ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಕೋರ್ಟ್: ಹಿಮ್ಮುಖ ಚಲನೆಗೆ ಮತ್ತೊಂದು ಹೆಜ್ಜೆ

Last Updated 28 ಆಗಸ್ಟ್ 2018, 19:27 IST
ಅಕ್ಷರ ಗಾತ್ರ

ಭಾರತದ 72ನೇ ಸ್ವಾತಂತ್ರ್ಯ ದಿನದಂದು ದೇಶದ ಬಹುಸಂಖ್ಯಾತ ಸಮುದಾಯವು ಹಿಮ್ಮುಖ ಚಲನೆಗೆ ಚಾಲನೆ ನೀಡಿದೆ. ಅಖಿಲ ಭಾರತ ಹಿಂದೂ ಮಹಾಸಭಾ, ಮೇರಠ್’ನಲ್ಲಿ ಹಿಂದೂ ಕೋರ್ಟ್ ಸ್ಥಾಪಿಸುವ ಮೂಲಕ ಒಂದು ಹೆಜ್ಜೆ ಹಿಂದಿಟ್ಟಿದೆ.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ಅಮಾನ್ಯಗೊಳಿಸಬೇಕೆಂಬ ಹಿಂದುತ್ವವಾದಿಗಳ ಹಟ ಇಂದು ನಿನ್ನೆಯದಲ್ಲ. ಷರಿಯಾ ನ್ಯಾಯಾಲಯದ ಸರಿತಪ್ಪುಗಳ ಚರ್ಚೆ ಸಾಕಷ್ಟು ನಡೆದಿರುವುದರಿಂದಲೂ, ಅದು ಈ ಲೇಖನದ ಉದ್ದೇಶವಲ್ಲದೆ ಇರುವುದರಿಂದಲೂ ಆ ಬಗ್ಗೆ ಮತ್ತೆ ಬರೆಯುತ್ತಿಲ್ಲ. ಅಲ್ಲದೆ, 2014ರಲ್ಲಿ ಸುಪ್ರೀಂ ಕೋರ್ಟ್ ‘ಷರಿಯಾ ನ್ಯಾಯಾಲಯದ ತೀರ್ಪುಗಳಿಗೆ ಕಾನೂನು ಮಾನ್ಯತೆ ಇಲ್ಲ’ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಷರಿಯಾ ಮತ್ತು ಮಸೀದಿಗಳು ಹೊರಡಿಸುವ ಸಂವಿಧಾನವಿರೋಧಿ ಫತ್ವಾಗಳಿಗೆ ಒಟ್ಟು ಸಮಾಜದಲ್ಲಿ ಕವಡೆ ಕಿಮ್ಮತ್ತೂ ಇಲ್ಲ. ಮಾನವ ಹಕ್ಕುಗಳನ್ನು ಚ್ಯುತಿಗೊಳಿಸುವಂಥ ತೀರ್ಪು ಷರಿಯಾದಿಂದ ಹೊರಬಿದ್ದಾಗೆಲ್ಲ ಪ್ರತಿರೋಧಗಳು ದಾಖಲಾಗುತ್ತವೆ. ಈ ಕಾರಣದಿಂದಲೂ ಅದರ ಚರ್ಚೆ ಇಲ್ಲಿ ಅನಗತ್ಯ.

ಆದರೆ, ಹಿಂದೂ ಕೋರ್ಟ್ ಸ್ಥಾಪನೆಗೆ ಷರಿಯಾ ಒಂದು ನೆಪವಾಯಿತು ಅನ್ನುವುದಂತೂ ಸತ್ಯ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ; ಕೆಲವು ಮೂಲಭೂತವಾದಿ ಮುಸ್ಲಿಮರು, ‘ದೇಶದೆಲ್ಲೆಡೆ ಷರಿಯಾ ನ್ಯಾಯಾಲಯಗಳನ್ನು (ದಾರುಲ್ ಖಝಾ)ಸ್ಥಾಪಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಯಿತು. ಇದರೊಂದಿಗೆ, ಅಪ್ರಸ್ತುತವಾಗಿದ್ದ ಷರಿಯಾ ಚರ್ಚೆ ಮತ್ತೆ ಚಾಲ್ತಿಗೆ ಬಂತು. ಅದರ ನಂತರದ ಬೆಳವಣಿಗೆಯೇ ಈ ‘ಹಿಂದೂ ಕೋರ್ಟ್’ ಸ್ಥಾಪನೆ.

‘ಷರಿಯಾ ಕೋರ್ಟ್ ಮೇಲೆ ನಿಷೇಧ ಹೇರಬೇಕು, ಇಲ್ಲವಾದರೆ, ನಾವು ಹಿಂದೂ ಕೋರ್ಟ್ ಸ್ಥಾಪಿಸುತ್ತೇವೆ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಆಗಸ್ಟ್ ವರೆಗೆ ಗಡುವು ನೀಡಿ ಘೋಷಣೆ ಹೊರಡಿಸಿತು. ‘ಷರಿಯಾ ನ್ಯಾಯಾಲಯಗಳು ಇಸ್ಲಾಮಿಕ್ ಕಾನೂನು ಪ್ರಕಾರ ನಿರ್ಣಯಗಳನ್ನು ಕೈಗೊಳ್ಳುತ್ತವೆ. ಅದೇ ಮಾದರಿಯಲ್ಲಿ, ಹಿಂದೂ ಸಂಹಿತೆಗಳ ಪ್ರಕಾರ ಹಿಂದೂ ಕೋರ್ಟ್ ಸ್ಥಾಪನೆ ಮಾಡು
ತ್ತೇವೆ’ ಎಂದೂ ಅದು ಹೇಳಿಕೊಂಡಿತು. ತಿಂಗಳೊಪ್ಪತ್ತಿನಲ್ಲೇ ಕಾರ್ಯರೂಪಕ್ಕೂ ತಂದು, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮೊದಲ ಹಿಂದೂ ಕೋರ್ಟ್ ಸ್ಥಾಪನೆ ಮಾಡಿಯೂ ಬಿಟ್ಟಿತು.

ಷರಿಯಾ ಸಮಾನತೆಯ ವಿರೋಧಿ ಅನ್ನುವ ಕಾರಣಕ್ಕೆ, ಹಿಂದೂ ಮಹಾಸಭಾ ಅದನ್ನು ವಿರೋಧಿಸಿದ್ದರೆ ದನಿಗೂಡಿಸಬಹುದಿತ್ತು. ಅದರ ವಿರೋಧವೆಲ್ಲಾ ‘ಅದು ಮುಸ್ಲಿಂ’ ಅನ್ನುವ ಕಾರಣಕ್ಕಾಗಿ. ಹಾಗೆಂದು ಅದು ನೇರವಾಗಿಯೇನೂ ಹೇಳಿಕೊಳ್ಳುವುದಿಲ್ಲ. ಮಹಾಸಭಾದ ಮುಖಂಡರು ತಮ್ಮ ಸಮರ್ಥನೆಗಾಗಿ ಸಂವಿಧಾನವನ್ನು ಮುಂದಿಡುತ್ತಾರೆ. ಅದರ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ, ‘ದೇಶದಲ್ಲಿ ಒಂದು ಕಾನೂನು ವ್ಯವಸ್ಥೆ ಜಾರಿಯಲ್ಲಿರಬೇಕು ಅನ್ನುವುದು ನಮ್ಮ ಆಗ್ರಹ. ಅದಕ್ಕಾಗಿಯೇ ಕೋರ್ಟಿನಲ್ಲಿ ಷರಿಯಾದ ಅಸ್ತಿತ್ವವನ್ನು ಪ್ರಶ್ನಿಸಿದ್ದೆವು. ಎಲ್ಲರಿಗೂ ಒಂದೇ ಸಂವಿಧಾನವಿರಬೇಕು. ನಿರ್ದಿಷ್ಟ ಧರ್ಮಕ್ಕೆ ಪ್ರತ್ಯೇಕ ವ್ಯವಸ್ಥೆ ಇರಬಾರದು ಅನ್ನುವುದು ನಮ್ಮ ವಾದವಾಗಿತ್ತು. ನಾವು ಸಮಾನತೆಯನ್ನು ಬಯಸಿದ್ದೆವು. ಆದರೆ ನಮಗೆ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಆದ್ದರಿಂದಲೇ ಹಿಂದೂ ಕೋರ್ಟ್ ಸ್ಥಾಪಿಸಿದ್ದೇವೆ’ ಎನ್ನುತ್ತಾ, ಸಮಾನತೆಯ ದೊಡ್ಡದೊಡ್ಡ ಮಾತುಗಳನ್ನಾಡುತ್ತಾರೆ.

ಆದರೆ ಹಿಂದೂ ಮಹಾಸಭಾದ ಈವರೆಗಿನ ನಡೆಯನ್ನು ಗಮನಿಸಿದರೆ; ಇವರ ಆಸಕ್ತಿಯೆಲ್ಲ ಮುಸ್ಲಿಂ ವಿರೋಧಕ್ಕೆ ಸೀಮಿತವೇ ಹೊರತು, ಹಿಂದೂ ಹಿತಚಿಂತನೆಯ ಕುರಿತಾಗಿ ಅಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ನ್ಯಾಯವು ಎಲ್ಲರಿಗೂ ಸಮಾನವಾಗಿರಬೇಕು, ಪ್ರತ್ಯೇಕ ನ್ಯಾಯ ವ್ಯವಸ್ಥೆ ಇರಬಾರದು ಎನ್ನುವ ಇವರ ಬಯಕೆ ಪ್ರಾಮಾಣಿಕವೇ ಆಗಿದ್ದಲ್ಲಿ, ಇವರೇಕೆ ಖಾಪ್ ಪಂಚಾಯ್ತಿಗಳ ಬಗ್ಗೆ ಚಕಾರ ಎತ್ತುವುದಿಲ್ಲ? ವಿಶೇಷವಾಗಿ ಉತ್ತರ ಭಾರತದ, ಅದರಲ್ಲೂ ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶಗಳಲ್ಲಿ ಪೈಶಾಚಿಕ ರೂಪ ತಳೆದಿರುವ ಖಾಪ್ ಪಂಚಾಯ್ತಿಗಳು ಯಾವ ಸಂವಿಧಾನಕ್ಕೆ ಅನುಗುಣವಾಗಿ ವರ್ತಿಸುತ್ತಿವೆ? ಅವು ಹೊರಡಿಸುವ ಕೆಲವು ‘ದಿಕ್ತತ್’ಗಳ ಕ್ರೌರ್ಯವಂತೂ ಎದೆ ನಡುಗಿಸುತ್ತದೆ!

ಅತ್ಯಾಚಾರದ ಆರೋಪ ಮಾಡಿದವರ ಮೇಲೆಯೇ ಸಾಮೂಹಿಕ ಅತ್ಯಾಚಾರ ನಡೆಸುವ ತೀರ್ಪು, ಗರ್ಭಿಣಿಯನ್ನು ಬೆತ್ತಲೆ ಮೆರವಣಿಗೆ ಮಾಡುವ ತೀರ್ಪು, ದಲಿತ ಮಹಿಳೆಗೆ ಮೇಲ್ವರ್ಗದವನ ಉಚ್ಚೆ ಕುಡಿಸುವ ತೀರ್ಪು, ಪ್ರೇಮಿಗಳನ್ನು ಕಂಬಕ್ಕೆ ಕಟ್ಟಿ ಹೊಡೆಯುವ, ಸುಟ್ಟು ಹಾಕುವ ತೀರ್ಪು, ಗರ್ಭಪಾತ ಮಾಡಿಸುವ ತೀರ್ಪು… ಇಂಥಾ ತೀರ್ಪುಗಳು ಭಾರತೀಯ ದಂಡಸಂಹಿತೆಯ ಯಾವ ಕಾನೂನಿನ ಅಡಿಯಲ್ಲಿ ವಿಧಿಸಲ್ಪಟ್ಟಿವೆ? ಸಂವಿಧಾನವನ್ನು ಮೀರಿ ನೀಡಲಾಗುತ್ತಿರುವ ಖಾಪ್ ನ್ಯಾಯದ ವಿರುದ್ಧ ಮಹಾಸಭಾ ಯಾಕೆ ಮಾತಾಡುವುದಿಲ್ಲ? ಅದನ್ನು ನಿಷೇಧಿಸುವಂತೆ ಯಾಕೆ ಆಗ್ರಹಿಸುವುದಿಲ್ಲ? ಅದರಲ್ಲೂ ಖಾಪ್ (ಅ)ನ್ಯಾಯದಿಂದ ಶಿಕ್ಷೆ ಪಡೆದವರಲ್ಲಿ ಬಹುಪಾಲು (ಶೇ 90) ಹಿಂದೂಗಳೇ ಇದ್ದಾರೆ. ಆದರೂ ಮಹಾಸಭಾಗೆ ಕುರುಡು, ಕಿವುಡು!

ಹಿಂದೂ ಕೋರ್ಟ್ ಸ್ಥಾಪನೆಯ ಹಿಂದೆ, ನ್ಯಾಯದ ಉದ್ದೇಶವಾಗಲೀ ಹಿಂದೂ ಹಿತರಕ್ಷಣೆಯಾಗಲೀ ಇಲ್ಲವೆನ್ನಲು ಇಷ್ಟು ಸಾಕ್ಷಿ ಸಾಕಲ್ಲವೇ?

ಷರಿಯಾ ಮೇಲಿನ ಪೈಪೋಟಿಗೆಂದೇ ಸ್ಥಾಪನೆಯಾಗಿರುವ ಹಿಂದೂ ಕೋರ್ಟ್, ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಹೆಚ್ಚು ಅಪಾಯಕಾರಿಯಾಗಲಿದೆ. ಈಗಾಗಲೇ ದೊಡ್ಡ ಸಂಖ್ಯೆಯ ವಿದ್ಯಾವಂತರೂ ಹಿಂದುತ್ವವನ್ನು ಒಂದು ‘ಫ್ಯಾಶನ್’ನಂತೆ ಪರಿಗಣಿಸತೊಡಗಿದ್ದಾರೆ, ಅದರ ಸಮರ್ಥನೆಗೆ ಬಿದ್ದಿದ್ದಾರೆ. ಅದಕ್ಕೆ ಸರಿಯಾಗಿ, ಹಿಂದೂ ಕೋರ್ಟ್ ರೂಪಿಸಲು ಹೊರಟಿರುವ ಕಾನೂನು ಕೂಡಾ ಆತಂಕ ತರುವಂತಿದೆ. ‘ಶಿಕ್ಷೆ ಜಾರಿಗೊಳಿಸುವುದಕ್ಕಾಗಿ ಜೈಲು ವ್ಯವಸ್ಥೆಯನ್ನು ಅಣಿಗೊಳಿಸುತ್ತಿದ್ದೇವೆ. ಹಿಂದೂ ಕಾನೂನಿನಲ್ಲಿ ಮರಣದಂಡನೆಗೆ ಗರಿಷ್ಠ ಅವಕಾಶ ಇರಲಿದೆ’ ಎಂದು ಹಿಂದೂ ಕೋರ್ಟ್ ನ ಪ್ರಥಮ ನ್ಯಾಯಾಧೀಶರಾದ ಪೂಜಾ ಶಕುನ್ ಪಾಂಡೆ ಹೇಳಿದ್ದಾರೆ. ಅಷ್ಟೇ ಅಲ್ಲ, ‘ಈಗಿನ ಕೋರ್ಟ್ ಗಳು ದಲಿತರು ಮತ್ತು ಮಹಿಳೆಯರಿಗೆ ಅನಗತ್ಯ ಮನ್ನಣೆ ನೀಡುತ್ತಿವೆ. ನಾವು ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ದಲಿತರು ಹೇಳಿಕೆ ನೀಡಿದ ಮಾತ್ರಕ್ಕೆ ಕ್ರಮ ಕೈಗೊಳ್ಳಬೇಕು ಅನ್ನುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ಖಾಪ್ ದಿಕ್ತತ್ ನಿಂದ ಪ್ರಜಾಪ್ರಭುತ್ವದ ಅಣಕ ನಡೆಯುತ್ತಿದೆ. ಸಮೂಹಗಳೇ ಶಿಕ್ಷೆ ನೀಡುವ ‘ಮಾಬ್ ಲಿಂಚಿಂಗ್’ ಕೈಮೀರುತ್ತಿದೆ. ಮಹಿಳೆಯರು ಮತ್ತು ದಲಿತರು ಸಾಂವಿಧಾನಿಕ ನ್ಯಾಯ ವ್ಯವಸ್ಥೆಯಲ್ಲೂ ಸೂಕ್ತ ನೆರವು ಪಡೆಯಲಾಗದೆ ಹೈರಾಣಾಗಿದ್ದಾರೆ. ಹೀಗಿರುವಾಗ, ಹಿಂದೂ ಕೋರ್ಟಿನ ದಾರ್ಷ್ಟ್ಯವೂ ಸೇರಿಕೊಂಡರೆ ಗತಿಯೇನು!?

ಸಾಲದೆಂಬಂತೆ; ಮೊದಲ ಹಿಂದೂ ಕೋರ್ಟ್ ಚಾಲನೆ ಪಡೆದಿರುವುದು ಗೋಡ್ಸೆ ವಿಗ್ರಹದ ಸಮ್ಮುಖದಲ್ಲಿ! ‘ಗೋಡ್ಸೆ ಜನ್ಮದಿನದಂದು ನಮ್ಮ ಬೈ ಲಾ ಘೋಷಿಸುತ್ತೇವೆ’ ಎಂದು ಶರ್ಮ ಹೇಳಿಕೊಂಡಿದ್ದಾರೆ. ಹಿಂದೂ ಹಿತಚಿಂತನೆಗೂ ಗೋಡ್ಸೆಗೂ ಏನು ಸಂಬಂಧ? ‘ಗಾಂಧಿ ತಪ್ಪು ಮಾಡಿದ್ದಾರೆ’ ಎಂದು ತನಗೆ ತಾನೇ ತೀರ್ಪು ಕೊಟ್ಟುಕೊಂಡು, ಅವರ ಕೊಲೆ ಮಾಡಿ, ಅದನ್ನು ‘ಶಿಕ್ಷೆ’ ಎಂದು ಘೋಷಿಸಿದ ಗೋಡ್ಸೆ ಮತ್ತವನ ಸಿದ್ಧಾಂತ ಹಿಂದೂಗಳಿಗೆ ಎಷ್ಟರ ಮಟ್ಟಿಗೆ ನ್ಯಾಯ ನೀಡಬಲ್ಲದು!?

‘ಭಾರತ ಬಹುತ್ವದ ರಾಷ್ಟ್ರ. ಒಂದು ಕಡೆ ಇಂಥ ವಿಚ್ಛಿದ್ರಕಾರಿ ಶಕ್ತಿ ತಲೆ ಎತ್ತಿದರೆ, ಹತ್ತು ಕಡೆ ಅದಕ್ಕೆ ಪ್ರತಿರೋಧ ಹುಟ್ಟುತ್ತವೆ. ಚಿಂತಿಸಬೇಕಿಲ್ಲ’ ಎಂದು ಕೆಲವರು ಹೇಳುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಿಲ್ಲ. ಇವೆಲ್ಲವೂ ಹೆಚ್ಚೂಕಡಿಮೆ 90 ವರ್ಷಗಳ ಪೋಷಣೆಯ ವಿಷಫಲ ಅನ್ನುವುದನ್ನು ಮರೆಯಬಾರದು. ಇಂದು ಧರ್ಮ, ಅರ್ಥಶಾಸ್ತ್ರ, ನ್ಯಾಯ ಇತ್ಯಾದಿಗಳ ಹೆಸರಲ್ಲಿ ಮಾಡುತ್ತಿರುವ ಹೇರಿಕೆಗಳು ಹಿಂದುತ್ವವಾದಿಗಳ ಬಿತ್ತನೆ ಪ್ರಕ್ರಿಯೆಯಲ್ಲ… ಇವೆಲ್ಲವೂ ಕಟಾವಿನ ಪ್ರಕ್ರಿಯೆಗಳು. ಸ್ವಾತಂತ್ರ್ಯ ದಿನ ಹತ್ತಿರ ಇರುವಾಗಲೇ ಸಂವಿಧಾನವನ್ನು ಸುಟ್ಟು, ತಮ್ಮ ಸಿದ್ಧತೆಯನ್ನು ಅವರು ತೋರಿಕೊಂಡಿದ್ದಾರೆ ಕೂಡಾ.

ಮಹಾಸಭಾದ ರಣೋತ್ಸಾಹ ಮತ್ತು ಕಾರ್ಯವೈಖರಿ ನೋಡಿದರೆ, ಮುಂದಿನ ಅಗಸ್ಟ್ 15ರ ವೇಳೆಗೆ ಕನಿಷ್ಠ 50 ಹಿಂದೂ ಕೋರ್ಟ್ ಗಳ ಸ್ಥಾಪನೆಯಾಗಲಿದೆ. ಜನರು ಅವುಗಳತ್ತ ಸುಳಿಯದಂತೆ ಕನಿಷ್ಠ ಜಾಗೃತಿಯನ್ನಾದರೂ ಮೂಡಿಸಲು ಸಾಧ್ಯವೇ? ಸಾಧ್ಯವಿದ್ದರೆ, ಈ ಮಹತ್ವದ ಜವಾಬ್ದಾರಿ ಹೊರುವವರು ಯಾರು? ಇವು ಸದ್ಯದ ಪ್ರಶ್ನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT