ಪರಸತ್ವದ ಕಣ್ಣು ಮುಚ್ಚಾಲೆ

7

ಪರಸತ್ವದ ಕಣ್ಣು ಮುಚ್ಚಾಲೆ

ಗುರುರಾಜ ಕರಜಗಿ
Published:
Updated:

ಬನ್ನಿರಾಡುವ ಕಣ್ಣು ಮುಚ್ಚಾಲೆಯಾಟವನು |

ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ||
ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು |
ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ || 82 ||

ಪದ-ಅರ್ಥ: ಬನ್ನಿರಾಡುವ=ಬನ್ನಿರಿ+ಆಡುವ, ಎನ್ನನರಸಿರಿ=ಎನ್ನನು+ಅರಸಿರಿ, ಎನ್ನುವಜ್ಜಿಯೊ=ಎನ್ನುವ+ಅಜ್ಜಿಯೊ
ವಾಚ್ಯಾರ್ಥ: ಬನ್ನಿರಿ, ಕಣ್ಣುಮುಚ್ಚಾಲೆಯ ಆಟವನು ಆಡೋಣ, ನನ್ನನ್ನು ಹುಡುಕಿರಿ. ಮಕ್ಕಳೇ ಬೇಗ ಬನ್ನಿ. ಆಟ ಬೇಡವೆಂಬುವವರನ್ನು ನಾನು ಬಿಡುವುದಿಲ್ಲ ಎನ್ನುವ ಅಜ್ಜಿಯಂತೆಯೇ ಬ್ರಹ್ಮ.

ವಿವರಣೆ: ಒಂದು ಸುಂದರವಾದ ಉದಾಹರಣೆಯೊಂದಿಗೆ ಬ್ರಹ್ಮಸತ್ವ ಹೇಗೆ ಪ್ರಪಂಚವನ್ನು ಆಡಿಸುತ್ತದೆ ಎಂಬುದನ್ನು ವಿವರಿಸುತ್ತದೆ ಈ ಕಗ್ಗ. ಹಿಂದೊಂದು ಕಾಲವಿತ್ತು. ಆಗ ಮಕ್ಕಳಿಗೆ ದೂರದರ್ಶನ, ಮೊಬೈಲ್‍ಗಳ ಬಂಧನ ಇರಲಿಲ್ಲ. ದೈಹಿಕ ಚಟುವಟಿಕೆಗಳಗೆ, ಆಟಗಳಿಗೆ ಸಾಕಷ್ಟು ಸಮಯವಿತ್ತು. ಅಂದೂ, ಇಂದೂ, ತಂದೆತಾಯಿಗಳಿಗೆ ಮಕ್ಕಳೊಡನೆ ಆಟವಾಡುವ ಆಟಿಕೆಗಳಿಗೆ ವ್ಯವಧಾನವಾಗಲಿ, ಮನಸ್ಥಿತಿಯಾಗಲಿ ಇಲ್ಲ. ಆದರೆ ಅಜ್ಜ-ಅಜ್ಜಿಯರಿಗೆ ಮೊಮ್ಮಕ್ಕಳೊಡನೆ ಆಡುವುದು ಅತ್ಯಂತ ಪ್ರಿಯವಾದ ಕೆಲಸ. ಆಗ ಅಜ್ಜಿಯರು ಪುಟ್ಟ ಪುಟ್ಟ ಮಕ್ಕಳನ್ನು ಸೇರಿಸಿ ಕಣ್ಣಮುಚ್ಚಾಲೆ ಆಡುವುದು ಸಾಮಾನ್ಯವಾಗಿತ್ತು. ಯಾವುದೋ ಮಗುವಿನ ಕಣ್ಣುಕಟ್ಟಿ ಉಳಿದವರು ಅಡಗಿಕೊಂಡ ಮೇಲೆ ಕಣ್ಣು ಬಿಚ್ಚಿದಾಗ ಅವರನ್ನು ಹುಡುಕುವುದು ಆಟ. ಕೆಲವೊಮ್ಮೆ ಅಜ್ಜಿಯೇ ಬಚ್ಚಿಟ್ಟುಕೊಂಡು ತನ್ನನ್ನು ಹುಡುಕಿ ಎಂದು ಮಕ್ಕಳನ್ನು ಕೇಳುವುದೂ ಇತ್ತು. ಈ ಕಗ್ಗದಲ್ಲಿಯ ಸಂದರ್ಭ ಅಂತಹದು. ಅಜ್ಜಿ ಅಡಗಿಕೊಂಡು ತನ್ನನ್ನು ಹುಡುಕಿ ಮಕ್ಕಳೇ ಎಂದು ಕೇಳುತ್ತಿದ್ದಾಳೆ. ಅಜ್ಜಿ ಬ್ರಹ್ಮವಸ್ತು. ಮಕ್ಕಳು ಜೀವಿಗಳು. ಪರವಸ್ತು ಅದೃಶ್ಯವಾಗಿದೆ. ಆದರೆ ಪ್ರತಿಯೊಂದು ಜೀವಿಯಲ್ಲಿ ಬೆರೆತುಕೊಂಡಿದೆ. ನನ್ನನ್ನು ಹುಡುಕಿ ಎಂದರೆ ಪ್ರತಿಯೊಂದು ಜೀವಿಯಲ್ಲೂ ಅವ್ಯಕ್ಯವಾಗಿರುವ ಬ್ರಹ್ಮವಸ್ತುವನ್ನು, ಪರಸತ್ವವನ್ನು ನೀವೇ ಹುಡುಕಿಕೊಳ್ಳಿ ಎಂಬುದು ಸೂಚನೆ.

ಇನ್ನೊಂದು ವಿಶೇಷವೆಂದರೆ ಆಟ ಬೇಡವೆನ್ನುವ ಯಾರನ್ನು ಈ ಅಜ್ಜಿ ಬಿಡುವುದಿಲ್ಲ. ಹೀಗೆಂದರೆ ಯಾರೂ ಈ ಮಾಯಾ ಪ್ರಪಂಚದ ವ್ಯವಹಾರದಿಂದ ಹೊರಗೆ ಉಳಿಯಲು ಸಾಧ್ಯವಿಲ್ಲ. ಮಾಯೆ ಸೆಳೆದು ಬಿಡುತ್ತದೆ. ಒಬ್ಬ ಬೌದ್ಧ ಸನ್ಯಾಸಿ ಪ್ರಪಂಚದ ಜಂಜಡಗಳಿಂದ ಮುಕ್ತನಾಗಬೇಕೆಂದು ನಿರ್ಜನವಾದ ಅರಣ್ಯದಲ್ಲಿ ಗುಡಿಸಲು ಕಟ್ಟಿಕೊಂಡು ಧ್ಯಾನಸ್ಥನಾದ. ಒಂದು ದಿನ ಒಬ್ಬ ಶ್ರೀಮಂತ ಅಲ್ಲಿಗೆ ಬಂದ. ಸನ್ಯಾಸಿಯ ಮುಂದೆ ಸಾವಿರ ಚಿನ್ನದ ನಾಣ್ಯಗಳ ಚೀಲ ಇಟ್ಟ. ಇದು ತನಗೆ ಬುದ್ಧ ಕನಸಿನಲ್ಲಿ ನೀಡಿದ ಅಪ್ಪಣೆ ಎಂದ. ತನಗೆ ಬುದ್ಧನ ಅಪ್ಪಣೆ ಇಲ್ಲದ್ದರಿಂದ ಅದನ್ನು ಸ್ವೀಕರಿಸಲಾರೆ ಎಂದ ಸನ್ಯಾಸಿ. ಅದು ತಮ್ಮ ಇಷ್ಟ. ನಾನು ಬುದ್ಧನ ಆಜ್ಞೆ ಪಾಲಿಸಿದ್ದೇನೆ ಎಂದು ಶ್ರೀಮಂತ ಹೊರಟು ಹೋದ. ಅವನು ಹೋದಮೇಲೆ ಸನ್ಯಾಸಿ ನಿಜವಾಗಿಯೂ ಸಾವಿರ ನಾಣ್ಯಗಳಿವೆಯೇ ಎಂದು ಎಣಿಸಿದ. ಸಾವಿರದ ಮೂರು ನಾಣ್ಯಗಳಿದ್ದವು! ಲೆಕ್ಕ ತಪ್ಪಿತು ಎಂದು ಮತ್ತೆ ಎಣಿಸಿದ. ಈಗ ಒಂಬೈನೂರ ತೊಂಭತ್ತೆಂಟು ಆದವು! ಮತ್ತೆ, ಮತ್ತೆ, ಎಣಸುತ್ತಲೇ ಹೋದ. ಬುದ್ಧ ಮರೆಯಾದ, ಧ್ಯಾನ ಮರೆಯಾಯಿತು. ಮಾಯೆಯ ಕಣ್ಣಮುಚ್ಚಾಲೆ ಪ್ರಾರಂಭವಾಗಿತ್ತು!

ಬ್ರಹ್ಮ ಎನ್ನುವ ಶಕ್ತಿ ಪ್ರಪಂಚದಲ್ಲಿ ತನ್ನ ಮಾಯೆಯ ಮೂಲಕ ಕಣ್ಣು ಮುಚ್ಚಾಲೆಯನ್ನು ಆಡುತ್ತಲೇ ಇದೆ. ಪ್ರತಿ ಜೀವಿಯಲ್ಲಿ ತಾನಿರುವುದನ್ನು ಕಂಡುಕೊಂಡಲು ಪ್ರಚೋದಿಸುತ್ತಿದೆ. ಅದಲ್ಲದೆ ಜೀವ, ದೈವಗಳ ನಡುವಿನ ಆಟದಿಂದ ಯಾರೂ ಪಾರಾಗಿ ಉಳಿಯದಂತೆ ನೋಡಿಕೊಳ್ಳುತ್ತಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !