ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ: ಭಾರತದ ಫಾಸ್ಟ್‌ ಬ್ರೀಡರ್‌ ಬಿಸಿತುಪ್ಪ

ವಿಶ್ವಗುರುವೊ ಅಥವಾ ನಗೆಪಾಟಲಿಗೆ ಗುರಿಯೊ -ಎರಡರಲ್ಲೊಂದಂತೂ ಖಚಿತ
Last Updated 8 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

‘ಬರುವ ಸೆಪ್ಟೆಂಬರ್‌ ತಿಂಗಳಲ್ಲಿ ನಾವು ‘ಭಾವಿನಿ’ ಫಾಸ್ಟ್‌ ಬ್ರೀಡರ್‌ ಸ್ಥಾವರವನ್ನು ಲೋಕಾರ್ಪಣೆ ಮಾಡಲಿದ್ದೇವೆ’- ಹೀಗೆಂದು ಕಲ್ಪಾಕ್ಕಂನಲ್ಲಿರುವ ಇಂದಿರಾ ಗಾಂಧಿ ಅಟಾಮಿಕ್‌ ಸಂಶೋಧನ ಕೇಂದ್ರದ ನಿರ್ದೇಶಕ ಪದ್ಮಶ್ರೀ ಡಾ. ಬಲದೇವ್‌ ರಾಜ್‌ ಹಿಂದೊಮ್ಮೆ ಹೇಳಿದ್ದರು. ಭಾರತದ ನ್ಯೂಕ್ಲಿಯರ್‌ ತಂತ್ರಜ್ಞಾನದ ಮಹೋನ್ನತ ಸಾಧನೆಯನ್ನು ಜಗತ್ತಿಗೇ ಪ್ರದರ್ಶಿಸುವ ಉತ್ಸಾಹ ಅವರ ಮಾತಿನಲ್ಲಿತ್ತು.

ನಾಗೇಶ ಹೆಗಡೆ
ನಾಗೇಶ ಹೆಗಡೆ

ಅಂದಹಾಗೆ, ಅವರ ಆ ಮಾತು ಈಚಿನದಲ್ಲ; ಹತ್ತು ವರ್ಷಗಳ ಹಿಂದಿನ (2011ರ) ಸೆಪ್ಟೆಂಬರ್‌ ಬಗ್ಗೆ ಹೇಳಿದ್ದಾಗಿತ್ತು. ‘ಭಾರತೀಯ ನಾಭಿಕೀಯ ವಿದ್ಯುತ್‌ ನಿಗಮ’ (ಭಾವಿನಿ) ಹೆಸರಿನ ಈ ಮಾಯಾ ಸ್ಥಾವರದ ಲೋಕಾರ್ಪಣೆಯ ಮುಹೂರ್ತ ಮುಂದಕ್ಕೆ ಮುಂದಕ್ಕೆ ಹೋಗುತ್ತಲೇ ಇದೆ. ಇತ್ತೀಚಿನ ಅಂದಾಜಿನ ಪ್ರಕಾರ 2022ರ ಡಿಸೆಂಬರ್‌ನಲ್ಲಿ ಇದು ಕಾರ್ಯಾರಂಭ ಮಾಡ ಬಹುದು. ಮಾಡಿದ್ದೇ ಆದರೆ, ಅಲ್ಲಿಗೆ ಅದಕ್ಕೆ ಹಣ ಸುರಿಯಲು ತೊಡಗಿ ಸುಮಾರು 50 ವರ್ಷಗಳಾಗಿರುತ್ತವೆ. ಅಥವಾ ಇನ್ನೂ ಜಾಸ್ತಿಯೇ ಅನ್ನಿ. ಡಾ. ಹೋಮಿ ಭಾಭಾರಿಂದ ಹಿಡಿದು, ವಿಕ್ರಮ್‌ ಸಾರಾಭಾಯಿ, ಹೋಮಿ ಸೇಥ್ನಾ, ರಾಜಾರಾಮಣ್ಣ, ಅನಿಲ್‌ ಕಾಕೋಡ್ಕರ್‌ ಸೇರಿ ದಂತೆ ಎಲ್ಲ ಪದ್ಮ ಪ್ರಶಸ್ತಿ ವಿಜೇತ ಪರಮಾಣು ವಿಜ್ಞಾನಿಗಳ ಥಳಕಿನ ಮಾಯಾಮೃಗ ಅದು. ಕೈಗೆಟಕುತ್ತಿಲ್ಲ ಆದರೆ ಕೈಬಿಡಲು ಇಷ್ಟವಿಲ್ಲ. ಇನ್ನು ಅದಕ್ಕೆ ಸುರಿದ ಹಣವೋ- ಆಗ ಮೂರೂವರೆ ಸಾವಿರ ಕೋಟಿ ಇತ್ತು; ಈಗ ಆರರ ಮುಂದೆ ಹತ್ತು ಸೊನ್ನೆ. ವಿದ್ಯುತ್‌ ಉತ್ಪಾದನೆ ಮಾತ್ರ ಬರೀ ಸೊನ್ನೆ.

ಅದನ್ನು ಈಗ ಇಲ್ಲಿ ಪ್ರಸ್ತಾಪಿಸಲು ಒಂದು ಕಾರಣ ಇದೆ: ಇದೀಗ ಜಗತ್ತಿನ ಇಬ್ಬರು ಮಹಾ ಕೋಟ್ಯಧೀಶರು ಒಟ್ಟಾಗಿ (ಬಿಲ್‌ ಗೇಟ್ಸ್‌ ಮತ್ತು ವಾರೆನ್‌ ಬಫೆಟ್) ಇದೇ ತಂತ್ರಸಾಹಸಕ್ಕೆ ಕೈ ಹಾಕಿದ್ದಾರೆ. ಅಮೆರಿಕದ ವಯೊಮಿಂಗ್‌ ಎಂಬಲ್ಲಿ ನೇಟ್ರಿಯಂ ಹೆಸರಿನ ಚಿಕ್ಕದೊಂದು ಫಾಸ್ಟ್‌ ಬ್ರೀಡರ್‌ ಪರಮಾಣು ಸ್ಥಾವರವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಬರುತ್ತಿರುವ ಬಿಸಿ ಪ್ರಳಯವನ್ನು ತಪ್ಪಿಸಬೇಕೆಂದರೆ ಕಲ್ಲಿದ್ದಲು, ಪೆಟ್ರೋಲಿಯಂನಂಥ ಹೊಗೆಯುಗುಳುವ ಫಾಸಿಲ್‌ ಇಂಧನಗಳ ಬಳಕೆಯನ್ನು ಕೈಬಿಡಬೇಕಾಗುತ್ತದೆ. ಸೂರ್ಯನಿಂದ ಅಥವಾ ಗಾಳಿಯಿಂದ ವಿದ್ಯುತ್‌ ತಯಾರಿಸಬಹುದಾದರೂ ಕತ್ತಲಾದಾಗಲೇ ವಿದ್ಯುತ್ತಿಗೆ ಬೇಡಿಕೆ ಹೆಚ್ಚುತ್ತಿರುತ್ತದೆ. ಅದಕ್ಕೇ ಈ ಫಾಸ್ಟ್‌ ಬ್ರೀಡರ್‌ ತಂತ್ರಜ್ಞಾನಕ್ಕೆ ಹೊಸ ಹೊಳಪು ಕೊಟ್ಟು ಜಗತ್ತಿಗೆ ಹೊಸ ದಾರಿಯನ್ನು ತೋರಿಸುವ ಛಲ ಅವರದಾಗಿದೆ. ವಿದ್ಯುತ್‌ ಉತ್ಪಾದನ ರಂಗಕ್ಕೆ ಹೊಸದಾಗಿ ಕಾಲಿಡುವ ಈ ಜೋಡಿ ನಮಗಿಂತ ಮೊದಲು ಯಶಸ್ವಿ ಆಗಿಬಿಟ್ಟರೆ ಅದು ನಮ್ಮ ವಿಜ್ಞಾನಿಗಳ ಪ್ರತಿಷ್ಠೆಯ ಪ್ರಶ್ನೆಯೂ ಆಗಬಹುದು.

ಫಾಸ್ಟ್‌ ಬ್ರೀಡರ್‌ ತಂತ್ರಜ್ಞಾನ ಎಂದರೆ ನಮ್ಮ ಮಾಮೂಲಿನ ಕೈಗಾ, ಕೂಡಂಕುಲಂ ಹಾಗೆ ಸಾದಾ ಸೀದಾ ಪರಮಾಣು ಸ್ಥಾವರ ಅಲ್ಲ. ಇದು ಎರಡನೇ ಪೀಳಿಗೆಯ ತಂತ್ರಜ್ಞಾನ. ಇದರ ವಿಶೇಷ ಏನೆಂದರೆ ಅಷ್ಟೊಂದು ವಿಕಿರಣವನ್ನು ಸೂಸುವುದಿಲ್ಲ. ಮೇಲಾಗಿ, ತಾನು ಉರಿಸಿದ್ದಕ್ಕಿಂತ ಹೆಚ್ಚಿನ ಇಂಧನವನ್ನು ಇದು ಉತ್ಪಾದಿಸುತ್ತದೆ. ಒಂದರ್ಥದಲ್ಲಿ ತನ್ನ ಬೂದಿಯಿಂದಲೇ ಮತ್ತೊಮ್ಮೆ ಶಕ್ತಿಶಾಲಿಯಾಗಿ ಎದ್ದು ಬರುವ ಫೀನಿಕ್ಸ್‌ ಪಕ್ಷಿಯ ಹಾಗೆ. ಐವತ್ತು ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ಸ್ಥಾಪಿತವಾದ ಇಂಥದ್ದೊಂದು ರಿಯಾಕ್ಟರಿಗೆ ‘ಫೀನಿಕ್ಸ್‌’ ಎಂತಲೇ ಹೆಸರಿತ್ತು. ಅದು ತಾನು ಉರಿಸಿದ್ದಕ್ಕಿಂತ 16% ಹೆಚ್ಚು ಪ್ಲುಟೋನಿಯಂ ಇಂಧನವನ್ನು ಉತ್ಪಾದಿಸಿ ಬೀಗುತ್ತಿತ್ತು. ಅದನ್ನು ಸಾಧಿಸಿದ ಫ್ರೆಂಚರ ಆಗಿನ ಉತ್ಸಾಹ ಎಷ್ಟಿತ್ತೆಂದರೆ ಅಲ್ಲೇ ಅದಕ್ಕಿಂತ ಉತ್ತಮವಾದ ‘ಸೂಪರ್‌ ಫೀನಿಕ್ಸ್‌’ ಹೆಸರಿನ ಹೊಸದೊಂದು ಸ್ಥಾವರವೂ ನಿರ್ಮಾಣವಾಯಿತು. ಭಾರೀ ವೆಚ್ಚ, ಭಾರೀ ಪ್ರತಿಭಟನೆಗಳ ನಡುವೆಯೂ ಅದು ವಿದ್ಯುತ್‌ ಉತ್ಪಾದಿಸಲು ತೊಡಗಿತು. ಅದರ ಥಳಕನ್ನು, ಆರಂಭಿಕ ಯಶಸ್ಸನ್ನು ಕಂಡು ಅದಕ್ಕಿಂತ ದೊಡ್ಡ ಆಸ್ಟ್ರಿಡ್‌ ಹೆಸರಿನ ಸ್ಥಾವರವೊಂದು (Astrid, ಅಂದರೆ ಅಪ್ಸರೆ) ಫ್ರಾನ್ಸ್‌ನಲ್ಲೇ ತಲೆ ಎತ್ತಿತು. ಅದಕ್ಕಿಂತ ಇನ್ನೂ ದೊಡ್ಡದನ್ನು ಪಕ್ಕದ ಜರ್ಮನಿಯ ಕಲ್ಕಾರ್‌ ಎಂಬಲ್ಲಿ ನಿರ್ಮಿಸಲಾಯಿತು. ಕೊನೆಗೆ ಏನಾಯಿತು ಅನ್ನೋ ತಮಾಷೆ ನೋಡಿ: ಈ ನಾಲ್ಕೂ ಫೀನಿಕ್ಸ್‌ಗಳು ನೆಲ ಕಚ್ಚಿದವು. ಸೂಪರ್‌ ಫೀನಿಕ್ಸ್‌ನ ನಿರ್ವಹಣೆ ಅಸಾಧ್ಯ ವೆಂದು ನಾಲ್ಕೇ ವರ್ಷಗಳಲ್ಲಿ ಮುಚ್ಚಲಾಯಿತು. ಅದಕ್ಕೂ 6ರ ಮುಂದೆ ಹತ್ತು ಸೊನ್ನೆಯಷ್ಟು ಫ್ರಾಂಕ್‌ ಖರ್ಚಾಗಿತ್ತು. ಅತ್ತ ಆಸ್ಟ್ರಿಡ್‌ ಅಪ್ಸರೆ ವಿದ್ಯುತ್‌ ಉತ್ಪಾದನೆಗೆ ಸಿದ್ಧವಾಗಿದ್ದರೂ ಅದನ್ನು ಸಮಾಧಿ ಮಾಡಲಾಯಿತು. ಅದಕ್ಕೆಂದು ಜಗತ್ತಿನಲ್ಲೇ ಅತಿ ಎತ್ತರದ ಕೂಲಿಂಗ್‌ ಟವರ್‌ ಕಟ್ಟಿಸಿದ್ದನ್ನೂ ಸಿಡಿಮದ್ದು ಸ್ಫೋಟಿಸಿ ಬೀಳಿಸಲಾಯಿತು. ಜರ್ಮನಿಯ ಕಲ್ಕಾರ್‌ ಸ್ಥಾವರ ಕೂಡ ಪೂರ್ತಿ ಸಜ್ಜಾಗಿ ನಿಂತಿದ್ದರೂ ಅದನ್ನು ಮುಚ್ಚಬೇಕೆಂದು ಸತ್ಯಾಗ್ರಹ ಹೂಡಿದವರಲ್ಲಿ ಅದರ ಮುಖ್ಯ ಎಂಜಿನಿಯರ್‌ ಕೂಡ ಇದ್ದರು! ಈಗ ಅದರ ಭಾರೀ ಗಾತ್ರದ ಕೂಲಿಂಗ್‌ ಟವರ್‌ ಮೇಲೆ ಜೋಕಾಲಿ ಕಟ್ಟಿ ಅದನ್ನು ಡಿಸ್ನಿ ಮಾದರಿಯ ಮೋಜಿನಾಟದ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.

ಫಾಸ್ಟ್‌ ಬ್ರೀಡರ್‌ ತಂತ್ರಜ್ಞಾನವನ್ನು ಅಮೆರಿಕವೂ ಕೈಬಿಟ್ಟಿದೆ. ಜಪಾನೀಯರು ಮೊಂಜು ಎಂಬಲ್ಲಿ ಸತತ 30 ವರ್ಷ ಏಗಾಡಿ ಅದಕ್ಕೆ ವಿದಾಯ ಹೇಳಿದ್ದಾರೆ. ಸದ್ಯಕ್ಕೆ ರಷ್ಯಾದಲ್ಲಿ ಮಾತ್ರ ಒಂದು ರಿಯಾಕ್ಟರ್‌ ಜೋಡಿ ಕೆಲಸ ಮಾಡುತ್ತಿದೆ. ಚೀನಾ ತಾನೂ ಒಂದು ಕೈ ನೋಡಲು ಹೊರಟಿದೆ.

ಈ ಬಗೆಯ ನ್ಯೂಕ್ಲಿಯರ್‌ ತಂತ್ರಜ್ಞಾನದ ದೊಡ್ಡ ಸವಾಲು ಏನೆಂದರೆ, ಅದರ ಗರ್ಭದಲ್ಲಿನ ಪ್ಲುಟೊನಿಯಂ ಇಂಧನವನ್ನು ದ್ರವರೂಪದ ಸೋಡಿಯಂ (ನೇಟ್ರಿಯಂ) ಲೋಹದಲ್ಲಿ ಮುಳುಗಿಸಿ ಉರಿಸಬೇಕು. ನೀರಲ್ಲಿ ಅಥವಾ ಭಾರಜಲದಲ್ಲಿ ಮುಳುಗಿಸಿಟ್ಟರೆ ಅದು ಕಿಡಿ ಹೊಮ್ಮಿಸುವುದಿಲ್ಲ. ಸೋಡಿಯಂ ದ್ರವ ತೀರ ಕುದಿಬಿಂದುವಿಗೆ ಬರುತ್ತಿದ್ದಂತೆ ಆ ಶಾಖವನ್ನು ನೀರಿನ ತೊಟ್ಟಿಗೆ ಸಾಗಿಸಿ ಆ ಹಬೆಯಲ್ಲಿ ಚಕ್ರ ತಿರುಗಿಸಿ ವಿದ್ಯುತ್‌ ಹೊಮ್ಮಬೇಕು. ಸೋಡಿಯಮ್ಮಿಗೂ ನೀರಿಗೂ ಬದ್ಧ ವೈರ. ಹೈಸ್ಕೂಲ್‌ ಲ್ಯಾಬಿನಲ್ಲಿ ಸೀಮೆಣ್ಣೆಯಲ್ಲಿ ಮುಳುಗಿಸಿಟ್ಟ ಸೋಡಿಯಂ ಚಕ್ಕೆಯನ್ನು ಚಿಮ್ಮಟದಲ್ಲಿ ಎತ್ತಿ ನೀರಿಗೆ ಅದ್ದಿದಾಗ ಚಟಪಟ ಕಿಡಿ ಹಾರುವುದನ್ನು ನಾವೆಲ್ಲ ನೋಡಿರುತ್ತೇವೆ. ಪರಮಾಣು ಕುಲುಮೆಯಲ್ಲಿ ಸ್ಫೋಟಕಾರಿ ಪ್ಲುಟೊನಿಯಂ ಸುತ್ತ ನೂರಿನ್ನೂರು ಟನ್‌ ಸೋಡಿಯಂ ದ್ರವವನ್ನು ತುಂಬಿ, ಅದರೊಳಕ್ಕೇ ನೀರಿನ ಕೊಳವೆಗಳನ್ನು ಹಾಯಿಸಿ ರಿಮೋಟ್‌ ಹಿಡಿದು ಏನೆಲ್ಲ ಸರ್ಕಸ್‌ ಮಾಡಬೇಕು. ಅಂತೂ ನುಂಗಲಾರದ, ಉಗುಳಬಾರದ ಆಸ್ತಿಯೊಂದಿಗೆ ನಮ್ಮ ವಿಜ್ಞಾನಿಗಳು ಏಗುತ್ತಿದ್ದಾರೆ.

ಹೋಮಿ ಭಾಭಾರ ಕನಸು ತುಂಬ ದೊಡ್ಡದಿತ್ತು. ಈ ತಂತ್ರಜ್ಞಾನ ನಮಗೆ ಸಿದ್ಧಿಸಿದರೆ, ಮುಂದಿನ 3ನೇ ಹಂತದಲ್ಲಿ ಯುರೇನಿಯಂ ಬದಲು ಥೋರಿಯಂ ಎಂಬ ಸಾಧು ಸ್ವಭಾವದ ಧಾತುವನ್ನೇ ಕುಲುಮೆಯಲ್ಲಿ ಉರಿಸಬಹುದು. ನಮ್ಮ ದೇಶದ ಐದು ರಾಜ್ಯಗಳ ಕಡಲ ತೀರದಲ್ಲಿ ಥೋರಿಯಂ ಮರಳಿನ ಖಜಾನೆಯೇ ಇದೆ. ಯಶಸ್ವಿಯಾದರೆ ನಾವು ನ್ಯೂಕ್ಲಿಯರ್‌ ವಿಷಯದಲ್ಲಿ ವಿಶ್ವಗುರು ಅಷ್ಟೇ ಅಲ್ಲ, ವಿಶ್ವದೊರೆ ಆಗುತ್ತೇವೆ. (ಮಡಗಾಸ್ಕರ್‌ ಹಿಂದೆ ಫ್ರೆಂಚರ ಅಧೀನದಲ್ಲಿದ್ದಾಗ, ಅಲ್ಲಿನ ಮರಳಿನಲ್ಲಿ ಥೋರಿಯಂ ಇದೆಯೆಂದೇ ಫ್ರೆಂಚರು ಈ ತಂತ್ರಜ್ಞಾನದ ಹಿಂದೆ ಬಿದ್ದಿದ್ದರು. ಈಗ ಮಡಗಾಸ್ಕರೂ ಫ್ರೆಂಚರ ಕೈಯಲ್ಲಿಲ್ಲ; ಫಾಸ್ಟ್‌ ಬ್ರೀಡರ್‌ ಅಪ್ಸರೆಯರೂ ನೆಲಕಚ್ಚಿದ್ದಾರೆ.) ಭಾಭಾ ನೇತೃತ್ವದಲ್ಲಿ 65 ವರ್ಷಗಳ ಹಿಂದೆ ಟ್ರಾಂಬೆಯಲ್ಲಿ ಆರಂಭಗೊಂಡ ಮೊದಲ ರಿಯಾಕ್ಟರಿಗೆ ‘ಅಪ್ಸರಾ’ ಎಂದು ಹೆಸರಿಡ
ಲಾಗಿತ್ತು.

ಅದೆಂಥ ಅಪ್ಸರೆಯೊ, ಬಿಲ್‌ ಗೇಟ್ಸ್‌ ಕೂಡ ಅದಕ್ಕೆ ಮರುಳಾದಂತಿದೆ. ತಂತ್ರಜ್ಞಾನದ ಮಾಟವೇ ಅಂಥದ್ದು; ಈಗಿನ ಯುಗವೂ ಅಂಥದ್ದೇ ಅನ್ನಿ. ಶಕ್ತ ರಾಷ್ಟ್ರಗಳು ಕೈಲಾಗದೆ ಬಿಟ್ಟಿದ್ದಕ್ಕೆ ಶಕ್ತ ಉದ್ಯಮಿಗಳು ಕೈಚಾಚುತ್ತಾರೆ. ಆದರೂ ಯಾಕೊ, ನಮ್ಮ ಈ ಭಾವಿನಿಯನ್ನು ಆಸ್ತಿ ನಗದೀಕರಣದ ಪಟ್ಟಿಗೆ ಸೇರಿಸಿಲ್ಲವಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT