ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಯಿಂದ ಸವೆದ ಪ್ರಜಾಪ್ರಭುತ್ವ

Last Updated 18 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹೊಸ ಸಹಸ್ರಮಾನದ ಮುಂಜಾವಿನಲ್ಲಿ ಕರ್ನಾಟಕದಲ್ಲಿ ಆರ್ಥಿಕ ಉದಾರೀಕರಣದ ಅತ್ಯುತ್ತಮ ಉದಾಹರಣೆಯಾಗಿ ಬೆಳಗುತ್ತಿದ್ದವರು ಎನ್‌.ಆರ್‌.ನಾರಾಯಣಮೂರ್ತಿ.

ಉದ್ಯಮ ಹಿನ್ನೆಲೆಯನ್ನು ಹೊಂದಿಲ್ಲದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು, ಇತರ ಆರು ಮಂದಿ ಸಮಾನ ಮನಸ್ಕರ ಜತೆಗೂಡಿ ಇನ್ಫೊಸಿಸ್‌ ಸ್ಥಾಪಿಸಿದರು. ಪುಣೆಯಲ್ಲಿ ಸಣ್ಣದಾಗಿ ಆರಂಭವಾದ ಸಂಸ್ಥೆ 2000 ಇಸವಿಯ ಹೊತ್ತಿಗೆ ಬೆಂಗಳೂರಿನಲ್ಲಿ ವಿಸ್ತಾರವಾದ ಕೇಂದ್ರ ಕಚೇರಿ ಹೊಂದಿತ್ತು.

ಭಾರತದಾದ್ಯಂತ ಮತ್ತು ಇತರ ಹಲವು ದೇಶಗಳಲ್ಲಿಯೂ ಕಚೇರಿ ತೆರೆದಿತ್ತು. ಸಾವಿರಾರು ಪ್ರತಿಭಾವಂತ ಎಂಜಿನಿಯರ್‌ಗಳಿಗೆ ಕೆಲಸ ನೀಡಿದ್ದ ಸಂಸ್ಥೆ ನಾಸ್ಡಾಕ್‌ನಲ್ಲಿ ನೋಂದಿತವಾಗಿತ್ತು (ಅಮೆರಿಕದ ಷೇರು ಮಾರುಕಟ್ಟೆ) ಮತ್ತು ಕೋಟ್ಯಂತರ ಡಾಲರ್‌ ವರಮಾನ ಗಳಿಸತೊಡಗಿತ್ತು.

ಇನ್ಫೊಸಿಸನ್ನು ಗೌರವಿಸಲು ಕಾರಣ ಅದರ ಗಾತ್ರ ಅಥವಾ ಅದು ಗಳಿಸುತ್ತಿದ್ದ ವರಮಾನದ ಪ್ರಮಾಣ ಮಾತ್ರ ಅಲ್ಲ. ಇದೊಂದು ಜ್ಞಾನ ಆಧರಿತ ಉದ್ಯಮವಾಗಿದ್ದು, ಕುಶಲ ಎಂಜಿನಿಯರ್‌ಗಳನ್ನು ಬಳಸಿಕೊಂಡು ಜಾಗತಿಕ ಅರ್ಥ ವ್ಯವಸ್ಥೆಯಲ್ಲಿರುವ ಅವಕಾಶಗಳ ಪ್ರಯೋಜನ ಪಡೆಯುವ ಪ್ರಯತ್ನ.

ಉತ್ತರ ಅಥವಾ ಪಶ್ಚಿಮ ಭಾರತದ ದುರಹಂಕಾರಿ ಉದ್ಯಮಿಗಳಂತಲ್ಲದೆ, ಈ ಸಂಸ್ಥೆಯ ಪ್ರವರ್ತಕರು ಸರಳ ಜೀವನ ನಡೆಸುತ್ತಿದ್ದರು. ಮತ್ತೊಂದು ಅಂಶವೆಂದರೆ, ಅವರು ಜಿಪುಣರೇನೂ ಆಗಿರಲಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಅಂತಹ ಇತರ ಸಾರ್ವಜನಿಕ ಉಪಯೋಗದ ಕೆಲಸಗಳಿಗೆ ಭಾರಿ ಮೊತ್ತದ ದೇಣಿಗೆ ನೀಡುವ ಮೂಲಕ ಸಮಾಜದಿಂದ ಪಡೆದದ್ದನ್ನು ವಾಪಸ್‌ ನೀಡುವ ಕೆಲಸವನ್ನೂ ಮಾಡುತ್ತಿದ್ದರು.

2000ನೇ ಇಸವಿಯಲ್ಲಿ ಅಥವಾ ಅದರ ಆಸುಪಾಸಿನ ವರ್ಷಗಳಲ್ಲಿ ಕರ್ನಾಟಕದ ‘ಅತಿ ಜನಪ್ರಿಯ ಉದ್ಯಮಿ’ಗೆ ಪ್ರತಿಸ್ಪರ್ಧಿಯಾದವರು ಅಜೀಂ ಪ್ರೇಮ್‌ಜಿ. ಪ್ರೇಮ್‌ಜಿ ಅವರದ್ದು ಕೂಡ ಬೃಹತ್ತಾದ, ವೃತ್ತಿಪರವಾಗಿ ನಡೆಸಿಕೊಂಡು ಹೋಗುತ್ತಿದ್ದ, ಜಾಗತಿಕವಾಗಿ ಗೌರವ ಸಂಪಾದಿಸಿದ್ದ ಮತ್ತು ಬೆಂಗಳೂರಿನಲ್ಲಿಯೇ ಕೇಂದ್ರ ಕಚೇರಿ ಹೊಂದಿದ್ದ ಉದ್ಯಮ. ಪ್ರೇಮ್‌ಜಿ ಇನ್ನೂ ಸರಳವಾಗಿ ಬದುಕುತ್ತಿರುವವರು ಮತ್ತು ಇನ್ನೂ ಹೆಚ್ಚನ್ನು ಸಮಾಜ ಸೇವೆಗಾಗಿ ನೀಡಿದವರು.

ಪ್ರೇಮ್‌ಜಿ ಮತ್ತು ನಾರಾಯಣ ಮೂರ್ತಿ ಅವರಂತಹ ಜನರು ಕರ್ನಾಟಕಕ್ಕೆ ಮತ್ತು ದೇಶಕ್ಕೆ ಹೆಸರು ತಂದುಕೊಟ್ಟಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಮಾರುಕಟ್ಟೆ ಆಧರಿತ ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಹೆಸರು ಬರುವಂತೆ ಮಾಡಿದ್ದಾರೆ.

‘ಬಂಡವಾಳಶಾಹಿ’ ಎಂಬ ಪದವೇ ದಶಕಗಳ ಕಾಲ ದ್ವಂದ್ವಾರ್ಥಗಳನ್ನು ಧ್ವನಿಸುತ್ತಿತ್ತು. ಅತಿ ಹೆಚ್ಚು ಕಾಲ ದೇಶದ ಪ್ರಧಾನಿಗಳಾಗಿದ್ದ ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಅವರಿಗೆ ಬಂಡವಾಳಶಾಹಿ ವ್ಯವಸ್ಥೆ ಬಗ್ಗೆ ಅನುಮಾನಗಳಿದ್ದವು.

ಹಾಗಾಗಿ ಆರ್ಥಿಕತೆಯಲ್ಲಿ ಸರ್ಕಾರದ ಪ್ರಾಬಲ್ಯ ಇರಬೇಕು ಎಂದು ಅವರು ಬಯಸಿದ್ದರು. ಈ ಇಬ್ಬರೂ ತಮ್ಮನ್ನು ‘ಸಮಾಜವಾದಿ’ಗಳು ಎಂದು ಕರೆದುಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ, ಇಂದಿರಾ ಅವರು ಸಂವಿಧಾನದ ಪ್ರಸ್ತಾವನೆಯಲ್ಲಿ ‘ಸಮಾಜವಾದಿ’ ಎಂಬ ಪದವನ್ನೂ ಸೇರಿಸಿಬಿಟ್ಟರು.

40 ವರ್ಷಗಳ ಸಮಾಜವಾದಿ ಅರ್ಥ ವ್ಯವಸ್ಥೆಯ ನಂತರ 1991ರಲ್ಲಿ ಹೊಸ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರು ಅರ್ಥ ವ್ಯವಸ್ಥೆಯ ಉದಾರೀಕರಣಕ್ಕೆ ನಿರ್ಧರಿಸಿದರು. ಪರವಾನಗಿ–ಮೀಸಲಾತಿಯ ಜಡ ವ್ಯವಸ್ಥೆಯನ್ನು ಮುರಿದು ಸಂಸ್ಥೆಗಳ ನಡುವೆ ಸ್ಪರ್ಧೆಗೆ ಪ್ರೋತ್ಸಾಹ ನೀಡಿದರು. 

ದೇಶದ ಆರ್ಥಿಕ ವ್ಯವಸ್ಥೆ ರಕ್ಷಣಾತ್ಮಕವಾಗಿರಬೇಕು ಎಂಬ ಆಕ್ಷೇಪಗಳನ್ನು ಬದಿಗೊತ್ತಿ ಆರ್ಥಿಕತೆಯನ್ನು ಜಗತ್ತಿಗೆ ತೆರೆದಿರಿಸಿದರು.  ಆರ್ಥಿಕ ನೀತಿಯಲ್ಲಿನ ಕ್ರಾಂತಿಕಾರಕ ಬದಲಾವಣೆಯೇ ಇನ್ಫೊಸಿಸ್‌ ಮತ್ತು ವಿಪ್ರೊದಂತಹ ಸಂಸ್ಥೆಗಳ ಯಶಸ್ಸಿಗೆ ಕಾರಣವಾಯಿತು.

ಸಹಸ್ರಮಾನದ ಆರಂಭದಲ್ಲಿ ಕರ್ನಾಟಕದಲ್ಲಿದ್ದ ನಾವು ‘ಉದಾರೀಕರಣ’ ಎಂಬ ಪದವನ್ನು ವಿಜ್ಞಾನ, ಸಾಫ್ಟ್‌ವೇರ್‌, ವಿಪ್ರೊ ಮತ್ತು ಇನ್ಫೊಸಿಸ್‌ನೊಂದಿಗೆ ಗುರುತಿಸಿಕೊಂಡೆವು. ಈ ಬಂಡವಾಳಶಾಹಿಯು ರಚನಾತ್ಮಕ, ಸೃಜನಾತ್ಮಕ ಮತ್ತು ಸಾಮಾಜಿಕವಾಗಿ ಉತ್ತರದಾಯಿಯಾದುದಾಗಿತ್ತು. ಆದರೆ, ಆ ದಶಕದ ಕೊನೆಗೆ ಎಲ್ಲವೂ ಬದಲಾಯಿತು.

2010ರಲ್ಲಿ ಅಥವಾ ಅದರ ಆಸುಪಾಸಿನಲ್ಲಿ ರಾಜ್ಯದಲ್ಲಿ ಚರ್ಚೆಯಲ್ಲಿದ್ದ ಉದ್ಯಮಿಗಳೆಂದರೆ ಬಳ್ಳಾರಿಯ ರೆಡ್ಡಿ ಸಹೋದರರು. ವಿಪ್ರೊ ಮತ್ತು ಇನ್ಫೊಸಿಸ್‌ ತಮ್ಮದೇ ಆದ ಜ್ಞಾನ ನೆಲೆಯ ಮೇಲೆ ಅವಲಂಬಿತವಾಗಿದ್ದರೆ, ರೆಡ್ಡಿ ಸಹೋದರರು ತಮ್ಮ ರಾಜಕೀಯ ಸಂಪರ್ಕಗಳಿಂದ ಸಮೃದ್ಧಿ ಪಡೆದರು.

ಸಾಫ್ಟ್‌ವೇರ್ ಕಂಪೆನಿಗಳು ಕಾನೂನಿಗೆ ಬದ್ಧವಾಗಿದ್ದರೆ ಈ ‘ಗಣಿದಣಿಗಳು’ ಕಾನೂನನ್ನು ನಿರ್ಭೀತಿಯಿಂದ ಉಲ್ಲಂಘಿಸಿದರು. ಪ್ರೇಮ್‌ಜಿ ಮತ್ತು ನಾರಾಯಣಮೂರ್ತಿ ಅಂಥವರು ಸರಳವಾಗಿ ಬದುಕಿದರೆ, ‘ಗಣಿದಣಿ’ಗಳು ದುಬಾರಿ ಒಡವೆಗಳನ್ನು ಧರಿಸಿ ಅತಿ ದುಬಾರಿ ಕಾರುಗಳಲ್ಲಿ ಓಡಾಡಿದರು.

2010ರ ಏಪ್ರಿಲ್‌ನಲ್ಲಿ ಮರ್ಸಿಡಿಸ್ ಬೆಂಜ್ ಕಂಪೆನಿ ಬಳ್ಳಾರಿ ನಗರದಲ್ಲಿ ಐಷಾರಾಮಿ ಕಾರುಗಳ ವಿಶೇಷ ಪ್ರದರ್ಶನವನ್ನೇ ಏರ್ಪಡಿಸಿತ್ತು. ಹಿಂದುಳಿಯಲು ಬಯಸದ ಬಿಎಂಡಬ್ಲ್ಯು, ಜಿಲ್ಲೆಯಲ್ಲಿ ತನ್ನ ಮಳಿಗೆ ತೆರೆಯುವುದಾಗಿ ಘೋಷಿಸಿತು.

ಬಳ್ಳಾರಿಯ ‘ಗಣಿದಣಿ’ಗಳು ಕರ್ನಾಟಕಕ್ಕೆ ಮತ್ತು ಭಾರತಕ್ಕೆ ಕೆಟ್ಟ ಹೆಸರು ತಂದರು. ಅಷ್ಟು ಮಾತ್ರವಲ್ಲ,  ಈಗ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಮತ್ತು ಕಾನೂನು ಉಲ್ಲಂಘನೆಯ ಜತೆಗೆ ಹೆಚ್ಚು ಹೆಚ್ಚು ತಳಕು ಹಾಕಿಕೊಂಡಿರುವ ‘ಬಂಡವಾಳಶಾಹಿ’ಗೆ ಇನ್ನೂ ಕೆಟ್ಟ ಹೆಸರು ತಂದರು.

ಬೇಸರದ ಸಂಗತಿ ಎಂದರೆ, ಈ ವಿಚಾರದಲ್ಲಿ ಕರ್ನಾಟಕವನ್ನಷ್ಟೇ ಎತ್ತಿ ಹೇಳುವುದು ಸಾಧ್ಯವಿಲ್ಲ. ಭಾರತದಾದ್ಯಂತ ಎಲ್ಲೆಲ್ಲಿ ಗಣಿಗಾರಿಕೆ ಹೆಚ್ಚಾಗಿ ನಡೆಯಿತೋ ಅಲ್ಲೆಲ್ಲ ಪ್ರಜಾಪ್ರಭುತ್ವ ನಿರ್ಲಕ್ಷ್ಯಕ್ಕೆ ಒಳಗಾಯಿತು.

ಉತ್ತರಾಖಂಡ, ಕರ್ನಾಟಕ, ಗೋವಾ ಮತ್ತು ಛತ್ತೀಸಗಡಗಳಲ್ಲಿ ನಾನು ನಡೆಸಿದ ಪ್ರವಾಸ ಮತ್ತು ಬೇರೆ ರಾಜ್ಯಗಳಲ್ಲಿ ನಡೆದ ಗಣಿಗಾರಿಕೆ ಬಗ್ಗೆ ಓದಿಕೊಂಡಿರುವುದರ ಆಧಾರದಲ್ಲಿ ಭಾರತದಲ್ಲಿ ಗಣಿಗಾರಿಕೆಯಿಂದ ಆದ ಆರು ಪ್ರಮುಖ ಪರಿಣಾಮಗಳನ್ನು ಗುರುತಿಸಿದ್ದೇನೆ: ಮೊದಲನೆಯದಾಗಿ, ಗಣಿ ಗುತ್ತಿಗೆ ನೀಡುವ ಅಧಿಕಾರ ಸರ್ಕಾರದ ಕೈಯಲ್ಲಿ ಇರುವುದರಿಂದಾಗಿ,

ಗುತ್ತಿಗೆಯು ಅತ್ಯಂತ ಸೂಕ್ತ ತಾಂತ್ರಿಕ ಅರ್ಹತೆಗಳನ್ನು ಹೊಂದಿರುವವರಿಗೆ ದೊರೆಯುವ ಬದಲಾಗಿ ರಾಜಕಾರಣಿಗಳ ಜತೆ ನಿಕಟ ಸಂಪರ್ಕಗಳನ್ನು ಹೊಂದಿರುವವರಿಗೆ ದೊರೆತಿದೆ. ಇದು ಉದ್ಯಮಿಗಳು ಮತ್ತು ರಾಜಕಾರಣಿಗಳ ನಡುವೆ ಅನಾರೋಗ್ಯಕರ ನಂಟಿಗೆ ಮತ್ತು ಅಕ್ರಮವಾಗಿ ದೊಡ್ಡ ಮೊತ್ತದ ಹಣದ ಕೈ ಬದಲಾವಣೆಗೆ ಕಾರಣವಾಗಿದೆ.

ಎರಡನೆಯದಾಗಿ, ಗಣಿ ಕಂಪೆನಿಗಳು ರಾಜಕೀಯ ಪೋಷಣೆ ಹೊಂದಿರುವುದರಿಂದಾಗಿ ಪರಿಸರ ಅಥವಾ ಕಾರ್ಮಿಕರಿಗೆ ಸಂಬಂಧಿಸಿದ ನಿರ್ಬಂಧಗಳ ಬಗ್ಗೆ ಲಕ್ಷ್ಯ ವಹಿಸುವ ಅಗತ್ಯವೇ ಇಲ್ಲ. ಮಾಲೀಕರು ರಾಜ್ಯದ ಹೊರಗಿನಿಂದ ಕಾರ್ಮಿಕರನ್ನು ಕರೆ ತರುತ್ತಾರೆ; ತಮ್ಮ ಕುಟುಂಬಗಳಿಂದ ಬೇರ್ಪಟ್ಟ ಇವರು ಉತ್ತಮವಾದ ಕೆಲಸದ ಸ್ಥಿತಿ ಮತ್ತು ವಸತಿಗಾಗಿ ಸಂಘಟಿತಗೊಳ್ಳಲು ಸಾಧ್ಯವಾಗದಷ್ಟು ದುರ್ಬಲರಾಗಿರುತ್ತಾರೆ.

ಹಾಗೆಯೇ ಅರಣ್ಯ, ನೀರು, ವನ್ಯಜೀವಿ ಮತ್ತು ಮಾಲಿನ್ಯ ನಿಯಂತ್ರಣ ನಿಯಮಗಳೆಲ್ಲವನ್ನೂ ನಿರ್ಲಕ್ಷಿಸಲಾಗುತ್ತದೆ. ಸಚಿವರು ಮತ್ತು ಮುಖ್ಯಮಂತ್ರಿಯ ಜತೆ ಕೂಡ ಈ ‘ಗಣಿದಣಿ’ಗಳು ಹೊಂದಿರುವ ಸಂಪರ್ಕಗಳಿಂದಾಗಿ ಬೆದರಿ ಹೋಗಿರುವ ಸ್ಥಳೀಯಾಡಳಿತ, ಈ ಎಲ್ಲ ಉಲ್ಲಂಘನೆಗಳು ಕಾಣದಂತೆ ಇರುತ್ತದೆ.

ಇದೂ ಅಲ್ಲದೆ, ರಾಜಕಾರಣಿಗಳ ಜತೆ ಇರುವ ನಿಕಟ ಸಂಪರ್ಕದಿಂದಾಗಿ ‘ಗಣಿದಣಿ’ಗಳು ತಮಗೆ ಗುತ್ತಿಗೆ ನೀಡಲಾದ ಪ್ರದೇಶದ ಹೊರಗಿನಿಂದಲೂ ಅದಿರು ತೆಗೆದು ಇನ್ನಷ್ಟು ಹಾನಿ ಉಂಟು ಮಾಡುತ್ತಾರೆ.

ಮೂರನೆಯದಾಗಿ,  ಅದಿರಿನ ಬೆಲೆಯು ಹೆಚ್ಚಾಗಿದ್ದಾಗ ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಹೆಚ್ಚು ಅದಿರನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತೆಗೆಯುವುದು ಲಾಭದಾಯಕ. ಈ ಅತಿ ಗಣಿಗಾರಿಕೆಯ ಆವೇಗ ಗಣಿ ಮಾಲೀಕರಲ್ಲಿ ಮತ್ತು ರಾಜಕಾರಣಿಗಳಲ್ಲಿ ಇದೆ.

ತಾವು ಎಷ್ಟು ಕಾಲ ಅಧಿಕಾರದಲ್ಲಿ ಇರುತ್ತೇವೆ ಎಂಬುದು ರಾಜಕಾರಣಿಗಳಿಗೆ ಖಚಿತವಿರುವುದಿಲ್ಲ. ಹಾಗಾಗಿ ಈ ಅಸಾಧಾರಣ ಪ್ರಮಾಣದ ಲಾಭದಲ್ಲಿ ಆದಷ್ಟು ಬೇಗ ತಮ್ಮ ಲಾಭದ ಪಾಲು ಪಡೆದುಕೊಳ್ಳಲು ಅವರು ಬಯಸುತ್ತಾರೆ.

ನಾಲ್ಕನೆಯದಾಗಿ, ಗಣಿಗಾರಿಕೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುವುದಿಲ್ಲ ಮತ್ತು ಕಾನೂನಿಗೆ ಗೌರವ ಕೊಡುವ ಮಾತೇ ಇರುವುದಿಲ್ಲ. ಹಾಗಾಗಿ ಭಾರತದಲ್ಲಿ ನಡೆಯುವ ಗಣಿಗಾರಿಕೆ ಅಪಾರ ಪ್ರಮಾಣದಲ್ಲಿ ಪರಿಸರ ನಾಶಕ್ಕೆ ಕಾರಣವಾಗುತ್ತದೆ.

ಅರಣ್ಯ ನಾಶ ಮಾಡಲಾಗುತ್ತದೆ, ನದಿಗಳು ಮತ್ತು ಒರತೆಗಳನ್ನು ಮಲಿನಗೊಳಿಸಲಾಗುತ್ತದೆ ಮತ್ತು ಕೃಷಿಯೋಗ್ಯ ಜಮೀನನ್ನು ಬರಡಾಗಿಸಲಾಗುತ್ತದೆ. ಈ ಹಾನಿಯ ಬೆಲೆ ನೂರಾರು ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ಸಾಮಾನ್ಯವಾಗಿ, ಇದು ಮತ್ತೆಂದೂ ಸರಿಪಡಿಸಲಾಗದ ಹಾನಿ.

ಇದು ವನ್ಯ ಜೀವಿಗಳು, ಜೀವ ವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಉರುವಲು ಮತ್ತು ಮನೆ ನಿರ್ಮಾಣಕ್ಕೆ ಮರ, ಹಣ್ಣು, ಕುಶಲಕರ್ಮಿಗಳಿಗೆ ಕಚ್ಚಾ ವಸ್ತು (ಉದಾಹರಣೆಗೆ ಬುಟ್ಟಿ ಹೆಣೆಯಲು ಬಿದಿರು), ಔಷಧೀಯ ಸಸ್ಯಗಳು ಇತ್ಯಾದಿ ಒದಗಿಸುವ ಆರೋಗ್ಯಕರ ಅರಣ್ಯ,

ಫಲವತ್ತಾದ ಮಣ್ಣು, ಶುದ್ಧ ನೀರು ಮುಂತಾದವುಗಳ ಮೇಲೆ ಅವಲಂಬಿತವಾಗಿರುವ ಗ್ರಾಮೀಣ ಆರ್ಥಿಕತೆಯ ಮೇಲೆ ಆಗುವ ಪರಿಣಾಮ ಇನ್ನೂ ಹೆಚ್ಚು ಗಂಭೀರ. ಅರಣ್ಯ ನಾಶ, ಬರಡು ಜಮೀನು, ನೀರಿನ ಕೊರತೆ ಅಥವಾ ಮಲಿನ ನೀರಿನಿಂದಾಗಿ ಗಣಿಗಾರಿಕೆ ಪ್ರದೇಶದ ಜನರು ಅಪಾರ ತೊಂದರೆ ಅನುಭವಿಸಬೇಕಾಗುತ್ತದೆ.

ಐದನೆಯದಾಗಿ, ಗಣಿಗಾರಿಕೆ ಪ್ರದೇಶದಲ್ಲಿ ಜೀವಿಸುವವರಿಗೆ ಗಣಿಗಾರಿಕೆಯಿಂದ ಯಾವ ಪ್ರಯೋಜನವೂ ದೊರೆಯುವುದಿಲ್ಲ ಮಾತ್ರವಲ್ಲ, ಅದರ ಅಡ್ಡ ಪರಿಣಾಮಗಳಿಂದಾಗಿ ಅವರು ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ. ಹಾಗಾಗಿ ಈ ಉದ್ಯಮವೇ ಜನರಲ್ಲಿ ಅಪಾರ ಅತೃಪ್ತಿಗೆ ಕಾರಣವಾಗುತ್ತದೆ. ಒಡಿಶಾ ಮತ್ತು ಛತ್ತೀಸಗಡದಲ್ಲಿ ಗಣಿಗಾರಿಕೆ ‘ಭರಾಟೆ’ಯ ಜತೆಗೇ ಮಾವೊವಾದಿಗಳು ಸಕ್ರಿಯವಾದದ್ದು ಆಕಸ್ಮಿಕವಲ್ಲ. ಕರ್ನಾಟಕದಲ್ಲಿ ಗಣಿಗಾರಿಕೆ ಭರಾಟೆಯ ಸಮಯದಲ್ಲಿಯೇ ಈ ರಾಜ್ಯಗಳಲ್ಲಿಯೂ ಗಣಿಗಾರಿಕೆಯ ‘ಉತ್ಕರ್ಷ’ ಕಾಣಿಸಿಕೊಂಡಿತ್ತು.

ಆರನೆಯದಾಗಿ, ವಸ್ತುಗಳ ಬೆಲೆ ಅತಿಯಾಗಿರುವ ಸಂದರ್ಭದಲ್ಲಿ ಅತ್ಯಲ್ಪ ಅವಧಿಯಲ್ಲಿಯೇ ಗಣಿಗಾರಿಕೆಯಿಂದ  ಬೃಹತ್ ಪ್ರಮಾಣದ ಲಾಭ ಪಡೆಯುವುದು ಸಾಧ್ಯವಾಗುತ್ತದೆ. ಅದಕ್ಕೆ ಅಡ್ಡಿಯಾಗುವ ಯಾವುದೇ ರೀತಿಯ ಅತೃಪ್ತಿಯನ್ನು ಅನಾಗರಿಕ ರೀತಿಯಲ್ಲಿ ದಮನ ಮಾಡಲಾಗುತ್ತದೆ.

ಹೀಗಾಗಿಯೇ ಛತ್ತೀಸಗಡದಲ್ಲಿ ಕುಖ್ಯಾತ ‘ಸಾಲ್ವಾ ಜುಡುಂ’ ರಕ್ಷಣಾ ಗುಂಪುಗಳ ರಚನೆ ಮತ್ತು ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ತಮ್ಮ ಆಣತಿಗೆ ಕುಣಿಯುವಂತೆ ಬಳ್ಳಾರಿ ಗಣಿ ಮಾಫಿಯಾಗಳು ಇರಿಸಿಕೊಂಡದ್ದನ್ನು ನಾವು ಕಾಣಬಹುದು.

ಈ ಪ್ರದೇಶಗಳಿಂದ ಮುಕ್ತ ಮತ್ತು ನಿರ್ಭೀತ ವರದಿಗಾರಿಕೆ ಅಸಾಧ್ಯ ಎಂಬಷ್ಟು ಕಷ್ಟವಾಗಿದೆ. ತಮ್ಮ ನೀತಿಗಳನ್ನು ಪ್ರಶ್ನಿಸುವ ಧೈರ್ಯ ತೋರಿದ ಪತ್ರಕರ್ತರು ಮತ್ತು ಹೋರಾಟಗಾರರನ್ನು ಛತ್ತೀಸಗಡ ಸರ್ಕಾರ ಬಂಧಿಸಿದರೆ, ಬಳ್ಳಾರಿಯ ಗಣಿ ಮಾಲೀಕರು ತಮ್ಮ ನಿಯಂತ್ರಣದಲ್ಲಿ ಇರುವ ಪ್ರದೇಶಗಳಿಗೆ ಇಂತಹ ಜನರು ಪ್ರವೇಶಿಸದಂತೆ ನೋಡಿಕೊಂಡಿದ್ದಾರೆ.

ಬಸ್ತಾರ್ ಮತ್ತು ಬಳ್ಳಾರಿಯಂತಹ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಅಪರಾಧ ಮತ್ತು ಅರಾಜಕ ಸ್ಥಿತಿ ‘ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ’ ಎಂಬ ಭಾರತದ ಚಿತ್ರಣಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಗಣಿಗಾರಿಕೆ ಜಿಲ್ಲೆಗಳು ಕಾನೂನಿನ ಆಡಳಿತವನ್ನು ಗೌರವಿಸುವ 21ನೇ ಶತಮಾನದ ಆಧುನಿಕತೆಯಿಂದ ಬಹಳ ದೂರದಲ್ಲಿವೆ. ಅಮೂಲ್ಯ ಖನಿಜಗಳ ಲೂಟಿಯ ಧಾವಂತದಲ್ಲಿ ಹಿಂಸೆ ಮತ್ತು ಕ್ರೌರ್ಯ ವಿಜೃಂಭಿಸಿದ 19ನೇ ಶತಮಾನದ ಕ್ಯಾಲಿಫೋರ್ನಿಯಾ ಅಥವಾ 20ನೇ ಶತಮಾನದ ಕಾಂಗೊಗಳಿಗೆ ಈ ಜಿಲ್ಲೆಗಳು ಹತ್ತಿರವಾಗಿವೆ.

21ನೇ ಶತಮಾನದ ಮೊದಲ ದಶಕದಲ್ಲಿ ವ್ಯಾಪಕವಾಗಿದ್ದ ಸರಕು ಭರಾಟೆಯು ಭಾರತದಲ್ಲಿ ಗಣಿಗಾರಿಕೆ ಬೆಳವಣಿಗೆಯ ಹಿಂದಿನ ಇಂಧನವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಣ್ಣಿಗೆ ರಾಚುವ ಸಮೀಪದೃಷ್ಟಿಯ ಮೂಲಕ ಕೈಗಾರಿಕೆಗಳಿಗೆ ಉದಾರವಾಗಿ ಭಾರಿ ಉಡುಗೊರೆಗಳನ್ನು ನೀಡಿದವು, ನಗಣ್ಯ ಬೆಲೆಗೆ ಗಣಿಗಾರಿಕೆ ಗುತ್ತಿಗೆ ನೀಡುವುದರ ಜತೆಗೆ ಈ ಗಣಿಗಾರಿಕೆ ಕಂಪೆನಿಗಳ ಅಕ್ರಮಗಳಿಗೆ ಕಣ್ಣು ಮುಚ್ಚಿ ಕುಳಿತವು.

ಮಧ್ಯ ಭಾರತದ ಆದಿವಾಸಿ ಕೇಂದ್ರದಿಂದ ಈಶಾನ್ಯದ ಮೇಘಾಲಯದವರೆಗೆ, ಪಶ್ಚಿಮದಲ್ಲಿ ಗೋವಾ, ಮಹಾರಾಷ್ಟ್ರದಿಂದ ದಕ್ಷಿಣದ ಕರ್ನಾಟಕ ಮತ್ತು ಆಂಧ್ರದವರೆಗೆ ದೇಶದಾದ್ಯಂತ ಅಪಾರ ವಿನಾಶವನ್ನು ಇದಕ್ಕೆ ಪ್ರತಿಯಾಗಿ ಉದ್ಯಮವು ನೀಡಿತು.

ಜಾಗತಿಕ ಮಾರುಕಟ್ಟೆಗಾಗಿ ನಡೆಯುತ್ತಿರುವ ಗಣಿಗಾರಿಕೆ ತನ್ನ ವೇಗ ಕಳೆದುಕೊಂಡಿದ್ದರೂ ದೇಶೀಯ ಬಳಕೆಗಾಗಿ ಅನಿರ್ಬಂಧಿತ ಗಣಿಗಾರಿಕೆ ಮುಂದುವರಿದಿದೆ. ಹಲವು ರಾಜ್ಯಗಳಲ್ಲಿ ರಾಜಕೀಯ ಪೋಷಣೆಯಲ್ಲಿ ಮರಳು ಗಣಿಗಾರಿಕೆ ವ್ಯಾಪಕವಾಗಿದ್ದು, ಒಂದು ಕಾಲದಲ್ಲಿ ರಫ್ತಿಗಾಗಿ ಕಬ್ಬಿಣದ ಅದಿರು ಗಣಿಗಾರಿಕೆ ಸೃಷ್ಟಿಸಿದ ವಿನಾಶದ ರೀತಿಯಲ್ಲಿಯೇ ನದಿ ಪರಿಸರ ವ್ಯವಸ್ಥೆ ಮತ್ತು ಸ್ಥಳೀಯ ಜೀವನೋಪಾಯವನ್ನು ಹಾಳುಗೆಡವಿ ಉತ್ಕರ್ಷದ ಸ್ಥಿತಿಯಲ್ಲಿದೆ.

ಕಬ್ಬಿಣದ ಅದಿರು ಸಮೃದ್ಧ ಪ್ರದೇಶಗಳಲ್ಲಿ ಸ್ವಲ್ಪ ಸಮಯದ ಹಿಂದೆ ಮತ್ತು ಈಗಲೂ ನಡೆಯುತ್ತಿರುವ ರೀತಿಯಲ್ಲಿಯೇ ಮರಳು ಗಣಿಗಾರಿಕೆಯಿಂದ ಆದ ಸಮಸ್ಯೆಯತ್ತ ಬೆಳಕು ಚೆಲ್ಲುವ ಪತ್ರಕರ್ತರನ್ನು ಬಂಧಿಸುವ ಅಥವಾ ಕೊಲೆ ಮಾಡುವ ಪ್ರವೃತ್ತಿ ಮರಳು ಮಾಫಿಯಾದಲ್ಲಿಯೂ ಇದೆ.

ಗಣಿಗಾರಿಕೆ ಸರ್ಕಾರದ ಕೈಯಲ್ಲಿಯೇ ಇರಬೇಕು ಎಂದು ಯಾವ ಕಾರಣಕ್ಕೂ ನಾನು ಪ್ರತಿಪಾದಿಸುವುದಿಲ್ಲ (ಪರಿಸರ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಕೋಲ್ ಇಂಡಿಯಾದ ದಾಖಲೆ ವಿಷಾದಮಯವಾಗಿಯೇ ಇದೆ).

ದೇಶೀಯ ಬಳಕೆ ಅಥವಾ ರಫ್ತಿನ ಉದ್ದೇಶದ ಎಲ್ಲ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದೂ ನಾನು ಹೇಳುವುದಿಲ್ಲ. ಅಕ್ರಮ ಮತ್ತು ಅನಿರ್ಬಂಧಿತ ಗಣಿಗಾರಿಕೆಯಿಂದಾದ ಗಂಭೀರ ಹಾನಿಯ ವಸ್ತುನಿಷ್ಠ ಪರಿಶೀಲನೆ ನಡೆಯಬೇಕು ಎಂಬುದಷ್ಟೇ ನನ್ನ ಕೋರಿಕೆ.

ಸದ್ಯದ ಮಟ್ಟಿಗೆ, ಜಾಗತಿಕ ಸರಕು ಭರಾಟೆ ತಾತ್ಕಾಲಿಕವಾಗಿ ಕುಸಿದು ಹೋಗಿದೆ, ಆದರೆ ಭಾರತದ ಜನರು, ಪರಿಸರ ಮತ್ತು ಪ್ರಜಾಪ್ರಭುತ್ವದ ಮೇಲೆ ಗಣಿಗಾರಿಕೆಯ ಆಕ್ರಮಣ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT