ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಯುಗದಲ್ಲಿ ನಿಂತು ಪ್ರಭುತ್ವದ ಹಿಂಸೆಯ ಜಿಜ್ಞಾಸೆ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಲ್ಲು ಎಸೆಯುವ ಪ್ರತಿಭಟನಾಕಾರರಿಂದ ರಕ್ಷಿಸಿಕೊಳ್ಳಲು ಸೈನಿಕರು ಕಾಶ್ಮೀರದಲ್ಲಿ ಮಿಲಿಟರಿ ವಾಹನಕ್ಕೆ ವ್ಯಕ್ತಿಯೊಬ್ಬನನ್ನು ‘ಮಾನವ ಗುರಾಣಿ’ಯಂತೆ ಕಟ್ಟಿ ಕೂರಿಸಿಕೊಂಡಿದ್ದಕ್ಕೆ ಇಷ್ಟೊಂದು ಗದ್ದಲ ಏಕೆ ಆಗುತ್ತಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಕಾನೂನು ಸಲಹೆಗಾರ ಆಗಿರುವ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಪ್ರಶ್ನಿಸಿದ್ದಾರೆ.

‘ಕಲ್ಲು ಎಸೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಸೇನಾ ವಾಹನವೊಂದರಲ್ಲಿ ಕಟ್ಟಿ ಕೂರಿಸಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ. ಇದರಿಂದಾಗಿ ಕಲ್ಲು ತೂರುವವರನ್ನು ನಿಯಂತ್ರಿಸಲು, ಚುನಾವಣಾ ಅಧಿಕಾರಿಗಳಿಗೆ ರಕ್ಷಣೆ ನೀಡಲು ಸಾಧ್ಯವಾಯಿತು. ಈ ಬಗ್ಗೆ ಇಷ್ಟೊಂದು ಗದ್ದಲ ಏಕೆ’ ಎಂದು ರೋಹಟಗಿ ಅವರು ಎನ್‌ಡಿಟಿವಿ ಸುದ್ದಿ ವಾಹಿನಿ ಬಳಿ ಹೇಳಿದ್ದಾರೆ. ‘ಅಲ್ಲಿ ಪ್ರತಿದಿನ ಜನ ಸಾಯುತ್ತಿದ್ದಾರೆ. ಅಲ್ಲಿನ ವಾತಾವರಣ ಬಿಗುವಿನಿಂದ ಕೂಡಿದೆ. ಸೇನೆಯು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದೆ, ಪ್ರತಿಭಟನಾಕಾರರ ವಿರುದ್ಧ ಅಲ್ಲ. ಸೇನೆಯನ್ನು ಪ್ರತಿ ವ್ಯಕ್ತಿಯೂ ಹೆಮ್ಮೆಯಿಂದ ಕಾಣಬೇಕು. ಅದು ಅದ್ಭುತ ಕೆಲಸ ಮಾಡುತ್ತಿದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನೀವು ಸೇನೆಯನ್ನು ಟೀಕಿಸುವುದು ಸರಿಯಲ್ಲ. ಸೇನೆಯ ಜಾಗದಲ್ಲಿ ನಿಂತು ನೋಡಬೇಕು’ ಎಂದಿದ್ದಾರೆ.

ರೋಹಟಗಿ ಹೇಳಿದ ಮಾತುಗಳನ್ನು ನಾನು ಕಾನೂನಿನ ದೃಷ್ಟಿಯಿಂದ ಪರಿಶೀಲಿಸಲು ಬಯಸುವೆ. ಪ್ರಜೆಗಳಾಗಿ ನಾವು ಸರ್ಕಾರದ ಜೊತೆ ಒಂದು ಒಪ್ಪಂದ ಮಾಡಿಕೊಂಡಿರುತ್ತೇವೆ. ಹಿಂಸಾಚಾರ ಹತ್ತಿಕ್ಕುವ ಪೂರ್ಣ ಅಧಿಕಾರವನ್ನು ನಾವು ಸರ್ಕಾರಕ್ಕೆ ನೀಡುತ್ತೇವೆ. ಈ ಪರಿಭಾಷೆಯನ್ನು ಬಳಸಿದ್ದು ಭಾರತ ಮತ್ತು ಇಲ್ಲಿನ ಧರ್ಮಗಳನ್ನು ಅಧ್ಯಯನ ಮಾಡಿದ ಜರ್ಮನಿಯ ಸಮಾಜಶಾಸ್ತ್ರಜ್ಞ ಮ್ಯಾಕ್ಸ್ ವೆಬರ್. ‘ಪೂರ್ಣ ಅಧಿಕಾರ’ ಎಂದರೆ, ಪ್ರಭುತ್ವಕ್ಕೆ ಮಾತ್ರ ಇರುವ ಒಬ್ಬರಿಗೆ ದೈಹಿಕವಾಗಿ ತೊಂದರೆ ಕೊಡುವ ಅಧಿಕಾರ.

ಹಾಗಾಗಿ, ಕೊಲೆ, ಅತ್ಯಾಚಾರ ಮತ್ತು ಇತರ ಅಪರಾಧಗಳನ್ನು ‘ಪ್ರಭುತ್ವದ ವಿರುದ್ಧ ಎಸಗಿದ್ದು’ ಎಂದು ವ್ಯಾಖ್ಯಾನಿಸಿ, ಆ ಅಪರಾಧ ಮಾಡಿದವನ ವಿರುದ್ಧ ಕಾನೂನು ಕ್ರಮ ಜರುಗಿಸುವ ಕೆಲಸವನ್ನು ಪ್ರಭುತ್ವವೇ ಮಾಡುತ್ತದೆ. ಇಂಥ ಅಪರಾಧ ಎಸಗಿದವರು ನ್ಯಾಯಾಲಯದ ಹೊರಗೆ ರಾಜೀ ಸಂಧಾನದಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿಲ್ಲ.

ಕಾನೂನುಬದ್ಧ ಹಿಂಸೆ ನಡೆಸಲು ತಾನು ಸಿದ್ಧ ಎಂಬುದನ್ನು ಪ್ರಭುತ್ವವು ಅಪರಾಧ ಎಸಗಿದ ವ್ಯಕ್ತಿಗಳನ್ನು ಮರಣದಂಡನೆಗೆ ಗುರಿಪಡಿಸುವ ಮೂಲಕ ತೋರಿಸಬಹುದು. ಆದರೆ, ಈ ಕೆಲಸವನ್ನು ತಾನು ಎಂದೆಂದಿಗೂ ಕಾನೂನಿಗೆ ಅನುಗುಣವಾಗಿ ಮಾಡುವುದಾಗಿ ಪ್ರಭುತ್ವ ವಾಗ್ದಾನ ನೀಡಿರುತ್ತದೆ. ಚುನಾಯಿತ ಪ್ರತಿನಿಧಿಗಳೆಲ್ಲರೂ ತಾವು ಸಂವಿಧಾನದ ಆಶಯಗಳನ್ನು ಉಲ್ಲಂಘಿಸುವುದಿಲ್ಲ ಎಂದು ವಿಧಿವತ್ತಾಗಿ ಪ್ರತಿಜ್ಞೆ ಸ್ವೀಕರಿಸುತ್ತಾರೆ. ತನ್ನ ಏಜೆಂಟರ ಮೂಲಕ ಇಂಥ ವಾಗ್ದಾನ ನೀಡುವ ಪ್ರಭುತ್ವವು, ಸೂಕ್ತವಾದ ಸಂದರ್ಭಗಳಲ್ಲಿ ಹಿಂಸೆಯನ್ನು ಪ್ರಯೋಗಿಸುತ್ತದೆ.

ನಮ್ಮಲ್ಲಿ ಇದನ್ನು ಉದ್ರಿಕ್ತ ಗುಂಪು ನಿಯಂತ್ರಿಸಲು ಆಗಾಗ ಬಳಸುತ್ತಾರೆ. ನಮಗೆ, ಪಾಕಿಸ್ತಾನೀಯರಿಗೆ ಮತ್ತು ಬಾಂಗ್ಲಾದೇಶೀಯರಿಗೆ ‘ಲಾಠಿ ಪ್ರಹಾರ’ ಎಂಬ ಪದಗಳು ಚಿರಪರಿಚಿತ. ತಮ್ಮ ಪ್ರಜೆಗಳು ಬಹಳ ಸಂದರ್ಭಗಳಲ್ಲಿ ಒಳ್ಳೆಯವರೇನೂ ಆಗಿರುವುದಿಲ್ಲ, ಅವರನ್ನು ಬಲಪ್ರಯೋಗದ ಮೂಲಕವೇ ನಿಯಂತ್ರಿಸಬೇಕು ಎಂದು ನಮ್ಮ ಪ್ರಭುತ್ವಗಳು ನಂಬಿವೆ. ನಮ್ಮ ಪ್ರಭುತ್ವ ನಾಗರಿಕರ ಮೇಲೆ ಗುಂಡು ಹಾರಿಸುವುದು ಕೂಡ ಅಸಹಜವಲ್ಲ.

ಓಹಿಯೊದಲ್ಲಿನ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ನಾಲ್ಕು ಜನ ಮೃತಪಟ್ಟಿದ್ದು, 1970ರ ವಿಯೆಟ್ನಾಂ ಯುದ್ಧದ ಪಾಲಿಗೆ ಸಂಕ್ರಮಣದ ಘಟ್ಟವಾಯಿತು. ‘ನಮ್ಮ ಪ್ರಭುತ್ವ ನಮ್ಮನ್ನೇ ಕೊಲ್ಲಬಹುದು’ ಎಂದು ತಿಳಿದ ಅಮೆರಿಕನ್ನರು ಆಘಾತಕ್ಕೆ ಒಳಗಾದರು. ಈ ಘಟನೆಯೇ ಒಂದು ಮೈಲುಗಲ್ಲಾಯಿತು. ಕ್ರಾಸ್ಬಿ, ಸ್ಟಿಲ್ಸ್, ನ್ಯಾಶ್ ಮತ್ತು ಯಂಗ್‌ನಂತಹ ಜನಪ್ರಿಯ ಸಂಗೀತ ತಂಡಗಳು ಈ ಘಟನೆಯ ಬಗ್ಗೆ ಹಾಡು ರಚಿಸಿದವು.

ನಮ್ಮ ಭಾಗದಲ್ಲಿ ಸರ್ಕಾರಗಳು ಪ್ರಜೆಗಳ ಮೇಲೆ ಗುಂಡು ಹಾರಿಸುವುದು ಸಹಜ ವಿದ್ಯಮಾನ ಎಂಬುದು ನಿಜ.
ನಾನು ಹೇಳುತ್ತಿರುವುದು ಏನು ಎಂಬುದಕ್ಕೆ ಒಂದು ಉದಾಹರಣೆಯಾಗಿ 2016ರ ಅಕ್ಟೋಬರ್ ತಿಂಗಳಿನ ಒಂದು ವರದಿಯನ್ನು ನೀಡುತ್ತಿದ್ದೇನೆ: ‘ಪೊಲೀಸರು ಗುಂಡು ಹಾರಿಸಿದ್ದರಿಂದಾಗಿ ನಾಲ್ಕು ಜನ ಮೃತಪಟ್ಟು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಜಾರ್ಖಂಡ್‌ನ ಹಜಾರಿಬಾಗ್‌ ಸಮೀಪದ ಚಿರುದಿಯಲ್ಲಿರುವ ಮೂಲಗಳು ತಿಳಿಸಿವೆ.’

‘ಕಲ್ಲಿದ್ದಲು ಗಣಿಗಾರಿಕೆಗೆ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) ತಮ್ಮ ಜಮೀನು ಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಕಂಪೆನಿಯು ಕರಾನ್‌ಪುರ ಕಣಿವೆಯ 47 ಚದರ ಕಿ.ಮೀ. ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಆರಂಭಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಇದು ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್‌ಭಮ್ ಜಿಲ್ಲೆಯಲ್ಲಿದೆ.’

ಇದನ್ನು ಓದುತ್ತಿರುವ ಎಷ್ಟು ಜನರಿಗೆ ಹಜಾರಿಬಾಗ್ ಹತ್ಯೆಯ ಬಗ್ಗೆ ಗೊತ್ತಿರುತ್ತದೆ ಎಂಬುದನ್ನು ನಾನು ಅರಿಯೆ. ಏಕೆಂದರೆ, ಇಂಥ ಘಟನೆಗಳು ಭಾರತದಲ್ಲಿ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಭಾರತದ ಶ್ರೀಮಂತ ನಗರವಾಸಿಗಳ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದರೆ, ಅದಕ್ಕೆ ಸಂಬಂಧಿಸಿದ ಸುದ್ದಿಯನ್ನು ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಕಾಣಬಹುದಿತ್ತು. ಆದರೆ, ತಮ್ಮ ಜಮೀನು ಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವವರನ್ನು ಪ್ರಭುತ್ವವೇ ಕೊಲ್ಲುವುದು ದೊಡ್ಡ ವಿಚಾರವೇನೂ ಅಲ್ಲ.

ಭಾರತದ ಹಾಗೂ ಪಾಕಿಸ್ತಾನದ ಸೇನೆಗಳು ಕೊಲ್ಲುವ ಬಹುತೇಕ ಜನ ಅವರ ದೇಶದವರೇ ಆಗಿರುತ್ತಾರೆ. ಭಾರತದಲ್ಲಿ ಈ ಹತ್ಯೆಗಳು ಮಿಲಿಟರಿ ಹಾಗೂ ಅರೆಸೈನಿಕ ಪಡೆಗಳಿಂದ ಈಶಾನ್ಯ ರಾಜ್ಯಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಆದಿವಾಸಿಗಳ ನೆಲೆಯಾಗಿರುವ, ಕಲ್ಲಿದ್ದಲು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಪ್ರದೇಶಗಳಲ್ಲಿ ಆಗುತ್ತವೆ.

ಈಗ ರೋಹಟಗಿ ಅವರ ಮಾತುಗಳಿಗೆ ಹಿಂದಿರುಗೋಣ. ಅವರು ಎರಡು ವಿಚಾರಗಳನ್ನು ಹೇಳುತ್ತಿದ್ದಾರೆ: ಅವರ ಪ್ರಕಾರ ಕಲ್ಲು ತೂರುವವರು ಸೇರಿದಂತೆ ಎಲ್ಲ ಪ್ರತಿಭಟನಾಕಾರರು ಭಯೋತ್ಪಾದಕರಿಗೆ ಸಮ. ಅವರು ಭಯೋತ್ಪಾದಕರಾಗಿರುವ ಕಾರಣ ಸೇನೆಯು ಅವರನ್ನು ಎದುರಿಸುವಾಗ ಕಾನೂನು ಉಲ್ಲಂಘಿಸುವುದು ಸರಿ. ಸೇನೆಯು ಕಾನೂನನ್ನೂ ಉಲ್ಲಂಘಿಸಿತು, ‘ನಾನು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವುದಿಲ್ಲ’ ಎಂದು ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಹಾಗೂ ಇಡೀ ವಿಶ್ವಕ್ಕೆ ನೀಡಿದ್ದ ವಚನವನ್ನೂ ಸೇನೆ ಮುರಿಯಿತು.

ಸರ್ಕಾರದ ಕಾನೂನು ಸಲಹೆಗಾರರ ಪ್ರಕಾರ ಈ ಉಲ್ಲಂಘನೆಗಳಲ್ಲಿ ತಪ್ಪಿಲ್ಲ. ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವವರು ಈ ಬಗ್ಗೆ ಏನೂ ಮಾತನಾಡುವಂತಿಲ್ಲ. ರೋಹಟಗಿ ಅವರು ಹವಾನಿಯಂತ್ರಣ ವ್ಯವಸ್ಥೆ ಬಳಸುವುದಿಲ್ಲ ಹಾಗಾಗಿ ಅವರು ಈ ಬಗ್ಗೆ ತಮಗೆ ಅನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಭಾವಿಸೋಣ. ಈ ವಿದೂಷಕನನ್ನು ಅಟಾರ್ನಿ ಜನರಲ್ ಆಗಿ ನೇಮಿಸಿರುವುದಕ್ಕೆ ನನಗೆ ಆಶ್ಚರ್ಯವಾಗುತ್ತಿದೆ. ಬಿಜೆಪಿ ಕೂಡ ಪಾಲುದಾರ ಆಗಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹಾಗೂ ನಿವೃತ್ತ ಸೇನಾಧಿಕಾರಿಗಳು ಆಡಿರುವ ಮಾತುಗಳನ್ನೂ  ರೋಹಟಗಿ ಕೇಳಿಸಿಕೊಂಡಿಲ್ಲ. ‘ಕಾಶ್ಮೀರದಲ್ಲಿನ ಸ್ಥಿತಿ ನಮಗೆ ತಿರುಗುಬಾಣ ಆಗಲಿದೆ’ ಎಂದು ಅವರು ಹೇಳಿದ್ದಾರೆ. ಅವರು ಹೇಳಿರುವುದರಲ್ಲಿ ಸತ್ಯವಿದೆ.

ಭಾರತದ ಪ್ರಭುತ್ವವು ತನ್ನ ಪ್ರಜೆಗಳಿಗೆ ನೀಡಿರುವ ವಚನವನ್ನು ಮತ್ತೆ ಮತ್ತೆ ಮುರಿಯುತ್ತಿದೆ, ಇದು ಹೊಸದೇನೂ ಅಲ್ಲ. ಆದರೆ, ಸರ್ಕಾರ ಮಾತು ಮುರಿದಿರುವುದಕ್ಕೆ  ಅಂಧಾಭಿಮಾನ ಹಾಗೂ ಅರ್ಧ ಮಾಹಿತಿ ಆಧರಿಸಿ ನಡೆಸುವ ಚರ್ಚೆಗಳು  ಕೊಡುತ್ತಿರುವ ಕಾರಣ ಈ ಬಾರಿ ಹೊಸದಾಗಿದೆ.
ನಾವು ಅಪಾಯಕಾರಿ ಅಂಧ ಯುಗದಲ್ಲಿದ್ದೇವೆ. ದೇಶದ ಸಂವಿಧಾನದ ಬಗ್ಗೆ ಕಾಳಜಿ ಹೊಂದಿರುವವರು ಚಿಂತಿಸಬೇಕಾದ ಕಾಲ ಇದು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ
ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT