ಸಹಾಯ ಕೋರಿ ಬಂದ ವಿಶ್ವಾಮಿತ್ರ

7
ರಾಮಾಯಣ ರಸಯಾನ 51

ಸಹಾಯ ಕೋರಿ ಬಂದ ವಿಶ್ವಾಮಿತ್ರ

Published:
Updated:

ರಾಮ–ಲಕ್ಷ್ಮಣ–ಭರತ–ಶತ್ರುಘ್ನರು ಈಗ ಬೆಳೆದು ನಿಂತ ಯುವಕರು. ಮದುವೆಯ ವಯಸ್ಸು. ದಶರಥ ಇದೇ ವಿಷಯವನ್ನು ಋಷಿಗಳೊಂದಿಗೂ ಬಾಂಧವರೊಂದಿಗೂ ಮಂತ್ರಿಗಳೊಂದಿಗೂ ಚರ್ಚಿಸುತ್ತಿದ್ದಾನೆ. 

ಅದೇ ಸಮಯಕ್ಕೆ ವಿಶ್ವಾಮಿತ್ರಮಹರ್ಷಿ ರಾಜದರ್ಶನಕ್ಕೆಂದು ಆಗಮಿಸಿದರು. ‘ಗಾಧಿಪುತ್ರನಾದ ಕೌಶಿಕನು ಬಂದಿದ್ದಾನೆಂದು ನಿಮ್ಮ ದೊರೆಗೆ ತಿಳಿಸಿ’ ಎಂದು ಅರಮನೆಯ ದ್ವಾರಪಾಲಕರಿಗೆ ಹೇಳಿದರು. ಅವರು ಗಾಬರಿ, ಗಲಿಬಿಲಿಗಳಿಂದಲೇ ಅರಮನೆಯೊಳಗೆ ಓಡಿದರು. ವಿಶ್ವಾಮಿತ್ರರು ಬಂದಿರುವ ಸುದ್ದಿಯನ್ನು ದಶರಥನಲ್ಲಿ ಅರಿಕೆಮಾಡಿಕೊಂಡರು. ವಿಷಯವನ್ನು ಕೇಳಿ ಅವನಿಗೆ ಸಂತೋಷವಾಯಿತು. ಬೃಹಸ್ಪತಿಯನ್ನು ಎದುರುಗೊಳ್ಳುವ ಇಂದ್ರನಂತೆ ತಾನು ವಿಶ್ವಾಮಿತ್ರನನ್ನು ಬರಮಾಡಿಕೊಳ್ಳಲು ಪುರೋಹಿತರೊಡನೆ ಅರಮನೆಯ ದ್ವಾರಕ್ಕೆ ಬಂದ.

‘ವಿಶ್ವಾಮಿತ್ರ’. ಈ ಹೆಸರೇ ಎಷ್ಟು ಸೊಗಸಾಗಿದೆ! ಇಡಿಯ ವಿಶ್ವಕ್ಕೇ ಸ್ನೇಹಿತನಂತೆ ಯಾವನು ಇದ್ದಾನೆಯೋ ಅವನು ‘ವಿಶ್ವಾಮಿತ್ರ’. (ಈ ಹೆಸರು ವ್ಯಾಕರಣದ ಪ್ರಕಾರ ತಪ್ಪು ಎಂದು ಕೆಲವರು ವಾದಿಸುವುದುಂಟು. ಈ ವಿಷಯವನ್ನು ಮುಂದೆ ನೋಡೋಣ.) ಎಲ್ಲರಿಗೂ ಬೇಕಾದ ಅಂಥ ಮಹಾತ್ಮನೊಬ್ಬ ದಶರಥನಲ್ಲಿಗೆ ಈಗ ಬಂದಿದ್ದಾನೆ. ವಿಶ್ವಾಮಿತ್ರನ ಆಗಮನದಿಂದ ದಶರಥನಿಗೆ ಸಂತೋಷವಾಯಿತು ಎಂಬುದರ ಸೂಚನೆಯಿದೆ, ದಿಟ. ಆದರೆ ಈ ಸುದ್ದಿಯನ್ನು ತಂದ ದ್ವಾರಪಾಲಕರಲ್ಲಿ ಕಳವಳ ಇತ್ತು, ಉದ್ವೇಗ ಇತ್ತು, ಗಾಬರಿ ಇತ್ತು (‘ಸಂಭ್ರಾಂತ’) – ಎನ್ನುವುದರ ಸೂಚನೆಯೂ ಇದೆ. ಮುಂದೆ ಈ ದುಗುಡ ದಶರಥನಿಗೂ ವರ್ಗಾವಣೆಯಾಗುತ್ತದೆಯೆನ್ನಿ!

ರಾಜನನ್ನು ಕಾಣಲು ಬಂದವನು ವಿಶ್ವಾಮಿತ್ರ ಎಂದು ಕವಿ ವಾಲ್ಮೀಕಿ ಹೇಳಿದ್ದಾನೆ, ಹೌದು. ಆದರೆ ವಿಶ್ವಾಮಿತ್ರ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಿರುವುದು ‘ಗಾಧಿಪುತ್ರನಾದ ಕೌಶಿಕ’ ಎಂದು. ಇದಕ್ಕೇನಾದರೂ ಕಾರಣ ಉಂಟೆ? ಈ ಪ್ರಶ್ನೆಗೆ ಮುಂದೆ ರಾಮಾಯಣ
ದಲ್ಲಿಯೇ, ಬಾಲಕಾಂಡದಲ್ಲಿಯೇ ಉತ್ತರ ಸಿಗುತ್ತದೆ. ಕೌಶಿಕನು ವಿಶ್ವಾಮಿತ್ರನಾಗಿ ಬದಲಾದ ಕಥೆ ತುಂಬ ಮನೋಜ್ಞವಾಗಿದೆ. ಅದನ್ನು ಮುಂದೆ ನೋಡೋಣ. ವಿಶ್ವಾಮಿತ್ರನ ಜೀವನವನ್ನು ಆಧರಿಸಿಯೇ ದೇವುಡು ನರಸಿಂಹಶಾಸ್ತ್ರೀ ರಚಿಸಿರುವ ‘ಮಹಾಬ್ರಾಹ್ಮಣ’ ಕಾದಂಬರಿ ಕೂಡ ಇಲ್ಲಿ ಉಲ್ಲೇಖಾರ್ಹವಾದುದು. 

ವಿಶ್ವಾಮಿತ್ರ ಅರಮನೆಯನ್ನು ಪ್ರವೇಶಿಸಿದರು. ಅವರು ಮಹಾತಪಸ್ವಿ, ಕಠೋರಸಾಧಕರು; ತೇಜಸ್ಸಿನಿಂದ ಪ್ರಕಾಶಮಾನವಾಗಿ ಹೊಳೆಯುತ್ತಿದ್ದರು. ಅವರನ್ನು ಕಂಡ ದಶರಥನ ಮುಖ ಅರಳಿತು. ಅವರಿಗೆ ವಿಧಿಪೂರ್ವಕವಾಗಿ ಅರ್ಘ್ಯವನ್ನು ನೀಡಿ ಉಪಚರಿಸಿದ ರಾಜ. 

ವಿಶ್ವಾಮಿತ್ರ ಎಲ್ಲರ ಯೋಗಕ್ಷೇಮವನ್ನೂ ವಿಚಾರಿಸಿದರು. ರಾಜಧಾನಿ ಹೇಗಿದೆ? ರಾಜ್ಯ ಹೇಗಿದೆ? ರಾಜ್ಯಸಂಪತ್ತು ಹೇಗಿದೆ? ರಾಜಕುಟುಂಬ ಹೇಗಿದೆ? ರಾಜಪರಿವಾರ ಹೇಗಿದೆ? – ಹೀಗೆ ಎಲ್ಲ ವಿವರಗಳನ್ನೂ ಪಡೆದರು. ‘ದಶರಥ, ಸಾಮಂತರಾಜರು ನಿನಗೆ ವಿಧೇಯರಾಗಿದ್ದಾರೆಯೆ? ಶತ್ರುಗಳ ತೊಂದರೆಯೇನೂ ನಿನಗಿಲ್ಲವಷ್ಟೆ? ದೈವಕಾರ್ಯಗಳನ್ನು ಸರಿಯಾದ ಸಮಯಕ್ಕೆ ಮಾಡುತ್ತಿರುವೆಯಲ್ಲವೆ? ಪ್ರಜೆಗಳಿಗೆ ಇಷ್ಟವಾಗುವ ಕಾರ್ಯಗಳನ್ನು ಮಾಡುತ್ತಿರುವೆಯಲ್ಲವೆ?’ ಹೀಗೆಂದು ಅವರು ರಾಜನನ್ನು ಪ್ರಶ್ನಿಸಿದರು. ಬಳಿಕ ಆಸ್ಥಾನದಲ್ಲಿದ್ದ ವಸಿಷ್ಠರೇ ಮೊದಲಾದ ಋಷಿಮುನಿಗಳ ಕುಶಲವನ್ನು ವಿಚಾರಿಸಿದರು. ಎಲ್ಲರೂ ಸಂತೋಷದಿಂದ ಈಗ ರಾಜಮಂದಿರವನ್ನು ಪ್ರವೇಶಿದರು. ರಾಜನು ಅವರಿಗೆ ಸರಿಹೊಂದುವ ಆಸನವನ್ನು ನೀಡಿ, ಕೈಮಗಿದು ನಿಂತು ಉಲ್ಲಾಸದಿಂದ ಹೀಗೆ ನಿವೇದಿಸಿಕೊಂಡ:

‘ಮಹರ್ಷಿಗಳೇ, ತಮ್ಮ ಆಗಮನದಿಂದ ನನಗೆ ಪರಮಸಂತೋಷವಾಯಿತು. ತಮ್ಮ ಆಗಮನದಿಂದ ಅಮೃತವೇ ದೊರೆತಂತಾಯಿತು. ಬರಗಾಲದಲ್ಲಿ ಮಳೆ ಬಂದರೆ ಎಷ್ಟು ಸಂತೋಷವಾಗುವುದೋ, ಮಕ್ಕಳಿಲ್ಲದವನಿಗೆ ಸಂತಾನ ಒದಗಿದಾಗ ಎಷ್ಟು ಸಂತೋಷವಾಗುವುದೋ, ಕಳೆದುಹೋಗಿರುವ ನಿಧಿ ಸಿಕ್ಕಿದಾಗ ಎಷ್ಟು ಸಂತೋಷವಾಗುವುದೋ, ಮಹೋತ್ಸವವೊಂದರ ಸಂಭ್ರಮದಲ್ಲಿ ಎಷ್ಟು ಸಂತೋಷವಾಗುವುದೋ ಅಷ್ಟು ಸಂತೋಷ ತಮ್ಮ ಆಗಮನದಿಂದ ಒದಗಿದೆ. ತಮಗೆ ಸ್ವಾಗತ. ತಮ್ಮ ಯಾವ ಇಷ್ಟಾರ್ಥವನ್ನು ನೆರವೇರಿಸಲಿ? ತಾವು ಆಗಮಿಸಿರುವುದೇ ನನ್ನ ಭಾಗ್ಯ! ನನ್ನ ಜನ್ಮ ಇಂದು ಸಾರ್ಥಕವಾಯಿತು. ನನ್ನ ಹುಟ್ಟು ಸಫಲವಾಯಿತು. ಮೊದಲು ರಾಜರ್ಷಿಗಳಾಗಿದ್ದವರು ಅನಂತರ ಬ್ರಹ್ಮರ್ಷಿ
ಗಳಾದವರು ತಾವು. ಇಲ್ಲಿಯವರೆಗೆ ತಮ್ಮ ಪವಿತ್ರ ಆಗಮನವಾದದ್ದೇ ಆಶ್ಚರ್ಯ. ತಮ್ಮ ಆಗಮನದಿಂದ ಈ ಸ್ಥಳವೇ ಪುಣ್ಯಕ್ಷೇತ್ರವಾಯಿತು. ನನ್ನಿಂದ ತಮಗೆ ಏನಾಗಬೇಕು, ಅಪ್ಪಣೆಯಾಗಲಿ! ತಮ್ಮ ಕಾರ್ಯವನ್ನು ನೆರವೇರಿಸುವಂಥ ಅನುಗ್ರಹವನ್ನು ನನಗೆ ತಾವು ದಯಪಾಲಿಸಬೇಕು. ತಾವು ಆದೇಶಿಸುವ ಕೆಲಸವನ್ನು ನಾನು ನಡೆಸುತ್ತೇನೋ ಇಲ್ಲವೋ ಎಂದು ತಾವು ಸಂದೇಹಿಸುವುದು ಬೇಡ. ತಾವು ಅಪ್ಪಣೆ ನೀಡುವ ಕೆಲಸವನ್ನು ಪೂರ್ಣವಾಗಿ ನಡೆಸಿಕೊಡುವೆ. ನನ್ನ ಭಾಗ್ಯಕ್ಕೆ ಒದಗಿದ ದೇವರೇ ತಾವು. ನನಗೆ ಮಹಾಭಾಗ್ಯವೊಂದು ಸಿಕ್ಕಂತಾಗಿದೆ. ಧರ್ಮವು ಕೊಡುವ ಎಲ್ಲ ಉತ್ತಮ ಫಲಗಳೂ ತಮ್ಮ ಆಗಮನದಿಂದಲೇ ದೊರಕಿದೆ.’

ದಶರಥನು ವಿನಯದಿಂದ ನುಡಿದ ಈ ಮಾತುಗಳನ್ನು ಕೇಳಿ ವಿಶ್ವಾಮಿತ್ರರಿಗೂ ತುಂಬ ಹರ್ಷವಾಯಿತು.

* * *

ವಿಶ್ವಾಮಿತ್ರಮಹರ್ಷಿ ಮಹಾತಪಸ್ವಿಗಳು. ಅವರ ಹಿನ್ನೆಲೆ ದಶರಥನಿಗೂ ತಿಳಿದಿದೆ ಎನ್ನುವುದು ಅವನ ಮಾತುಗಳಿಂದಲೇ ತಿಳಿದುಬರುತ್ತಿದೆ. ರಾಜರ್ಷಿಗಳಾಗಿದ್ದ ಅವರು ಈಗ ಬ್ರಹ್ಮರ್ಷಿಗಳಾಗಿದ್ದಾರೆ. ಎಂದರೆ ರಾಜ್ಯವನ್ನು ಬಿಟ್ಟು ಈಗ ಕಾಡು–ತಪಸ್ಸುಗಳನ್ನೇ ಆರಿಸಿಕೊಂಡಿದ್ದಾರೆ. ಅರಮನೆಯ ಸುಖ–ಸಂಪತ್ತುಗಳಲ್ಲಿ ದಿಟವಾದ ನೆಮ್ಮದಿಯಿಲ್ಲ ಎಂದು ಕಂಡುಕೊಂಡವರು. ಅಂಥವರು ಸುಮ್ಮನೆ ಅರಮನೆಗೆ ಬರುವವರಲ್ಲ. ದಶರಥನೂ ಈ ವಿಷಯವನ್ನು ಗ್ರಹಿಸಿದ್ದಾನೆ. ‘ಊರಕ ರಾರು ಮಹಾನುಭಾವುಲು’ ಎಂಬ ನಾಣ್ನುಡಿಯೊಂದು ತೆಲುಗಿನಲ್ಲಿದೆ; ‘ಮಹಾತ್ಮರು ಸುಮ್ಮನೆ ಬರುವುದಿಲ್ಲ’ವಂತೆ! ವಿಶ್ವಾಮಿತ್ರರು ಹೀಗೇ ಸುಮ್ಮನೆ ದಶರಥನ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗಲು ಬರುವವರಲ್ಲ ಎಂದು ದಶರಥ ಗ್ರಹಿಸಿರುವುದು ಸರಿಯಾಗಿದೆ. ನನ್ನಿಂದ ಏನನ್ನೋ ಬಯಸಿ ಬಂದಿದ್ದಾರೆ ಎಂದು ಗ್ರಹಿಸಿರುವುದೂ ಸರಿಯಾಗಿದೆ. ಬಹುಶಃ ಅವನು ವಿಶ್ವಾಮಿತ್ರರಂಥವರೇ ನನ್ನಲ್ಲಿ ಏನನ್ನೋ ಕೋರಲು ಬಂದಿದ್ದಾರೆ ಎಂದು ತಿಳಿದುಕೊಂಡು ಉಬ್ಬಿಹೋಗಿದ್ದಾನೆ ಎನಿಸುತ್ತದೆ. ಅವನ ಮಾತುಗಳೇ ಇದಕ್ಕೆ ಸಾಕ್ಷಿ. ಸಂತೋಷದಲ್ಲಿದ್ದಾಗ ಹಿಂದುಮುಂದು ಯೋಚಿಸಿದೆ ವಾಗ್ದಾನವನ್ನು ಮಾಡುವುದು ದಶರಥನಿಗೆ ಸಹಜವಾಗಿತ್ತೆಂದು ತೋರುತ್ತದೆ. ಅದರಿಂದ ಅವನೇ ಮುಂದೆ ಪೇಚಿಗೆ ಸಿಕ್ಕಿಹಾಕಿಕೊಂಡು ಸಂಕಟಪಡುತ್ತಾನೆ. ಕವಿ ವಾಲ್ಮೀಕಿ ಆರಂಭದಲ್ಲಿಯೇ ಅವನ ಸ್ವಭಾವದರ್ಶನವನ್ನು ನಮಗೆ ಮಾಡಿಸುತ್ತಿದ್ದಾನೆ.

ದಶರಥನ ಮಾತುಗಳಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕು. ವಿಶ್ವಾಮಿತ್ರರು ಅವನ ಅರಮನೆಗೆ ಬಂದಿರುವುದರಿಂದ ಅವನಿಗೆ ಸಂತೋಷವಂತೂ ಆಗಿದೆ; ಅದರಲ್ಲಿ ಅನುಮಾನವಿಲ್ಲ. ಆದರೆ ಸಂತೋಷವನ್ನು ಒಂದು ವಸ್ತುವನ್ನು ತೋರಿಸುವಂತೆ ಪ್ರತ್ಯಕ್ಷವಾಗಿ ಕಾಣಿಸಲು ಆಗದು. ಇಂಥ ಸಂದರ್ಭಗಳಲ್ಲಿಯೇ ಮಾತಿನ ಮಿತಿ ನಮಗೆ ಗೊತ್ತಾಗುವುದು. ಸಂತೋಷವು ಅನುಭವಕ್ಕೆ ಒದಗುವಂಥದ್ದು, ಅರಿವಿಗೆ ದಕ್ಕುವಂಥದ್ದು. ವಿಶ್ವಾಮಿತ್ರ ಬಂದ್ದರಿಂದ ಅವನಿಗೆ ಉಂಟಾದ ಸಂತೋಷದ ಅನುಭವ ಎಂಥದ್ದು ಎನ್ನುವುದನ್ನು ಶಬ್ದಗಳಲ್ಲಿ ನಮಗೆ ಸುಲಭವಾಗಿ ದಾಟಿಸಲು ಆಗದು. ನಮಗೂ ಅವನಿಗೂ ಸಮಾನವಾಗಿರುವ ಅನುಭವದ ಅರಿವನ್ನು ಈ ಸಂವಹನಕ್ಕೆ ಸೇತುವೆಯಂತೆ ಉಪಯೋಗಿಸಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ಬರಗಾಲದಲ್ಲಿ ಮಳೆ ಬಂದಾಗ ಸಂತೋಷವಾಗುವುದು, ಮಕ್ಕಳಿಲ್ಲದವನಿಗೆ ಸಂತಾನ ಒದಗಿದಾಗ ಸಂತೋಷವಾಗುವುದು, ಕಳೆದುಹೋಗಿರುವ ನಿಧಿ ಸಿಕ್ಕಿದಾಗ ಸಂತೋಷವಾಗುವುದು, ಮಹೋತ್ಸವವೊಂದರ ಸಂಭ್ರಮದಲ್ಲಿ ಸಂತೋಷವಾಗುವುದು – ಇವೆಲ್ಲವೂ ಲೋಕದಲ್ಲಿ ಸಾಮಾನ್ಯವಾಗಿರುವ ಸಂತೋಷಾನುಭವಗಳೇ ಹೌದು. ಹೀಗೆ ಸಾಮಾನ್ಯಾನುಭವದ ಸಹಾಯದಿಂದ ವಿಶಿಷ್ಟಾನುಭವದ ಅರಿವನ್ನು ಸಹೃದಯನಲ್ಲಿ ಒದಗಿಸುವುದೇ ಕಲೆಯ ಗುರಿ. 

* * *

ದಶರಥನ ಮಾತುಗಳನ್ನು ಕೇಳಿ ವಿಶ್ವಾಮಿತ್ರರಿಗೂ ಸಂತೋಷವಾಯಿತಂತೆ. ಅವರು ಬಂದ ಕೆಲಸವನ್ನು ಹೇಳಲು ಸುಲಭವೇ ಆಯಿತು. ದಶರಥನನ್ನು ಉದ್ದೇಶಿಸಿ ಅವರೆಂದರು:

‘ರಾಜಶ್ರೇಷ್ಠ, ನಿನಗೆ ಯೋಗ್ಯವಾದ ಮಾತುಗಳನ್ನೇ ಹೇಳಿರುವೆ. ನೀನು ಮಹಾವಂಶದಲ್ಲಿ ಜನಿಸಿರುವೆ; ವಸಿಷ್ಠಮುನಿಗಳ ಶಿಷ್ಯನಾಗಿರುವೆ. ನನ್ನ ಮನಸ್ಸಿನಲ್ಲಿರುವ ವಿಷಯವನ್ನು ಹೇಳುತ್ತೇನೆ; ಅದನ್ನು ನೀನು ನಡೆಸಿಕೊಡು. ಕೊಟ್ಟ ಮಾತಿನಂತೆ ನೀನು ಆ ಕೆಲಸವನ್ನು ನಿರ್ವಹಿಸಿ, ಸತ್ಯಸಂಧ ಎಂದೆನಿಸಿಕೋ. ನಾನೊಂದು ಸಿದ್ಧಿಗಾಗಿ ಯಜ್ಞದೀಕ್ಷೆಯನ್ನು ಪಡೆದಿರುವೆ. ಆದರೆ ನನ್ನ ಈ ಯಜ್ಞಕ್ಕೆ ಇಬ್ಬರು ರಾಕ್ಷಸರು ತೊಂದರೆಯನ್ನು ಕೊಡುತ್ತಿದ್ದಾರೆ. ಅವರು ಕಾಮರೂಪಿಗಳು; ಬೇಕಾದ ರೂಪವನ್ನು ಧರಿಸಬಲ್ಲವರು. ಅವರೇ ಮಾರೀಚ ಮತ್ತು ಸುಬಾಹು ಎಂಬ ಸಹೋದರರು. ಇವರು ಕಾಮರೂಪಿಗಳು ಮಾತ್ರವಲ್ಲ, ತುಂಬ ಬಲಶಾಲಿಗಳು. ಯಜ್ಞಕುಂಡದಲ್ಲಿ ರಕ್ತಮಾಂಸಗಳನ್ನು ಸುರಿದು ಯಜ್ಞವನ್ನು ಕೆಡಿಸುತ್ತಿದ್ದಾರೆ. ನಾನೇ ಅವರಿಗೆ ಶಾಪ ಕೊಟ್ಟು ಅವರನ್ನು ನಿಗ್ರಹಿಸಬಹುದು. ಆದರೆ ಯಜ್ಞದೀಕ್ಷೆಯಲ್ಲಿರುವಾಗ ಹಾಗೆ ಕೋಪಿಸಿಕೊಂಡು ಶಾಪ ನೀಡುವುದು ಸರಿಯಲ್ಲ. ಆದರೆ ಅವರನ್ನು ನಿಯಂತ್ರಿಸದೆ ಯಜ್ಞ ನೆರವೇರುವಂತಿಲ್ಲ...’

ಇನ್ನೂ ವಿಶ್ವಾಮಿತ್ರರ ಮಾತು ಮುಗಿದಿರಲಿಲ್ಲ. ಅಷ್ಟರಲ್ಲಿಯೇ ದಶರಥನು ಆ ರಾಕ್ಷಸರನ್ನು ಕೊಲ್ಲಲು ವಿಶ್ವಾಮಿತ್ರರೊಂದಿಗೆ ತೆರಳಲು ಮಾನಸಿಕವಾಗಿ ಸಿದ್ಧನಾದ. ಆದರೆ ವಿಶ್ವಾಮಿತ್ರರ ಮುಂದಿನ ಮಾತು ಅವನಿಗೆ ಪ್ರಳಯಕಾಲದ ಮಹಾಸ್ಫೋಟದಂತೆ ಕೇಳಿಸಿತು.

(ಮುಂದುವರೆಯುವುದು)

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !