ಕಾರ್ಯಕ್ರಮಗಳ ಬಗ್ಗೆ ಏನೇ ಮುಂಜಾಗ್ರತೆ ತೆಗೆದುಕೊಂಡರೂ ಆ ಸಂದರ್ಭದ ನಡಿಗೆ, ಅದರಲ್ಲಿ ತೊಡಗಿಕೊಂಡವರು ಹಾಗೂ ಭಾಗವಹಿಸಿದವರ ಆರೋಗ್ಯದ ಮೇಲೆ ಉಂಟುಮಾಡುವ ಪ್ರತಿಕೂಲ ಪರಿಣಾಮಗಳ ಸಾಧ್ಯತೆಗಳನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.

ನಿರೀಕ್ಷಿಸಿದಂತೆಯೇ, ಈ ಪಾದಯಾತ್ರೆಯು ಬಹಳಷ್ಟು ರಾಜಕೀಯ ವಿವಾದವನ್ನು ಸೃಷ್ಟಿಸಿತು. ಸಾಂಕ್ರಾಮಿಕ ಹಾಗೂ ಅದರ ಪರಿಣಾಮವನ್ನು ಕೆಪಿಸಿಸಿ ಅಧ್ಯಕ್ಷರು ಹಗುರವಾಗಿ ತೆಗೆದುಕೊಂಡರು. ಸರ್ಕಾರದ ಅಧಿಕಾರಿಗಳು ಮನವಿ ಮಾಡಿದರೂ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಅವರು ತಿರಸ್ಕರಿಸಿದರು. ಅವರ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಕೆಲವರು ಕೋವಿಡ್ ಸೋಂಕಿತರಾಗಿ ಪಾದಯಾತ್ರೆಯಿಂದ ದೂರ ಉಳಿದರು. ಅಂತಿಮವಾಗಿ, ಕೋವಿಡ್- 19 ಸಂಬಂಧಿತ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶ ಅಗತ್ಯವಾಯಿತು. ಪಾದಯಾತ್ರೆಯನ್ನು ಇಚ್ಛೆಯಿಲ್ಲದೇತಾತ್ಕಾಲಿಕವಾಗಿ ನಿಲ್ಲಿಸಿದ ಕಾಂಗ್ರೆಸ್, ಆರೋಗ್ಯ ಸ್ಥಿತಿ ಸುಧಾರಿಸಿದ ಮೇಲೆ ಮತ್ತೆ ಮುಂದುವರಿಸುವುದಾಗಿ ಹೇಳಿತು. ಎರಡನೇ ಹಂತದ ಐದು ದಿನಗಳ ಅವಧಿಯ ಪಾದಯಾತ್ರೆಗೆ ಈ ತಿಂಗಳ 27ರಿಂದ ಚಾಲನೆ ದೊರೆಯಲಿದೆ ಎಂದು ಸಂಘಟಕರು ಈಗ ಪ್ರಕಟಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ನೇತೃತ್ವದ ಪಾದಯಾತ್ರೆ ಎರಡು ಉದ್ದೇಶಗಳನ್ನು ಸಾಧಿಸಿತು ಎಂಬುದರಲ್ಲಿ ಅನು ಮಾನವಿಲ್ಲ. ಮೊದಲನೆಯದು, ಪಕ್ಷದ ಕಾರ್ಯಕರ್ತರಿಗೆ ಹುರುಪು ತುಂಬಿದಂತೆ ಕಾಣುತ್ತದೆ. ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದುಕೊಂಡೂ ವಾಸ್ತವವಾಗಿ ಹೆಚ್ಚಿನ ರಾಜಕೀಯ ಚಟುವಟಿಕೆಗಳು ಕಂಡುಬರುತ್ತಿರಲಿಲ್ಲ. ಪಾದಯಾತ್ರೆಯು, ಅದು ಮುಂದುವರಿದ ಸಮಯದುದ್ದಕ್ಕೂ ಪಕ್ಷದ ಕಾರ್ಯಕರ್ತರ ಶಕ್ತಿಗೆ ಬಲ ತುಂಬಿ ಅವರ ಉತ್ಸಾಹವನ್ನು ಪುನರುಜ್ಜೀವಗೊಳಿಸಿತು.

ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿಯು ಕಾರ್ಯಸೂಚಿ ಮುಂದಿಡುತ್ತಿತ್ತು. ಕಾಂಗ್ರೆಸ್ಸಿನ ಕಸರತ್ತು ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿತ್ತು. ದೀರ್ಘ ಅವಧಿಗೆ ಅಂತಹ ಅವಕಾಶವನ್ನು ಕಾಂಗ್ರೆಸ್‌ ಮಾಡಿಕೊಟ್ಟಿತ್ತು. ಆ ಅರ್ಥದಲ್ಲಿ ಈ ಪಾದಯಾತ್ರೆಯು ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲು ನೆರವಾಯಿತು.

ಎರಡನೆಯದಾಗಿ, ರಾಜ್ಯದಲ್ಲಿ ಪಕ್ಷದ ಇಬ್ಬರು ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದಾಗಿ ಮುನ್ನಡೆಯುವುದನ್ನೂ ಈ ಪಾದಯಾತ್ರೆ ಕಂಡಿತು. ಪಕ್ಷದ ನಾಯಕತ್ವವು ಪ್ರದರ್ಶಿಸಿದ ಈ ಏಕತೆ, ತನ್ನ ರಾಜಕೀಯ ಹಾಜರಿಯನ್ನು ಪ್ರತಿಪಾದಿಸಿಕೊಳ್ಳಲು ಪಕ್ಷಕ್ಕೆ ಬಲ ತುಂಬಿದಂತಾಯಿತು. ಈಗ, ಮತ್ತೊಂದು ವಿವಾದವು ಕೇಂದ್ರ ಸ್ಥಾನಕ್ಕೆ ಬರುವುದರೊಂದಿಗೆ ಪಾದಯಾತ್ರೆಯ ವಿಚಾರವು ಹಿನ್ನೆಲೆಗೆ ಸರಿದಿದೆ.

ಸಂದೀಪ್‌ ಶಾಸ್ತ್ರಿ
ಸಂದೀಪ್‌ ಶಾಸ್ತ್ರಿ

ಉಡುಪಿಯ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಶುರುವಾದ ಹಿಜಾಬ್ ವಿವಾದವು ರಾಜ್ಯದಾದ್ಯಂತ ಪರಿಣಾಮ ಬೀರಿದೆ. ಇದು ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿ ಗಮನ ಸೆಳೆದುಕೊಂಡಿದೆ. ಮೊಳಕೆಯಲ್ಲೇ ಚಿವುಟಬಹುದಾಗಿ ದ್ದಂತಹ ವಾಕ್ಸಮರವಿದು. ಪ್ರಕರಣಕ್ಕೆ ಸಂಬಂಧಿಸಿದ ಗುಂಪುಗಳು ಒಟ್ಟಾಗಿ ಕೂತು ಸಂಧಾನ ಮಾಡಿಕೊಂಡಿದ್ದಿದ್ದರೆ ವಿವಾದವು ಪರಿಹಾರವಾಗಿರುತ್ತಿತ್ತು. ಬದಲಾಗಿ, ಈ ವಿವಾದದಿಂದ ಗರಿಷ್ಠ ರಾಜಕೀಯ ಲಾಭ ದಕ್ಕಿಸಿಕೊಳ್ಳಲು ಒಂದು ಅವಕಾಶವಾಗಿ ಇದನ್ನು ರಾಜಕೀಯ ನಾಯಕರು ಕಂಡರು. ಅಲ್ಪಾವಧಿ ಗಳಿಕೆಗಳಿಗಾಗಿ, ದೀರ್ಘಾವಧಿಯ ಸಾಮಾಜಿಕ ಸೌಹಾರ್ದವನ್ನು ರಾಜಕೀಯ ವರ್ಗ ಬಿಟ್ಟು ಕೊಟ್ಟಿತು.

ಸೂಕ್ಷ್ಮವಾದ ಸಾಮಾಜಿಕ ವಿವಾದಗಳಿಗೆ ಸಂಬಂಧಿಸಿ ದಂತೆ ಈ ಹಿಂದೆ ಆಗಿರುವಂತೆಯೇ, ಕೋರ್ಟ್ ಅಂಗಳಕ್ಕೆ ಈ ವಿವಾದವನ್ನು ತಳ್ಳುವುದು ಅನುಕೂಲಕರ ಎಂಬುದನ್ನು ರಾಜಕೀಯ ನಾಯಕರು ಕಂಡುಕೊಂಡರು. ನ್ಯಾಯಾಲಯದ ನಿರ್ಧಾರಕ್ಕಾಗಿ ಈಗ ಕಾಯಲಾಗುತ್ತಿದ್ದು, ಕೋರ್ಟ್ ತೀರ್ಪಿನಿಂದ ನಿರ್ಬಂಧಿತರಾಗಿರುವ ಸಾರ್ವಜನಿಕ ನಿಲುವನ್ನು ಎಲ್ಲ ರಾಜಕೀಯ ನಾಯಕರೂ ತಾಳುತ್ತಿದ್ದಾರೆ.

ಹೀಗಾಗಿ, ಚರ್ಚಿಸಲಾದ ಈ ಎರಡೂ ಪ್ರಕರಣಗಳಲ್ಲಿ ವಿವಾದದ ಚೆಂಡನ್ನು ನ್ಯಾಯಾಂಗದ ಅಂಗಳಕ್ಕೆ ಸರಿಸುವುದನ್ನು ರಾಜಕೀಯ ನೇತಾರರು ಆಯ್ಕೆ ಮಾಡಿ ಕೊಂಡಿದ್ದಾರೆ.

ನ್ಯಾಯಾಂಗದ ನಿರ್ದೇಶನಗಳನ್ನಷ್ಟೇ ಜಾರಿಗೊಳಿಸುತ್ತಿರುವುದಾಗಿ ಸಮರ್ಥಿಸಿಕೊಳ್ಳುತ್ತಾ ನ್ಯಾಯಾಂಗದ ತೀರ್ಪಿನ ಒಳಸುಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ಮೂಲಕ ಯತ್ನಿಸುತ್ತಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಒಂದೂಕಾಲು ವರ್ಷ ಬಾಕಿ ಇರುವ ಈ ಹಂತದಲ್ಲಿ ಕೇಳಬೇಕಾದ ಪ್ರಶ್ನೆ ಏನೆಂದರೆ, ಜನರ ನಿಜವಾದ ವಿಚಾರಗಳನ್ನು ರಾಜಕೀಯ ವರ್ಗವು ಪಕ್ಕಕ್ಕೆ ಸರಿಸಿಬಿಡುತ್ತಿದೆಯೇ?

ರಾಜ್ಯದಲ್ಲಿ ಜನರ ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತಿರುವ ಎರಡು ಪ್ರಮುಖ ವಿಚಾರಗಳೆಂದರೆ ನಿರುದ್ಯೋಗ ಹಾಗೂ ಬೆಲೆ ಏರಿಕೆ ಎಂಬುದನ್ನು ಒಂದಾದ ಮೇಲೆ ಒಂದು ಸಮೀಕ್ಷೆಗಳು ತೋರಿವೆ. ಇದನ್ನು ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ಗಮನದ ಕೇಂದ್ರಬಿಂದು ಆಗಿಸಿಕೊಳ್ಳುತ್ತಿವೆಯೇ ಅಥವಾ ಜನರನ್ನು ಬಾಧಿಸುತ್ತಿರುವ ವಿಚಾರಗಳ ಬಗ್ಗೆ ಗಮನಹರಿಸಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ‘ವಿಚಾರ ಗಳ ಬರ’ವನ್ನು ಕಾಣುತ್ತಿದ್ದೇವೆಯೇ?

ಮುಂದಿನ ವರ್ಷ ಚುನಾವಣೆಗೆ ಸಿದ್ಧವಾಗುತ್ತಿರುವಂತೆಯೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ಸವಾಲು ಎಂದರೆ, ತಮ್ಮ ಪಕ್ಷಗಳನ್ನು ಏಕತೆಯ ರಂಗವಾಗಿ ಬಿಂಬಿಸುವುದು. ಭಿನ್ನ ದಿಕ್ಕುಗಳಿಗೆ ಎಳೆಯುವ ಬಣ ನಾಯಕರ ಗುಂಪುಗಳು ತಾವಲ್ಲ ಎಂಬುದನ್ನು ತೋರಿಸಿ ಕೊಳ್ಳಬೇಕಿದೆ. ಇಂತಹದೊಂದು ಒಗ್ಗಟ್ಟು ಪ್ರದರ್ಶನದ ದಿಕ್ಕಿನಲ್ಲಿ ಮುಂದೆ ಸಾಗಲು ಪಾದಯಾತ್ರೆಯು ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿಗೆ ನೆರವಾಯಿತು.

2023ರ ಚುನಾವಣೆಯ ಪರೀಕ್ಷೆಯು ಏಕತೆ ಹಾಗೂ ನಾಯಕತ್ವದ ಪರೀಕ್ಷೆಯಾಗಿರುತ್ತದೆ. ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಪ್ರತಿನಿಧಿಸುವವರ ನಾಯಕತ್ವ ಕೌಶಲವನ್ನು ಕರ್ನಾಟಕದ ಮತದಾರರು ಹೇಗೆ ಪರಿಭಾವಿಸುತ್ತಾರೆ? ಹಾಗೂ ಪ್ರತಿಯೊಂದು ಪಕ್ಷವೂ ಪ್ರದರ್ಶಿಸುವ ಏಕತೆಯು ಮುಖ್ಯವಾಗಿರುತ್ತದೆಯೇ?

1989ರಿಂದಲೂ ಕಂಡುಬರುತ್ತಿರುವಂತಹ, ಆಡಳಿತ ಪಕ್ಷವು ಹಿನ್ನಡೆ ಎದುರಿಸುವಂತಹ ಪ್ರವೃತ್ತಿಯನ್ನೇ ರಾಜ್ಯದ ಮತದಾರರು ಪುನರ್ ಪ್ರತಿಪಾದಿಸುವರೇ? ಅಥವಾ ಈ ಪ್ರವೃತ್ತಿಯನ್ನು ಬದಲಿಸುವರೇ ಎಂಬುದು ಈ ಮುಖ್ಯ ಅಂಶದಿಂದ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT