ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಬೊಮ್ಮನಾಟ

Last Updated 23 ಜನವರಿ 2019, 18:33 IST
ಅಕ್ಷರ ಗಾತ್ರ

ಅಣು ಭೂತ ಭೂಗೋಲ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನುತನ್ನಕೃತಿಕಂತುಕವನದರೊ |
ಳಣಗಿದ್ದು ಪರಬೊಮ್ಮ– ಮಂಕುತಿಮ್ಮ || 84 ||

ಪದ-ಅರ್ಥ: ತಾರಾಂಬರಾದಿಗಳನಣಿಮಾಡಿ=ತಾರೆ+ಅಂಬರ(ಆಕಾಶ)ಗಳನ್ನು+ಅಣಿಮಾಡಿ(ಸಿದ್ಧಮಾಡಿ), ಸಡಿಲವನುಮಿರಿಸಿ= ಸಡಿಲವನ್ನು+ಇರಿಸಿ, ಕೃತಿಕಂತುಕವನದರೊಳಣಗಿದ್ದು=ಕೃತಿ (ಸೃಷ್ಟಿ)+ಕಂತುಕವನು (ಚೆಂಡನ್ನು)+ಅದರೊಳು+ಅಣಗಿದ್ದು (ಅಡಗಿದ್ದು)

ವಾಚ್ಯಾರ್ಥ: ಪರಬ್ರಹ್ಮ ಅಣುಗಳು, ಪಂಚಭೂತಗಳು, ತಾರೆಗಳು, ಆಕಾಶಗಳನ್ನೆಲ್ಲ ಸಜ್ಜು ಮಾಡಿ ಬಿಗಿದು, ಚಲನೆಗಾಗಿ ಸ್ವಲ್ಪ ಸಡಿಲವಾಗಿರಿಸಿ ತನ್ನದೇ ಆದ ಕೃತಿಯಲ್ಲಿ ತಾನೇ ಅಡಗಿಕೊಂಡು ಚೆಂಡಿನಂತೆ ಕುಣಿಸುತ್ತಿದ್ದಾನೆ.

ವಿವರಣೆ: ವೇದಗಳು, ಉಪನಿಷತ್ತುಗಳು, ಶಾಸ್ತ್ರಗಳು, ವಚನಗಳು, ದಾಸರ ಪದಗಳು ಜಾನಪದ ನುಡಿಗಳು ಪರವಸ್ತುವನ್ನು ವಿವರಿಸಲು ಹೆಣಗಿ ಸೋತು ಹೋಗಿವೆ. ಕಾರಣ ಇಷ್ಟೇ. ಕಂಡದ್ದನ್ನು ವಿವರಿಸಬಹುದು, ಕೇಳಿದ್ದನ್ನು ವರ್ಣಿಸಬಹುದು. ಕಾಣದೆ, ಕೇಳದೆ ಇದ್ದುದನ್ನು ಹೇಳುವುದು ಹೇಗೆ? ಯಾಕೆಂದರೆ ವಿಶ್ವಕ್ಕೆರೂಪವಿದೆ. ಆದ್ದರಿಂದ ಅದು ದರ್ಶನಸಾಧ್ಯವಾದದ್ದು. ಆದರೆ ಬ್ರಹ್ಮಸತ್ವ ವಿಶ್ವಾತೀತವಾದದ್ದು. ಅದಕ್ಕೆ ರೂಪವಿಲ್ಲ ಆದ್ದರಿಂದ ದರ್ಶನಕ್ಕೆ ಅಸಾಧ್ಯವಾದದ್ದು. ಇಂಥ ವಿಶ್ವಾತೀತವಾದ ಸತ್ವ ಅನುಭವಕ್ಕೆ ಬರುವುದು ಹೇಗೆ? ಮನಸ್ಸು, ಬುದ್ಧಿಗಳು ಏಕತ್ರವಾಗಿ ತಪಸ್ಸು ಮಾಡಿದರೆ ಗೋಚರವಾಗುತ್ತದೆ. ಆಗ ಅರ್ಥವಾಗುತ್ತದೆ ಪರಸತ್ವ ಪ್ರತಿಯೊಂದು ಅಣು, ಅಣುವಿನಲ್ಲೂ ಸೇರಿಕೊಂಡಿದೆ. ನಮ್ಮದೇಹ ಮತ್ತು ಈ ಜಗತ್ತು ಅಸಂಖ್ಯ ಅಣುಗಳ ಬ್ರಹತ್ ಪುಂಜವೇಆಗಿದೆ. ಆದ್ದರಿಂದ ಇಡೀ ಜಗತ್ತೇ ‘ಈಶಾವಾಸ್ಯ’ ಎಂದರೆ ಈಶ್ವರನಿಂದ ವ್ಯಾಪಿಸಲ್ಪಟ್ಟಿದೆ. ವಿಭೂತಿಯೋಗದಲ್ಲಿ ಕೃಷ್ಣ ತನ್ನ ಬಗ್ಗೆ ಹೇಳುವುದು ಹೀಗೆ –

‘ಯಚ್ಚಾಪಿ ಸರ್ವಭೂತಾನಾಂ ಬೀಜಂತದಹಮರ್ಜುನ’ -ಅರ್ಜುನ, ಸಮಸ್ತ ಜೀವಕೋಟಿಗೂ ಬೀಜಪ್ರಾಯನಾದವನು ನಾನು. ಇಂತಹ ಸವಾಂಗತರ್ಯಾಮಿಯಾದ ಪರಸತ್ವದ ಅಸ್ತಿತ್ವದ ಬಗ್ಗೆ ಡಿ.ವಿ.ಜಿ ಈ ಕಗ್ಗದಲ್ಲಿ ಎಷ್ಟು ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ!
ಅಣುಗಳನ್ನು, ಪಂಚಭೂತಗಳನ್ನು, ತಾರೆಗಳನ್ನು, ಆಕಾಶವನ್ನು ಎಲ್ಲವನ್ನುತಾನೇ ನಿರ್ಮಿಸಿದ್ದಾನೆ. ಅವುಗಳನ್ನೆಲ್ಲ ಒಂದು ಬಂಧದಲ್ಲಿ ಬಿಗಿದುಇಟ್ಟಿದ್ದಾನೆ. ಹಾಗೆ ಬಂಧಿಸಿರುವುದರಿಂದಲೇ ಪ್ರಪಂಚದಚಟುವಟಿಕೆಗಳು ಅತ್ಯಂತ ವ್ಯವಸ್ಥಿತವಾಗಿ ಚಾಚೂ ತಪ್ಪದಂತೆ ನಡೆಯುತ್ತಿವೆ. ಇಷ್ಟು ಶತಮಾನಗಳಿಂದಲೂ ಒಂದಗ್ರಹ ಮತ್ತೊಂದಕ್ಕೆಢಿಕ್ಕಿಹೊಡೆದಿಲ್ಲ, ಸೂರ್ಯೋದಯ, ಸೂರ್ಯಾಸ್ತಗಳು ನಿಯತಕಾಲದಲ್ಲಿ ನಡೆಯುತ್ತಿವೆ. ಸೃಷ್ಟಿ, ಸ್ಥಿತಿ, ಲಯಗಳು ಸಿದ್ಧ ನಿಯಮದಂತೆ ಜರುಗುತ್ತಿವೆ. ಬ್ರಹ್ಮ ಬಂಧವನ್ನು ತೀರ ಬಿಗಿಯಾಗಿಯೂ ಕಟ್ಟಿಲ್ಲ. ತೀರ ಅಲುಗಾಡದಂತೆ ಬಿಗಿದರೆ ಅವುಗಳ ಚಲನೆಯ ಗತಿ ಎಂತು? ಬಂಧವನ್ನು ಸಡಿಲಮಾಡಿದ್ದಾನೆ. ತಾನು ಪ್ರತಿಯೊಂದು ಅಣುವಿನಲ್ಲಿರುವುದರಿಂದ ತಾನೇ ಸೃಷ್ಟಿಸಿದ ಪ್ರಪಂಚದೊಳಗೇ ಇದ್ದುಕೊಂಡು ಅದನ್ನುತನ್ನ ಲೀಲೆಯಂತೆ ಕುಣಿಸುತ್ತಿದ್ದಾನೆ!

ಕಣ್ಣಿಗೆಕಾಣದ ಆದರೆ ಅನುಭಾವಿಗಳ ಹೃದಯಕ್ಕೆ ನಿಲುಕುವ ಕಲ್ಪನಾತೀತವಾದ ವಿಷಯವನ್ನು ಹೀಗೆ ನಾಲ್ಕು ಸಾಲುಗಳಲ್ಲಿ ಕಣ್ಣಿಗೆ ಕಟ್ಟುವ ರೂಪಕದಿಂದ ವರ್ಣಿಸಿದ ಆ ಶಕ್ತಿಗೆ ನಮನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT