ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ಪಾತ್ರಗಳ ‘ತಾಯಿ’

Last Updated 23 ಮಾರ್ಚ್ 2016, 9:22 IST
ಅಕ್ಷರ ಗಾತ್ರ

ತಾಯಿ ಮತ್ತು ತಾಯ್ತನಗಳು ಜೀವಜಾಲವನ್ನು ಆವರಿಸಿರುವಷ್ಟು ಗಾಢವಾಗಿ, ಆಪ್ತವಾಗಿ ಮತ್ತಾವುದೂ ಆವರಿಸಿಲ್ಲ. ಸೃಷ್ಟಿಶೀಲತೆಯ ಪರಮಾಧ್ಬುತದ ಜೊತೆಗೆ ತನ್ನೆಲ್ಲವನ್ನೂ ನಿತಾಂತವಾಗಿ ಕೊಟ್ಟು ಪೊರೆಯುವ ಅಪೂರ್ವ ಜೀವಪ್ರೀತಿಯೂ ಸೇರಿ ತಾಯ್ತನವನ್ನು ಸಹಜವಾಗಿ ಸಕಾರಣವಾಗಿ ವ್ಯಕ್ತಿವಿಶೇಷದ ಆತ್ಯಂತಿಕತೆಯಲ್ಲಿ ದೈವತ್ವದ ಮಟ್ಟಕ್ಕೇರಿಸಿದೆ. ನಿರಪೇಕ್ಷವಾದ ಪ್ರೀತಿ, ಪಾರವೇ ಇಲ್ಲದ ಕ್ಷಮೆ, ಅತೀಂದ್ರಿಯ ಎನ್ನಿಸುವ ಮಟ್ಟದಲ್ಲಿ ಮತ್ತು ಪ್ರಮಾಣದಲ್ಲಿ ತನ್ನ ಒಡಲ ಕುಡಿಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ– ಈ ಎಲ್ಲವೂ ತಾಯಿಯನ್ನು ಜೀವಿಗಳಲ್ಲೇ ಅನುಪಮ ಎನ್ನಿಸುವ ನೆಲೆಯಲ್ಲಿ ನಿಲ್ಲಿಸುತ್ತವೆ. ‘ಕು ಮಾತಾ ನ ಭವತಿ’ ಎನ್ನುವ ಮಾತಾಗಲಿ, ‘ಎಲ್ಲ ತಾಯಿಯರೂ ದೊಡ್ಡವರೇ ಅನುಪಮರೇ. ಆದರೆ ನನ್ನ ತಾಯಿ ನನ್ನ ತಾಯಿಯೇ, ಅವಳಿಗೆ ಯಾರೂ ಸಮರಲ್ಲ’ ಎನ್ನುವ ಮಾತಾಗಲೀ ಯಾವ ಮಕ್ಕಳೂ ಒಪ್ಪಬಹುದಾದ ಮಾತುಗಳೇ ಆಗಿರುತ್ತವೆ. ಆದ್ದರಿಂದಲೇ ತಾಯಿಯನ್ನು ಕುರಿತ ಯಾವ ರೂಪಕವೂ ಉಪಮೆಯೂ ಎಂದೂ ಉತ್ಪ್ರೇಕ್ಷೆಯದು ಎನಿಸುವುದಿಲ್ಲ.

ನರಮನುಷ್ಯರು ಏರಬಹುದಾದ ಎತ್ತರದ ಸಾಕ್ಷಾತ್ಕಾರಗಳಂತೆ ತಾಯಂದಿರು ಕಾಣಿಸುವುದು ಅತಿರಂಜಿತವಾದ, ಭಾವುಕವಾದ ದೃಷ್ಟಿಕೋನ ಮಾತ್ರವಲ್ಲ, ಅದೊಂದು ದಿವ್ಯವಾದ ಅನುಭವ. ಇದೆಲ್ಲ ಸಾಧ್ಯವಾಗುವುದು ತಾಯಿಯ ಬಗ್ಗೆ ಮಾತ್ರ. ಕವಿಗಳ ಭಾವುಕ, ರಮ್ಯ ಚಿತ್ರಣವೋ ತಾತ್ವಿಕರ ಘನ ಗಂಭೀರ ವ್ಯಾಖ್ಯಾನವೋ ೠತ್ವಿಕರ ಆಖ್ಯಾನವೋ ಈ ಎಲ್ಲರೂ ತಾಯಿಯನ್ನು ಏಕಕಂಠದಲ್ಲಿ ಆರಾಧಿಸುವುದರಲ್ಲಿ ನಮಗೆ ಆಶ್ಚರ್ಯವಾಗಲು ಕಾರಣಗಳಿಲ್ಲ. ಆದರೆ ತಾಯಿಯನ್ನು ಕುರಿತಂತೆ ಎಡಪಂಥೀಯರು ಮತ್ತು ಸಮಾಜವಾದಿಗಳ ದೃಷ್ಟಿಕೋನಗಳು ಮತ್ತು ಬರವಣಿಗೆಗಳು ಕುತೂಹಲಕರ ಮಾತ್ರವಲ್ಲ ಬಹು ಮುಖ್ಯವಾದವೂ ಹೌದು.

ಗಾರ್ಕಿಯ ‘ತಾಯಿ’ಯನ್ನು ಕುರಿತಂತೆ ಲೆನಿನ್ ಸೇರಿದಂತೆ ಎಲ್ಲ ಮುಖ್ಯ ಮಾರ್ಕ್ಸ್‌ವಾದಿಗಳು ಹೊಂದಿದ್ದ ಮತ್ತು ಹೊಂದಿರುವ ತೀವ್ರವಾದ ಪ್ರೀತಿ ಮತ್ತು ಅನುಭೂತಿಗಳು ಇದಕ್ಕೆ ಒಳ್ಳೆಯ ಉದಾಹರಣೆ. ಲೋಹಿಯಾ ಭಾರತದ ಸ್ತ್ರೀಪಾತ್ರಗಳನ್ನು ಮರು ರಚಿಸಿಕೊಡುವ ಬಗೆಯೂ ಅಷ್ಟೇ ಒಳ್ಳೆಯ ಉದಾಹರಣೆ. ಕಾಲ ಸಂದರ್ಭಗಳು ಯಾವುದೇ ಆಗಿರಲಿ ತಾಯಿಯನ್ನು ಕುರಿತ ನಂಬಿಕೆ ಅಲ್ಲಾಡಿಲ್ಲ ಎನ್ನುವುದೇ ಈ ತಾಯಿ ಎನ್ನುವ ಅದಮ್ಯ ಮಾಂತ್ರಿಕ ಜೀವಶಕ್ತಿಯ ಅಕ್ಷಯ ಪಾತ್ರವನ್ನು ಇನ್ನು ಮುಂದೆ ಶಬ್ದವಿಲ್ಲ ಎನ್ನುವ ಸ್ಪಷ್ಟತೆಯಲ್ಲಿ ನಿರೂಪಿಸುತ್ತದೆ. ರನ್ನ ತನ್ನ ದುರಂತನಾಯಕ ದುರ್ಯೋಧನನಾದರೂ ದುರಂತನಾಯಕನ ಧೀರೋದಾತ್ತ ಪಟ್ಟ ಪಡೆಯುವುದು ತಾಯಿಯನ್ನು ಕುರಿತು ಮಿಡುಕುವ ತನ್ನ ಅಂತಃಕರಣದ ಅಭಿವ್ಯಕ್ತಿಯಲ್ಲಿ. ಮಹಾಭಾರತದ ಯುದ್ಧದ ಸಂದರ್ಭದಲ್ಲಿ ತನ್ನ ಭೇಟಿಗೆ ಬರುತ್ತೇನೆ ಎಂದು ತಾಯಿ ಗಾಂಧಾರಿ ಹೇಳಿಕಳುಹಿಸಿದಾಗ, ಯಾವ ಪ್ರಜ್ಞಾಪೂರ್ವಕವಾದ ಆಲೋಚನೆಗಳೂ ಇಲ್ಲದೆ, ಮಗ ದುರ್ಯೋಧನನಲ್ಲಿ ತಾಯಿಯ ಭೇಟಿಯನ್ನು ಕುರಿತ ಚಿತ್ರವೊಂದು ಮನಸ್ಸಿನಲ್ಲಿ ಮೂಡುತ್ತದೆ.

ಕಂದ ನಿಜಾನುಜರೆಲ್ಲಿರ್ದರೆಂದು
ಜನನಿ ಬಂದು ಬೆಸಗೊಂಡೊಡದೇನೆಂದು
ಮರುಮಾತುಗುಡುವೆಂ
ಕೊಂದರ್ ಕೌಂತೇಯರೆಂದು ಭಿನ್ನೈಸುವೆನೋ
ಎಂದು ತನ್ನೊಳಗೇ ಉದ್ಗರಿಸುತ್ತಾ ಪಾಪಪ್ರಜ್ಞೆಯಲ್ಲಿ ಬೆಂದು ಹೋಗುತ್ತಾನೆ ದುರ್ಯೋಧನ. ತಾಯಿ ಮತ್ತು ಮಗುವಿನ, ತಾಯಿ ಮತ್ತು ಮಕ್ಕಳ, ಮಾತ್ರವಲ್ಲ ಮಕ್ಕಳು ಮತ್ತು ತಾಯಿಯ ನಡುವಿನ ಅವಿನಾ ಸಂಬಂಧಕ್ಕೂ ಈ ಸಣ್ಣ ಕಂದ ಪದ್ಯ ಅನುಪಮ ಉದಾಹರಣೆ. ಮಗ ಎಷ್ಟು ದೊಡ್ಡ ಅರಸನೇ ಆಗಿರಲಿ, ಚಕ್ರಾಧಿಪತಿಯೇ ಆಗಿರಲಿ, ಈ ಎಲ್ಲದರ ಆಚೆಗೆ ಅವನು ಪರಮ ಕ್ರೂರಿಯೇ ಆಗಿರಲಿ, ಅವನು ಈ ಹೆತ್ತವಳ ಪಾಲಿಗೆ, ‘ಕಂದ’ನೇ. ಲೋಕದ ಎಲ್ಲ ಸರಿ ತಪ್ಪುಗಳ, ನ್ಯಾಯಾನ್ಯಾಯಗಳ ಆಚೆಗಿನ ಆದಿಮ ಸಂಬಂಧ ಇದು.

ಗಾಂಧಾರಿ ಚಕ್ರವರ್ತಿಯನ್ನು ಭೇಟಿಯಾಗಲು ಬರುತ್ತಿಲ್ಲ, ಮಗ ದುರ್ಯೋಧನನನ್ನ ‘ಕಾಣಲು’ ಬರುತ್ತಿದ್ದಾಳೆ. ಬಂದವಳೇ ತನ್ನ ಈ ಹಿರಿಯ ಮಗನನ್ನು ಕೇಳುತ್ತಾಳೆ, ‘ನಿಜಾನುಜರ್- ನಿನ್ನ ತಮ್ಮಂದಿರು ಎಲ್ಲಿ’ ಎಂದು. ಎಲ್ಲ ತಮ್ಮಂದಿರನ್ನೂ ಯುದ್ಧಕ್ಕೆ ಆಹುತಿ ಕೊಟ್ಟ ದುರ್ಯೋಧನ ಏನೆಂದು ತಾನೆ ಉತ್ತರಿಸಬಹುದು? ಅವರನ್ನೆಲ್ಲ ಕೌಂತೇಯರ್- ಕುಂತಿಯ ಮಕ್ಕಳು ಕೊಂದರು ಎನ್ನುವ ಸತ್ಯವನ್ನು ಅವಳಿಗೆ ಹೇಗೆ ಹೇಳುವುದು? ಇಲ್ಲಿ ದುರ್ಯೋಧನನಿಗೆ, ತನ್ನ ತಾಯಿಯ ಮನಸ್ಸು, ಆಲೋಚನೆಗಳೆಲ್ಲ ಅದೆಷ್ಟು ಹೃದ್ಗತವಾಗಿವೆ ಎಂದರೆ, ಕ್ಷತ್ರಿಯ ಹೆಣ್ಣಾದ ಗಾಂಧಾರಿಗೆ ಯುದ್ಧದಲ್ಲಿ ತನ್ನ ಮಕ್ಕಳು ಸತ್ತ ದುಃಖಕ್ಕಿಂತ, ಕುಂತಿಯ ಮಕ್ಕಳಿಂದ ಅವರು ಸತ್ತರು ಎನ್ನುವುದು ಇನ್ನೂ ಘೋರವಾದ ದುಃಖವನ್ನು ತರುತ್ತದೆ ಎನ್ನುವ ಸತ್ಯ ದುರ್ಯೋಧನನಿಗೆ ಗೊತ್ತಿದೆ.

ಏನೆಲ್ಲ ಅಪರಾಧಗಳನ್ನು ಬೇಕಾಗಿ ಬೇಡವಾಗಿ ಮಾಡಿರುವ ದುರ್ಯೋಧನನಿಗೆ ಆ ಗಳಿಗೆಯಲ್ಲಿ ತಾಯಿಯನ್ನು ಎದುರಿಸುವುದು ಸಾಧ್ಯವೇ ಇಲ್ಲ ಎನಿಸಿ ಬಿಡುವುದು, ತಾಯಿ ಮತ್ತು ಮಗುವಿನ ನಡುವಿನ ‘ಕರುಳು ಬಳ್ಳಿ’ಯ ಸಂಬಂಧವನ್ನು ಹೇಳುತ್ತದೆ. ಮುಂಬಯಿ ಬಾಂಬ್ ಸ್ಫೋಟದ ಮುಖ್ಯ ಆರೋಪಿ, ಕಸಾಬ್ ಬರೆದ ಪತ್ರವಾದರೂ ತಾಯಿಗೆ ತಾನೆ? ‘ಅಮ್ಮಾ, ನನ್ನನ್ನು ಕ್ಷಮಿಸಿ ಬಿಡು’ ಎಂದು ಹೇಳಿದ ಅವನ ಮಾತುಗಳಲ್ಲಿ ಲೋಕದಲ್ಲಿ ಇರುವ ಒಂದೇ ಒಂದು ನಿಜವಾದ ಸಂಬಂಧವೆಂದರೆ ತಾಯಿ ಮತ್ತು ಮಗುವಿನದು ಎನ್ನುವ ತತ್ವದ ಪುರಾವೆಯೇ ನಮಗೆ ಕಾಣಿಸುತ್ತದೆ.

ಯಾವ ಘನ ವ್ಯಕ್ತಿತ್ವವೂ ಹೆಣ್ಣು ಮತ್ತು ತಾಯ್ತನವನ್ನು ಒಳಗೊಳ್ಳುವ, ಅವುಗಳನ್ನು ತಮ್ಮ ವ್ಯಕ್ತಿತ್ವದ ಧಾತುಗಳಾಗಿಸಿಕೊಳ್ಳುವ ಪ್ರಯತ್ನಗಳೂ ಆಗಿರುತ್ತವೆ ಎನ್ನುವುದು ಆ ವ್ಯಕ್ತಿತ್ವಗಳನ್ನು ಅರ್ಥ ಮಾಡಿಕೊಳ್ಳುವ ಒಂದು ಪ್ರಧಾನ ಪ್ರವೇಶ. ಗಾಂಧಿಯವರ ‘ನಾನು ಅರ್ಧ ಹೆಣ್ಣು’ ಎನ್ನುವ ಹೇಳಿಕೆಯನ್ನು ಈ ನೆಲೆಯಿಂದಲೇ ನೋಡಬೇಕು. ತಾಯ್ತನ ಎನ್ನುವುದು ಒಂದು ಮನಸ್ಥಿತಿಯೂ ಹೌದು, ಬದುಕಿನ ಕ್ರಮವೂ ಹೌದು, ದೃಷ್ಟಿಕೋನವೂ ಹೌದು. ಇದು ಹೆಣ್ಣಿನ ಮಟ್ಟಿಗೆ ಅವಳ ವ್ಯಕ್ತಿತ್ವದ ಜೀವಕೇಂದ್ರಗಳಲ್ಲಿ ಒಂದು. ಗಂಡು ಇದನ್ನು ತುಸು ಶ್ರಮದಲ್ಲಿ, ತುಸು ಶ್ರದ್ಧೆಯಲ್ಲಿ, ತುಸು ಪ್ರೀತಿಯಲ್ಲಿ ಮತ್ತು ಅಪಾರ ಗೌರವ ಹಾಗೂ ಕೃತಜ್ಞತೆಯಲ್ಲಿ ಪಡೆದುಕೊಳ್ಳಬೇಕಾಗುತ್ತದೆ.

ಸಮಕಾಲೀನ ಸಂದರ್ಭದಲ್ಲಿ ತಾಯ್ತನ ಎನ್ನುವುದೇ ಭಿನ್ನ ವ್ಯಾಖ್ಯಾನಗಳಿಗೆ ಒಳಗಾಗುತ್ತಲೇ ಈ ತನಕ ಎದುರಿಸದಿದ್ದ ಸವಾಲುಗಳನ್ನೂ ಮುಖಾಮುಖಿಯಾಗುತ್ತಿದೆ. ತಾಯ್ತನವು ಹೆಣ್ಣಿನ ವ್ಯಕ್ತಿತ್ವದ ಕರಾರು ಎನ್ನುವ ಸ್ಥಾಪಿತ ಮೌಲ್ಯದ ಬದಲು ಆಯ್ಕೆಯ ಸನ್ನಿವೇಶ ಮತ್ತು ಆವರಣಗಳನ್ನು ಹೊಸ ಮೌಲ್ಯಗಳಾಗಿ ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನಗಳು ಹೆಣ್ಣನ್ನು ಅವಳದೇ ಆದ, ಅವಳದ್ದು ಮಾತ್ರವೇ ಆಗಬಹುದಾದ ವ್ಯಕ್ತಿಸ್ವಾತಂತ್ರ್ಯದ ಜಾಗವನ್ನು ಅವಳಿಗೆ ನಿರ್ಮಿಸಿಕೊಡಬಲ್ಲಷ್ಟು ಶಕ್ತವಾದುದೂ ಹೌದು. ಇದು, ತಾಯ್ತನದ ಸಾಮಾಜಿಕ ಅಥವಾ ಕೌಟುಂಬಿಕ ಪಾತ್ರಗಳ ನಿರಾಕರಣೆಯಲ್ಲ. ಆದರೆ, ತನ್ನ ವ್ಯಕ್ತಿತ್ವ ವಿಶೇಷ ಶಕ್ತಿಯೊಂದನ್ನು ಕುರಿತ ಹೆಣ್ಣಿನ ಹಕ್ಕನ್ನು ಅವಳಿಗೆ ಕೊನೆಗಾದರೂ ಒದಗಿಸಿಕೊಡುವ ರಾಜಕೀಯ ಹೋರಾಟದ ಚಲನೆ ಇದು.
***
ಮಕ್ಸೀಮ್ ಗೋರ್ಕಿಯ (ಮ್ಯಾಕ್ಸೀಮ್ ಗಾರ್ಕಿ ಎಂದೂ ಕರೆಯಲಾಗುತ್ತದೆ) ‘ತಾಯಿ’ ಕಾದಂಬರಿ, ಕೇವಲ ಒಂದು ಕಾದಂಬರಿಯಲ್ಲ, ಅದು ತಾಯಿ, ತಾಯ್ತನ ಮತ್ತು ತಾಯಿಯ ವ್ಯಕ್ತಿತ್ವದ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಚಹರೆಗಳ ಮಹಾವ್ಯಾಖ್ಯಾನ. ಸೃಷ್ಟಿಶೀಲತೆಗಿಂತ ಕ್ರಾಂತಿಕಾರಿಯಾದದ್ದು ಯಾವುದು? ಎಲ್ಲ ತಾಯಂದಿರೂ ಅಪ್ಪಟ ಕ್ರಾಂತಿಕಾರಿಗಳೇ. ಮಕ್ಕಳ ಹಿತವನ್ನು ನಿದ್ದೆ ಎಚ್ಚರಗಳಲ್ಲಿಯೂ ಕಾಯುವ ತಾಯ್ತನವು ಅದರ ಮೂರ್ತ ಅಭಿವ್ಯಕ್ತಿಗಳಿಗೆ ಸಿದ್ಧವಾಗುವ ಲಕ್ಷಾಂತರ ಉದಾಹರಣೆಗಳಿವೆ. ಜಗತ್ತಿನ ಅಪೂರ್ವ ಕಾದಂಬರಿಗಳಲ್ಲಿ ಒಂದಾದ ‘ತಾಯಿ’, ಕ್ರಾಂತಿ ಮತ್ತು ಕಲೆಯ ಆದಿಮ ಸಂಬಂಧದ ರೂಪಕವೂ ಆಗಿದೆ. ಅಷ್ಟೇ ಈ ಕಾದಂಬರಿಯು ಕ್ರಾಂತಿ, ಕಲೆ ಮತ್ತು ಹೆಣ್ಣಿನ ಮುಪ್ಪುರಿ ಸಂಬಂಧದ ವಿನ್ಯಾಸವನ್ನೂ ಅಚ್ಚಳಿಯದಂತೆ ಚಿತ್ರಿಸುತ್ತದೆ. ಅದೆಷ್ಟೋ ಮುದ್ರಣಗಳನ್ನು ಕಂಡಿರುವ, ಜಗತ್ತಿನ ನೂರಾರು ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿ ಎಂದಿಗೂ ತನ್ನ ಪ್ರಸ್ತುತತೆಯನ್ನು, ಜೀವಂತಿಕೆಯನ್ನು, ಸೌಂದರ್ಯವನ್ನು ಕಳೆದುಕೊಳ್ಳದ, ಲಕ್ಷಾಂತರ ಜನರ ಪ್ರೇಮದ ಪುತ್ತಳಿ.

ಕ್ರಾಂತಿಯ ಬೆಂಕಿಯನ್ನೂ ಮಾನವತೆಯ ಶೀತಲತೆಯ ಅಮೃತವನ್ನೂ ಪ್ರಭುತ್ವದ ಕ್ರೌರ್ಯವನ್ನೂ ಬೇರೆ ಬೇರೆಯಾಗಿ ತೋರಿಸುತ್ತಲೇ ಅವುಗಳ ಬಿಟ್ಟೂ ಬಿಡದ ಸಂಬಂಧದ ವಿಷಮತೆಯನ್ನೂ ಓದುಗರ ಅನುಭವಕ್ಕೆ ದಕ್ಕಿಸಿಕೊಡುವ ಕೃತಿ ‘ತಾಯಿ’. ಗೋರ್ಕಿಯ ಜೀವನದಲ್ಲಿ ಪ್ರಭಾವ ಬೀರಿದ ಪಾತ್ರಗಳನ್ನೇ ‘ತಾಯಿ’ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎನ್ನುವುದು ಒಂದು ಆನುಷಂಗಿಕವಾದ ವಿವರ ಮಾತ್ರ. ಸ್ವತಃ ಗೋರ್ಕಿ, ಈ ಕಾದಂಬರಿಯಲ್ಲಿ ಬರುವ ತಾಯಿ, ಯಾವುದೇ ತಾಯಿಯ ಜೀವಂತ ಪ್ರತಿನಿಧಿ ಎನ್ನುವುದನ್ನು ತಮ್ಮ ಪತ್ರವೊಂದರಲ್ಲಿ ಸೂಚಿಸುತ್ತಾರೆ. ‘ಈಕೆಯೇನೂ ಅಪರೂಪದ ವ್ಯಕ್ತಿಯಲ್ಲ. ಕದೋಮ್ ತ್ಸೆವ್ ಕುಟುಂಬದ ತಾಯಿಯ ನೆನಪು ಮಾಡಿಕೊಳ್ಳಿ. ಆಕೆ ಕಾವಲುಗಾರರ ಕಣ್ಣು ತಪ್ಪಿಸಿ ಜೈಲಿನೊಳಕ್ಕೆ ಒಂದು ಬಾಂಬು ಸಾಗಿಸಿದಳೆಂದು ಆಕೆಯನ್ನು ಉಫಾದಲ್ಲಿ ವಿಚಾರಣೆಗೆ ಗುರಿಪಡಿಸಲಾಯಿತು.

ಈ ಬಾಂಬನ್ನು ಉಪಯೋಗಿಸಿಕೊಂಡೇ ಜೈಲಿನ ಗೋಡೆಯನ್ನು ಸಿಡಿಸಿ ಒಳಗಿದ್ದ ಕಾರ್ಮಿಕ ಕ್ರಾಂತಿಕಾರಿಗಳು ತಪ್ಪಿಸಿಕೊಂಡಿದ್ದರು. ಹೀಗೆ ತಮ್ಮ ಮಕ್ಕಳ ಜೊತೆಯಲ್ಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಯಾದ ಹತ್ತಾರು ತಾಯಂದಿರನ್ನು ನಾನು ಬಲ್ಲೆ’. ಗೋರ್ಕಿಯ ಈ ಮಾತುಗಳು, ತಾಯಿಯ ಮತ್ತು ಹೆಣ್ಣಿನ ಸಾಧ್ಯತೆಗಳನ್ನು ಕುರಿತ ಒಂದು ರಾಜಕೀಯ ವ್ಯಾಖ್ಯಾನ. ತನ್ನ ಪಾಡಿಗೆ ತಾನು ಗಂಡ, ಮನೆ ಮಕ್ಕಳು ಎಂದು ಇರುವ ಹೆಣ್ಣು ಮಕ್ಕಳ ಒಳಗೆ, ಅದೆಂಥ ಸ್ಫೋಟಕ ಶಕ್ತಿ ಇರುತ್ತದೆ ಎನ್ನುವುದನ್ನು ನೂರಾರು ಕಲಾಪಠ್ಯಗಳು ನಮಗೆ ತೋರಿಸುತ್ತಲೇ ಬಂದಿವೆ. ಇಲ್ಲೆಲ್ಲ ನಾವು ಗಮನಿಸಲೇ ಬೇಕಾದ ಒಂದು ಮುಖ್ಯ ಸಂಗತಿಯೆಂದರೆ, ಆ ಸ್ಫೋಟಕ ಶಕ್ತಿಯು ಯಾವಾಗಲೂ ‘ಸನ್ನದ್ಧ ಸ್ಥಿತಿ’ಯಲ್ಲೂ ಇರುತ್ತದೆ ಎನ್ನುವುದು. ಈ ಸನ್ನದ್ಧ ಸ್ಥಿತಿಯೇ ಹೆಣ್ಣಿನ ಒಳಗೆ ಸತತವಾಗಿ ಎಂದಿನಿಂದಲೂ ಇರುವ ಪ್ರತಿರೋಧದ ಆಯಾಮವನ್ನೂ ಹೇಳುತ್ತದೆ.

ಪೆಲಗೇಯ ನೀಲೋವ್ನ ವ್ಲಾಸೋವ ಎನ್ನುವ ಹೆಸರಿನ ತಾಯಿ ಪಾವೆಲ್ ವ್ಲಾಸೋವ ಎನ್ನುವ ಮಗನ ತಾಯಿಯಾಗಿ ಈ ಕಾದಂಬರಿಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತಾಳೆ. ಈ ಒಬ್ಬ ಮಗನ ತಾಯಿ, ರಷ್ಯಾದ ತ್ಜಾರ್ ಪ್ರಭುತ್ವದ ವಿರುದ್ಧ ಬಂಡೆದ್ದ ಕಾರ್ಮಿಕ ಹೋರಾಟದ ಎಲ್ಲರ ತಾಯಿಯಾಗುತ್ತಾ ಹೋಗುವುದೇ ಸ್ಥೂಲವಾಗಿ ಈ ಕಾದಂಬರಿಯ ವಸ್ತು. ಕಾದಂಬರಿ ಎಲ್ಲೂ ಪ್ರಭುತ್ವದ, ಅರಸರ ಹೆಸರು ಹೇಳುವುದಿಲ್ಲ, ಯಾವುದೇ ಕಾಲದಲ್ಲೂ ಆಳುವ ವರ್ಗ, ಅದರ ಕೊನೆಯಿಲ್ಲದ ಅಧಿಕಾರ, ಶೋಷಣೆಯ ಅನಂತ ಮುಖಗಳು ಇವುಗಳನ್ನು ಚಿತ್ರಿಸುತ್ತದೆ. ಈ ಸಾಧಾರಣೀಕರಣವೇ ಕಾದಂಬರಿಗೆ ಒಂದು ವಿಚಿತ್ರವಾದ ಶಕ್ತಿಯನ್ನು ತಂದು ಕೊಡುತ್ತದೆ. ಯಾರು ಬೇಕಾದರೂ ತಮ್ಮ ಅನುಭವದ, ತಮ್ಮ ಪರಿಸರದ ಯಾವುದೇ ಶೋಷಕ ಶಕ್ತಿಯ ಜೊತೆ ಕಾದಂಬರಿಯಲ್ಲಿ ಬರುವ ಆಳುವ ವರ್ಗವನ್ನು ಸಮೀಕರಿಸಿಕೊಳ್ಳುವುದು ಸುಲಭವಾಗುತ್ತದೆ.

ತಾಯಿ ನೀಲೋವ್ನಳ ಗಂಡ ಬಹುತೇಕ ಕಾರ್ಮಿಕರಂತೆ ತನ್ನ ಅಸಹಾಯಕತೆ, ಮಿತಿಮೀರಿದ ದುಡಿತದ ಆಯಾಸ, ತಮ್ಮನ್ನು, ತಮ್ಮ ಶಕ್ತಿಯನ್ನೆಲ್ಲ ನುಂಗಿ ನೀರು ಕುಡಿಯುತ್ತಿರುವ ವರ್ಗದ ಕುರಿತ ಅಸಹನೆ ಈ ಎಲ್ಲವನ್ನೂ ತೀರಿಸಿಕೊಳ್ಳುತ್ತಿದ್ದದ್ದು ಹೆಂಡತಿಯ ಮೇಲೆ. ಮಗ ಪಾವೆಲ್ ತನ್ನ ಬಾಲ್ಯದಲ್ಲಿ ಇದನ್ನೆಲ್ಲ ಸುಮ್ಮನೇ ನೋಡುತ್ತಿದ್ದವನು, ತನ್ನ ಯೌವನದ ಆರಂಭದಲ್ಲಿ ಒಂದು ದಿನ ತಂದೆಯನ್ನು ಎದುರಿಸುತ್ತಾನೆ– ‘ಇನ್ನು ಮೇಲೆ ತಾಯಿಯ ಮೇಲೆ ಕೈಯೆತ್ತುವ ಹಾಗಿಲ್ಲ’ ಎಂದು. ಕೆಲವೇ ದಿನಗಳಲ್ಲಿ ತಂದೆ, ನೀಲೋವ್ನಳಿಗೆ ಹೇಳುತ್ತಾನೆ, ‘ಇನ್ನು ಮೇಲೆ ಪಾವೆಲ್‌ನೇ ನಿನ್ನ ಪೋಷಕ, ನನ್ನನ್ನು ದುಡ್ಡು ಕೇಳಬೇಡ’. ಈ ಬಗೆಯ ಆರ್ಥಿಕ ಅಸಹಾಯಕತೆ ಎನ್ನುವುದು ಹೆಣ್ಣನ್ನು ಎಲ್ಲಿಂದ ಎಲ್ಲಿಗೆ ಹೋದರೂ ಬಿಡುವುದಿಲ್ಲ. ಈ ಹೆಣ್ಣು ಮಕ್ಕಳಾದರೋ ಆ ಆರ್ಥಿಕತೆಯನ್ನು ಮೀರಿದ ಜೀವಬದ್ಧತೆಯಲ್ಲಿ ಗಂಡ–ಮಕ್ಕಳು ಮತ್ತು ಕುಟುಂಬವನ್ನು ಪೊರೆಯಲು ಭೂಮಿ ಆಕಾಶಗಳನ್ನು ಒಂದು ಮಾಡುತ್ತಿರುತ್ತಾರೆ. ಬದುಕಿಗೆ, ವ್ಯವಸ್ಥೆಗೆ ಸವಾಲು ಒಡ್ಡುತ್ತಾ ಸೋಲು ಗೆಲುವುಗಳ ಚೌಕಟ್ಟು ಮತ್ತು ಹಂಗನ್ನು ಮೀರಿದ ನೆಲೆಯಲ್ಲಿ ಬದುಕುತ್ತಾ ಹೋಗುತ್ತಾರೆ.

ಪಾವೆಲ್ ನಿಧಾನವಾಗಿ ಆಳುವ ವರ್ಗದ ಹೋರಾಟದ ಜೊತೆಯಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಾ ಹೋಗುತ್ತಾನೆ. ಇಂಥ ಸನ್ನಿವೇಶಗಳಲ್ಲಿ ಯಾವಾಗಲೂ ಆಗುವಂತೆ ಅವನನ್ನೂ ಅವನ ಗೆಳೆಯನನ್ನೂ ಜೈಲಿಗೆ ಹಾಕುತ್ತಾರೆ. ಮಗನ ಚಟುವಟಿಕೆಗಳ ಬಗ್ಗೆ ನೀಲೋವ್ನಳಿಗೆ ಇದ್ದ ಕುತೂಹಲ ಆಸಕ್ತಿಯಾಗಿ ಮಾರ್ಪಟ್ಟು ಕೊನೆಗೆ ಅದೊಂದು ಜೀವನ್ಮರಣದ ಹೋರಾಟ ಎನ್ನುವುದು ಅವಳಿಗೆ ಮನದಟ್ಟಾಗುತ್ತದೆ. ಈ ಅನಕ್ಷರಸ್ಥ ಹೆಣ್ಣುಮಗಳು ಆ ಹೋರಾಟಕ್ಕೆ ತನ್ನ ತನುಮನಗಳನ್ನು ಇಡಿಯಾಗಿ ಒಪ್ಪಿಸಿಕೊಳ್ಳುತ್ತಾಳೆ. ಮಗನನ್ನು ಜೈಲಿನಲ್ಲಿ ಭೇಟಿಯಾಗಿ ಧೈರ್ಯ ತುಂಬುವುದರಿಂದ ಹಿಡಿದು, ಅವರ ಕ್ರಾಂತಿಯ ಕರಪತ್ರಗಳನ್ನು ಗುಟ್ಟಾಗಿ ಹಂಚುವುದರಿಂದ ಹಿಡಿದು, ಅವನ ಗೆಳೆಯ ಗೆಳತಿಯರು ತನ್ನ ಮನೆಯಲ್ಲಿ ಸಭೆ ನಡೆಸಲು ಅನುವು ಮಾಡಿಕೊಡುವ ತನಕ. ಪೊಲೀಸರು ಇವಳನ್ನು ತಪಾಸಣೆ ಮಾಡಲು ಬಂದರೆ, ಅಯ್ಯೋ ‘ನನ್ನಂಥ ಅರೋದ ಮುಕ್ಕಕೆ ಏನು ಗೊತ್ತಾಗ್ತದೆ ಬುದ್ದಿ’ ಎಂದು ಅವರನ್ನು ಯಾಮಾರಿಸುವ ತನಕ ಇವಳ ಕ್ರಾಂತಿಕಾರಿ ಚಟುವಟಿಕೆಗಳು ಮುಂದುವರಿಯುತ್ತವೆ.

ಮಗ ಬಿಡುಗಡೆಯಾಗಿ ತನ್ನ ಹೋರಾಟದ ಕಾರಣಕ್ಕೆ ಮತ್ತೆ ಜೈಲಿಗೆ ಹೋದಾಗ ಇವಳ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ಈಗ ತನ್ನನ್ನು ಸಂಪೂರ್ಣವಾಗಿ ಈ ಹೋರಾಟದಲ್ಲಿ ಸಕ್ರಿಯವಾಗಿ ತಾಯಿ ತೊಡಗಿಸಿಕೊಳ್ಳುತ್ತಾಳೆ. ಹೆಣ್ಣಿನ ಸತ್ಯ ಮತ್ತು ಅಮೂರ್ತ ಹೋರಾಟವನ್ನು ಶೋಷಕರ ವಿರುದ್ಧದ ಮೂರ್ತ ಹೋರಾಟವಾಗಿ ನೀಲೋವ್ನ ರೂಪಾಂತರಿಸಿಕೊಳ್ಳುತ್ತಾಳೆ. ಯಾವುದೇ ಬಗೆಯ ಅನ್ಯಾಯದ ವಿರುದ್ಧ ನಡೆಸಬೇಕಾದ ಹೋರಾಟವೂ ಪವಿತ್ರ ಎನ್ನುವ ನಿಲುವಿಗೆ ಅವಳು ಬರುತ್ತಾಳೆ. ಗಂಡನ ಹೊಡೆತಗಳನ್ನು ಸುಮ್ಮನೆ ಸಹಿಸಿಕೊಳ್ಳುತ್ತಿದ್ದವಳು ಈಗ ಸಾರ್ವಜನಿಕವಾಗಿ ಘೋಷಣೆಗಳನ್ನು ಕೂಗುತ್ತಾ, ಹೋರಾಟದ ಮುಂಚೂಣಿಗೆ ಬರುತ್ತಾಳೆ. ಕಾದಂಬರಿಯ ಕೊನೆಯ ಭಾಗ ನಾಟಕೀಯವಾಗಿದ್ದೂ ಅತ್ಯಂತ ಸಹಜವಾಗಿದೆ. ಹೆಣ್ಣಿನ ಮತ್ತು ಜಗತ್ತಿನ ಎಲ್ಲ ಶ್ರಮಿಕ ವರ್ಗದವರ ಸಮ್ಮಿಳಿತ ಹೋರಾಟದ ಸಾಧ್ಯತೆಯೊಂದು ಅಲ್ಲಿ ಸಾಕಾರಗೊಂಡಂತೆ ಭಾಸವಾಗುತ್ತದೆ. ಮಗನನ್ನು ಕಾಟಾಚಾರಕ್ಕೆಂದು ವಿಚಾರಣೆಗೆ ಒಳಪಡಿಸುವ ನಾಟಕ ಮಾಡಿದರೆ, ಅದನ್ನು ವಿರೋಧಿಸಿ ಈ ತಾಯಿ ಮತ್ತು ಹೆಣ್ಣು ಹೇಳುತ್ತಾಳೆ–

‘ನನ್ನ ಮಗನನ್ನೂ ಅವನ ಜತೆಲಿದ್ದೋರನ್ನೂ ಅವರು ಯಾಕೆ ನ್ಯಾಯಸ್ಥಾನಕ್ಕೆ ತಂದರು ಗೊತ್ತೆ? ನಾನು ಹೇಳ್ತೀನಿ, ತಾಯಿಯ ಮಾತನ್ನ, ನರೆಗೂದಲ್ನೋಳ ಮಾತನ್ನ, ನೀವು ನಂಬಬಹುದು. ಎಲ್ಲರಿಗೂ ಅವರು, ಸತ್ಯವನ್ನ ತಿಳಿಸಿ ಹೇಳಿದ ಚಿಕ್ಕ ಕಾರಣಕ್ಕಾಗಿ, ಅವರನ್ನ ನ್ಯಾಯಾಸ್ಥಾನಕ್ಕೆ ತಂದರು! ಈ ಸತ್ಯವನ್ನ ಅಲ್ಲಗಳೆಯೋನು ಒಬ್ಬನೂ ಇಲ್ಲ- ಒಬ್ನೇ ಒಬ್ನೂ ಇಲ್ಲ- ಅನ್ನೋದು ನೆನ್ನೆ ನ್ಯಾಯಾಸ್ಥಾನದಲ್ಲಿ ಗೊತ್ತಾಯ್ತು!’.

‘ ...ಬೇರೆಯವರು ಸಂಕೋಲೆಯಲ್ಲಿ ಕಟ್ಟಿದ ನಾಯಿಯ ಹಾಗೆ ನಮ್ಮನ್ನು ಅಜ್ಞಾನದಲ್ಲಿ ಇರಿಸಿ, ತಾವು ನಮ್ಮ ದುಡಿಮೆಯಿಂದ ಎಲ್ಲ ಸುಖವನ್ನೂ ಸೌಕರ್ಯವನ್ನೂ ಪಡೀತಾರೆ... ನಾವು ಪ್ರತಿಯೊಂದಕ್ಕೂ ಹೆದರ್ತೇವೆ..! ನಮ್ಮ ಬದುಕು, ಬೆಳಕೇ ಹರಿಯದಂಥ ಉದ್ದನೆಯ ಕತ್ತಲಿನ ರಾತ್ರಿಯ ಹಾಗೆ!’.

ಈ ಮಾತುಗಳಲ್ಲಿ ಹೆಣ್ಣಿನದು ಯಾವುದು? ಕಾರ್ಮಿಕರದ್ದು ಯಾವುದು?
ಈ ಮುದುಕಿಯ ಮಾತುಗಳನ್ನು ಎದುರಿಸುವ ನೈತಿಕತೆಯಿಲ್ಲದವರು ಅವಳನ್ನು ಹೆದರಿಸಲು ಪ್ರಯತ್ನ ಪಟ್ಟರೆ, ಅವಳಿಗೆ ತನ್ನ ವಿಚಾರಗಳನ್ನೆಲ್ಲ ಒಂದು ಹಾಡಾಗಿ ಹಾಡಬೇಕೆಂದು ಆಸೆಯಾಗುತ್ತದೆ. ಅವಳ ವಯಸ್ಸು, ದೈಹಿಕ ದೌರ್ಬಲ್ಯ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕೊನೆಗೆ ಅವಳಿಗೆ ಹೇಳಲು ಸಾಧ್ಯವಾಗುವುದು, ‘ನನ್ನ ಮಗನ ಮಾತುಗಳು ತನ್ನ ಆತ್ಮವನ್ನು ಮಾರಿಕೊಳ್ಳದೇ ಇರುವ ಕೂಲಿಕಾರನ ಪ್ರಾಮಾಣಿಕ ಮಾತುಗಳು... ಅವುಗಳ ಕೆಚ್ಚಿನಿಂದಲೇ ನೀವು ಅದನ್ನ ತಿಳೀತೀರಿ...’.

ಪೊಲೀಸರು ಅವಳ ಬಾಯಲ್ಲಿ ರಕ್ತ ಬರುವಂತೆ ಹೊಡೆದರೆ, ‘ಅವರು ನನ್ನ ಆತ್ಮವನ್ನು- ಜೀವಂತ ಆತ್ಮವನ್ನ ಕೊಲ್ಲಲಾರರು’ ಎಂದು ಹೇಳುವ ತಾಯಿ ಜನ್ಮಜನ್ಮಾಂತರದಲ್ಲೂ ಹೆಣ್ಣು ಹೋರಾಟಗಾರ್ತಿಯೇ ಆಗಿದ್ದಳೇನೋ ಎನಿಸುವಂತೆ ಉದ್ಗರಿಸುತ್ತಾಳೆ. ‘ಹಡೆದವ್ನ ನೆನೆದಾರೆ ಮಾಸಿದ ತಲೆಯೂ ಮಡಿಯಾಯ್ತು’ ಎನ್ನುತ್ತಾಳೆ ಜನಪದ ಕವಯಿತ್ರಿ. ಮಾಸಿದ ತಲೆ ಎನ್ನುವುದಕ್ಕೆ ಎಷ್ಟು ಅರ್ಥಗಳನ್ನು ಬೇಕಾದರೂ ಹೊಂದಿಸಬಹುದು. ಮಾಸಿದ ಬುದ್ಧಿ, ಮನಸ್ಸು, ಮಾಸಿದ ದೃಷ್ಟಿಕೋನ, ಮಾಸಿದ ಮೌಲ್ಯವ್ಯವಸ್ಥೆ ಎಲ್ಲವನ್ನೂ ಶುದ್ಧಗೊಳಿಸುವ ಗಂಗೋತ್ರಿ ತಾಯಿ. ನಾಗರಿಕತೆಯಲ್ಲಿ ಮಾತ್ರವಲ್ಲ ಒಟ್ಟೂ ಜೀವಜಗತ್ತಿನಲ್ಲಿಯೇ ‘ತಾಯಿ’ ಎನ್ನುವುದೊಂದು ಶಕ್ತಿ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT