ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿದೊಡ್ಡ ಪ್ರಜಾತಂತ್ರ, ಅತ್ಯುತ್ತಮ ಪ್ರಜಾತಂತ್ರ!

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ವಿಶ್ವದ ಅತಿದೊಡ್ಡ ಪ್ರಜಾತಂತ್ರ ನಮ್ಮದು. ದೇಶದ ಮತದಾರರ ಪಟ್ಟಿಯಲ್ಲಿ 81.5 ಕೋಟಿಗಿಂತ ಹೆಚ್ಚು ಜನರ ಹೆಸರುಗಳು ಇವೆ. ಹೀಗಿದ್ದರೂ, ರಾಜಕೀಯ ಪಕ್ಷಗಳನ್ನು ನಿಯಂತ್ರಣಕ್ಕೆ ಒಳಪ‍ಡಿಸುವ ವಿಚಾರದಲ್ಲಿ, ಅವುಗಳಿಗೆ ಸಿಗುವ ಹಣಕಾಸಿನ ದೇಣಿಗೆಯಲ್ಲಿ ಪಾರದರ್ಶಕತೆ ತರುವ ವಿಚಾರದಲ್ಲಿ ಮತ್ತು ಚುನಾವಣಾ ವೆಚ್ಚದ ವಿಚಾರದಲ್ಲಿ ಭಾರತವು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಿಗಿಂತ ಬಹಳ ಹಿಂದುಳಿದಿದೆ.

ಹಾಗಾಗಿ, ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಜಾತಂತ್ರ ಜೀವಂತವಾಗಿರುವುದನ್ನು ನಾವು ಕಣ್ಣಾರೆ ಕಾಣಬಹುದಾಗಿದ್ದರೂ, ಕಾಳಧನವು ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ಮತ್ತು ಚುನಾವಣಾ ವ್ಯವಸ್ಥೆಯ ಮೇಲೆ ಬೀರುತ್ತಿರುವ ಕೊಳಕು ಪರಿಣಾಮ ಕೂಡ ಎದ್ದು ಕಾಣುವಂತಿದೆ. ರಾಜಕೀಯ ಪಕ್ಷಗಳಿಗೆ ಬಂದ ಹಣಕಾಸಿನ ನೆರವಿನಲ್ಲಿ ಶೇಕಡ 70ರಷ್ಟು ನಗದು ದೇಣಿಗೆ ರೂಪದಲ್ಲಿ ಬಂದಿದೆ, ಆ ಹಣದ ಮೂಲ ಯಾವುದು ಎಂಬುದು ಗೊತ್ತಾಗುತ್ತಿಲ್ಲ ಎಂದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌’ (ಎಡಿಆರ್) ಸಂಸ್ಥೆ ಕೆಲವು ವರ್ಷಗಳ ಹಿಂದೆ ಹೇಳಿತ್ತು.

ಚುನಾವಣಾ ಆಯೋಗವು ಚುನಾವಣಾ ವೆಚ್ಚಗಳ ಮೇಲೆ ಮಿತಿ ವಿಧಿಸಿದ್ದರೂ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ವೇಳೆ ಅಭ್ಯರ್ಥಿಗಳು ಈ ಮಿತಿಯನ್ನು ಮತ್ತೆ ಮತ್ತೆ ಉಲ್ಲಂಘಿಸುತ್ತಿರುವುದು ಗೊತ್ತಿರುವ ಸಂಗತಿ. ಲೋಕಸಭಾ ಚುನಾವಣಾ ಪ್ರಚಾರಕ್ಕೆ ಒಬ್ಬ ಅಭ್ಯರ್ಥಿ ದೊಡ್ಡ ರಾಜ್ಯಗಳಲ್ಲಿ ಗರಿಷ್ಠ ₹ 1.5 ಲಕ್ಷ ವೆಚ್ಚ ಮಾಡಬಹುದು ಎಂಬ ಮಿತಿಯನ್ನು ಚುನಾವಣಾ ಆಯೋಗ 1974ರವರೆಗೆ ವಿಧಿಸಿತ್ತು. ಆದರೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ಅಭ್ಯರ್ಥಿಗಳು ತಲಾ ₹ 20 ಲಕ್ಷದವರೆಗೆ ವೆಚ್ಚ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ನಂತರದ ದಿನಗಳಲ್ಲಿ ವೆಚ್ಚದ ಮಿತಿಯನ್ನು ₹ 4.5 ಲಕ್ಷಕ್ಕೆ ಹೆಚ್ಚಿಸಲಾಯಿತು. ಈಗ ದೊಡ್ಡ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಬಹುದಾದ ಖರ್ಚಿನ ಮಿತಿಯನ್ನು ₹ 70 ಲಕ್ಷಕ್ಕೆ ನಿಗದಿ ಮಾಡಲಾಗಿದೆ – ಇದು ಒಳ್ಳೆಯ ಸ್ಪರ್ಧೆ ನೀಡಲು ‘ಸಾಮಾನ್ಯ’ ಅಭ್ಯರ್ಥಿಯೊಬ್ಬರು ಒಗ್ಗೂಡಿಸಬಹುದಾದ ಮೊತ್ತಕ್ಕಿಂತಲೂ ಹೆಚ್ಚು. ಆದರೆ, ಯಶಸ್ಸು ಕಂಡ ಸಂಸದರು ತಾವು ₹ 5 ಕೋಟಿಯಿಂದ ₹ 10 ಕೋಟಿಯವರೆಗೆ ಖರ್ಚು ಮಾಡಿರುವುದಾಗಿ ನಮ್ಮ ಬಳಿ ಹೇಳುತ್ತಾರೆ! ಅಂದರೆ, ಚುನಾವಣಾ ವೆಚ್ಚಗಳ ಮೇಲೆ ಈಗ ನಿಯಂತ್ರಣವೇ ಇಲ್ಲದಂತಾಗಿದೆ, ಚುನಾವಣೆಯ ಖರ್ಚುಗಳನ್ನು ನಿಭಾಯಿಸುವುದು ಸಾಮಾನ್ಯ ವ್ಯಕ್ತಿಯ ಪಾಲಿಗೆ ಸಾಧ್ಯವಿಲ್ಲದಂತೆ ಆಗಿದೆ. ರಾಜಕಾರಣಕ್ಕೆ ‘ಶುದ್ಧ’ ಹಣ ಬಾರದಿದ್ದರೆ, ರಾಜಕೀಯ ಪಕ್ಷಗಳು ಶುದ್ಧಹಸ್ತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ಆ ಅಭ್ಯರ್ಥಿಗಳಿಗೆ ಹಣಕಾಸಿನ ನೆರವನ್ನು ಪಕ್ಷಗಳು ನೀಡದಿದ್ದರೆ ಇಡೀ ವ್ಯವಸ್ಥೆಯು ಸಮಾಜದ ಅತ್ಯಂತ ಭ್ರಷ್ಟ ಶಕ್ತಿಗಳ ಕೈವಶವಾಗಿಯೇ ಉಳಿದುಕೊಳ್ಳುತ್ತದೆ ಮತ್ತು ಉತ್ತಮ ಆಡಳಿತ ಎಂಬುದು ಕೈಗೆಟುಕದ ಕನಸಾಗಿಯೇ ಮುಂದುವರಿಯುತ್ತದೆ.

ರಾಜಕೀಯ ಪಕ್ಷಗಳ ಚಟುವಟಿಕೆಗಳಲ್ಲಿ, ಅವುಗಳು ವಿವಿಧ ಮೂಲಗಳಿಂದ ಹಣಕಾಸಿನ ನೆರವು ಪಡೆಯುವ ವಿಚಾರದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದಿರುವ ಬಗ್ಗೆ ನ್ಯಾಯಾಂಗ ಮತ್ತು ವಿವಿಧ ಸಂಸ್ಥೆಗಳು ಕಳೆದ ಕೆಲವು ವರ್ಷಗಳಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿವೆ. ಆದರೆ ಮೇಲಿನ ಹುದ್ದೆಗಳಲ್ಲಿ ಕುಳಿತಿರುವ ಯಾರೂ ಈ ವಿಷಯದ ಬಗ್ಗೆ ಆಲೋಚನೆ ನಡೆಸಿ, ಸಮಸ್ಯೆಯನ್ನು ಸರಿಪಡಿಸಲು ಏನು ಮಾಡಬೇಕು ಎಂಬುದನ್ನು ಹೇಳಲಿಲ್ಲ. ಚುನಾವಣಾ ವೆಚ್ಚವನ್ನು ಕಡಿಮೆ ಮಾಡಲು ಚುನಾವಣಾ ಪ್ರಕ್ರಿಯೆಗಳಲ್ಲಿ ಸುಧಾರಣೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೆಲವು ಸಮಯದಿಂದ ಒತ್ತಾಯಿಸುತ್ತಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವ್ಯವಸ್ಥೆಯನ್ನು ಪುನಃ ಕಟ್ಟಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ರಾಜಕೀಯ ಪಕ್ಷಗಳಿಗೆ ಹಣಕಾಸಿನ ನೆರವು ನೀಡಲು ‘ಚುನಾವಣಾ ಬಾಂಡ್‌’ಗಳನ್ನು ಹೊರತಂದಿರುವುದು ಈಗಿನ ಸರ್ಕಾರ ಇಟ್ಟಿರುವ ಮಹತ್ವದ ಒಂದು ಹೆಜ್ಜೆ.

ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆಗಳನ್ನು ಕಾಡುತ್ತಿರುವ ಎಲ್ಲಾ ಸಮಸ್ಯೆಗಳಿಗೆ ‘ಚುನಾವಣಾ ಬಾಂಡ್‌’ಗಳಲ್ಲಿ ಮದ್ದು ಇಲ್ಲದಿರಬಹುದು. ಆದರೆ, ಇದೊಂದು ಆರಂಭ. ಇದರ ಜೊತೆಯಲ್ಲೇ, ರಾಜಕೀಯ ಪಕ್ಷಗಳಿಗೆ ಅಕ್ರಮ ಮಾರ್ಗದಿಂದ ಹಣಕಾಸಿನ ನೆರವು ಬರಬಾರದು ಎಂಬ ಉದ್ದೇಶದಿಂದ ಇನ್ನೂ ಕೆಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ₹ 2,000ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ನೀಡುವಂತಿಲ್ಲ ಎಂದು ಹೇಳಿದೆ (ಮೊದಲು ಈ ಮಿತಿ ₹ 20 ಸಾವಿರ ಆಗಿತ್ತು. ಇದು ರಾಜಕೀಯ ಪಕ್ಷಗಳಿಗೆ ದೊಡ್ಡ ಮೊತ್ತದಲ್ಲಿ ಕಾಳಧನ ಬರುವ ರಹದಾರಿ ಆಗಿತ್ತು). ಅಲ್ಲದೆ, ಕಂಪನಿಗಳು ತಾವು ಯಾವ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿದ್ದೇವೆ ಎಂಬುದನ್ನು ಬಹಿರಂಗಪಡಿಸಬೇಕಿಲ್ಲ ಎಂದು ಕಾನೂನಿನಲ್ಲಿ ತಿದ್ದುಪಡಿ ತಂದಿದೆ.

ಚುನಾವಣಾ ಬಾಂಡ್‌ ಯೋಜನೆ ಬಗ್ಗೆ ವಿವರ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ‘ನಗದು ರೂಪದಲ್ಲಿ ದೇಣಿಗೆ ನೀಡುವ ಈಗಿನ ವ್ಯವಸ್ಥೆಯಲ್ಲಿ ದೇಣಿಗೆ ನೀಡಿದವ, ದೇಣಿಗೆ ಪಡೆದ ಪಕ್ಷ, ದೇಣಿಗೆ ಮೊತ್ತ, ಅದನ್ನು ಖರ್ಚು ಮಾಡಿದ ಬಗೆ... ಎಲ್ಲವೂ ಗೋಪ್ಯವಾಗಿಯೇ ಇರುತ್ತವೆ. ಆದರೆ, ಬಾಂಡ್‌ಗಳ ಮೂಲಕ ದೇಣಿಗೆ ನೀಡುವವರು ತಾವು ಖರೀದಿಸಿದ ಬಾಂಡ್‌ ಮೊತ್ತವನ್ನು ಘೋಷಿಸುತ್ತಾರೆ, ರಾಜಕೀಯ ಪಕ್ಷಗಳು ತಾವು ಸ್ವೀಕರಿಸಿದ ಬಾಂಡ್‌ ಮೊತ್ತವನ್ನು ಘೋಷಿಸುತ್ತವೆ. ವ್ಯವಸ್ಥೆಯಲ್ಲಿ ಒಂದು ಹಂತದ ಪಾರದರ್ಶಕತೆ ಬರುತ್ತದೆ’ ಎಂದು ಹೇಳಿದ್ದಾರೆ. ಹೀಗಿದ್ದರೂ, ವ್ಯಕ್ತಿಯೊಬ್ಬ ಒಂದು ರಾಜಕೀಯ ಪಕ್ಷಕ್ಕೆ ನೀಡಿರುವ ದೇಣಿಗೆಯ ಮೊತ್ತ ಎಷ್ಟು ಎಂಬುದು ಆ ವ್ಯಕ್ತಿಗೆ ಮಾತ್ರ ತಿಳಿದಿರುತ್ತದೆ. ಚುನಾವಣಾ ಬಾಂಡ್‌ ವ್ಯವಸ್ಥೆಯ ಭಾಗವೇ ಆಗಿರುವ ಈ ಗೋಪ್ಯತೆಯನ್ನು ಸಮರ್ಥಿಸಿಕೊಂಡಿರುವ ಜೇಟ್ಲಿ, ‘ಇಷ್ಟು ರಹಸ್ಯವನ್ನು ಕಾಯ್ದುಕೊಳ್ಳದಿದ್ದರೆ ದೇಣಿಗೆ ನೀಡುವವರಿಗೆ ಈ ವ್ಯವಸ್ಥೆಯ ಬಗ್ಗೆ ಪ್ರೀತಿ ಉಳಿಯುವುದಿಲ್ಲ ಎಂಬುದನ್ನು ಇದುವರೆಗಿನ ಅನುಭವ ಸಾರುತ್ತದೆ. ಅಶುದ್ಧ ಹಣವನ್ನು ಒಳಗೊಂಡಿರುವ ಈಗಿನ ನಗದು ದೇಣಿಗೆ ವ್ಯವಸ್ಥೆಯನ್ನು ಮೀರಿ ಮುನ್ನಡೆಯುವ ವಿಚಾರದಲ್ಲಿ ಇದೊಂದು ದೊಡ್ಡ ಹೆಜ್ಜೆ’ ಎಂದು ಹೇಳಿದ್ದಾರೆ.

ದೇಶದಲ್ಲಿ ರಾಜಕೀಯ ದೇಣಿಗೆಯನ್ನು ಸ್ವಚ್ಛಗೊಳಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನೂ ಸಚಿವರು ನೀಡಿದ್ದಾರೆ.

ರಾಜಕೀಯ ಪಕ್ಷಗಳು ಹಲವಾರು ದಶಕಗಳಿಂದ ಕಾನೂನುಗಳನ್ನು ಉಲ್ಲಂಘಿಸುತ್ತ ಬಂದಿವೆ. ಅವು ಹಣಕಾಸಿನ ವಹಿವಾಟಿನ ಲೆಕ್ಕ ಇಟ್ಟಿರಲಿಲ್ಲ. ಅವು ಆದಾಯ ತೆರಿಗೆ ವಿವರಗಳನ್ನೂ ಸಲ್ಲಿಸುತ್ತಿರಲಿಲ್ಲ. ಈ ವ್ಯವಸ್ಥೆಯನ್ನು ಶುದ್ಧಗೊಳಿಸಲು ನ್ಯಾಯಾಂಗ ಮುಂದಡಿ ಇಡುವವರೆಗೂ ಪರಿಸ್ಥಿತಿ ಹೀಗೇ ಮುಂದುವರಿದಿತ್ತು. ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳು, ತಮ್ಮ ಸ್ಥಿರ–ಚರ ಆಸ್ತಿಯ ವಿವರಗಳನ್ನು ಸಲ್ಲಿಸುವಂತೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದು ರಾಜಕೀಯ ವ್ಯವಸ್ಥೆಯನ್ನು ಶುದ್ಧಗೊಳಿಸುವಲ್ಲಿ ಇಟ್ಟ ಮೊದಲ ಹೆಜ್ಜೆ. ಅದೇ ರೀತಿ, ನ್ಯಾಯಾಲಯದ ಒತ್ತಡದ ಕಾರಣದಿಂದಾಗಿ ರಾಜಕೀಯ ಪಕ್ಷಗಳು ತಮ್ಮ ಹಣಕಾಸಿನ ವಹಿವಾಟಿನ ಲೆಕ್ಕಪರಿಶೋಧನೆ ನಡೆಸಿ, ಅವುಗಳ ವಿವರ ಇಟ್ಟುಕೊಳ್ಳುವಂತೆ ಆಯಿತು, ಪಕ್ಷಗಳು ಆದಾಯ ತೆರಿಗೆ ವಿವರ ಸಲ್ಲಿಸುವಂತಾಯಿತು ಮತ್ತು ತಮ್ಮ ಆಸ್ತಿಪಾಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವಂತಹ ಸ್ಥಿತಿ ಸೃಷ್ಟಿಯಾಯಿತು. ರಾಜಕೀಯ ಪಕ್ಷಗಳ ವಿಚಾರದಲ್ಲಿ ಸರ್ಕಾರವು ಆದಾಯ ತೆರಿಗೆ ಕಾನೂನುಗಳನ್ನು ಜಾರಿಗೆ ತರುತ್ತಿಲ್ಲ ಎಂಬುದನ್ನು ತಿಳಿದ ಸುಪ್ರೀಂ ಕೋರ್ಟ್‌ ಆಘಾತ ವ್ಯಕ್ತಪಡಿಸಿತ್ತು (ಕಾಮನ್‌ ಕಾಸ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣ). ಆದಾಯ ತೆರಿಗೆ ವಿವರ ಸಲ್ಲಿಸದ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಜರುಗಿಸುವಂತೆ ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಚುನಾವಣಾ ಆಯೋಗ ಮತ್ತು ತೆರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಅಂಕಿ–ಅಂಶಗಳನ್ನು ಕಂಡಾಗ ಭಾರತದ ಪ್ರಜಾತಂತ್ರದ ಬಗ್ಗೆ ಹೆಮ್ಮೆ ಮೂಡುತ್ತದೆ. 1951ರಲ್ಲಿ 17.3 ಕೋಟಿ ಇದ್ದ ಮತದಾರರ ಸಂಖ್ಯೆ, 2014ರ ವೇಳೆಗೆ 81.5 ಕೋಟಿಗೆ ಏರಿತ್ತು. ನ್ಯಾಯಾಂಗದ ಮಧ್ಯಪ್ರವೇಶ ಮತ್ತು ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ಕಾರಣದಿಂದಾಗಿ ಅಭ್ಯರ್ಥಿಗಳ ವಿದ್ಯಾರ್ಹತೆಯಿಂದ ಆರಂಭಿಸಿ ಅವರ ಅಪರಾಧ ಹಿನ್ನೆಲೆ ಮತ್ತು ಆಸ್ತಿಪಾಸ್ತಿಗಳವರೆಗಿನ ವಿವರಗಳು ಈಗ ಮತದಾರರಿಗೆ ಗೊತ್ತಾಗುತ್ತವೆ. ಏಕರೂಪದ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಎಲ್ಲೆಡೆ ಬಳಕೆಗೆ ತರುವ ಮೂಲಕ ಆಯೋಗವು ಅದ್ಭುತ ಕೆಲಸ ಮಾಡಿದೆ. ಅಲ್ಲದೆ, ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವವರ ಬಾಯಿ ಮುಚ್ಚಿಸುವುದಕ್ಕಾಗಿ ಆಯೋಗವು ಮತದಾನ ದೃಢೀಕರಣ ರಸೀದಿ ಯಂತ್ರಗಳನ್ನು ಬಳಕೆಗೆ ತಂದಿದೆ. ಇವೆಲ್ಲದರ ಜೊತೆಯಲ್ಲೇ, ವೀಕ್ಷಕರ ಮೂಲಕ ಚುನಾವಣಾ ಪ್ರಕ್ರಿಯೆ ಮೇಲೆ ಕಣ್ಣಿಟ್ಟಿದೆ. ಹೀಗಿದ್ದರೂ, ಚುನಾವಣಾ ಅಭಿಯಾನದ ಬಹುಪಾಲು ಭಾಗವು ಅಕ್ರಮ ಹಣದ ಮೂಲಕವೇ ನಡೆಯುತ್ತಿದೆ. ಇದನ್ನು ಮೊದಲು ಸರಿಪಡಿಸಬೇಕಿದೆ. ಏಕೆಂದರೆ ಅಕ್ರಮ ಹಣದ ಪ್ರಮಾಣ ಕಡಿಮೆ ಇರುವುದು ಮಾತ್ರವೇ ಅಲ್ಲ, ಅದು ಸಂಪೂರ್ಣವಾಗಿ ನಿರ್ಮೂಲವಾಗುವುದು ಮುಖ್ಯ.

ನಾವು ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರ ಮಾತ್ರವೇ ಅಲ್ಲದೆ, ಅತ್ಯುತ್ತಮ ಪ್ರಜಾತಂತ್ರ ವ್ಯವಸ್ಥೆ ಇರುವ ರಾಷ್ಟ್ರವಾಗುವುದರತ್ತ ಸಾಗಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT