ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಟದ ಪರಿಣಾಮ

Last Updated 14 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಮಹಾ ಕಸ್ಸಪ ಸ್ಥಾವಿರ ರಾಜಗೃಹದ ಹತ್ತಿರವಿದ್ದ ಕಾಡಿನಲ್ಲಿ ಆಶ್ರಮ ಕಟ್ಟಿಕೊಂಡು ಇರುತ್ತಿದ್ದ. ಅವನ ಸೇವೆಗೆಂದು ಇಬ್ಬರು ತರುಣ ಭಿಕ್ಷುಗಳು ನೇಮಕವಾಗಿದ್ದರು. ಅವರಲ್ಲಿ ಒಬ್ಬ ಬಹಳ ಶ್ರದ್ಧಾಳು. ಗುರುವನ್ನು ದೇವರಂತೆಯೇ ಕಾಣುತ್ತ ಸೇವೆಯಲ್ಲಿ ಯಾವ ಕೊರತೆಯನ್ನು ಮಾಡುತ್ತಿರಲಿಲ್ಲ. ಹಗಲುರಾತ್ರಿ ಗುರುವಿನ ಸೇವೆಯಲ್ಲಿಯೇ ತೃಪ್ತಿಯನ್ನು ಕಾಣುತ್ತಿದ್ದ. ಇನ್ನೊಬ್ಬ ಆಲಸಿ ಮತ್ತು ಕುಹಕಬುದ್ಧಿಯವನಾಗಿದ್ದ. ಕೆಲಸ ಮಾಡದೆ ಬರೀ ನಾಟಕಮಾಡುತ್ತ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ.

ಸಾತ್ವಿಕ ಶಿಷ್ಯ ಗುರುಗಳಿಗೆ ಮುಖ ತೊಳೆಯಲು ನೀರು ತಂದಿಟ್ಟು ಎಲ್ಲವನ್ನು ಸಜ್ಜುಮಾಡಿದರೆ ಈ ಕುಹಕಿ ಶಿಷ್ಯ ಓಡಿಹೋಗಿ ಗುರುಗಳ ಮುಂದೆ ನಿಂತು, ‘ಗುರುಗಳೇ ತಮ್ಮ ಮುಖಮಾರ್ಜನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದೇನೆ, ದಯವಿಟ್ಟು ಮುಖ ತೊಳೆಯಿರಿ’ ಎನ್ನುತ್ತಿದ್ದ. ಸಾತ್ವಿಕ ಶಿಷ್ಯ ದಿನಾಲು ಬಹುಬೇಗ ಎದ್ದು ಆಶ್ರಮವನ್ನೆಲ್ಲ ಗುಡಿಸಿ, ನೀರು ಹಾಕಿ ಸ್ವಚ್ಛ ಮಾಡಿದ ಮೇಲೆ ಈತ ಹೋಗಿ ಗುರುಗಳಿಗೆ, ‘ಭಂತೇ, ಈಗ ತಾನೇ ಇಡೀ ಆಶ್ರಮವನ್ನು ಗುಡಿಸಿ ಸ್ವಚ್ಛಮಾಡಿದ್ದೇನೆ. ತಮಗಿಷ್ಟವಾಯಿತೇ?’ ಎಂದು ಕೇಳುತ್ತಿದ್ದ. ಇದು ಹೀಗೆಯೇ ನಡೆದು ಬರುತ್ತಿತ್ತು.

ಬಹಳ ದಿನಗಳಾದ ಮೇಲೆ ಸಾತ್ವಿಕ ಶಿಷ್ಯನಿಗೂ ಕೋಪ ಬಂತು. ದುಡಿಯುವವನು ತಾನು, ತೋರಿಸಿಕೊಳ್ಳುವವನು ಅವನು. ಅವನ ಈ ಕಪಟವನ್ನು ಗುರುಗಳಿಗೆ ಹೇಗಾದರೂ ಮಾಡಿ ತೋರಿಸಬೇಕೆಂದು ತೀರ್ಮಾನಿಸಿದ. ಒಂದು ದಿನ ಬೇಗನೇ ಎದ್ದು ಗುರುಗಳ ಸ್ನಾನಕ್ಕೆ ಬಿಸಿನೀರು ಕಾಯಿಸಿ ಬಚ್ಚಲು ಮನೆಯ ಹಿಂದಿನ ಕೋಣೆಯಲ್ಲಿ ಇಟ್ಟ. ನಂತರ ಒಂದು ದೊಡ್ಡ ಪಾತ್ರೆಯಲ್ಲಿ ಒಂದೇ ತಂಬಿಗೆಯಷ್ಟು ನೀರನ್ನು ಹಾಕಿ ಕಾಯಲು ಬಿಟ್ಟ. ನೀರು ಕಾಯ್ದು ಆವಿ ಹೊರಬರತೊಡಗಿತು. ಕಪಟ ಶಿಷ್ಯ ದೂರದಿಂದಲೇ ಇದನ್ನು ಕಂಡು, ಇನ್ನೊಬ್ಬ ಶಿಷ್ಯ ಹೋಗಿ ಗುರುಗಳಿಗೆ ‘ಸ್ನಾನಕ್ಕೆ ವ್ಯವಸ್ಥೆಯಾಗಿದೆ’ ಎನ್ನುವುದರೊಳಗಾಗಿ ತಾನೇ ಓಡಿ ಬಂದು, ‘ಗುರುಗಳೇ ತಮ್ಮ ಸ್ನಾನಕ್ಕೆ ಎಲ್ಲ ವ್ಯವಸ್ಥೆಯಾಗಿದೆ, ದಯಮಾಡಿ’ ಎಂದು ಕಪಟ ವಿನಯತೋರಿದ. ಸ್ಥಾವಿರ ಒಳಬಂದು ನೋಡಿದರೆ ಕಾದ ಪಾತ್ರೆಯ ತಳದಲ್ಲಿ ಒಂದು ಬೊಗಸೆಯಷ್ಟು ಮಾತ್ರ ನೀರಿದೆ! ‘ನೀರೆಲ್ಲಿ?’ ಎಂದು ಗುರು ಕೇಳಿದಾಗ ಕಪಟ ಶಿಷ್ಯ ಒಂದು ಪುಟ್ಟ ಖಾಲಿಪಾತ್ರೆಯನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಕಡಕಡ ಸದ್ದು ಮಾಡಿದ. ಮುಖ ಪೆಚ್ಚಾಯಿತು. ಸಾತ್ವಿಕ ಶಿಷ್ಯ ತಾನು ಕಾಯಿಸಿ ಇಟ್ಟಿದ್ದ ನೀರನ್ನು ಹಾಕಿ ಗುರುಗಳ ಸ್ನಾನಕ್ಕೆ ಅನುವು ಮಾಡಿದ. ಅಂದಿನಿಂದ ಆಶ್ರಮದಲ್ಲೆಲ್ಲರೂ ಕಪಟಿ ಶಿಷ್ಯನನ್ನು ‘ಉಲುಂಕ ಶಬ್ದಕ’ ಎಂದು ಕರೆಯತೊಡಗಿದರು.

ಉಲುಂಕ ಎಂದರೆ ಖಾಲೀಪಾತ್ರೆ. ಈತನೂ ಖಾಲಿಪಾತ್ರೆಯಂತೆ ಸದ್ದು ಮಾಡುತ್ತಾನೆ ಎಂದು ತಮಾಷೆ ಮಾಡುತ್ತಿದ್ದರು. ಆಗ ಗುರುಗಳು ಕರೆದು, ‘ಮಗೂ, ನೀನು ಇಲ್ಲಿಗೆ ಬಂದದ್ದು ಒಳ್ಳೆಯವನಾಗುವುದಕ್ಕೆ. ಆದ್ದರಿಂದ ಮತ್ತೊಬ್ಬರು ಮಾಡಿದ ಕೆಲಸವನ್ನು ತನ್ನದು ಎಂದು ಹೇಳಿಕೊಳ್ಳುವ ಬದಲು ನೀನು ಮಾಡಿದ್ದನ್ನೂ ಹೇಳಿಕೊಳ್ಳಬೇಡ. ಜನ ಗಮನಿಸಿ ನಿನಗೆ ಮರ್ಯಾದೆ ಮಾಡುತ್ತಾರೆ’ ಎಂದು ಹೇಳಿದರು. ಆದರೆ ಆ ಶಿಷ್ಯ ಮತ್ತಷ್ಟು ಕೋಪಿಸಿಕೊಂಡು ಸ್ಥಾವಿರರು ಭಿಕ್ಷೆಗೆ ಹೋಗಿದ್ದಾಗ ಕೋಲು ತೆಗೆದುಕೊಂಡು ಆಶ್ರಮದಲ್ಲಿದ್ದ ವಸ್ತುಗಳನ್ನೆಲ್ಲ ಒಡೆದು ಹಾಕಿದ, ಪರ್ಣಕುಟಿಗೆ ಬೆಂಕಿ ಹಚ್ಚಿ ಬಿಟ್ಟ. ಆದರೆ ಅದು ಅವನ ಮೈಮೇಲೆಯೇ ಕುಸಿದುಬಿದ್ದು ಸುಟ್ಟುಕೊಂಡು ಸತ್ತು ಹೋದ.

ಕೆಲವರು ಸ್ವತ: ಪ್ರಾಮಾಣಿಕರಾಗಿರುತ್ತಾರೆ, ಕೆಲವರು ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕತೆಯನ್ನು ಕಲಿಯುತ್ತಾರೆ, ಇನ್ನು ಕೆಲವರು ಏನನ್ನೂ ಕಲಿಯದೆ ತಮ್ಮ ಕುಯುಕ್ತಿಗಳಿಗೆ ತಾವೇ ಬಲಿಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT