7
ಅಕ್ರಮ ವಲಸಿಗರನ್ನು ನಡೆಸಿಕೊಳ್ಳುವ ವಿಚಾರದಲ್ಲಿ ಅಮೆರಿಕ ಪ್ರಬುದ್ಧತೆ ತೋರಬೇಕಿದೆ

ಬದುಕು ಬಯಸಿ ಬಂದವರೆದಿರು ಬೆದರು ಬೊಂಬೆ

ಸುಧೀಂದ್ರ ಬುಧ್ಯ
Published:
Updated:
ಬಬಬ

ಅಮೆರಿಕದ ಪ್ರತಿಷ್ಠಿತ ಪತ್ರಿಕೆ ‘ಟೈಮ್’, ಆಕರ್ಷಕ ಮುಖಪುಟ ಹೊತ್ತು ಮಾರುಕಟ್ಟೆಗೆ ಬರುವುದರಲ್ಲಿ ಹೆಸರುವಾಸಿ. ಈ ಬಾರಿ ಅಂತಹದೇ ಒಂದು ಪ್ರಯತ್ನವನ್ನು ‘ಟೈಮ್’ ಮಾಡಿತು. ಅಳುವ ಕಂದನ ಮುಂದೆ ನಿಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕಕ್ಕೆ ಸ್ವಾಗತ’ ಎನ್ನುತ್ತಿರುವ ಚಿತ್ರದೊಂದಿಗೆ ಓದುಗರ ಕೈಸೇರಿತು. ಎದುರಿಗೆ ನಿಂತ ದೈತ್ಯಾಕಾರವನ್ನು ನೋಡಿ ಬೆದರಿದ ಮಗುವಿನ ಚಿತ್ರ, ಅಮೆರಿಕದಲ್ಲಿ ಏನಾಗುತ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತಿತ್ತು.

ಬಿಡಿ, ವಲಸೆ ಎಂಬುದು ಅಮೆರಿಕಕ್ಕೆ ಹೊಸ ಸಂಗತಿಯಲ್ಲ. ಮೂಲನಿವಾಸಿಗಳನ್ನು ಒತ್ತರಿಸಿ ಜಗತ್ತಿನ ಹಲವು ದೇಶಗಳಿಂದ ಬಂದ ವಲಸಿಗರು ಅಮೆರಿಕದ ತುಂಬೆಲ್ಲಾ ಹರಡಿಕೊಂಡಿದ್ದಾರೆ. ಅದು ವಲಸಿಗರ ನಾಡು. ಅಮೆರಿಕದ ಬೆಳವಣಿಗೆಯಲ್ಲಿ ವಲಸಿಗರ ಪಾತ್ರ ಹಿರಿದು. ಅಂತೆಯೇ, ನೆರೆಯ ಮೆಕ್ಸಿಕೊ ಭಾಗದಿಂದ ಜನ, ಅಕ್ರಮವಾಗಿ ಅಮೆರಿಕದ ಗಡಿ ದಾಟಿ ಬರುವ ಪ್ರಕ್ರಿಯೆ ಕೂಡ ಹಳೆಯದೇ. ಆದರೆ ಈ ಬಾರಿ, ಪರವಾನಗಿ ಇಲ್ಲದೇ ಒಳ ಬಂದವರನ್ನು ನಡೆಸಿಕೊಂಡ ರೀತಿ ವ್ಯಾಪಕ ಟೀಕೆಗೆ, ಆಕ್ಷೇಪಕ್ಕೆ ಕಾರಣವಾಯಿತು. ಕೊನೆಗೆ ಒತ್ತಡಗಳಿಗೆ ಮಣಿದು ಅಮೆರಿಕ ಅಧ್ಯಕ್ಷ ಟ್ರಂಪ್ ಕಾರ್ಯನಿರ್ವಾಹಕ ಆದೇಶವೊಂದನ್ನು ಹೊರಡಿಸಬೇಕಾದ ಅನಿವಾರ್ಯ ಎದುರಾಯಿತು.

ಹಾಗಾದರೆ, ಅಕ್ರಮ ವಲಸೆ ಎಂಬ ಅಮೆರಿಕದ ಹಳೆಯ ಸಮಸ್ಯೆ ಹೊಸದಾಗಿ ಸುದ್ದಿಯಾದದ್ದೇಕೆ? ಕೊಂಚ ವಿವರವಾಗಿ ನೋಡಬೇಕು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೆಕ್ಸಿಕೊ ಭಾಗದಿಂದ ಅಮೆರಿಕದೊಳಗೆ ನುಸುಳಿ ಬಂದ ಮಕ್ಕಳ, ಕುಟುಂಬಸ್ಥರ ಸಂಖ್ಯೆ ದೊಡ್ಡದಿದೆ. 2014ರ ಒಂದು ವರ್ಷದ ಅವಧಿಯಲ್ಲೇ ಸುಮಾರು 70 ಸಾವಿರ ಅಪ್ರಾಪ್ತ ವಯಸ್ಕರು, ಪೋಷಕರ ಹೊರತಾಗಿ ಆಶ್ರಯ ಕೋರಿ ಅಮೆರಿಕದೊಳಗೆ ಬರುವ ಪ್ರಯತ್ನ ಮಾಡಿದ್ದರು. ಕುಟುಂಬ ಸಮೇತ ಬಂದವರ ಸಂಖ್ಯೆ ಇನ್ನೂ ಹೆಚ್ಚಿತ್ತು. ದಸ್ತಗಿರಿ ಮಾಡಿದ್ದ ನೂರು ಅಪ್ರಾಪ್ತ ವಯಸ್ಕರಲ್ಲಿ, ಕೇವಲ ಮೂರು ಮಕ್ಕಳನ್ನು ಮಾತ್ರ ತಮ್ಮ ದೇಶಗಳಿಗೆ ವಾಪಸು ಕಳುಹಿಸುವುದು ಸಾಧ್ಯವಾಯಿತು. ಉಳಿದವರು ಆತಂಕ, ಪ್ರಾಣಾಪಾಯ, ಹಿಂಸೆಯ ಕಾರಣಗಳನ್ನು ನೀಡಿ ಅಮೆರಿಕದಲ್ಲಿ ಆಶ್ರಯ ಪಡೆದರು. ಹೀಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾದಾಗ, ಅಮೆರಿಕದ ನಾಗರಿಕರಲ್ಲಿ ಅಭದ್ರತಾ ಭಾವ ಸೃಷ್ಟಿಯಾಯಿತು, ವಲಸೆ ನಿಯಂತ್ರಣ ಕುರಿತ ಚರ್ಚೆ ಹುಟ್ಟಿತು. ಕಳೆದ ಅಧ್ಯಕ್ಷೀಯ ಚುನಾವಣೆಯ ವೇಳೆ, ಅಕ್ರಮ ವಲಸೆ ನಿಯಂತ್ರಣ ಮುಖ್ಯ ಚರ್ಚಾ ವಿಷಯವಾಗಿ ಮಾರ್ಪಟ್ಟಿತು.

ತಮ್ಮ ಚುನಾವಣಾ ಪ್ರಚಾರದ ವೇಳೆ ಹಿಲರಿ ಕ್ಲಿಂಟನ್, ‘ನಾವು ಸ್ಪಷ್ಟವಾದ ಸಂದೇಶ ರವಾನಿಸುವ ಜರೂರು ಇದೆ. ನಿಮ್ಮ ಮಕ್ಕಳು ಗಡಿದಾಟಿ ಬಂದಾಕ್ಷಣ ಅವರು ಇಲ್ಲಿ ಉಳಿಯಲು ಅರ್ಹತೆ ಪಡೆಯುವುದಿಲ್ಲ. ಕಾನೂನಿಗೆ ವಿರುದ್ಧವಾದ ಅಥವಾ ಗಡಿ ದಾಟಿ ಬರುವ ಆ ಅಪಾಯಕಾರಿ ಪ್ರಯಾಣವನ್ನು ಪ್ರೋತ್ಸಾಹಿಸುವ ಸಂದೇಶ ನಮ್ಮಿಂದ ರವಾನೆಯಾಗಬಾರದು’ ಎಂದಿದ್ದರು. ಇತ್ತ ಅಮೆರಿಕನ್ನರ ಅಭದ್ರತೆ, ಭೀತಿಯನ್ನು ವಿಜಯದ ಮೆಟ್ಟಿಲಾಗಿ ಕಂಡಿದ್ದ ಟ್ರಂಪ್, ಅಕ್ರಮ ವಲಸೆ ಮುಂದೊಡ್ಡಿರುವ ಅಪಾಯಗಳ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಅಕ್ರಮವಾಗಿ ಮೆಕ್ಸಿಕೊ ಭಾಗದಿಂದ ನುಸುಳುತ್ತಿರುವ ವಲಸಿಗರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಾದಕ ದ್ರವ್ಯಗಳನ್ನು ತಂದು ಇಲ್ಲಿನ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ತಾನು ಅಧಿಕಾರಕ್ಕೇರಿದರೆ ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ನಿರ್ಮಿಸುವ ಆಶ್ವಾಸನೆಯನ್ನೂ ಇತ್ತಿದ್ದರು.

ಆದರೆ ಗೋಡೆಯ ಪ್ರಸ್ತಾಪ ಆರ್ಥಿಕ ಹೊರೆಯ ಕಾರಣಕ್ಕೆ ಬಿದ್ದುಹೋಯಿತು. 2016-17ರ ಅವಧಿಯಲ್ಲಿ ಮೆಕ್ಸಿಕೊ ಸರ್ಕಾರದ ಜೊತೆ ವಲಸೆ ಸಮಸ್ಯೆ ಕುರಿತು ಮಾತುಕತೆ ನಡೆದು, ಗಡಿ ದಾಟಿ ಬರುವವರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಯಿತು. ಆದರೆ ಬದಲಾದ ಸನ್ನಿವೇಶದಲ್ಲಿ ಮೆಕ್ಸಿಕೊ ಮತ್ತು ಅಮೆರಿಕದ ಬಾಂಧವ್ಯ ಮುರುಟಿತು. ವಲಸೆ ತೀವ್ರವಾಯಿತು. ಮೆಕ್ಸಿಕೊದ ಗಡಿ ಭದ್ರತಾ ಪಡೆ, ಅಮೆರಿಕದೊಳಗೆ ಪ್ರವೇಶಿಸುವವರನ್ನು ಪ್ರೋತ್ಸಾಹಿಸಿತು! ಈ ವರ್ಷದ ಆರಂಭದಲ್ಲಿ ಮಧ್ಯ ಅಮೆರಿಕ ದೇಶಗಳಾದ ಗ್ವಾಟೆಮಾಲಾ, ಹಂಡೋರಸ್, ಎಲ್ ಸಾಲ್ವಡಾರ್‌ಗಳಿಂದ ಹೆಚ್ಚೆಚ್ಚು ಜನ ಎಲ್ಲೆ ಮೀರಿ ಅಮೆರಿಕ ಪ್ರವೇಶಿಸುವ ಪ್ರಯತ್ನ ಮಾಡಿದರು. ಮೇ ತಿಂಗಳಿನಲ್ಲಿ ಹೀಗೆ ಅಮೆರಿಕದತ್ತ ಬಂದವರ ಸಂಖ್ಯೆ 16 ಸಾವಿರ!

ಅಕ್ರಮ ವಲಸಿಗರ ಸಂಖ್ಯೆ ಏರಿದಂತೆ, ಕಡಿವಾಣ ಹಾಕಬೇಕು ಎಂಬ ಒತ್ತಡವೂ ಹೆಚ್ಚಿತು. ಟ್ರಂಪ್ ಆಡಳಿತ ‘ಶೂನ್ಯ ಸೈರಣೆ’ಯ (Zero Tolerance) ಕಠಿಣ ಕ್ರಮವನ್ನು ವಲಸೆ ತಡೆಗೆ ಬಳಸಿತು. ಸಮಸ್ಯೆ ಉದ್ಭವಿಸಿದ್ದೇ ಅಲ್ಲಿ. ಅಕ್ರಮ ವಲಸಿಗರನ್ನು ದಸ್ತಗಿರಿ ಮಾಡಿದ ಗಡಿ ಪಹರೆಯವರು, ಪೋಷಕರನ್ನು ವಿಚಾರಣೆಗೆಂದು ಒಂದು ಶಿಬಿರಕ್ಕೆ ಕಳುಹಿಸಿದರೆ, ಮಕ್ಕಳನ್ನು ಪ್ರತ್ಯೇಕ ಡೇರೆಗಳಲ್ಲಿ ಇಟ್ಟರು. ಆರು ವಾರಗಳ ಅವಧಿಯಲ್ಲಿ ತಂದೆ ತಾಯಿಯಿಂದ ಬೇರ್ಪಟ್ಟ 2000 ಮಕ್ಕಳು ಈ ಡೇರೆಯಲ್ಲಿ ಉಳಿದವು. ಮಗುವನ್ನು ಪಹರೆಯವರು ಕಸಿದುಕೊಂಡ ಆಘಾತದಿಂದ ಹಂಡೋರಸ್ ದೇಶದ ಓರ್ವ ಪೋಷಕ ಅಸುನೀಗಿದ್ದು ವರದಿಯಾಯಿತು. ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗ, ಇದು ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಎಂದಿತು. ನ್ಯಾಯಸಮ್ಮತವಲ್ಲ ಎಂದು ಕ್ಯಾಥೋಲಿಕ್ ಚರ್ಚ್ ಜರೆಯಿತು. ಪೋಷಕರಿಂದ ಬೇರ್ಪಡಿಸುವ ಕ್ರಿಯೆ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯವನ್ನು ಅಮೆರಿಕದ ಮನಶಾಸ್ತ್ರಜ್ಞರ ಒಕ್ಕೂಟ ದಾಖಲಿಸಿತು. ಮಾಜಿ ಅಧ್ಯಕ್ಷ ಬುಷ್ ಪತ್ನಿ ಲಾರಾ, ಒಬಾಮ ಮಡದಿ ಮಿಶೆಲ್ ಈ ವಿಷಯಕ್ಕೆ ಧ್ವನಿ ಸೇರಿಸಿದರು.

ಟ್ರಂಪ್ ಆಡಳಿತ ‘ಶೂನ್ಯ ಸೈರಣೆ’ ನೀತಿಯನ್ವಯ ಕೈಗೊಂಡ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ಕ್ರಮ ಅನವಶ್ಯಕವಾಗಿತ್ತು, ಅನೈತಿಕ ಎನಿಸಿಕೊಂಡಿತು. ಕೂಡಲೇ ಟ್ರಂಪ್ ‘ಇದು ನಾವು ಹೊಸದಾಗಿ ರೂಪಿಸಿದ ಕಟ್ಟಳೆಯಲ್ಲ. ಡೆಮೊಕ್ರಾಟರು ಮತ್ತು ಬುಷ್ ಆಡಳಿತ ಜಾರಿಗೆ ತಂದಿದ್ದ ಕಾನೂನು ಪಾಲಿಸುವ ಕೆಲಸವನ್ನು ನಮ್ಮ ಆಡಳಿತ ಮಾಡಿದೆ. ಆದರೆ ಇದು ಸರಿಯಲ್ಲ. ತಕ್ಷಣವೇ ಮಕ್ಕಳು ಮತ್ತು ಪೋಷಕರನ್ನು ಬೇರ್ಪಡಿಸುವ ಕಾಯ್ದೆಗೆ ಆಡಳಿತಾತ್ಮಕ ತಿದ್ದುಪಡಿ ತರುತ್ತೇನೆ’ ಎಂದರು. ತಿದ್ದುಪಡಿ ತಂದರು. ಅಲ್ಲಿಗೆ ಚರ್ಚೆಗೆ ಅಲ್ಪವಿರಾಮ ಬಿತ್ತು. ಆದರೆ ಕಳೆದ ನಾಲ್ಕು ವಾರಗಳ ಈ ಬೆಳವಣಿಗೆ, ವಲಸೆ ಕುರಿತ ಅಮೆರಿಕದ ಕಾನೂನು ಎಷ್ಟು ಗೋಜಲಾಗಿದೆ ಎಂಬುದನ್ನಂತೂ ಜಾಹೀರು ಮಾಡಿತು.

ಇನ್ನು, ಟ್ರಂಪ್ ‘ಕೇವಲ ಕಾನೂನು ಪಾಲಿಸುವ ಕೆಲಸ ಮಾಡಿದ್ದೇನೆ’ ಎಂದದ್ದಕ್ಕೂ ಕಾರಣವಿದೆ. ಅಪ್ರಾಪ್ತ ವಯಸ್ಕ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಚರ್ಚೆ 1980ರ ದಶಕದಿಂದಲೂ ಅಮೆರಿಕದಲ್ಲಿ ಚಾಲ್ತಿಯಲ್ಲಿದೆ. ಸರ್ಕಾರ ಅಕ್ರಮ ವಲಸಿಗ ಮಕ್ಕಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಸಾಕಷ್ಟು ಪ್ರಕರಣಗಳು 80ರ ದಶಕದಲ್ಲಿ ದಾಖಲಾಗಿದ್ದವು. 1985ರಲ್ಲಿ ಮಧ್ಯ ಅಮೆರಿಕದ ರಾಷ್ಟ್ರ, ಎಲ್ ಸಾಲ್ವಡಾರ್‌ನ ‘ಜೆನ್ನಿ ಪ್ಲೋರೆಸ್’ ಎಂಬ 15 ವರ್ಷದ ಬಾಲಕಿ, ತನ್ನ ಸಂಬಂಧಿಯೊಬ್ಬರ ತಲಾಶೆಗಾಗಿ ಅಮೆರಿಕ ಪ್ರವೇಶಿಸಿದ್ದಳು. ಆಗ ಗಡಿ ಕಾವಲುದಳ ಆ ಬಾಲಕಿಯನ್ನು ದಸ್ತಗಿರಿ ಮಾಡಿತ್ತು. ಜೆನ್ನಿ ಪರ ಅಮೆರಿಕದ ಸಿವಿಲ್ ಲಿಬರ್ಟಿ ಯೂನಿಯನ್ (ACLU) ವಕಾಲತ್ತು ವಹಿಸಿತು. ‘ಅಪ್ರಾಪ್ತ ವಯಸ್ಕ ಅಕ್ರಮ ವಲಸಿಗರನ್ನು ಅವರ ಹತ್ತಿರದ ಸಂಬಂಧಿಕರ ವಶಕ್ಕೊಪ್ಪಿಸಿ ಬಿಡುಗಡೆಗೊಳಿಸಬೇಕು. ಅವರಿಗೂ ಸಾಂವಿಧಾನಿಕ ಹಕ್ಕುಗಳು ಅನ್ವಯಿಸುತ್ತವೆ’ ಎಂದು ಫೆಡರಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತು.

ಫೆಡರಲ್ ನ್ಯಾಯಾಲಯದಲ್ಲಿ ಹಲವು ಸುತ್ತಿನ ವಿಚಾರಣೆ ನಡೆದ ಬಳಿಕ ಈ ಪ್ರಕರಣ 1993ರಲ್ಲಿ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಯಿತು. ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು, ಅಕ್ರಮ ವಲಸಿಗರಿಗೆ ಸಾಂವಿಧಾನಿಕ ಹಕ್ಕು ಅನ್ವಯಿಸುವುದಿಲ್ಲ ಎಂದು ತೀರ್ಪು ನೀಡಿತು. ಕೊನೆಗೆ 1997ರಲ್ಲಿ ಕ್ಲಿಂಟನ್ ಆಡಳಿತ ಒಂದು ರಾಜಿ ಸೂತ್ರಕ್ಕೆ ಬದ್ಧವಾಯಿತು. ಅದನ್ನು ‘ಪ್ಲೋರೆಸ್ ರಾಜಿ ಒಪ್ಪಂದ’ ಎಂದು ಕರೆಯಲಾಯಿತು.

ಪ್ಲೋರೆಸ್ ಒಪ್ಪಂದ ಸರ್ಕಾರಕ್ಕೆ ಕೆಲವು ಹೊಣೆಗಾರಿಕೆಯನ್ನು ಹೇಳುತ್ತದೆ. ಒಂದು- ಅಕ್ರಮ ವಲಸೆಯ ಕಾರಣದಿಂದ ವಶಕ್ಕೆ ತೆಗೆದುಕೊಂಡ ಮಕ್ಕಳನ್ನು ಶೀಘ್ರವಾಗಿ ಅವರ ಸಂಬಂಧಿಕರು ಅಥವಾ ಸ್ನೇಹಿತ ಕುಟುಂಬಕ್ಕೆ ವರ್ಗಾಯಿಸಬೇಕು. ಎರಡು- ಸರ್ಕಾರದ ಸುಪರ್ದಿಯಲ್ಲಿ ಇರಿಸಿಕೊಳ್ಳಬೇಕಾದ ಅನಿವಾರ್ಯ ಎದುರಾದರೆ, ಕನಿಷ್ಠ ನಿರ್ಬಂಧಗಳನ್ನು ಮಾತ್ರ ಹೇರಬಹುದು. ಮೂರು- ಪಾಲನೆ ಮತ್ತು ಉಪಚಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು.

ಮೊದಲಿಗೆ ಪ್ರತ್ಯೇಕ ಶಿಬಿರಗಳಲ್ಲಿ ಇಡುವ ಪದ್ಧತಿ ಪೋಷಕರಿಲ್ಲದೇ ಒಂಟಿಯಾಗಿ ಗಡಿ ದಾಟಿ ಬರುವ ಅಪ್ರಾಪ್ತ ವಯಸ್ಕರಿಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ ಬಳಿಕ ಅಲಸ್ಕಾ, ಅರಿಜೋನ, ಕ್ಯಾಲಿಫೋರ್ನಿಯಾ ಮುಂತಾದ ಒಂಬತ್ತು ರಾಜ್ಯಗಳಿಗೆ ಸಂಬಂಧಿಸಿದ ಮೇಲ್ಮನವಿ ವಿಚಾರಣಾ ಪೀಠ (ನೈಂಥ್ ಸರ್ಕ್ಯೂಟ್ ಕೋರ್ಟ್), ಪೋಷಕರೊಂದಿಗೆ ಬರುವ ಅಪ್ರಪ್ತಾ ವಯಸ್ಕ ಮಕ್ಕಳಿಗೂ ಪ್ಲೋರೆಸ್ ಕರಾರು ಅನ್ವಯವಾಗುತ್ತದೆ ಎಂದು ತೀರ್ಪು ನೀಡಿತು. ತಾನು ತೆಗೆದುಕೊಂಡ ನಿರ್ಣಯದ ಸಮಜಾಯಿಷಿಗೆ ಟ್ರಂಪ್ ಆಡಳಿತ ಬಳಸಿಕೊಂಡದ್ದು ಇದೇ ತೀರ್ಪನ್ನೇ.

ಇನ್ನು, ಅಮೆರಿಕದ ಮಟ್ಟಿಗೆ ವಲಸೆ ಎನ್ನುವುದು ಭಾಗ್ಯವನ್ನು ಪಣಕ್ಕೊಡ್ಡುವ ಕ್ರಿಯೆ. ವಿಶ್ವಸಂಸ್ಥೆಯ ವಲಸೆ ನಿರ್ವಹಣಾ ಏಜೆನ್ಸಿ (UNHCR) ವರದಿಯ ಪ್ರಕಾರ, ಅಮೆರಿಕ ಜಗತ್ತಿನ ಅತಿದೊಡ್ಡ ನಿರಾಶ್ರಿತ ಕೇಂದ್ರವಾಗಿ ಮಾರ್ಪಟ್ಟಿದೆ. ಆಶ್ರಯ ಕೋರಿ ಬರುವ ವಲಸಿಗರ ಯಾತನೆಯನ್ನು ಮಾನವೀಯ ನೆಲೆಗಟ್ಟಿನಿಂದ ನೋಡಬೇಕು, ಸ್ಪಂದಿಸಬೇಕು ಎಂಬುದು ನಿಜ. ಆದರೆ ಯಾರು ನಿಜಕ್ಕೂ ನಿರಾಶ್ರಿತರು?, ಘರ್ಷಣೆ, ಗಲಭೆ, ಪ್ರಾಣಭೀತಿಯಿಂದ ಬಂದವರು ಎಂದು ಗುರುತಿಸುವುದು ಅಮೆರಿಕದ ಪಾಲಿಗೆ ಇದೀಗ ಸವಾಲಾಗಿದೆ.

‘ಅಮೆರಿಕ ಒಂದು ಕನಸು. ಅಮೆರಿಕ ಎಂದರೆ ಅವಕಾಶ’ ಈ ಭಾವ ಹಲವರನ್ನು ಆ ದೇಶದತ್ತ ಆಸೆಗಣ್ಣಿನಿಂದ ನೋಡುವಂತೆ ಮಾಡುತ್ತದೆ. ನೌಕರಿ, ಸ್ಥಿರ ಆದಾಯ, ಹೆಚ್ಚಿನ ವೇತನ, ಸವಲತ್ತುಗಳಿಂದಾಗಿ ಅಮೆರಿಕ ಆಕರ್ಷಣೀಯ. ಆದರೆ ಈ ಯಾವ ಕಾರಣಗಳೂ ಅಮೆರಿಕದಲ್ಲಿ ದೀರ್ಘಾವಧಿ ನೆಲೆಸಲು ಕಾನೂನು ರೀತಿಯಾಗಿ ಅನುಕೂಲವಲ್ಲ. ಹೀಗೆ ಬರುವವರಿಗೆ ಇರಬೇಕಾದ ಅರ್ಹತೆ, ಉಳಿದುಕೊಳ್ಳಬಹುದಾದ ಅವಧಿ ಎಲ್ಲಕ್ಕೂ ಮಾನದಂಡಗಳಿವೆ. ಕಾನೂನು ಜಟಿಲಗೊಂಡಿದೆ. ಆಶ್ರಯ ಕೋರಿ ಬರುವುದೇ ಸುಲಭದ ಮಾರ್ಗ. ಹಾಗಾಗಿ ವಲಸೆ ಕಾಯ್ದೆ, ನಿಯಮಗಳ ಆಚೆಗೆ ಅಮೆರಿಕದೊಳಕ್ಕೆ ತೂರಿಕೊಳ್ಳಬಲ್ಲ ಹೆದ್ದಾರಿಯಾಗಿ ಮೆಕ್ಸಿಕೊ ಮಾರ್ಪಟ್ಟಿದೆ.

ಹೀಗೆ ಬರುವವರಲ್ಲಿ ಭಾರತೀಯರೂ ಸೇರಿದ್ದಾರೆ! ಸಣ್ಣಪುಟ್ಟ ಹೊಟೇಲ್‌ಗಳಲ್ಲಿ ಕೆಲಸ ಮಾಡುವ ಪಂಜಾಬಿ, ಗುಜರಾತಿ ಕುಟುಂಬಗಳು ಅಮೆರಿಕದ ಪ್ರತೀ ಊರಿನಲ್ಲೂ ಕಾಣಸಿಗುತ್ತವೆ. ಅವರಲ್ಲಿ ಅನೇಕರು ಹೀಗೆ ಮೆಕ್ಸಿಕೊ ಮೂಲಕ ‘ಕಾರಣ ಹೇಳಿ’ ನುಸುಳಿಬಂದವರೇ ಆಗಿರುತ್ತಾರೆ. ಅಮೆರಿಕ ಸೇರಿದಂತೆ ಯಾವುದೇ ದೇಶಕ್ಕೆ ವಲಸೆ ಅನುಕೂಲಕರವಾಗಿ ಮಾರ್ಪಟ್ಟಾಗ ಯಾವ ತಕರಾರೂ ಇರುವುದಿಲ್ಲ. ಕಟ್ಟಡ ನಿರ್ಮಾಣಕ್ಕೆ, ಕೈಗಾರಿಕೆಗೆ ಮೆಕ್ಸಿಕೊ ಇತ್ಯಾದಿ ನೆರೆ ದೇಶಗಳಿಂದ ಅಗ್ಗದ ಬೆಲೆಯ ಕಾರ್ಮಿಕರನ್ನು ಅಮೆರಿಕ ಈಗಲೂ ಕರೆತರುತ್ತದೆ. ಐಟಿ ಕ್ಷೇತ್ರದ ಬೇಡಿಕೆಗೆ ಭಾರತ ಸರಬರಾಜು ಮಾಡುತ್ತಿದೆ. ಆದರೆ ಆರ್ಥಿಕತೆ ಕುಸಿದು, ಉದ್ಯೋಗಗಳು ಇಲ್ಲವಾಗಿ ಆಯಾ ದೇಶದ ಪೌರರು, ವಲಸಿಗರೊಂದಿಗೆ ಸ್ಪರ್ಧೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾದಾಗ ಸಿಟ್ಟು, ಅಸಹನೆ ಸ್ಫೋಟಗೊಳ್ಳುತ್ತದೆ. ವಿರೋಧ ಹೆಮ್ಮರವಾಗುತ್ತದೆ. ಈಗ ಆಗಿರುವುದು ಅದೇ.

ಉಳಿದಂತೆ, ದಸ್ತಗಿರಿ ಮಾಡಲ್ಪಟ್ಟ ಅಕ್ರಮ ವಲಸಿಗರನ್ನು ನಡೆಸಿಕೊಳ್ಳುವ ವಿಚಾರದಲ್ಲಿ ಅಮೆರಿಕ ಪ್ರಬುದ್ಧತೆ ತೋರಬೇಕಿದೆ. ವಿಚಾರಣಾ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಗುರುತಿಸಿ ಕಾನೂನು ರೂಪಿಸಬೇಕಿದೆ. ಕುಟುಂಬಗಳನ್ನು ಒಟ್ಟಿಗೇ ಇರಿಸಿ, ವಸತಿ ಉಪಚಾರಗಳಲ್ಲಿ ಗುಣಮಟ್ಟ ಕಾಯ್ದುಕೊಂಡು, ಕ್ಷಿಪ್ರವಾಗಿ ತನಿಖೆ ನಡೆಯುವಂತೆ ಮಾಡಿದರೆ, ಅಷ್ಟರಮಟ್ಟಿಗೆ ಪ್ರಕ್ರಿಯೆ ವ್ಯವಸ್ಥಿತವಾಗುತ್ತದೆ.

ಒಂದಂತೂ ದಿಟ, ಯಾವುದೇ ದೇಶದ ವಲಸೆ ಸಮಸ್ಯೆಯನ್ನು ಬಲಪಂಥೀಯರ ತೀವ್ರ ರಾಷ್ಟ್ರೀಯವಾದ ಅಥವಾ ಎಡಪಂಥೀಯರು ಮುಂದುಮಾಡುವ ಜನಾಂಗೀಯ ದ್ವೇಷ ಹಾಗೂ ಮಾನವೀಯತೆ ಎಂಬ ಸೀಮಿತ ಪರಿಧಿಯಲ್ಲಿಟ್ಟು ಚರ್ಚಿಸಿದರೆ, ಅದು ದಿಕ್ಕುತಪ್ಪಿದ ಚರ್ಚೆಯಾಗುತ್ತದೆ. ಒಂದು ದೇಶ ಯಾರನ್ನು ಒಳಗೆ ಬಿಟ್ಟುಕೊಳ್ಳಬೇಕು. ಅದಕ್ಕೆ ಇರಬೇಕಾದ ಮಾನದಂಡ ಏನು? ಪ್ರಕ್ರಿಯೆ ಯಾವುದಿರಬೇಕು? ಎಂಬುದು ಆಡಳಿತದ ವಿಷಯ. ಅಮೆರಿಕದ ವಲಸೆ ನಿರ್ವಹಣಾ ವ್ಯವಸ್ಥೆ ಹಳಿತಪ್ಪಿದೆ ಎಂಬುದು ಈ ಪ್ರಕರಣ ನಿರೂಪಿಸಿದ ಸತ್ಯ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !